Wednesday, August 12, 2026
Wednesday, August 12, 2026

ಪಶ್ಚಿಮ ಘಟ್ಟಕ್ಕೆ ವೈರಲ್ ಕಂಟೆಂಟ್ ಕಂಟಕ

ಇಲಾಖೆ ಸಿಬ್ಬಂದಿ ಎಷ್ಟು ಬೇಕಾದರೂ ದಂಡ ವಿಧಿಸುತ್ತಾರೆ. ಆದರೆ ರಶೀದಿ ಹೊರಬರುವುದಿಲ್ಲ. ಯಾಕೆ..? ಚಾರ್ಮಾಡಿ ಘಾಟಿಯಲ್ಲಿ ಬಿಜೆಪಿ ಮುಖಂಡ ನಳಿನ್‌ ಕುಮಾರ್‌ ಕಟೀಲ್‌ ಮಂಗಗಳಿಗೆ ಬಾಳೆ ಹಣ್ಣು ತಿನ್ನಿಸಿ ವಿಡಿಯೋ ಹಂಚಿಕೊಂಡಿದ್ದರು. ಹೇಗೆ ಅವರಿಂದ ಕ್ಷಮೆ ಕೇಳಿಸಲಾಗುತ್ತದೆ? ತೀರ್ಥಹಳ್ಳಿಯ ಒಬ್ಬ ಯುವ ಮುಖಂಡ, ಸಕ್ರೆಬೈಲು ವನ್ಯಜೀವಿ ವಲಯ ತೀರ್ಥಹಳ್ಳಿ ರಸ್ತೆಯಲ್ಲೊಮ್ಮೆ, ಆಗುಂಬೆಯಲ್ಲಿ ಇನ್ನೊಮ್ಮೆ ಮಂಗಗಳಿಗೆ ಬಾಳೆ ಗೊನೆ ನೀಡಿ ಭಜರಂಗಿ ಹಾಡು ಹಾಕಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟರು. ನಾನು ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದೆ.

  • ಉದಯ್‌ ಸಾಗರ

ಇಂಗ್ಲಿಷ್‌ ಜರ್ನಲಿಸಂನಿಂದ ಕನ್ನಡದಲ್ಲಿ ಬರವಣಿಗೆಯೇ ನಿಂತೋಯ್ತು! ಅದು ಫೇಸ್‌ಬುಕ್‌ ಬರಹಗಳಿಗಾದರೂ ಜೀವ ಉಳಿಸಿಕೊಂಡಿತ್ತು, ಓದಿ ಬದಲಾಗೋದು ಯಾರೂ ಇಲ್ವಲ್ಲ! ಪರಿಸರ ಪತ್ರಿಕೋದ್ಯಮ ವಿಭಿನ್ನ ರೀತಿಯಲ್ಲಿ ಮಾಡೋಣ ಅಂತ ಸಂಕಲ್ಪ ಮಾಡಿ ರೇನ್‌ಲ್ಯಾಂಡ್‌ ಹೆಸರಿನ ಸೋಷಿಯಲ್‌ ಮೀಡಿಯಾ ಪೇಜ್‌ ಶುರು ಮಾಡಿದೆ. ಮೂರು ವರ್ಷಗಳ ಕಾಲ ಅರಣ್ಯ ಸಚಿವರಾಗಿದ್ದ ಈಶ್ವರ ಖಂಡ್ರೆ ಫ್ಯಾನ್ಸ್‌ ಪೇಜ್‌ ಥರ ರೀಚ್‌ ಆಯ್ತು! ಆನೆ ದಂತ ಮಾರಾಟ ಜಾಲ, ಕಾಟಿ ಬೇಟೆಯ ಭಟ್ಕಳ ಗ್ಯಾಂಗ್‌, ಕಾಳಿಂಗ ಸರ್ಪ ಶೋಷಣೆ, ಒತ್ತುವರಿ ತೆರವು, ಅರಣ್ಯದಲ್ಲಿ ಎನ್‌ಜಿಓಗಳ ಹುಚ್ಚಾಟ, ಹೆದ್ದಾರಿ ಕುಸಿತ, ವೈದ್ಯರ ಸಮಸ್ಯೆ, ಆನೆ-ಕಾಟಿ ಸೆರೆ ರಾಜಕಾರಣ, ಒಂದಲ್ಲ ಎರಡಲ್ಲ, ಎಲ್ಲವೂ ಭಿನ್ನ ವಿಷಯಗಳು. ಇವ್ಯಾವೂ ನನಗೆ ಅಷ್ಟೇನೂ ಜುಗುಪ್ಸೆ ತರಿಸಿಲ್ಲ. ಆದ್ರೆ ಜಟಿಲವಾಗುತ್ತಿರುವ ಬಹುಮುಖ್ಯ ಸಮಸ್ಯೆ, ವನ್ಯಜೀವಿ ವಲಯ ಹಾಗೂ ಮೀಸಲು ಅರಣ್ಯದಲ್ಲಿನ ರೀಲ್ಸ್‌ ಹುಚ್ಚಾಟ! ಇಡೀ ಮಲೆನಾಡೇ ಅರಣ್ಯ ಕಾನೂನು ಕುಣಿಕೆಯಲ್ಲಿದೆ. ಇದ್ಯಾವುದೋ ಅತಿಕ್ರಮ ಪ್ರವೇಶ ಅಂತ ಸುಮ್ಮನಾಗ್ತಿದ್ದೆ. ಆದರೆ ಈಗಿನ ಸ್ಥಿತಿ ಹಾಗಿಲ್ಲ, ಎಲ್ಲರೂ ಸೋಷಿಯಲ್‌ ಮೀಡಿಯಾ ಸ್ಟಾರ್‌ಗಳು, ಎಲ್ಲವೂ ವೈರಲ್‌ ಕ್ರಿಂಜ್‌ ಕಂಟೆಂಟ್‌ಗಳು.

ಇದನ್ನೂ ಓದಿ: ಸುಳ್ಳಲ್ಲ.. ನಂಬಿ..! ಇದು ಸೊಳ್ಳೆ ಬಿಡುಗಡೆಯ ಪ್ರವಾಸೋದ್ಯಮ!

ಕಳೆದ ವಾರ ಭದ್ರಾವತಿಯ ಯುವಕನೊಬ್ಬ ಶಿವಮೊಗ್ಗ-ಚಿಕ್ಕಮಗಳೂರು ಅಂಚಿನ ಮಾರಿದಿಬ್ಬದಲ್ಲಿ ಓಪನ್‌ ಜೀಪ್‌ ಬಳಸಿ ಆನೆಯನ್ನು ಕೆರಳಿಸಿದ್ದ. ಥೇಟ್ ಸಿಪಾಯಿ ಸಿನಿಮಾದ ರವಿಚಂದ್ರನ್‌ ಥರ ಇತ್ತು ಆತನ ಶೋಕಿ. ವಿಡಿಯೋ ವೈರಲ್ ಆಗ್ತಿದ್ದಂತೆ ನನಗೂ ಸಾಕಷ್ಟು ಮೆಸೇಜ್ ಬಂತು. ಆಗಲೇ ಎನ್‌ಆರ್‌ ಪುರ ವಲಯ ಅರಣ್ಯಾಧಿಕಾರಿಗಳು ಆತನನ್ನು ಎಳೆತಂದು ಕೂರಿಸಿದ್ದರು. ನಾನು ಭದ್ರಾ ಟೈಗರ್‌ ಪ್ರಾಜೆಕ್ಟ್‌ ಡೈರೆಕ್ಟರ್‌ (ಡಿಸಿಎಫ್‌) ಪುಲ್ಕಿತ್ ಮೀನಾ ಅವರಿಗೆ ಕರೆ ಮಾಡಿ ಕೇಳಿದಾಗ ಆತ ವನ್ಯಜೀವಿ ವಲಯದಲ್ಲಿ ವಿಡಿಯೋ ಮಾಡಿರೋದು ಡೌಟ್‌ ಅಂದುಬಿಟ್ಟರು. ಪದೇಪದೆ ಭದ್ರಾ ಹೆಸರು ಕೆಡಿಸೋದು ಅವರಿಗೆ ಇಷ್ಟವಿರಲಿಲ್ಲ. ಅಷ್ಟರಲ್ಲೇ ಈತ ರಾಜಕಾರಣಿ ಪುತ್ರನ ಸ್ನೇಹಿತ ಎಂಬೆಲ್ಲಾ ಪುಕಾರು-ಸುದ್ದಿಗಳೆಲ್ಲಾ ಹರಡಿದ್ದವು. ಕೊನೆಗೆ ಅದು ಲಕ್ಕವಳ್ಳಿ ವನ್ಯಜೀವಿ ವಲಯದ ವ್ಯಾಪ್ತಿಯಲ್ಲೇ ಆಗಿತ್ತು ಅನ್ನೋದಕ್ಕೆ ಪುರಾವೆ ಸಿಕ್ಕಿತು. ಆತನ ಮೇಲೆ ವನ್ಯಜೀವಿ ಸಂರಕ್ಷಣಾ ಕಾನೂನುಗಳನ್ನು ಹೇರಲಾಯ್ತು. ಇಡೀ ಪ್ರಸಂಗದಲ್ಲಿ ನಮ್ಮ ತಕರಾರು ಇದ್ದಿದ್ದು ಆತನಿಂದ ಕ್ಷಮಾಪಣಾ ಹೇಳಿಕೆ ಪಡೆದು ಆತನ ಸೋಷಿಯಲ್‌ ಮೀಡಿಯಾ ಅಕೌಂಟಲ್ಲಿ ಅಥವಾ ಅರಣ್ಯ ಇಲಾಖೆ ನಿರ್ವಹಿಸುವ ಪೇಜಲ್ಲಿ ಅಪ್‌ಲೋಡ್‌ ಮಾಡಬೇಕೆಂದು. ಅದು ಸಾಧ್ಯವಿಲ್ಲವೆಂದಾದಲ್ಲಿ ಕನಿಷ್ಠ ಮಾಧ್ಯಮಗಳಿಗಾದರೂ ಆ ವಿಡಿಯೋ ನೀಡಬೇಕಿತ್ತು. ಅರಣ್ಯ ಇಲಾಖೆ ದಂಡ ಹಾಕೋದೂ ಬೇಡವಿತ್ತು, ಕ್ಷಮಾಪಣೆ ವಿಡಿಯೋ ಪೋಸ್ಟ್ ಮಾಡಿಸಿದ್ದರೆ ಸಾಕಿತ್ತು. ವಿಡಿಯೋ ಹಾಕುವುದು ಲಕ್ಷ ರುಪಾಯಿ ದಂಡಕ್ಕೆ ಸಮ ಎಂದು ನಾನು ಹೇಳಿದರೆ ನನ್ನ ಕೆಲ ಪರಿಸರ ಸ್ನೇಹಿತರು ತಕರಾರು ತೆಗೆಯುತ್ತಾರೆ. ಆದರೆ ಆ ಕ್ಷಮಾಪಣೆ ವಿಡಿಯೋ ಮಾಡಬಹುದಾದ ಬದಲಾವಣೆ ನನಗೆ ಗೊತ್ತು.

ನಾನು ಸ್ವಲ್ಪ ಇಷ್ಟಪಡುವ ಕಂಟೆಂಟ್‌ ಕ್ರಿಯೇಟರ್‌ಗಳಲ್ಲಿ ಒಬ್ಬರು ಎಸ್‌ಜಿ ಮಲ್ನಾಡ್‌ ಖ್ಯಾತಿಯ ಸುಮಂತ್‌ ಗೌಡ. ಕಳೆದ ವರ್ಷ ಅವರು ಜೋಯಿಡಾ ಕಾಡಿನಲ್ಲಿ ಕಂಟೆಂಟ್‌ ಮಾಡಲು ಹೋಗಿ, ಟೆಂಟ್‌ ಹಾಕಿ ಕೇಸ್‌ ಹಾಕಿಸಿಕೊಂಡರು. ಅಲ್ಲಿನ ಎಸಿಎಫ್‌ ಗಿರೀಶ್‌ ನನಗೆ ಪರಿಚಿತರು. ವಿಷಯ ಕುರಿತು ಬೇಸರ ವ್ಯಕ್ತಪಡಿಸಿದೆ. ಆತನ ಕಂಟೆಂಟ್‌ ಸಭ್ಯವಾಗಿರುತ್ತವೆ, ಜ್ಞಾನ ಪ್ರಸರಣ ಮಾಡಬಲ್ಲವು. ಇವರೇ ಪುನಃ ಕಳೆದ ತಿಂಗಳು ಶಿವಮೊಗ್ಗದ ಮಡೆನೂರು ಹಿರೇಭಾಸ್ಕರ ಡ್ಯಾಮ್‌ ವಿಡಿಯೋ ಮಾಡಿದ್ದರು. ವಾಹ್‌ ಎಷ್ಟು ಚೆಂದದ ನಿರೂಪಣೆ ಅನಿಸಿತ್ತು. ಇದು ಕಾರ್ಗಲ್‌ ವನ್ಯಜೀವಿ ವಲಯದಲ್ಲಿ ಇರುವ ಜಲಾಶಯ. ಇದರ ಪರಿಣಾಮ ನೋಡಿ; ಕೆಲ ದಿನಗಳಲ್ಲೇ ಸಾಲು ಸಾಲು ಅನುಪಯುಕ್ತ ವಿಡಿಯೋಗಳು, ಬೈಕ್‌ ಸ್ಟಂಟ್‌ಗಳು ಶುರುವಾಗಿಯೇಬಿಟ್ಟವು. ಉದ್ದೇಶಪೂರ್ವಕವಾಗಿ ಬೈಕ್‌ ಬೀಳಿಸಿ ಎತ್ತಿ, ಗದ್ದಲ ಎಬ್ಬಿಸೋ ದೃಶ್ಯಗಳು. ಕಂಟೆಂಟ್‌ ಕ್ರಿಯೇಟರ್‌ಗಳಿಂದ ನಲುಗುವ ಮೊದಲ ಜಿಲ್ಲೆ ಹಾಸನ. ಅದರಲ್ಲೂ ಸಕಲೇಶಪುರ ಎಂದರೆ ಬರೀ ಇಂಥವುಗಳದ್ದೇ ಅಡ್ಡೆ. ಹಾಗಂತ ಎಲ್ಲಾ ಗಿರಿ ಶಿಖರಗಳು, ಬೆಟ್ಟಗಳು ಅರಣ್ಯವೇ ಆಗಿರೋದಿಲ್ಲ. ಕುದುರೆಮುಖಕ್ಕೊಂದು ಕಾನೂನು ಮುಳ್ಳಯ್ಯನಗಿರಿಗೊಂದು! ಆದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆ ಕಾಫಿ ತೋಟದ ಕಾರ್‌ ರ್‍ಯಾಲಿಗಳನ್ನೂ ನಿಲ್ಲಿಸಬಹುದು! ಸಕಲೇಶಪುರದ ಆರ್‌ಎಫ್‌ಓ ಆಗಿದ್ದ ಎಸ್‌ಎಲ್‌ ಶಿಲ್ಪಾ ಅವರು ಸಾಲು ಸಾಲು ಆಫ್‌ರೋಡ್‌ ವಾಹನಗಳನ್ನು ತಮ್ಮ ಕಚೇರಿಗೆ ಎಳೆತಂದು ಸಾಲಾಗಿ ನಿಲ್ಲಿಸಿ, ದಂಡ ಹಾಕಿದ್ದರು. ಅದನ್ನು ಹೊರತು ಪಡಿಸಿ ಈ ತನಕ ಆ ಧೈರ್ಯ ತೋರಿದ ಅಧಿಕಾರಿಗಳನ್ನು ನಾನು ನೋಡಿಯೇ ಇಲ್ಲ.

Untitled design (90)

ಇಲಾಖೆ ಸಿಬ್ಬಂದಿ ಎಷ್ಟು ಬೇಕಾದರೂ ದಂಡ ವಿಧಿಸುತ್ತಾರೆ. ಆದರೆ ರಶೀದಿ ಹೊರಬರುವುದಿಲ್ಲ. ಯಾಕೆ..? ಚಾರ್ಮಾಡಿ ಘಾಟಿಯಲ್ಲಿ ಬಿಜೆಪಿ ಮುಖಂಡ ನಳಿನ್‌ ಕುಮಾರ್‌ ಕಟೀಲ್‌ ಮಂಗಗಳಿಗೆ ಬಾಳೆ ಹಣ್ಣು ತಿನ್ನಿಸಿ ವಿಡಿಯೋ ಹಂಚಿಕೊಂಡಿದ್ದರು. ಹೇಗೆ ಅವರಿಂದ ಕ್ಷಮೆ ಕೇಳಿಸಲಾಗುತ್ತದೆ? ತೀರ್ಥಹಳ್ಳಿಯ ಒಬ್ಬ ಯುವ ಮುಖಂಡ, ಸಕ್ರೆಬೈಲು ವನ್ಯಜೀವಿ ವಲಯ ತೀರ್ಥಹಳ್ಳಿ ರಸ್ತೆಯಲ್ಲೊಮ್ಮೆ, ಆಗುಂಬೆಯಲ್ಲಿ ಇನ್ನೊಮ್ಮೆ ಮಂಗಗಳಿಗೆ ಬಾಳೆ ಗೊನೆ ನೀಡಿ ಭಜರಂಗಿ ಹಾಡು ಹಾಕಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟರು. ನಾನು ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದೆ. ಎರಡು ಸಾವಿರ ದಂಡ ಕಟ್ಟಿಸಿದರಂತೆ! ಆ ದಂಡದ ಬದಲು ಅವರಿಂದ ಕ್ಷಮಾಪಣೆ ವಿಡಿಯೋ ಮಾಡಿಸಲು ಸಾಧ್ಯವಾ?

ಈಗಂತೂ ಶಿವಮೊಗ್ಗ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಪುರದಾಳ್ ಡ್ಯಾಂ ತೋರಿಸಲು ಶಿವಮೊಗ್ಗದ ಯುವಕರು ಮೊಬೈಲ್‌ ಹಿಡಿದು ಹೊರಟಿದ್ದಾರೆ. ಸಕಲೇಶಪುರ ಹೊಸಹಳ್ಳಿ ಗುಡ್ಡದ ಮೇಲೆ ಬೈಕ್ ರ್‍ಯಾಲಿ ಮಾಡುತ್ತಿದ್ದಾರೆ. ಕೊಡಚಾದ್ರಿ ಆಸುಪಾಸಿನಲ್ಲಿ ಉಡುಪಿ ಭಾಗದ ಬೈಕರ್‍ ಹಾವಳಿ ಹೆಚ್ಚಿದೆ. ಹಾದಿಯಂಚಿನ ಆನೆಗಳನ್ನು ಕೆರಳಿಸುತ್ತಿದ್ದಾರೆ. ಶರಾವತಿ ಹಿನ್ನೀರಲ್ಲೊಬ್ಬ ತುಳು ನಾಡಿನ ಕಂಟೆಂಟ್ ಕ್ರಿಯೇಟರ್‌ ಕ್ಯಾಂಪಿಂಗ್‌ ಮಾಡಿ, ಮೀನು ಹಿಡಿದು ವಿಡಿಯೋ ಬಿಟ್ಟಿದ್ದ. ವಿಷಯ ತಿಳಿದ ಕೂಡಲೇ ಡಿಲೀಟ್‌ ಮಾಡಿದ. ಆದರೆ ಈ ವನ್ಯಜೀವಿ ವಲಯವನ್ನು ಮಂಗಳೂರು ಮೂಲದವರಿಗೆ ಸ್ಥಳ ತೋರಿಸಿದ್ಯಾರು? ಸ್ಥಳೀಯ ಯುವಕರು ಅಥವಾ ಅರಣ್ಯ ಇಲಾಖೆ ಸಿಬ್ಬಂದಿಯೇ! ಕೆಲವರಂತೂ ಅರಣ್ಯ- ಪೊಲೀಸ್‌ ಇಲಾಖೆಯನ್ನೇ ವಿಡಿಯೋದಲ್ಲಿ ಟ್ರೋಲ್ ಮಾಡ್ತಿದ್ದಾರೆ. ಹೆಬ್ರಿ ಭಾಗದ ಯುವಕ ಸುದ್ದಿ ಮಾಡಿದವರಿಗೆ ಏನ್ರೀ ಮೀಡಿಯಾ ಅಂತ ವಿಡಿಯೋ ಹಾಕಿ ಅಣಕಿಸುತ್ತಿದ್ದ. ಕೆಲವರಂತೂ ಸ್ಥಳ ಗೌಪ್ಯತೆ ಕಾರಣಕ್ಕೆ ವಿವರಣೆ ಇರೋದೇ ಇಲ್ಲ. ದಿನೇದಿನೆ ಮಾರುಕಟ್ಟೆಗೆ ಬರುವ ವಿವಿಧ ವಿನ್ಯಾಸದ ಫೋರ್‌ ಬೈ ಫೋರ್‌ ವೆಹಿಕಲ್‌ಗಳು ಎಲ್ಲಿ ತಮ್ಮ ತಾಕತ್ ಪ್ರದರ್ಶನ ಮಾಡುತ್ತಿವೆ? ಪಶ್ಚಿಮ ಘಟ್ಟ ಇಂಥ ಮತಿಗೇಡಿಗಳಿಂದ ನಲುಗುತ್ತಿದೆ.

Untitled design (91)

ದಿನೇದಿನೆ ಈ ಸಮಸ್ಯೆ ಜಟಿಲವಾಗುತ್ತಿದ್ದರೂ ಅರಣ್ಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಅರಣ್ಯದ ವ್ಯಾಪ್ತಿಯಲ್ಲಿ ಇಲ್ಲದೇ ಇದ್ದರೂ ಮಾರ್ಪಾಡು ಬೈಕ್‌ ಹಾಗೂ ಕಾರುಗಳ ಮೇಲೆ ನಾನಾ ವಿಧದ ಪ್ರಕರಣಗಳನ್ನು ದಾಖಲಿಸಬಹುದು. ಸ್ವಂತ ಜಾಗದಲ್ಲಿ ರ್‍ಯಾಲಿ ನಡೆದರೂ ಪರಿಸರ ಕಾನೂನುಗಳ ಕುಣಿಕೆಯಿಂದ ತಪ್ಪಿಸಿಕೊಳ್ಳಲಾಗದು. ವನ್ಯಜೀವಿ ಸಂರಕ್ಷಣ ಕಾಯ್ದೆ 1972, ಸೆಕ್ಷನ್‌ 51ರ ಪ್ರಕಾರ ನಿಯಮ ಉಲ್ಲಂಘನೆಗೆ ಒಂದು ಲಕ್ಷದವರೆಗೆ ದಂಡ ಹಾಗೂ ಮೂರು ವರ್ಷ ಶಿಕ್ಷೆ ನೀಡಬಹುದು. ಜೊತೆಗೆ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಅತಿಕ್ರಮ ಪ್ರವೇಶ, ಪರಿಸರ ಕಾನೂನುಗಳನ್ನೂ ಸೇರಿಸಬಹುದು. ವನ್ಯಜೀವಿ ವಲಯವಾದರೆ ಕೃತ್ಯಕ್ಕೆ ಬಳಸಿದ ವಾಹನ, ಡ್ರೋಣ್‌-ಡಿಎಸ್‌ಎಲ್‌ಆರ್‍ ಕ್ಯಾಮೆರಾದಂಥ ಶೂಟಿಂಗ್‌ ಪರಿಕರಗಳನ್ನು ವಶಕ್ಕೆ ಪಡೆಯಬಹುದು.

ರೈಡ್‌ ಮಾಡಿದ್ರೆ ನಿಮ್ಮದೇನು ಗಂಟು ಹೋಗುತ್ತೆ ಎನ್ನುತ್ತಾರೆ. ಅಸಲಿಗೆ ನಿಯಂತ್ರಣವಿಲ್ಲದ ಈ ರೀಲ್ಸ್ ಶೋಕಿ ವನ್ಯಜೀವಿಗಳನ್ನು ವಿಚಲಿತಗೊಳಿಸುತ್ತವೆ. ಕೆರಳಿದ ಆನೆಗಳು ಜನರ ಮೇಲೆ ದಾಳಿ ಮಾಡಿರೋ ಉದಾಹರಣೆಗಳಿವೆ. ಚಿರತೆಗಳು ಜನರ ಮೇಲೆ ಜಿಗಿದಿವೆ. ಗ್ರಾಮ ನೈರ್ಮಲ್ಯ ಹಾಳಾಗುತ್ತೆ- ಊರು ತಿಪ್ಪೆಯಾಗುತ್ತೆ. ಮದ್ಯದ ಬಾಟಲ್‌ಗಳು ಕಾಡಿನಲ್ಲಿ ಸಿಗುತ್ತವೆ. ಕಾನೂನು ಬಿಗಿಗೊಳಿಸಿದರೆ ಸ್ಥಳೀಯರಿಗೇ ಪ್ರವೇಶ ನಿರ್ಬಂಧವಾಗುತ್ತೆ. ವನ್ಯಜೀವಿಗಳಿಗಷ್ಟೇ ಅಲ್ಲ ಜನರ ಖಾಸಗಿ ಬದುಕಿಗೂ ಧಕ್ಕೆ. ಇವೆಲ್ಲಾ ಪರಿಣಾಮಗಳಾದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಯಾರನ್ನೂ ಕರೆದು ವಿಚಾರಣೆ ಮಾಡುವುದಿಲ್ಲ. ಅಪರೂಪಕ್ಕೆ ಎಂಬಂತೆ ಕೆಲ ಆರ್‌ಎಫ್‌ಓಗಳು ಆಸಕ್ತಿಯಿಂದ ಕಂದಕ, ಬೇಲಿಗಳಿಂದ ಪ್ರವಾಸಿ ತಾಣಗಳನ್ನು ಬಂದ್ ಮಾಡಿದ್ದಾರೆ.

ಅರಣ್ಯ ಇಲಾಖೆ, ಬೆಂಗಳೂರು ಸಿಟಿ ಪೊಲೀಸರಂತೆ ಕ್ಷಮಾಪಣಾ ವಿಡಿಯೋ ಮಾಡಿಸಿ ಅವರ ಅಧಿಕೃತ ಪೇಜ್‌ಲ್ಲಿ ಅಪ್‌ಲೋಡ್ ಮಾಡಿದರೆ ಮಾತ್ರ ಈ ಕಂಟೆಂಟ್‌ಗಳು ಕಡಿಮೆಯಾಗಬಲ್ಲವು.

ಇನ್ನೊಂದು ಅಪಾಯಕಾರಿ ಬೆಳವಣಿಗೆ ಎಂದರೆ, ಕಾಡು-ಬೆಟ್ಟಗಳ ಸೌಂದರ್ಯವನ್ನು ಅನುಭವಿಸುವ ಸಂಸ್ಕೃತಿ ನಿಧಾನವಾಗಿ ’ಲೊಕೇಶನ್ ಬೇಟೆ’ ಯಾಗಿ ಬದಲಾಗುತ್ತಿದೆ. ಹಿಂದೆ ಜನರು ಪ್ರಕೃತಿಯನ್ನು ನೋಡಲು ಹೋಗುತ್ತಿದ್ದರು; ಈಗ ವಿಡಿಯೋ ಮಾಡಲು ಹೋಗುತ್ತಿದ್ದಾರೆ. ಒಂದು ರೀಲ್ಸ್ ವೈರಲ್ ಆದರೆ ಸಾಕು, ಮರುದಿನ ಅದೇ ಜಾಗಕ್ಕೆ ನೂರಾರು ಬೈಕ್‌ಗಳು, ಜೀಪ್‌ಗಳು, ಡ್ರೋನ್ಗಳು ದೌಡಾಯಿಸುತ್ತವೆ. ಯಾರಿಗೂ ಆ ಸ್ಥಳದ ಪರಿಸರ ಸೂಕ್ಷ್ಮತೆ, ವನ್ಯಜೀವಿಗಳ ಚಲನವಲನ ಅಥವಾ ಸ್ಥಳೀಯರ ಬದುಕಿನ ಬಗ್ಗೆ ಕಾಳಜಿ ಇರುವುದಿಲ್ಲ. ಸೋಷಿಯಲ್ ಮೀಡಿಯಾದ ಅಲ್ಗಾರಿದಮ್‌ಗಳಿಗೆ ಹೊಸ ಲೊಕೇಶನ್ ಬೇಕು; ಕಂಟೆಂಟ್ ಕ್ರಿಯೇಟರ್‌ಗಳಿಗೆ ಹೊಸ ಬ್ಯಾಕ್‌ಡ್ರಾಪ್ ಬೇಕು. ಈ ಎರಡರ ಮಧ್ಯೆ ಸಿಲುಕಿರುವುದು ಪಶ್ಚಿಮ ಘಟ್ಟ. ಸಾವಿರಾರು ವರ್ಷಗಳಿಂದ ನಿಶ್ಶಬ್ದವಾಗಿ ಉಳಿದಿದ್ದ ಕಾಡಿನ ಹಾದಿಗಳು ಕೆಲವೇ ತಿಂಗಳುಗಳಲ್ಲಿ ರೀಲ್ಸ್‌ಗಳ ಬಲಿಯಾಗಿ ನಲುಗುತ್ತಿವೆ. ಅರಣ್ಯ ಇಲಾಖೆ ಈಗಲೂ ಇದನ್ನು ಕೇವಲ ಪ್ರವಾಸೋದ್ಯಮ ಅಥವಾ ಅತಿಕ್ರಮ ಪ್ರವೇಶದ ಸಮಸ್ಯೆಯಾಗಿ ನೋಡಿದರೆ ಸಾಲದು. ಇದು ಡಿಜಿಟಲ್ ಯುಗದ ಹೊಸ ಪರಿಸರ ಸವಾಲು. ಕಾಡಿನೊಳಗೆ ನುಗ್ಗುವ ಪ್ರತಿಯೊಬ್ಬ ಪ್ರವಾಸಿಗನ ಹಿಂದೆ ಈಗ ಒಂದು ಕ್ಯಾಮೆರಾ ಇದೆ; ಆ ಕ್ಯಾಮೆರಾದ ಹಿಂದೆ ಲಕ್ಷಾಂತರ ವೀಕ್ಷಕರಿದ್ದಾರೆ. ಆದ್ದರಿಂದ ಕಾನೂನು ಜಾರಿಯ ಜತೆಗೆ ಜವಾಬ್ದಾರಿಯುತ ಕಂಟೆಂಟ್ ಸೃಷ್ಟಿಯ ಕುರಿತ ಜಾಗೃತಿಯೂ ಅಷ್ಟೇ ಅಗತ್ಯವಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?