ಪ್ರವಾಸದ ನೆನಪುಗಳಿಗೆ ಹೊಸ ಸ್ಟ್ಯಾಂಪ್‌ಗಳು
ಫಿಲಾಟಲಿ ಪಾಸ್‌ಪೋರ್ಟ್ ಎಂದರೆ ಅಂಚೆ ಮುದ್ರೆಗಳ ಮೂಲಕ ಪ್ರವಾಸವನ್ನು ದಾಖಲಿಸುವ ಕಿರುಪುಸ್ತಕ. ಪಾಸ್‌ಪೋರ್ಟ್‌ನ ಎಡಭಾಗದ ಪುಟಗಳಲ್ಲಿ ಭೇಟಿ ನೀಡಿದ ಪ್ರತಿ ಸ್ಮಾರಕ ಅಥವಾ ಅಲ್ಲಿನ ಘಟನೆ ಬಗ್ಗೆ ಆಸಕ್ತಿದಾಯಕ ವಿವರಣೆಗಳನ್ನು ದಾಖಲಿಸಬಹುದು.
- ಅನನ್ಯಾ ಕೆ.ಎಚ್
ಪ್ರವಾಸ ಅಂದರೆ ನಾವು ಸಾಮಾನ್ಯವಾಗಿ ಫೋಟೋಗಳ ಮೂಲಕ ನೆನಪುಗಳನ್ನು ಸಂಗ್ರಹ ಮಾಡುತ್ತೇವೆ. ಆ ಫೋಟೋಗಳನ್ನು ಇನ್‌ಸ್ಟಾಗ್ರಾಂಗೆ ಹಾಕಿದ ಬಳಿಕ ಅದರ ಆಯಸ್ಸು ಮುಗಿದಂತೆ ಲೆಕ್ಕ. ಅಕಸ್ಮಾತ್ ಪ್ರವಾಸದ ಕ್ಷಣಗಳನ್ನು ಈ ಡಿಜಿಟಲ್ ಯುಗದಲ್ಲೂ ಪುಸ್ತಕದಲ್ಲಿ ಶಾಶ್ವತವಾಗಿ ಇರುವಂತೆ ಮಾಡಿದ್ದರೆ ಸೊಗಸಾಗಿರುತ್ತಿತ್ತು ಅಲ್ಲವೆ? ಅದಕ್ಕಾಗಿ ಭಾರತ ಅಂಚೆ ಇಲಾಖೆ ಕರ್ನಾಟಕದಲ್ಲಿ ನಿಧಾನವಾಗಿ, ಮನಸ್ಸಿಟ್ಟು ಪ್ರವಾಸ ಮಾಡುವ ಹೊಸ ರೀತಿಯನ್ನು ಪರಿಚಯಿಸಿದೆ. ಅದೇ ಫಿಲಾಟೆಲಿ ಪಾಸ್‌ಪೋರ್ಟ್. ಈ ಮೂಲಕ ಪ್ರವಾಸವನ್ನೇ “ಸ್ಟಾಂಪ್” ಆಗಿ ಉಳಿಸಿಕೊಳ್ಳುವ ಅವಕಾಶ ನಿರ್ಮಿಸಲಾಗಿದೆ. 2025 ಜನವರಿ 25ರಂದು ಆರಂಭವಾದ ಈ ಹೊಸ ಪ್ರಯತ್ನ, ಪ್ರವಾಸವನ್ನು ಇನ್ನಷ್ಟು ಆಸಕ್ತಿದಾಯಕವಾಗಿಸುತ್ತದೆ.
ಇದನ್ನೂ ಓದಿ: ಕಮ್ಮಿ ಬೆಲೆಗೆ ಟಿಕೆಟ್ ಸಿಕ್ತು ಅಂತ ಖುಷಿ ಆಗ್ಬೇಡಿ
ಏನಿದು ಫಿಲಾಟೆಲಿ ಪಾಸ್‌ಪೋರ್ಟ್?
ಫಿಲಾಟಲಿ ಪಾಸ್‌ಪೋರ್ಟ್ ಎಂದರೆ ಅಂಚೆ ಮುದ್ರೆಗಳ ಮೂಲಕ ಪ್ರವಾಸವನ್ನು ದಾಖಲಿಸುವ ಕಿರುಪುಸ್ತಕ. ಪಾಸ್‌ಪೋರ್ಟ್‌ನ ಎಡಭಾಗದ ಪುಟಗಳಲ್ಲಿ ಭೇಟಿ ನೀಡಿದ ಪ್ರತಿ ಸ್ಮಾರಕ ಅಥವಾ ಅಲ್ಲಿನ ಘಟನೆ ಬಗ್ಗೆ ಆಸಕ್ತಿದಾಯಕ ವಿವರಣೆಗಳನ್ನು ದಾಖಲಿಸಬಹುದು. ಇದು ಸಾಮಾನ್ಯ ಮುದ್ರೆಗಳಂತೆ ಕಂಡರೂ ಇದರಲ್ಲಿ ಪ್ರತಿ ಸ್ಥಳದ ಇತಿಹಾಸ, ಸಂಸ್ಕೃತಿ ಅಥವಾ ವಿಶೇಷತೆಯನ್ನು ನೋಡಬಹುದು. ಅವುಗಳನ್ನು ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಷನ್ ಎನ್ನುತ್ತಾರೆ.
1987ರಲ್ಲಿ ಬಾದಾಮಿಯಲ್ಲಿ ಆರಂಭವಾದ ಪಿಪಿಸಿ ಪರಂಪರೆ ಈಗ ಪ್ರತಿ ಜಿಲ್ಲೆಯನ್ನು ತಲುಪಿದೆ. ಕರ್ನಾಟಕದಲ್ಲಿ ಇಂಥ ಸುಮಾರು 100 ಮುದ್ರೆಗಳು ಲಭ್ಯವಿದೆ. ಇದರಲ್ಲಿ ಪಟ್ಟಿ ಮಾಡಿರುವ 100 ಸ್ಥಳಗಳು ರಾಜ್ಯದ ಇತಿಹಾಸ, ಸಂಸ್ಕೃತಿ ಮತ್ತು ಅಲ್ಲಿನ ವಾಸ್ತುಶಿಲ್ಪದ ಮಹತ್ವವನ್ನು ಪ್ರತಿಬಿಂಬಿಸುತ್ತವೆ.

ಪಡೆಯುವುದು ಹೇಗೆ?
ಈ ಪಾಸ್‌ಪೋರ್ಟ್ ಬೆಲೆ ಸುಮಾರು ₹550–₹700 ಆಗಿದ್ದು, ಇಂಗ್ಲಿಷ್, ಕನ್ನಡ ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಲಭ್ಯವಿದೆ. ಇದನ್ನು ಬೆಂಗಳೂರು ಜಿಪಿಒ, ಮೈಸೂರು, ಮಂಗಳೂರು ಮತ್ತು ಬೆಳಗಾವಿಯ ಫಿಲಾಟೆಲಿಕ್ ಬ್ಯೂರೋಗಳಲ್ಲಿ ಅಥವಾ ಪ್ರಮುಖ ಅಂಚೆ ಕಚೇರಿಗಳಲ್ಲಿ ಖರೀದಿಸಬಹುದು.
ಈ ಪಾಸ್‌ಪೋರ್ಟ್ ಅನ್ನು ತೆಗೆದುಕೊಂಡು, ಪುಸ್ತಕದಲ್ಲಿ ಉಲ್ಲೇಖಿಸಿರುವ ಸ್ಥಳಗಳಿಗೆ ಭೇಟಿ ನೀಡಿ, ಸಂಬಂಧಿತ ಪುಟದಲ್ಲಿ ಅಂಚೆ ಟಿಕೆಟ್ ಅಂಟಿಸಬಹುದು. ಬಳಿಕ ಅಲ್ಲಿ ಲಭ್ಯವಿರುವ ಪಿಪಿಸಿ ಮುದ್ರೆಯನ್ನು ಪಡೆಯಬಹುದು. ಈ ಹೊಸ ಪ್ರಯಾಣ ಆರಂಭಿಸಲು ದೂರ ಹೋಗಬೇಕಾಗಿಲ್ಲ. ಬೆಂಗಳೂರಿನಲ್ಲೇ ಏಳು ಅಂಚೆ ಕಚೇರಿಗಳಲ್ಲಿ ಈ ಮುದ್ರೆಗಳು ಸಿಗುತ್ತವೆ.
ಚಿಕ್ಕ ವಯಸ್ಸಿನಲ್ಲಿ ಆಡುತ್ತಿದ್ದ ಟ್ರೆಶರ್ ಹಂಟ್ ಇದ್ದ ಹಾಗೆ ಇದು ಕೂಡ ಒಂದು ಹುಡುಕಾಟದ ಅನುಭವ. “ಇಲ್ಲಿ ಯಾವ ಮುದ್ರೆ ಸಿಗುತ್ತೆ?” “ಈ ಜಾಗದ ಮುದ್ರೆ ಹೇಗಿರಬಹುದು?” ಅನ್ನೋ ಕುತೂಹಲ ಹೊಸ ಜಾಗಗಳಿಗೆ ಕರೆದುಕೊಂಡು ಹೋಗುತ್ತದೆ. ಕೆಲವೊಮ್ಮೆ ಈ ಸ್ಟ್ಯಾಂಪ್ ಸಂಗ್ರಹ ಕುತೂಹಲ ಹುಟ್ಟಿಸಿ ಎಂದಿಗೂ ಯೋಚಿಸದ, ಕೇಳಿರದ ಸ್ಥಳಗಳಿಗೂ ಹೋಗಬಹುದು.
ಕೆಲವು ಟ್ರಿಪ್‌ಗಳ ನಂತರ, ಕೈಯಲ್ಲಿ ಮುದ್ರೆಗಳಿಂದ ತುಂಬಿದ ಈ ಪಾಸ್‌ಪೋರ್ಟ್ ಇರುತ್ತದೆ. ಅದನ್ನು ತಿರುಗಿಸಿ ನೋಡಿದಾಗ, ಹೋದ ದಾರಿಗಳು, ಕಂಡ ಜಾಗಗಳು, ಎಲ್ಲವೂ ಒಂದೇ ಜಾಗದಲ್ಲಿ ನೆನಪಾಗುತ್ತವೆ. ಡಿಜಿಟಲ್ ಕಾಲದಲ್ಲಿ, ಕೈಯಲ್ಲಿ ಹಿಡಿದು ನೋಡಬಹುದಾದ ಒಂದು ನೆನಪು ಅನ್ನೋದೇ ಇದರ ಸೊಗಸು. ಹಳೆಯ ಫೋಟೋ ಆಲ್ಬಂ ನೋಡಿದ ಅನುಭವ ನೀಡುತ್ತದೆ.

ಕುಟುಂಬಗಳಿಗೂ, ಸಂಸ್ಕೃತಿ ಮತ್ತು ಇತಿಹಾಸ ಪ್ರಿಯರಿಗೂ, ಮಕ್ಕಳಿಗೂ ಇದು ಒಳ್ಳೆಯ ಅನುಭವ. ಯಾರು ಹೆಚ್ಚು ಮುದ್ರೆಗಳು ಸಂಗ್ರಹಿಸುತ್ತಾರೆ ಅಂತ ಇದನ್ನು ಒಂದು ಸಣ್ಣ ಚಾಲೆಂಜ್ ಆಗಿಯೂ ಮಾಡಬಹುದು!
ಈ ರೀತಿ ಮಾಡಿದಾಗ ಸ್ಥಳಗಳನ್ನು ನೋಡಿ ಆನಂದಿಸುವ ಜತೆಗೆ ಅವುಗಳ ನೆನಪುಗಳನ್ನು ಶಾಶ್ವತವಾಗಿ ಸ್ಟಾಂಪ್ ಮಾಡಬಹುದು. ಹತ್ತಿರದ ಸ್ಥಳಗಳಿಂದಲೇ ಪ್ರಾರಂಭಿಸಿ, ನಿಧಾನವಾಗಿ ಸಂಪೂರ್ಣ ಕರ್ನಾಟಕವನ್ನು ಅನ್ವೇಷಿಸಬಹುದು. ಮುಂದಿನ ಪ್ರವಾಸವನ್ನು ಯೋಜಿಸುತ್ತಿದ್ದೀರ? ಈ ಬಾರಿ ಫೋಟೋಗಳ ಜತೆ ಇನ್ನೊಂದು ಹೊಸ ಬಗೆಯನ್ನು ಸೇರಿಸಿ. ಫಿಲಾಟೆಲಿ ಪಾಸ್‌ಪೋರ್ಟ್ ಜತೆ ಪ್ರಯಾಣ ಮಾಡಿ, ಕರ್ನಾಟಕವನ್ನು ಎಂದಿಗೂ ಕಾಣದ ರೀತಿಯಲ್ಲಿ ನೋಡಿ ನೆನಪಿನಲ್ಲಿಟ್ಟುಕೊಳ್ಳಿ!