ಮಹಾರಾಷ್ಟ್ರದಲ್ಲಿ ಖಗೋಳ ಪ್ರವಾಸೋದ್ಯಮ
ಸರಕಾರ ಗುರುತಿಸಿರುವ 11 ತಾಣಗಳು ನಗರದ ಗದ್ದಲ ಮತ್ತು ಬೆಳಕಿನಿಂದ ದೂರವಿದ್ದು, ಖಗೋಳ ವೀಕ್ಷಣೆಗೆ ಅತ್ಯಂತ ಪೂರಕವಾದ ವಾತಾವರಣವನ್ನು ಹೊಂದಿವೆ.
ಮಹಾರಾಷ್ಟ್ರ ಸರಕಾರವು ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಒಂದು ಹೊಸ ಯೋಜನೆಯನ್ನು ರೂಪಿಸಿದೆ. ನಕ್ಷತ್ರ ವೀಕ್ಷಣೆ ಮತ್ತು ಖಗೋಳವಿಜ್ಞಾನದ ಆಸಕ್ತರನ್ನು ಸೆಳೆಯಲು ರಾಜ್ಯದ 11 ಆಯ್ದ ಪ್ರದೇಶಗಳನ್ನು ಡಾರ್ಕ್ ಸ್ಕೈ ಝೋನ್ ಗುರುತಿಸಿ ಅಭಿವೃದ್ಧಿಪಡಿಸಲು ಸರಕಾರ ಮುಂದಾಗಿದೆ.
ಏನಿದು ಡಾರ್ಕ್ ಸ್ಕೈ ವಲಯ?
ಕೃತಕ ಬೆಳಕಿನ ಮಾಲಿನ್ಯ ಕನಿಷ್ಠ ಮಟ್ಟದಲ್ಲಿರುವ ಮತ್ತು ರಾತ್ರಿಯ ಸಮಯದಲ್ಲಿ ಆಕಾಶವು ಅತ್ಯಂತ ಸ್ಪಷ್ಟವಾಗಿ ಕಾಣುವ ಪ್ರದೇಶಗಳನ್ನು ಡಾರ್ಕ್ ಸ್ಕೈ ವಲಯಗಳೆಂದು ಕರೆಯಲಾಗುತ್ತದೆ. ನಗರ ಪ್ರದೇಶಗಳಲ್ಲಿನ ದೀಪಗಳ ಪ್ರಖರತೆಯಿಂದಾಗಿ ನಕ್ಷತ್ರಗಳು ಮತ್ತು ಆಕಾಶಕಾಯಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ. ಆದರೆ ಸರಕಾರ ಗುರುತಿಸಿರುವ ಈ 11 ತಾಣಗಳು ನಗರದ ಗದ್ದಲ ಮತ್ತು ಬೆಳಕಿನಿಂದ ದೂರವಿದ್ದು, ಖಗೋಳ ವೀಕ್ಷಣೆಗೆ ಅತ್ಯಂತ ಪೂರಕವಾದ ವಾತಾವರಣವನ್ನು ಹೊಂದಿವೆ.
ಇದನ್ನೂ ಓದಿ: ವಿಶ್ವ ಪಾರಂಪರಿಕ ದಿನ: ಸ್ಮಾರಕಗಳ ಸಂರಕ್ಷಣೆಗಿದು ಸೂಕ್ತ ಸಮಯ
ಇವುಗಳಲ್ಲಿ ಪಶ್ಚಿಮ ಘಟ್ಟಗಳ ಕೆಲವು ಭಾಗಗಳು, ಅರಣ್ಯ ಪ್ರದೇಶಗಳು ಮತ್ತು ಅಭಯಾರಣ್ಯಗಳ ಹತ್ತಿರದ ಪ್ರದೇಶಗಳು ಸೇರಿವೆ. ನಾಸಿಕ್, ನಾಗ್ಪುರ ಮತ್ತು ಪುಣೆ ಜಿಲ್ಲೆಗಳ ಸುತ್ತಮುತ್ತಲಿನ ಕೆಲವು ಗ್ರಾಮೀಣ ಪ್ರದೇಶಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಇಲ್ಲಿನ ಆಕಾಶವು ವರ್ಷದ ಬಹುತೇಕ ದಿನಗಳಲ್ಲಿ ಮೋಡರಹಿತ ಮತ್ತು ಸ್ಪಷ್ಟವಾಗಿರುತ್ತದೆ.
ಈ ವಲಯಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಅತ್ಯಾಧುನಿಕ ಟೆಲಿಸ್ಕೋಪ್‌ಗಳು, ವೀಕ್ಷಣಾ ಕೇಂದ್ರಗಳು ಮತ್ತು ಖಗೋಳ ತಜ್ಞರ ಮಾರ್ಗದರ್ಶನ ವ್ಯವಸ್ಥೆಯನ್ನು ಕಲ್ಪಿಸಲು ಸರ್ಕಾರ ಯೋಜಿಸಿದೆ. ಪ್ರವಾಸಿಗರು ರಾತ್ರಿಯಿಡೀ ನಕ್ಷತ್ರಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಪರಿಸರ ಸ್ನೇಹಿ ವಾಸ್ತವ್ಯದ ವ್ಯವಸ್ಥೆಗಳನ್ನು ಮಾಡಲಾಗುವುದು.