ಅಖಿಲಾ ಪಜಿಮಣ್ಣು: ಗೋಲ್ ಗುಂಬಜ್‌ನಲ್ಲಿ ವಂದೇ ಮಾತರಂ ಪ್ರತಿಧ್ವನಿ
ದಕ್ಷಿಣ ಭಾರತದ ತಾಜ್ ಮಹಲ್ ಎಂದೇ ಖ್ಯಾತಿ ಹೊಂದಿರುವ ಗೋಲ್ ಗುಂಬಜ್‌ಗೆ ಭೇಟಿನೀಡಿದ್ದೇನೆ. ವಿಶೇಷವೆಂದರೆ ಅಲ್ಲಿ ಮುಂಜಾನೆ 6.30ರ ಸಮಯದಲ್ಲಿ ವಂದೇಮಾತರಂ ಹಾಡಿದ್ದೆ. ಅದು ಹಲವಾರು ಬಾರಿ ಪ್ರತಿಧ್ವನಿಸಿತ್ತು. ನನಗದು ಪಾಸಿಟಿವ್ ವೈಬ್ ನೀಡಿತ್ತು.
ಕನ್ನಡದ ಕೋಗಿಲೆ ಎಂಬ ಸಿಂಗಿಂಗ್ ಶೋ ಮೂಲಕ ಕನ್ನಡಿಗರ ಮನಗೆದ್ದ ಗಾಯಕಿ ಅಖಿಲಾ ಪಜಿಮಣ್ಣು, ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರುವ ಸುವರ್ಣ ಸಂಕಲ್ಪ ಅಮೃತಘಳಿಗೆ ನಿರೂಪಕಿಯಾಗಿದ್ದಾರೆ. ದೇಶ ವಿದೇಶಗಳಲ್ಲಿ ಸಾಕಷ್ಟು ಶೋಗಳನ್ನು ನೀಡುತ್ತಾ ಬ್ಯುಸಿಯಾಗಿರುವ ಇವರು, ವೃತ್ತಿಗಾಗಿಯೂ ಪ್ರಯಾಣಿಸುತ್ತೇನೆ, ಬಿಡುವಾದಾಗ ಮಿ ಟೈಮ್ ಪ್ರವಾಸ ಮಾಡುತ್ತೇನೆ ಎನ್ನುತ್ತಾರೆ. ಅಖಿಲಾ ಪಜಿಮಣ್ಣು ಪ್ರವಾಸಿ ಜೀವನ ಈ ವಾರದ ಪ್ರವಾಸಿ ಪ್ರಪಂಚದಲ್ಲಿ.
ಕುಟುಂಬ ಪ್ರವಾಸ ನನಗಿಷ್ಟ
ಪ್ರಯಾಣ, ಪ್ರವಾಸವೆಂದರೆ ಚಿಕ್ಕಂದಿನಿಂದಲೂ ನನಗೆ ಬಹಳ ಖುಷಿ ಕೊಡುವ ವಿಚಾರ. 90-95% ಪ್ರವಾಸಿ ಜೀವನವಿದ್ದರೂ ನನಗೆ ಬೇಸರವೆನಿಸುವುದಿಲ್ಲ. ಆದರೆ ಸ್ನೇಹಿತರ ಜತೆಗೆ ಸುತ್ತಾಡುವುದಕ್ಕಿಂತ, ಪ್ರವಾಸ ಹೋಗುವುದಕ್ಕಿಂತ ಹೆತ್ತವರೊಂದಿಗೆ, ಕುಟುಂಬದ ಜತೆಗೆ ಹೋಗುವುದಕ್ಕೆ ನನಗೆ ಇಷ್ಟವೆನಿಸುತ್ತದೆ.
ಕಲಾವಿದನಿಗೆ ಪ್ರವಾಸವೇ ಜೀವನ

ಬದುಕಿಗೆ ಟ್ರಾವೆಲ್ ಬೇಕೋ ಅಥವಾ ಮ್ಯೂಸಿಕ್ ಇದ್ದರೆ ಸಾಕೇ ಎಂಬ ಪ್ರಶ್ನೆ ನನ್ನೆದುರು ಬಂದರೆ ಮೊದಲ ಆಯ್ಕೆ ಮ್ಯೂಸಿಕ್. ಆದರೆ ಖುಷಿಯ ವಿಚಾರವೆಂದರೆ ಕಲಾವಿದನೆಂದರೆ ಹರಿಯುವ ನೀರಿನಂತೆ ಚಲನಶೀಲನಾಗಿರಲೇ ಬೇಕು. ಪ್ರಯಾಣವೆಂಬುದು ಕಲಾವಿದರ ಜೀವನದಲ್ಲಿ ನಿರಂತರವಾಗಿರುತ್ತದೆ. ಕಾರ್ಯಕ್ರಮವನ್ನು ನೀಡುವುದಕ್ಕಾಗಿ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ಟ್ರಾವೆಲ್ ಮಾಡುತ್ತಲೇ ಇರಬೇಕಾಗುತ್ತದೆ. ಆಯೋಜಿತ ಕಾರ್ಯಕ್ರಮಗಳ ನಂತರ ಬಿಡುವು ಮಾಡಿಕೊಂಡು ಅಲ್ಲಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೂ ಭೇಟಿ ನೀಡುತ್ತೇನೆ.
ವಿಷ್ಣು ಸಹಸ್ರನಾಮದೊಂದಿಗೆ ಮೊದಲ ರೈಡ್
ನನ್ನ ಎಲ್ಲ ಪ್ರಯಾಣದಲ್ಲೂ ಸಂಗೀತಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುತ್ತೇನೆ. ಎಲ್ಲೇ ಇರಲಿ ಬೆಳಗ್ಗೆ ಕಾರ್‌ನಲ್ಲಿ ಮೊದಲ ಪ್ರಯಾಣವೆಂದರೆ ವಿಷ್ಣು ಸಹಸ್ರನಾಮವನ್ನು ಹಾಕುತ್ತೇನೆ. ನಂತರ ಕರ್ನಾಟಕ ಶಾಸ್ತ್ರೀಯ ಸಂಗೀತ, ರಾಜೇಶ್ ಕೃಷ್ಣನ್, ಸೋನು ನಿಗಮ್ ಅವರಂಥ ದಿಗ್ಗಜರು ಹಾಡಿರುವ ಕನ್ನಡ ಹಿಟ್ಸ್ ಕೇಳುತ್ತೇನೆ. ಹಿಂದಿ ಹಾಡುಗಳು ಇಲ್ಲವೆಂದಲ್ಲ. ಸಂಜಯ್ ಲೀಲಾ ಬನ್ಸಾಲಿ ಹಾಗೂ ಘಜಲ್ಸ್ ಕೇಳುತ್ತಿರುತ್ತೇನೆ. ಪ್ಲೇ ಲಿಸ್ಟ್ ರನ್ ಆಗುತ್ತಲೇ ಇರುತ್ತದೆ. ಡಿಪೆಂಡ್ಸ್ ಆನ್ ದಿ ಮೂಡ್.
ಕಡಲತೀರಗಳಿಂದ ನಾನು ದೂರವಿರುವೆ
ನನ್ನೂರು ದಕ್ಷಿಣ ಕನ್ನಡದ ಪುತ್ತೂರು. ಅಲ್ಲಿಗೆ ಹೋದಾಗಲೆಲ್ಲಾ ತಪ್ಪದೇ ಒಂದಷ್ಟು ಕಡೆಗಳಿಗೆ ಹೋಗುವುದಿದೆ. ಪುತ್ತೂರು ಮಹಾಲಿಂಗೇಶ್ವರ ದೇವಾಲಯಕ್ಕೆ ಮೊದಲ ಭೇಟಿ, ನಂತರ ಮಂಗಳ್ ಸ್ಟೋರ್ಸ್‌ನಲ್ಲಿ ಮಸಾಲೆಪುರಿ, ಶಾಪಿಂಗ್ ಅಂದರೆ ಪುತ್ತೂರಿನ ಫೇಮಸ್ ಸಂಜೀವ್ ಶೆಟ್ಟಿ. ಮಂಗಳೂರು ಕಡಲ ತೀರ ಸಮೀಪದಲ್ಲೇ ಇದ್ದರೂ ನನಗೆ ಬೀಚ್‌ಗಳೆಂದರೆ ಅಷ್ಟೊಂದು ಇಷ್ಟವೇನಲ್ಲ. ಹಸಿರು ಪರಿಸರ, ಹಿಲ್ಸ್ ಏರಿಯಾಗಳಿದ್ದರೆ ಅವುಗಳಿಗೆ ಹೋಗುತ್ತೇನಷ್ಟೇ.
ದುಬೈ ಟ್ರಾವೆಲ್

ಇತ್ತೀಚೆಗಷ್ಟೇ ಶೋ ಒಂದಕ್ಕಾಗಿ ದುಬೈ ಪ್ರವಾಸ ಮಾಡಿ ಬಂದಿದ್ದೆ. ಈ ಮೊದಲೂ ದುಬೈಗೆ ಭೇಟಿ ಕೊಟ್ಟಿದ್ದೇನಾದರೂ ಆಗ ನೋಡಲಾಗದ ಒಂದಷ್ಟು ತಾಣಗಳನ್ನು ಈ ಬಾರಿಯ ಪ್ರವಾಸದ ವೇಳೆ ನೋಡಿ ಬಂದಿದ್ದೇನೆ. ಇದೊಂದು ರೀತಿಯಲ್ಲಿ ಸೋಲೋ ಟ್ರಾವೆಲ್ ಎನ್ನಬಹುದು.
ದಕ್ಷಿಣ ಭಾರತದ ತಾಜ್ ಮಹಲ್‌ಗೆ ಭೇಟಿ
ಕರ್ನಾಟಕದಲ್ಲಿ ಅನೇಕ ಜಾಗ ಸುತ್ತಾಡಿದ್ದೇನೆ. ಬಾದಾಮಿ ಐಹೊಳೆ, ಪಟ್ಟದಕಲ್ಲು ನನಗೆ ಬಹಳ ಇಷ್ಟವಾದ ಪ್ರವಾಸಿ ಸ್ಥಳಗಳು. ಇದರ ಜತೆಗೆ ದಕ್ಷಿಣ ಭಾರತದ ತಾಜ್ ಮಹಲ್ ಎಂದೇ ಖ್ಯಾತಿ ಹೊಂದಿರುವ ಗೋಲ್ ಗುಂಬಜ್ ಗೂ ಹೋಗಿದ್ದೇನೆ. ವಿಶೇಷವೆಂದರೆ ಅಲ್ಲಿ ಮುಂಜಾನೆ 6.30ರ ಸಮಯದಲ್ಲಿ ವಂದೇಮಾತರಂ ಹಾಡಿದ್ದೆ. ಅದು ಹಲವಾರು ಬಾರಿ ಪ್ರತಿಧ್ವನಿಸಿತ್ತು. ನನಗದು ಪಾಸಿಟಿವ್ ವೈಬ್ ನೀಡಿತ್ತು.
ಶಿಕಾಗೋದಲ್ಲಿ ಹಿಮ ಮಳೆ

ನಾನು ಯುಎಸ್ ನಲ್ಲಿದ್ದಾಗ ಕನ್ನಡ ಕೂಟಗಳು ಆಯೋಜಿಸುವ ಅನೇಕ ಶೋಗಳಿಗೆ ಹೋಗುತ್ತಿದ್ದೆ. ಅದರ ಜತೆಗೆ ಅಲ್ಲಿನ ಪ್ರವಾಸಿ ತಾಣಗಳನ್ನೂ ನೋಡಿ ಬರುತ್ತಿದ್ದೆ. ಹಾಗೆ ಹೋದ ತಾಣಗಳ ಪೈಕಿ ಶಿಕಾಗೋ ಪ್ರಮುಖವಾದುದು. ಹಿಮ, ಮಂಜಿನ ಪ್ರದೇಶಗಳೆಂದರೆ ನನಗೆ ಬಹಳ ಇಷ್ಟ. ಹಿಮ ತುಂಬಿದ ಜಾಗಗಳಿಗೆ ಅದಕ್ಕೂ ಮೊದಲೇ ಹೋದ ಅನುಭವವೂ ನನಗಿದೆ. ಆದರೆ ಶಿಕಾಗೋದಲ್ಲಿಯೇ ಮೊದಲ ಬಾರಿಗೆ ಹಿಮ ಬೀಳುವ ದೃಶ್ಯವನ್ನು ನೇರವಾಗಿ ನೋಡುವ ಅವಕಾಶ ನನಗೆ ಒದಗಿಬಂದಿತ್ತು.
ಯುರೋಪ್ ಖಂಡವನ್ನೇ ಸುತ್ತುವಾಸೆ
ಇದೇ ವರ್ಷ ಅಂತೇನಿಲ್ಲ, ಆದರೆ ಮುಂಬರುವ ವರ್ಷಗಳಲ್ಲಿ ಯುರೋಪ್ ಎಲ್ಲ ದೇಶಗಳಿಗೂ ಹೋಗಬೇಕೆಂಬುದು ನನ್ನ ಬಹು ದೊಡ್ಡ ಕನಸು. ಪ್ರತಿ ದೇಶದ ಸಂಸ್ಕೃತಿ, ಆಹಾರ, ಪರಿಸರವೆಲ್ಲವನ್ನೂ ನಾನೇ ಹೋಗಿ ಖುದ್ದು ತಿಳಿಯುವ ಆಸೆಯಿದೆ.
ಮಡಿಕೇರಿಯಲ್ಲಿ ಓಪನ್ ಜೀಪ್ ಸವಾರಿ
ಟೂರ್ ಅಂದರೆ ಮೊದಲು ನೆನಪಾಗುವುದೇನೆಂದರೆ ವರ್ಷಗಳ ಹಿಂದೆ ಮಡಿಕೇರಿಯಲ್ಲಿ ನನ್ನ ಸಂಬಂಧಿಕರ ಕಾಫಿ ಎಸ್ಟೇಟ್ ನಲ್ಲಿ ಓಪನ್ ಜೀಪ್‌ನಲ್ಲಿ ಸುತ್ತಾಡಿದ್ದ ದಿನಗಳು. ಕಿರಿದಾದ ಮಣ್ಣಿನ ರಸ್ತೆಯಲ್ಲಿ ಓಪನ್ ಜೀಪ್ ಸವಾರಿ ಮಾಡುವುದು ಬಹಳ ಕಷ್ಟಕರವಾದರು ನನಗೆ ಖುಷಿಯೆನಿಸಿತ್ತು. ಆ ಅನುಭವ ಮತ್ತೆ ನನಗೆ ಸಿಗಲೇ ಇಲ್ಲ.
ಮಾಂದಲಪಟ್ಟಿ ಚಾರಣದ ಫಜೀತಿ

ಪ್ರವಾಸದ ವೇಳೆ ಫಜೀತಿ ಆಗುತ್ತಲೇ ಇರುತ್ತವೆ. ಅಂಥವುಗಳ ಪೈಕಿ ಮಡಿಕೇರಿಯ ಮಾಂದಲಪಟ್ಟಿ ಚಾರಣವನ್ನು ನೆನಪಿಸಿಕೊಳ್ಳಲೇಬೇಕು. ಆಗಿನ್ನೂ ಮಡಿಕೇರಿ ಲ್ಯಾಂಡ್ ಸ್ಲೈಡ್ ಆಗಿ 3-4 ತಿಂಗಳುಗಳಾಗಿರಬಹುದು. ಕುಟುಂಬ ಸಮೇತವಾಗಿ ನಾವು ಅಲ್ಲಿಗೆ ಹೋಗುವ ನಿರ್ಧಾರವಾಗಿತ್ತು. ಲ್ಯಾಂಡ್ ಸ್ಲೈಡ್ ಕಾರಣದಿಂದ ಮಾಂದಲಪಟ್ಟಿಗೆ ಹೋಗುವ ದಾರಿಯೇ ಬಂದ್ ಆಗಿದ್ದರಿಂದ ಸುಮಾರು 7ಕಿಮೀ ದೂರ ನಡೆದು ಮಾಂದಲಪಟ್ಟಿ ಸೇರಿ, ಅಲ್ಲಿಂದ ಜೀಪ್ ರೈಡ್ ಮಾಡಿ ಪೀಕ್ ಪಾಯಿಂಟ್ ತಲುಪಿದ್ದೆವು. ಅರ್ಧ ದಿನ ವಿಚಿತ್ರವಾದ ಆ ಹಾದಿಯಲ್ಲೇ ಕಳೆದುಹೋಗಿತ್ತು. ನಿಜ ಹೇಳಬೇಕೆಂದರೆ ಎಲ್ಲಿ ಚಾರಣ ಮಾಡಬೇಕಿತ್ತೋ ಅಲ್ಲಿ ಮಾಡದೆ, ಎಲ್ಲಿ ಚಾರಣದ ಅಗತ್ಯವಿದ್ದಿಲ್ಲವೋ ಅಲ್ಲಿ ಚಾರಣ ಮಾಡುವಂತಾಗಿತ್ತು. ಆದರೂ ಮಾಂದಲಪಟ್ಟಿಯ ಅದ್ಭುತ ನೋಟ ಎಲ್ಲ ಸುಸ್ತನ್ನೂ ಮರೆಸಿಬಿಟ್ಟಿತ್ತು.
ಗೂಗ್ಲಿ ಗೂಗಲ್ ಸುಂದರಿ
ಗೂಗಲ್ ಸುಂದರಿ ಅದೆಷ್ಟು ಸತಾಯಿಸುತ್ತಾಳೆಂದರೆ ಅನೇಕ ಬಾರಿ ದಟ್ಟ ಕಾನನದ ನಡುವೆ ಕೈಬಿಟ್ಟಿದ್ದಾಳೆ. ಒಮ್ಮೆ ಕನ್ಸರ್ಟ್‌ಗಾಗಿ ಅಪ್ಪನ ಜತೆ ಕಾರಿನಲ್ಲಿ ಬಾಗಲಕೋಟೆಗೆ ಹೋಗುವ ಮಧ್ಯರಾತ್ರಿಯಲ್ಲಿ ಮ್ಯಾಪ್ ತಪ್ಪು ದಾರಿ ತೋರಿಸಿ ಕಾಡೆಲ್ಲಾ ಅಲೆಯುವಂತೆ ಮಾಡಿದ್ದಳು. ಮತ್ತೊಮ್ಮೆ ನಾಗರಹೊಳೆ ಅಭಯಾರಣ್ಯದಲ್ಲಿ ಹಾದಿ ತಪ್ಪಿಸಿ, ಒಂಟಿ ಸಲಗದ ಮುಂದೆ ನಮ್ಮನ್ನು ತಂದು ನಿಲ್ಲಿಸಿಬಿಟ್ಟಿದ್ದಳು. ಗೂಗಲ್ ಸುಂದರಿಯಿಂದಾಗಿ ಅನೇಕ ಅಡ್ವೆಂಚರ್ ಟೂರ್ ಮಾಡಿದಂತಾಗಿದೆ.

ಪ್ರವಾಸದಲ್ಲಿ ಹೆಡ್ ಫೋನ್‌ಗೆ ಗುಡ್ ಬೈ
ಸಾಮಾನ್ಯವಾಗಿ ಸಣ್ಣದೊಂದು ಗ್ಯಾಪ್ ಸಿಕ್ಕರೂ ನಾವು ಮೊಬೈಲ್ ಸ್ಕ್ರಾಲಿಂಗ್‌ನಲ್ಲೇ ಕಾಲಕಳೆಯುತ್ತೇವೆ. ಇನ್ನು ಪ್ರವಾಸದ ವೇಳೆ ಹೆಡ್ ಫೋನ್ ಜತೆಗಿರಿಸಿಕೊಂಡರಂತೂ ಹಾಡುಗಳ ಮೋಡಿಗೆ ಸಿಲುಕುತ್ತೇವೆ. ಆದ್ದರಿಂದ ನಾನು ಪ್ರವಾಸದಲ್ಲಿ ಹೆಡ್ ಫೋನ್ ಜತೆಗೆ ಕೊಂಡೊಯ್ಯುವುದಿಲ್ಲ. ಪ್ರವಾಸ ಮಾಡುವ ಉದ್ದೇಶವೇ ಎಲ್ಲರೊಂದಿಗೆ ಬೆರೆತು ಕಾಲ ಕಳೆಯುವುದು, ಅಲ್ಲಿನ ಪರಿಸರವನ್ನು ಸಂಭ್ರಮಿಸುವುದು ಆಗಿರುವಾಗ, ಹೆಡ್ ಫೋನ್ ಯಾಕೆ ಬೇಕು?