Tuesday, July 28, 2026
Tuesday, July 28, 2026

ಅನುಕರಣೆ ಸಾಕು ನಮ್ಮತನ ಬೇಕು

ನಾವು ಪ್ರವಾಸೋದ್ಯಮವನ್ನು ಕಟ್ಟಿದ್ದೇ ಪಶ್ಚಿಮದ ಕಣ್ಣಿನಿಂದ. ಹೊಟೇಲ್ ಸ್ಟಾರ್ ರೇಟಿಂಗ್, ಇನ್‌ಫ್ರಾಸ್ಟ್ರಕ್ಚರ್ ಇಂಡೆಕ್ಸ್, ಫುಟ್‌ಫಾಲ್ ಸಂಖ್ಯೆ - ಇವೇ ನಮ್ಮ ಯಶಸ್ಸಿನ ಅಳತೆಗೋಲುಗಳಾಗಿಬಿಟ್ಟಿವೆ. ಆದರೆ ಒಂದು ಕ್ಷಣ ಯೋಚಿಸಿ. ಭಾರತಕ್ಕೆ ಬರುವ ಪ್ರವಾಸಿ ಬರೀ ಒಂದು ಸ್ಥಳ ನೋಡಲು ಬರುತ್ತಿಲ್ಲ. ಅವನು ಬರುತ್ತಿರುವುದು ಒಂದು ಜೀವನಕ್ರಮವನ್ನು, ಒಂದು ದಾರ್ಶನಿಕ ಪರಂಪರೆಯನ್ನು ಅನುಭವಿಸುವ ಸಲುವಾಗಿ.

ಇತ್ತೀಚೆಗೆ ಮನಿ ಕಂಟ್ರೋಲ್ ವೆಬ್ ಸೈಟ್ ನಲ್ಲಿ ಭಾರತೀಯ ಪ್ರವಾಸೋದ್ಯಮದ ಕುರಿತ ಒಂದು ವಿಶಿಷ್ಟ ಅಂಕಣ ಪ್ರಕಟವಾಗಿತ್ತು. ಅಂಕಣಕಾರ ಅರುಣ್ ಆನಂದ್ ಬರೆದ ಬರಹವದು. ಭಾರತಕ್ಕೆ ಇಂಡಿಕ್ ಮಾದರಿಯ ಟೂರಿಸಂ ಬೇಕು ಎಂಬುದನ್ನು ಹಲವು ಅಂಶಗಳ ಮೂಲಕ ಹೇಳುವ ಪ್ರಯತ್ನ ಆ ಲೇಖನದಲ್ಲಿತ್ತು. ಭಾರತದಲ್ಲಿ ಇನ್ಯಾವ ಮಾದರಿಯ ಪ್ರವಾಸೋದ್ಯಮ ಇರೋಕೆ ಸಾಧ್ಯ? ಹಾಗಿದ್ರೆ ಈಗ ಇರೋದು ಯಾವ ಮಾದರಿಯ ಪ್ರವಾಸೋದ್ಯಮ ಎಂಬ ಪ್ರಶ್ನೆಗಳು ಉದ್ಭವವಾದವು. ಆದರೆ ಅವರ ಮಾತಿನಲ್ಲಿ ಸತ್ಯವಿದೆ. ನಾವು ರೂಪಿಸುತ್ತಿರುವ ಪ್ರವಾಸೋದ್ಯಮ ಪಾಶ್ಚಿಮಾತ್ಯ ಶೈಲಿಯದ್ದು. ನಮ್ಮ ಪ್ರವಾಸೋದ್ಯಮ, ಆತಿಥ್ಯ ಎಲ್ಲವೂ ಪಾಶ್ಚಿಮಾತ್ಯರು ರೂಪಿಸಿದ ನಿಯಮಾವಳಿಗಳಂತೆ ನಡೆದುಕೊಂಡು ಹೋಗುತ್ತಿದೆ.

ಒಂದು ಸಣ್ಣ ದೃಶ್ಯ ಕಲ್ಪಿಸಿಕೊಳ್ಳಿ. ಕಾಶಿಯ ಘಾಟ್‌ನಲ್ಲಿ ಸಂಜೆಯ ಆರತಿ ನಡೆಯುತ್ತಿದೆ. ಡೋಲಿನ ಸದ್ದು, ಗಂಗೆಯ ಮೇಲೆ ತೇಲುವ ದೀಪಗಳು, ಪುರೋಹಿತರ ಕಂಠದಲ್ಲಿ ಮಂತ್ರಘೋಷ. ಇದನ್ನು ನೋಡಲು ಬಂದ ವಿದೇಶಿ ಪ್ರವಾಸಿ ಫೊಟೋ ತೆಗೆದುಕೊಂಡು ಹೋಗುತ್ತಾನೆ. ಆದರೆ ಅವನಿಗೆ ಆ ಆರತಿಯ ಹಿಂದಿನ ಕಥೆ ಗೊತ್ತೇ ಇಲ್ಲ. ಗಂಗೆ ಏಕೆ ಪವಿತ್ರ, ಅಲ್ಲಿ ಗಂಗಾರತಿ ಯಾಕೆ ನಡೆಯುತ್ತಿದೆ, ಆ ಕ್ಷಣದಲ್ಲಿ ಸ್ಥಳೀಯರ ಭಾವನೆಗಳೇನು, ಸ್ಥಳಪುರಾಣವೇನು ಇವ್ಯಾವುದರ ಅರಿವೇ ಆತನಿಗಿಲ್ಲ. ಅವನ ಪಾಲಿಗೆ ಅದೊಂದು ’ಅದ್ಭುತ ದೃಶ್ಯ’ ಅಷ್ಟೆ. ಇದೇ ನಮ್ಮ ಪ್ರವಾಸೋದ್ಯಮದ ಸಮಸ್ಯೆ.

Untitled design - 2026-07-28T111909.975

ನಾವು ಪ್ರವಾಸೋದ್ಯಮವನ್ನು ಕಟ್ಟಿದ್ದೇ ಪಶ್ಚಿಮದ ಕಣ್ಣಿನಿಂದ. ಹೊಟೇಲ್ ಸ್ಟಾರ್ ರೇಟಿಂಗ್, ಇನ್‌ಫ್ರಾಸ್ಟ್ರಕ್ಚರ್ ಇಂಡೆಕ್ಸ್, ಫುಟ್‌ಫಾಲ್ ಸಂಖ್ಯೆ - ಇವೇ ನಮ್ಮ ಯಶಸ್ಸಿನ ಅಳತೆಗೋಲುಗಳಾಗಿಬಿಟ್ಟಿವೆ. ಆದರೆ ಒಂದು ಕ್ಷಣ ಯೋಚಿಸಿ. ಭಾರತಕ್ಕೆ ಬರುವ ಪ್ರವಾಸಿ ಬರೀ ಒಂದು ಸ್ಥಳ ನೋಡಲು ಬರುತ್ತಿಲ್ಲ. ಅವನು ಬರುತ್ತಿರುವುದು ಒಂದು ಜೀವನಕ್ರಮವನ್ನು, ಒಂದು ದಾರ್ಶನಿಕ ಪರಂಪರೆಯನ್ನು ಅನುಭವಿಸುವ ಸಲುವಾಗಿ. ಈ ದೇಶದಲ್ಲಿ ಪ್ರತಿಯೊಂದು ಬೆಟ್ಟಕ್ಕೂ ಒಂದು ಪುರಾಣವಿದೆ, ಪ್ರತಿಯೊಂದು ನದಿಗೂ ಒಂದು ದೇವತೆಯ ಕಥೆಯಿದೆ, ಪ್ರತಿಯೊಂದು ಗ್ರಾಮಕ್ಕೂ ತನ್ನದೇ ಆದ ಆಚರಣೆಯಿದೆ. ಇಷ್ಟು ಶ್ರೀಮಂತ ಆಧ್ಯಾತ್ಮಿಕ ನೆಲದಲ್ಲಿ ನಿಂತು ಕೂಡ ನಾವು ಯುರೋಪಿನ ಥೀಮ್ ಪಾರ್ಕ್ ಮಾದರಿಯನ್ನು ಅನುಕರಿಸುತ್ತಿದ್ದೇವೆ ಅಂದರೆ ನಿಜಕ್ಕೂ ವಿಪರ್ಯಾಸ.

ಪಾಶ್ಚಾತ್ಯ ಮಾದರಿಯಲ್ಲಿ ಪ್ರವಾಸ ಅಂದರೆ ನೋಡುವುದು; ಅರ್ಥಾತ್ ಸೈಟ್‌ಸೀಯಿಂಗ್. ಬಸ್ಸಿನಿಂದ ಇಳಿ, ಫೊಟೋ ತೆಗೆ, ಹತ್ತು ನಿಮಿಷದಲ್ಲಿ ಮುಂದಿನ ಸ್ಥಳಕ್ಕೆ ಹೊರಡು. ಆದರೆ ಭಾರತೀಯ ಪರಿಕಲ್ಪನೆಯಲ್ಲಿ ಪ್ರವಾಸ ಎಂದರೆ ’ಯಾತ್ರೆ’. ಅದು ಅಂತರಂಗದ ಪಯಣ ಕೂಡ ಹೌದು. ಚಾರ್ ಧಾಮ್ ಯಾತ್ರೆಗೆ ಹೋಗುವವನಿಗೆ ಅದು ಕೇವಲ ಪ್ರವಾಸವಲ್ಲ, ಅವನಿಗೆ ತನ್ನೊಳಗೆ ಏನನ್ನೋ ಹುಡುಕುವ ಹೊತ್ತು. ಇಂಥ ಅನುಭವವನ್ನು ಪಾಶ್ಚಾತ್ಯ ಟೂರಿಸಂ ಮಾಡೆಲ್‌ನ ಚೌಕಟ್ಟಿನಲ್ಲಿ ಕೂಡಿಸಲು ಸಾಧ್ಯವೇ ಇಲ್ಲ. ಅದಕ್ಕೆ ನಮ್ಮದೇ ಭಾಷೆ, ನಮ್ಮದೇ ಚೌಕಟ್ಟು ಬೇಕು.

ಇದನ್ನೂ ಓದಿ: ಸ್ವಾಗತಕ್ಕೆ ದೇಶ ಸಿದ್ಧವಿದೆಯೇ?

ಹಾಗಂತ ಇಂಡಿಕ್ ಮಾದರಿ ಅಂದರೆ ಬರೀ ದೇವಸ್ಥಾನ ತೋರಿಸುವುದಲ್ಲ. ಅದು ಆಯುರ್ವೇದ, ಯೋಗ, ಗ್ರಾಮ ಜೀವನ, ಜಾನಪದ ಕಲೆ, ಸಾಂಪ್ರದಾಯಿಕ ಕರಕುಶಲತೆ - ಇವೆಲ್ಲವನ್ನೂ ಒಂದು ಜೀವಂತ ಅನುಭವವಾಗಿ ಕಟ್ಟಿಕೊಡುವುದು. ಪ್ರವಾಸಿಯು ಬರೀ ವೀಕ್ಷಕನಾಗಿ ಉಳಿಯದೆ, ಒಂದು ದಿನ ಆ ಜೀವನಕ್ರಮದ ಭಾಗವಾಗುವಂತೆ ಮಾಡುವುದು. ಅವನಿಗೆ ಕಥೆ ಹೇಳುವುದು, ಆ ಕಥೆಯ ಹಿಂದಿನ ತತ್ತ್ವ ಅರ್ಥ ಮಾಡಿಸುವುದು. ಇದಕ್ಕೆ ಬೇಕಿರುವುದು ಕೇವಲ ರಸ್ತೆ, ಹೊಟೇಲ್ ಅಲ್ಲ - ಸ್ಥಳೀಯ ಕಥೆಗಾರರು, ಗುರುಗಳು, ಅರ್ಚಕರು, ಕುಶಲಕರ್ಮಿಗಳನ್ನು ಈ ವ್ಯವಸ್ಥೆಯ ಕೇಂದ್ರಬಿಂದುವಾಗಿ ಮಾಡುವುದು.

ಇದನ್ನು ಮಾಡದಿದ್ದರೆ ನಷ್ಟ ಯಾರಿಗೆ? ನಮಗೇ. ನಮ್ಮ ಪರಂಪರೆಯನ್ನು ನಾವೇ ಸರಿಯಾಗಿ ಪ್ರಸ್ತುತಪಡಿಸದಿದ್ದರೆ, ಜಗತ್ತು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತದೆ ಅಥವಾ ಅರ್ಧಂಬರ್ಧ ತಿಳಿದುಕೊಂಡು ಹೋಗುತ್ತದೆ. ಪ್ರತಿ ವರ್ಷ ಲಕ್ಷಾಂತರ ಜನ ಭಾರತಕ್ಕೆ ಬಂದು ಹೋಗುತ್ತಾರೆ, ಆದರೆ ಅವರಲ್ಲಿ ಎಷ್ಟು ಜನಕ್ಕೆ ನಿಜವಾಗಿ ಈ ನೆಲದ ಆತ್ಮ ಅರ್ಥವಾಗಿದೆ? ಈ ಪ್ರಶ್ನೆ ನಾವು ಕೇಳಿಕೊಳ್ಳಬೇಕಾದ ಕಾಲ ಬಂದಿದೆ. ಇಂಡಿಕ್ ಮಾದರಿಯ ಪ್ರವಾಸೋದ್ಯಮ ಅಳವಡಿಸಿಕೊಳ್ಳುವುದು ಆರ್ಥಿಕ ಲಾಭಕ್ಕಿಂತ ಮಿಗಿಲಾಗಿ, ನಮ್ಮ ಗುರುತನ್ನು ನಾವೇ ಹೇಳಿಕೊಳ್ಳುವ ಒಂದು ಅವಕಾಶ. ಇಲ್ಲದಿದ್ದರೆ ನಮ್ಮ ಗಂಗೆ, ನಮ್ಮ ಬೆಟ್ಟ, ನಮ್ಮ ಆರತಿ ಎಲ್ಲವೂ ಬರೀ ’ಇನ್‌ಸ್ಟಾಗ್ರಾಮ್ ಬ್ಯಾಗ್ರೌಂಡ್’ ಆಗಿ ಉಳಿದುಬಿಡುತ್ತವೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!