ಕೇರಳದ ನೈಸರ್ಗಿಕ ಸೌಂದರ್ಯ, ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಪರಿಚಯಿಸುವ ಉದ್ದೇಶದಿಂದ ಕೇರಳ ಪ್ರವಾಸೋದ್ಯಮ ಇಲಾಖೆ ಆಯೋಜಿಸಿರುವ ‘ಲೆನ್ಸ್‌ಕೇಪ್ ಕೇರಳ’ ಎಂಬ ಫೊಟೋ ಪ್ರದರ್ಶನವನ್ನು ಅಹಮದಾಬಾದ್‌ನ ಹುತ್ತೀಸಿಂಗ್ ವಿಜುವಲ್ ಆರ್ಟ್ಸ್ ಸೆಂಟರ್‌ನಲ್ಲಿ ಉದ್ಘಾಟಿಸಲಾಯಿತು.

ಈ ಪ್ರದರ್ಶನದಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ 10 ಫೊಟೋಗ್ರಾಫರ್‌ಗಳು ತೆಗೆದ ಸುಮಾರು 100 ಚಿತ್ರಗಳನ್ನು ಪ್ರದರ್ಶಿಸಲಾಗಿದ್ದು, ಕೇರಳದ ಪ್ರಕೃತಿ, ವನ್ಯಜೀವಿ, ಹೇರಿಟೇಜ್, ಗ್ರಾಮೀಣ ಬದುಕು, ಕರಾವಳಿ ಪ್ರದೇಶಗಳು, ಹಬ್ಬಗಳು ಮತ್ತು ಆಧ್ಯಾತ್ಮಿಕ ಪರಂಪರೆ ಚಿತ್ರಗಳ ಮೂಲಕ ಅನಾವರಣಗೊಂಡಿವೆ.

ಪ್ರದರ್ಶನವನ್ನು ಖ್ಯಾತ ಶಾಸ್ತ್ರೀಯ ನೃತ್ಯಗಾರ್ತಿ ಹಾಗೂ ಕೇರಳ ಕಲಾಮಂಡಲಂನ ಚಾನ್ಸಲರ್ ಮಲ್ಲಿಕಾ ಸಾರಾಭಾಯಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಫೊಟೋಗ್ರಫಿಯು ಸಂಸ್ಕೃತಿ ಮತ್ತು ಚಲನೆಯನ್ನು ದಾಖಲಿಸುವ ಪ್ರಮುಖ ಮಾಧ್ಯಮವಾಗಿರುವುದಾಗಿ ತಿಳಿಸಿದರು.

Kerala Tourism Photo Exhibition Opens in Ahmedabad, Highlights Cultural Ties

ಕೇರಳ ಪ್ರವಾಸೋದ್ಯಮ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಮಾತನಾಡಿ, ಗುಜರಾತ್ ಮತ್ತು ಕೇರಳ ನಡುವಿನ ಉತ್ತಮ ಸಾಂಸ್ಕೃತಿಕ ಹಾಗೂ ಆರ್ಥಿಕ ಸಂಬಂಧದ ಬಗ್ಗೆ ಉಲ್ಲೇಖಿಸಿದರು. ಪಶ್ಚಿಮ ಭಾರತದ ರಾಜ್ಯಗಳಿಂದ ಕೇರಳಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವುದು ರಾಜ್ಯದ ಪ್ರವಾಸೋದ್ಯಮಕ್ಕೆ ಮಹತ್ವದ ಉತ್ತೇಜನ ನೀಡುತ್ತಿದೆ ಎಂದು ಅವರು ಹೇಳಿದರು.

ಈ ಫೊಟೋ ಪ್ರದರ್ಶನಕ್ಕೆ ಕಲಾ ವಿಮರ್ಶಕಿ ಮತ್ತು ಕ್ಯೂರೇಟರ್ ಉಮಾ ನಾಯರ್ ಅವರು ನಿರ್ದೇಶನ ನೀಡಿದ್ದು, ಫೊಟೋಗ್ರಾಫರ್‌ಗಳ ವೈಯಕ್ತಿಕ ದೃಷ್ಟಿಕೋಣ ಮತ್ತು ಶೈಲಿಗೆ ಮಹತ್ವ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಲೆನ್ಸ್‌ಕೇಪ್ ಕೇರಳ ಪ್ರದರ್ಶನವು ಮುಂದಿನ ದಿನಗಳಲ್ಲಿ ಮುಂಬೈ, ಪುಣೆ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಲ್ಕತ್ತಾ ಸೇರಿದಂತೆ ಹಲವು ನಗರಗಳಲ್ಲಿ ಪ್ರದರ್ಶಿಸಲ್ಪಡಲಿದ್ದು, ಮಾರ್ಚ್ ಅಂತ್ಯದ ವೇಳೆಗೆ ಸೂರತ್‌ನಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.