ಕಾಳಿದಾಸನ ಮೇಘದೂತ ಸಂದೇಶ ಮೇಘ ಸಂದೇಶ…
ಮೇಘವು ಮಾಳವ ಪ್ರದೇಶವನ್ನು ದಾಟಿ ಉಜ್ಜಯಿನಿ ನಗರವನ್ನು ಸೇರುತ್ತದೆ. ಈ ಪ್ರವಾಸದ ಅತ್ಯಂತ ಶ್ರೀಮಂತ ಮತ್ತು ಐಷಾರಾಮಿ ನಿಲ್ದಾಣವೆಂದರೆ ‘ಉಜ್ಜಯಿನಿ’. ಉಜ್ಜಯಿನಿಯ ವರ್ಣನೆ ಮೇಘದೂತದ ಅತ್ಯಂತ ಆಕರ್ಷಕ ಭಾಗಗಳಲ್ಲಿ ಒಂದು.
- ಜ್ಯೋತಿ ಪ್ರಸಾದ್
ಕುಬೇರನ ಸೇವಕನಾದ ಯಕ್ಷನೊಬ್ಬನು ಶಾಪಗ್ರಸ್ತನಾಗಿ ತನ್ನ ಅಲಕಾಪುರಿಯನ್ನು ತೊರೆದು, ಒಂದು ವರ್ಷದ ಕಾಲ ಪ್ರೀತಿಯ ಪತ್ನಿಯಿಂದ ದೂರವಾಗಿ ರಾಮಗಿರಿಯ ಆಶ್ರಮದಲ್ಲಿರಬೇಕಾಗುತ್ತದೆ. ವಿರಹ ವೇದನೆಯಲ್ಲಿ ತೊಳಲುತ್ತಿರುವ ಯಕ್ಷನು, ತನ್ನ ಪತ್ನಿಗೆ ಮೇಘದ ಮೂಲಕ ಸಂದೇಶ ಕಳುಹಿಸುವ ಕಥೆಯೇ ಮೇಘದೂತ.
ಸಂಸ್ಕೃತ ಸಾಹಿತ್ಯದ ಮಹಾಕವಿ ಕಾಳಿದಾಸ ರಚಿಸಿದ ‘ಮೇಘದೂತ’ ಕೇವಲ ಒಂದು ಪ್ರೇಮಕಾವ್ಯವಾಗಿರದೇ, ಜಗತ್ತಿನ ಅತ್ಯಂತ ಹಳೆಯ ಮತ್ತು ಸುಂದರವಾದ ‘ಪರಿಸರ ಪ್ರವಾಸಿ ಲೇಖನ’ ಆಗಿದೆ. ಇದು ಭಾರತದ ಪ್ರಕೃತಿ, ನಗರಗಳು, ನದಿಗಳು, ಪರ್ವತಗಳು ಮತ್ತು ಜನಜೀವನವನ್ನು ಪರಿಚಯಿಸುವ ಒಂದು ಅದ್ಭುತ ಪ್ರವಾಸಿ ಕಥನ.
ಇದನ್ನೂಓದಿ:ಪಶ್ಚಿಮ ಘಟ್ಟಕ್ಕೆ ವೈರಲ್ ಕಂಟೆಂಟ್ ಕಂಟಕ
ಮೇಘ ಸಂದೇಶ
ಕುಬೇರನ ಸೇವಕನಾದ ಯಕ್ಷನೊಬ್ಬನು ಶಾಪಗ್ರಸ್ತನಾಗಿ ತನ್ನ ಅಲಕಾಪುರಿಯನ್ನು ತೊರೆದು, ಒಂದು ವರ್ಷದ ಕಾಲ ಪ್ರೀತಿಯ ಪತ್ನಿಯಿಂದ ದೂರವಾಗಿ ರಾಮಗಿರಿಯ ಆಶ್ರಮದಲ್ಲಿರಬೇಕಾಗುತ್ತದೆ. ವಿರಹ ವೇದನೆಯಲ್ಲಿ ತೊಳಲುತ್ತಿರುವ ಯಕ್ಷನು, ತನ್ನ ಪತ್ನಿಗೆ ಮೇಘದ ಮೂಲಕ ಸಂದೇಶ ಕಳುಹಿಸುವ ಕಥೆಯೇ ಮೇಘದೂತದ ಮೂಲವಸ್ತು. ಆದರೆ ಈ ಸಂದೇಶಯಾತ್ರೆಯ ನೆಪದಲ್ಲಿ ಕಾಳಿದಾಸನು ಭಾರತದ ಅನೇಕ ಸುಂದರ ಸ್ಥಳಗಳನ್ನು ವರ್ಣಿಸುತ್ತಾನೆ. ಇಲ್ಲಿ ಪ್ರವಾಸದ ಉದ್ದೇಶ ಪತ್ನಿಯ ಮೇಲಿನ ಪ್ರೀತಿ, ಪ್ರವಾಸಿಗ ‘ಮೇಘ’ ಮತ್ತು ಆ ಮೋಡಕ್ಕೆ ದಾರಿ ತೋರಿಸುವ ಗೈಡ್ ಸ್ವತಃ ಯಕ್ಷ! ಯಕ್ಷನು ಮೋಡಕ್ಕೆ ಮಹಾರಾಷ್ಟ್ರದಿಂದ ಹಿಡಿದು ಹಿಮಾಲಯದವರೆಗಿನ ‘ರೂಟ್ ಮ್ಯಾಪ್’ ವಿವರಿಸುವ ವೈಖರಿ ಅದ್ಭುತವಾಗಿದೆ.
ರಾಮಗಿರಿಯಿಂದ ಆರಂಭ
ಈ ವಿಶಿಷ್ಟ ಪ್ರವಾಸ ಆರಂಭವಾಗುವುದು ಇಂದಿನ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ‘ರಾಮಟೇಕ್’ ಎಂದೇ ಪ್ರಸಿದ್ಧವಾಗಿರುವ ‘ರಾಮಗಿರಿ’ ಆಶ್ರಮದಿಂದ. ಪತ್ನಿಯಿಂದ ದೂರಾದ ಯಕ್ಷನು ವಿರಹದ ದಿನಗಳನ್ನು ಕಳೆದದ್ದು ಇದೇ ಪುಣ್ಯಭೂಮಿಯಲ್ಲಿ. ಯಕ್ಷನು ಮೊದಲು ಮೇಘಕ್ಕೆ ಉತ್ತರದ ಕಡೆಗೆ ಸಾಗುವ ಮಾರ್ಗವನ್ನು ತಿಳಿಸುತ್ತಾನೆ. ಮಾರ್ಗ ಮಧ್ಯೆ ಕಾಣಸಿಗುವ ನೈಸರ್ಗಿಕ ಸೌಂದರ್ಯವನ್ನು ಕಾಳಿದಾಸನು ಮನೋಹರವಾಗಿ ಚಿತ್ರಿಸುತ್ತಾನೆ. ಹಸಿರು ಕಾಡುಗಳು, ಹರಿಯುವ ನದಿಗಳು, ತಂಪಾದ ಜಲಪಾತಗಳು, ಪರ್ವತ ಶ್ರೇಣಿಗಳು ಮತ್ತು ಫಲವತ್ತಾದ ಕೃಷಿಭೂಮಿಗಳು ಮೇಘದ ಪ್ರಯಾಣವನ್ನು ಅಲಂಕರಿಸುತ್ತವೆ.

ಮೋಡವು ಉತ್ತರಕ್ಕೆ ಸಾಗುತ್ತಾ, ಮಧ್ಯಭಾರತದ ವಿಂಧ್ಯ ಪರ್ವತ ಶ್ರೇಣಿಯ ಗಡಿಯನ್ನು ಪ್ರವೇಶಿಸುತ್ತದೆ. ವಿಂಧ್ಯ ಪರ್ವತಗಳ ವೈಭವ, ಅಲ್ಲಿನ ವನ್ಯಜೀವಿಗಳು ಮತ್ತು ಮಳೆಗಾಲದ ಉಲ್ಲಾಸವನ್ನು ಓದುಗನು ಕಣ್ಣಾರೆ ಕಂಡಂತೆ ಅನುಭವಿಸುತ್ತಾನೆ. ಈ ಮಾರ್ಗದಲ್ಲಿ ಮೊದಲು ಎದುರಾಗುವುದೇ ಮಾವಿನ ತೋಪುಗಳಿರುವ ‘ಆಮ್ರಕೂಟ’ (ಇಂದಿನ ಅಮರಕಂಟಕ) ಪರ್ವತ. ಬೆಟ್ಟದ ತುಂಬಾ ಹಣ್ಣುಗಳಿಂದ ತುಂಬಿದ ಮಾವಿನ ತೋಪುಗಳು! ಕಾಳಿದಾಸನು ಇಲ್ಲಿನ ದೃಶ್ಯವನ್ನು ಬಹಳ ರಂಜನೀಯವಾಗಿ ವರ್ಣಿಸಿದ್ದಾನೆ.
ಚಾರಣವೆಂದರೆ ಕೇವಲ ಕುಮಾರಪರ್ವತವಾಗದಿರಲಿ
ಪ್ರಕೃತಿಯ ಸೊಬಗಿನ ಯಾತ್ರೆ
ಮುಂದೆ ಸಾಗುತ್ತಾ ಮಧ್ಯ ಭಾರತದ ನದಿಗಳ ಜಲವೈಭವ ಅನಾವರಣಗೊಳ್ಳುತ್ತದೆ. ವಿಂಧ್ಯ ಪರ್ವತದ ಕಲ್ಲುಬಂಡೆಗಳ ನಡುವೆ ಸೀಳಿಕೊಂಡು, ‘ಮೈಯೆಲ್ಲಾ ವಿಭೂತಿಯ ಅಲಂಕಾರ ಮಾಡಿಸಿಕೊಂಡಿರುವ ಆನೆಯಂತೆ’ ಕವಲೊಡೆದು ಹರಿಯುವ ‘ನರ್ಮದಾ’ (ರೇವೆ) ನದಿಯ ರುದ್ರ ರಮಣೀಯ ದೃಶ್ಯ ಪ್ರವಾಸಿಗನನ್ನು ಮಂತ್ರಮುಗ್ಧನನ್ನಾಗಿಸುತ್ತದೆ. ಅಲ್ಲಿಂದ ಮುಂದೆ ವಿದಿಶಾ ನಗರಿಯ ತಟದಲ್ಲಿ ಉಕ್ಕಿ ಹರಿಯುವ ‘ವೇತ್ರವತಿ’ ನದಿಯ ತರಂಗಗಳು ಕಾಣಸಿಗುತ್ತವೆ. ಇಲ್ಲಿ ಕಾಳಿದಾಸನು ನದಿಗಳನ್ನು ಕೇವಲ ನೀರಿನ ಮೂಲವಾಗಿ ನೋಡದೆ, ಪ್ರವಾಸಿಗನಿಗಾಗಿ ಕಾಯುತ್ತಿರುವ ಜೀವಂತ ಸುಂದರಿಯರಂತೆ ಚಿತ್ರಿಸಿದ್ದಾನೆ. ನದಿಯ ತೀರದ ಗ್ರಾಮಗಳು, ದೇವಾಲಯಗಳು ಮತ್ತು ಪ್ರಕೃತಿಯ ಮಧುರ ಸೊಬಗು ಪ್ರವಾಸಿಗನ ಮನಸನ್ನು ಸೆಳೆಯುವಂತೆ ಚಿತ್ರಿತವಾಗಿವೆ. ಇದೇ ಹಾದಿಯಲ್ಲಿ, ಪಕ್ಷಿತಜ್ಞನೂ ಆದ ಕವಿಯು ದಶಾರ್ಣ (ಇಂದಿನ ಛತ್ತೀಸ್‌ಗಡ) ಪ್ರಾಂತ್ಯದ ವನಗಳಲ್ಲಿನ ಬಗೆಬಗೆಯ ಪಕ್ಷಿಗಳನ್ನು ಅತ್ಯಂತ ಕಾವ್ಯಮಯವಾಗಿ ವರ್ಣಿಸಿದ್ದಾನೆ.
ಉಜ್ಜಯಿನಿ ನಗರಿಯ ವೈಭವ
ಮೇಘವು ಮಾಳವ ಪ್ರದೇಶವನ್ನು ದಾಟಿ ಉಜ್ಜಯಿನಿ ನಗರವನ್ನು ಸೇರುತ್ತದೆ. ಈ ಪ್ರವಾಸದ ಅತ್ಯಂತ ಶ್ರೀಮಂತ ಮತ್ತು ಐಷಾರಾಮಿ ನಿಲ್ದಾಣವೆಂದರೆ ‘ಉಜ್ಜಯಿನಿ’. ಉಜ್ಜಯಿನಿಯ ವರ್ಣನೆ ಮೇಘದೂತದ ಅತ್ಯಂತ ಆಕರ್ಷಕ ಭಾಗಗಳಲ್ಲಿ ಒಂದು. ಇದು ಕಾಳಿದಾಸನು ಇದ್ದ ನಗರವಾದ್ದರಿಂದ, ಬಹಳ ಪ್ರೀತಿಯಿಂದ ಅಲ್ಲಿನ ಸುಂದರ ಅರಮನೆಗಳು, ವಿಶಾಲ ಬೀದಿಗಳು, ಮಾರುಕಟ್ಟೆಗಳು, ದೇವಾಲಯಗಳು, ಉತ್ಸವಗಳು ಮತ್ತು ಸಾಂಸ್ಕೃತಿಕ ವೈಭವವನ್ನು ಅತ್ಯಂತ ಜೀವಂತವಾಗಿ ಚಿತ್ರಿಸಿದ್ದಾನೆ. ಸಿಪ್ರಾ ನದಿಯ ತಂಪಾದ ಗಾಳಿ, ಅಲ್ಲಿನ ಅರಮನೆಗಳ ವೈಭವ, ಹಗಲಿನಲ್ಲಿ ರತ್ನ- ವಜ್ರಗಳಿಂದ ಮಿನುಗುವ ಮಾರುಕಟ್ಟೆಗಳು ಉಜ್ಜಯಿನಿಯ ಹೆಗ್ಗಳಿಕೆ. ನಗರದ ಸೌಂದರ್ಯ, ಜನರ ಸಾಂಸ್ಕೃತಿಕ ಅಭಿರುಚಿ ಹಾಗೂ ಸಮೃದ್ಧ ಜೀವನಶೈಲಿ ಓದುಗರನ್ನು ಆಕರ್ಷಿಸುತ್ತದೆ.

ಕವಿ ಪಂಪನು ಬನವಾಸಿಯನ್ನು ಪ್ರೀತಿಸುವಂತೆ ಉಜ್ಜಯಿನಿಯನ್ನು ಪ್ರೀತಿಸುವ ಕಾಳಿದಾಸ - ವಾಸ್ತವವಾಗಿ ಇದು ಸ್ವಲ್ಪ ಬಳಸುವ ದಾರಿಯಾದರೂ, ಉಜ್ಜಯಿನಿಯ ಸೌಂದರ್ಯವನ್ನು ನೋಡದೇ ನಿನ್ನ ಪ್ರಯಾಣವನ್ನು ಮುಂದುವರೆಸಬೇಡ ಎಂದು ಯಕ್ಷನ ಮೂಲಕ ಮೋಡಕ್ಕೆ ಆಜ್ಞಾಪಿಸುತ್ತಾನೆ! ಇಲ್ಲಿನ ಪ್ರವಾಸದ ಅತ್ಯಂತ ದೊಡ್ಡ ಆಕರ್ಷಣೆ ಎಂದರೆ ‘ಮಹಾಕಾಲೇಶ್ವರ’ ದೇವಸ್ಥಾನದ ಸಂಧ್ಯಾ ಆರತಿ. ಸಂಜೆ ಪ್ರದೋಷ ಕಾಲದಲ್ಲಿ ಶಿವನ ಸನ್ನಿಧಿಯಲ್ಲಿ ನಗಾರಿಗಳು ಮೊಳಗುವಾಗ, ಸಂಧ್ಯಾರಾಗದ ಕೆಂಪು ಬೆಳಕಿನಲ್ಲಿ ಮೋಡವು ಶಿವನ ಭುಜವನ್ನು ಬಳಸಿ ನಿಲ್ಲುವ ದೃಶ್ಯವನ್ನು ಕಾಳಿದಾಸ ಅತ್ಯಂತ ಕಲಾತ್ಮಕವಾಗಿ ಚಿತ್ರಿಸಿದ್ದಾನೆ.
ಕುರುಕ್ಷೇತ್ರ ಮತ್ತು ಹಿಮಾಲಯದ ತಪ್ಪಲು
ಉಜ್ಜಯಿನಿಯ ವೈಭವವನ್ನು ಸವಿದ ನಂತರ ಮೋಡವು ಮುಂದೆ ಸಾಗಿ ಚಂಬಲ್ ಕಣಿವೆಯ ದೇವಗಿರಿಯನ್ನು ದಾಟುತ್ತದೆ. ಅಲ್ಲಿಂದ ಮುಂದೆ ಸಾಗಿದಾಗ ಮಹಾಭಾರತದ ಯುದ್ಧ ನಡೆದ ‘ಕುರುಕ್ಷೇತ್ರ’ ಸಿಗುತ್ತದೆ. ಇತಿಹಾಸದ ಕದನ ಭೂಮಿಯ ನೆನಪುಗಳನ್ನು ದಾಟಿದ ನಂತರ, ಗಂಗಾ ನದಿಯು ಹಿಮಾಲಯದಿಂದ ಮೈದಾನ ಪ್ರದೇಶಕ್ಕೆ ದುಮುಕುವ ‘ಕನಖಲ’ (ಇಂದಿನ ಹರಿದ್ವಾರ) ಪ್ರಾಂತ್ಯ ಎದುರಾಗುತ್ತದೆ. ಇಲ್ಲಿನ ಪರ್ವತ ಶ್ರೇಣಿಗಳು, ಹಿಮದ ಶಿಖರಗಳು ಮತ್ತು ಪವಿತ್ರ ಗಂಗೆಯ ಬಿಳಿ ನೊರೆಯು ಪ್ರವಾಸಿಗನಿಗೆ ಆಧ್ಯಾತ್ಮಿಕ ಮತ್ತು ನಿಸರ್ಗದ ದಿವ್ಯ ಅನುಭೂತಿಯನ್ನು ನೀಡುತ್ತವೆ. ಮುಂದೆ ಬಿಳಿಯ ನದಿ ಗಂಗಾ ಮತ್ತು ಕಪ್ಪಾದ ಯಮುನಾ ನದಿಗಳ ಸಂಗಮ ಪ್ರದೇಶಗಳು, ಪುಣ್ಯಕ್ಷೇತ್ರಗಳು ಹಾಗೂ ಹಿಮಾಲಯದ ತಪ್ಪಲಿನ ನೈಸರ್ಗಿಕ ಸೊಬಗು ವರ್ಣಿಸಲ್ಪಟ್ಟಿವೆ. ಹಿಮಾಲಯದ ಎತ್ತರದ ಶಿಖರಗಳು, ಜಲಪಾತಗಳು ಮತ್ತು ಮೋಡಗಳಿಂದ ಆವೃತವಾದ ಕಣಿವೆಗಳು ಕಾಳಿದಾಸನ ಕಾವ್ಯದಲ್ಲಿ ಜೀವಂತ ಚಿತ್ರಗಳಾಗಿ ಮೂಡಿಬರುತ್ತವೆ.
ಇದನ್ನೂಓದಿ:ಬೆಳ್ಳಿ ಬೆಟ್ಟಗಳ ಸೆರಗಿನಲ್ಲಿ ಮಲಗಿರುವ ಇತಿಹಾಸ
ಅಂತಿಮ ನಿಲ್ದಾಣ: ಅಲಕಾಪುರಿ
ಈ ರೋಚನಕ ಪ್ರವಾಸದ ಕೊನೆಯ ನಿಲ್ದಾಣ ಕೈಲಾಸ ಪರ್ವತದ ಮಡಿಲಿನಲ್ಲಿರುವ ಕುಬೇರನ ರಾಜಧಾನಿ ‘ಅಲಕಾಪುರಿ’ ಅಥವಾ ‘ಅಲಕಾವತಿ’. ಇದೊಂದು ದಿವ್ಯ ಕಲ್ಪನಾ ಲೋಕ. ಪುರಾಣಗಳಲ್ಲಿ ದೇವತೆಗಳ ವಾಸಸ್ಥಾನವೆಂದು ಬಣ್ಣಿಸಲಾದ ಅಲಕಾಪುರಿಯ ಸೌಂದರ್ಯ ವರ್ಣನಾತೀತವಾಗಿದೆ. ಅಲ್ಲಿ ಎಂದೂ ಬಾಡದ ಹೂವುಗಳು, ನಿತ್ಯ ಯೌವನ ತುಂಬಿದ ನಾರಿಯರು, ಮುತ್ತು- ರತ್ನಗಳಿಂದ ಕೆತ್ತಿದ ಭವ್ಯ ಭವನಗಳು ಹಾಗೂ ಚಿನ್ನದ ಕಮಲಗಳುಳ್ಳ ಸರೋವರಗಳಿವೆ. ರತ್ನಗಳಿಂದ ಅಲಂಕರಿಸಲ್ಪಟ್ಟ ಭವನಗಳು, ಪುಷ್ಪವಾಟಿಕೆಗಳು, ಜಲಾಶಯಗಳು ಮತ್ತು ಸುಖಮಯ ವಾತಾವರಣವಿದೆ. ಅದನ್ನು ಕವಿ ಅದ್ಭುತವಾಗಿ ಚಿತ್ರಿಸುತ್ತಾನೆ. ಪ್ರವಾಸದ ಕೊನೆಯಲ್ಲಿ ಯಕ್ಷನ ಮನೆ ಸಿಗುತ್ತದೆ; ಅಲ್ಲಿ ವಿರಹದಿಂದ ಬಳಲುತ್ತಿರುವ ಆತನ ಪತ್ನಿ ವಾಸಿಸುತ್ತಿರುತ್ತಾಳೆ. ಅಲ್ಲಿಗೆ ಮೋಡದ ಈ ಸುದೀರ್ಘ ಪ್ರಯಾಣ ಮುಕ್ತಾಯಗೊಳ್ಳುತ್ತದೆ.

ರಾಮಗಿರಿಯಿಂದ ಹೊರಟು, ಮಾಳವ ಪ್ರಾಂತ್ಯದ ಮೂಲಕ ಸಾಗಿ, ಉಜ್ಜಯಿನಿಯ ವೈಭವವನ್ನು ನೋಡಿ, ಕುರುಕ್ಷೇತ್ರವನ್ನು ದಾಟಿ, ಹಿಮಾಲಯದ ಗಂಗೆಯನ್ನು ಸ್ಪರ್ಶಿಸಿ, ಕೈಲಾಸದ ಅಲಕಾಪುರಿಯನ್ನು ತಲುಪಬೇಕು ಎಂದು ಇಂದಿನ ಜಿಪಿಎಸ್ ವ್ಯವಸ್ಥೆಯಂತೆ ಯಕ್ಷನು ಪ್ರತಿಯೊಂದು ತಿರುವು ಮತ್ತು ನಿಲ್ದಾಣವನ್ನು ಮೋಡಕ್ಕೆ ವಿವರವಾಗಿ ತಿಳಿಸುತ್ತಾನೆ.
ಯಕ್ಷನು ಸೂಚಿಸುವ ಈ ಮಾರ್ಗವು ಭಾರತದ ಭೌಗೋಳಿಕ, ಸಾಂಸ್ಕೃತಿಕ ಮತ್ತು ನೈಸರ್ಗಿಕ ವೈವಿಧ್ಯತೆಯ ಅದ್ಭುತ ಚಿತ್ರಣವನ್ನು ನೀಡುತ್ತದೆ. ಪರ್ವತಗಳು, ನದಿಗಳು, ನಗರಗಳು, ಅರಣ್ಯಗಳು ಮತ್ತು ಜನಜೀವನದ ವರ್ಣನೆಗಳು ಒಬ್ಬ ನಿಪುಣ ಪ್ರವಾಸಿಯ ನಿಜವಾದ ಅನುಭವಗಳಂತೆ ಮೂಡಿಬರುತ್ತವೆ. ಆದ್ದರಿಂದಲೇ ಮೇಘದೂತ ಕೇವಲ ಸಂದೇಶ ಕಾವ್ಯವಾಗಿರದೆ; ಭಾರತದ ಸೌಂದರ್ಯವನ್ನು ಪರಿಚಯಿಸುವ ಪ್ರಾಚೀನ ಪ್ರವಾಸ ಸಾಹಿತ್ಯದ ಶ್ರೇಷ್ಠ ಮಾದರಿಯಾಗಿದೆ. ಕಾಳಿದಾಸ ಹೆಸರಿಸುವ ಪ್ರತಿ ಬೆಟ್ಟ, ನದಿ, ನಗರಗಳು ಇಂದಿಗೂ ಭಾರತದ ಭೂಪಟದಲ್ಲಿ ಜೀವಂತವಾಗಿವೆ. ಅಂದಿನ ಕಾಲದಲ್ಲೇ ಪರಿಸರ ಪ್ರವಾಸೋದ್ಯಮ ಮತ್ತು ಪ್ರಕೃತಿಯನ್ನು ಆಸ್ವಾದಿಸುವ ಕಲೆ ಭಾರತೀಯರಿಗೆ ಸಿದ್ಧಿಸಿತ್ತು ಎಂಬುದಕ್ಕೆ ‘ಮೇಘದೂತ’ ಸಾಕ್ಷಿ. ಮೋಡವೊಂದನ್ನು ದೂತನನ್ನಾಗಿ ಕಲ್ಪಿಸಿಕೊಂಡು ಇಡೀ ಭಾರತವನ್ನು ಕಾವ್ಯದ ಮೂಲಕ ಪ್ರದಕ್ಷಿಣೆ ಹಾಕಿಸಿದ ಕಾಳಿದಾಸನ ಈ ಕೃತಿ, ಇಂದಿಗೂ ಜಗತ್ತಿನ ಪ್ರಾಚೀನ ಮತ್ತು ಅತ್ಯಂತ ಮನೋಹರ ಪ್ರವಾಸಿ ಕಥನಗಳಲ್ಲಿ ಒಂದಾಗಿ ಅಜರಾಮರವಾಗಿದೆ.