ದೇಶದ 80ನೆಯ ಸ್ವಾತಂತ್ರ್ಯೋತ್ಸವದ ಸಿದ್ಧತೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯನ್ನು (ರೆಡ್ ಫೋರ್ಟ್) ಸಾರ್ವಜನಿಕರ ಪ್ರವೇಶಕ್ಕೆ ಜುಲೈ 15ರಿಂದ ಆಗಸ್ಟ್‌ 15ರವರೆಗೆ ಮುಚ್ಚಲಾಗಿದೆ. ಈ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅಧಿಕೃತ ಆದೇಶ ಹೊರಡಿಸಿದೆ.

ಜುಲೈ 9ರಂದು ಹೊರಡಿಸಲಾದ ಆದೇಶದ ಪ್ರಕಾರ, ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳ ನಿಯಮಗಳು, 1959ರ ನಿಯಮ 5ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆಗಸ್ಟ್‌ 15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭಗಳು ಪೂರ್ಣಗೊಳ್ಳುವವರೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಕೆಂಪುಕೋಟೆ ಪ್ರವೇಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Untitled design - 2026-07-17T105019.064

ಎಎಸ್‌ಐಯ ಹಿರಿಯ ಅಧಿಕಾರಿಯೊಬ್ಬರು, ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರತಿವರ್ಷ ಇದೇ ರೀತಿಯ ಆದೇಶ ಹೊರಡಿಸುವುದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಭದ್ರತಾ ವ್ಯವಸ್ಥೆ ಹಾಗೂ ಸಮಾರಂಭದ ಸಿದ್ಧತೆಗಳನ್ನು ಸುಗಮವಾಗಿ ನಡೆಸಲು ಈ ಕ್ರಮ ಅಗತ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಕೆಂಪುಕೋಟೆಯಲ್ಲಿ 1947ರಿಂದ ಪ್ರತಿವರ್ಷ ಭಾರತದ ಪ್ರಧಾನಮಂತ್ರಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಭಾಷಣ ಮಾಡುವುದು ಸಂಪ್ರದಾಯವಾಗಿದೆ. ಸ್ವಾತಂತ್ರ್ಯೋತ್ಸವದ ದಿನ ಸರಕಾರದಿಂದ ಅಧಿಕೃತ ಪ್ರವೇಶಪತ್ರ (ಪಾಸ್) ಪಡೆದವರಿಗೆ ಮಾತ್ರ ಕೋಟೆಯೊಳಗೆ ಪ್ರವೇಶ ನೀಡಲಾಗುತ್ತದೆ. ಸಮಾರಂಭದ ಹಿನ್ನೆಲೆಯಲ್ಲಿ ಭದ್ರತೆಯನ್ನು ಅತ್ಯಂತ ಕಠಿಣಗೊಳಿಸಲಾಗುತ್ತದೆ.