ರಷ್ಯಾದಿಂದ ಭಾರತಕ್ಕೆ ಹೊಸ ರೈಲು ಬರುತ್ತಾ?
ಸೂಯೆಜ್ ಕಾಲುವೆ ಮಾರ್ಗಕ್ಕೆ ಹೋಲಿಸಿದರೆ ಈ ಹೊಸ ರೈಲು ಕಾರಿಡಾರ್ ಮೂಲಕ ಯುರೋಪ್-ರಷ್ಯಾ ಮತ್ತು ಭಾರತದ ನಡುವಿನ ಸರಕು ಸಾಗಣೆ ಸಮಯ ಸುಮಾರು ಶೇಕಡಾ 30 ರಿಂದ 40 ರಷ್ಟು ಕಮ್ಮಿ ಆಗಲಿದೆ.
ರಷ್ಯಾ ಸರಕಾರವು ಏಷ್ಯಾ ಮತ್ತು ಯುರೇಷಿಯಾ ವಲಯದಲ್ಲಿ ಸರಕು ಹಾಗೂ ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಹೊಸ ಬೃಹತ್ 'ರೈಲ್ವೇ ಕಾರಿಡಾರ್' ನಿರ್ಮಾಣದ ಬೃಹತ್ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಈ ನೂತನ ರೈಲ್ವೇ ಮಾರ್ಗವು ಭವಿಷ್ಯದಲ್ಲಿ ಮಧ್ಯ ಏಷ್ಯಾ ಹಾಗೂ ಇರಾನ್ ಮಾರ್ಗವಾಗಿ ಭಾರತಕ್ಕೂ ನೇರ ರೈಲು ಸಂಪರ್ಕವನ್ನು ಕಲ್ಪಿಸುವ ಸಾಮರ್ಥ್ಯ ಹೊಂದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ರೈಲು ಟಿಕೆಟ್ ಬುಕಿಂಗ್ ಇನ್ನಷ್ಟು ವೇಗ, ಸರಳ
ರಷ್ಯಾವು ಈಗಾಗಲೇ ಜಾರಿಯಲ್ಲಿರುವ 'ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್' ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಿದೆ. ಈ ಮಾರ್ಗವು ರಷ್ಯಾದಿಂದ ಹೊರಟು ಅಜರ್‌ಬೈಜಾನ್, ಇರಾನ್ ಮತ್ತು ಮಧ್ಯ ಏಷ್ಯಾದ ದೇಶಗಳ ಮೂಲಕ ಹಾದುಹೋಗಲಿದ್ದು, ಇರಾನ್‌ನ ಚಾಬಹಾರ್ ಅಥವಾ ಬಂದರ್ ಅಬ್ಬಾಸ್ ಬಂದರುಗಳ ಮೂಲಕ ಸಮುದ್ರ ಮಾರ್ಗ ಹಾಗೂ ಉಪಖಂಡದ ರೈಲು ಜಾಲದೊಡನೆ ಸಂಯೋಜನೆಗೊಂಡು ಭಾರತವನ್ನು ತಲುಪಲಿದೆ.
ಸೂಯೆಜ್ ಕಾಲುವೆ ಮಾರ್ಗಕ್ಕೆ ಹೋಲಿಸಿದರೆ ಈ ಹೊಸ ರೈಲು ಕಾರಿಡಾರ್ ಮೂಲಕ ಯುರೋಪ್-ರಷ್ಯಾ ಮತ್ತು ಭಾರತದ ನಡುವಿನ ಸರಕು ಸಾಗಣೆ ಸಮಯ ಸುಮಾರು ಶೇಕಡಾ 30 ರಿಂದ 40 ರಷ್ಟು ಕಮ್ಮಿ ಆಗಲಿದೆ. ಭವಿಷ್ಯದಲ್ಲಿ ಈ ಮಾರ್ಗವು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದರೆ, ಯುರೇಷಿಯನ್ ದೇಶಗಳ ನಡುವೆ ರಸ್ತೆ/ರೈಲು ಪ್ರವಾಸ ಕೈಗೊಳ್ಳುವ ಸಾಹಸಿ ಪ್ರವಾಸಿಗರಿಗೆ ಹಾಗೂ ಪ್ರಯಾಣಿಕರಿಗೆ ಹೊಸ ಹಾದಿ ತೆರೆದುಕೊಳ್ಳಲಿದೆ.
ರಷ್ಯಾದ ಮೇಲಿನ ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳ ಹಿನ್ನೆಲೆಯಲ್ಲಿ, ರಷ್ಯಾ ದೇಶವು ಭಾರತ ಹಾಗೂ ದಕ್ಷಿಣ ಏಷ್ಯಾದ ದೇಶಗಳೊಂದಿಗೆ ನೇರ ಸಾರಿಗೆ ಮತ್ತು ವ್ಯಾಪಾರ ಬಾಂಧವ್ಯವನ್ನು ಗಟ್ಟಿಗೊಳಿಸಲು ಈ ಭೂಮಾರ್ಗದ ರೈಲ್ವೇ ಯೋಜನೆಯನ್ನು ಅತ್ಯಂತ ಆಯಕಟ್ಟಿನ ಯೋಜನೆಯಾಗಿ ಕಾಣುತ್ತಿದೆ. ತಈ ಯೋಜನೆ ಪೂರ್ಣಗೊಂಡಲ್ಲಿ, ರಷ್ಯಾ, ಮಧ್ಯ ಏಷ್ಯಾ ಮತ್ತು ಭಾರತದ ನಡುವಿನ ಸಾಂಸ್ಕೃತಿಕ, ಆರ್ಥಿಕ ಹಾಗೂ ಪ್ರವಾಸೋದ್ಯಮ ಸಂಬಂಧಗಳು ಹೊಸ ಎತ್ತರಕ್ಕೆ ಏರಲಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.