H-1B ವೀಸಾ 3 ವರ್ಷಗಳ ಕಾಲ ತಡೆಹಿಡಿಯುವ ಪ್ರಸ್ತಾಪ
ಅಮೆರಿಕನ್ ಉದ್ಯೋಗಿಗಳ ಹಕ್ಕುಗಳನ್ನು ರಕ್ಷಿಸುವ ಮತ್ತು ವೀಸಾ ದುರುಪಯೋಗವನ್ನು ತಡೆಯುವ ನೆಪದಲ್ಲಿ ತರಲಾಗಿರುವ ಈ ಮಸೂದೆಯು ಅಮೆರಿಕದಲ್ಲಿ ಕೆಲಸ ಮಾಡಲು ಆಶಿಸುತ್ತಿರುವ ಲಕ್ಷಾಂತರ ಭಾರತೀಯ ಐಟಿ ವೃತ್ತಿಪರರು ಹಾಗೂ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ.
ಅಮೆರಿಕದ ಯುಎಸ್ ಸೆನೆಟರ್ ಟಿಮ್ ಶೀಹಿ ಸೆನೆಟ್‌ನಲ್ಲಿ 'ಎಂಡ್ H-1B ಅಬ್ಯೂಸ್ ಆಕ್ಟ್' ಎಂಬ ಹೊಸ ಮಸೂದೆಯನ್ನು ಪ್ರಸ್ತಾಪಿಸಿದ್ದು, ಹೊಸ H-1B ವೀಸಾಗಳ ವಿತರಣೆಯನ್ನು ಮುಂದಿನ 3 ವರ್ಷಗಳ ಕಾಲ ಸಂಪೂರ್ಣವಾಗಿ ತಡೆಹಿಡಿಯುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.
ಅಮೆರಿಕನ್ ಉದ್ಯೋಗಿಗಳ ಹಕ್ಕುಗಳನ್ನು ರಕ್ಷಿಸುವ ಮತ್ತು ವೀಸಾ ದುರುಪಯೋಗವನ್ನು ತಡೆಯುವ ನೆಪದಲ್ಲಿ ತರಲಾಗಿರುವ ಈ ಮಸೂದೆಯು ಅಮೆರಿಕದಲ್ಲಿ ಕೆಲಸ ಮಾಡಲು ಆಶಿಸುತ್ತಿರುವ ಲಕ್ಷಾಂತರ ಭಾರತೀಯ ಐಟಿ ವೃತ್ತಿಪರರು ಹಾಗೂ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ.
ಇದನ್ನೂ ಓದಿ: ಭಾರತೀಯರಿಗೆ ದಕ್ಷಿಣ ಆಫ್ರಿಕದಿಂದ 48 ಗಂಟೆಯಲ್ಲಿ ETA ವೀಸಾ ಸೌಲಭ್ಯ
ಅಮೆರಿಕವು ಹೊಸ H-1B ವೀಸಾಗಳ ವಿತರಣೆಯನ್ನು 3 ವರ್ಷಗಳ ಕಾಲ ಸ್ಥಗಿತಗೊಳಿಸಿ, ತದನಂತರ ಕಟ್ಟುನಿಟ್ಟಿನ ನಿಯಮಗಳ ಅಡಿಯಲ್ಲಿ ಪುನರಾರಂಭಿಸಲಾಗುವುದು. H-1B ವೀಸಾ ಅರ್ಜಿಗೆ ವಿಧಿಸಲು ಉದ್ದೇಶಿಸಲಾಗಿದ್ದ $100,000 (ಸುಮಾರು ₹83 ಲಕ್ಷ) ಭಾರಿ ಅರ್ಜಿ ಶುಲ್ಕದ ನಿಯಮವನ್ನು ಕಾನೂನುಬದ್ಧಗೊಳಿಸಲಾಗುವುದು. ಪ್ರಸ್ತುತ ಇರುವ ಲಾಟರಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಗರಿಷ್ಠ ವೇತನ ಪಡೆಯುವ ಪರಿಣಿತರಿಗೆ ಮಾತ್ರ ವೀಸಾ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು.
ಅಮೆರಿಕದಲ್ಲಿ ವ್ಯಾಸಂಗ ಮಾಡುವ ವಿದೇಶಿ ವಿದ್ಯಾರ್ಥಿಗಳಿಗೆ ಶಿಕ್ಷಣದ ನಂತರ ಕೆಲಸ ಮಾಡಲು ನೀಡಲಾಗುವ 'ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್' (OPT) ಹಾಗೂ STEM OPT ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗುವುದು. H-1B ವೀಸಾಧಾರಕರು ತಮ್ಮ ಕುಟುಂಬದ ಸದಸ್ಯರನ್ನು (H-4 ವೀಸಾ) ಕರೆದೊಯ್ಯುವುದನ್ನು ತಡೆಯುವುದು ಹಾಗೂ 'ಡ್ಯುಯಲ್ ಇಂಟೆಂಟ್' ರದ್ದುಗೊಳಿಸಲಾಗುವುದು.
ಅಮೆರಿಕ ನೀಡುವ ಒಟ್ಟು H-1B ವೀಸಾಗಳ ಪೈಕಿ ಶೇ. 70 ಕ್ಕೂ ಹೆಚ್ಚು ವೀಸಾಗಳನ್ನು ಭಾರತೀಯರೇ ಪಡೆಯುವುದರಿಂದ, ಈ ಮಸೂದೆ ಕಾನೂನಾದರೆ ಭಾರತೀಯರ ಮೇಲೆ ಭಾರಿ ಹೊಡೆತ ಬೀಳಲಿದೆ.
ಇದು ಅಮೆರಿಕನ್ ಸೆನೆಟ್‌ನಲ್ಲಿ ಜನಪ್ರತಿನಿಧಿಯೊಬ್ಬರು ತಂದಿರುವ 'ಪ್ರಸ್ತಾವಿತ ಮಸೂದೆ' ಮಾತ್ರ. ಅಮೆರಿಕದ ಗೂಗಲ್, ಮೈಕ್ರೋಸಾಫ್ಟ್, ಆಪಲ್‌ನಂತಹ ತಂತ್ರಜ್ಞಾನ ದೈತ್ಯ ಸಂಸ್ಥೆಗಳು (Big Tech) ಭಾರತೀಯ ನುರಿತ ತಂತ್ರಜ್ಞರನ್ನು ಕಳೆದುಕೊಳ್ಳಲು ಬಯಸದಿರುವುದರಿಂದ, ಈ ಮಸೂದೆ ಮೂಲ ರೂಪದಲ್ಲೇ ಕಾನೂನಾಗಿ ಜಾರಿಯಾಗುವುದು ಅತ್ಯಂತ ಕಷ್ಟಕರ ಎಂದು ವಲಸೆ ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.