ವಾಂಟಾವಂಗ್ ಜಲಪಾತದ ಬಗ್ಗೆ ಪ್ರವಾಸಿಗರು ತಿಳಿಯಲೇಬೇಕಾದ ವಿವರಗಳು
ಶರದೃತುವಿನ ಚಳಿಯಲ್ಲಿ ಜಲಪಾತದ ಎದುರು ನಿಂತು ಸಣ್ಣದಾಗಿ ನಡುಗುತ್ತ ಜಲಪಾತ ಧುಮುಕುವ ಶಬ್ದ ಕೇಳುತ್ತ ಪ್ರಕೃತಿಯ ನಡುವೆ ಕಳೆದುಹೋಗಬಹುದು.
ಮಿಜೋರಾಂ ರಾಜ್ಯದ ಅತಿ ಎತ್ತರದ ಮತ್ತು ಭಾರತದ ಪ್ರಮುಖ ಜಲಪಾತಗಳಲ್ಲಿ ವಾಂಟಾವಂಗ್ ಜಲಪಾತ ಪ್ರಮುಖವಾದದ್ದು. ಸುಮಾರು 251 ಅಡಿ ಎತ್ತರದಿಂದ ಧುಮುಕುವ ಈ ಜಲಪಾತ ಮಿಜೋರಾಂನ ಸೆರ್ಚಿಪ್ ಜಿಲ್ಲೆಯ ತೇನ್ಜಾವಲ್ ಸಮೀಪದಲ್ಲಿದೆ. ಐಜ್ವಾಲ್‌ನಿಂದ ಸುಮಾರು137 ಕಿ.ಮೀ ದೂರದಲ್ಲಿದೆ. ಇದು 'ಲೌ ನದಿ'ಯ ಹರಿವಿನಿಂದ ಬರುವ ಜಲಪಾತ.
ಏನಿದು ಕಥೆ?
ಸ್ಥಳೀಯ ಮಿಜೋ ಭಾಷೆಯಲ್ಲಿ 'ವಾಂಟಾವ್ಂಗ್' ಎಂದರೆ ಒಬ್ಬ ವ್ಯಕ್ತಿಯ ಹೆಸರು. ದಂತಕಥೆಯ ಪ್ರಕಾರ, 'ವಾಂಟಾವ್ಂಗ್' ಎಂಬ ಅತ್ಯಂತ ನುರಿತ ಈಜುಗಾರನಿದ್ದ. ಅವನು ಈ ಜಲಪಾತದ ಅಡಿಯಲ್ಲಿ ತನ್ನ ಈಜಿನ ಕೌಶಲ್ಯವನ್ನು ಪ್ರದರ್ಶಿಸುತ್ತಿದ್ದಾಗ, ಬಿದ್ದ ದೊಡ್ಡ ಮರವೊಂದು ಅವನ ಮೇಲೆ ಅಪ್ಪಳಿಸಿ ಅವನು ಮರಣಹೊಂದಿದ. ಅವನ ನೆನಪಿಗಾಗಿ ಈ ಜಲಪಾತಕ್ಕೆ ಅವನ ಹೆಸರನ್ನೇ ಇಡಲಾಗಿದೆ.
ಇದನ್ನೂ ಓದಿ: ಮೊಘಲರು ಕಟ್ಟಿದ ಬಡವರ ತಾಜ್ ಮಹಲ್
ಜಲಪಾತವು ದಟ್ಟವಾದ ಬಿದಿರಿನ ಕಾಡುಗಳು ಮತ್ತು ಕಡಿದಾದ ಬಂಡೆಗಳ ನಡುವೆ ಇರುವುದರಿಂದ, ಪ್ರವಾಸಿಗರು ಹತ್ತಿರಕ್ಕೆ ಹೋಗುವುದು ಕಷ್ಟಕರ. ಆದ್ದರಿಂದ, ಪ್ರವಾಸೋದ್ಯಮ ಇಲಾಖೆಯು ದೂರದಿಂದಲೇ ಜಲಪಾತದ ಭವ್ಯ ನೋಟವನ್ನು ಆನಂದಿಸಲು ವೀಕ್ಷಣಾ ಗೋಪುರವನ್ನು ನಿರ್ಮಿಸಿದೆ.
ಜೂನ್ - ಸೆಪ್ಟೆಂಬರ್ ಸಮಯದಲ್ಲಿ ಜಲಪಾತವು ಪೂರ್ಣ ಪ್ರಮಾಣದಲ್ಲಿ ಹರಿಯುತ್ತಿದ್ದು, ಅತ್ಯಂತ ಸುಂದರವಾಗಿ ಕಾಣುತ್ತದೆ. ಶರದೃತುವಿನ ಚಳಿಯಲ್ಲಿ ಜಲಪಾತದ ಎದುರು ನಿಂತು ಸಣ್ಣದಾಗಿ ನಡುಗುತ್ತ ಜಲಪಾತ ಧುಮುಕುವ ಶಬ್ದ ಕೇಳುತ್ತ ಪ್ರಕೃತಿಯ ನಡುವೆ ಕಳೆದುಹೋಗಬಹುದು.
ಇದನ್ನೂ ಓದಿ: ಕೋಝಿಕೋಡ್‌ನಲ್ಲಿ ಸಮುದ್ರದ ಅಲೆ, ಕೇರಳದ ಕಲೆ ಇದೆ
ದಾರಿ ಹೇಗೆ?
ಐಜ್ವಾಲ್ ನಗರದಿಂದ ಬಾಡಿಗೆ ಟ್ಯಾಕ್ಸಿ ಅಥವಾ ಬಸ್ ಮೂಲಕ ತೇನ್ಜಾವಲ್ ತಲುಪಬಹುದು. ಅಲ್ಲಿಂದ ಜಲಪಾತಕ್ಕೆ ಹೋಗಲು ಸ್ಥಳೀಯ ವಾಹನಗಳು ಲಭ್ಯವಿವೆ. ಐಜ್ವಾಲ್‌ನಲ್ಲಿರುವ ಲೆಂಗ್‌ಪುಯಿ ಹತ್ತಿರದ ವಿಮಾನ ನಿಲ್ದಾಣ. ಅಸ್ಸಾಂನ ನಲ್ಲಿದೆ ಸುಮಾರು 180 ಕಿ.ಮೀ ದೂರದಲ್ಲಿರುವ ಅಸ್ಸಾಂನ ಸಿಲ್ಚಾರ್ ಇಲ್ಲಿಗಿರುವ ಹತ್ತಿರದ ರೈಲ್ವೇ ನಿಲ್ದಾಣ. ಮಿಜೋರಾಂ ಪ್ರವೇಶಿಸಲು ಭಾರತೀಯ ಪ್ರವಾಸಿಗರಿಗೆ ಇನ್ನರ್ ಲೈನ್ ಪರ್ಮಿಟ್ ಅಗತ್ಯವಿರುತ್ತದೆ. ತೇನ್ಜಾವಲ್‌ನಲ್ಲಿ ಉಳಿಯಲು ಉತ್ತಮ ಪ್ರವಾಸಿ ಬಂಗಲೆಗಳು ಮತ್ತು ರೆಸಾರ್ಟ್‌ಗಳು ಲಭ್ಯವಿವೆ.