ಇನ್ನೇನು ವಸಂತ ಕಾಲ ಸಮೀಪಿಸುತ್ತಿದೆ. ವಸಂತಕಾಲ ಬಂದಾಗ ಮಾವು ಚಿಗುರಲೇ ಬೇಕು. ಕೋಗಿಲೆ ಹಾಡಲೇ ಬೇಕು ಎಂಬ ಹಾಡೇ ಇದೆ. ವಸಂತಕಾಲದಲ್ಲಿ ಪ್ರಕೃತಿ ಮಾತೆ ಹೊಸ ಸೀರೆ ಹೊದ್ದು, ತನ್ನ ಮಕ್ಕಳಿಗೆ ತೋರಿಸಲು ಸಿದ್ಧಳಾಗುತ್ತಾಳೆ. ಬನಬನ ನೋಡು ಈಗ ಹ್ಯಾಂಗ, ಮದುವಿ ಮಗನ್ಹಾಂಗ ಅನ್ನುವ ರೀತಿ ಕಾಡುಗಳೆಲ್ಲವೂ ವರನ ಹಾಗೆ ಫುಲ್‌ ಫ್ರೆಶ್‌ ಆಗಿ, ಗಡ್ಡವನ್ನೆಲ್ಲ ಟ್ರಿಮ್‌ ಮಾಡಿಸಿಕೊಂಡು, ಮೆನ್ಸ್‌ ಪಾರ್ಲರ್‌ನಲ್ಲಿ ಹೊಸ ಫೇಶಿಯಲ್‌ ಮಾಡಿಸಿಕೊಂಡಂತೆ, ಮದುವೆ ಮನೆ ಮುಂದೆ ಅತಿಥಿಗಳನ್ನು ಬರಮಾಡಿಕೊಳ್ಳುವ ಹಾಗೆ ನಿಂತಿರುತ್ತದೆ. ಇಂಥ ಮದುವೆ ಮನೆ ಕರ್ನಾಟಕದಲ್ಲಿ ಎಷ್ಟೊಂದಿದೆ ಅಲ್ವೇ? ಮದುವೆ ಮನೆಗಳು ಅಂದ ಮೇಲೆ ಅಲ್ಲಿನ ಆತಿಥ್ಯ ಹೇಗಿರಬೇಕು ಹೇಳಿ. ಅತಿಥಿಗಳು ಮತ್ತೊಮ್ಮೆ ಮಗದೊಮ್ಮೆ ಬರುವ ಹಾಗಿರಬೇಕು.

ಇದನ್ನೂ ಓದಿ: ವಾಸ್ತವ್ಯಕ್ಕಿದೆ ಜೆಎಲ್‌ಆರ್‌ನ ಹಂಪಿ ಹೆರಿಟೇಜ್ & ವೈಲ್ಡರ್‌ನೆಸ್ ರೆಸಾರ್ಟ್‌

ಈಗೆಲ್ಲ ಕಾಡುಗಳು ಎಷ್ಟೇ ಪ್ರಕೃತಿದತ್ತವಾಗಿದ್ದರೂ ಅಲ್ಲಿ ಮನುಷ್ಯನ ಕಾರುಬಾರು ಇದ್ದೇ ಇರುತ್ತೆ. ಅದಿರಲಿ.. ಈಗಿನ ಕಾಲದಲ್ಲಿ, ಒಂದು ಕಾಡಿಗೆ ನಿಮ್ಮನ್ನು ಸ್ವಾಗತಿಸಿ. ಒಂದೊಳ್ಳೆ ಊಟ ನೀಡಿ, ಪರಿಸರ ತಜ್ಞರ ಜತೆ ಕಾಡಿನಲ್ಲಿ ಪಕ್ಷಿ ವೀಕ್ಷಣೆ ಮಾಡಿಸಿ, ಅಲ್ಲಿನ ಕಾಡುಪ್ರಾಣಿಗಳನ್ನು ತೋರಿಸಿ, ಸಂಜೆ ಹೊತ್ತಲ್ಲಿ ಒಂದೊಳ್ಳೆ ತರಕಾರಿ ಸ್ನ್ಯಾಕ್ಸ್‌ ಮತ್ತು ಸೂಪ್‌ ಅನ್ನೂ ನೀಡಿ, ರಾತ್ರಿ ಕ್ಯಾಂಪ್‌ ಫೈರ್‌ ಹಾಕಿ, ಅಲ್ಲಿ ಕಾಡಿನ ಬಗ್ಗೆ ಹರಟೆ ಹೊಡೆದು ಊಟದ ಸಮಯಕ್ಕೆ ಊಟ ಮಾಡಿಸಿ, ನದಿಯಲ್ಲಿ ತೆಪ್ಪದ ರೈಡ್‌ ಹಾಕಿಸಿ, ಅದೂ ಎರಡೆರಡು ದಿನ! ಯಾರು ಮಾಡ್ತಾರೆ ಹೇಳಿ?

ರೆಸಾರ್ಟ್‌ ಅಥವಾ ಕಾಡಿನ ಬಗ್ಗೆ ಮಾತನಾಡೋದಕ್ಕೆ ಶುರುಮಾಡಿದರೆ, ಅದು ಶುರುವಾಗುವುದು ಅಂತ್ಯವಾಗುವುದು ಜೆಎಲ್‌ಆರ್‌ಗಳ ಬಗ್ಗೆ ಮಾತನಾಡಿಯೇ. ಜೆಎಲ್ ಆರ್ ಅಷ್ಟರ ಮಟ್ಟಿಗೆ ಕರ್ನಾಟಕ ಪ್ರವಾಸ ಮತ್ತು ಆತಿಥ್ಯದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಇವತ್ತೂ ಅಂಥದ್ದೇ ಜೆಎಲ್‌ಆರ್‌ನ ಮತ್ತೊಂದು ಫೇಮಸ್‌ ರೆಸಾರ್ಟ್‌ ಬಗ್ಗೆ ತಿಳಿದುಕೊಳ್ಳೋಣ.

Untitled design (68)

ಅದೇ ಓಲ್ಡ್‌ ಮ್ಯಾಗಜಿನ್‌ ಹೌಸ್‌!

ಜೋಯಿಡಾ ಮತ್ತು ದಾಂಡೇಲಿಗೆ ಸಮೀಪದಲ್ಲೇ ಇದೆ ಈ ಓಲ್ಡ್‌ ಮ್ಯಾಗಜಿನ್‌ ಹೌಸ್‌. ಹೆಸರೇ ಹೇಳುವ ಹಾಗೆ ಇದು ಮೂಲತಃ ರೆಸಾರ್ಟ್ ಅಲ್ಲ . 1970ರಲ್ಲಿ ಸ್ಥಾಪಿತವಾದ ಬಂಕರ್‌. ಆ ಸಮಯದಲ್ಲಿ ಕಾಳಿ ನದಿಗೆ ಅಡ್ಡಲಾಗಿ ಸೂಪ ಡ್ಯಾಮ್‌ (ಇದೂ ಪ್ರವಾಸಿ ಸ್ಥಳವೇ) ಕಟ್ಟುವಾಗ, ಶಸ್ತ್ರಾಸ್ತ್ರಗಳನ್ನು ಇಡಲು ಇದನ್ನು ನಿರ್ಮಿಸಿದ್ದರಂತೆ. ಹಾಗೇ ಶಸ್ತ್ರಾಸ್ತ್ರಗಳಲ್ಲಿ ಬುಲೆಟ್‌ಗಳನ್ನು ಇಟ್ಟುಕೊಳ್ಳುವ ಸಾಧನಕ್ಕೆ ಮ್ಯಾಗಜಿನ್‌ ಎಂದು ಕರೆಯುತ್ತಾರೆ ಅಲ್ವಾ? ಆದ್ದರಿಂದ ಇದಕ್ಕೆ ಮ್ಯಾಗಜಿನ್ ಹೌಸ್‌ ಎಂದು ಹೆಸರು ಬಂತು. ತುಂಬಾ ವರ್ಷ ಆದಮೇಲೆ ಇದು ಓಲ್ಡ್‌ ಮ್ಯಾಗಜಿನ್‌ ಹೌಸ್‌ ಆಯ್ತು. ನೀವಂದುಕೊಂಡ ಹಾಗೆ ಇದು ಹಳೆ ನಿಯತಕಾಲಿಕೆಗಳ ಮನೆ ಅಲ್ಲ. ಓಲ್ಡ್ ಅಂತ ಇರೋದನ್ನು ನೋಡಿ ನಿರಾಶರಾಗಬೇಡಿ. 50 ವರ್ಷ ಹಳೆಯದಾದ್ದ ಮಾತ್ರಕ್ಕೆ ಇದು ಬಣ್ಣ ಕಳೆದುಕೊಂಡು, ಆಗಲೋ ಈಗಲೋ ಬೀಳುವ ಗೋಡೆಗಳ, ಫ್ಯಾನ್‌ ಗರ್‌.. ಗರ್‌.. ಎಂದು ಸದ್ದು ಮಾಡುವ, ʼಭೂತ ಬಂಗಲೆʼ ಅಂತೂ ಅಲ್ಲ. ಕಾಲಕಾಲಕ್ಕೆ ದೇಖುರೇಖುಗಳ ಜತೆಗೆ ಹೊಸದಾಗಿ ಕಟ್ಟಲಾದ ಕಟ್ಟಡಗಳ ಕಾಂಪ್ಲೆಕ್ಸ್‌. ಒಂದು ಕಾಲದಲ್ಲಿ ಸೈನಿಕರು ಬಳಸುತ್ತಿದ್ದ ಮಾತ್ರಕ್ಕೆ ಇದು ಅಡಗುತಾಣದ ಥರವೂ ಇಲ್ಲ. ಇದು ಫೂರ್ತಿ ಡಿಫರೆಂಟ್‌, ನಿಜಹೇಳಬೇಕೆಂದರೆ, ಪಕ್ಷಿ ಮತ್ತು ಪ್ರಕೃತಿ ಪ್ರಿಯರ ಸ್ವರ್ಗ.

ಇದು ಸುಮ್ಮನೆ ಕಾಲ ಕಳೆಯಲು ಒಂದೊಳ್ಳೆ ಸ್ಥಳ. ಇಲ್ಲಿ ಬಂದರೆ ಪ್ರಕೃತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಬಹುದು. ನಗರದ ಜೀವನದಿಂದ ಜಂಜಡಗಳಿಂದ ಗದ್ದಲದಿಂದ ದೂರವಿರಬಹುದು. ಓಲ್ಡ್‌ ಮ್ಯಾಗಜಿನ್‌ ಹೌಸ್‌ ಹಳ್ಳಿಗಾಡಿನ, ಹಳೆಯ-ಹಳೆ ಕಾಲದ ಕ್ಲಾಸಿಕ್ ಜೀವನವನ್ನು ಮನಸ್ಸಿಗೆ ತರುತ್ತದೆ. ಈ ರೆಸಾರ್ಟ್‌ ದಟ್ಟವಾದ ಕಾಡಿನ ಮಧ್ಯೆ ಇದೆ ಮತ್ತು ಕಾಡಿನ ಅಪರೂಪದ ಪಕ್ಷಿಗಳು ನೀವಿರುವ ರೂಮಿನ ಕಿಟಕಿಗೇ ಬರುತ್ತವೆ, ಹಿಕ್ಕೆ ಹಾಕಿಹೋಗ್ತವೆ. ನೀವು ಬರೀ ಪಕ್ಷಿಗಳನ್ನು ನೋಡುವುದಷ್ಟೇ ಅಲ್ಲದೇ, ಅವುಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳಬಹುದು. ಕಾಡಿನಲ್ಲಿ ಪಕ್ಷಿಗಳ ಸದ್ದನ್ನು, ಚಿಲಿಪಿಲಿಯನ್ನು ಆಲಿಸುತ್ತ ಅದರಲ್ಲಿ ಒಂದಾಗಬಹುದು.

Untitled design (70)

ದಾಂಡೇಲಿಯ ಮಾಂತ್ರಿಕ ಕಾಡುಗಳನ್ನು ಅನ್ವೇಷಿಸುತ್ತಾ ರಾತ್ರಿಯಿಡೀ ವಿಶ್ರಾಂತಿ ಪಡೆಯಲು ಸೂಕ್ತ ಸ್ಥಳವಾದ ಈ ಶಿಬಿರವು ಸಾರ್ವಜನಿಕರಿಗೆ ಮುಕ್ತವಲ್ಲದ ಅರಣ್ಯ ಪ್ರದೇಶದಲ್ಲಿದೆ. ಚಾರಣ, ಪ್ರಕೃತಿ ನಡಿಗೆ, ದೋಣಿ ಸವಾರಿ ಮತ್ತು ರಿವರ್‌ ರಾಫ್ಟಿಂಗ್ ನಂಥ ವಿವಿಧ ಚಟುವಟಿಕೆಗಳಿಂದ ಪ್ರಯಾಣ ಅಡ್ವೆಂಚರಸ್‌ ಆಗಿರುತ್ತೆ. ಕಾಡಿನಲ್ಲಿ ಒಂದು ಸುತ್ತು ಹಾಕಿದರೆ, ಮಲಬಾರ್ ಗ್ರೇ ಹಾರ್ನ್‌ಬಿಲ್, ಮಲಬಾರ್ ಪೈಡ್ ಹಾರ್ನ್‌ಬಿಲ್, ಫ್ಲೈಕ್ಯಾಚರ್‌ಗಳು, ಓರಿಯೊಲ್‌ಗಳು, ಬಾಬ್ಲರ್‌ಗಳಂಥ ನೂರಾರು ಜಾತಿಯ ಪಕ್ಷಿಗಳನ್ನು ಇಲ್ಲಿ ಸಾಮಾನ್ಯವಾಗಿ ಕಾಣಬಹುದು. ಒಂದಿಡೀ ಬ್ಯುಸಿ ಹಾಗೂ ಅಡ್ವೆಂಚರ್‌ ದಿನದ ನಂತರ, ಮ್ಯಾಗಜಿನ್ ಹೌಸ್‌ನ ಮೇಲಿರುವ ಟೆರೇಸ್‌ನಲ್ಲಿರುವ ಭೋಜನವು ಮನಸ್ಸಿಗೆ ಅಹ್ಲಾದಕರ ಅನುಭೂತಿ ನೀಡುತ್ತದೆ. ಲೈಟ್‌ ಪೊಲ್ಯೂಷನ್‌ ಇಲ್ಲದೆ ರಾತ್ರಿಯಲ್ಲಿ ನಕ್ಷತ್ರಗಳ ರಾಶಿ ʼಕಣ್ಣು ಕುಕ್ಕುವಷ್ಟುʼ ಪ್ರಕಾಶಮಾನವಾಗಿರುತ್ತದೆ. ನಿಮಗೆ ಗೋಲ್‌ಘರ್‌ನಲ್ಲಿ ಊಟ ಮಾಡಲು ಇಷ್ಟವಿರದಿದ್ದರೆ, ಕ್ಯಾಂಪ್‌ಫೈರ್ ಬಳಿಯೂ ಮಾಡಬಹುದು. ಅದನ್ನು ಕ್ಯಾಂಡಲ್‌ ಲೈಟ್‌ ದಿನ್ನರ್‌ ಥರ ಕ್ಯಾಂಪ್‌ಫೈರ್‌ ದಿನ್ನರ್‌ ಎಂದೂ ಕರೆಯಬಹುದು.

ಇಲ್ಲಿ ಪರಿಸರ ಸ್ನೇಹಿ ಕೊಠಡಿಗಳಿಂದ ಹಿಡಿದು ಮರದ ಕುಟೀರಗಳು ಮತ್ತು ವಸತಿ ನಿಲಯಗಳವರೆಗೆ ವಿವಿಧ ವಸತಿ ಆಯ್ಕೆಗಳೊಂದಿಗೆ, ಎಲ್ಲ ರೀತಿಯ ಬಜೆಟ್‌ಗಳನ್ನು ಪೂರೈಸುವ ವಾಸ್ತವ್ಯವಿದೆ. ಕಾಡಿನಲ್ಲಿ ಒಂದೊಳ್ಳೆ ದಿನವನ್ನು ಅನುಭವಿಸಲು, ಪಕ್ಷಿಗಳ ಹಾಡಿನ ಹಿತವಾದ ಶಬ್ದಗಳ ನಡುವೆ ಉಳಿಯಲು ಇದು ಒಂದು ಅವಕಾಶ.

ಕಾಳಿ ನದಿಯ ಸಾಹಸ

ಕಾಳಿ ನದಿ ಸಾಹಸಕ್ಕೆ ಅತ್ಯುತ್ತಮ. ಇದು ವೈಟ್‌ವಾಟರ್ ರಾಫ್ಟಿಂಗ್‌ಗೆ ಭರ್ಜರಿ ತಾಣವಾಗಿ ಪ್ರಸಿದ್ಧವಾಗಿದೆ. ನಿಮ್ಮನ್ನು ರಕ್ಷಿಸಲು ಅರ್ಹ ಸಿಬ್ಬಂದಿ ಮತ್ತು ಸುರಕ್ಷತಾ ಸಾಧನಗಳೊಂದಿಗೆ, ರಾಫ್ಟಿಂಗ್ ಮೂಲಕ ನಿಮಗೆ ಭರ್ಜರಿ ಸಾಹಸವನ್ನು ಮಾಡಿಸಲಾಗುತ್ತದೆ.

ಗಣೇಶಗುಡಿ ಕೈ ಮುಗಿಯಿರಿ

ಓಲ್ಡ್ ಮ್ಯಾಗಜಿನ್ ಹೌಸ್, ಸೂಪಾ ಅಣೆಕಟ್ಟು, ಹಿನ್ನೀರು, ಪಕ್ಷಿವೀಕ್ಷಣಾ ತಾಣ ಮತ್ತು ನದಿ ಚಟುವಟಿಕೆ ಕೇಂದ್ರದಂಥ ಅದ್ಭುತ ವೀಕ್ಷಣಾ ಸ್ಥಳಗಳಿಗೆ ಹತ್ತಿರದಲ್ಲಿದೆ. ಅತ್ಯಂತ ಸಮೀಪವಿರುವುದು ಗಣೇಶಗುಡಿ. ಗಣೇಶ ಗುಡಿ ಅಂದ್ರೆ ಗಣೇಶನ ದೇವಸ್ಥಾನವಲ್ಲ, ಕನ್ ಫ್ಯೂಸ್ ಆಗಬೇಡಿ. ಇದು ಪ್ರಕೃತಿಯ ತಾಣಗಳಿಗೆ ಬಂದ ಹೆಸರು.

ಸೀಸನ್‌

ದಾಂಡೇಲಿ ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳ. ಇಲ್ಲಿಗೆ ಬರಬೇಕೆಂದರೆ, ಟೆಂಪರೇಚರ್‌ ಅಥವಾ ಸೀಸನ್‌ ನೋಡಿ ಬರುವುದಲ್ಲ, ಬದಲಿಗೆ ಮನಸ್ಥಿತಿ ಶಾಂತತೆ, ಆರಾಮವನ್ನು ಬಯಸಿದಾಗ ಬರಬಬೇಕು. ಬೇಸಗೆಯ ಕಾಲದಲ್ಲಿ ಸ್ವಲ್ಪ ಉಷ್ಣತೆ ಹೆಚ್ಚಿದ್ದರೂ, ಮಳೆಗಾಲದಲ್ಲಿ ಇದು ಅತ್ಯಂತ ಸೂಕ್ತ ತಾಣ. ನೆನಪಿಡಿ ಇದು ಶ್ರಾವಣ. ಬೇಕಾದರೆ, ಮೇಲಿನ ಪದ್ಯವನ್ನು ಮತ್ತೊಮ್ಮೆ ಓದಿ..

ಜೆಎಲ್‌ಆರ್‌ನಲ್ಲಿನ ದಿನ

ದಿನ 1

ಮಧ್ಯಾಹ್ನ 1:00 -

ಚೆಕ್ ಇನ್ ಮಾಡಿಕೊಂಡು, ಫ್ರೆಶ್ ಆಗಿ

ಮಧ್ಯಾಹ್ನ 1:30 - 2:30

ಗೋಲ್ ಘರ್‌ನಲ್ಲಿ ಭರ್ಜರಿ ಊಟ ಮಾಡಿ

ಸಂಜೆ 4:00 - 4:15

ಗೋಲ್ ಘರ್‌ನಲ್ಲಿ ಚಹಾ/ಕಾಫಿ ಬಡಿಸಿ ಉದ್ಯಾನವನದೊಳಗೆ ಸವಾರಿ ಮಾಡಲು ಸಿದ್ಧರಾಗಿ

ಸಂಜೆ 4:30 - 6:30

ಇಲ್ಲಿನ ಪರಿಸರ ತಜ್ಞರು ನಿಮ್ಮನ್ನು ಶಿಬಿರದಲ್ಲಿ ಟ್ರೆಕ್ಕಿಂಗ್‌ ಅಥವಾ ಪಕ್ಷಿ ವೀಕ್ಷಣೆಗೆ ಕರೆದೊಯ್ಯುತ್ತಾರೆ, ಕಾಡು ಮತ್ತು ಅಲ್ಲಿ ವಾಸಿಸುವ ಎಲ್ಲ ಪ್ರಾಣಿಗಳ ಬಗ್ಗೆ ತಮ್ಮ ಅನುಭವಗಳು ಮತ್ತು ಮಾಹಿತಿಯನ್ನು ತೋರಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ

ಸಂಜೆ 7:00 - 7:30

ಗೋಲ್‌ಘರ್‌ನಲ್ಲಿ ತರಕಾರಿ ತಿಂಡಿಗಳು ಮತ್ತು ಸೂಪ್

ಸಂಜೆ 7:30 - 8:30

ಕ್ಯಾಂಪ್ ಫೈರ್

ರಾತ್ರಿ 8:30 - 9:30

ಗೋಲ್ ಘರ್‌ನಲ್ಲಿ ಊಟ ಮಾಡುವಾಗ, ಇತರ ಅತಿಥಿಗಳು ಮತ್ತು ನಮ್ಮ ಸಿಬ್ಬಂದಿಯೊಂದಿಗೆ ಕಾಡಿನ ಕಥೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾ, ಒಂದೆರಡು ತುತ್ತು ಹೆಚ್ಚಿಗೆ ತಿನ್ನಿ

ದಿನ 2

ಬೆಳಗ್ಗೆ 6:00 - 6:15

ಏಳಿ ಎದ್ದೇಳಿ ಬೆಳಗಾಯಿತು

ಬೆಳಗ್ಗೆ 6:45 - 7:00

ಗೋಲ್‌ಘರ್‌ನಲ್ಲಿ ಚಹಾ - ಕಾಫಿ

ಬೆಳಗ್ಗೆ 7:00 - 8:30

ಮತ್ತೊಂದು ಪ್ರಕೃತಿ ನಡಿಗೆ/ಪಕ್ಷಿ ವೀಕ್ಷಣೆ

ಬೆಳಗ್ಗೆ 8:30 - 9:30

ಗೋಲ್‌ಘರ್‌ನಲ್ಲಿ ಉಪಾಹಾರ

ಬೆಳಗ್ಗೆ 9:30 - 10:15

ಕಾಳಿ ನದಿಯಲ್ಲಿ ದೋಣಿ ಸವಾರಿ

ಬೆಳಗ್ಗೆ 10:30 -

ಮತ್ತೊಮ್ಮೆ ಬರಲು ನೆನಪಿನ ಬುತ್ತಿಯೊಂದಿಗೆ ಹೊರಡಿ.

Untitled design (69)

ದಾರಿ ಹೇಗೆ

ರಸ್ತೆಯ ಮೂಲಕ

ಈ ರೆಸಾರ್ಟ್ ಬೆಂಗಳೂರಿನಿಂದ ಸುಮಾರು 437 ಕಿಮೀ ಮತ್ತು ಮುಂಬೈನಿಂದ 559 ಕಿಮೀ ದೂರದಲ್ಲಿದೆ.

ರೈಲಿನ ಮೂಲಕ

ಹತ್ತಿರದ ರೈಲು ನಿಲ್ದಾಣವೆಂದರೆ ಹುಬ್ಬಳ್ಳಿ ಜಂಕ್ಷನ್, ಇದು ಪ್ರಮುಖ ನಗರಗಳಿಗೆ ರೈಲುಗಳ ಮೂಲಕ ಉತ್ತಮ ಸಂಪರ್ಕ ಹೊಂದಿದೆ.

ವಿಮಾನದ ಮೂಲಕ

ಡಬೋಲಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ಪ್ರಮುಖ ನಗರಗಳಿಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ.

ಪ್ಯಾಕೇಜ್‌ಗಳು

ಡಿಲಕ್ಸ್‌ ಪ್ಯಾಕೇಜ್‌

ಕಾಟೇಜ್‌ ಪ್ಯಾಕೇಜ್‌

ಬ್ಯಾಗ್‌ಪ್ಯಾಕರ್ಸ್‌ ಪ್ಯಾಕೇಜ್‌

ಪ್ಯಾಕೇಜ್ನಲ್ಲಿ: ಆಯ್ದ ವಸತಿ ಸ್ಥಳ, ವಾಸ್ತವ್ಯ, ಮಧ್ಯಾಹ್ನ ಊಟ, ರಾತ್ರಿ ಊಟ ಮತ್ತು ಉಪಾಹಾರ, ಮಾರ್ಗದರ್ಶಿ ಚಾರಣ, ಅರಣ್ಯ ಪ್ರವೇಶ ಶುಲ್ಕ.

ಸಂಪರ್ಕ

ಗಣೇಶಗುಡಿ, ಹತ್ತಿರದ ಕ್ಯಾಂಪ್ -1, ಜೋಯಿಡಾ ತಾಲ್ಲೂಕು, ಲೋಂಡಾ-ದಾಂಡೇಲಿ ರಸ್ತೆ

ಕಾರವಾರ - 581365 ಗೋವಾ ಹತ್ತಿರ,

ಮ್ಯಾನೇಜರ್: ಅಪ್ಪಾ ಸಾಹೇಬ್ ನದಾಫ್

ಸಂಪರ್ಕ ಸಂಖ್ಯೆ: 9480885303

ಲ್ಯಾಂಡ್-ಲೈನ್: 08383-256301

ಇಮೇಲ್ ಐಡಿ: info@junglelodges.com