Monday, August 24, 2026
Monday, August 24, 2026

ಇದು ಈಶಾನ್ಯ ಭಾರತದ ಅತಿಸ್ವಚ್ಛ ಹಳ್ಳಿ

ಬೆಳ್ಳಂಬೆಳಗ್ಗೆ ಹಸಿ ಕಸ- ಒಣ ಕಸ ಬೇರೆಮಾಡಿ, ಕಸದ ಟಿಪ್ಪರ್‌ಗಳಿಗೆ ನೀಡುವ ಸೌಕರ್ಯ ನಮ್ಮಲ್ಲಿ ಬಂದದ್ದು, 'ಸ್ವಚ್ಛ ಭಾರತ ಅಭಿಯಾನ' (2014) ಆರಂಭವಾದಾಗ. ಈಗಲೂ ಅದರ ಫಲಾಫಲಗಳು ಏಳುಬೀಳುಗಳಲ್ಲೇ ಇವೆ. ಕದ್ದುಮುಚ್ಚಿ ಅಸಂಬದ್ದ ತಾಣಗಳಲ್ಲಿ ಕಸ ಎಸೆಯುವವರ ಉಪಟಳ ಇಂದಿಗೂ ಇದೆ. ಆದರೆ ರಂಗ್ಸಪಾರದಲ್ಲಿ ಈ ಸ್ವಚ್ಛತೆ ವ್ಯವಸ್ಥೆ ಜಾರಿಯಾಗಿದ್ದು ಅಭಿಯಾನದ ಆರಂಭವಾಗುವುದಕ್ಕೂ 15 ವರ್ಷಗಳ ಮೊದಲು! 1999ರಲ್ಲೇ ಈ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಈ ಅಭಿಯಾನವನ್ನು ಪ್ರಾರಂಭಿಸಿದ್ದರು.

ಏಷ್ಯಾದ ಅತಿಸ್ವಚ್ಛ ಗ್ರಾಮ ಮೇಘಾಲಯದ ಮಾವ್ಲಿನಾಂಗ್‌. ಆ ಕುರಿತು ಸಾಕಷ್ಟು ಜನರಿಗೆ ತಿಳಿದೇ ಇದೆ. ಅಲ್ಲಿ ಪ್ಲಾಸ್ಟಿಕ್‌, ಧೂಮಪಾನ- ಮದ್ಯಪಾನ ಮೊದಲಾದವುಗಳಿಗೆ ನಿಷೇಧವಿದೆ. ರಸ್ತೆಗಳಲ್ಲಿ ಕಸ ಸಂಗ್ರಹಿಸಲು ಬಿದಿರಿನ ಬುಟ್ಟಿಗಳಿವೆ. ಆ ಕಸವನ್ನೇ ಕಾಂಪೋಸ್ಟ್‌ ಮಾಡುವ ಕಲೆ ಅವರಿಗೆ ಒಲಿದಿದೆ. ಈ ವಿಷಯಗಳು ಅಲ್ಲಿಗೆ ಒಮ್ಮೆ ಭೇಟಿಕೊಟ್ಟರೂ ಪ್ರವಾಸಿಗೆ ಅರಿವಾಗುತ್ತವೆ. ಆದರೆ ಮೇಘಾಲಯದ ಪಕ್ಕದ ರಾಜ್ಯ ಅಸ್ಸಾಂನಲ್ಲೂ ಅಂಥದ್ದೇ ಸಾಧನೆಯ ಒಂದು ಗ್ರಾಮವಿದೆ. ಇದು ಸಾಕಷ್ಟು ಪ್ರಚಾರ ಪಡೆದಿಲ್ಲದ ಹಳ್ಳಿ. ಹಾಗಾಗಿ ಅಷ್ಟು ಜನಪ್ರಿಯವಾಗಿಲ್ಲ ಅಷ್ಟೆ. ಆ ಗ್ರಾಮದ ಹೆಸರೇ ರಂಗ್ಸಪಾರ.

ಇದನ್ನೂ ಓದಿ: ಆಲ್ಟಿಟ್ಯೂಡ್ ಸಿಕ್‌ನೆಸ್!

ಅಭಿಯಾನಕ್ಕೂ ಮೊದಲೇ ಸ್ವಚ್ಛವಾದ ಭಾರತದ ಗ್ರಾಮ

ಬೆಳ್ಳಂಬೆಳಗ್ಗೆ ಹಸಿ ಕಸ- ಒಣ ಕಸ ಬೇರೆಮಾಡಿ, ಕಸದ ಟಿಪ್ಪರ್‌ಗಳಿಗೆ ನೀಡುವ ಸೌಕರ್ಯ ನಮ್ಮಲ್ಲಿ ಬಂದದ್ದು, 'ಸ್ವಚ್ಛ ಭಾರತ ಅಭಿಯಾನ' (2014) ಆರಂಭವಾದಾಗ. ಈಗಲೂ ಅದರ ಫಲಾಫಲಗಳು ಏಳುಬೀಳುಗಳಲ್ಲೇ ಇವೆ. ಕದ್ದುಮುಚ್ಚಿ ಅಸಂಬದ್ದ ತಾಣಗಳಲ್ಲಿ ಕಸ ಎಸೆಯುವವರ ಉಪಟಳ ಇಂದಿಗೂ ಇದೆ. ಆದರೆ ರಂಗ್ಸಪಾರದಲ್ಲಿ ಈ ಸ್ವಚ್ಛತೆ ವ್ಯವಸ್ಥೆ ಜಾರಿಯಾಗಿದ್ದು ಅಭಿಯಾನದ ಆರಂಭವಾಗುವುದಕ್ಕೂ 15 ವರ್ಷಗಳ ಮೊದಲು! 1999ರಲ್ಲೇ ಈ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಈ ಅಭಿಯಾನವನ್ನು ಪ್ರಾರಂಭಿಸಿದ್ದರು. ಆದರೆ ʻಸ್ವಚ್ಛ ಭಾರತ ಅಭಿಯಾನʼ ಮತ್ತು ಸರಕಾರದ PHED ಇಲಾಖೆಯ ನೆರವು ಅವರನ್ನು ನಂತರ ತಲುಪಿತು. ಇದರ ಸಹಾಯದಿಂದ ಗ್ರಾಮಸ್ಥರು ತಮ್ಮ ತಾತ್ಕಾಲಿಕ ಶೌಚಾಲಯಗಳನ್ನು ಪಕ್ಕಾ ಕಾಂಕ್ರೀಟ್ ಶೌಚಾಲಯಗಳನ್ನಾಗಿ ನವೀಕರಿಸಿಕೊಂಡಿದ್ದಾರೆ.

Untitled design (20)

ಸ್ವಚ್ಛತಾ ದಿನ

ಈ ಗ್ರಾಮಸ್ಥರು ಇಂದಿಗೂ ಸಾಪ್ತಾಹಿಕ ಸ್ವಚ್ಛತಾ ಅಭಿಯಾನವನ್ನು ಪಾಲಿಸುತ್ತಿದ್ದಾರೆ. ಪ್ರತಿ ವಾರದ ಒಂದು ನಿರ್ದಿಷ್ಟ ದಿನವನ್ನು ʻಸ್ವಚ್ಛತಾ ದಿನʼ ಎಂದು ನಿಗದಿ ಮಾಡಿಕೊಂಡಿದ್ದಾರೆ. ಅಂದು ಹಳ್ಳಿಯ ಪ್ರತಿಯೊಂದು ಕುಟುಂಬದ ಕನಿಷ್ಠ ಒಬ್ಬ ಸದಸ್ಯನಾದರೂ ಗ್ರಾಮದ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುತ್ತಾನೆ. ರಸ್ತೆ, ಚರಂಡಿ ಮತ್ತು ಸಾರ್ವಜನಿಕ ಸ್ಥಳಗಳನ್ನು ಗ್ರಾಮಸ್ಥರು ಅಂದು ಒಟ್ಟಾಗಿ ಸ್ವಚ್ಛಗೊಳಿಸುತ್ತಾರೆ. ಹಸಿ ಕಸ- ಒಣ ಕಸವನ್ನು ಬೇರ್ಪಡಿಸಿ ಸಂಗ್ರಹಿಸುತ್ತಾರೆ. ಕಸವನ್ನು ಸಂಗ್ರಹಿಸಲು ಬಿದಿರಿನ ಬುಟ್ಟಿಗಳನ್ನು ಬಳಸಲಾಗುತ್ತದೆ. ಅಲ್ಲೊಂದು ಇಲ್ಲೊಂದರಂತೆ ತಂತಿಯ ಜಾಲರಿಯ ಡಸ್ಟ್‌ಬಿನ್‌ಗಳನ್ನು ಕಾಣಬಹುದು.

ಸ್ವಚ್ಛತೆಗಾಗಿ ಸಮಿತಿ

1999ರಲ್ಲಿ ರಂಗ್ಸಪಾರ ಗ್ರಾಮದ ಮುಖಂಡರಾಗಿದ್ದ ರಾಬರ್ಟ್ ಜಾನ್ ಮೊಮಿನ್ ನೇತೃತ್ವದಲ್ಲಿ ಗ್ರಾಮದ ಸ್ವಚ್ಛತೆಯ ಚರ್ಚೆ ಮುನ್ನೆಲೆಗೆ ಬಂದಿತ್ತು. 2000ದ ಇಸವಿಯಲ್ಲಿ 10 ಸದಸ್ಯರ ಗ್ರಾಮ ಸಮಿತಿಯನ್ನು ರಚಿಸಲಾಯಿತು. ಆ ಸಮಿತಿ ಕೈಗೊಂಡ ನಾಲ್ಕು ಪ್ರಮುಖ ನಿರ್ಣಯಗಳು ಇಂದಿಗೂ ಕಾರ್ಯ ನಿರ್ವಹಿಸುತ್ತಿವೆ.

ಸಮಿತಿಯ ನಿರ್ಣಯಗಳು

ಗ್ರಾಮದಲ್ಲಿ ಸಂಪೂರ್ಣ ಶಾಂತಿ- ಒಗ್ಗಟ್ಟು ಕಾಯ್ದುಕೊಳ್ಳುವುದು.

ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳನ್ನು ಸಂಪೂರ್ಣ ಸ್ವಚ್ಛವಾಗಿ ಕಾಪಾಡುವುದು.

ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸುವುದು.

ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಮಾಡುವುದು.

Untitled design (22)

ನಿಯಮ ಮೀರಿದರೆ ದಂಡ ವ್ಯವಸ್ಥೆ

ಸ್ವಚ್ಛತೆಗಾಗಿ ನಿಯಮಗಳನ್ನು ರೂಪಿಸಿದರಾಯಿತೇ? ಅವುಗಳನ್ನು ಚಾಚೂ ತಪ್ಪದೆ ಜನರು ಪಾಲಿಸಬೇಕಲ್ಲ. ಹಾಗೆ ಪಾಲಿಸಲೆಂದೇ ಹಲವು ಕಟ್ಟುನಿಟ್ಟಾದ ನಿಯಮಗಳು ಮತ್ತು ದಂಡದ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು. ನಿಯಮಗಳನ್ನು ಉಲ್ಲಂಘಿಸಿದರೆ ಅಥವಾ ಕಸ ಎಸೆದರೆ 5,001 ರುಪಾಯಿ ದಂಡ ವಿಧಿಸಲಾಯಿತು. ಬಯಲು ಶೌಚ, ಹಿಂಸಾಚಾರ, ಜೂಜಾಟ, ಧೂಮಪಾನ ಹಾಗೂ ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಇಂದಿಗೂ ಇವುಗಳನ್ನು ಜನರು ತಪ್ಪದೆ ಪಾಲಿಸುತ್ತಾರೆ.

ಸಾಕ್ಷರತೆ ಕಡಿಮೆ ಸ್ವಚ್ಛತೆ ಹೆಚ್ಚು

ರಂಗ್ಸಪಾರ ಅಸ್ಸಾಂ ಮತ್ತು ಮೇಘಾಲಯದ ಗಡಿಭಾಗದ ಗ್ರಾಮ. ಪ್ರಕೃತಿ ಸೌಂದರ್ಯದ ಖನಿ. ಉಷ್ಣ ವಲಯದ ಅರೆನಿತ್ಯಹರಿದ್ವರ್ಣ ಕಾಡು ಈ ಗ್ರಾಮವನ್ನು ಆವರಿಸಿದೆ. ಸುತ್ತಲೂ ಬೆಟ್ಟಗಳು ಮತ್ತು ಗದ್ದೆಗಳೇ ಕಣ್ಣಿಗೆ ಬೀಳುತ್ತವೆ. ಈ ಗ್ರಾಮದ ಜನರ ಜೀವನೋಪಾಯವೂ ಕೃಷಿ. ಸರಕಾರಿ ನೌಕರಿಯಲ್ಲಿರುವವರ ಸಂಖ್ಯೆ ತೀರಾ ಕಡಿಮೆ. ಔಪಚಾರಿಕ ಸಾಕ್ಷರತೆಯೂ ಅಷ್ಟಕ್ಕಷ್ಟೆ. ಇಷ್ಟಾದರೂ ಈ ಊರಿನ ಜನರು ಸ್ವಚ್ಛತೆ ಕಾಪಾಡಿಕೊಂಡಿರುವ ರೀತಿ ಮೆಚ್ಚುವಂಥದ್ದು. ನಮ್ಮಲ್ಲಿ ಎಲ್ಲೆಂದರಲ್ಲಿ ಉಗುಳುವವರು, ಲೈಟ್‌ಕಂಬಗಳಿಗೆ ನಾಯಿಗಳಂತೆ ಟೆರಿಟರಿ ಮಾರ್ಕ್‌ ಮಾಡುವವರನ್ನು ಕಂಡಾಗ ಅನ್‌ಪಡ್‌ ಎಂದು ತೆಗಳುವವರಿಗೆ ಈ ಊರು ವಿರೋಧಭಾಸವಾಗಿಸುತ್ತದೆ. ಸಾಕ್ಷರತೆ ಮತ್ತು ಸಂಪತ್ತು ಇದ್ದರೆ ಮಾತ್ರ ಸ್ವಚ್ಛತೆ ಸಾಧ್ಯ ಎಂಬ ನಂಬಿಕೆಯನ್ನು ಈ ಊರು ಸುಳ್ಳಾಗಿಸಿದೆ.

ಇಲ್ಲಿ ಕಾಲೇ ಗತಿ

ರಂಗ್ಸಪಾರ ಗ್ರಾಮದಲ್ಲಿ ಸ್ವಚ್ಛತೆ ಹೆಚ್ಚು. ಅಭಿವೃದ್ಧಿ ಕಡಿಮೆ. ಅಸಲಿಗೆ ರಸ್ತೆಯಂಥ ಮೂಲಸೌಕರ್ಯವೂ ಇಲ್ಲಿಲ್ಲ. ಕಚ್ಚಾ ರಸ್ತೆಗಳೇ ಇಲ್ಲಿ ಕನೆಕ್ಟಿವಿಟಿಯ ಆಧಾರ. ಮಳೆ ಹೆಚ್ಚಾದಾಗ ಈ ರಸ್ತೆಗಳು ಇನ್ನೂ ಹಾಳಾಗುತ್ತವೆ. ಒಂದರ್ಥದಲ್ಲಿ ಇಲ್ಲಿ ವಾಹನ ಸವಾರರಿಗೆ ಆಫ್‌ರೋಡ್‌ ಫೀಲ್‌ ಸರ್ವೇ ಸಾಮಾನ್ಯ. ಹಾಗಾಗಿ ವಾಹನ ಸಂಚಾರ ತೀರಾ ವಿರಳ. ಅಪರೂಪಕ್ಕೆ ಒಂದಿಷ್ಟು ಸೈಕಲ್ ಅಥವಾ ಬೈಕ್‌ಗಳ ಓಡಾಟವನ್ನು ಕಾಣಬಹುದಷ್ಟೆ. ಜನರು ಹೆಚ್ಚಾಗಿ ಕಾಲ್ನಡಿಗೆಯನ್ನೇ ನಂಬಿದ್ದಾರೆ. ಹೊಲ- ಗದ್ದೆಗಳಿಗೆ ಪಾದ ಬೆಳೆಸುತ್ತಾರೆ. ಸೈಕಲ್‌ಗಳನ್ನೂ ಬಳಸುತ್ತಾರೆ. ಇದನ್ನು ನೋಡುತ್ತಿರುವಾಗ ಸ್ವಚ್ಛಂದ ಸಾಂಪ್ರದಾಯಿಕ ಹಳ್ಳಿಯ ಫೀಲ್‌ ಬರುತ್ತದೆ.

Untitled design (23)

ಡಿಜಿಟಲ್‌ ಡಿಟಾಕ್ಸ್‌

ಇಡೀ ಗ್ರಾಮದಲ್ಲಿ ಮೊಬೈಲ್ ಫೋನ್‌ಗಳ ಬಳಕೆ ತೀರಾ ಕಡಿಮೆ. ಕಾರಣ ದುಡ್ಡಿನದ್ದಲ್ಲ. ಬದಲಿಗೆ ಡಿಜಿಟಲ್ ಸಂಪರ್ಕ ವ್ಯವಸ್ಥೆಯದ್ದು. ಡಿಜಿಟಲ್‌ ಡಿಟಾಕ್ಸ್‌ ಇಲ್ಲಿ ಅವಕಾಶವಲ್ಲ; ಅನಿವಾರ್ಯವಾಗಿದೆ. ಸುತ್ತಲೂ ಬೆಟ್ಟಗಳು, ದಟ್ಟಕಾಡು ಇರುವುದರಿಂದ ಇಲ್ಲಿಗೆ ಸಂಪರ್ಕ ವ್ಯವಸ್ಥೆ ಸಿಗದು. ಹಾಗಾಗಿ ಮೊಬೈಲ್‌ಗಳಿದ್ದರೂ ಬೇಕಾದ ಹಾಗೆ ಬಳಕೆ ಮಾಡಲಾಗದು. ನೆಟ್‌ವರ್ಕ್‌ ಸಿಕ್ಕಾಗಲೊಮ್ಮೆ ಕಾಲ್‌ ಮಾಡಿ ಹಲೋ, ಹಾಂ, ಬಾಯ್‌ ಬಾಯ್‌ ಮಾಡಬಹುದು.

ವಾಂಗಲಾ ಹಬ್ಬ

ರಂಗ್ಸಪಾರ ಗ್ರಾಮದಲ್ಲಿ ನಡೆಯುವ ವಾಂಗಲಾ ಹಬ್ಬಕ್ಕೆ ಬಹು ಮಹತ್ವವಿದೆ. ಇದು ಅವರ ಸಾಂಸ್ಕೃತಿಕ ಪರಂಪರೆಯೊಂದಿಗೆ ಆಳವಾಗಿ ಬೇರೂರಿರುವ ಹಬ್ಬ. ಒಂದರ್ಥದಲ್ಲಿ ಅಲ್ಲಿನ ಸುಗ್ಗಿ. ಈ ವೇಳೆ ನಡೆಯುವ ʼವಾಂಗಲಾ ನೃತ್ಯʼ ನೋಡಲು ಮೋಹಕವಾಗಿರುತ್ತದೆ. ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪರೇಡ್‌ನಲ್ಲೂ ಈ ನೃತ್ಯವನ್ನು ಪ್ರದರ್ಶಿಸಲಾಗಿತ್ತು ಎಂಬುದು ವಿಶೇಷ. ಅಂದಹಾಗೆ ಇದು ಕೇವಲ ಫಸಲು ಬೆಳೆದ ಖುಷಿಯ ಸುಗ್ಗಿ ಹಬ್ಬವಲ್ಲ; ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸುವ ಹಬ್ಬ. ಇದೇ ವೇಳೆ ಗಾರೋ ಜನಾಂಗದ ವಧು-ವರರ ಆಯ್ಕೆ ಕಾರ್ಯಗಳೂ ನಡೆಯುತ್ತವೆ.

ಪ್ರಸ್ತುತ ರಂಗ್ಸಪಾರ ಗ್ರಾಮವು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಲು ಮತ್ತು ದೇಶದ ಮೊದಲ ನಗದು ರಹಿತ ಆರ್ಥಿಕತೆಯ ಹಳ್ಳಿಯಾಗಲು ಯೋಜಿಸುತ್ತಿದೆ ಎನ್ನಲಾಗಿದೆ. ಈ ಹಳ್ಳಿಯ ಯೋಜನೆ, ಜನರ ಯೋಚನೆ ನೋಡುತ್ತಿದ್ದರೆ ʻಮರಳಿ ಮಣ್ಣಿಗೆʼ ಸಾಲು ನೆನಪಾಗುತ್ತದೆ. ಈ ಅಪೂರ್ವ ಹಳ್ಳಿ ನಿಜಕ್ಕೂ ಅದ್ಭುತ ಪ್ರವಾಸಿ ತಾಣ. ಇಲ್ಲಿನ ಆಕರ್ಷಣೆ ಕೇವಲ ಹಳ್ಳಿಯಲ್ಲ; ಹಳ್ಳಿಯ ಜನರು, ಅವರ ಚಿಂತನೆಗಳೂ ಹೌದು.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ