Tuesday, March 10, 2026
Tuesday, March 10, 2026

ಅರೆ ಥೈ ಥೈ… ಥೈಲ್ಯಾಂಡ್‌

ಪ್ರಕೃತಿ ಸೌಂದರ್ಯ ಮತ್ತು ಸಾಹಸ ಪ್ರವಾಸದ ಸಮನ್ವಯ ಹೊಂದಿರುವ ಫಿ-ಫಿ ದ್ವೀಪಗಳು, ಥೈಲ್ಯಾಂಡ್ ಪ್ರವಾಸದ ಪ್ರಮುಖ ಆಕರ್ಷಣೆಯಾಗಿ ಇಂದು ವಿಶ್ವ ಪ್ರವಾಸೋದ್ಯಮದಲ್ಲಿ ವಿಶೇಷ ಸ್ಥಾನ ಪಡೆದಿವೆ. ಗದ್ದಲದ ಪ್ರವಾಸಿ ಲೋಕದ ನಡುವೆ ಫಿ–ಫಿ ದ್ವೀಪಗಳು, ಪ್ರಕೃತಿಯೊಂದಿಗೆ ಸಮತೋಲನದಲ್ಲೇ ಪ್ರವಾಸ ಸಾಧ್ಯ ಎಂಬ ಮೌನ ಸಂದೇಶವನ್ನು ನೀಡುವಲ್ಲಿ ಸಫಲವಾಗುತ್ತದೆ.

  • ವೆಂಕಟೇಶ್ ಮುದಗಲ್

ಫುಕೆಟ್ ಥೈಲ್ಯಾಂಡ್ ನ ದಕ್ಷಿಣ ಭಾಗದಲ್ಲಿನ ಸುಮಾರು 4.50 ಲಕ್ಷ ಜನವಸತಿ ಇರುವ ಒಂದು ಪ್ರಮುಖ ನಗರ. ಥೈಲ್ಯಾಂಡ್ ನ ರಾಜಧಾನಿ ಬ್ಯಾಂಕಾಕ್ ನಿಂದ 860 ಕಿಮೀ ದೂರದಲ್ಲಿದೆ. ಇಲ್ಲಿ ಆಧುನಿಕತೆ ಅಷ್ಟಾಗಿ ಆವರಿಸಿಲ್ಲ. ಹೀಗಾಗಿ ಕಟ್ಟಡಗಳ ವಿನ್ಯಾಸ, ಉತ್ತಮ ರಸ್ತೆ, ಶಿಸ್ತು ಬದ್ಧ ವಾಹನಗಳ ಓಡಾಟ, ನೈಸರ್ಗಿಕ ಚೆಲುವಿನಿಂದ ಮನ ಮುದಗೊಳ್ಳುತ್ತದೆ. ನಾವು ಫುಕೆಟ್ ತಲುಪಿದ ದಿನ ನಮಗೆ ವಿರಾಮ ಇತ್ತು. ಹೊಟೇಲ್ ಬಳಿಯ ಪಟಾಂಗ ಬೀಚ್ ನಲ್ಲಿ ತಿರುಗಾಡಿ, ಸಮುದ್ರದ ಅಲೆಗಳ ಕಚಗುಳಿ ಸಂಭ್ರಮಿಸಿ, ಬಾಂಗ್ಲಾ ರಸ್ತೆಯ ‘ನೈಟ್ ಲೈಫ್’ ಕಡೆ ಹಾಗೇ ಕಣ್ಣು ಹಾಕಿ, ಭಾರತೀಯ ಹೊಟೇಲ್‌ನಲ್ಲಿ ಗಡದ್ದಾಗಿ ಊಟ ಮಾಡಿ ನಿದ್ರೆಗೆ ಶರಣಾಗಿದ್ದೆವು. ಮಾರನೆಯ ದಿನ ಸಮುದ್ರದಲ್ಲಿ ಫಿ-ಫಿ ಐಲ್ಯಾಂಡ್ಸ್‌ಗೆ ನಮ್ಮ ಪಯಣವಿತ್ತು. ನಾನೀಗ ಬರೆಯ ಹೊರಟಿರುವುದು ಆ ತಾಣದ ಬಗ್ಗೆಯೇ. ಫಿ-ಫಿ ಐ ಲ್ಯಾಂಡ್ ಗಾಗಿ 'ಫೆರ್ರಿ' ಹತ್ತಿಸಲು ನಮ್ಮ ವಾಹನ ಬೆಳಗ್ಗೆ 7ಕ್ಕೆ ನಾವುಳಿದುಕೊಂಡಿದ್ದ ‘ದಿ ಕ್ರಿಸ್ ರೆಸಾರ್ಟ್ ಹೊಟೇಲ್ ‘ಗೆ ಬಂದಿತ್ತು. ಹೊಟೇಲ್‌ನಲ್ಲಿ ಉಪಾಹಾರ ಸೇವಿಸಿದ್ದ ನಾವು ವಾಹನದ ಮೂಲಕ ಒಂದು ಗಂಟೆ ಪ್ರಯಾಣಿಸಿ 'Rasada Pier' ಎಂಬ ತಾಣ ತಲುಪಿದೆವು. ಮೊದಲೇ ಕಾದಿರಿಸಿದ ಕಾರಣ 'ಫೆರ್ರಿ' ಯಲ್ಲಿ ಏನೂ ಸಮಸ್ಯೆ ಯಾಗಲಿಲ್ಲ. ನಮಗಾಗಿ ಕಾದಿರಿಸಿದ್ದ ಆಸನಗಳಲ್ಲಿ ಕುಳಿತು ಶಾಂತ ನೀಲ ಅಂಡಮಾನ್ ಸಮುದ್ರವನ್ನು ಸೀಳುತ್ತಾ ನಮ್ಮ ಹಡಗು ಗಮ್ಯ ಸ್ಥಾನದೆಡೆ ಪಯಣ ಆರಂಭಿಸಿತು. ಹಡಗಿನ ವೇಗಕ್ಕೆ ಆಗಾಗ್ಗೆ ಸಿಡಿಯುತ್ತಿದ್ದ ನೀರಿನ ಸಿಂಚನ ನಮ್ಮನ್ನು ಹಿರಿಯ ನಾಗರೀಕರಿಂದ ಬಾಲಕರನ್ನಾಗಿಸಿತ್ತು. ನೀರಿನ ಸಿಂಚನವಾದಾಗೆಲ್ಲ ‘ಹೋ’ ಎಂದು ಅರಚುತ್ತಿದ್ದೆವು. ನಂತರ, ಹಡಗಿನ ಮೇಲೆ ಹತ್ತಿ ಕುಳಿತು ಸುತ್ತಲಿನ ನೀಲ ಅಂಡಮಾನ ಸಮುದ್ರವನ್ನು ನೋಡಿ ಆಗುವ ಮನೋಲ್ಲಾಸ ಶಬ್ದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ.

ಇದನ್ನೂ ಓದಿ: ಜಾಗವೊಂದು, ಜಗತ್ತುಗಳು ಹಲವು – ಗ್ಲೋಬಲ್ ವಿಲೇಜ್!

ಅಂಡಮಾನ್‌ಗೆ ಥ್ಯಾಂಕ್ಸ್

ಅಂಡಮಾನ್ ಸಮುದ್ರದ ನಿಶ್ಶಬ್ದ ಸೌಂದರ್ಯ ಎಂದೇ ಹೆಸರಾದ ಫಿ–ಫಿ ದ್ವೀಪ ಸಮೂಹ ಪ್ರಕೃತಿಯ ಶಾಂತ ಸೌಂದರ್ಯವನ್ನು ಅನುಭವಿಸಲು ಬಯಸುವ ಪ್ರವಾಸಿಗರ ಮೆಚ್ಚಿನ ತಾಣ. ಫುಕೆಟ್‌ನಿಂದ ಸುಮಾರು 45 ಕಿಲೋಮೀಟರ್ ದೂರದಲ್ಲಿರುವ ಈ ದ್ವೀಪ ಸಮೂಹ ಕ್ರಾಬಿ ಪ್ರಾಂತ್ಯಕ್ಕೆ ಸೇರಿದೆ. ಫುಕೆಟ್ ಮತ್ತು ಕ್ರಾಬಿ ನಡುವಿನ ಅಂಡಮಾನ್ ಸಮುದ್ರದಲ್ಲಿ ಮಿನುಗುತ್ತಿರುವ ಪ್ರಕೃತಿ ರಮಣೀಯ ತಾಣವೇ ಫಿ-ಫಿ ದ್ವೀಪಗಳು. ನೀಲಿ ಸಮುದ್ರ, ಎತ್ತರದ ಸುಣ್ಣದ ಕಲ್ಲಿನ ಬೆಟ್ಟಗುಡ್ಡಗಳು, ಹಸಿರು ಕಾಡು ಮತ್ತು ಸ್ಫಟಿಕ ಸ್ವಚ್ಛ ನೀರಿನಿಂದ ಆವೃತವಾದ ಈ ದ್ವೀಪಗಳು ವಿಶ್ವದ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಅದ್ಭುತ ತಾಣಗಳಾಗಿವೆ. ಫಿ-ಫಿ ದ್ವೀಪ ಸಮೂಹದಲ್ಲಿ ಆರು ಸಣ್ಣ ದ್ವೀಪಗಳಿದ್ದು, ಅವುಗಳಲ್ಲಿ ಫಿ-ಫಿ ಡಾನ್ ಮತ್ತು ಫಿ-ಫಿ ಲೇ ಪ್ರಮುಖವಾಗಿವೆ. ಫಿ-ಫಿ ಡಾನ್‌ನಲ್ಲಿ ಮಾತ್ರ ಜನವಸತಿ, ಹೊಟೇಲ್‌ಗಳು ಮತ್ತು ಪ್ರವಾಸಿ ಸೌಲಭ್ಯಗಳಿವೆ. ಉಳಿದ ದ್ವೀಪಗಳು ಬಹುತೇಕ ಪ್ರಕೃತಿ ಸಂರಕ್ಷಿತ ಪ್ರದೇಶಗಳಾಗಿವೆ. ಸಮುದ್ರದ ಮಧ್ಯದಲ್ಲಿ ಎತ್ತರಕ್ಕೆ ಏರಿದ ಕಲ್ಲಿನ ಶಿಖರಗಳು ಹಾಗೂ ಅವುಗಳ ಮಧ್ಯೆ ಹೊಳೆಯುವ ನೀರಿನ ಕೊಲ್ಲಿ ಪ್ರದೇಶಗಳು ಈ ದ್ವೀಪಗಳಿಗೆ ವಿಶಿಷ್ಟ ಸೌಂದರ್ಯ ನೀಡುತ್ತವೆ.

Untitled design - 2026-03-10T115430.073

ಇತಿಹಾಸದ ದೃಷ್ಟಿಯಿಂದ ನೋಡಿದರೆ, ಈ ದ್ವೀಪಗಳಲ್ಲಿ ಹಿಂದೆ ಮೀನುಗಾರ ಸಮುದಾಯದ ವಾಸಸ್ಥಳಗಳಷ್ಟೇ ಇದ್ದವು. ಪ್ರವಾಸೋದ್ಯಮ ಅಭಿವೃದ್ಧಿಯೊಂದಿಗೆ ಫಿ-ಫಿ ದ್ವೀಪಗಳು ಜಾಗತಿಕ ನಕ್ಷೆಯಲ್ಲಿ ಗುರುತಿಸಿಕೊಂಡವು. 2004ರ ಸುನಾಮಿ ದಾಳಿಯಿಂದ ಇಲ್ಲಿ ಭಾರೀ ಹಾನಿಯಾದರೂ, ನಂತರ ಪುನರ್‌ನಿರ್ಮಾಣ ಕಾರ್ಯಗಳಿಂದ ದ್ವೀಪಗಳು ಮತ್ತೆ ಜೀವಂತಗೊಂಡಿವೆ.

ಮಾಯಾ ಬೇ ಎಂಬ ವಿಸ್ಮಯ

ಫಿ-ಫಿ ದ್ವೀಪಗಳ ಖ್ಯಾತಿಗೆ ಪ್ರಮುಖ ಕಾರಣಗಳಲ್ಲಿ ಒಂದು ‘ಮಾಯಾ ಬೇ. ಹಾಲಿವುಡ್‌ನ ʼದಿ ಬೀಚ್ʼ ಚಲನಚಿತ್ರದ ಚಿತ್ರೀಕರಣ ಇಲ್ಲಿ ನಡೆದ ಬಳಿಕ ಈ ಕಡಲತೀರ ವಿಶ್ವಪ್ರಸಿದ್ಧಿಯಾಯಿತು. ಇಂದಿಗೂ ‘ಮಾಯಾ ಬೇ’ ಪ್ರವಾಸಿಗರಿಗೆ ಅಪರೂಪದ ಅನುಭವ ನೀಡುವ ಸ್ಥಳವಾಗಿದೆ. ಪರಿಸರ ಸಂರಕ್ಷಣೆಗಾಗಿ ಕೆಲ ಕಾಲ ಪ್ರವೇಶವನ್ನು ನಿಯಂತ್ರಿಸುವ ಕ್ರಮಗಳನ್ನೂ ಥೈಲ್ಯಾಂಡ್‌ನ ಸರ್ಕಾರ ಕೈಗೊಂಡಿದೆ.

ಸ್ನಾರ್ಕಲಿಂಗ್, ಸ್ಕೂಬಾ ಡೈವಿಂಗ್, ಬೋಟ್ ಸಫಾರಿ, ಸಮುದ್ರ ಗುಹೆಗಳ ಅನ್ವೇಷಣೆ, ವ್ಯೂ ಪಾಯಿಂಟ್ ಏರಿಕೆ—ಇವೆಲ್ಲವೂ ಸಾಹಸಪ್ರಿಯರಿಗೆ ಮನಮೋಹಕ ಅನುಭವ. ನೀರಿನೊಳಗಿನ ಪ್ರವಾಳ ಭಿತ್ತಿಗಳು ಮತ್ತು ಬಣ್ಣಬಣ್ಣದ ಸಮುದ್ರ ಜೀವಜಗತ್ತು ಪ್ರಕೃತಿ ಪ್ರೇಮಿಗಳಿಗೆ ದೃಶ್ಯ ಹಬ್ಬವೇ ಸರಿ.

ಪ್ರಕೃತಿ ಸೌಂದರ್ಯ ಮತ್ತು ಸಾಹಸ ಪ್ರವಾಸದ ಸಮನ್ವಯ ಹೊಂದಿರುವ ಫಿ-ಫಿ ದ್ವೀಪಗಳು, ಥೈಲ್ಯಾಂಡ್ ಪ್ರವಾಸದ ಪ್ರಮುಖ ಆಕರ್ಷಣೆಯಾಗಿ ಇಂದು ವಿಶ್ವ ಪ್ರವಾಸೋದ್ಯಮದಲ್ಲಿ ವಿಶೇಷ ಸ್ಥಾನ ಪಡೆದಿವೆ. ಗದ್ದಲದ ಪ್ರವಾಸಿ ಲೋಕದ ನಡುವೆ ಫಿ–ಫಿ ದ್ವೀಪಗಳು, ಪ್ರಕೃತಿಯೊಂದಿಗೆ ಸಮತೋಲನದಲ್ಲೇ ಪ್ರವಾಸ ಸಾಧ್ಯ ಎಂಬ ಮೌನ ಸಂದೇಶವನ್ನು ನೀಡುವಲ್ಲಿ ಸಫಲವಾಗುತ್ತದೆ. ನಮ್ಮ ಪ್ಯಾಕೇಜ್ ನಲ್ಲಿ ಅಪರಾಹ್ನದ ಊಟ ಇದ್ದ ಕಾರಣ ಅಲ್ಲಿಯೇ ‘ಲಾಂಗ ಬೀಚ್’ನಲ್ಲಿ ವ್ಯವಸ್ಥೆಯಾಗಿದ್ದ ಊಟ ಸವಿದೆ. ಶಾಕಾಹಾರಿಯಾದ ನನಗೆ ಕೇವಲ ಅನ್ನ, ಸಾರು, ಮೊಸರು, ಒಂದಷ್ಟು ಹಸಿ ತರಕಾರಿಗಳು ಉದರ ಸೇರಿದವು. ಆದರೆ, ಸೀ ಫುಡ್ ಪ್ರಿಯರು ಚಪ್ಪರಿಸಿ, ಚಪ್ಪರಿಸಿ ಸವಿಯುತ್ತಿದ್ದರು. ಊಟದ ನಂತರ, ಫೆರ್ರಿ ನಮ್ಮನ್ನು ‘ಟೊನ್ಸಾಯ್ ಬೇ’(Tonsai Bay) ಗೆ ಕರೆದೊಯ್ದಿತು. ಅಲ್ಲೊಂದು ಮಿನಿ ಮಾರ್ಕೆಟ್ ಇತ್ತು. ಸ್ಮರಣಿಕೆಗಳು, ಬಿಯರ್, ಟಿ ಶರ್ಟ್‌ಗಳು ಹೀಗೆ ತರಹೇವಾರಿ ಶಾಪಿಂಗ್ ಮುಗಿಸಿ, ಪುನಃ ಸಮುದ್ರ ಯಾನ ಮಾಡಿ 'ರಸಾಡಾ ಫಿಯರ್' ತಲುಪಿದಾಗ ಸಂಜೆ 5.30 ಆಗಿತ್ತು. ಹೊಟೇಲ್ ತಲುಪಿದಾಗ 7 ಗಂಟೆ. ಒಂದು ಅತ್ಯಂತ್ಯ ಸುಂದರ ರಮ್ಯ ನೈಸರ್ಗಿಕ ತಾಣಕ್ಕೆ ಭೇಟಿ ನೀಡಿದ ಸಾರ್ಥಕತೆಯ ಅನುಭೂತಿ ನಮ್ಮಲ್ಲಿ ಮನೆ ಮಾಡಿತ್ತು ಒಟ್ಟಿನಲ್ಲಿ, ನಿಸರ್ಗ ಪ್ರಿಯರು ತಪ್ಪದೇ ಭೇಟಿ ನೀಡುವ ತಾಣ ಫಿ-ಫಿ ಐ ಲ್ಯಾಂಡ್ಸ್‌ ಎಂದರೆ ತಪ್ಪೇನಿಲ್ಲ.

Untitled design - 2026-03-10T115451.178

ಫುಕೆಟ್‌ ತಲುಪುವುದು ಹೇಗೆ?

ಫುಕೆಟ್ ನಗರಕ್ಕೆ ನಮ್ಮ ದೇಶದ ಅನೇಕ ಪ್ರಮುಖ ನಗರಗಳಿಂದ ನೇರ ವಿಮಾನಯಾನ ಸಂಪರ್ಕವಿದೆ. ನೇರ ಸಂಪರ್ಕ ಇಲ್ಲದ ಇತರೆ ನಗರಗಳಿಂದ ಥೈಲ್ಯಾಂಡ್ ನ ರಾಜಧಾನಿ ಬ್ಯಾಂಕಾಕ್‌ಗೆ ಬಂದು ಅಲ್ಲಿಂದ ವಿಮಾನ ಅಥವಾ ಹವಾನಿಯಂತ್ರಿತ ಬಸ್ ಗಳಲ್ಲಿ ರಸ್ತೆ ಮೂಲಕ ಫುಕೆಟ್‌ ತಲುಪಬಹುದು. ನವೆಂಬರ್ ನಿಂದ ಮಾರ್ಚ್‌ ತಿಂಗಳು ಇಲ್ಲಿಗೆ ಬರಲು ಪ್ರಶಸ್ತ ಸಮಯ. ಥೈಲಾಂಡ್ ನ ಕರೆನ್ಸಿ ಥಾಯ್ ಬಾಹತ್. ಭಾರತದ ಮೂರು ರುಪಾಯಿ ಒಂದು ಬಾಹತ್ ಗೆ ಸಮ. ಭಾರತದಲ್ಲಿಯೇ ಅಗತ್ಯ ಕರೆನ್ಸಿಯನ್ನು ವಿನಿಮಯ ಮಾಡಿಕೊಂಡು ಹೋದರೆ ಅನುಕೂಲ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...