ಕೈಗಾರಿಕಾ ಪ್ರದೇಶವೆಂದೇ ಜನಪ್ರಿಯವಾಗಿದ್ದ ರಾಮನಗರದ ಬಿಡದಿ ಪಟ್ಟಣ ಇದೀಗ, ಜಲಕ್ರೀಡೆಗಳ ತಾಣವಾಗಿ ಬದಲಾಗಿದೆ. ಬಿಡದಿಯ ನೆಲ್ಲಿಗುಡ್ಡ ಕೆರೆಯಲ್ಲೀಗ ಬೆಂಗಳೂರು, ಮೈಸೂರು ಭಾಗಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆ ಈಗಾಗಲೇ ರಾಮನಗರ ಹೊರವಲಯದಲ್ಲಿರುವ ರಂಗರಾಯರದೊಡ್ಡಿ ಕೆರೆ ಹಾಗೂ ಚೆನ್ನಟ್ಟಣ ತಾಲ್ಲೂಕಿನ ಕಣ್ವ ಜಲಾಶಯದಲ್ಲಿ ಜಲಕ್ರೀಡೆಗಳನ್ನು ಆರಂಭಿಸಿದೆ. ಅದರ ಬೆನ್ನಲ್ಲೇ, ಇಲ್ಲಿಗೆ ಪ್ರವಾಸಿಗರ ಭೇಟಿಯೂ ಹೆಚ್ಚಾಗಿದೆ.

ಮೀನುಗಾರಿಕೆ, ವಾಯುವಿಹಾರಕ್ಕೆ ಮಾತ್ರ ಸೀಮಿತವಾಗಿದ್ದ ಸುಮಾರು 380 ಹೆಕ್ಟೇರ್ ಪ್ರದೇಶದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ನೆಲ್ಲಿಗುಡ್ಡೆ ಕೆರೆಯಲ್ಲಿ ಫೆ.18ರಂದು ಜಲಕ್ರೀಡೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಸ್ಥಳೀಯ ಶಾಸಕ ಎಚ್.ಸಿ. ಬಾಲಕೃಷ್ಣ ಚಾಲನೆ ನೀಡಿದ್ದಾರೆ. ಸದ್ಯ ಕೆರೆಯಲ್ಲಿ ಕಯಾಕಿಂಗ್, ಸ್ಪೀಡ್ ಬೋಟ್, ಜೆಟ್ ಸ್ವೀ, ಪೆಡಲ್ ಬೋಟ್, ಬನಾನಾ ಬೋಟ್‌ನಂಥ ಕ್ರೀಡೆಗಳನ್ನು ಆರಂಭಿಸಲಾಗಿದೆ. ಖಾಸಗಿಯವರು ಜಲಕ್ರೀಡೆಗಳ ಟೆಂಡರ್ ಪಡೆದು ನಡೆಸುತ್ತಿದ್ದಾರೆ. ನೆಲ್ಲಿಗುಡ್ಡೆಕೆರೆಯನ್ನು ಪ್ರವಾಸಿ ತಾಣವಾಗಿ ಮಾಡುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಿದ್ದು, ಸದ್ಯ ಕಾರ್ಯರೂಪಕ್ಕೆ ಬಂದಿದೆ.