ಚಿರತೆ ಸಮೀಕ್ಷೆಯಲ್ಲಿ ಮುಂಬೈಗೆ ಅಗ್ರಸ್ಥಾನ!
ಇತ್ತೀಚೆಗಷ್ಟೇ ಚಿರತೆ ಸಮೀಕ್ಷೆ ನಡೆದಿದ್ದು, ಮುಂಬೈನಲ್ಲಿ ಹೆಚ್ಚು ಚಿರತೆಗಳು ಕಾಣಿಸಿಕೊಂಡಿವೆ. ಜಗತ್ತಿನಾದ್ಯಂತ ಚಿರತೆಗಳ ಎಣಿಕೆಯಾಗಿದ್ದು, ಮುಂಬೈನಲ್ಲಿ 54ಕ್ಕೂ ಹೆಚ್ಚು ಚಿರತೆಗಳು ಕಾಣಿಸಿಕೊಂಡಿದೆ. ಈ ಮೂಲಕ ಮುಂಬೈ ದಾಖಲೆ ಬರೆದಿದೆ.
ಮುಂಬೈ: ಇತ್ತೀಚೆಗಷ್ಟೇ ಚಿರತೆಗಳ ಸಮೀಕ್ಷೆ ನಡೆದಿದ್ದು, ಮುಂಬೈ ದಾಖಲೆ ಬರೆದಿದೆ. ಸಮೀಕ್ಷೆಯ ಪ್ರಕಾರ ಮುಂಬೈ ನಗರವು ಈಗ ವಿಶ್ವಾದ್ಯಂತ ಅತಿ ಹೆಚ್ಚು ಚಿರತೆಗಳನ್ನು ಹೊಂದಿದೆ. ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಹೆಚ್ಚು ಚಿರತೆಗಳು ಕಾಣಿಸಿಕೊಂಡಿದ್ದು ಜಗತ್ತಿನ ಯಾವ ಭಾಗದಲ್ಲೂ ಈ ಮಟ್ಟಿಗಿನ ಚಿರತೆಗಳು ಕಂಡುಬಂದಿಲ್ಲ ಎಂದು ತಿಳಿದು ಬಂದಿದೆ.
ಇತ್ತೀಚಿನ ಸಮೀಕ್ಷೆಯ ಪ್ರಕಾರ ಮುಂಬೈ ಪ್ರಸ್ತುತ ವಿಶ್ವದಲ್ಲೇ ಅತೀ ಹೆಚ್ಚು ಚಿರತೆಗಳನ್ನು ಹೊಂದಿದೆ. ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ, ಫಿಲ್ಮ್ ಸಿಟಿ, ಆರೆ ಮಿಲ್ಕ್ ಕಾಲೋನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 54 ಚಿರತೆಗಳು ವಾಸಿಸುತ್ತಿವೆ. 140 ಚದರ ಕಿ.ಮೀ ವಿಸ್ತೀರ್ಣವನ್ನು ಒಳಗೊಂಡ ಕ್ಯಾಮೆರಾ-ಟ್ರ್ಯಾಪ್ ಸಮೀಕ್ಷೆಯನ್ನು ಬಳಸಿಕೊಂಡು ಸಂಶೋಧಕರು ಪ್ರತಿಯೊಂದು ಚಿರತೆಯನ್ನು ಅದರ ವಿಶಿಷ್ಟ ರೋಸೆಟ್ ಮಾದರಿಯಿಂದ ಗುರುತಿಸಿದ್ದಾರೆ ಎನ್ನಲಾಗಿದೆ.
ಮುಂಬೈನಲ್ಲಿ ಜಗತ್ತಿನ ಯಾವುದೇ ಸಂರಕ್ಷಿತ ಅರಣ್ಯ ಮೀಸಲು ಪ್ರದೇಶಗಳಲ್ಲಿ ಇಲ್ಲದಷ್ಟು ಚಿರತೆಗಳಿವೆ. ಪ್ರತಿ 100 ಚದರ ಕಿ.ಮೀ.ಗೆ ಸುಮಾರು 12 ಚಿರತೆಗಳಿವೆ. ನಗರ ಪ್ರದೇಶದಲ್ಲೂ ಚಿರತೆಗಳು ಕಾಣಿಸಿಕೊಂಡಿರುವುದು ಆಶ್ಚರ್ಯ ಹುಟ್ಟಿಸಿದೆ.
ಚಿರತೆಗಳ ಸಂಖ್ಯೆಯನ್ನು ಒದಗಿಸಲು ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ (NCBS), ಮಹಾರಾಷ್ಟ್ರ ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಣಾ ಸಂಘ (ಭಾರತ) ಸಹಯೋಗದಲ್ಲಿ ಕಾರ್ಯನಿರ್ವಹಿಸಿದವು. 60 ದಿನಗಳ ಕಾಲ ದಟ್ಟವಾದ ಕಾಡುಗಳ ಒಳಭಾಗದಿಂದ ನಗರಗಳ ಹೊರವಲಯದವರೆಗೆ ವಿವಿಧ ಪರಿಸರಗಳಲ್ಲಿ 100 ಕ್ಕೂ ಹೆಚ್ಚು ವಿಡಿಯೊ ಟ್ರ್ಯಾಪ್‌ಗಳನ್ನು ಇರಿಸಲಾಗಿತ್ತು.