ಚೀನಿಯರಿಗೆ ವೀಸಾ ಮುಕ್ತ ಪ್ರವೇಶ ಕಲ್ಪಸಿದ ಫಿಲಿಪೈನ್ಸ್
ಪ್ರವಾಸೋದ್ಯಮವನ್ನು ಉತ್ತೇಜಿಸಲು ಫಿಲಿಫೈನ್ಸ್ ಚೀನಾ ಪ್ರಜೆಗಳಿಗೆ ವೀಸಾ ಮುಕ್ತ ಫಿಲಿಪೈನ್ಸ್ ಪ್ರವಾಸ, ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದೆ.
ಪ್ರವಾಸ ಅಥವಾ ವ್ಯವಹಾರಕ್ಕಾಗಿ ಫಿಲಿಪೈನ್ಸ್‌ಗೆ ಪ್ರವೇಶಿಸುವ ಚೀನಾ ಪ್ರಜೆಗಳಿಗೆ ವೀಸಾ ರಹಿತ ಪ್ರವೇಶ ಅವಕಾಶ ಇಂದಿನಿಂದ ಅಂದರೆ ಜನವರಿ 16, 2026ರಿಂದ ಜಾರಿಗೆ ಬರಲಿದೆ ಎಂದು ಮನಿಲಾದ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ಈ ಅವಕಾಶವು ಮನಿಲಾ ಮತ್ತು ಸೆಬು ವಿಮಾನ ನಿಲ್ದಾಣಗಳ ಮೂಲಕ ಪ್ರವೇಶಿಸುವವರಿಗೆ ಮಾತ್ರ ಮಾನ್ಯವಾಗಿರಲಿದ್ದು, ಎರಡು ವಾರಗಳಿಗಿಂತ ಹೆಚ್ಚಿನ ಸಮಯದವರೆಗೆ ಉಳಿಯುವವರಿಗೆ ಈ ಅವಕಾಶವನ್ನು ವಿಸ್ತರಿಸಲಾಗುವುದಿಲ್ಲ. ಈ ವ್ಯವಸ್ಥೆಯು ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ. ಅವಧಿ ಮುಗಿಯುವ ಮೊದಲೇ ಇದನ್ನು ಪರಿಶೀಲಿಸಬಹುದು ಎಂದು ಇಲಾಖೆ ಮಾಹಿತಿ ನೀಡಿದೆ.

ವ್ಯಾಪಾರ-ವಾಣಿಜ್ಯ ಮತ್ತು ಪ್ರವಾಸೋದ್ಯಮವನ್ನು ಸುಗಮಗೊಳಿಸುವ ಜತೆಗೆ ಫಿಲಿಪೈನ್ಸ್ ಮತ್ತು ಚೀನಾ ನಡುವಿನ ವಿನಿಮಯವನ್ನು ಬಲಪಡಿಸಲು ಇದು ಸಹಕಾರಿಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಫಿಲಿಪೈನ್ಸ್‌ನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ದೇಶದ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತವೆ. ಸಾಂಕ್ರಾಮಿಕ ಮತ್ತಿತರ ಕಾರಣಗಳಿಂದ ಚೀನಾ ಜನರು ಪ್ರವಾಸಕ್ಕೆ ಫಿಲಿಪೈನ್ಸ್ ಬದಲು ನೆರೆಯ ವಿಯೆಟ್ನಾಂ ಅನ್ನು ಆರಿಸಿಕೊಳ್ಳುತ್ತಿದ್ದರು. ಇದರಿಂದ ಪ್ರವಾಸೋದ್ಯಮವನ್ನು ಮತ್ತೆ ಬಲಪಡಿಸಲು ಫಿಲಿಪೈನ್ಸ್ ಈ ಅವಕಾಶವನ್ನು ಚೀನಾ ಪ್ರಜೆಗಳಿಗೆ ಕಲ್ಪಿಸಿಕೊಟ್ಟಿದೆ.