Monday, September 28, 2026
Monday, September 28, 2026

ಪ್ರವಾಸದ ಕನಸಿಗೆ ರೆಕ್ಕೆಯಾದವಳು ಮಗಳು ಭಾವನಾ..

ಮನೆಯ ಹೆಣ್ಣುಮಗಳನ್ನು ಕನ್ಯಾದಾನ ಮಾಡಿಕೊಡುವ ವರೆಗಷ್ಟೇ ನಮ್ಮ ಜವಾಬ್ದಾರಿ, ಮುಂದಿನ ಜೀವವ ಅವಳದ್ದು ಎನ್ನುವ ಕಾಲ ಇಂದಿಲ್ಲ. ಹುಟ್ಟಿದ ಮನೆ ಹಾಗೂ ಸೇರಿದ ಮನೆಯೆರಡರ ಜವಾಬ್ದಾರಿಯನ್ನೂ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ಇಂದಿನ ಹೆಣ್ಣು ಮಕ್ಕಳು ಹೆತ್ತವರಿಗೆ ತಾಯಿಯಾಗುತ್ತಾರೆ, ಗುರುವಾಗುತ್ತಾರೆ. ಇದಕ್ಕೆ ಉತ್ತಮ ನಿದರ್ಶನ ನನ್ನ ಮನೆ ಮಗಳು ಭಾವನಾ. ಪ್ರವಾಸ ಜೀವನದ ನನ್ನ ಕನಸಿಗೆ ರೆಕ್ಕೆಯಾದ ಅವಳ ಬಗ್ಗೆ ಮಗಳ ದಿನದಂದು ಬರೆಯದಿದ್ದರೆ ಹೇಗೆ?

  • ಜಾನಕಿ ಶ್ರೀನಿವಾಸ್‌, ಗೋವಾ

ದೇಶ- ವಿದೇಶಗಳನ್ನು ಸುತ್ತುವ ಆಸೆ ನನಗೆ ಇಂದು ನಿನ್ನೆಯದಲ್ಲ. ಆದರೆ, ಚಿಕ್ಕಂದಿನಿಂದಲೂ ಅಂಥ ಅವಕಾಶ ಸಿಕ್ಕಿರಲೇ ಇಲ್ಲ. ನಾನು ಚಿಕ್ಕಂದಿನಿಂದಲೂ ನನ್ನ ಜವಾಬ್ದಾರಿಗಳನ್ನು ನಿಭಾಯಿಸುವುದರಲ್ಲೇ ಕಾಲ ಕಳೆದ ಕಾರಣ ಪ್ರವಾಸವೆಂಬುದು ಕನಸಾಗಿಯೇ ಉಳಿದಿತ್ತು. ವಿದ್ಯಾಭ್ಯಾಸ, ನಂತರ ವೈವಾಹಿಕ ಜೀವನ, ಮಕ್ಕಳು ಹುಟ್ಟಿದ ಮೇಲಂತೂ ಅವರ ಕಾಳಜಿ, ವಿದ್ಯಾಭ್ಯಾಸ ಹೀಗೆ ಜೀವನ ಪೂರ್ತಿ ಒಂದಲ್ಲಾ ಒಂದು ಜವಾಬ್ದಾರಿ ಹೆಗಲಮೇಲೆಯೇ ಕುಳಿತಿತ್ತು. ಜೀವನ ಇಷ್ಟೇನಾ.. ಕನಸು ನನಸಾಗುವ ಕಾಲ ಯಾವಾಗ ಎಂದು ಯೋಜಿಸುವುದರಲ್ಲೇ ನನ್ನ ಜೀವನದ ಬಹುಪಾಲನ್ನೂ ಕಳೆದುಬಿಟ್ಟಿದ್ದೆ!

ಆದರೆ, ಇಲ್ಲಿ ನಾನು ಹೇಳಲೇಬೇಕಾದ ವಿಚಾರವಿರುವುದು ನನ್ನ ಪ್ರವಾಸದ ಗುರುವಿನ ಬಗ್ಗೆ. ಅವಳೇ ನನ್ನ ಮಗಳು ಭಾವನಾ! ನನ್ನನ್ನು ಮೊದಲು ಅಮ್ಮ ಎಂದು ಕರೆದ ನನ್ನ ಚೊಚ್ಚಲ ಮಗಳು. ತಾಯಿಯಿಂದಲೇ ಮಗಳಿಗೆ ಪಾಠವೆಂಬುದು ಎಷ್ಟು ಸತ್ಯವೋ, ಮಗಳೂ ಕೂಡ ತಾಯಿಯಂತೆ ಅಮ್ಮನಿಗೆ ಗುರುವಾಗಬಲ್ಲಳು ಎಂಬುದಕ್ಕೆ ನನ್ನ ಮಗಳು ಭಾವನಾ ಪ್ರತ್ಯಕ್ಷ ಸಾಕ್ಷಿ.

ಇದನ್ನೂ ಓದಿ: ಕರ್ನಾಟಕದ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು - ಸಚಿವರ ದೂರದೃಷ್ಟಿಯ ನಾಯಕತ್ವ

ಅವಳು ನನ್ನ ಮಡಿಲು ತುಂಬಿದ ನಂತರ ಅವಳ ಜತೆಜತೆಗೆಯೇ ನಾನೂ ಜೀವನ ಪಾಠವನ್ನು ಕಲಿಯುತ್ತಲೇ ಹೋದೆ. ಕಂಪ್ಯೂಟರ್‌ ಕಲಿಕೆ, ಸ್ಕೂಟರ್‌ ರೈಡ್, ತಲೆಗೆ ಕೆಲಸ ಕೊಡುವ ಸುಡುಕು ಮಾಡುವುದನ್ನು ಕಲಿಸಿದ್ದೂ ನನ್ನ ಭಾವನಾ. ಇನ್ನು ಕಲಾತ್ಮಕ ವಿಚಾರಗಳನ್ನೂ ಒಂದು ಹೆಜ್ಜೆ ಮುಂದಿರುವ ಅವಳು ನನಗೂ ಗ್ಲಾಸ್‌ ಪೇಂಟಿಂಗ್‌, ತಂಜಾವೂರ್‌ ಪೇಂಟಿಂಗ್‌ನಂಥ ಅನೇಕ ವಿದ್ಯೆಗಳನ್ನು ಕಲಿಸಿದವಳು.

Untitled design (62)

ನನಸಾಯ್ತು ಅಮೆರಿಕ ಪ್ರವಾಸ

ವಿದ್ಯಾಭ್ಯಾಸ ಮುಗಿಸಿ, ಹಸೆಮಣೆ ಏರಿದ ಅವಳು ಹೋಗಿದ್ದು ದೂರದ ದೇಶ ಅಮೆರಿಕಕ್ಕೆ. ಅಷ್ಟು ದಿನ ಜತೆಗಿದ್ದು ಎಲ್ಲವನ್ನೂ ಕಲಿಸಿಕೊಡುತ್ತಿದ್ದ ಮಗಳು ದೂರವಿದ್ದಾಳೆ ಎಂಬ ನನ್ನ ಕೊರಗನ್ನು ನಿವಾರಿಸಲು ಅವಳು 2015ರಲ್ಲಿ ಮೊದಲ ಬಾರಿಗೆ ಅಮೆರಿಕಕ್ಕೆ ಕರೆಸಿಕೊಂಡಿದ್ದಳು. ಹೀಗೆ ದೇಶ- ವಿದೇಶಗಳನ್ನು ಸುತ್ತುವ ನನ್ನ ಕನಸು ಮೊದಲ ಬಾರಿಗೆ ನನಸಾಗಿತ್ತು.

ಪ್ರವಾಸವೆಂದರೆ ಅವಳಿಗೂ ಇಷ್ಟವಾಗುವುದರಿಂದ ನಾನು ಅಮೆರಿಕದಲ್ಲಿದ್ದಷ್ಟೂ ದಿನ ಅಲ್ಲಿನ ಅನೇಕ ಪ್ರವಾಸಿ ತಾಣಗಳಿಗೆ ನನ್ನನ್ನು ಕರೆದುಕೊಂಡು ಹೋಗಿದ್ದಳು. ಅಲ್ಲಿನ ಹೆಸರಾಂತ ಪ್ರವಾಸಿ ತಾಣಗಳಾದ ನಯಾಗರಾ ಫಾಲ್ಸ್‌, ಸ್ಟ್ಯಾಚ್ಯೂ ಆಫ್‌ ಲಿಬರ್ಟಿ ಮಾತ್ರವಲ್ಲದೆ ಅಮೆರಿಕ ಜೀವನ ಹೇಗಿರುತ್ತದೆ ಎಂಬುದನ್ನೂ ನನಗೆ ಹಂತಹಂತವಾಗಿ ಕಲಿಸಿಕೊಟ್ಟಿದ್ದಾಳೆ.

Untitled design (61)

ಒಂದೇ ಬಾರಿ ನನ್ನ ಅಮೆರಿಕ ಪ್ರವಾಸ ಮುಗಿಯಿತಾ? ಖಂಡಿತಾ ಇಲ್ಲ. ಮಗಳು ತಾಯ್ತನ ಸಂಭ್ರಮದಲ್ಲಿದ್ದಾಗ ಅವಳಿಗೆ ನೆರವಾಗುವುದಕ್ಕೆ, ಬಾಣಂತನ ಮಾಡುವ ಸಲುವಾಗಿ, ನಂತರದ ದಿನಗಳಲ್ಲಿ ಮೊಮ್ಮಕ್ಕಳೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವುದಕ್ಕಾಗಿ ಇನ್ನೂ ನಾಲ್ಕಾರು ಬಾರಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದೆ. ಆಗೆಲ್ಲ ನ್ಯೂಯಾರ್ಕ್‌, ವಾಷಿಂಗ್ಟನ್‌ ಡಿಸಿ, ಲಾಸ್‌ ವೇಗಸ್‌, ಯುನಿವರ್ಸಲ್‌ ಸ್ಟುಡಿಯೋ, ಲಾಸ್‌ ಏಂಜಲಿಸ್‌, ಒಂದೇ ಎರಡೇ.. ಎಲ್ಲ ಸ್ಥಳಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಮಾಡಿಕೊಟ್ಟವಳು ಭಾವನಾ.

ಹೀಗೆ ಮಡಿಲು ತುಂಬಿದ ಮಗಳು ಜೀವನದಲ್ಲಿ ಅನೇಕ ಪಾಠಗಳನ್ನು ಕಲಿಸಿದ ಗುರುವಾಗಿದ್ದಾಳೆ. ಪ್ರವಾಸಿ ಜೀವನವನ್ನು ಹಾತೊರೆಯುತ್ತಿದ್ದ ನನ್ನನ್ನು ಪ್ರವಾಸಿ ತಾಣಗಳಿಗೆ ಕರೆದೊಯ್ಯುವ ಮೂಲಕ ಕನಸುಗಳನ್ನು ನನಸಾಗಿಸಿದ್ದಾಳೆ. ಮತ್ತೆಮತ್ತೆ ನೆನಪಿಸುತ್ತಾಳೆ ಮಗಳೆಂದರೆ ಹೆತ್ತವರಿಗೆ ಕಾಳಜಿ ತೋರುವ ತಾಯಿಯಾಗುತ್ತಾಳೆ ಎಂಬುದನ್ನು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!