Tuesday, April 14, 2026
Tuesday, April 14, 2026

ಬಿಸಿಲಿನಲ್ಲೂ ಹಿತ ನೀಡಿ ಸ್ವಾಗತಿಸುವ ಸಿಂಗಾರ ಚೆನ್ನೈ

ಬೆಂಗಳೂರಿಗೆ ಬಹಳ ಹತ್ತಿರ ಇರುವ ಕಡಲ ಕಿನಾರೆ ಎಂದರೆ ಚೆನ್ನೈ. ಒಂದು ಮಹಾನಗರದಿಂದ ಮತ್ತೊಂದು ಮಹಾನಗರಕ್ಕೆ ಪ್ರವಾಸ ಹೋದರೆ ಏನಿರುತ್ತದೆ ಎಂಬುದು ಎಲ್ಲರೂ ಕೇಳುವ ಪ್ರಶ್ನೆ. ಆದರೂ ಮಹಾನಗರ ಮತ್ತು ಬೀಚ್ ಇರುವುದರಿಂದ ಅಲ್ಲಿಗೆ ಹೋಗೋಣ ಎಂದುಕೊಂಡು ಮಕ್ಕಳೊಟ್ಟಿಗೆ ಲಗೇಜ್ ಪ್ಯಾಕ್ ಮಾಡಿದ್ದಾಯಿತು. ವಿಮಾನ ಪಯಣಕ್ಕಿಂತ ಮಕ್ಕಳಿಗೆ ರೇಲ್ವೇ ಪ್ರಯಾಣ ಉತ್ತಮ ಅನ್ನಿಸಿತು. ಕಾಲಾಡಿಸೋದಕ್ಕೆ ಜಾಗ ಇರುತ್ತದೆ, ಲಗೇಜ್ ಮಿತಿ ಇರೋದಿಲ್ಲ ಮತ್ತು ರೈಲು ನಿಲ್ದಾಣ ಸಿಟಿ ಮಧ್ಯದಲ್ಲೇ ಇದೆ. ಹೀಗಾಗಿ ರೈಲು ಪ್ರಯಾಣ ಆಯ್ಕೆ ಮಾಡಿದೆವು.

- ಮೇಘನಾ ಸುಧೀಂದ್ರ

ಮಕ್ಕಳನ್ನು ಮತ್ತು ಲಗೇಜ್‌ಅನ್ನು ಹಿಡಿದುಕೊಂಡು ಒಬ್ಬರು ಪೋರ್ಟರ್ ಸಹಾಯವೂ ತೆಗೆದುಕೊಂಡು ನಾಲ್ಕು ದೊಡ್ಡವರು ಮತ್ತು ಎರಡು ಮಕ್ಕಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದ ಆರನೆಯ ಪ್ಲಾಟ್ಫಾರ್ಮ್ ನ ಹತ್ತಿ ಇಳಿಯೋದಕ್ಕೆ ಕ್ರಾಂತಿಯ ಕಿಚ್ಚು ಇರಲೇಬೇಕು. ಎಸ್ಕಲೇಟರ್ ಇದ್ದರೂ ಅದರಲ್ಲಿ ಹತ್ತಾರು ಲಗೇಜು, ಮಕ್ಕಳನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಕಠಿಣ. ಇನ್ನು ಬಗ್ಗಿಗಳನ್ನ ಬುಕ್ ಮಾಡುವ ಯಾವ ಸೌಕರ್ಯವೂ ಅಲ್ಲಿ ಲಭ್ಯವಿರಲ್ಲಿಲ್ಲ. ಹೋಗೋವಾಗಲೇ ಒಂದು ಸುಸ್ತು ಕಾಡಿದ ಮೇಲೆ ರೇಲ್ವೇ ಡಿಪಾರ್ಟ್ಮೆಂಟಿಗೆ ಪತ್ರ ಬರೆಯೋಣ ಎಂದು ಅನ್ನಿಸಿತ್ತು. ಸಾಮಾನ್ಯ ಜನರ ಅಳಲನ್ನು ಕೇಳುತ್ತದೆಯೇ ಎಂಬ ಗೊಂದಲ ಕಾಡಿದ್ದಂತೂ ಸತ್ಯ.

ವಂದೇ ಭಾರತ್ ರೈಲು ಮೈಸೂರಿನಿಂದ ಚೆನ್ನೈಗೆ ಹೋಗುತ್ತದೆ. ಮಧ್ಯದ ಸ್ಟಾಪ್‌ ಬೆಂಗಳೂರು. ಮೂರರಿಂದ ಐದು ನಿಮಿಷ ನಿಲ್ಲಿಸುತ್ತದೆ. ಇದು ರೇಲ್ವೇ ಡಿಪಾರ್ಟ್ಮೆಂಟ್‌ನ ಟೈಮ್ ಟೇಬಲ್‌ಗೆ ಹೊಂದುವಂತೆ ಮಾಡಿರಬಹುದು. ಆದರೆ, ಇದು ಸಾಮಾನ್ಯ ಜನರಿಗೆ ಬಹಳ ಅನಾನುಕೂಲ. ಮಕ್ಕಳು, ಹತ್ತಾರು ಲಗೇಜು ಇರುವವರು ಬಹಳ ಸಮಯೋಚಿತವಾಗಿ ಲಗೇಜನ್ನು ಒಳಹಾಕಿ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಮಕ್ಕಳು ೨ ವರ್ಷಕ್ಕಿಂತ ದೊಡ್ಡವರಾದರೆ ಅವರಿಗೆ ಒಂದೊಂದು ಸೀಟ್ ಬುಕ್ ಮಾಡೋದು ಬಹಳ ಮುಖ್ಯ. ನಾರ್ಮಲ್ ಟ್ರೈನ್‌ಗಳಿಗಿರುವಷ್ಟು ಲೆಗ್ ಸ್ಪೇಸ್ ಇಲ್ಲಿರುವುದಿಲ್ಲ. ಹಾಗಾಗಿ ಮಕ್ಕಳನ್ನು ತೊಡೆಯ ಮೇಲೆ ಕೂರಿಸಿಕೊಳ್ಳುವುದಕ್ಕಿಂತ ಅವರ ಸೀಟ್ ಕೊಡುವುದೇ ಉತ್ತಮ.

New Project (27)

ಬೆಸೆಂಟ್‌ ನಗರ ಬೀಚ್‌

ನಾಲ್ಕೂವರೆ ಗಂಟೆಯ ಪ್ರಯಾಣದಲ್ಲಿ ಮಕ್ಕಳು ಹೊಸ ಪ್ರಪಂಚವನ್ನೇ ಕಂಡರು. ಅಲ್ಲಿದ್ದ ಎಷ್ಟೋ ಜನರನ್ನು ಅವರೇ ಮಾತಾಡಿಸಿದರು. ಮಜಾ ಮಾಡಿದರು. ಮಕ್ಕಳಿರುವವರು ಮತ್ತು ಹೊರಗಡೆ ತಿನ್ನೋದಿಲ್ಲ ಅನ್ನೋದಾದರೆ ಏರ್ ಬಿಎನ್‌ಬಿ ವಾಸ್ತವ್ಯಕ್ಕೆ ಒಳ್ಳೆಯ ಆಪ್ಷನ್.

ನಾವು ಹೋದ ಮೊದಲ ಜಾಗ ಬೆಸೆಂಟ್ ನಗರ ಬೀಚ್. ಅತ್ಯಂತ ಸುಂದರವಾದ ಮತ್ತು ಶುಚಿಯಾದ ಜಾಗ. ಮಕ್ಕಳು ಮೊದಲ ಬಾರಿ ಸಮುದ್ರ ನೋಡಿದ್ದು. ‘ಇಷ್ಟು ದೊಡ್ಡದಾಗಿದೆ’ ಎಂದು ಅವರು ಕೈ ಅಗಲ ಮಾಡಿದರೂ ಅದಕ್ಕಿಂತ ದೊಡ್ಡ ಜಾಗ. ಅಲೆಗಳು ಕಾಲು ಹತ್ತಿರ ಬಂದಿದ್ದು ಅವರಿಗೆ ಒಮ್ಮೆ ಭಯ, ಒಮ್ಮೆ ಆಶ್ಚರ್ಯ, ಒಮ್ಮೆ ಖುಷಿ ಎಲ್ಲವೂ ಆಯಿತು. ಆಟದ ಮೈದಾನದಲ್ಲಿ ಮಾತ್ರ ಮರಳು ನೋಡಿದ ಮಕ್ಕಳಿಗೆ ಇಷ್ಟು ದೊಡ್ಡ ಜಾಗದಲ್ಲಿ ಮರಳಿದೆ ಎಂಬುದೇ ಅವರಿಗೆ ತುಂಬಾ ಖುಷಿಯಾಯಿತು. ಬೆಂಗಳೂರಿನ ಬಿಸಿಲಿನ ಹಾಗೆ ಕಡಲ ಕಿನಾರೆಯ ಬಿಸಿಲ್ಲಲ್ಲ. ಆ ಬಿಸಿಲ ಮೊದಲ ಅನುಭವ ಮಕ್ಕಳಿಗೆ ಚೆನ್ನೈನಲ್ಲಿ ಆಯಿತು.

New Project (24)

ಕಪಾಲೀಶ್ವರ ದೇವಸ್ಥಾನ

ನಂತರ ಮೈಲಾಪುರದ ಕಪಾಲೀಶ್ವರ ದೇವಸ್ಥಾನಕ್ಕೆ ಹೋದೆವು. ದ್ರಾವಿಡ ಶೈಲಿಯ ವಾಸ್ತುಶಿಲ್ಪದ ಭವ್ಯತೆಗೆ ಸಾಕ್ಷಿಯಾದ ಜಾಗವದು. ಎತ್ತರದ ಗೋಪುರ, ಅಲ್ಲಿನ ಕೆತ್ತನೆಗಳು ಮಕ್ಕಳ ಕಣ್ಣಿಗೂ ಸೋಜಿಗ ತಂದವು. ದೇವಸ್ಥಾನದ ಪ್ರಶಾಂತತೆ ಮತ್ತು ಅಲ್ಲಿನ ಸಂಪ್ರದಾಯದ ಸೊಗಡು ಮನಸ್ಸಿಗೆ ನೆಮ್ಮದಿ ನೀಡಿತು. ಸಿಟಿ ಮಧ್ಯದಲ್ಲಿ ಬೃಹದಾಕಾರದ ಜಾಗ ಅಥವಾ ಲಂಗ್ ಸ್ಪೇಸ್ ಇದ್ದಿದ್ದು ಆಶ್ಚರ್ಯವಾಯಿತು. ಸೋಮವಾರದ ಪ್ರದೋಷ ಪೂಜೆ ಮೊದಲ ಬಾರಿಗೆ ಕಂಡೆವು. ಸೂರ್ಯನ ಕಿರಣ ಲಿಂಗದ ಮೇಲೆ ಬೀಳುವವರೆಗೆ ಭಕ್ತರು ಕಾದು ನಿಂತಿದ್ದರು. ಬಿಸಿಲಿದ್ದರೂ, ದೇವಸ್ಥಾನದ ಕಲ್ಲಿನ ನೆಲದ ಮೇಲಿನ ಆ ತಂಪು ಮತ್ತು ಅಲ್ಲಿನ ಗಾಳಿ ನಮ್ಮೆಲ್ಲಾ ಆಯಾಸವನ್ನು ಪರಿಹರಿಸಿತು. ಅಲ್ಲಿಂದ ಹೊರಬರುವಾಗ ಮನಸ್ಸು ಹಗುರವಾಗಿತ್ತು, ಹೊಟ್ಟೆಗೆ ಮೈಲಾಪುರದ ಪ್ರಸಿದ್ಧ ಫಿಲ್ಟರ್ ಕಾಫಿಯ ಆಸೆಯೂ ಇತ್ತು!

ಉಡುಪಿ ಜಿಲ್ಲೆಯಲ್ಲಿರುವ ಅತ್ಯದ್ಭುತ ಬೀಚ್‌ಗಳಿವು

ರಾತ್ರಿ ಪ್ರಸಿದ್ಧ ಮರೀನಾ ಬೀಚ್‌ಗೆ. ಸೂರ್ಯ ಮುಳುಗಿದ ಮೇಲೆ ಚೆನ್ನೈನ ಮೈ ಮೇಲೆ ತಂಪು ಗಾಳಿ ಬೀಸಲು ಶುರುವಾಗುತ್ತದೆ. ಆಗಲೇ ಈ ಬೀಚ್‌ನ ಅಸಲಿ ಸೌಂದರ್ಯ ಅನಾವರಣಗೊಳ್ಳುವುದು. ದೂರದಿಂದಲೇ ಸಮುದ್ರದ ಮೊರೆತದ ಸದ್ದು ಕೇಳಿಸುತ್ತಿದ್ದರೆ, ಹತ್ತಿರ ಹೋದಂತೆ ಅಲ್ಲಿನ ದೀಪಾಲಂಕಾರಗಳು ಒಂದು ದೊಡ್ಡ ಜಾತ್ರೆಯ ಕಳೆಯನ್ನು ನೀಡಿದ್ದವು. ರಾತ್ರಿ 9 ಗಂಟೆಯಾದರೂ ಅಲ್ಲಿನ ಉತ್ಸಾಹ ಕುಂದಿರಲಿಲ್ಲ. ಕುದುರೆ ಸವಾರಿ ಮಾಡುವವರು, ಗಾಳಿಪಟ ಹಾರಿಸುವವರು, ಮತ್ತು ಕುಟುಂಬದವರೊಡನೆ ಹರಟೆ ಹೊಡೆಯುವವರಿಂದ ಆ ತೀರ ಜೀವಂತವಾಗಿತ್ತು. ನಗರದ ಗಡಿಬಿಡಿಯ ಬದುಕಿನ ನಡುವೆ, ಪ್ರಕೃತಿಯ ಈ ಬೃಹತ್ ರೂಪದ ಎದುರು ನಾವು ಎಷ್ಟು ಚಿಕ್ಕವರು ಎಂದು ಅರಿವಾಯಿತು.

New Project (25)

ಪಾರ್ಥಸಾರಥಿ ದೇವಾಲಯ

ಮದ್ರಾಸ್ ಕ್ರೊಕೊಡೈಲ್ ಬ್ಯಾಂಕ್ ಇರುವುದು ನಗರದಿಂದ ತುಸು ದೂರದ ಮಹಾಬಲಿಪುರಂ ರಸ್ತೆಯಲ್ಲಿ. ಅಲ್ಲಿಗೆ ಹೋಗಿ ಬರಲು ಬೇಕಾಗುವ ಸಮಯ ಮತ್ತು ಮಕ್ಕಳ ಆಯಾಸವನ್ನು ಲೆಕ್ಕ ಹಾಕಿ, ನಾವು ಆ ಯೋಜನೆಯನ್ನು ಕೈಬಿಟ್ಟೆವು. ಆದರೆ ʼಮೊಸಳೆʼ ನೋಡಲಾಗಲಿಲ್ಲ ಎಂಬ ಬೇಸರ ಮಕ್ಕಳಲ್ಲಿ ಇರಬಾರದೆಂದು, ಟ್ರಿಪ್ಲಿಕೇನ್‌ನಲ್ಲಿರುವ ಭವ್ಯ ಪಾರ್ಥಸಾರಥಿ ದೇವಸ್ಥಾನಕ್ಕೆ ಹೋದೆವು.

ಪುರಾಣದ ಕಥೆಯ ಪ್ರಕಾರ, ಗಜೇಂದ್ರ ಮೋಕ್ಷದ ಪ್ರಸಂಗದಲ್ಲಿ ಮೊಸಳೆಯ ಹಿಡಿತದಲ್ಲಿದ್ದ ಆನೆಗೆ ಮುಕ್ತಿ ನೀಡಲು ಸುದರ್ಶನ ಚಕ್ರವನ್ನು ಬಿಟ್ಟವನು ಇದೇ ಮಹಾವಿಷ್ಣು. ಹೀಗಾಗಿ ಮಕ್ಕಳಿಗೂ ಒಂದು ಪುರಾಣದ ಕಥೆ ಹೇಳುತ್ತಾ, ಮೊಸಳೆಯ ಉಲ್ಲೇಖವಿರುವ ಈ ಐತಿಹಾಸಿಕ ತಾಣಕ್ಕೆ ಕರೆದೊಯ್ದೆವು. ಪಾರ್ಥಸಾರಥಿ ದೇವಸ್ಥಾನಕ್ಕೆ ಕಾಲಿಡುತ್ತಿದ್ದಂತೆ ನಮಗೆ ಕಂಡಿದ್ದು ಎಂಟನೆಯ ಶತಮಾನದ ಪಲ್ಲವರ ಕಾಲದ ಅದ್ಭುತ ಶಿಲ್ಪಕಲೆ. ಇಲ್ಲಿ ಕೃಷ್ಣನು ಅರ್ಜುನನ ಸಾರಥಿಯಾಗಿ 'ಪಾರ್ಥಸಾರಥಿ' ರೂಪದಲ್ಲಿ ನೆಲೆಸಿದ್ದಾನೆ. ವಿಶೇಷವೆಂದರೆ, ಇಲ್ಲಿನ ವಿಗ್ರಹದ ಮುಖದ ಮೇಲೆ ಯುದ್ಧದ ಸಮಯದಲ್ಲಿ ಆದ ಬಾಣದ ಗುರುತುಗಳನ್ನು ಕಾಣಬಹುದು! ಇದು ಮಕ್ಕಳಿಗೆ ಆಶ್ಚರ್ಯ ತಂದಿತು. ಸಾಮಾನ್ಯವಾಗಿ ಶಾಂತ ರೂಪದ ವಿಷ್ಣುವನ್ನು ನೋಡುವ ನಮಗೆ, ಇಲ್ಲಿ ಮೀಸೆ ಇರುವ ಕೃಷ್ಣನ ವಿಗ್ರಹ ನೋಡುವುದು ಅಪರೂಪದ ಅನುಭವ.

ಎಲ್ಲವೂ ಚೆನ್ನ..ಆದರೆ

ಎಲ್ಲವೂ ಚೆನ್ನಾಗಿದೆ ಎನ್ನುವ ಈ ಸಿಂಗಾರ ಚೆನ್ನೈನಲ್ಲಿ, ನಾಣ್ಯದ ಇನ್ನೊಂದು ಮುಖವೆಂದರೆ ಅಲ್ಲಿನ ಸಾರಿಗೆ ವ್ಯವಸ್ಥೆಯ ಕಿರಿಕಿರಿ. ಪ್ರವಾಸಿಗರಿಗೆ, ವಿಶೇಷವಾಗಿ ತಮಿಳು ಬಾರದವರಿಗೆ ಅಲ್ಲಿನ ಆಟೋ ಮತ್ತು ಕ್ಯಾಬ್ ಚಾಲಕರು ಮಾಡುವ ಮೋಸ ಅಷ್ಟಿಷ್ಟಲ್ಲ! ಓಲಾ ಅಥವಾ ಊಬರ್ ಆಪ್‌ಗಳಲ್ಲಿ ದರ ನಿಗದಿಯಾಗಿದ್ದರೂ, ಹೆಚ್ಚಿನ ಹಣ ಕೇಳುವುದು ಅಲ್ಲಿ ಅಲಿಖಿತ ನಿಯಮವಾದಂತಿದೆ. ನಾವು ಎಷ್ಟೇ ವಾದ ಮಾಡಿದರೂ, ʼಬೇಡ ಎಂದರೆ ಇಳಿಯಿರಿʼ ಎಂಬ ಉಡಾಫೆಯ ಉತ್ತರ ಸಿದ್ಧವಾಗಿರುತ್ತದೆ. ಮಕ್ಕಳನ್ನು, ಲಗೇಜನ್ನು ಹಿಡಿದುಕೊಂಡು ಬಿಸಿಲಿನಲ್ಲಿ ನಿಂತಿರುವ ನಮಗೆ ಬೇರೆ ದಾರಿಯಿಲ್ಲದೆ ಅವರು ಕೇಳಿದಷ್ಟು ಕೊಡುವುದು ಅನಿವಾರ್ಯವಾಗುತ್ತದೆ. ಬೆಂಗಳೂರಿನ ಆಟೋದವರ ಬಗ್ಗೆ ನಾವು ದೂರು ನೀಡುತ್ತೇವೆ ನಿಜ, ಆದರೆ ಚೆನ್ನೈನ ಈ ಅನುಭವದ ಮುಂದೆ ನಮ್ಮೂರು ಎಷ್ಟೋ ವಾಸಿ ಎನಿಸಿತು.

New Project (26)

ಇನ್ನು ಶಾಪಿಂಗ್ ವಿಚಾರಕ್ಕೆ ಬಂದರೆ, ಟಿ.ನಗರದ ರಂಗನಾಥನ್ ಸ್ಟ್ರೀಟ್ ಮತ್ತು ಪಾಂಡಿ ಬಜಾರ್‌ಗಳು ಬಣ್ಣದ ಲೋಕಗಳು. ಆದರೆ ಈ ಹೊಳೆಯುವ ಬಟ್ಟೆಬರೆ ಮತ್ತು ಆಭರಣಗಳ ನಡುವೆ ಹೊರಗಿನವರನ್ನು ಏಮಾರಿಸುವ ಜಾಣ್ಮೆ ಅಲ್ಲಿನ ವ್ಯಾಪಾರಿಗಳಿಗೆ ಸಿದ್ದಿಸಿದೆ. ಅಲ್ಲಿನ ಜನಜಂಗುಳಿಯ ಲಾಭ ಪಡೆದು, ಗುಣಮಟ್ಟವಿಲ್ಲದ ವಸ್ತುಗಳನ್ನು ಅತಿ ಹೆಚ್ಚಿನ ದರಕ್ಕೆ ಮಾರುವ ಚಾಳಿ ಕೆಲವರಲ್ಲಿದೆ. ಚೆನ್ನೈನ ಬೀಚ್, ದೇವಸ್ಥಾನಗಳು ಮನಸ್ಸಿಗೆ ಮುದ ನೀಡಿದರೆ, ಈ ಸಾರಿಗೆ ಮತ್ತು ಶಾಪಿಂಗ್ ಅನುಭವಗಳು ಮಾತ್ರ ಪ್ರವಾಸದ ಕೊನೆಯಲ್ಲಿ ಒಂದು ರೀತಿಯ ಬೇಸರ ಮೂಡಿಸಿತು.

ಚೆನ್ನೈ ನಮಗೆ ಸಿಹಿ-ಕಹಿಯ ಅನುಭವಗಳ ಸಮ್ಮಿಶ್ರಣ ನೀಡಿತು. ಕೇವಲ 350 ಕಿಲೋಮೀಟರ್ ದೂರವಿರುವ, ರೈಲಿನಲ್ಲಿ ಗರಿಷ್ಠ 5-6 ಗಂಟೆಗಳ ಪ್ರಯಾಣದಲ್ಲಿ ಸಿಗುವ ಈ ಪಕ್ಕದ ರಾಜ್ಯದ ರಾಜಧಾನಿ ನಮಗಿಂತ ಅದೆಷ್ಟು ಭಿನ್ನ ಅನ್ನಿಸಿತು. ಬೆಂಗಳೂರಿನ ತಂಪು ಗಾಳಿ, ಮಂದ ಬಿಸಿಲಿಗೆ ಒಗ್ಗಿಕೊಂಡ ನಮಗೆ ಚೆನ್ನೈನ ಹ್ಯುಮಿಡಿಟಿ ಮತ್ತು ಸುಡುವ ಬಿಸಿಲು ಮೊದಲಿಗೆ ಬೆಚ್ಚಿ ಬೀಳಿಸಿತು. ಆದರೆ ಅದೇ ಬಿಸಿಲ ನಡುವೆ ಅಲ್ಲಿನ ಜನರ ಸಂಪ್ರದಾಯ ನಿಷ್ಠೆ, ದೇವಸ್ಥಾನಗಳ ಭವ್ಯತೆ ಮತ್ತು ಅಲೆಗಳ ಅಬ್ಬರ ನಮ್ಮನ್ನು ಸೆಳೆಯಿತು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ