Tuesday, January 20, 2026
Tuesday, January 20, 2026

ʻಥಕಾಲಿʼ ಮೇಲೆ ಲವ್ವಾಗೋಗಿತ್ತು !

ಅನೇಕರಿಗೆ ದುಡ್ಡು ಉಳಿತಾಯ ಮಾಡಿ ಮನೆ ಕೊಂಡುಕೊಳ್ಳುವ ಆಸೆಯಿರುತ್ತದೆ. ಮತ್ತೆ ಹಲವರಿಗೆ ಕಾರು, ಚಿನ್ನಾಭರಣ, ಲಕ್ಸುರಿ ಲೈಫ್‌ ಹೀಗೆ ಅನೇಕ ಆಸೆಗಳಿರುತ್ತವೆ. ಆದರೆ ನಾನು ದುಡಿಯುವುದು ಇವೆಲ್ಲದಕ್ಕೂ ಹೆಚ್ಚಾಗಿ ಪ್ರವಾಸ ಮಾಡಬೇಕೆಂಬ ಕನಸಿನೊಂದಿಗೆ. ಅದು ನನಗೆ ಜೀವನೋತ್ಸಾಹವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಅರಳು ಹುರಿದಂತೆ ಸ್ಪಷ್ಟವಾದ ಮಾತು, ಒಮ್ಮೆ ಸ್ಟೇಜ್‌ ಹತ್ತಿದರೆ ಎಂಥವರನ್ನೂ ಬೆರಗಾಗಿಸುವ ಪ್ರತಿಭೆ. ಅನೇಕ ವರ್ಷಗಳಿಂದಲೂ ಕನ್ನಡದ ಹೆಸರಾಂತ ವಾಹಿನಿಗಳಲ್ಲಿ ನಿರೂಪಕಿಯಾಗಿ ಕೆಲಸ, ದೇಶ-ವಿದೇಶಗಳಲ್ಲೂ ಸಾಕಷ್ಟು ಕಾರ್ಯಕ್ರಮಗಳ ನಿರೂಪಣೆ ಮಾಡಿರುವ ಅನುಭವವಿರುವ ಅನುಪಮಾ ಭಟ್‌ ಪ್ರವಾಸ ಅಂದ್ರೆ ಜೀವ ಎನ್ನುತ್ತಾರೆ. ಶೋಗಳಿಗಾಗಿ ಸುತ್ತಿರುವ ದೇಶಗಳ ಪರಿಚಯವಷ್ಟೇ ಅಲ್ಲದೆ, ತಮ್ಮ ಪ್ರವಾಸಿ ಜೀವನದ ಬಗೆಗೂ ಮಾತನಾಡಿದ್ದಾರೆ.

ವೃತ್ತಿ ಹಾಗೂ ಪ್ರವೃತ್ತಿಗಾಗಿ ಪ್ರವಾಸ

ಅನುಪಮ (8)

ಪ್ರತಿ ವರ್ಷವನ್ನೂ ಪ್ರವಾಸ ಮತ್ತು ಪ್ರಯಾಣದ ಉದ್ದೇಶದಿಂದಲೇ ನೋಡುತ್ತೇನೆ. ಈ ವರ್ಷ ಯಾವೆಲ್ಲಾ ಜಾಗಗಳಿಗೆ ಹೋಗುವ ಅವಕಾಶ ಸಿಗಲಿದೆಯೋ, ಯಾವ ಜಾಗವನ್ನು ಎಕ್ಸ್‌ಪ್ಲೋರ್‌ ಮಾಡುವುದಕ್ಕಾಗುವುದೋ ಎಂಬುದಾಗಿಯೇ ನನ್ನ ಯೋಚನೆಯಿರುತ್ತದೆ. ಆದರೆ ಮುಂಚಿತವಾಗಿಯೇ ಎಲ್ಲವನ್ನೂ ಆಯೋಜನೆ ಮಾಡಿಕೊಂಡು ಕಾಯುವ ಸ್ವಭಾವದವಳು ನಾನಲ್ಲ. ಮುಂದಿನ ವರ್ಷ ನಾನು ಈ ಜಾಗಕ್ಕೆ ಹೋಗಲೇಬೇಕೆಂದು ಉದ್ದನೆಯ ಪಟ್ಟಿ ಸಿದ್ಧಮಾಡಿಕೊಂಡು ಕಾಯುವವಳೂ ಅಲ್ಲ. ವೃತ್ತಿಗಾಗಿ ಪ್ರವಾಸವೆಂಬುದು ನನ್ನ ಬದುಕಿನ ಜತೆಯಲ್ಲಿಯೇ ಬೆಸೆದುಕೊಂಡಿರುವುದರಿಂದ ಇದರ ನಡುವಿನ ಸಣ್ಣ ಬಿಡುವನ್ನೂ ನಾನು ಸದ್ಬಳಕೆ ಮಾಡಿಕೊಳ್ಳುತ್ತೇನೆ. ಒಂದಷ್ಟು ಜಾಗಗಳನ್ನು ಸುತ್ತಾಡುತ್ತೇನೆ, ಅಲ್ಲಿನ ಸಂಸ್ಕೃತಿ, ಸಂಪ್ರದಾಯ, ಆಹಾರ ಪದ್ಧತಿ ಎಲ್ಲವನ್ನೂ ನೇರ ನೋಡಿ, ಅನುಭವಿಸಿ ತಿಳಿಯುವುದು ನನಗಿಷ್ಟ.

ವರ್ಷಾಂತ್ಯದಲ್ಲಿ ಪ್ರವಾಸಿ ಮೆಲುಕು

ನಾನು ಟ್ರಾವೆಲ್‌ ರೆಸಲ್ಯೂಷನ್‌ ಮಾಡುವುದು ಬಿಟ್ಟು ವರ್ಷಗಳೇ ಕಳೆದಿವೆ. ಐ ಲೈಕ್‌ ಟು ಗೋ ವಿದ್‌ ದಿ ಫ್ಲೋ. ಆದ್ದರಿಂದ ವರ್ಷದ ಆರಂಭದಲ್ಲಿ ರೆಸಲ್ಯೂಷನ್‌ ಮಾಡುವುದಕ್ಕಿಂತ ವರ್ಷಾಂತ್ಯದಲ್ಲಿ ನಿಂತು ಆ ವರ್ಷ ಕೈಗೊಂಡ ಪ್ರವಾಸಗಳ ಅನುಭವಗಳನ್ನು ಮೆಲುಕು ಹಾಕುವುದು ನನಗೆ ಇನ್ನಷ್ಟು ಹೆಮ್ಮೆಯೆನಿಸುತ್ತದೆ.

ಮೊದಲ ವಿದೇಶ ಪ್ರವಾಸ

ಅನುಪಮ (5)

2012ರಲ್ಲಿ ನನ್ನ ಕಾಲೇಜು ದಿನಗಳಲ್ಲಿಯೇ ಮೊದಲ ಬಾರಿಗೆ ನಾನು ಅಂತಾರಾಷ್ಟ್ರೀಯ ವಿಮಾನವೇರಿದ್ದೆ. ದುಬೈನಲ್ಲಿ ನಡೆದ ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಒಬ್ಬಳೇ ಹೋಗಬೇಕಾಗಿ ಬಂದಿತ್ತು. ಇಡೀ ತಂಡ ಮೊದಲೇ ಅಲ್ಲಿ ತಲುಪಿದ್ದಾಗಿತ್ತು. ಅನಿವಾರ್ಯ ಕಾರಣಗಳಿಂದ ನಾನು ತಡವಾಗಿ ತಂಡವನ್ನು ಸೇರಿದ್ದೆ. ಆದರೂ ನನಗದು ವಿಶೇಷ ಅನುಭವ ನೀಡಿದೆ. ನನ್ನೊಳಗೆ ಧೈರ್ಯ ತುಂಬಿದೆ.

ಟ್ರಾವೆಲ್‌ ಈಸ್‌ ಲೈಫ್‌ ಟು ಮಿ

ಅನೇಕರಿಗೆ ದುಡ್ಡು ಉಳಿತಾಯ ಮಾಡಿ ಮನೆ ಕೊಂಡುಕೊಳ್ಳುವ ಆಸೆಯಿರುತ್ತದೆ. ಮತ್ತೆ ಹಲವರಿಗೆ ಕಾರು, ಚಿನ್ನಾಭರಣ, ಲಕ್ಸುರಿ ಲೈಫ್‌ ಹೀಗೆ ಅನೇಕ ಆಸೆಗಳಿರುತ್ತವೆ. ಆದರೆ ನಾನು ದುಡಿಯುವುದು ಇವೆಲ್ಲದಕ್ಕೂ ಹೆಚ್ಚಾಗಿ ಪ್ರವಾಸ ಮಾಡಬೇಕೆಂಬ ಕನಸಿನೊಂದಿಗೆ. ಅದು ನನಗೆ ಜೀವನೋತ್ಸಾಹವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಕಾಶ್ಮೀರದಲ್ಲಿ ನುಡಿನಮನ

ಕಳೆದ ವರ್ಷ ಪಹಲ್ಗಾಮ್‌ ಅಟ್ಯಾಕ್‌ ಆಗಿ ಅನೇಕ ಪ್ರವಾಸಿಗರು ಸಾವನ್ನಿಪ್ಪಿದ ದುರಂತದ ನಂತರ ಇತ್ತೀಚೆಗಷ್ಟೇ ನನಗೆ ಕಾಶ್ಮೀರಕ್ಕೆ ಹೋಗುವ ಅವಕಾಶ ಒದಗಿಬಂದಿತ್ತು. ದುರಂತದಲ್ಲಿ ಸಾವನ್ನಪ್ಪಿದ ಅನೇಕ ಜೀವಗಳಿಗೆ ನುಡಿನಮನ ಅರ್ಪಿಸುವ ಕಾರ್ಯಕ್ರಮವೊಂದರಲ್ಲಿ ನಾನು ಭಾಗವಹಿಸಿದ್ದೆ. ತಮ್ಮವರನ್ನು ಕಳೆದುಕೊಂಡ ಅದೆಷ್ಟೋ ಮಂದಿಗೆ ನಾವು ನಿಮ್ಮೊಂದಿಗೆ ಸದಾ ಇರುತ್ತೇವೆಂಬುದನ್ನು ತಿಳಿಹೇಳುವಂಥ ವಿಭಿನ್ನ ನುಡಿನಮನ ಕಾರ್ಯಕ್ರಮ ಅದಾಗಿತ್ತು. ಅಲ್ಲಿನ ಜನರ ನಡುವೆಯೇ ಇಂಥ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು ನನಗೆ ಆಪ್ತವೆನಿಸಿತ್ತು.

ಮಂಗಳೂರು: ವರ್ಣಿಸಲಸಾಧ್ಯವಾದ ಅಚ್ಚರಿ

ಅನುಪಮ (4)

ನಾನು ಮಂಗಳೂರು ಮೂಲದವರು. ನನಗೆ 10 ವರ್ಷ ಪ್ರಾಯವಾಗುತ್ತಲೇ ಹೆತ್ತವರೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿದೆ. ಆದರೂ ವರ್ಷಕ್ಕೆ ಒಂದೆರಡು ಬಾರಿ ಮಂಗಳೂರಿಗೆ ತಪ್ಪದೇ ಹೋಗಿ ಬರುತ್ತೇನೆ. ಮಂಗಳೂರೆಂದರೆ ಅಲ್ಲಿನ ದೇವಾಲಯಗಳು, ಕಡಲತೀರವೇ ನನಗೆ ನೆನಪಾಗುತ್ತದೆ. ಕದ್ರಿ ಮಂಜುನಾಥ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಮಂಗಳಾದೇವಿ ಹೀಗೆ ಅನೇಕ ದೇವಾಲಯಗಳಿಗೆ ಭೇಟಿ ನೀಡುತ್ತಲೇ ಇರುತ್ತೇನೆ. ಇನ್ನು ಮಂಗಳೂರಿನ ಬೀಚ್‌ ಗಳ ಸಮೀಪ ಸಿಗುವ ಚರುಮುರಿ, ಅಂದರೆ ಬೆಂಗಳೂರಿಗರ ಚುರುಮುರಿ, ನನಗೆ ಬಹಳ ಇಷ್ಟ. ಮಂಗಳೂರಿಗೆ ಹೋದರೆ ಪಬ್ಬಾಸ್‌ ಐಸ್‌ ಕ್ರೀಮ್‌ ತಿನ್ನದೇ ಬರಲು ಸಾಧ್ಯವೇ ಇಲ್ಲ.

ಬಹಾಮಸ್‌ನ ಪಿಂಕ್‌ ಸ್ಯಾಂಡ್‌ ಬೀಚ್‌

ಕಾರ್ಯಕ್ರಮವೊಂದಕ್ಕಾಗಿ ಬಹಾಮಸ್‌ ದ್ವೀಪ ಸಮೂಹಕ್ಕೆ ಹೋಗುವ ಅವಕಾಶ ನನಗೆ ಸಿಕ್ಕಿತ್ತು. ಅದು ಅನೇಕ ಅಚ್ಚರಿಗಳ ದ್ವೀಪ. ಅಲ್ಲಿನ ಪಿಂಕ್‌ ಸ್ಯಾಂಡ್‌ ಬೀಚ್‌ ಹೆಸರೇ ಹೇಳುವಂತೆ ಗುಲಾಬಿ ಬಣ್ಣದ ಮರಳನ್ನು ಹೊಂದಿದ್ದು, ಮ್ಯಾಜಿಕಲ್‌ ಸೀನ್‌ ಎಂಬಂತಿತ್ತು. ಹಸಿರಿನ ನಡುವೆ ಒಂದು ಕಾಲುದಾರಿಯಲ್ಲಿ ನಡೆದುಕೊಂಡು ಬಂದರಷ್ಟೇ ಸಮುದ್ರವನ್ನು ಕಣ್ತುಂಬಿಕೊಳ್ಳುವ ಅವಕಾಶ ಲಭಿಸುತ್ತದೆ.‌ ಅಲ್ಲಿನ ನೀರಂತೂ ಕಡು ನೀಲಿಯ ಬಣ್ಣದಿಂದ ಕೂಡಿದ್ದು, ಪೇಂಟಿಂಗ್ ಮಾಡಿದಂತಿತ್ತು. ಇನ್ನು ಬಹಾಮಸ್‌ ನ ಮತ್ತೊಂದು ಅಚ್ಚರಿಯೆಂದರೆ ಬೋಟ್‌ ಟೂರ್‌. ಇಲ್ಲಿನ ದ್ವೀಪಗಳಲ್ಲಿ ಬೋಟ್‌ ಟೂರ್‌ಗೆ ಕರೆದುಕೊಂಡು ಹೋಗುತ್ತಾರೆ. ಸಮುದ್ರದ ನಡುವೆ ಸೀಮಿತವಾದ ಜಾಗದಲ್ಲಷ್ಟೇ ಮೊಣಕಾಲುದ್ದದಷ್ಟು ನೀರು ಇರುವ ಪ್ರದೇಶವಿರುತ್ತದೆ. ಆ ಜಾಗದ ಹೊರತಾಗಿ ಮತ್ತೆಲ್ಲ ಕಡೆಯೂ ಸಮುದ್ರದ ಆಳ ಎಷ್ಟಿದೆಯೆಂದು ಯೋಚಿಸುವುದೂ ಕಷ್ಟ. ಆ ಜಾಗದಲ್ಲಿ ಬೋಟ್‌ ನಿಲ್ಲಿಸಿ, ಅಲ್ಲಿ ನಡೆದಾಡುವುದಕ್ಕೂ ಸಮಯ ನೀಡುತ್ತಾರೆ. ಹೀಗೆ ಅದ್ಭುತಗಳ ತಾಣವೆಂದೇ ಪ್ರಸಿದ್ಧವಾಗಿರುವ ಬಹಾಮಸ್‌ಗೆ ಮತ್ತೆ ಮತ್ತೆ ಹೋಗುತ್ತಲೇ ಇರಬೇಕೆನಿಸಿದೆ.

ಅಮೆರಿಕದಲ್ಲಿ 50 ದಿನಗಳು

ಅನುಪಮ (1)

2023ರಲ್ಲಿ ಅಮೆರಿಕದಲ್ಲಿ 50 ದಿನಗಳ ಕಾಲ ಶಿಕಾಗೊ, ಸಿಯಾಟಿಲ್‌, ಫಿಲೆಡೆಲ್ಫಿಯಾ, ಲಾಸ್‌ ಏಂಜಲೀಸ್‌, ನ್ಯೂಯಾರ್ಕ್‌, ಬೋಸ್ಟನ್‌ ಸೇರಿದಂತೆ 10 ಕಡೆಗಳಲ್ಲಿ ಶೋಗಳನ್ನು ಆಯೋಜನೆ ಮಾಡಲಾಗಿತ್ತು. ಬೆಂಗಳೂರಿನಿಂದ ನಿರೂಪಕಿಯಾಗಿ ನಾನು, ಗಾಯಕ ಗುರುಕಿರಣ್‌, ಅಕ್ಕ ಅನುರಾಧ ಭಟ್‌, ಮ್ಯೂಸಿಕಲ್‌ ಟೀಂ ಸೇರಿ ಅಂದಾಜು 10 ಜನರ ತಂಡ ಹೋಗಿದ್ದೆವು. 50 ದಿನಗಳ ಕಾಲ ಅಲ್ಲಿ ಉಳಿಯುವ ಅವಕಾಶವಿದ್ದುದರಿಂದ ವಾರಾಂತ್ಯಗಳಲ್ಲಿ ಶೋಗಳನ್ನು ಮಾಡುತ್ತಿದ್ದೆವು. ರಿಹರ್ಸಲ್‌ ಹಾಗೂ ಶೋ ಗಳಿಗೆ ನಾವು ಜತೆಯಾಗುತ್ತಿದ್ದೆವು. ಉಳಿದಂತೆ ಸೋಮವಾರದಿಂದ ಶುಕ್ರವಾರದ ವರೆಗೆ ನಾನು, ಅಕ್ಕ ಜತೆಯಾಗಿ ಸುತ್ತಾಡುವುದಕ್ಕೆ ಹೋಗಿಬಿಡುತ್ತಿದ್ದೆವು. ಗೂಗಲ್‌ ನಲ್ಲಿ ಎಲ್ಲ ಮಾಹಿತಿಯೂ ಲಭ್ಯವಿರುವುದರಿಂದ ನಾವೇ ಟ್ರಾವೆಲ್‌ ಪ್ಲಾನ್‌ ಮಾಡಿ, ಹೊಟೇಲ್‌, ಟಿಕೆಟ್‌ ಬುಕಿಂಗ್‌ ಮಾಡಿಕೊಂಡು ನಮ್ಮ ಪಾಡಿಗೆ ಹೊರಟುಬಿಡುತ್ತಿದ್ದೆವು.

ಜಾರ್‌ ಧಾಮ್‌ ಯಾತ್ರಾ

ಅನುಪಮ (6)

ಧಾರ್ಮಿಕ ಪ್ರವಾಸವೂ ನನಗೆ ತುಂಬಾ ಇಷ್ಟ. ಇತ್ತೀಚೆಗಷ್ಟೇ ಚಾರ್‌ಧಾಮ್‌ ಯಾತ್ರೆಗೆ ಹೋಗಿ ಬಂದಿದ್ದೆ. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಹಾಗೂ ಬದರೀನಾಥ ದರ್ಶನವಾಗಿ ಮನಸ್ಸಿಗೆ ನೆಮ್ಮದಿಯೆನಿಸಿದೆ. ಮೌಂಟೇನ್‌ ಸೈಡ್‌ ದೇವಸ್ಥಾನಗಳಿಗೆ ಹೋಗುವ ವೇಳೆ ಅಪಾಯಗಳಂತೂ ಇದ್ದೇ ಇರುತ್ತವೆ. ಭೂಕುಸಿತದಂಥ ಸುದ್ದಿಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಆದರೂ ಧೈರ್ಯ ಮಾಡಿ ದೇವರ ದರ್ಶನಕ್ಕೆ ಹೋಗಿದ್ದೆವು. ದೇವರಿದ್ದಾನೆ, ಕಾಪಾಡುತ್ತಾನೆ ಎಂಬುದಷ್ಟೇ ನಮ್ಮ ದೃಢ ನಂಬಿಕೆ.

ಥಕಾಲಿ ವೆಜ್ ಥಾಲಿ

ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿನ ಸ್ಥಳೀಯ ಆಹಾರಗಳ ರುಚಿ ನೋಡುತ್ತೇನೆ. ವೆಜಿಟೇರಿಯನ್‌ ಆಗಿರುವುದರಿಂದ ಆಯ್ಕೆಗಳು ಕಡಿಮೆ.ಆದರೆ ನೇಪಾಳ ಪ್ರವಾಸದ ವೇಳೆ ಅಲ್ಲಿನ ʻಥಕಾಲಿ ವೆಜ್ ಥಾಲಿʼ ಯ ರುಚಿ ನೋಡಿದ್ದೆ. ಮೊದಲ ಬಾರಿಗೆ ಅಷ್ಟು ಇಷ್ಟಪಟ್ಟು ತಿಂದಿದ್ದಲ್ಲದೇ ಆ ಪ್ರವಾಸದ ಪ್ರತಿ ದಿನವೂ ಥಕಾಲಿಗಾಗಿ ಬೇರೆ ಬೇರೆ ರೆಸ್ಟೋರೆಂಟ್‌ಗಳಿಗೆ ತೆರಳಿದ್ದೆ. ನಮ್ಮ ವೆಜ್‌ ಥಾಲಿಯಂತೆಯೇ ಅದು, ಆದರೆ ತಯಾರಿ ವಿಧಾನ, ರುಚಿ ಎಲ್ಲವೂ ಬೇರೆ..

ಅಡ್ವೆಂಚರ್‌ ತಂದ ಫಜೀತಿ !

ಕಾಲೇಜಿನ ದಿನಗಳಲ್ಲಿ ಗೆಳತಿಯರ ಜತೆಗೆ ಥೈಲ್ಯಾಂಡ್‌ ಪ್ರವಾಸ ಮಾಡಿದ್ದೆ. ಟ್ರಾವೆಲ್‌ ಅಡ್ವೆಂಚರ್‌ ನನಗಿಷ್ಟವಾದ್ದರಿಂದ ಅಲ್ಲಿ ಮೊದಲ ಬಾರಿಗೆ ಸ್ನೋರ್ಕ್ಲಿಂಗ್ ಮಾಡಿದ್ದೆ. ಬೋಟ್‌ ರೈಡ್‌ ಕರೆದುಕೊಂಡು ಹೋಗಿ ಎಲ್ಲೋ ನಿಲ್ಲಿಸಿ, ನೀರಿಗೆ ಧುಮುಕಲು ಹೇಳಿದ್ದರು. ನನಗೆ ಈ ಹಿಂದೆ ಸ್ನೋರ್ಕ್ಲಿಂಗ್ ಅನುಭವವಿಲ್ಲದ ಕಾರಣದಿಂದ ಡೀಸೆಂಟ್‌ ಡೈವ್‌ ಬದಲಾಗಿ ಧುತ್ತನೆ ನೀರಿಗೆ ಹಾರಿಬಿಟ್ಟಿದ್ದೆ. ಆಗಲೇ ಗೊತ್ತಾಗಿದ್ದು ಆ ನೀರು ಎಷ್ಟು ಉಪ್ಪಾಗಿತ್ತೆಂದು. ಇಂಥ ಅನೇಕ ಅನುಭವಗಳಾಗಿವೆ.

ಉತ್ತಮ ಪ್ರವಾಸಿಗನಾಗಬೇಕಾದರೆ ?

ಅನುಪಮ (7)

ಮಾತಲ್ಲಿ ನಾನೊಬ್ಬ ಟ್ರಾವೆಲರ್‌ ಅಂದರೆ ಸಾಲದು. ಪ್ರವಾಸಿಗನಾಗುವುದಕ್ಕೂ ಕೆಲವು ಅರ್ಹತೆಗಳಿರಬೇಕು. ಯಾವುದೇ ಸಂದರ್ಭಗಳಿಗೆ, ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳುವುದನ್ನು ಮೊದಲು ಕಲಿತಿರಬೇಕು. ಯೋಜನೆಯಂತೆ ಪ್ರವಾಸ ನಡೆದಿಲ್ಲವೆಂದರೆ ಸಮಯಕ್ಕೆ ಸೂಕ್ತವೆನಿಸುವ ಯೋಜನೆಗಳನ್ನು ಕ್ಷಣಮಾತ್ರದಲ್ಲೇ ಸಿದ್ಧಪಡಿಸಿಕೊಳ್ಳಬೇಕು. ಮುಖ್ಯವಾಗಿ ಮೈ ಚಳಿ ಬಿಟ್ಟು, ಸೋಮಾರಿತನವನ್ನು ತೊರೆದು ಸುತ್ತಲಿನ ಪರಿಸವನ್ನು ಎಂಜಾಯ್‌ ಮಾಡುವುದನ್ನು ಕಲಿತುಕೊಳ್ಳಬೇಕು. ಅಲ್ಲದೇ ಅನಿರೀಕ್ಷಿತ ಸಂದರ್ಭಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್