- ಗೊರೂರು ಅನಂತರಾಜು, ಹಾಸನ

ಗಾಂಧೀಜಿಯವರ ಆತ್ಮ ಕಥೆ-ನನ್ನ ಸತ್ಯಾನ್ವೇಷಣೆ ಪುಸ್ತಕ ಓದುತ್ತಿದ್ದೆ. ನಾವು ಗುಜರಾತ್ ಪ್ರವಾಸ ಹೋಗಿ ಬಂದು ಆಗಲೇ ನಾಲ್ಕು ವರ್ಷಗಳು ಕಳೆದಿವೆ. ನಮ್ಮ ಅಕ್ಕ-ಬಾವನವರು ಗುಜರಾತ್ ಪ್ರವಾಸ ಪ್ರಸ್ತಾಪಿಸಿದಾಗ ಆ ಪ್ರವಾಸಿ ಪಟ್ಟಿಯಲ್ಲಿ ನನ್ನನ್ನು ಆಕರ್ಷಿಸಿದ್ದು ಒಂದು ದ್ವಾರಕ ಮತ್ತೊಂದು ಪೋರ್‌ ಬಂದರ್. ಮಹಾಭಾರತ ಕಥೆ ಓದಿದ್ದು ಟಿವಿ ದಾರಾವಾಹಿ ನೋಡಿದ್ದು ದ್ವಾರಕಾ ನೋಡಲು ಆಸಕ್ತಿ ಮೂಡಿಸಿದ್ದರೆ ಗಾಂಧೀಜಿಯವರ ಜನ್ಮಸ್ಥಳ ವೀಕ್ಷಣೆಗೆ ಅವರ ಆತ್ಮಕಥೆ ಪ್ರೇರಣೆ ಆಗಿತ್ತು. ಗಾಂಧೀಜಿಯವರ ಆತ್ಮಕಥೆ ಓದುತ್ತಾ ನಮ್ಮ ಪ್ರವಾಸದ ನೆನಪು ಮರುಕಳಿಸಿತು.

ಇದನ್ನೂ ಓದಿ: ಸುಡು ಬಿಸಿಲನಲ್ಲೂ ತಂಪಾಗಿರುವ ಬೊರ್ರಾ ಗುಹೆ

ಪೋರ್‌ ಬಂದರ್ ಜುನಾಗಡ ಜಿಲ್ಲೆಯ ಒಂದು ರೇವು ಪಟ್ಟಣ. ಇಲ್ಲೇ ಮಹಾತ್ಮಗಾಂಧಿ ಜನಿಸಿದ್ದು. ಇದು ಜೇತ್ವಾ ರಜಪೂತರ ನಿಯಂತ್ರಣದಲ್ಲಿತ್ತು. ಬ್ರಿಟಿಷರು ಸ್ಥಾಪಿಸಿದ ಕಾಠಿಯಾವಾಡ ಸಂಸ್ಥಾನಗಳಲ್ಲಿ ಪೋರ್‌ಬಂದರ್ ಸಹ ಪ್ರಮುಖವಾದುದು. ಭಾರತ ಸ್ವಾತಂತ್ರ್ಯದ ನಂತರ ಮುಂಬೈ ಪ್ರಾಂತಕ್ಕೆ ಸೇರಿದ್ದ ಇದು ಮುಂದೆ 1960ರಲ್ಲಿ ಗುಜರಾತ್ ಪ್ರತ್ಯೇಕ ರಾಜ್ಯವಾದಾಗ ಅದರ ಭಾಗವಾಯಿತು. ಇದನ್ನು ಸುಧಾಮನಗರ ಎಂದೂ ಕರೆಯಲಾಗುತ್ತದೆ.

Untitled design - 2026-05-07T114419.378

ಕೀರ್ತಿ ತಂದ ಮಂದಿರ:

ಕೀರ್ತಿಮಂದಿರವು ಮಹಾತ್ಮಗಾಂಧಿಯವರು ಜನಿಸಿರುವ ಪೋರಬಂದರ್ ನಗರದಲ್ಲಿರುವ ಒಂದು ವಸ್ತು ಸಂಗ್ರಹಾಲಯ. ಈ ವಸ್ತು ಸಂಗ್ರಹಾಲಯದಲ್ಲಿ ಗಾಂಧೀಜಿಯವರು ಬಳಸಿದ ವಸ್ತುಗಳು, ಗಾಂಧೀಜಿ ಹಾಗೂ ಕಸ್ತೂರಬಾ ಅವರ ಹಲವು ಹಳೆಯ ಛಾಯಾಚಿತ್ರಗಳಿವೆ. ಗಾಂಧೀಜಿಯವರು ಬರೆದಿರುವ ಹಾಗೂ ಅವರ ತತ್ವಗಳಿಗೆ ಸಂಬಂಧಿಸಿದ ಪುಸ್ತಕಗಳ ಗ್ರಂಥಾಲಯವಿದೆ. ವಸ್ತು ಸಂಗ್ರಹಾಲಯದ ಮೂಲಕ ಗಾಂಧೀಜಿಯವರ ಪೂರ್ವಜರ ಮನೆಗೆ ಪ್ರವೇಶಿಸಬಹುದು. ಗಾಂಧೀಜಿಯವರನ್ನು 1944ರಲ್ಲಿ ಬ್ರಿಟಿಷರು ಆಗಾಖಾನ್ ಅರಮನೆಯಿಂದ ಕೊನೆಯ ಬಾರಿಗೆ ಬಿಡುಗಡೆ ಮಾಡಿದಾಗ ಪೋರ್ ಬಂದರ್‌ನ ಸ್ಥಳೀಯರು ಅವರ ಜನ್ಮಸ್ಥಳದಲ್ಲಿ ಸ್ಮಾರಕವನ್ನು ನಿರ್ಮಿಸಲು ಯೋಚಿಸಿ ಗಾಂಧಿಯವರ ಲಿಖಿತ ಒಪ್ಪಿಗೆ ಪಡೆದರು. ಈ ಮನೆಯೂ ಈಗ ಕೀರ್ತಿ ಮಂದಿರ ಸಂಕೀರ್ಣದ ಒಂದು ಭಾಗವಾಗಿದೆ. ಮೂಲ ಮೂರು ಅಂತಸ್ತಿನ ಮನೆಯನ್ನು ಹವೇಲಿಯಂತೆ (ಉಪ್ಪರಿಗೆ ಮನೆ) ನಿರ್ಮಿಸಲಾಗಿದೆ. ಇದನ್ನು 17ನೇ ಶತಮಾನದಲ್ಲಿ ಗಾಂಧೀಜಿ ಮುತ್ತಜ್ಜ ಹರಜೀವನ್ ರೈದಾಸ್ ಗಾಂಧಿ ಖರೀದಿಸಿದ್ದರು. ಗಾಂಧಿಯವರ ತಂದೆ ಕರಮ್‌ಚಂದ ಗಾಂಧಿ, ಚಿಕ್ಕಪ್ಪ ತುಳಸಿದಾಸ ಗಾಂಧಿ ಮತ್ತು ಅಜ್ಜ ಉತ್ತಮ್ ಚಂದ್ ಗಾಂಧಿ ಇಲ್ಲಿ ವಾಸಿಸುತ್ತಿದ್ದರು.

1997ರಲ್ಲಿ ಗಾಂಧೀಜಿ ಬದುಕಿರುವಾಗಲೇ ದರ್ಬಾರ್ ಗೋಪಾಲ್‌ದಾಸ್ ದೇಸಾಯಿ ಅವರು ಕೀರ್ತಿ ಮಂದಿರಕ್ಕೆ ಅಡಿಪಾಯ ಹಾಕಿದರು. ಮನೆಯನ್ನು ಖರೀದಿಸಲು ಮತ್ತು ವಸ್ತು ಸಂಗ್ರಹಾಲಯವನ್ನು ನಿರ್ಮಿಸಲು ನಂಜಿಬಾಯಿ ಕಾಳಿದಾಸ ಮೆಹ್ತಾ ಅವರು ಧನ ದಾನ ಮಾಡಿದ್ದರು. ಈ ಸ್ಮಾರಕವು 1950ರಲ್ಲಿ ಪೂರ್ಣಗೊಂಡು ಅಂದಿನ ಗೃಹ ಸಚಿವರು ಸರ್ದಾರ್ ವಲ್ಲಭಬಾಯಿ ಪಟೇಲರು ತಾ. 27-5-1950ರಲ್ಲಿ ಇದನ್ನು ಉದ್ಘಾಟಿಸಿ ಇದನ್ನು ಬಾರತ ಸರ್ಕಾರಕ್ಕೆ ನೀಡಲಾಯಿತು.

Untitled design - 2026-05-07T114406.879

ಕೀರ್ತಿಮಂದಿರ 74 ಅಡಿ ಎತ್ತರವಾಗಿದೆ. ಇದು ಗಾಂಧೀಜಿಯವರ ಜೀವನದ 79 ವರ್ಷಗಳನ್ನು ಪ್ರತಿನಿಧಿಸುತ್ತದೆ. ಹಿಂದೂ, ಬೌದ್ಧ, ಜೈನ ಮತ್ತು ಪಾರ್ಸಿ ದೇವಾಲಯಗಳ ವಾಸ್ತುಶಿಲ್ಪದ ಅಂಶಗಳನ್ನು ಚರ್ಚ್ ಮತ್ತು ಮಸೀದಿಯನ್ನು ಒಳಗೊಂಡಿದೆ. ಗಾಂಧೀಜಿ ಮತ್ತು ಕಸ್ತೂರಬಾ ಅವರ ಅಳೆತ್ತರದ ತೈಲ ವರ್ಣಚಿತ್ರಗಳು ಇಲ್ಲಿವೆ. ಮಗನ್ ಲಾಲ್ ಮತ್ತು ಮಹಾದೇವ ದೇಸಾಯಿ ಅವರ ಸ್ಮಾರಕಗಳ ಎರಡು ಕೊಠಡಿಗಳು, ಕೋಣೆ ವಸ್ತು ಸಂಗ್ರಹಾಲಯದ ಕೊಠಡಿಗಳಲ್ಲಿ ಖಾದಿ ಭಂಡಾರದ ವಸ್ತುಗಳು ಪುಸ್ತಕ ಮಾರಾಟ ಕೇಂದ್ರವಿದೆ. ಕೀರ್ತಿ ಮಂದಿರದಲ್ಲಿ ಗಾಂಧೀಜಿ ಹುಟ್ಟಿದ ಸ್ಥಳವನ್ನು ಗುರುತಿಸಲು ಸ್ವಸ್ತಿಕ್ ಚಿಹ್ನೆಯಿಂದ ದಾಖಲಿಸಲಾಗಿದೆ.

ದಾರಿ ಹೇಗೆ:

ಬೆಂಗಳೂರಿನಿಂದ ಪೋರಬಂದರ್‌ಗೆ ವಿಮಾನ ಅಥವಾ ಟ್ರೈನ್‌ ಅಲ್ಲಿ ಪ್ರಯಾಣ ಮಾಡಬಹುದು. ಅಲ್ಲಿಂದ ಟ್ಯಾಕ್ಸಿ ಹಿಡಿದು ಕೀರ್ತಿ ಮಂದಿರಕ್ಕೆ ಪ್ರಯಾಣ ಬೆಳೆಸಬಹುದು. ರಸ್ತೆ ಮೂಲಕ ಸುಮಾರು 31 ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ.

ಮಾಹಿತಿ ಪೆಟ್ಟಿಗೆ:

*ಕೀರ್ತಿಮಂದಿರ 74 ಅಡಿ ಎತ್ತರವಾಗಿದೆ.

*ಗಾಂಧಿಜಿ ಹುಟ್ಟಿದ ಸ್ಥಳವನ್ನು ಗುರುತಿಸಲು ಸ್ವಸ್ತಿಕ್‌ ಚಿಹ್ನೆ ದಾಖಲಿಸಲಾಗಿದೆ.

ಲೇಖಕರು: ಸಾಹಿತಿ