Tuesday, March 10, 2026
Tuesday, March 10, 2026

ನಿಮ್ಮ ಪ್ರವಾಸದ ವಿಧಾನ ನಿಮ್ಮ ಪೋಷಕರ ಅನುಕರಣೆಯಂತಿದೆಯೇ ?

ಪೋಷಕರ ಪ್ರವಾಸದ ವಿಧಾವನ್ನು ದೂಷಿಸುತ್ತಲೇ, ಅದರಿಂದ ಭಿನ್ನವಾಗಿರಬೇಕು ಎಂದುಕೊಳ್ಳುತ್ತಲೇ ಕೊನೆಗೆ ಅವರಂತೆಯೇ ಆಗುವುದನ್ನು ಗಮನಿಸಿದ್ದೀರಾ? ಏನು ಹೇಳುತ್ತದೆ ವರದಿ?

ಅನೇಕರಿಗೆ ಬಾಲ್ಯದ ರಜೆಗಳಲ್ಲಿ ಪ್ರವಾಸ ಹೋದಾಗ ಪೋಷಕರ ಪ್ರವಾಸದ ಶೈಲಿಯೇ ದೊಡ್ಡ ಕಿರಿಕಿರಿ ಉಂಟು ಮಾಡಿರುತ್ತದೆ. ಅಲ್ಲಿ ಹೋಗಬಾರದು, ಹೀಗೆ ಮಾಡಬಾರದು ಎಂಬ ಮಾತುಗಳಿಂದ ಶುರುವಾಗಿ ಅದನ್ನು ತಿನ್ನಬಾರದು, ಆ ಹೊಟೇಲ್‌ ಕಾಸ್ಟ್ಲಿ ಹೀಗೆ ಪಟ್ಟಿ ಮುಂದುವರಿಯುತ್ತದೆ. ಆದರೆ, ವಿಚಿತ್ರ ಎಂದರೆ ಈಗ ಮಕ್ಕಳು ದೊಡ್ಡವರಾದ ಮೇಲೆ ಪೋಷಕರ ಅದೇ ಶೈಲಿಯನ್ನೇ ಅನುಸರಿಸುತ್ತಾರೆ ಎನ್ನುತ್ತದೆ ಹೊಸ ಸಂಶೋಧನೆ. ಹಿಲ್ಟನ್ ಸಂಸ್ಥೆಯ 2026ರ ಟ್ರೆಂಡ್ಸ್ ವರದಿಯಲ್ಲಿ ಹೈಲೈಟ್ ಮಾಡಲಾದ 'ಇನ್ಹೆರಿಟೂರಿಸಂ' (Inheritourism) ಎಂಬ ಹೊಸ ಪ್ರವಾಸೋದ್ಯಮ ಟ್ರೆಂಡ್ ಇದನ್ನೇ ವಿವರಿಸುತ್ತದೆ.

ಮಿಲೆನಿಯಲ್ಸ್ (Millennials) ಮತ್ತು ಜೆನ್ ಜಿ (Gen Z) ಪೀಳಿಗೆಯವರು ಅರಿವಿಲ್ಲದೆಯೇ ತಮ್ಮ ಪೋಷಕರಿಂದ ಪ್ರವಾಸದ ಅಭ್ಯಾಸಗಳನ್ನು ಹೇಗೆ ಅಳವಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಈ ವರದಿ ತಿಳಿಸುತ್ತದೆ. ಇದು ಕೇವಲ ಹೊಟೇಲ್ ಬ್ರಾಂಡ್‌ಗಳ ಆಯ್ಕೆಯಷ್ಟೇ ಅಲ್ಲದೆ, ಲಾಯಲ್ಟಿ ಪ್ರೋಗ್ರಾಂಗಳು ಮತ್ತು ಪ್ರವಾಸಿ ತಾಣಗಳನ್ನು ಅನ್ವೇಷಿಸುವ ಒಟ್ಟಾರೆ ಶೈಲಿಯ ಮೇಲೆ ಪ್ರಭಾವ ಬೀರುತ್ತಿದೆ.

ಇದನ್ನೂ ಓದಿ: ಚಾರಣಕ್ಕೆ ದಾರಿ ತೋರುವ ನಿಜವಾದ ಗುರು!

ವರದಿಯ ಪ್ರಕಾರ:

  • ಸುಮಾರು 66 ಪ್ರತಿಶತ ಪ್ರವಾಸಿಗರು ತಮ್ಮ ಹೊಟೇಲ್ ಆಯ್ಕೆಗಳ ಮೇಲೆ ಪೋಷಕರ ಪ್ರಭಾವವಿದೆ ಎಂದು ಒಪ್ಪಿಕೊಂಡಿದ್ದಾರೆ.
  • 73 ಪ್ರತಿಶತ ಜನರು ತಮ್ಮ ಒಟ್ಟಾರೆ ಪ್ರವಾಸದ ಶೈಲಿಯು ಪೋಷಕರಿಂದಲೇ ರೂಪಿತವಾಗಿದೆ ಎಂದು ಭಾವಿಸುತ್ತಾರೆ.
  • ಸುಮಾರು 60 ಪ್ರತಿಶತ ಜನರು ತಾವು ಅನುಸರಿಸುವ ಲಾಯಲ್ಟಿ ಪ್ರೋಗ್ರಾಂಗಳ ಆಯ್ಕೆಯಲ್ಲಿ ಪೋಷಕರ ಪ್ರಭಾವವಿದೆ ಎಂದಿದ್ದಾರೆ.

ಇನ್ಹೆರಿಟೂರಿಸಂ ಎಂದರೆ ಏನು?

“ಬೆಳೆಯುವ ಹಂತದಲ್ಲಿ, ಕುಟುಂಬಗಳು ಪ್ರವಾಸವನ್ನು ಹೇಗೆ ಯೋಜಿಸುತ್ತವೆ, ಯಾವ ರೀತಿಯ ತಾಣಗಳನ್ನು ಆರಿಸುತ್ತವೆ, ಅವರ ಬಜೆಟ್ ಎಷ್ಟು ಮತ್ತು ಅಪರಿಚಿತ ಸ್ಥಳಗಳಲ್ಲಿ ಅವರು ಹೇಗೆ ನಡೆದುಕೊಳ್ಳುತ್ತಾರೆ ಎಂಬ ವಿಷಯಗಳನ್ನು ಮಕ್ಕಳು ಗಮನಿಸುತ್ತಾರೆ. ಈ ಮಾದರಿಗಳು ಮುಂದಿನ ಜೀವನದಲ್ಲೂ ಅರಿವಿಲ್ಲದೆಯೇ ಮುಂದುವರಿಯುತ್ತವೆ” ಎಂದು ವರದಿ ವಿವರಿಸುತ್ತದೆ. ಕುಟುಂಬಗಳು ಪ್ರವಾಸವನ್ನು ಆನಂದದಾಯಕ ಮತ್ತು ಸಹಜ ಪ್ರಕ್ರಿಯೆಯಾಗಿ ನೋಡಿದಾಗ, ಮಕ್ಕಳು ಕೂಡ ಬೆಳೆದ ನಂತರ ಹೊಸ ಸ್ಥಳಗಳನ್ನು ಅನ್ವೇಷಿಸಲು ಹೆಚ್ಚಿನ ಆತ್ಮವಿಶ್ವಾಸ ಮತ್ತು ಕುತೂಹಲವನ್ನು ಹೊಂದಿರುತ್ತಾರೆ.

ಬಾಲ್ಯದ ನೆನಪುಗಳು ಮತ್ತು ಸುರಕ್ಷತೆಯ ಭಾವನೆ

ಮನಶ್ಶಾಸ್ತ್ರಜ್ಞರ ಪ್ರಕಾರ, ಬಾಲ್ಯದ ಪ್ರವಾಸದ ನೆನಪುಗಳು ಬೆೆಳೆದ ನಂತರದ ಪ್ರವಾಸದ ಸಮಯದಲ್ಲಿ ಎಷ್ಟು ಸುರಕ್ಷಿತ ಮತ್ತು ಆರಾಮದಾಯಕ ಎಂಬುದನ್ನು ನಿರ್ಧರಿಸುತ್ತವೆ. ಬಾಲ್ಯದಲ್ಲಿ ಪ್ರವಾಸವು ವ್ಯವಸ್ಥಿತವಾಗಿ ಮತ್ತು ಧನಾತ್ಮಕವಾಗಿದ್ದಲ್ಲಿ ಅದು ಹೊಸ ಸ್ಥಳಗಳ ಬಗ್ಗೆ ನಂಬಿಕೆಯನ್ನು ಹುಟ್ಟುಹಾಕುತ್ತದೆ.

ಇದನ್ನೂ ಓದಿ: ಅರೆ ಥೈ ಥೈ… ಥೈಲ್ಯಾಂಡ್‌

ಅನೇಕರು ಬಾಲ್ಯದಲ್ಲಿ ಭೇಟಿ ನೀಡಿದ್ದ ಸ್ಥಳಗಳನ್ನೇ ಮತ್ತೆ ಭೇಟಿ ಮಾಡಲು ಬಯಸುತ್ತಾರೆ. ಈಗ ಅವರು ಆ ಸ್ಥಳಗಳನ್ನು ಆಧುನಿಕ ದೃಷ್ಟಿಕೋನದಿಂದ ನೋಡುತ್ತಾರೆ. ಪರಿಚಿತ ಸ್ಥಳಗಳು ಭಾವನಾತ್ಮಕವಾಗಿ ಸುರಕ್ಷಿತವಾಗಿರುತ್ತವೆ ಮತ್ತು ಅದೇ ಸಮಯದಲ್ಲಿ ಹೊಸ ಅನುಭವಗಳನ್ನೂ ನೀಡುತ್ತವೆ. ಹೀಗೆ ಪೋಷಕರಿಂದ ಬಂದ ಪ್ರವಾಸದ ಅಭ್ಯಾಸಗಳು ಒಂದು ರೀತಿಯ ಸೇಫ್ಟಿ ನೆಟ್‌ ರೀತಿ ಕೆಲಸ ಮಾಡುತ್ತವೆ.

ಇಷ್ಟಪಡುವ ಹೊಟೇಲ್ ಇರಲಿ ಅಥವಾ ಪ್ರಯಾಣಿಸುವ ವಿಧಾನವಿರಲಿ, ಪ್ರವಾಸದ ಪ್ರತಿಯೊಂದು ನಿರ್ಧಾರದ ಹಿಂದೆ ಪೋಷಕರ ಪ್ರಭಾವವಿರುತ್ತದೆ ಎಂದು ಹೇಳಲಾಗಿದೆ. ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಮಕ್ಕಳು ತಮ್ಮ ಪೋಷಕರನ್ನು ಹೋಲುತ್ತಾರೆ, ಅವರಂತೆ ಯೋಚಿಸುತ್ತಾರೆ ಎಂಬುದಕ್ಕೆ ಈ 'ಇನ್ಹೆರಿಟೂರಿಸಂ' ಸಾಕ್ಷಿ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!