ಎಲ್ಲವೂ ಮುಗಿದೇಹೋಯ್ತು ಎನಿಸಿದ ಕ್ಷಣ!
ನಗರ ಜೀವನ ಎಷ್ಟೇ ಐಷಾರಾಮಿಯಾಗಿದ್ದರೂ ನಮಗೆ ತೃಪ್ತಿ ಎಂಬುದಿರುವುದಿಲ್ಲ. ಎಲ್ಲದರಲ್ಲೂ ಕೊರತೆ ಹುಡುಕುತ್ತೇವೆ. ಆದರೆ ಟ್ರೆಕ್ಕಿಂಗ್ ನಲ್ಲಿ ಇದ್ಯಾವುದಕ್ಕೂ ಅವಕಾಶವಿರುವುದಿಲ್ಲ. ಎಕ್ಸ್ಟ್ರೀಮ್ ವೆದರ್ ಕಂಡೀಶನ್‌ನ ನಡುವೆ ಟೆಂಟ್‌ನಲ್ಲಿ ಮಲಗೋದು, ಪ್ರಕೃತಿಯಲ್ಲೇ ನೇಚರ್ ಕಾಲ್, ಹಸಿವೆನಿಸಿದರೆ ಸಿಕ್ಕಿದ ಆಹಾರವನ್ನೇ ತಿನ್ನಬೇಕು. ಹೀಗೆ ಟ್ರೆಕ್ಕಿಂಗ್ ಎಂದರೆ ನಮಗೆ ಜೀವನ ಪಾಠವನ್ನು ಕಲಿಸಿಕೊಡುವ ಗುರು. ಸರಳವಾದ ಜೀವನ ನಡೆಸುವುದು ಹೇಗೆ ಎಂಬುದನ್ನು ತಿಳಿದುಕೊಂಡಿದ್ದೇನೆ.
ನಟ ದಿಗಂತ್‌ಗೆ ನಾಯಕಿಯಾಗಿ ಅಭಿನಯಿಸಿದ್ದ ʻಲೈಫು ಇಷ್ಟೇನೇʼ ಸಿನಿಮಾದ `ನಿನ್ನ ಗುಂಗಲ್ಲೇ..’ ಎಂಬ ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡದ ಜತೆಗೆ ಲಡಾಖ್ ಹೋಗಿದ್ದೆ. ಆರು ದಿನಗಳ ಕಾಲ ಚಿತ್ರೀಕರಣ ನಡೆದಿತ್ತು. ಆದರೆ ಲಡಾಖ್‌ನ ಸೌಂದರ್ಯಕ್ಕೆ ಮಾರುಹೋಗಿ, ಬಿಡುವು ಮಾಡಿಕೊಂಡು ಮತ್ತೆ ಮತ್ತೆ ಲಡಾಖ್‌ಗೆ ಭೇಟಿ ನೀಡಿದ್ದೆ ಎನ್ನುತ್ತಾರೆ ನಟಿ ಸಿಂಧು ಲೋಕನಾಥ್. ಟ್ರೆಕ್ಕಿಂಗ್ ಪ್ರಿಯೆ, ರೈಡರ್ ಸಿಂಧು ಲೋಕನಾಥ್ ಅವರ ಟ್ರಾವೆಲ್ ಡೈರೀಸ್ ನಿಮಗಾಗಿ…
ಪ್ರವಾಸ ಹೇಗಿರಬೇಕು ಗೊತ್ತಾ?
ಯಾವುದೇ ಪ್ರದೇಶಕ್ಕೆ ಟೂರಿಸ್ಟ್ ಆಗಿ ಹೋಗುವುದು ನನಗಿಷ್ಟವಿಲ್ಲ. ಹೆಸರು ಮಾಡಿರುವ ಪ್ರವಾಸಿ ತಾಣಗಳಿಗೆ ಹೋಗಿ ಅಲ್ಲೊಂದಿಷ್ಟು ಫೊಟೋಸ್ ತೆಗೆಸಿಕೊಂಡು ಬರುವುದು ಎಲ್ಲರಿಗೂ ಖುಷಿಯ ವಿಚಾರವಾಗಿರಬಹುದು. ಆದರೆ ಯಾರೂ ಎಕ್ಸ್‌ಪ್ಲೋರ್ ಮಾಡದಿರುವ ತಾಣಗಳನ್ನು ಹುಡುಕಿಕೊಂಡು ಹೋಗುವುದೆಂದರೆ ನನಗೆ ಖುಷಿಯೆನಿಸುತ್ತದೆ. ಪ್ರವಾಸವೆಂದರೆ ನಾವು ಭೇಟಿ ನೀಡುವ ಪರಿಸರ, ಅಲ್ಲಿನ ಸಂಸ್ಕೃತಿ, ಜೀವನಶೈಲಿ ಎಲ್ಲವನ್ನೂ ತಿಳಿದುಕೊಳ್ಳುವ ಪಯಣ ಎಂಬುದು ನನ್ನ ಅನಿಸಿಕೆ.
ಇದನ್ನೂ ಓದಿ: ತರುಣ್ ಸುಧೀರ್ʼಘʼ ಪ್ರವಾಸ
ರೋಡ್ ಟ್ರಿಪ್‌ಗೆ ಸ್ಪಿತಿ ವ್ಯಾಲಿ ಬೆಸ್ಟ್
ಕಾಂಚನ್‌ಜುಂಗಾ ಬೇಸ್ ಕ್ಯಾಂಪ್, ಲಡಾಖ್‌ನಲ್ಲಿ ಕಾಂಗ್ ಯಾತ್ಸೆ ಸಮ್ಮಿತ್, ಹಿಮಾಚಲದ ಭೃಗು ಲೇಕ್ ಟ್ರೆಕ್ ಹೀಗೆ ಅನೇಕ ಕಡೆ ಚಾರಣ ಮಾಡಿದ್ದೇನೆ. ನನ್ನ ಐದನೆಯದು ಟ್ರೆಕ್ಕಿಂಗ್ ಹಮ್ಟಾ ಪಾಸ್. ಟ್ರೆಕ್ಕಿಂಗ್ ಆಯೋಜಕರ ನೆರವಿನೊಂದಿಗೆ ಇತ್ತೀಚೆಗಷ್ಟೇ ಸುಮಾರು 15 ದಿನಗಳ ಕಾಲದ ಹಮ್ಟಾ ಪಾಸ್ ಟ್ರೆಕ್ಕಿಂಗ್ ಮುಗಿಸಿದ್ದೇನೆ. ಅಲ್ಲಿಂದ ನೇರ ಬೆಂಗಳೂರಿಗೆ ಮರಳದೆ ಸ್ಪಿತಿ ವ್ಯಾಲಿಯನ್ನೂ ಸುತ್ತಾಡಿ ಬಂದಿದ್ದೇನೆ. ಸ್ಪಿತಿ ವ್ಯಾಲಿ ನೋಡಬೇಕೆಂಬುದು ಬಹು ದಿನದ ಕನಸಾಗಿದ್ದರಿಂದ ಟ್ರೆಕ್ಕಿಂಗ್ ಮುಗಿಯುತ್ತಲೇ ಅವರಿಂದ ಬೇರ್ಪಟ್ಟು ಒಬ್ಬಂಟಿಯಾಗಿ ಸುತ್ತಾಡಿ ಬಂದಿದ್ದೇನೆ. ರೋಡ್ ಟ್ರಿಪ್ ಮಾಡುವವರಿಗದು ಕನಸಿನ ತಾಣ. ಕಾಜಾ, ಚಂದ್ರತಾಲ್ ಸರೋವರ, ಧಂಕರ್ ಮಠ, ಪಿನ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ ಹೀಗೆ ಅಲ್ಲಿ ನೋಡಲೇಬೇಕಾದ ಅನೇಕ ಪ್ರವಾಸಿ ತಾಣಗಳಿವೆ.

ಜೀವನ ಪಾಠ ಕಲಿಸಿಕೊಡುವ ಗುರು
ನಗರ ಜೀವನ ಎಷ್ಟೇ ಐಷಾರಾಮಿಯಾಗಿದ್ದರೂ ನಮಗೆ ತೃಪ್ತಿ ಎಂಬುದಿರುವುದಿಲ್ಲ. ಎಲ್ಲದರಲ್ಲೂ ಕೊರತೆ ಹುಡುಕುತ್ತೇವೆ. ಆದರೆ ಟ್ರೆಕ್ಕಿಂಗ್ ನಲ್ಲಿ ಇದ್ಯಾವುದಕ್ಕೂ ಅವಕಾಶವಿರುವುದಿಲ್ಲ. ಎಕ್ಸ್ಟ್ರೀಮ್ ವೆದರ್ ಕಂಡೀಶನ್‌ನ ನಡುವೆ ಟೆಂಟ್‌ನಲ್ಲಿ ಮಲಗೋದು, ಪ್ರಕೃತಿಯಲ್ಲೇ ನೇಚರ್ ಕಾಲ್, ಹಸಿವೆನಿಸಿದರೆ ಸಿಕ್ಕಿದ ಆಹಾರವನ್ನೇ ತಿನ್ನಬೇಕು. ಹೀಗೆ ಟ್ರೆಕ್ಕಿಂಗ್ ಎಂದರೆ ನಮಗೆ ಜೀವನ ಪಾಠವನ್ನು ಕಲಿಸಿಕೊಡುವ ಗುರು. ಸರಳವಾದ ಜೀವನ ನಡೆಸುವುದು ಹೇಗೆ ಎಂಬುದನ್ನು ತಿಳಿದುಕೊಂಡಿದ್ದೇನೆ.
ಲಡಾಖ್ ಟ್ರೆಕ್ಕಿಂಗ್ ಮರೆಯಲಿ ಹೇಗೆ?
ಲಡಾಖ್‌ನಲ್ಲಿ ಕಾಂಗ್ ಯಾತ್ಸೆ ಸಮ್ಮಿತ್‌ಗಾಗಿ ಸುಮಾರು ಎಂಟು ದಿನಗಳ ಕಾಲ ಹೋಗಿದ್ದೆ. ಆದರೆ ಟ್ರೆಕ್ ಆಡುವ ವೇಳೆ ನನಗೆ ಆಕ್ಸಿಜನ್ ಲೆವೆಲ್ ಕಡಿಮೆಯಾಗಿ ಉಸಿರಾಡುವುದಕ್ಕೂ ಕಷ್ಟವಾಗಿತ್ತು. ಮೆದುಳಿಗೆ ಆಕ್ಸಿಜನ್ ಸಪ್ಲೈ ಆಗದೆ ಬ್ರೈನ್ ಫಂಕ್ಷನ್ ಸ್ಲೋ ಆಗಿಬಿಟ್ಟಿತ್ತು. ಆದರೆ ಆಯೋಜಕರು ತಷ್ಟಣವೇ ಎಚ್ಚೆತ್ತುಕೊಂಡು ಆಕ್ಸಿಜನ್ ಸಿಲಿಂಡರ್ ಹಾಕಿದ್ದರು.ಆಲ್ಟಿಟ್ಯೂಟ್ ಸಿಕ್ನೆಸ್‌ನಿಂದ ಆಗುವ ಅನಾಹುತಗಳೇ ಹೆಚ್ಚು. ಸದ್ಯ ನಾನು ಸ್ವಲ್ಪದರಲ್ಲೇ ಉಳಿದುಕೊಂಡೆ.
ಇಷ್ಟಪಟ್ಟಿದ್ದೆಲ್ಲವೂ ಸುಲಭದಲ್ಲಿ ಸಿಗುವುದಿಲ್ಲ. ಹೊಸತನ್ನು ಕಲಿಯಬೇಕಾದರೆ ಸ್ವಲ್ಪ ಕಟ್ಟಪಡಬೇಕಾಗುತ್ತದೆ, ಜತೆಗೆ ಧೈರ್ಯವೂ ಇರಬೇಕಾಗುತ್ತದೆ. ಜೀವನದಲ್ಲಿ ಹೊಸತನವನ್ನು ಕಲಿಯಬೇಕೆನ್ನುವ ಕಾರಣದಿಂದ ಅನೇಕ ಪ್ರವಾಸದಲ್ಲಿ ಪ್ಯಾರಾಗ್ಲೈಡಿಂಗ್, ಬಂಜಿ ಜಂಪಿಂಗ್ ಹೀಗೆ ಹೊಸ ಪ್ರಯತ್ನಗಳನ್ನು ಮಾಡಿದ್ದೇನೆ. ಆದರೆ ಒಮ್ಮೆ ಪ್ಯಾರಾಗ್ಲೈಡಿಂಗ್ ಟೇಕ್ ಆಫ್ ವೇಳೆ ಇದಕ್ಕಿದ್ದಂತೆ ಗಾಳಿ ನನ್ನನ್ನು ಎಳೆದುಬಿಟ್ಟಿತ್ತು. ಕ್ಲಿಫ್ ನಿಂದ ಕೆಳಗೆ ಜಾರಿಬಿಡುತ್ತೇನೆಂದುಕೊಂಡಿದ್ದೆ. ಕೊನೆಗೇ ಗಾಳಿಯೇ ನನ್ನನ್ನು ಮೇಲಕ್ಕೆ ಎಳೆದುಕೊಂಡು ಹೋಯ್ತು.
ಮನೆಯೂಟವನ್ನು ಮಿಸ್ ಮಾಡಿಕೊಳ್ಳುವೆ
ಎಷ್ಟೇ ಪ್ರವಾಸ ಮಾಡಿದರೂ, ಎಲ್ಲೇ ಪ್ರವಾಸ ಹೋದರೂ ದಕ್ಷಿಣ ಭಾರತದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಸಿಗುವಷ್ಟು ರುಚಿಕರ ಆಹಾರ ಬೇರೆಲ್ಲೂ ಸಿಗುವುದಿಲ್ಲ. ಉತ್ತರ ಭಾರತದಲ್ಲಂತೂ ಎಲ್ಲಿ ಹೋದರೂ ಆಲೂ ಪರಾಟ, ಮ್ಯಾಗಿಯಂಥ ಆಹಾರವೇ ಮುಖ್ಯವಾಗಿ ಸಿಗುವುದು. ಆ ಸಂದರ್ಭದಲ್ಲಿ ಮನೆಯೂಟದ ರುಚಿ ಕಾಡುವುದಕ್ಕೆ ಶುರುಮಾಡುತ್ತದೆ.
ದಕ್ಷಿಣ ಭಾರತದಲ್ಲಿ ಧಾರ್ಮಿಕ ಪ್ರವಾಸ
ಇತ್ತೀಚೆಗಷ್ಟೇ ಸ್ನೇಹಿತರ ಜತೆಗೆ 12-13 ದಿನಗಳ ಕಾಲ ಸೌತ್ ಇಂಡಿಯಾ ಕೋಸ್ಟಲ್ ಟ್ರಿಪ್ ಮಾಡಿದ್ದೆ. ಮಧುರೈ, ರಾಮೇಶ್ವರಂ, ಕನ್ಯಾಕುಮಾರಿ, ತಿರುವನಂತಪುರಂ, ಕೊಚ್ಚಿ, ಕಣ್ಣೂರು ಭೇಟಿಯ ನಂತರ ಬೆಂಗಳೂರಿಗೆ ವಾಪಸ್ಸಾಗಿದ್ದೆ...ಅದೊಂದು ರೀತಿಯಲ್ಲಿ ಧಾರ್ಮಿಕ ಪ್ರವಾಸ. ಭಾರತದಲ್ಲಿ ಸಾಕಷ್ಟು ಐತಿಹಾಸಿಕ ದೇವಾಲಯಗಳಿಗೆ, ಅದರಲ್ಲೂ ದಕ್ಷಿಣ ಭಾರತದಲ್ಲಿ ಲೆಕ್ಕವಿಲ್ಲದಷ್ಟು ದೇಗುಲಗಳಿವೆ.ಅವುಗಳ ವಾಸ್ತುಶಿಲ್ಪ, ಕೆತ್ತನೆಗಳು ಮನಸೆಳೆಯುತ್ತವೆ. ತಮಿಳುನಾಡಿನಲ್ಲಿ ಅದ್ಭುತ ದೇವಾಲಯಗಳೆಂದರೆ ನನಗೆ ಬಹಳ ಇಷ್ಟ.

ವಿಯೆಟ್ನಾಂ ದಿನಗಳು
ವಿಯೆಟ್ನಾಂ ಪ್ರವಾಸವನ್ನು ಸುಂದರ ನೆನಪುಗಳನ್ನು ಕಟ್ಟಿಕೊಟ್ಟಿದೆ. ಉತ್ತರ ವಿಯೆಟ್ನಾಂ ನಿಂದ ಮಧ್ಯ ವಿಯೆಟ್ನಾಂ ಭಾಗದ ಪ್ರವಾಸಿ ತಾಣಗಳನ್ನು ನೋಡಿ ಬಂದಿದ್ದೆ. ಅಲ್ಲಿನ ಮೊಕ್ಚೋ ಹಾಗೂ ಸಾಪಾ ಎಂಬ ತಾಣಗಳು ನನಗೆ ಬಹಳ ಮೆಚ್ಚುಗೆಯಾಯ್ತು. ಅಗ್ಗದ ದರದ ವಿದೇಶ ಪ್ರಯಾಣವನ್ನು ಹುಡುಕುವವರಿಗೆ ವಿಯೆಟ್ನಾಂ ಉತ್ತಮ ಆಯ್ಕೆ. ಸುಮಾರು ಒಂದು ಲಕ್ಷ ಕೈಯಲ್ಲಿದ್ದರೆ ವಿಮಾನ ಪ್ರಯಾಣ, ಆಹಾರ, ವಾಸ್ತವ್ಯ ಎಲ್ಲವೂ ಸೇರಿದಂತೆ 20 ದಿನಗಳ ಕಾಲ ಇಲ್ಲಿ ಸುತ್ತಾಡಿ ಬರಬಹುದು. ಅಡ್ವೆಂಚರ್ ಮಾಡಬಯಸುವವರಿಗೆ ವಿಯೆಟ್ನಾಂ ಬೆಸ್ಟ್ ಪ್ಲೇಸ್.
ರಗ್ ಫ್ಯಾಕ್ಟ್ ಬ್ಯಾಗ್ ನನ್ನ ಜತೆಗಾರ
ಪ್ರವಾಸದ ವೇಳೆ ಲಗೇಜ್ ಪ್ಯಾಕ್ ಮಾಡುವುದೂ ಒಂದು ಕಲೆ. ಅದು ಎಲ್ಲರಿಗೂ ಕರಗತವಾಗುವುದಿಲ್ಲ. ಇತ್ತೀಚೆಗಷ್ಟೇ ನಾನು ಪ್ಯಾಕಿಂಗ್ ಮಾಡುವ ವಿಧಾನವನ್ನು ತಿಳಿದುಕೊಂಡೆ. ಹತ್ತು ದಿನದ ಪ್ರವಾಸಕ್ಕೆ ಐದು ಜತೆ ಬಟ್ಟೆ ತೆಗೆದುಕೊಳ್ಳುತ್ತೇನೆ. ಚಾರಣವಾದರೆ ಡ್ರೈ ಫಿಟ್ ಬಟ್ಟೆಗಳನ್ನೇ ಜತೆಗೆ ಕೊಂಡೊಯ್ಯುತ್ತೇನೆ. ಸೂಟ್ ಕೇಸ್ ಬದಲಿಗೆ ರಗ್ ಫ್ಯಾಕ್ಟ್ ಬ್ಯಾಗ್ ಜತೆಗಿರುತ್ತದೆ.
ಕುಮಾರ ಪರ್ವತ ಏರುವ ಸಾಹಸ
ಕರ್ನಾಟಕದಲ್ಲಿ ಕುದುರೆಮುಖ, ನೇತ್ರಾವತಿ ಹಾಗೂ ಕುಮಾರ ಪರ್ವತ ಟ್ರೆಕ್ಕಿಂಗ್ ಅಂದರೆ ನನಗೆ ಬಹಳ ಅಚ್ಚುಮೆಚ್ಚು. ಕುಮಾರ ಪರ್ವತಕ್ಕೆ ನಮ್ಮೂರಕಡೆಯ ಸೋಮವಾರಪೇಟೆಯ ಪುಷ್ಪಗಿರಿ ಬೆಟ್ಟದ ಮೂಲಕ ಏರುವುದು ಸುಲಭ. ಆದರೆ ಇಳಿಯುವುದಂತೂ ಬಹಳ ಕಷ್ಟ. ಸರಿಯಾದ ದಾರಿ ಇಲ್ಲ, ಕಲ್ಲು ಬಂಡೆಯ ನಡುವೆ ಕೆಳಗೆ ನೋಡುತ್ತಲೇ ಇಳಿಯಬೇಕು..ಸ್ವಲ್ಪ ಎಡವಿದರೂ ಬದುಕುವ ಆಸೆಯನ್ನೇ ಕೈಬಿಡಬೇಕಾಗುತ್ತದೆ. ಟ್ರೆಕ್ಕಿಂಗ್ ಮುಗಿಸಿ ಒಂದು ವಾರ ಕಾಲ ಅಲುಗಾಡಿಸುವುದಕ್ಕೂ ಆಗದ ಪರಿಸ್ಥಿತಿ ಇರುತ್ತದೆ.
ಬೈಕ್ ರೈಡ್ ಅನುಭವ
ಚಿಕ್ಕಂದಿನಿಂದಲೂ ಬೈಕ್ ರೈಡ್ ಮಾಡುವ ಹುಚ್ಚು ಆಸಕ್ತಿ. ಅಪ್ಪನ ರಾಜ್‌ದೂತ್ ಬೈಕ್ ಏರಿ ಸವಾರಿ ಮಾಡುತ್ತಲೇ ರೈಡಿಂಗ್ ಕಲಿತುಕೊಂಡೆ. ಕಾಲೇಜಿ ದಿನಗಳಲ್ಲಿ ಯಮಾಹಾ ಆರ್ ಎಕ್ಸ್ ಜೆಡ್ ಕ್ರೇಜ್ ಶುರುವಾಯ್ತು.ಸ್ನೇಹಿತರ ಬಳಿ ಇದ್ದ ಬೈಕ್‌ಗಳಲ್ಲೂ ರೈಡ್ ಹೋಗುತ್ತಿದ್ದೆ. ಕಾಲೇಜಿನಲ್ಲಿ ಟಾಮ್ ಬಾಯ್ ಥರವೇ ಕಾಣಿಸುತ್ತಿದ್ದೆ. ಎರಡು ವರ್ಷಗಳ ಹಿಂದೆ ಬೇಸಗೆಯ ಅಂತ್ಯದಲ್ಲಿ ಸಿಕ್ಕಿಂಗೆ ಬೈಕ್ ರೈಡ್ ಮಾಡಿದ್ದೆ. ಬಿಸಿಲನ್ನು ನಿರೀಕ್ಷಿಸಿದ್ದ ನಮಗೆ ಮಳೆಯ ಅಬ್ಬರದಿಂದ ಸಾಕಾಗಿಬಿಟ್ಟಿತ್ತು. ಸರಿಯಾದ ರಸ್ತೆ ಸೌಕರ್ಯಗಳಿಲ್ಲದೆ ರೈಡಿಂಗ್ ಬಹಳ ಕಷ್ಟವಾಗಿತ್ತು.

ನೇತ್ರಾಣಿಯೆಂಬ ಸ್ವರ್ಗ
ಅಂಡರ್ ವಾಟರ್ ಅನುಭವ ಪಡೆಯಲು ನಾವು ದೇಶ ವಿದೇಶಗಳನ್ನು ಸುತ್ತುತ್ತೇವೆ. ಆದರೆ ನಮ್ಮ ಕರ್ನಾಟಕದ ಮುರುಡೇಶ್ವರದ ನೇತ್ರಾಣಿಯ ಅಂಡರ್ ವಾಟರ್ ಎಕ್ಸ್‌ಪೀರಿಯನ್ಸ್ ಬಹಳ ಅದ್ಭುತವಾಗಿದೆ. ನಾನು ಅಲ್ಲಿ ಸ್ಕೂಬಾ ಡೈವಿಂಗ್ ಮಾಡಿದ್ದೆ. ಇಂಡೋನೇಷ್ಯಾದಲ್ಲಿ ಸ್ಕೂಬಾ ಮಾಡಿದ್ದ ವೇಳೆ ಕಾಣದಿರುವ ನೀರಿನೊಳಗಿನ ಹವಳಗಳು ಹಾಗೂ ಮೀನುಗಳನ್ನು ನೇತ್ರಾಣಿಯಲ್ಲಿ ನೋಡಿದ್ದೆ. ಆದರೆ ಅದೆಲ್ಲವೂ ಹವಾಮಾನ ಹಾಗೂ ನಿಮ್ಮ ಅದೃಷ್ಟದ ಮೇಲಿರುತ್ತದೆ.
ಬ್ಲೂಫ್ಲೇಮ್ ಸರೋವರದ ಸುತ್ತ
ಸುಮಾರು ಹದಿನೆಂಟು ದಿನಗಳ ಕಾಲ ಇಂಡೋನೇಷ್ಯಾ – ಬಾಲಿ ಪ್ರವಾಸ ಮಾಡಿದ್ದೆ. ಇದು ಬಜೆಟ್ ಫ್ರೆಂಡ್ಲೀ ದೇಶ ಮಾತ್ರವಲ್ಲದೆ ಭಾರತೀಯ ಸಂಸ್ಕೃತಿಯನ್ನು ಹೋಲುವ ದೇಶ. ಇಂಡೋನೇಷ್ಯಾದಲ್ಲಿ ಜಾವಾ ವಾಲ್ಕನೋಸ್‌ಗೆ ಮಿಡ್ ನೈಟ್ ಟ್ರೆಕ್ ಮಾಡಿದ್ದೆ..ಅಲ್ಲಿನ ಫೈನ್ ಸ್ಯಾಂಡ್‌ನಲ್ಲಿ ನಡೆದಾಡುವುದೇ ಕಷ್ಟ. ವಾಲ್ಕನೋಸ್ ಬಂದು ಸಲ್‌ಫ್ಯೂರಿಕ್ ಆಸಿಡ್‌ನ ಸರೋವರ ನಿರ್ಮಾಣವಾಗಿದೆ. ಅದನ್ನು ಬ್ಲೂಫ್ಲೇಮ್ ಎಂದು ಕರೆಯುತ್ತಾರೆ. ಗಾಳಿಯಲ್ಲೇ ಸಲ್‌ಫ್ಯೂರಿಕ್ ಆಸಿಡ್‌ನ ವಾಸನೆಯಿರುತ್ತದೆ. ಮಾಸ್ಕ್ ಹಾಕದೆ ಹೋದರೆ ಅಸ್ತಮಾ ಅಟ್ಯಾಕ್ ಆಗಿಬಿಡುತ್ತದೆ. ನೋಡುವುದಕ್ಕೆ ಸುಂದರವಾಗಿದೆಯಾದರೂ ಅಷ್ಟೇ ರಿಸ್ಕ್ ಇದೆ.