ನೀವು ಮೈಸೂರಿನಲ್ಲಿದ್ದೀರಾ? ಈ ಫಾಲ್ಸ್‌ಗಳಿಗೆ ಒಮ್ಮೆ ಹೋಗಿ
ಈ ಉರಿ ಬಿಸಿಲಿನಲ್ಲಿ ಹೆಚ್ಚಿನ ಪ್ರವಾಸಿಗರು ಫಾಲ್ಸ್‌ಗಳಿಗೆ ಭೇಟಿಕೊಡುತ್ತಾರೆ. ಮೈಸೂರಿನಲ್ಲಿ ವಾಸವಿರುವವರಿಗೆ ಹತ್ತಾರು ಫಾಲ್ಸ್‌ಗಳು ತೀರಾ ಹತ್ತಿರದಲ್ಲಿದೆ. ಒಂದು ದಿನದ ಪಿಕ್ನಿಕ್‌ಗೆ ಹೋಗುವವರು ಈ ಫಾಲ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಇದು ಬೇಸಿಗೆಕಾಲ. ರಣ ಬಿಸಿಲಿನ ಝಳಕ್ಕೆ ಪ್ರತಿಯೊಬ್ಬರೂ ಸುಸ್ತಾಗಿ ಹೋಗಿದ್ದಾರೆ. ಹಾಗಂತ ಉಸ್ಸಪ್ಪಾ! ಎಂದುಕೊಂಡು ಮನೆಯಲ್ಲಿಯೇ ಕೂತು ಕಾಲ ಕಳೆಯಬಾರದು. ಜಗತ್ತು ನಮಗಾಗಿ ತಯಾರಿದೆ; ಕಣ್ಣು ತೆರೆದು ಜಗತ್ತಿನ ಅಷ್ಟೂ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು. ಸಾಮಾನ್ಯವಾಗಿ ಈ ಸುಡು ಬಿಸಿಲಿನಲ್ಲಿ ಪ್ರವಾಸಿಗರ ಆದ್ಯತೆ ಜಲಪಾತವೇ ಆಗಿರುತ್ತದೆ. ಫಾಲ್ಸ್‌ನಲ್ಲಿ ಧುಮ್ಮಿಕ್ಕುವ ನೀರಿನ ಕೆಳಗೆ ನಿಂತುಕೊಂಡು ತೊಯ್ದು ಹೋಗಲು ಬಯಸುತ್ತಾರೆ. ಜಲಪಾತದ ಕೆಳಗೆ ನಿಂತಾಗ ಪ್ರತಿಯೊಬ್ಬನೂ ತನ್ನನ್ನು ತಾನು ಮರೆಯುತ್ತಾನೆ. ಪ್ರಶಾಂತತೆಗೆ ಮೈಯೊಡ್ಡುತ್ತಾನೆ. ಜುಳುಜುಳು ಎಂದು ಹರಿಯುವ ನೀರೇ ಹಾಗೆ. ನೀರಿಗೆ ಹೀಲಿಂಗ್ ಪವರ್ ಇದೆ. ನೀರಿನಲ್ಲೂ ಥೆರಪಿಯ ಗುಣವಿದೆ. ಅದೆಲ್ಲಾ ಇರಲಿ; ನೀವು ಮೈಸೂರಿನವರಾ? ಈ ವೀಕೆಂಡ್‌ನಲ್ಲಿ ಎಲ್ಲಿಯಾದರೂ ಹೋಗುವ ಪ್ಲ್ಯಾನ್ ಇದ್ಯಾ? ಹಾಗಿದ್ದರೆ ಮೈಸೂರಿಗೆ ತೀರಾ ಹತ್ತಿರದಲ್ಲಿರುವ ಈ ಫಾಲ್ಸ್‌ಗಳಿಗೆ ಒಮ್ಮೆ ಹೋಗಿ ಬನ್ನಿ. ಬದುಕು ನಿಮ್ಮದು. ನೀವೇ ಸಂಭ್ರಮಿಸಬೇಕು!
ಇರುಪ್ಪು ಜಲಪಾತ
ಇರುಪ್ಪು(Iruppu) ಜಲಪಾತವು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ನೀರನ್ನು ಇಷ್ಟಪಡುವವರಿಗೆ ಈ ತಾಣ ಒಳ್ಳೆಯ ಅನುಭವವನ್ನು ನೀಡುತ್ತದೆ. ಕೊಡಗಿನ ಅಷ್ಟೂ ಸೌಂದರ್ಯವನ್ನು ಇರುಪ್ಪು ಜಲಪಾತವು ತನ್ನ ಮೈಗೆ ಮೆತ್ತಿಕೊಂಡಿದೆ. ಜಲಪಾತ ತಲುಪುವ ಹಾದಿಯೂ ರೋಚಕತೆಯಿಂದ ಕೂಡಿದೆ.
ಜಲಪಾತವು 170 ಅಡಿ ಎತ್ತರವಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಿಂದ ಸುಮಾರು 120 ಕಿಮೀ ದೂರದಲ್ಲಿದೆ. ಮಾನ್ಸೂನ್‌ನಲ್ಲಿ ಇರುಪ್ಪು ಜಲಪಾತವು ಅತ್ಯದ್ಭುತವಾಗಿ ಕಾಣುತ್ತದೆ. ಸಾಕಷ್ಟು ಕಡೆಯಿಂದ ಪ್ರವಾಸಿಗರು ರಿಲ್ಯಾಕ್ಸೇಷನ್‌ಗಾಗಿ ಮತ್ತು ಜಲಪಾತದ ಸೌಂದರ್ಯವನ್ನು ಸವಿಯಲಿಕ್ಕಾಗಿ ಇಲ್ಲಿಗೆ ಭೇಟಿ ಕೊಡುತ್ತಾರೆ. ಇನ್ನು ಪುರಾಣಗಳ ಪ್ರಕಾರ, ಲಕ್ಷ್ಮಣನು ಬೆಟ್ಟದ ಮೂಲಕ ಬಾಣವನ್ನು ಹೊಡೆದಾಗ, ಅದು ಈಗ ಲಕ್ಷ್ಮಣ ತೀರ್ಥ ಎಂದು ಕರೆಯಲ್ಪಡುವ ನದಿಯನ್ನು ಸೃಷ್ಟಿಸಿತು ಎನ್ನಲಾಗಿದೆ. ಇಲ್ಲಿಗೆ ಭೇಟಿ ನೀಡುವುದರಿಂದ ಪಾಪಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

ಅಬ್ಬೆ ಜಲಪಾತ
ಮೈಸೂರಿನಿಂದ 129 ಕಿ.ಮೀ ದೂರದಲ್ಲಿರುವ ಅಬ್ಬೆ(Abbe) ಜಲಪಾತವು 70 ಅಡಿ ಎತ್ತರದಲ್ಲಿದೆ. ಕರ್ನಾಟಕದ ಟಾಪ್ 10 ಸೌಂದರ್ಯ ಜಲಪಾತಗಳಲ್ಲಿ ಅಬ್ಬೆ ಜಲಪಾತವೂ ಒಂದು ಎನ್ನಲಾಗಿದೆ. ಮಳೆಗಾಲದಲ್ಲಿ ಅಪಾರ ಸಂಖ್ಯೆಯ ಪ್ರವಾಸಿಗರನ್ನು ಈ ಜಲಪಾತವು ಸೆಳೆಯುತ್ತದೆ. ಬಂಡೆಯ ಕೆಳಗೆ ಬೀಳುವ ಈ ಜಲಪಾತವು ಹಚ್ಚ ಹಸುರಿನ ನಡುವೆ ನೆಲೆಸಿದ್ದು ಫೋಟೊಗ್ರಫಿಯಲ್ಲಿ ಆಸಕ್ತಿಯಿರುವವರಿಗೆ ಬೆಸ್ಟ್ ಜಾಗವಾಗಿದೆ. ಜಲಪಾತಕ್ಕೆ ತಲುಪುವ ಜಾಗವು ಏಲಕ್ಕಿ, ಮೆಣಸು ಮತ್ತು ಇನ್ನಿತರ ಎಸ್ಟೇಟ್‌ಗಳಿಂದ ಕೂಡಿದೆ. ಟ್ರಿಪ್ ಪ್ಲ್ಯಾನ್ ಇದ್ದರೆ ಇಲ್ಲಿಗೆ ತಪ್ಪದೇ ಹೋಗಬಹುದು.

ಚುಂಚಿ ಜಲಪಾತ
ಚುಂಚಿ (Chunchi) ಜಲಪಾತವು ಕೂಡ ಪ್ರೇಕ್ಷಣೀಯ ಸ್ಥಳವಾಗಿದೆ. ಮೈಸೂರಿನಿಂದ ಸರಿ ಸುಮಾರು 97 ಕಿ.ಮೀ ದೂರದಲ್ಲಿರುವ ಈ ಜಲಪಾತವು 66 ಅಡಿ ಎತ್ತರವಿದೆ. ಮೈಸೂರಿನ ಜನರು ತಮ್ಮ ಕುಟುಂಬದ ಜೊತೆ ಒನ್ ಡೇ ಟ್ರಿಪ್‌ಗೆ ಹೋಗುವ ಪ್ಲ್ಯಾನ್ ಮಾಡಿದರೆ ಚುಂಚಿ ಜಲಪಾತಕ್ಕೆ ಹೋಗಬಹುದು. ಇದು ಅರ್ಕಾವತಿಯಿಂದ ಹುಟ್ಟಿ 100 ಅಡಿಗೂ ಹೆಚ್ಚು ಹರಿಯುತ್ತದೆ. ಈ ಹೆಸರು ಪುರಾತನ ಬುಡಕಟ್ಟು ದಂಪತಿಗಳಾದ ಚುಂಚ ಮತ್ತು ಚುಂಚಿಯಿಂದ ಬಂದಿದೆ ಎಂದು ನಂಬಲಾಗಿದೆ. ಈ ಜಲಪಾತವು ಹಚ್ಚ ಹಸುರಿನಿಂದ ಕೂಡಿದ್ದು, ಪಿಕ್ನಿಕ್‌ಗೆ ಹೇಳಿ ಮಾಡಿಸಿದ ತಾಣವಾಗಿದೆ. ಮಾನ್ಸೂನ್ ಅಥವಾ ಚಳಿಗಾಲದಲ್ಲಂತೂ ಚುಂಚಿ ಜಲಪಾತವು ಮೈದುಂಬಿ ಹರಿಯುತ್ತದೆ.
