ಮಧ್ಯಪ್ರಾಚ್ಯ ಯುದ್ಧದಿಂದಾಗಿ ಭಾರತದಲ್ಲಿ ಕಾಂಡೊಮ್ ಕೊರತೆಯ ಭೀತಿ
ಭಾರತದ ಸುಮಾರು 1.7 ಬಿಲಿಯನ್ ಡಾಲರ್ ಮೌಲ್ಯದ ಗರ್ಭನಿರೋಧಕ ಮಾರುಕಟ್ಟೆಯು ತನ್ನ 86% ಅಮೋನಿಯಾ ಆಮದಿಗಾಗಿ ಸೌದಿ ಅರೇಬಿಯಾ, ಕತಾರ್ ಮತ್ತು ಒಮಾನ್‌ನಂಥ ದೇಶಗಳ ಮೇಲೆ ಅವಲಂಬಿತವಾಗಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಕಾಂಡೊಮ್ ಉತ್ಪಾದನೆಯಲ್ಲಿ ವ್ಯತ್ಯಯ ಉಂಟಾಗಿದೆ. ಮುಂಬರುವ ದಿನಗಳಲ್ಲಿ ಇವುಗಳ ಬೆಲೆ ಗಣನೀಯವಾಗಿ ಏರಿಕೆಯಾಗುವ ನಿರೀಕ್ಷೆಯಿದೆ.
ಇವುಗಳ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳ ಕೊರತೆ ಮತ್ತು ಬೆಲೆ ಏರಿಕೆಯಾಗಿದ್ದು, ಸಿಲಿಕಾನ್ ಆಯಿಲ್ ಮತ್ತು ಅಮೋನಿಯಾ ಅಲಭ್ಯತೆ ಉಂಟಾಗಿದೆ. ಇಮಾರ್ಕ್ ಗ್ರೂಪ್ ಅಂಕಿಅಂಶಗಳ ಪ್ರಕಾರ, ಪೆಟ್ರೋಕೆಮಿಕಲ್ ಉತ್ಪನ್ನಗಳು ಮತ್ತು ಅಮೋನಿಯಾದ ಬೆಲೆಯು ಪ್ರತಿ ಕೆಜಿಗೆ 0.48 ರಿಂದ 0.68 ಡಾಲರ್‌ಗೆ ಜಿಗಿದಿದೆ. ಇದು ಉತ್ಪಾದನಾ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: ಐಕಾನಿಕ್ ನಟಿಯ ಟ್ರಾವೆಲ್ ಕಹಾನಿ
ಪ್ರಮುಖ ಕಾಂಡೊಮ್ ತಯಾರಕ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವಂತೆ, ಅಮೋನಿಯಾ ಬೆಲೆಯಲ್ಲಿ ಇನ್ನೂ ಸುಮಾರು 40-50% ಏರಿಕೆಯಾಗುವ ಸಾಧ್ಯತೆಯಿದೆ. ಕೇವಲ ಕಚ್ಚಾವಸ್ತುಗಳಲ್ಲದೆ, ಪ್ಯಾಕೇಜಿಂಗ್‌ಗೆ ಬಳಸುವ ಪಾಲಿವಿನೈಲ್ ಕ್ಲೋರೈಡ್ ಫಾಯಿಲ್, ಅಲುಮಿನಿಯಂ ಫಾಯಿಲ್ ಮತ್ತು ಇತರ ರಾಸಾಯನಿಕಗಳ ಪೂರೈಕೆಯಲ್ಲೂ ಅಡಚಣೆ ಉಂಟಾಗಿದೆ.
ಸುಮಾರು ನಾಲ್ಕು ವಾರಗಳಿಂದ ನಡೆಯುತ್ತಿರುವ ಪಶ್ಚಿಮ ಏಷ್ಯಾ ಯುದ್ಧವು ಹಾರ್ಮೊಜ್ ಜಲಸಂಧಿಯ ಮೂಲಕ ನಡೆಯುವ ವ್ಯಾಪಾರಕ್ಕೆ ಅಡ್ಡಿಪಡಿಸಿದೆ. ಭಾರತದ ಸುಮಾರು 1.7 ಬಿಲಿಯನ್ ಡಾಲರ್ ಮೌಲ್ಯದ ಗರ್ಭನಿರೋಧಕ ಮಾರುಕಟ್ಟೆಯು ತನ್ನ 86% ಅಮೋನಿಯಾ ಆಮದಿಗಾಗಿ ಸೌದಿ ಅರೇಬಿಯಾ, ಕತಾರ್ ಮತ್ತು ಒಮಾನ್‌ನಂಥ ದೇಶಗಳ ಮೇಲೆ ಅವಲಂಬಿತವಾಗಿದೆ.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ನ ಕೊಚ್ಚಿ ವಿಭಾಗದ ಮಾಜಿ ಅಧ್ಯಕ್ಷ ರಾಜೀವ್ ಜಯದೇವನ್ ಈ ಬಗ್ಗೆ , ʼಪಶ್ಚಿಮ ಏಷ್ಯಾದ ಸಂಘರ್ಷ ಡೊಮಿನೊ ಎಫೆಕ್ಟ್ ಇದ್ದಂತೆ. ಈಗ ಗರ್ಭನಿರೋಧಕ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಬೆಲೆ ಏರಿಕೆ ಮತ್ತು ಪೂರೈಕೆಯ ಕೊರತೆ ಅನಿವಾರ್ಯವಾಗಿದೆʼ ಎಂದು ಹೇಳಿದ್ದಾರೆ.