ಪ್ರೈವೆಸಿ ಬಯಸುವವರಿಗೆ ಪ್ರವಾಸವಲ್ಲ! - ಸಂಜನಾ ಆನಂದ್
ಪ್ರವಾಸದಲ್ಲಿ ಓವರ್ ಸೈಸ್ಡ್ ಪ್ಯಾಂಟ್ಸ್ ಹಾಗೂ ಓವರ್ ಸೈಸ್ಡ್ ಟೀ ಶರ್ಟ್‌ಗಳಲ್ಲಿ ಹೋಗುವುದೇ ಹೆಚ್ಚು. ನನಗೆ ಸೀರೆ ತುಂಬಾ ಇಷ್ಟ. ಧಾರ್ಮಿಕ ಪ್ರವಾಸದ ವೇಳೆ ಸೀರೆಯುಟ್ಟು ಸಿಂಗರಿಸಿಕೊಳ್ಳುತ್ತೇನೆ. ಕೆಲಸಕ್ಕಾಗಿ, ಕಾರ್ಯಕ್ರಮಗಳಿಗಾಗಿ ಸೀರೆಯುಡುತ್ತೇನೆ. ಆದರೆ ದಿನವಿಡೀ ಸೀರೆಯುಟ್ಟು ಕಳೆಯುವುದು ನನಗೆ ಸುಲಭವಲ್ಲ, ಆ ತಾಳ್ಮೆ ನನ್ನಲ್ಲಿಲ್ಲ ಎನ್ನುತ್ತಾರೆ ನಟಿ ಸಂಜನಾ ಆನಂದ್. ಅವರ ಟ್ರಾವೆಲ್ ಲೈಫ್ ನಿಮಗಾಗಿ.
ಪ್ರವಾಸ ಮಾಡುವುದೇ ಮಜವಾಗಿ ಕಾಲ ಕಳೆಯುವುದಕ್ಕೆ.ಅಲ್ಲೂ ಕೆಲಸದ ಚಿಂತೆಯಿದ್ದರೆ ಖುಷಿಯಿಂದ ಪ್ರವಾಸ ಮಾಡಿದಂತಾಗುವುದಿಲ್ಲ.ಅದಕ್ಕಾಗಿ ಪ್ರವಾಸದ ವೇಳೆ ಬಳಿಯಲ್ಲಿ ಮೊಬೈಲ್ ಇಲ್ಲದಿರುವುದೇ ಒಳ್ಳೆಯದು. ಫೋನ್ ಕರೆಗಳು, ಮೆಸೇಜ್‌ಗಳಿಂದ ದೂರವಿದ್ದರೆ ಜಗತ್ತನ್ನೇ ಮರೆಯುವುದಕ್ಕಾಗುತ್ತದೆ ಎನ್ನುತ್ತಾರೆ ನಟಿ ಸಂಜನಾ ಆನಂದ್.
ನನಸಾಗಬೇಕಿದೆ ಪ್ರವಾಸದ ಜೀವನ
ಎಲ್ಲರಂತೆ ಬೇಕಾದಾಗಲೆಲ್ಲ ಪ್ರವಾಸ ಮಾಡಿಬರಬೇಕೆಂಬ ಆಸೆ ನನಗೂ ಇದೆ. ಒಂದೆರಡು ಅಂತಾರಾಷ್ಟ್ರೀಯ ಪ್ರವಾಸಕ್ಕೆ ಹೋಗಿಬಂದಿದ್ದೇನಷ್ಟೇ. ಆದರೆ ಕೆಲಸದ ಕಾರಣದಿಂದ ಪ್ರವಾಸ ಜೀವನದ ಕನಸು ನನಸಾಗಿಸಿಕೊಳ್ಳುವುದು ಕಷ್ಟವಾಗಿಬಿಟ್ಟಿದೆ. ಅನೇಕ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದೇನಾದರೂ ಚಿತ್ರೀಕರಣಕ್ಕಾಗಿ ದೇಶದ ಗಡಿ ದಾಟಿ ಹೊರಗೆ ಹೋಗುವ ಅವಕಾಶ ಇನ್ನೂ ಸಿಕ್ಕಿಲ್ಲ.ಮುಂದಿನ ದಿನಗಳಲ್ಲಿ ಅಂಥ ಅವಕಾಶ ಸಿಕ್ಕಿದರೆ ಅದರ ಸದ್ಬಳಕೆ ಮಾಡಿಕೊಳ್ಳುತ್ತೇನೆ.
ಮಂಗಳೂರು ಇಷ್ಟ.. ಆದರೂ ಕಷ್ಟ..
ಟ್ರೆಕ್ಕಿಂಗ್ ಅಥವಾ ಅಡ್ವೆಂಚರಸ್ ಲೈಫನ್ನು ಅಷ್ಟಾಗಿ ಎಕ್ಸ್‌ಪ್ಲೋರ್ ಮಾಡಿಲ್ಲ. ಪ್ರಕೃತಿ, ಕಡಲತೀರಗಳು, ಸೂರ್ಯೋದಯ, ಸೂರ್ಯಾಸ್ತವನ್ನು ನೋಡುವುದೆಂದರೆ ನನಗೆ ಅದೇನೋ ಖುಷಿ. ನನ್ನ ಪ್ರವಾಸಿ ತಾಣಗಳ ಆಯ್ಕೆಯೂ ಇಂಥವೇ ಇರುತ್ತವೆ. ಇತ್ತೀಚೆಗೆ ಕರಾವಳಿ ಭಾಗದ ಮಂಗಳೂರಿನ ಸುಂದರ ಪ್ರವಾಸಿ ತಾಣಗಳನ್ನು ಸುತ್ತಾಡಿ ಬಂದಿದ್ದೇನೆ. ಉದ್ದೇಶ ಧಾರ್ಮಿಕ ಪ್ರವಾಸವಾಗಿದ್ದರಿಂದ ಕಟೀಲು ದುರ್ಗಾಪರಮೇಶ್ವರಿ, ಕೊರಗಜ್ಜನ ಸನ್ನಿಧಿಗೂ ಹೋಗಿ ಬಂದಿದ್ದೇನೆ. ಮಂಗಳೂರು ಭೇಟಿಯೆಂದ ಮೇಲೆ ಅಲ್ಲಿನ ಕಡಲ ತೀರಗಳಿಗೆ ಹೋಗದೆ ವಾಪಸ್ಸಾಗುವುದು ಹೇಗೆ? ಸಮುದ್ರ ತೀರದಲ್ಲಿ ಸುಂದರ ಸಂಜೆಯನ್ನು ಕಳೆದುಬಂದೆ. ಆದರೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟ.
ಇದನ್ನೂ ಓದಿ: ಕಾವ್ಯಾ ಗೌಡ ಸಂದರ್ಶನ
ಸೆಲೆಬ್ರಿಟಿ ಟ್ರಾವೆಲ್ ಲೈಪ್
ಸೆಲೆಬ್ರಿಟಿ ಆಗಿ ಟ್ರಾವೆಲ್ ಮಾಡುವುದು ನನಗಿಷ್ಟ. ಪ್ರವಾಸದ ನಡುವೆಯೂ ಜನ ಗುರುತಿಸಿ ಮಾತನಾಡಿಸುತ್ತಾರೆ. ಸಿನಿಮಾಗಳ ಬಗ್ಗೆ ಕೇಳುತ್ತಾರೆ, ಜತೆಗೆ ನಿಂತು ಸೆಲ್ಫೀ ತೆಗೆಸಿಕೊಳ್ಳುತ್ತಾರೆ. ನಾವು ಬಣ್ಣದ ಲೋಕದಲ್ಲಿ ಕೆಲಸ ಮಾಡುವುದು ಗುರುತಿಸಿಕೊಳ್ಳುವುದಕ್ಕಾಗಿ. ಇಂಥ ಸಂದರ್ಭದಲ್ಲಿ ಪ್ರೈವೆಸಿ ನೋಡುವುದಾದರೆ ಪ್ರವಾಸ ಹೋಗದಿರುವುದೇ ಒಳ್ಳೆಯದು.
ಆ ವಿಯೆಟ್ನಾಂ ದಿನಗಳು
ಕಳೆದ ವರ್ಷ ತಂಗಿಯ ಜತೆಗೆ ವಿಯೆಟ್ನಾಂ ಪ್ರವಾಸಕ್ಕೆ ಹೋಗಿಬಂದಿದ್ದೆ. ಹೊ ಚಿ ಮಿನ್ಹ್ ನಗರ, ಹಲಾಂಗ್ ಬೇ ನಂಥ ಅದ್ಭುತ ತಾಣಗಳಲ್ಲಿ ಸುತ್ತಾಡಿದ್ದೇನೆ. ಕ್ರೂಸ್ ಟೂರಿಸಂಗೆ ಅಲ್ಲಿ ಹೆಚ್ಚಿನ ಅವಕಾಶವಿದೆ. ಅಡ್ವೆಂಚರ್ ಅಂದರೆ ಮಾರುದೂರ ಸರಿಯುವ ನಾನು ಅಲ್ಲಿ ಅನೇಕ ವಾಟರ್ ಗೇಮ್ಸ್ ಆಡಿದ್ದೇನೆ.

ದುಬಾರಿ ದುಬೈ
ವರ್ಷಗಳ ಹಿಂದೆ ಕುಟುಂಬದ ಜತೆಗೆ ಅರಬ್ ದೇಶ ದುಬೈಗೆ ಹೋಗಿ ಬಂದಿದ್ದೆ. ಪ್ರಕೃತಿಯನ್ನು ಮೆಚ್ಚಿಕೊಳ್ಳುವ ನನಗೆ ಆಡಂಬರ, ಐಷಾರಾಮಿ ಜೀವನಕ್ಕೆ ದುಬೈ ಸೂಕ್ತವೆನಿಸಿತ್ತು. ಆದರೂ ಅಲ್ಲಿ ಮೆಚ್ಚಿಕೊಳ್ಳುವ ವಿಚಾರ ಅನೇಕ. ಬಾನೆತ್ತಕ್ಕೆ ಬೆಳೆದುನಿಂತ ಕಟ್ಟಡಗಳು ದೇಶದ ಮೆರುಗನ್ನು ಹೆಚ್ಚಿಸುತ್ತದೆ. ಬೆಂಗಳೂರು ಟ್ರಾಫಿಕ್ ಕಿರಿಯಿಂದ ಬೇಸತ್ತ ಮಂದಿಗೆ ದುಬೈ ಪ್ರವಾಸ ಬಲು ಹಿತಕರವೆನಿಸಬಹುದು. ಅಲ್ಲಿನವರ ಶಿಸ್ತಿನ ಜೀವನ ನಮಗೆ ಮಾದರಿಯಾದೀತು.
ಬ್ಯಾಂಕಾಕ್‌ನಲ್ಲಿ ಶಾಪಿಂಪ್ ಮಾಡುವಾಸೆ
ಶಾಪಿಂಗ್ ಮೆಚ್ಚಿಕೊಳ್ಳದ ಹೆಣ್ಮಕ್ಕಳೇ ಕಡಿಮೆ. ಅದರಲ್ಲೂ ನನಗೆ ಶಾಪಿಂಗ್ ಮಾಡುವುದೆಂದರೆ ಬಹಳ ಇಷ್ಟ. ದುಬೈ, ವಿಯೆಟ್ನಾಂ ಪ್ರವಾಸದ ವೇಳೆಯೂ ಬಟ್ಟೆ, ಜ್ಯುವೆಲ್ಲರಿಗಳನ್ನು ಕೊಂಡುಕೊಂಡಿದ್ದೇನೆ. ಈಗ ಮತ್ತೊಂದು ದೇಶ ಸುತ್ತಲು ತಯಾರಿಗಳು ನಡೆಯುತ್ತಿವೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷದ ಅಂತ್ಯದೊಳಗೆ ಗೆಳತಿಯರ ಜತೆಗೆ ಬ್ಯಾಂಕಾಕ್‌ಗೆ ಹೋಗುವ ಯೋಜನೆಯಿದೆ. ಶಾಪಿಂಗ್ ಪ್ರಿಯರ ನೆಚ್ಚಿನ ತಾಣವದು. ಅದಕ್ಕಾಗಿಯೇ ಲಿಸ್ಟ್ ಸಿದ್ಧಮಾಡಿಕೊಳ್ಳುತ್ತಿದ್ದೇನೆ.
ಇದನ್ನೂ ಓದಿ: ಸೀಗಲ್ಸ್ ಗರ್ಲ್‌ಫ್ರೆಂಡ್ ಸಂದರ್ಶನ
ಜಯನಗರದ ಸ್ಲಮ್‌ನಲ್ಲಿ ʻಎಕ್ಕʼ
ʻಎಕ್ಕʼ ಸಿನಿಮಾ ಚಿತ್ರೀಕರಣವಾಗಿರೋದು ಎಲ್ಲಿ ಎಂದು ಎಲ್ಲರೂ ಕೇಳುತ್ತಲೇ ಇರುತ್ತಾರೆ. ಚಿತ್ರದಲ್ಲಿ ನನ್ನ ಭಾಗದ ಚಿತ್ರೀಕರಣ ಬೆಂಗಳೂರಿನ ಜಯನಗರ ಸಮೀಪದ ಸ್ಲಮ್ ಒಂದರಲ್ಲಿ ನಡೆದಿತ್ತು. ನನಗೆ ಈ ಪಾತ್ರದ ಬಗ್ಗೆ ಲವ್ ಆಗಿ ಬಿಟ್ಟಿದೆ. ಲೋ ಮಿಡಲ್ ಕ್ಲಾಸ್ ಹುಡುಗಿಯ ಪಾತ್ರ ನಿಭಾಯಿಸುವುದಕ್ಕಾಗಿ, ಅವರ ಹಾವಭಾವವನ್ನು ತಿಳಿದುಕೊಳ್ಳುವುದಕ್ಕಾಗಿ ಅಲ್ಲಿನ ಸ್ಲಮ್ ನಲ್ಲಿ ಹೆಚ್ಚಿನ ಸಮಯ ಕಳೆದಿದ್ದೇನೆ. ಅಲ್ಲಿನ ಜನ ಇಡೀ ತಂಡದೊಂದಿಗೆ ಫ್ರೆಂಡ್ಲೀ ಆಗಿಬಿಟ್ಟಿದ್ದರು. ಮುಖ್ಯವಾಗಿ ನಟ ಯುವ ರಾಜ್‌ಕುಮಾರ್ ತುಂಬಾನೇ ವೃತ್ತಿಪರ ನಟನಾಗಿರುವುದರಿಂದ ಅವರ ಜತೆಗೆ ನಟಿಸುವುದು ಕಷ್ಟವೆನಿಸಲಿಲ್ಲ. ಜನ ನನ್ನ ಪಾತ್ರವನ್ನು, ಚಿತ್ರವನ್ನು, ನಮ್ಮ ಜೋಡಿಯನ್ನೂ ಮೆಚ್ಚಿಕೊಂಡಿದ್ದಾರೆ. ಚಿತ್ರೀಕರಣಕ್ಕೆ ಫಾರಿನ್ ಲೊಕೇಶನ್ ಇರಲೇ ಬೇಕೆಂದಿಲ್ಲ, ಲೋಕಲ್ ಆದರೂ ಕಥೆಗೆ ಒಪ್ಪುವಂತಿರಬೇಕು.
ಸೀರೆಯಲ್ಲಿ ಸವಾರಿ ಕಷ್ಟ..
ಪ್ರವಾಸದಲ್ಲಿ ಓವರ್ ಸೈಸ್ಡ್ ಪ್ಯಾಂಟ್ಸ್ ಹಾಗೂ ಓವರ್ ಸೈಸ್ಡ್ ಟೀ ಶರ್ಟ್‌ಗಳಲ್ಲಿ ಹೋಗುವುದೇ ಹೆಚ್ಚು. ನನಗೆ ಸೀರೆ ತುಂಬಾ ಇಷ್ಟ. ಧಾರ್ಮಿಕ ಪ್ರವಾಸದ ವೇಳೆ ಸೀರೆಯುಟ್ಟು ಸಿಂಗರಿಸಿಕೊಳ್ಳುತ್ತೇನೆ. ಕೆಲಸಕ್ಕಾಗಿ, ಕಾರ್ಯಕ್ರಮಗಳಿಗಾಗಿ ಸೀರೆಯುಡುತ್ತೇನೆ. ಆದರೆ ದಿನವಿಡೀ ಸೀರೆಯುಟ್ಟು ಕಳೆಯುವುದು ನನಗೆ ಸುಲಭವಲ್ಲ, ಆ ತಾಳ್ಮೆ ನನ್ನಲ್ಲಿಲ್ಲ.

ರಾಯಲ್ ಗೋವಾ
ದಿನಕರ್ ತೂಗುದೀಪ್ ಅವರ ನಿರ್ದೇಶನದ ʻರಾಯಲ್ʼ ಸಿನಿಮಾದ ಚಿತ್ರೀಕರಣಕ್ಕಾಗಿ ಗೋವಾದಲ್ಲಿ ಸುಮಾರು 10 ದಿನಗಳ ಕಾಲ ಉಳಿದುಕೊಂಡಿದ್ದೆ. ಗೋವಾದಲ್ಲಿ ಡಿಫರೆಂಟ್ ವೈಬ್ ಇದೆ. ಅಲ್ಲಿ ವ್ಯಾಪಾರಕ್ಕೆ ಬೃಹತ್ ಅಂಗಡಿಗಳೇ ಬೇಕೆಂದಿಲ್ಲ. ರಸ್ತೆ ಬದಿಯಲ್ಲೇ ಸಿಗುವ ಸ್ಟೀಟ್ ಶಾಪಿಂಗ್ ಸೆಂಟರ್ಸ್ ವಿದೇಶಿಗರನ್ನೂ ಸೆಳೆಯುತ್ತವೆ. ಉಡುಗೆ-ತೊಡುಗೆಗಳೆಲ್ಲವೂ ಅಗ್ಗದ ಬೆಲೆಯಲ್ಲಿ ಸಿಗುವುದರಿಂದ ಆಯ್ಕೆಗಳ ಬಗ್ಗೆ ಚಿಂತಿಸಬೇಕಿಲ್ಲ.
ಭಯ ಮೂಡಿಸುವ ಮಾನ್‌ಸೂನ್ ಟ್ರಾವೆಲ್
ನನಗೆ ಮಾನ್‌ಸೂನ್ ಇಷ್ಟ. ಆದರೆ ಮಾನ್‌ಸೂನ್‌ನಲ್ಲಿ ಪ್ರವಾಸ ಮಾಡುವುದು ಕಷ್ಟ. ಮಳೆಗಾಲ ಪ್ರಾರಂಭವಾದರೆ ನಿತ್ಯವೂ ಗುಡ್ಡ ಕುಸಿಯುವ, ರಸ್ತೆ ಕೆಟ್ಟಿರುವ ಸುದ್ದಿಗಳು ಕೇಳಿ ಬೇಸರವಾಗಿದೆ, ಭಯ ಮೂಡಿದೆ. ಆದ್ದರಿಂದ ಮಳೆಗಾಲದಲ್ಲಿ ಸುರಕ್ಷಿತವಾದ ತಾಣಗಳಿಗೆ ಮಾತ್ರ ಪ್ರವಾಸ ಮಾಡುತ್ತೇನೆ.
ಗರ್ಲ್ಸ್ ಗ್ಯಾಂಗ್ - ಚಾಮುಂಡಿ ಬೆಟ್ಟ
ಸಿನಿಮಾ ಇಂಡಸ್ಟ್ರಿಯಲ್ಲಿ ನನಗೆ ಅನೇಕ ಸ್ನೇಹಿತೆಯರಿದ್ದಾರೆ. ಅವರ ಜತೆ ಗರ್ಲ್ಸ್ ರೈಡ್ ಮಾಡುವುದೆಂದರೆ ಬಹಳ ಖುಷಿಯೆನಿಸುತ್ತದೆ.ಅದರಲ್ಲೂ ಕೆಲವು ತಿಂಗಳ ಹಿಂದಷ್ಟೇ ನನ್ನ ಸ್ನೇಹಿತೆ ಹೊಸ ಕಾರು ಖರೀದಿ ಮಾಡಿದ್ದರಿಂದ ಎಲ್ಲಾದರೂ ಲಾಂಗ್ ಡ್ರೈವ್ ಹೋಗೋಣವೆಂದರು. ಇದಕ್ಕಿದ್ದಂತೆ ಪ್ಲ್ಯಾನ್ ಮಾಡಿಕೊಂಡು -- ಸಂಜನಾ,ನಿಧಿ ಎಲ್ಲರೂ ಸೀರೆಯುಟ್ಟು ಸಿದ್ಧರಾಗಿ ಚಾಮುಂಡಿ ಬೆಟ್ಟಕ್ಕೆ ಹೋಗಿ, ಗಾಡಿ ಪೂಜೆ ಮಾಡಿಸಿ ಬಂದಿದ್ದೆವು. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದುಮಾಡಿತ್ತು.
ಇದನ್ನೂ ಓದಿ: ಮಲೆನಾಡಿನ ಸೌಂದರ್ಯಕ್ಕೆ ಜಾಗತಿಕ ಸ್ಪರ್ಶ ನೀಡುವ ಗುರಿ - ಸಂಸದ ಬಿ.ವೈ. ರಾಘವೇಂದ್ರ
ಸೋಲೋ ಟ್ರಾವೆಲ್ ಸೇಫ್ ಅನಿಸಿಲ್ಲ
ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಸೋಲೋ ಟ್ರಿಪ್ ಮಾಡಿ ಫೊಟೋ, ವಿಡಿಯೋಗಳನ್ನು ಹಂಚಿಕೊಂಡಾಗ ನನಗೂ ಸೋಲೋ ಟ್ರಾವೆಲ್ ಮಾಡಬೇಕೆನಿಸುತ್ತದೆ. ಆದರೆ ಇಂದು ಸಮಾಜದಲ್ಲಿ ಮಹಿಳೆಯರು ಸುರಕ್ಷಿತರಾಗಿಲ್ಲ ಎಂಬ ಬಗ್ಗೆ ನಿತ್ಯವೂ ಮಾಧ್ಯಮಗಳಲ್ಲಿ ಸುದ್ದಿಯಾಗುವುದನ್ನು ನೋಡಿದರೆ ಇಂಥ ಪ್ರಯತ್ನಗಳನ್ನು ಮಾಡುವ ಬಗ್ಗೆ ಯೋಚಿಸುವುದಕ್ಕೂ ಭಯವೆನಿಸುತ್ತದೆ.
ಪ್ರವಾಸದಲ್ಲಿ ನೋ ರೂಲ್ಸ್
ಪ್ರವಾಸದಲ್ಲಿ ಯಾವುದೇ ರೆಸ್ಟ್ರಿಕ್ಷನ್ಸ್ ಇರಕೂಡದು. ಮಾಮೂಲಿ ಜೀವನವನ್ನು ಮರೆತು ಹೊಸ ರೀತಿಯ ಅನುಭವಗಳನ್ನು ಪಡೆದುಕೊಳ್ಳಬೇಕು. ಆಹಾರ, ವರ್ಕ್‌ಔಟ್ಸ್ ಹೀಗೆ ನಿತ್ಯದ ರೊಟೀನ್ ಎಲ್ಲವನ್ನೂ ಬ್ರೇಕ್ ಮಾಡಿ ಒಂದೆರಡು ದಿನಗಳನ್ನು ಖುಷಿಯಿಂದ ಕಾಲ ಕಳೆಯಬೇಕೆಂಬುದು ನನ್ನ ರೂಲ್ಸ್. ಅತಿಯಾಗಿ ತಿನ್ನುವುದಿಲ್ಲ, ಸ್ವೀಟ್ಸ್ ಮೊರರೆಹೋಗುವುದಿಲ್ಲವೆಂಬುದು ಬಿಟ್ಟರೆ ಉಳಿದಂತೆ ಎಲ್ಲವನ್ನೂ ಮರೆತು ಖುಷಿಯಿಂದ ಇದ್ದುಬಿಡುತ್ತೇನೆ. ಪ್ರವಾಸ ಹಾಗಿದ್ದರೇನೇ ಚೆನ್ನ..