ಸುಸ್ಥಿರ ಪ್ರವಾಸೋದ್ಯಮಕ್ಕೆ ಪಶ್ಚಿಮ ಬಂಗಾಳದ ಹೊಸ ಹೆಜ್ಜೆ
ಒನ್ ಟ್ರಾವೆಲರ್, ಒನ್ ಮ್ಯಾಂಗ್ರೋವ್: ಸುಸ್ಥಿರ ಪ್ರವಾಸೋದ್ಯಮಕ್ಕೆ ಪಶ್ಚಿಮ ಬಂಗಾಳದ ಹೊಸ ಹೆಜ್ಜೆ
ವಿಶ್ವ ಮ್ಯಾಂಗ್ರೋವ್ ದಿನಾಚರಣೆಯ ಅಂಗವಾಗಿ ಪಶ್ಚಿಮ ಬಂಗಾಳ ಸರಕಾರ ‘ಒನ್ ಟ್ರಾವೆಲರ್, ಒನ್ ಮ್ಯಾಂಗ್ರೋವ್ʼ (One Traveller, One Mangrove) ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಘೋಷಿಸಿದೆ. ಸುಂದರ್‌ಬನ್ಸ್ ಪ್ರದೇಶದಲ್ಲಿ ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಜತೆಗೆ ಮ್ಯಾಂಗ್ರೋವ್ ಅರಣ್ಯಗಳ ಸಂರಕ್ಷಣೆಗೆ ಪ್ರವಾಸಿಗರನ್ನೇ ಪಾಲುದಾರರನ್ನಾಗಿಸುವುದು ಇದರ ಉದ್ದೇಶವಾಗಿದೆ.

ಈ ಯೋಜನೆಯಡಿ ಸುಂದರ್‌ಬನ್ಸ್‌ಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರೂ ಒಂದು ಮ್ಯಾಂಗ್ರೋವ್ ಸಸಿಯನ್ನು ನೆಡುವಂತೆ ಪ್ರೋತ್ಸಾಹಿಸಲಾಗುತ್ತದೆ. ಸಸಿ ನೆಟ್ಟವರಿಗೆ ಪರಿಸರ ಸಂರಕ್ಷಣೆಗೆ ನೀಡಿದ ಕೊಡುಗೆಯನ್ನು ಗುರುತಿಸಿ ವಿಶೇಷ ಪ್ರಮಾಣಪತ್ರವನ್ನೂ ನೀಡಲಾಗುತ್ತದೆ. ಇದನ್ನು ಬ್ಲೂ ಕಾರ್ಬನ್ ಅಂಬಾಸಿಡರ್ ಕಾರ್ಯಕ್ರಮದ ಭಾಗವಾಗಿ ಜಾರಿಗೊಳಿಸಲು ಸರಕಾರ ಮುಂದಾಗಿದೆ.
ಇದನ್ನೂ ಓದಿ: ಸಮುದ್ರ ಮತ್ತು ಭೂಮಿಯ ನಡುವಿನ ಜೀವಸೇತು ಈ ಮ್ಯಾಂಗ್ರೋವ್!
ಇದರ ಜತೆಗೆ ಸುಂದರ್‌ಬನ್ಸ್‌ನಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ, ಜಲಮಾರ್ಗ ಸಾರಿಗೆ, ರಸ್ತೆ ಸಂಪರ್ಕ ಹಾಗೂ ಪರಿಸರ ಸಂರಕ್ಷಣೆಯನ್ನು ಸಮನ್ವಯಗೊಳಿಸುವ ಸಮಗ್ರ ಅಭಿವೃದ್ಧಿ ಯೋಜನೆಯನ್ನೂ ಸರಕಾರ ರೂಪಿಸುತ್ತಿದೆ. ಡಾರ್ಜಿಲಿಂಗ್ ಮತ್ತು ಸುಂದರ್‌ಬನ್ಸ್ ಅನ್ನು ಜಾಗತಿಕ ಮಟ್ಟದ ಪ್ರಮುಖ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸುವ ಗುರಿಯನ್ನೂ ರಾಜ್ಯ ಸರಕಾರ ಘೋಷಿಸಿದೆ. ಈ ಕ್ರಮದಿಂದ ಪರಿಸರ ಸಂರಕ್ಷಣೆ, ಸ್ಥಳೀಯ ಸಮುದಾಯದ ಅಭಿವೃದ್ಧಿ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.