ಬಾರ್ಡರ್‌ನಲ್ಲಿ ಭಾರತೀಯ ಸೇನೆ ಕೆಫೆ
ಭಾರತೀಯ ಸೇನೆಯ 'ಬಾರ್ಡರ್ ಬ್ರೂ ಕೆಫೆ' ಕೇವಲ ಒಂದು ಕೆಫೆಯಾಗಿರದೇ, ಅದು ಗಡಿ ಭಾಗದ ಹಳ್ಳಿಗಳ ಭಾವನಾತ್ಮಕ ಕೊಂಡಿಯಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ಪ್ರಾದೇಶಿಕ ಅಭಿವೃದ್ಧಿಯನ್ನು ಹೇಗೆ ಸಾಧಿಸಬಹುದು ಎಂಬುದಕ್ಕೆ ಒಂದು ಅತ್ಯುತ್ತಮ ಉದಾಹರಣೆ.
ಭಾರತ ಮತ್ತು ಚೀನಾ ನಡುವಿನ ನೈಜ ನಿಯಂತ್ರಣ ರೇಖೆಯ (Line of Actual Control - LAC) ಸಮೀಪವಿರುವ ಪ್ರದೇಶಗಳಲ್ಲಿ ಭಾರತೀಯ ಸೇನೆಯು ಒಂದು ವಿಶಿಷ್ಟ ಬದಲಾವಣೆಗೆ ನಾಂದಿ ಹಾಡಿದೆ. ಲಡಾಖ್‌ನ ಚುಶುಲ್ ಸೆಕ್ಟರ್‌ನಲ್ಲಿ ಸೇನೆಯು 'ಬಾರ್ಡರ್ ಬ್ರೂ ಕೆಫೆʼ ಪ್ರಾರಂಭಿಸಿದೆ. ಇದು ಗಡಿ ಭಾಗದ ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಯ ಚಿತ್ರಣವನ್ನೇ ಬದಲಿಸುತ್ತಿದೆ.
ಒಂದು ಕಾಲದಲ್ಲಿ ಕೇವಲ ಸೇನಾ ಚಟುವಟಿಕೆಗಳಿಗೆ ಸೀಮಿತವಾಗಿದ್ದ ಈ ಪ್ರದೇಶಗಳು ಈಗ ನಾಗರಿಕ ಪ್ರವಾಸಿಗರಿಗೆ ತೆರೆದುಕೊಳ್ಳುತ್ತಿದೆ. ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ ಅಡಿಯಲ್ಲಿ ಕೈಗೊಳ್ಳಲಾದ ಈ ಹೆಜ್ಜೆ ಪ್ರವಾಸಿಗರಿಗೆ ಗಡಿ ಭಾಗದ ಜೀವನವನ್ನು ಹತ್ತಿರದಿಂದ ನೋಡುವ ಅವಕಾಶ ನೀಡುತ್ತಿದೆ.
ಇದನ್ನೂ ಓದಿ: ನಾಪಾ ವ್ಯಾಲಿಯಲ್ಲಿ ವೈನ್‌ಗಾಗಿ ರೌಂಡ್
ಈ ಕೆಫೆ ಲಡಾಖ್‌ನ ಸುಮಾರು 14,500 ಅಡಿಗಳಿಗೂ ಹೆಚ್ಚು ಎತ್ತರದ ಚುಶುಲ್ ಕಣಿವೆಯಲ್ಲಿದ್ದು, ಪ್ರವಾಸಿಗರಿಗೆ ಕೇವಲ ಕಾಫಿ ಅಥವಾ ತಿಂಡಿಯನ್ನು ಮಾತ್ರವಲ್ಲದೆ, ಗಡಿಯನ್ನು ಕಾಯುವ ಸೈನಿಕರ ಸಾಹಸಗಾಥೆಗಳನ್ನು ತಿಳಿಸುವ ತಾಣವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಕೆಫೆಯನ್ನು ನಡೆಸಲು ಸ್ಥಳೀಯ ಯುವಕರಿಗೆ ಮತ್ತು ಮಹಿಳೆಯರಿಗೆ ಸೇನೆಯು ತರಬೇತಿ ನೀಡುತ್ತಿದೆ.
ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಅತ್ಯಂತ ಕಠಿಣ ಹವಾಮಾನದಲ್ಲೂ ಸುಗಮ ಸಂಚಾರಕ್ಕಾಗಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ಭಾಗದಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸಲಾಗಿದೆ. ಇವೆಲ್ಲದರ ಜತೆಗೆ ಸೇನೆಯು ಬೇಕಾದ ಎಲ್ಲ ಭದ್ರೆತೆಯನ್ನು ಒದಗಿಸುತ್ತಿದೆ.