ಸ್ಪಿಟಿ ವ್ಯಾಲಿಯ ಬೆಳ್ಳಿ ಬೆಟ್ಟಗಳ ನಡುವೆ
ಲಾಂಗ್ಜ್ (langza ) ಪಳೆಯುಳಿಕೆ ಗ್ರಾಮ. ಇದು ಸಮುದ್ರ ಮಟ್ಟದಿಂದ ಸುಮಾರು ‘14500 ಅಡಿ ಎತ್ತರದಲ್ಲಿದೆ. 1000 ವರ್ಷಗಳಷ್ಟು ಹಳೆಯದಾದ 35 ಅಡಿ ಎತ್ತರದ ಬುದ್ಧನ ಪ್ರತಿಮೆ ಹಾಗೂ ಇತಿಹಾಸ ಪೂರ್ವ ಕಾಲದ ಸಮುದ್ರದ ಪಳೆಯುಳಿಕೆಗಳು ಇಲ್ಲಿದ್ದು, ಸಾಕಷ್ಟು ಜನರು ಇವುಗಳನ್ನು ನೋಡಲೆಂದೇ ಇಲ್ಲಿಗೆ ಬರುತ್ತಾರೆ.
- ವಿಜಯಕ್ಕ ಅಜ್ಜಿಮನೆ
ಸ್ಪಿಟಿ, ಭಾರತದ ಅತ್ಯಂತ ಸುಂದರವಾದ ಎತ್ತರದ ಶೀತಲ ಮರುಭೂಮಿ ಹಿಮಾಚಲ ಪ್ರದೇಶದಲ್ಲಿದೆ. ಸಮುದ್ರ ಮಟ್ಟದಿಂದ 14500 ಅಡಿ ಎತ್ತರದಲ್ಲಿದೆ. ಇಲ್ಲಿ ಟಿಬೆಟಿಯನ್ ಸಂಸ್ಕೃತಿಯ ಪ್ರಭಾವವನ್ನು ಕಾಣಬಹುದು. ಭಾರತ ಮತ್ತು ಟಿಬೆಟ್ ನಡುವಿನ ಈ ಜಾಗ ನಿಜಕ್ಕೂ ಸ್ವರ್ಗ ಸದೃಶವಾದುದು.
ಬಸ್, ರೈಲು, ವಿಮಾನ ಯಾವ ಸೌಲಭ್ಯವೂ ಇಲ್ಲಿಲ್ಲ. ಹಾಗಾಗಿ, ಇಲ್ಲಿ ಸದಾ ಶುದ್ಧ ಗಾಳಿ, ಕಡಿಮೆ ಜನಸಂಚಾರ, ಶಬ್ದಗಳಿಲ್ಲದ ವಾತಾವರಣವಿದೆ. ಇಲ್ಲಿನ ಸಣ್ಣ ಸಣ್ಣ ಹಳ್ಳಿಗಳೂ ನಿಮ್ಮ ಕಣ್ಮನ ತಣಿಸುತ್ತವೆ. ಒರಟಾದ ದೊಡ್ಡ ದೊಡ್ಡ ಬಂಜರು ಪರ್ವತಗಳು ಹಿಮದ ಹೊದಿಕೆಯಲ್ಲಿ ಬೆಳ್ಳಿಬೆಟ್ಟಗಳಂತೆ ಕಂಗೊಳಿಸುತ್ತವೆ. ಜೂನ್- ಸೆಪ್ಟಂಬರ್ ಪ್ರವಾಸಿಗರ ಭೇಟಿಗೆ ಹಳ್ಳಿಗಳು ಸಿದ್ಧವಾಗಿರುತ್ತವೆ. ಅತೀ ಎತ್ತರದ ಪ್ರದೇಶವಾದ್ದರಿಂದ ಆಮ್ಲಜನಕದ ಕೊರತೆ ಉಂಟಾಗುವ ಕಾರಣ ಆಕ್ಸಿಜನ್ ಸಿಲಿಂಡರ್‌ಗಳೂ ಅಲ್ಲಲ್ಲಿ ಸಿಗುತ್ತವೆ.
ಇದನ್ನೂ ಓದಿ: ಅಮೃತಸರದಿಂದ ಅಟ್ಟಾರಿ ಬಾರ್ಡರ್‌ವರೆಗೆ ದೇಶಪ್ರೇಮದ ಯಾತ್ರೆ..
ಚೆರ್ರಿ, ಸೇಬು ತೋಟಗಳ ನಡುವೆ ವಸತಿ
ಸ್ಪಿಟಿಗೆ ನಾವು ಭೇಟಿ ನೀಡಿದ್ದು ಜೂನ್‌ನಲ್ಲೇ. ಹಿಮಪಾತದಿಂದ ಕೆಲವು ರಸ್ತೆಗಳು ಮುಚ್ಚಿದ್ದವು. ಹಾಗಾಗಿ ಚಂದ್ರ ತಾಲ್ ನೋಡಲಾಗಲಿಲ್ಲ. ಶಿಮ್ಲಾದಿಂದ ಸ್ಪಿಟಿಗೆ ಹೋಗುವ ದಾರಿಯಲ್ಲೇ 220 ಕಿಮೀ ದೂರದಲ್ಲಿ ಸಾಂಗ್ಲಾ ವ್ಯಾಲಿ(ಕಿನೂರ್ ಡಿಸ್ಟ್ರಿಕ್) ಇದೆ. ಇಲ್ಲಿನ ಅದ್ಭುತ ಪ್ರಕೃತಿ ಸೌಂದರ್ಯ ನೋಡುಗರನ್ನು ಬೆಕ್ಕಸಬೆರಗಾಗುವಂತೆ ಮಾಡುತ್ತದೆ. ಸೇಬು, ಚೆರ್ರಿ ಹಣ್ಣುಗಳ ತೋಟಗಳ ಮಧ್ಯೆ ಪ್ರವಾಸಿಗರಿಗಾಗಿ ರೂಮ್‌ಗಳನ್ನು ಕಟ್ಟಿಸಿದ್ದಾರೆ. ರೂಮ್ ತಲಪಲು ನೀವು ಮೆಟ್ಟಿಲುಗಳನ್ನು ಇಳಿಯಬೇಕು. ವಾಹನಗಳ ಸದ್ದಿಲ್ಲ. ರೂಮಿನ ಕಿಟಕಿಯಲ್ಲೇ ಹಿಮ ಪರ್ವತಗಳನ್ನು ಕಾಣಬಹುದು. ಸಂಜೆಗೆ ಚಪಾತಿ ಅನ್ನ, ದಾಲ್, ಪಲ್ಯದ ಸಿಂಪಲ್ ಊಟ, ಬೆಳಗ್ಗಿನ ತಿಂಡಿಗೆ ಬಟೂರಾ ಅಥವಾ ಸ್ಯಾಂಡ್ವಿಜ್‌ಗಳು, ಸ್ಥಳೀಯ ಸೂಪ್‌ಗಳು ಇದ್ದೇ ಇರುತ್ತವೆ.

ಸಾಂಗ್ಲಾದ ಪುರಾತನ ಕೋಟೆ
ಸಾಂಗ್ಲಾದಲ್ಲಿ 1400 ವರ್ಷಗಳಿಗೂ ಹೆಚ್ಚು ಪುರಾತನ ಕೋಟೆಯಿದೆ. ಇದರ ಒಳಗೆ ಹೋಗಲು ಅಲ್ಲಿನ ಸಾಂಪ್ರದಾಯಿಕ ಬೆಲ್ಟ್ ಧರಿಸಬೇಕು. ತಲೆಗೊಂದು ಟೋಪಿ ಧರಿಸಬೇಕು. ಅವುಗಳನ್ನು ಅಲ್ಲಿಯೇ ಪಡೆಯಬಹುದು. ಕೋಟೆಯ ಬಾಗಿಲು ಮುಚ್ಚುವ ಸಮಯಕ್ಕೆ ನಾವು ಅಲ್ಲಿಗೆ ಹೋಗಿದ್ದೆವು. ಆದರೂ ಅವರು ಬಾಗಿಲು ತೆರೆದು, ಒಳಗೆ ಹೋಗಿ ನೋಡುವ ಅವಕಾಶ ಮಾಡಿ ಕೊಟ್ಟರು. ಎಲ್ಲೂ ಎಂಟ್ರಿ ಫೀಸ್ ಇಲ್ಲ. ಅವರೂ ಹಣದ ಬೇಡಿಕೆಯನ್ನು ಇಡಲಿಲ್ಲ.
ಕಿ ಮೊನೆಸ್ಟ್ರಿ (key monestry) ಅತ್ಯಂತ ಹಳೆಯ ಮತ್ತು ಪ್ರಮುಖವಾದ ಬೌದ್ಧ ಮಠವಾಗಿದ್ದು, ಕೋಟೆಯಂಥ ವಿಶಿಷ್ಟವಾದ ವಾಸ್ತುಶಿಲ್ಪಕ್ಕೆ ಹೆಸರುವಾಸಿ.
ಪಳೆಯುಳಿಕೆ ಗ್ರಾಮ
ಲಾಂಗ್ಜ್ (langza ) ಪಳೆಯುಳಿಕೆ ಗ್ರಾಮ. ಇದು ಸಮುದ್ರ ಮಟ್ಟದಿಂದ ಸುಮಾರು ‘14500 ಅಡಿ ಎತ್ತರದಲ್ಲಿದೆ. 1000 ವರ್ಷಗಳಷ್ಟು ಹಳೆಯದಾದ 35 ಅಡಿ ಎತ್ತರದ ಬುದ್ಧನ ಪ್ರತಿಮೆ ಹಾಗೂ ಇತಿಹಾಸ ಪೂರ್ವ ಕಾಲದ ಸಮುದ್ರದ ಪಳೆಯುಳಿಕೆಗಳು ಇಲ್ಲಿದ್ದು, ಸಾಕಷ್ಟು ಜನರು ಇವುಗಳನ್ನು ನೋಡಲೆಂದೇ ಇಲ್ಲಿಗೆ ಬರುತ್ತಾರೆ.
ಕಿಬ್ಬಲ್ ಕಣಿವೆ
ಕಿಬ್ಬಲ್, ಹಿಮಾಚಲ ಪ್ರದೇಶದ ಎತ್ತರದ ಹಳ್ಳಿ. ಸಮುದ್ರ ಮಟ್ಟದಿಂದ ಸುಮಾರು 14000 ಅಡಿ ಎತ್ತರದಲ್ಲಿದೆ. ಇದು ವಾಹನ ಸಂಚಾರಕ್ಕೆ ಅನುಕೂಲಕರವಾದ ರಸ್ತೆಯನ್ನು ಹೊಂದಿರುವ ವಿಶ್ವದ ಅತೀ ಎತ್ತರದ ಜನವಸತಿ ಹಳ್ಳಿಗಳಲ್ಲಿ ಒಂದಾಗಿದೆ. ಹಿಮಚಿರತೆ ಸೇರಿ ಅಳಿವಿನಂಚಿನಲ್ಲಿನ ಅಪರೂಪದ ವನ್ಯಜೀವಿಗಳನ್ನು ನೋಡಲು ಇಲ್ಲಿಗೆ ಸಾಕಷ್ಟು ಜನರು ಭೇಟಿ ನೀಡುತ್ತಾರೆ.
ಹಿಕ್ಕಿಂನಲ್ಲಿ ಎತ್ತರದ ಅಂಚೆ ಕಚೇರಿ
ಹಿಕ್ಕಿಂ, ಸಮುದ್ರ ಮಟ್ಟದಿಂದ ಸುಮಾರು 14400 ಅಡಿ ಎತ್ತರದಲ್ಲಿದೆ. ಈ ಹಳ್ಳಿ ಜನಪ್ರಿಯ ಪ್ರವಾಸಿ ನಿಲ್ದಾಣ. ಸಾಂಪ್ರದಾಯಿಕ ಮಣ್ಣಿನ ಮನೆಗಳು ಮತ್ತು ಸುತ್ತಲೂ ಅಚ್ಚರಿ ಗೊಳಿಸುವ ಹಿಮಾಲಯದ ದೃಶ್ಯಗಳು ಕಣ್ಣಿಗೆ ಬೀಳುತ್ತವೆ. ವಿಶ್ವದ ಅತಿ ಎತ್ತರದ ಅಂಚೆ ಕಚೇರಿಯನ್ನು ಹೊಂದಿದ ಪ್ರದೇಶ ಇದಾಗಿದೆ. ಇಲ್ಲಿ ಪ್ರತಿಯೊಬ್ಬರೂ ಪೋಸ್ಟ್ ಕಾರ್ಡ್ ತೆಗೆದುಕೊಂಡು ಪ್ರೀತಿ ಪಾತ್ರರಿಗೆ ಕಳಿಸಿ ತಮ್ಮ ನೆನಪನ್ನು ದಾಖಲಿಸಲು ಇಚ್ಛಿಸುತ್ತಾರೆ.
ಅಗಾಧ ಮೌನವನ್ನೇ ಹೊದ್ದುಕೊಂಡಿರುವ ಸ್ಪಿಟಿ ವ್ಯಾಲಿ ಪ್ರಕೃತಿಯನ್ನು ಪ್ರೀತಿಸುವ, ಪ್ರಕೃತಿ ಸೌಂದರ್ಯ ಸವಿಯುವ ಮನಸಿನ ವ್ಯಕ್ತಿಗಳಿಗೆ ಸ್ವರ್ಗ. ಅಲ್ಲಲ್ಲಿ ಟೆಂಟ್ ಹಾಕಿರುವ BRO ಕ್ಯಾಂಟೀನ್‌ನಲ್ಲಿ ಬಿಸಿ ಬಿಸಿ ಸಮೋಸ ಹಾಗೂ ಜಲೇಬಿ ಸಿಗುತ್ತವೆ. ಚುಮುಚುಮು ಚಳಿಗೆ ಬಿಸಿ ಬಿಸಿ ತಿಂಡಿಗಳನ್ನು ತಿನ್ನುವಾಗ ಸ್ವರ್ಗಕ್ಕೆ ಮೂರೇ ಗೇಣು ಅನ್ನುತ್ತೀರಿ. ಬದುಕಿದ್ದಾಗಲೇ ಈ ಸ್ವರ್ಗ ನೋಡಿಬನ್ನಿ. ಸತ್ತ ನಂತರದ್ದು ಯಾರಿಗೆ ಗೊತ್ತು?
- ಸ್ಪಿಟಿ ಸಮುದ್ರ ಮಟ್ಟದಿಂದ ಸುಮಾರು 14500 ಅಡಿ ಎತ್ತರದಲ್ಲಿದೆ
- ಸ್ಟಿಟಿಗೆ ಬಸ್, ರೈಲು, ವಿಮಾನ ಸೌಲಭ್ಯಗಳಿಲ್ಲ
- ಚೆರ್ರಿ, ಸೇಬು ತೋಟಗಳ ನಡುವೆ ವಸ್ತವ್ಯ ಹೂಡಬಹುದು
- ಇಲ್ಲಿನ ಲಾಂಗ್ಜ್ ಗ್ರಾಮ ಇತಿಹಾಸ ಪೂರ್ವ ಕಾಲದ ಪಳಯುಳಿಕೆಗಳಿರುವ ತಾಣ
- ಹಿಕ್ಕಿಂನಲ್ಲಿ ವಿಶ್ವದ ಎತ್ತರ ಪ್ರದೇಶದಲ್ಲಿನ ಪೋಸ್ಟ್ ಆಫಿಸ್ ಇದೆ.