ಗಂಗಾ-ಗಯಾ ಸಂಗಮ ಯಾತ್ರೆ
ಐಆರ್‌ಸಿಟಿಸಿ 8 ದಿನಗಳ ವಿಶೇಷ ಆಧ್ಯಾತ್ಮಿಕ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದೆ.
ಭಾರತೀಯ ರೈಲ್ವೇಯ ಅಂಗಸಂಸ್ಥೆಯಾದ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (IRCTC) ಭಕ್ತರಿಗಾಗಿ ‘ಗಂಗಾ– ಗಯಾ ಸಂಗಮ ಯಾತ್ರೆ’ ಎಂಬ ವಿಶೇಷ ಆಧ್ಯಾತ್ಮಿಕ ಪ್ರವಾಸ ಪ್ಯಾಕೇಜ್‌ಅನ್ನು ಘೋಷಿಸಿದೆ. ಈ 7 ರಾತ್ರಿ-8 ದಿನಗಳ ಯಾತ್ರೆಯು ಸೆಪ್ಟೆಂಬರ್ 2ರಂದು ಹೈದರಾಬಾದ್‌ನಿಂದ ಆರಂಭವಾಗಿ ಸೆಪ್ಟೆಂಬರ್ 9ರಂದು ಮುಕ್ತಾಯಗೊಳ್ಳಲಿದೆ.

ಈ ಯಾತ್ರೆಯಲ್ಲಿ ಗಯಾ, ವಾರಾಣಸಿ, ಸಾರನಾಥ್, ಪ್ರಯಾಗರಾಜ್, ಅಯೋಧ್ಯೆ, ಲಖನೌ ಹಾಗೂ ನೈಮಿಶಾರಣ್ಯ ಸೇರಿದಂತೆ ಉತ್ತರ ಭಾರತದ ಪ್ರಮುಖ ಧಾರ್ಮಿಕ ತಾಣಗಳಿಗೆ ಭೇಟಿ ನೀಡುವ ಅವಕಾಶ ಕಲ್ಪಿಸಲಾಗಿದೆ. ಮೊದಲ ದಿನ ಹೈದರಾಬಾದ್‌ನಿಂದ ಕೋಲ್ಕತ್ತಾ ಮಾರ್ಗವಾಗಿ ಗಯಾಗೆ ವಿಮಾನದಲ್ಲಿ ತೆರಳಿ, ಮಹಾಬೋಧಿ ದೇವಸ್ಥಾನ ಹಾಗೂ ಬೌದ್ಧ ದೇವಾಲಯಗಳಿಗೆ ಭೇಟಿ ನೀಡಲಾಗುತ್ತದೆ. ನಂತರ ವಿಷ್ಣುಪಾದ ದೇವಸ್ಥಾನ, ಮಂಗಲಗೌರಿ ಶಕ್ತಿಪೀಠ, ಕಾಶಿ ವಿಶ್ವನಾಥ ದೇವಸ್ಥಾನ, ಗಂಗಾ ಆರತಿ, ತ್ರಿವೇಣಿ ಸಂಗಮ, ಅಲೋಪಿ ದೇವಿ ದೇವಸ್ಥಾನ, ಶ್ರೀರಾಮ ಜನ್ಮಭೂಮಿ, ಬರಾ ಇಮಾಂಬಾರಾ ಸೇರಿದಂತೆ ಅನೇಕ ಪ್ರಸಿದ್ಧ ಕ್ಷೇತ್ರಗಳ ದರ್ಶನವನ್ನು ಯಾತ್ರೆಯಲ್ಲಿ ಒಳಗೊಂಡಿದೆ.
ಇದನ್ನೂ ಓದಿ: ಬಜರಂಗ ಸೇತು ಗ್ಲಾಸ್ ಸ್ಕೈವಾಕ್ ಓಪನ್
ಪ್ಯಾಕೇಜ್‌ನಲ್ಲಿ ಹೈದರಾಬಾದ್-ಗಯಾ ಮತ್ತು ಲಖನೌ– ಹೈದರಾಬಾದ್ ವಿಮಾನ ಪ್ರಯಾಣ, ಹೊಟೇಲ್ ವಸತಿ, ಉಪಾಹಾರ ಹಾಗೂ ಊಟ, ಎಸಿ ಬಸ್ ಮೂಲಕ ಸ್ಥಳೀಯ ಸಂಚಾರ, ಪ್ರವಾಸ ವಿಮೆ ಮತ್ತು ಐಆರ್‌ಸಿಟಿಸಿ ಟೂರ್ ಎಸ್ಕಾರ್ಟ್ ಸೇವೆ ಸೇರಿವೆ. ವಸತಿ ವ್ಯವಸ್ಥೆಯಲ್ಲಿ ಗಯಾದಲ್ಲಿ ಒಂದು ರಾತ್ರಿ, ವಾರಾಣಸಿಯಲ್ಲಿ ಮೂರು ರಾತ್ರಿ, ಅಯೋಧ್ಯೆಯಲ್ಲಿ ಒಂದು ರಾತ್ರಿ ಹಾಗೂ ಲಖನೌನಲ್ಲಿ ಎರಡು ರಾತ್ರಿ ವ್ಯವಸ್ಥೆ ಮಾಡಲಾಗಿದೆ.
ಪ್ರವಾಸ ದರವು ಟ್ರಿಪಲ್ ಶೇರಿಂಗ್‌ಗೆ 38,750 ರು., ಡಬಲ್ ಶೇರಿಂಗ್‌ಗೆ 41,000 ರು. ಹಾಗೂ ಸಿಂಗಲ್ ಆಕ್ಯುಪೆನ್ಸಿಗೆ 54,800 ರು. ಎಂದು ನಿಗದಿಪಡಿಸಲಾಗಿದೆ. ಈ ಪ್ಯಾಕೇಜ್ ಮೂಲಕ ಪ್ರತ್ಯೇಕವಾಗಿ ವಿಮಾನ, ಹೊಟೇಲ್ ಮತ್ತು ಸ್ಥಳೀಯ ಸಾರಿಗೆ ವ್ಯವಸ್ಥೆ ಮಾಡುವ ತೊಂದರೆಯಿಲ್ಲದೆ ಪ್ರಮುಖ ತೀರ್ಥಕ್ಷೇತ್ರಗಳ ದರ್ಶನವನ್ನು ಸುಲಭವಾಗಿ ಮಾಡಬಹುದಾಗಿದೆ.