Saturday, July 18, 2026
Saturday, July 18, 2026

'ತೆರಿಗೆ ಮುಕ್ತ ಶಾಪಿಂಗ್' ಕೊನೆಗೊಳಿಸಲಿರುವ ಜಪಾನ್!

ವಿದೇಶಿ ಪ್ರವಾಸಿಗರು ಈ ತೆರಿಗೆ ವಿನಾಯಿತಿ ನಿಯಮವನ್ನು ದುರುಪಯೋಗಪಡಿಸಿಕೊಂಡು, ಜಪಾನ್‌ನಲ್ಲೇ ಆ ಸರಕುಗಳನ್ನು ಮರುಮಾರಾಟ ಮಾಡಿ ತೆರಿಗೆ ವಂಚಿಸುತ್ತಿರುವುದನ್ನು ತಡೆಯಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಜಪಾನ್ ದೇಶಕ್ಕೆ ಭೇಟಿ ನೀಡುವ ಜಾಗತಿಕ ಪ್ರವಾಸಿಗರಿಗೆ ಮತ್ತು ಶಾಪಿಂಗ್ ಪ್ರೇಮಿಗಳಿಗೆ ಅಲ್ಲಿನ ಸರಕಾರವು ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಪ್ರವಾಸಿಗರು ಜಪಾನ್‌ನಲ್ಲಿ ಖರೀದಿಸುವ ಸರಕುಗಳ ಮೇಲೆ ಪಡೆಯುತ್ತಿದ್ದ ತಕ್ಷಣದ ತೆರಿಗೆ ಮುಕ್ತ (instant tax-free shopping) ಸೌಲಭ್ಯವನ್ನು ನವೆಂಬರ್ 2026 ರಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ರದ್ದುಗೊಳಿಸಲು ಜಪಾನ್ ಸರಕಾರ ನಿರ್ಧರಿಸಿದೆ.

ಇದನ್ನೂ ಓದಿ: ಜಪಾನ್ ಸೇತುವೆಗಳ ಹಿಂದಿರುವ ಸಾಂಸ್ಕೃತಿಕ ಪರಂಪರೆ

ವಿದೇಶಿ ಪ್ರವಾಸಿಗರು ಈ ತೆರಿಗೆ ವಿನಾಯಿತಿ ನಿಯಮವನ್ನು ದುರುಪಯೋಗಪಡಿಸಿಕೊಂಡು, ಜಪಾನ್‌ನಲ್ಲೇ ಆ ಸರಕುಗಳನ್ನು ಮರುಮಾರಾಟ ಮಾಡಿ ತೆರಿಗೆ ವಂಚಿಸುತ್ತಿರುವುದನ್ನು ತಡೆಯಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಇಲ್ಲಿಯವರೆಗೆ ಜಪಾನ್‌ನಲ್ಲಿ ವಿದೇಶಿ ಪ್ರವಾಸಿಗರು ನಿಯಮಿತ ಸ್ಟೋರ್‌ಗಳಲ್ಲಿ ಕನಿಷ್ಠ 5,000 ಯೆನ್‌ (ಸುಮಾರು ರು. 2,800) ಮೊತ್ತದ ವಸ್ತುಗಳನ್ನು ಖರೀದಿಸಿದಾಗ, ಪಾಸ್‌ಪೋರ್ಟ್ ಪ್ರದರ್ಶಿಸಿ ತಕ್ಷಣವೇ 10% ನಷ್ಟು ಜಪಾನ್‌ನ ಬಳಕೆ ತೆರಿಗೆಯನ್ನು ಕಡಿತಗೊಳಿಸಿ ಕೇವಲ ಮೂಲ ಬೆಲೆಯನ್ನು ಮಾತ್ರ ಪಾವತಿಸಿ ಶಾಪಿಂಗ್ ಮಾಡಬಹುದಿತ್ತು. ಈ ವಸ್ತುಗಳನ್ನು ದೇಶದಿಂದ ಹೊರಗೆ ಕೊಂಡೊಯ್ಯಲಾಗುತ್ತದೆ ಎಂಬ ಭರವಸೆಯ ಮೇಲೆ ಈ ವಿನಾಯಿತಿ ನೀಡಲಾಗುತ್ತಿತ್ತು.

ಹೊಸ ನಿಯಮ ಜಾರಿಗೆ ಬಂದ ನಂತರ ಪ್ರವಾಸಿಗರು ತಕ್ಷಣದ ರಿಯಾಯಿತಿಯನ್ನು ಪಡೆಯಲು ಸಾಧ್ಯವಿಲ್ಲ. ಯುರೋಪಿಯನ್ ದೇಶಗಳ ಮಾದರಿಯಲ್ಲೇ ಜಪಾನ್ ಕೂಡ ʼಮೊದಲು ಪಾವತಿಸಿ, ನಂತರ ಮರುಪಾವತಿ ಪಡೆಯಿರಿʼ ಎಂಬ ನೀತಿಯನ್ನು ಅಳವಡಿಸಿಕೊಳ್ಳಲಿದೆ.

ಪ್ರವಾಸಿಗರು ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವಾಗ 10% ತೆರಿಗೆ ಸೇರಿದಂತೆ ಪೂರ್ಣ ಮೊತ್ತವನ್ನು ಪಾವತಿಸಬೇಕು. ಜಪಾನ್ ದೇಶವನ್ನು ಬಿಟ್ಟು ಹೋಗುವಾಗ ವಿಮಾನ ನಿಲ್ದಾಣ ಅಥವಾ ಬಂದರುಗಳಲ್ಲಿರುವ ಕಸ್ಟಮ್ಸ್ ಕೌಂಟರ್‌ಗಳಲ್ಲಿ ತಾವು ಖರೀದಿಸಿದ ವಸ್ತುಗಳನ್ನು ಮತ್ತು ರಸೀದಿಗಳನ್ನು ಅಧಿಕಾರಿಗಳಿಗೆ ತೋರಿಸಿ ತಪಾಸಣೆ ಒಳಪಡಿಸಬೇಕು. ಅಧಿಕಾರಿಗಳು ವಸ್ತುಗಳು ದೇಶದಿಂದ ಹೊರಗೆ ಹೋಗುತ್ತಿರುವುದನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಪ್ರವಾಸಿಗರು ಪಾವತಿಸಿದ್ದ 10% ತೆರಿಗೆಯನ್ನು ನಗದು ಅಥವಾ ಡಿಜಿಟಲ್ ರೂಪದಲ್ಲಿ ಮರುಪಾವತಿ ಮಾಡಲಾಗುತ್ತದೆ.

ಜಪಾನ್ ಕಸ್ಟಮ್ಸ್ ಇಲಾಖೆಯ ವರದಿಯ ಪ್ರಕಾರ, ಕೋಟ್ಯಂತರ ಯೆನ್ ಮೌಲ್ಯದ ತೆರಿಗೆ ಮುಕ್ತ ವಸ್ತುಗಳನ್ನು ಖರೀದಿಸಿ ದೇಶ ಬಿಡುವಾಗ ಕೌಂಟರ್‌ಗೆ ಬಾರದ ಪ್ರವಾಸಿಗರಿಂದ ಬಾಕಿ ಇದ್ದ ತೆರಿಗೆಯನ್ನು ವಸೂಲಿ ಮಾಡಲು ಹೋದಾಗ, ಬರೋಬ್ಬರಿ 80% ಕ್ಕೂ ಹೆಚ್ಚು ಪ್ರವಾಸಿಗರು ಹಣವಿಲ್ಲ ಎಂದು ತಪ್ಪಿಸಿಕೊಂಡಿದ್ದಾರೆ. ಕೇವಲ ಕೆಲವು ಪ್ರವಾಸಿಗರು ಜಪಾನ್‌ನಲ್ಲಿದ್ದ ಅವಧಿಯಲ್ಲಿ 100 ದಶಲಕ್ಷ ಯೆನ್‌ಗೂ ಹೆಚ್ಚು ಮೊತ್ತದ ತೆರಿಗೆ ಮುಕ್ತ ಶಾಪಿಂಗ್ ಮಾಡಿ ಸ್ಥಳೀಯವಾಗಿ ಮರುಮಾರಾಟ ಮಾಡಿರುವುದು ಪತ್ತೆಯಾಗಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ