ಅಮೆಜಾನ್ ಪ್ರೈಮ್ನ ಉದ್ಯೋಗಕ್ಕೆ ಗುಡ್ ಬೈ
ನಮ್ರತಾ ಮೋಹನ್ ಹೀಗೆ ಗುರುತಿಸಿಕೊಂಡಿರುವುದಕ್ಕಿಂತಲೂ “ಟೆಂಪಲ್ ಗರ್ಲ್” ಎಂಬ ಹೆಸರಿನ ಮೂಲಕೇ ಪರಿಚಿತರಾದವರು. ಸಂಪ್ರದಾಯ ಮತ್ತು ಆಧುನಿಕತೆಯ ಸೊಗಡನ್ನು ಏಕಕಾಲದಲ್ಲಿ ಪ್ರತಿಬಿಂಬಿಸುವ ವ್ಯಕ್ತಿತ್ವದ ಇವರು, ದೇವಸ್ಥಾನಗಳು, ನಂಬಿಕೆ, ಭಕ್ತಿ ಮತ್ತು ಸಂಸ್ಖೃತಿಯನ್ನು ವಿಡಿಯೋ ಚಿತ್ರೀಕರಣದ ಮೂಲಕ ಸಮಾಜಕ್ಕೆ ತಲುಪಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಸಮಾಜದಲ್ಲಿ ಸಕಾರಾತ್ಮ ಚಿಂತನೆಗಳನ್ನು ಬೆಳೆಸುವಲ್ಲಿ ವಿಶೇಷ ಕಾಳಜಿ ವಹಿಸುತ್ತಿದ್ದಾರೆ.
ವಿದ್ಯಾಭ್ಯಾಸಕ್ಕೂ ವೃತ್ತಿಗೂ ಸಂಬಂಧವೇ ಇಲ್ಲವಾದರೂ ಆಸಕ್ತಿಯನ್ನೇ ಜೀವನವನ್ನಾಗಿಸಿಕೊಂಡಿರುವ ಅನೇಕ ಮಂದಿ ನಮ್ಮ ನಡುವೆಯೇ ಇದ್ದಾರೆ. ಅಂಥವರ ಪೈಕಿ ಟೆಂಪಲ್ ಗರ್ಲ್ ಎಂದೇ ಹೆಸರಾಗಿರುವ ನಮ್ರತಾ ಮೋಹನ್ ಪ್ರಮುಖರು. ಮಂಗಳೂರಿನಲ್ಲಿ ಧಾರ್ಮಿಕ ವಾತಾವರಣದಲ್ಲಿ ಹುಟ್ಟಿ ಬೆಳೆದ ಇವರು, ಅಲ್ಲಿನ ದೇವಸ್ಥಾನಗಳಲ್ಲಿ ನಡೆಯುವ ಪೂಜೆ, ಸಂಪ್ರದಾಯಗಳು, ಹಬ್ಬಗಳನ್ನೇ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡವರು. ಭಕ್ತಿ ಹಾಗೂ ಸಂಸ್ಕೃತಿಯ ಮೇಲಿನ ಆಸಕ್ತಿಯಿಂದ ದೇವಸ್ಥಾನಗಳಿಗೆ ಭೇಟಿ ನೀಡುವುದು, ಅಲ್ಲಿ ಶಾಂತಿ-ನೆಮ್ಮದಿ, ಶಿಸ್ತಿನ ಬದುಕು ಮತ್ತು ಆಧ್ಯಾತ್ಮಿಕತೆ ಬಗ್ಗೆ ವಿಶೇಷವಾಗಿ ಗಮನ ಹರಿಸಿದವರು.
ಇದನ್ನೂ ಓದಿ: ಬಲಿ ಜಾತ್ರಾ - ದೂರ ತೀರದ ಯಾನ
ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗೂ ಮಂಗಳೂರಿನಲ್ಲೇ ಮುಗಿಸಿ, ಎಂಬಿಎ ಕನಸಿನೊಂದಿಗೆ ಮುಂಬೈಗೆ ಹೋಗಿದ್ದ ನಮ್ರತಾ, ಶಿಕ್ಷಣ ಮುಗಿಸುತ್ತಲೇ ಹೆಸರಾಂತ ಕಂಪನಿ ಜೆಪಿ ಮಾರ್ಗನ್ ನಲ್ಲಿ ವೃತ್ತಿ ಜೀವನವನ್ನು ಆರಂಬಿಸಿದರು. ಮುಂದಿನ ದಿನಗಳಲ್ಲಿ ಸಿಟಿ ಬ್ಯಾಂಕ್, ವಲ್ಡ್ಸ್ ಡಿಸ್ನಿ ಕಂಪನಿ ಮಾತ್ರವಲ್ಲದೆ ಅಮೆಜಾನ್ ಪ್ರೈಮ್ ವಿಡಿಯೋದಲ್ಲೂ ಉನ್ನತ ಹುದ್ದೆಯನ್ನು ಅಲಂಕರಿಸಿ, ಸುಮಾರು 12 ವರ್ಷಗಳ ಉದ್ಯೋಗದ ಅನುಭವ ಹೊಂದಿದ್ದಾರೆ. ಆದರೂ ದೇವಸ್ಥಾನಗಳ ಮಹತ್ವ, ಸಂಪ್ರದಾಯಗಳ ಅರ್ಥ ಮತ್ತು ಭಕ್ತಿಯ ಸಾರವನ್ನು ಜನರಿಗೆ ಸರಳವಾಗಿ ಪರಿಚಯಿಸುವ ನಿಟ್ಟಿನಲ್ಲಿ ಕೈತುಂಬಾ ಸಂಬಳ ನೀಡುವ ಉದ್ಯೋಗವನ್ನು ಬಿಟ್ಟು ತವರಿಗೆ ಮರಳಿ ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಹಂಚುವ ಕೆಲಸವನ್ನು ಮಾಡುತ್ತಿದ್ದಾರೆ. ಅವರ ವಿಡಿಯೋಗಳು ಮತ್ತು ಬರಹಗಳು ವಿಶೇಷವಾಗಿ ಯುವಜನತೆಯನ್ನು ಆಕರ್ಷಿಸುತ್ತಿವೆ. ಟೆಂಪಲ್ ಗರ್ಲ್ ನಮ್ರತಾ ಮೋಹನ್ ಜತೆಗಿನ ಸಂದರ್ಶನ ಇಲ್ಲಿದೆ.

ʻಟೆಂಪಲ್ ಗರ್ಲ್ʼ ಪಯಣ ಶುರುವಾಗಿದ್ದು ಹೇಗೆ?
ಸಿಟಿ ಬ್ಯಾಂಕ್‌ನಲ್ಲಿ ಉದ್ಯೋದಲ್ಲಿದ್ದ ನನಗೆ ಮದುವೆ ನಿಶ್ಚಯವಾಗಿತ್ತು. ಅಮೇರಿಕಾದಲ್ಲಿ ವೃತ್ತಿಯಲ್ಲಿರುವ ಅವರೊಂದಿಗೆ ಆಗಾಗ ದೂರವಾಣಿಯ ಮೂಲಕ ಸಂಪರ್ಕದಲ್ಲಿದ್ದೆ. ಭಾರತ ಬಿಟ್ಟು ಹೋಗುವ ಮನಸ್ಸಾಗದೆ ಮದುವೆ ದಿನ ಹತ್ತಿರವಾಗುತ್ತಿದ್ದಂತೆ ಅವರ ಬಳಿ “ನೀವ್ಯಾಕೆ ಭಾರತಕ್ಕೆ ಮರಳಬಾರದು” ಎಂದು ಕೇಳಿದ್ದೆ. ನನ್ನಿಷ್ಟಕ್ಕೆ ಮಣೆ ಹಾಕಿದ ಅವರು ಮದುವೆಗೂ ಮುಂಚಿತವಾಗಿಯೇ ಉನ್ನತ ಹುದ್ದೆಗೆ ರಾಜೀನಾಮೆ ನೀಡಿ ಮಂಗಳೂರಿಗೆ ಬಂದಿದ್ದರು. ಮನೆಯವರಿಗೆ ಮೊದಲು ಇದನ್ನು ಒಪ್ಪಿಕೊಳ್ಳುವುದು ಕಷ್ಟವಾಯಿತಾದರೂ ನಮ್ಮ ನಿರ್ಧಾರಕ್ಕೆ ಅಡ್ಡಿ ಮಾಡಲಿಲ್ಲ. ಮದುವೆ ಕಳೆದು ಎಲ್ಲರೂ ಹನಿಮೂನ್ ಬಗ್ಗೆ ಚಿಂತೆ ಮಾಡಿದರೆ ನಾವಿಬ್ಬರೂ ಚಾರ್ ಧಾಮ್ ಯಾತ್ರೆ ಮಾಡುವ ಬಗ್ಗೆ ಯೋಚಿಸಿದೆವು. ಆದರೆ ಆ ಕಾಲಕ್ಕೆ ಟ್ರಾವೆಲ್ ಏಜೆನ್ಸಿಗಳು ಅಷ್ಟರ ಮಟ್ಟಿಗೆ ಲಬ್ಯವಿರದ ಕಾರಣ ನಾವೇ ಪ್ಲ್ಯಾನ್ ಮಾಡಿಕೊಂಡು 20 ದಿನಗಳ ಚಾರ್ ಧಾಮ್ ಯಾತ್ರೆಗೆ ಹೊರಟೆವು. ಇದು ನಮ್ಮ ಜೀವನದಲ್ಲಿ ಹೊಸ ತಿರುವಿಗೆ ಕಾರಣವಾದ ಯಾತ್ರೆಯದು. ದೇವಾಲಯಗಳೆಂದರೆ ವಯಸ್ಸಾದವರು ಮಾತ್ರ ಹೋಗುವ ಜಾಗ ಎಂಬ ತಪ್ಪು ತಿಳುವಳಿಕೆಯಿಂದ ಹೊರಬಂದು ಶರೀರದಲ್ಲಿ ಶಕ್ತಿಯಿರುವಾಗಲೇ ನಾವು ಈ ಯಾತ್ರೆಗೆ ಹೋಗಿ ಎಂದು ಸಮಾಜಕ್ಕೆ ಸಾರಿದೆವು. ಅಲ್ಲಿಂದ ಬಂದ ನಂತರ ಅಲ್ಲಿನ ಅನುಭವಗಳ ವಿಡಿಯೋ ಚಿತ್ರೀಕರಣವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡೆವು. ಅದಕ್ಕೆ ಸಿಕ್ಕಿದ ಪ್ರತಿಕ್ರಿಯೆಗಳು ಕಂಡು ನಾವೇ ಒಂದು ಸ್ಪಿರಿಚ್ಯುವಲ್ ಟ್ರಾವೆಲ್ ಏಜೆನ್ಸಿ ಮಾಡಲು ಮುಂದಾದೆವು..ಹೀಗೆ ಹೊಸ ಉದ್ಯಮಕ್ಕೆ ಕಾಲಿಡುವುದರ ಜತೆಗೆ ನಮ್ಮ ʻಟೆಂಪಲ್ ಗರ್ಲ್ʼ ಪಯಣ ಪ್ರಾರಂಭವಾಯ್ತು.
ಕೊರೋನಾ ಕಾಲದಲ್ಲಿ ಪ್ರವಾಸೋದ್ಯಮಕ್ಕೂ ತೀವ್ರವಾದ ಹೊಡೆತ ಬಿದ್ದಿತ್ತು. ಇದರಿಂದ ನೀವು ಚೇತರಿಸಿಕೊಂಡಿದ್ದು ಹೇಗೆ?
ಕೊರೋನಾ ಸಂದರ್ಭದಲ್ಲಿ ಯಾವ ಕ್ಷೇತ್ರಗಳಿಗೂ ಉಳಿಗಾಲವಿರಲಿಲ್ಲ. ನಾವಾಗ ಬಾಂಬೆಯಲ್ಲೇ ಇದ್ದೆವು. ಅಲ್ಲಿ ಉಳಿದುಕೊಳ್ಳುವುದು ಕಷ್ಟವೆನಿಸಿ ನನಗೂ ವರ್ಕ್ ಫ್ರಂ ಹೋಮ್ ಸಿಕ್ಕಿದ್ದರಿಂದ ಎಲ್ಲವನ್ನೂ ಪ್ಯಾಕ್ ಮಾಡಿಕೊಂಡು ಮಂಗಳೂರಿಗೆ ಬಂದೆವು. ಹೊರಗೆಲ್ಲೂ ಹೋಗುವ ಅವಕಾಶವಿರಲಿಲ್ಲವಾದರೂ ಖಿನ್ನತೆಗೊಳಗಾದ ಸಮಾಜದಲ್ಲಿ ಧನಾತ್ಮಕ ಚಿಂತನೆಗಳನ್ನು ಬಿತ್ತಬೇಕೆನಿಸಿ, ಮಂಗಳೂರಿನಿಂದ ಉಡುಪಿಯ ವರೆಗು ಇರುವ ಅನೇಕ ದೇವಾಲಯಗಳಿಗೆ ತೆರಳಿ, ಅನುಮತಿ ಪಡೆದು ಚಿತ್ರೀಕರಣ ಮಾಡಿ ನಮ್ಮ ಯೂಟ್ಯೂಬ್ ಚಾನಲ್ ಮೂಲಕ ಜನರಿಗೆ ತಲುಪಿಸುತ್ತಿದ್ದೆವು. ತಾಂತ್ರಿಕವಾಗಿ ಯಾವುದೇ ಅನುಭವವಿಲ್ಲದೇ ಹೋದರೂ ಕ್ಯಾಮೆರಾಗಳ ಬಳಕೆ, ನಿರೂಪಣೆ ಹಾಗೂ ವಿಡಿಯೋ ಎಡಿಟಿಂಗ್ ಸೇರಿದಂತೆ ಎಲ್ಲವನ್ನೂ ಆನ್ ಲೈನ್ ಮೂಲಕವೇ ಕಲಿತು ಜನರ ಮುಂದೆ ಸುಂದರವಾದ ವಿಡಿಯೋ ಪರಿಚಯಿಸಿ ಗೆದ್ದಿರುವುದೇ ಖುಷಿ ನಮಗೆ.

ಅನೇಕರ ಡ್ರೀಮ್ ಕಂಪನಿ ಅಮೆಜಾನ್ ಪ್ರೈಮ್. ಅದರಲ್ಲಿ ಉದ್ಯೋಗ ಸಿಕ್ಕಿದರೂ ಟೆಂಪಲ್ ಜರ್ನಿಗೆ ವಾಪಸ್ಸಾಗಿದ್ದೇಕೆ ?
ಪ್ಯಾಂಡಮಿಕ್ ಮುಗಿಯುತ್ತಲೇ ಮತ್ತೆ ಬಾಂಬೆಗೆ ವಾಪಸ್ಸಾದೆವು. ಮತ್ತೆ ಬ್ಯುಸಿನೆಸ್ ಶುರುವಾಗಿ ಎಂದಿನಂತೆ ಜೀವನ ಪ್ರಾರಂಭವಾಯಿತು. 3 ತಿಂಗಳ ಆಯ್ಕೆ ಪ್ರಕ್ರಿಯೆ, ಸಂದರ್ಶನಗಳ ಹಂತವನ್ನು ದಾಟಿ ನನ್ನ ಕನಸಿನ ಅಮೆಜಾನ್ ಪ್ರೈಮ್ ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿತ್ತು. ಒಂದೂವರೆ ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದರೂ ಮನಸಿಗೆ ಯಾಕೋ ತೃಪ್ತಿಯೆನಿಸಲಿಲ್ಲ. ಕೊರೋನಾ ಕಾಲಘಟ್ಟದಲ್ಲಿ ಎರಡು ವರ್ಷಗಳ ಕಾಲ ಕೈಯಲ್ಲಿ ದುಡ್ಡಿರಲಿಲ್ಲ, ಭಯದ ನಡುವೆಯೇ ಕಾಲ ಕಳೆದರೂ ದೇವಾಲಯಗಳ ಸುತ್ತಾಟ, ಮಾಹಿತಿಯನ್ನು ಹಂಚಿಕೊಳ್ಳುವ ಪ್ರಕ್ರಿಯೆ ಮನಸ್ಸಿಗೆ ನೆಮ್ಮದಿ ನೀಡಿತ್ತು. ಹಾಗೆ ಖುಷಿಯಿಲ್ಲದೆ ಉದ್ಯೋಗ ಬೇಡವೆನಿಸಿ ಮಂಗಳೂರಿಗೆ ವಾಪಾಸ್ಸಾದೆವು. ಮಗಳಿನ್ನೂ ಚಿಕ್ಕವಳಿದ್ದುದರಿಂದ ಅವಳಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಯ್ತು. ಜತೆಗೆ ನಮ್ಮ ಸಂಸ್ಕೃತಿಯ ಇಂದಿನ ಯುವ ಜನತೆಗೆ ಹಂಚಿಕೊಳ್ಳುವುದಕ್ಕಾಗಿ ಪೂರ್ಣ ಪ್ರಮಾಣದಲ್ಲಿ ವಿಡಿಯೋ ಕಂಟೆಂಟ್ ಕ್ರಿಯೇಟರ್ ಆಗಿಬಿಟ್ಟೆ. ಟೆಂಪಲ್ ಗರ್ಲ್ ಚಾನೆಲ್ ಪ್ರಾರಂಭಿಸಿ ಒಂದು ವರ್ಷವಾಗಿದೆ. ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದೇವೆ.
ನೀವು ಮಾಡುವ ವಿಡಿಯೋ ಚಿತ್ರೀಕರಣಕ್ಕೆ ಪೂರ್ವತಯಾರಿ ಹೇಗಿರುತ್ತದೆ ?
ಚಿಕ್ಕ ವಿಡಿಯೋ ತುಣುಕನ್ನು ಮಾಡುವುದಾದರೂ ಅದರ ಹಿಂದೆ ಸಾಕಷ್ಟು ಶ್ರಮವಿರುತ್ತದೆ. ಇದಕ್ಕಾಗಿ ನಾವು ಹೆಚ್ಚಿನ ಅಧ್ಯಯನ ಮಾಡುತ್ತೇವೆ. ವಾರಗಳ ಕಾಲ ಆ ದೇವಾಲಯದ ಸುತ್ತಮುತ್ತಲಿನ ಪರಿಸರದಲ್ಲಿದ್ದು, ಅಲ್ಲಿನ ಅರ್ಚಕರು, ಭಕ್ತರು ಹೀಗೆ ಎಲ್ಲರನ್ನೂ ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸಿ ವಿಡಿಯೋ ಸಿದ್ಧಪಡಿಸುತ್ತೇವೆ. ಈಗಾಗಲೇ 300 ಕ್ಕೂ ಹೆಚ್ಚು ವಿಡಿಯೋಗಳಾಗಿವೆ. ಪ್ರತಿಯೊಂದಕ್ಕೂ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅವರು ಇನ್ನೊಂದಷ್ಟು ದೇವಾಲಯಗಳನ್ನು ಪರಿಚಯಿಸುವಂತೆ ಬೇಡಿಕೆಯಿಡುತ್ತಾರೆ. ಸಾಧ್ಯವಾದಷ್ಟು ಅವೆಲ್ಲವನ್ನೂ ಚಿತ್ರೀಕರಣ ಮಾಡಬೇಕೆಂದುಕೊಂಡಿದ್ದೇನೆ.

ದೇವಾಲಯಗಳ ವಿಡಿಯೋ ಚಿತ್ರೀಕರಣದ ವೇಳೆ ಕಷ್ಟವೆನಿಸಿದ ಸನ್ನಿವೇಶಗಳು ಯಾವುದು ?
ನಾನು ಮಾಡಿರುವ ಎಲ್ಲ ವಿಡಿಯೋ ಒಂದಕ್ಕಿಂತ ಒಂದು ಭಿನ್ನ. ಅದರಲ್ಲೂ ತಿರುಪತಿಗೆ ಹೋಗಲು ಬುಕಿಂಗ್ ಮಾಡಿಕೊಳ್ಳುವುದರ ಬಗ್ಗೆ ಮಾಡಿರುವ ವಿಡಿಯೋ ಹಾಗೂ 24 ಗಂಟೆಗಳು ತಿರುಪತಿಯಲ್ಲಿ ಎಂಬ ಬಗ್ಗೆ ಮಾಡಿರುವ ವಿಡಿಯೋ ಸಾಕಷ್ಟು ವೀಕ್ಷಣೆಯನ್ನು ಪಡೆದುಕೊಂಡಿದೆ. ಇನ್ನು ಭೂ ವರಾಹ ದೇವಾಲಯ ಸೇರಿದಂತೆ ಮೈಸೂರಿನ ಆಸುಪಾಸಿನಲ್ಲಿರುವ ದೇವಾಲಯಗಳು ವಿಡಿಯೋಗಳಿಗೂ ಹೆಚ್ಚಿನ ವ್ಯೂವ್ಸ್ ಬಂದಿವೆ. ಆದರೆ ನನಗೆ ಕೇದಾರನಾಥ ಪ್ರವಾಸದ ವಿಡಿಯೋ ಚಿತ್ರೀಕರಣ ಬಹಳ ಕಷ್ಟಕರವೆನಿಸಿತ್ತು. ಜೀವ ಪಣಕ್ಕಿಟ್ಟು ಮಾಡಿದ ಆ ಚಾರಣವನ್ನು ಎಂದಿಗೂ ಮರೆಯಲಾಗದು.
ಧಾರ್ಮಿಕ ಪ್ರವಾಸದ ವೇಳೆ ಯುವ ಜನತೆ ಗಮನಿಸಬೇಕಾದ ವಿಚಾರಗಳೇನು ?
ಇಂದಿನ ಯುವ ಜನತೆ ಚಾರಣದ ಉದ್ದೇಶಕ್ಕಾಗಿ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಆದರೆ ವರ್ಷಕ್ಕೊಂದು ಬಾರಿಯಾದರೂ ಐತಿಹ್ಯ, ಆಚರಣೆಗಳನ್ನು ತಿಳಿದುಕೊಳ್ಳುವ ಸಲುವಾಗಿ ಒಂದು ದೇವಾಲಯಕ್ಕಾದರೂ ಭೇಟಿ ನೀಡಲಿ. ಇದರ ಜತೆಗೆ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸರಳ ಹಾಗೂ ಸುಂದರ ಹಾಗೂ ದಶಕಗಳ ಇತಿಹಾಸವಿರುವ ಅನೇಕ ದೇವಾಲಯಗಳಿವೆ. ಶುಚಿತ್ವದ ಬಗ್ಗೆ ಇಲ್ಲಿ ಹೆಚ್ಚಿನ ಗಮನಹರಿಸುತ್ತಾರೆ. ಇಂಥ ಸಂದರ್ಭದಲ್ಲಿ ದೇವಾಲಯಗಳಿಗೆ ಭೇಟಿ ನೀಡುವ ಮಂದಿಯೂ ಶುಚಿತ್ವವನ್ನು ಕಾಪಾಡುವತ್ತ ಗಮನಹರಿಸಬೇಕು.