ಕಲಾವಿದನ ಬದುಕೇ ಪ್ರವಾಸಗಳ ಮಹಾ ಮೇಳ - ಎಂ ಎಸ್ ಉಮೇಶ್
ನಾನು ಮತ್ತು ನನ್ನ ಪತ್ನಿ ಬಾಲ್ಯ ಸ್ನೇಹಿತರು. ಇಬ್ಬರೂ ನಾಟಕ ಕಂಪನಿಯಲ್ಲೇ ಜತೆಯಾಗಿ ಬೆಳೆದವರು. ಮದುವೆಯಾದ ಬಳಿಕವೂ ನಾಟಕ ಕ್ಯಾಂಪ್ ನಲ್ಲೇ ವೃತ್ತಿ ಮುಂದುವರಿಸಿದೆವು. ಹೀಗಾಗಿ ಈಗಿನವರಂತೆ ನನ್ನ ಪತ್ನಿಯೊಂದಿಗೆ ಮಧುಚಂದ್ರ ಪ್ರವಾಸವನ್ನು ಕೂಡ ಮಾಡಿಲ್ಲ.
-ಶಶಿಕರ ಪಾತೂರು
ಎಂ ಎಸ್ ಉಮೇಶ್ ಕನ್ನಡ ಚಿತ್ರರಂಗದ ಹಾಸ್ಯ ದಿಗ್ಗಜ. ಹಾಸ್ಯ ಪಾತ್ರಗಳ ಮೂಲಕ ಸಿನಿ ರಸಿಕರ ಮನದಲ್ಲಿ ಸ್ಥಾನ ಪಡೆದಿರುವುದರ ಜತೆಯಲ್ಲೇ ಅಜ್ಜಿಯಾಗಿಯೂ, ಖಳನಾಗಿಯೂ ವೆರೈಟಿ ಪಾತ್ರಗಳಿಗೆ ಜೀವ ತುಂಬಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಇಂಥ ಉಮೇಶ್ ಅವರಿಗೆ ಪ್ರವಾಸದ ಬಗ್ಗೆ ಇರುವ ಕಲ್ಪನೆಯೇ ವಿಭಿನ್ನ. ವೃತ್ತಿನಿಮಿತ್ತ ಓಡಾಡಿದ್ದೇ ಅವರ ಪಾಲಿನ ಪ್ರವಾಸ. ಅದು ನೀಡಿದ ಅನುಭವಗಳು ಅನನ್ಯ ಎನ್ನುತ್ತಾರೆ ಉಮೇಶ್.
ನಿಮಗೆ ಬದುಕೇ ಒಂದು ಪ್ರವಾಸದಂತೆ ಕಾಣಲು ಕಾರಣವೇನು?
ಬಹುಶಃ ನಾನು ಬದುಕನ್ನು ಕಾಣಲು ಶುರು ಮಾಡಿದ್ದೇ ಕಲಾವಿದನಾಗಿ. ಇದೇ ಕಾರಣದಿಂದಲೇ ನನಗೆ ಬದುಕೇ ಒಂದು ಪ್ರವಾಸದಂತೆ ಕಂಡಿರಬಹುದು. ನಾನು ನಾಲ್ಕೈದು ವರ್ಷದ ಹುಡುಗ ಇದ್ದಾಗಲೇ ಮಾಸ್ಟರ್ ಹಿರಣ್ಣಯ್ಯನವರ ನಾಟಕ ಸಂಸ್ಥೆಯಲ್ಲಿ ಪಾತ್ರ ಮಾಡುತ್ತಿದ್ದೆ. ಆಗ ಹುಬ್ಬಳ್ಳಿ, ಬೆಳಗಾವಿ ಎಂದು ಕರೆದೊಯ್ಯುತ್ತಿದ್ದರು. ಆಗ ನನಗೆ ಊರುಗಳ ತಿರುಗಾಟ ಅಷ್ಟಾಗಿ ಗಮನಕ್ಕೆ ಬರುತ್ತಿರಲಿಲ್ಲ. ಆದರೆ ತಿರುಗಾಟದಲ್ಲೇ ಬದುಕು ಕಾಣಿಸಿದ್ದಂತೂ ನಿಜ.
ನಾಟಕಗಳ ಸುತ್ತಾಟದಲ್ಲಿ ಬೇರೆ ರಾಜ್ಯ ಹೋಗಿದ್ದ ಸಂದರ್ಭಗಳಿವೆಯೇ?
ತುಂಬಾನೇ ಇದೆ. ಗುಬ್ಬಿ ಕಂಪನಿಗೆ ಸೇರಿಕೊಂಡ ಬಳಿಕ ಅದೊಂದು ವಿಶ್ವವಿದ್ಯಾಲಯ ಇದ್ದಂತೆ. ಅದರಲ್ಲೂ ಬಾಲ ಕಲಾವಿದರ ವಿದ್ಯಾಭ್ಯಾಸವನ್ನು ಕೂಡ ನೋಡಿಕೊಳ್ಳುತ್ತಿದ್ದರು. ಮಾತ್ರವಲ್ಲ ನಮ್ಮ ನಾಟಕದ ಪ್ರವಾಸವನ್ನು ಕೂಡ ಮಕ್ಕಳ ಶೈಕ್ಷಣಿಕ ಪ್ರವಾಸದಂತೆ ಮಾಡುತ್ತಿದ್ದರು. ನಾಟಕದ ಶಿಬಿರ ಇದ್ದಲ್ಲೆಲ್ಲ ಮಕ್ಕಳ ಆಟಪಾಠದ ವ್ಯವಸ್ಥೆ, ಕೇರಂ ಬೋರ್ಡ್ ನಂಥ ಒಳಾಂಗಣ ಆಟಗಳನ್ನು ಕೂಡ ಆಡಿಸುತ್ತಿದ್ದರು. ನಮ್ಮ ನಾಟಕಗಳು ರಾಜ್ಯದ ಹೊರಗೂ ಪ್ರದರ್ಶನ ಕಾಣುತ್ತಿದ್ದವು. ತಮಿಳುನಾಡಿನಲ್ಲಿ ಕುಂಭಕೋಣಂ ಜಾತ್ರೆ ನಡೆದಾಗ ನಮ್ಮ ದಶಾವತಾರ ನಾಟಕ ಪ್ರದರ್ಶನ ಕಂಡು ಎಲ್ಲರ ಮೆಚ್ಚುಗೆ ಪಡೆದಿತ್ತು. ಅದೇ ಸಂದರ್ಭದಲ್ಲಿ ರಾಮೇಶ್ವರಂ, ಕಂಚಿ ಕಾಮಾಕ್ಷಿ, ಮಧುರೆ ಮೀನಾಕ್ಷಿ, ಧನುಷ್ಕೋಟಿ.. ಮೊದಲಾದ ಕಡೆಗಳಿಗೆ ನಮ್ಮನ್ನು ಗುಬ್ಬಿ ವೀರಣ್ಣನವರು ಕರೆದುಕೊಂಡು ಹೋಗಿದ್ದರು. ಮಕ್ಕಳಿಗೆ ಸಮುದ್ರ ಸ್ನಾನ ಮಾಡಿಸಿ, ದೇವಸ್ಥಾನ ಸಂದರ್ಶಿಸುವ ಉಸ್ತುವಾರಿಯನ್ನು ಸ್ವತಃ ಅವರೇ ಹೊತ್ತುಕೊಳ್ಳುತ್ತಿದ್ದರು. ರಾಜ್ಯದೊಳಗೆ ಮಂಗಳೂರು ಭಾಗದ ಧರ್ಮಸ್ಥಳದಂಥ ಪುಣ್ಯ ಕ್ಷೇತ್ರವನ್ನು ಕೂಡ ನಾಟಕ ತಂಡದ ಮೂಲಕವೇ ನೋಡಿದ್ದು.

ಹಾಗಾದರೆ ನಾಟಕದ ಪ್ರವಾಸ ಎನ್ನುವುದು ವೇದಿಕೆಯಿಂದ ವೇದಿಕೆಗೆ ಮಾತ್ರ ಸೀಮಿತವಾಗಿರಲಿಲ್ಲ ಅಲ್ಲವೇ?
ಖಂಡಿತವಾಗಿಯೂ ವೇದಿಕೆಗೆ ಮಾತ್ರ ಸೀಮಿತವಾಗಿರಲಿಲ್ಲ. ಮಾತ್ರವಲ್ಲ, ನಮ್ಮ ನಾಟಕ ನಡೆಯುವ ಜಾಗವೇ ಹತ್ತು ಹಲವು ವಿಶೇಷಗಳಿಗೆ ವೇದಿಕೆಯಾಗುತ್ತಿತ್ತು. ಆಯಾ ಪ್ರದೇಶದ ಗಣ್ಯರು ನಾಟಕದ ಹೊರತಾಗಿಯೂ ಕಲಾವಿದರ ಭೇಟಿಗೆಂದು ಬರುತ್ತಿದ್ದರು. ಹೀಗೆ ಅಂದಿನ ಪತ್ರಕರ್ತರಾದ ವೈ ಎನ್ ಕೆ, ಪ್ರಜಾವಾಣಿಯ ರಾಮಚಂದ್ರ ಸಾಹಿತಿಗಳಾದ ಬೀಚಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮೊದಲಾದ ಗಣ್ಯರ ಒಡನಾಟ ಸಾಧ್ಯವಾಯಿತು. ಮಾಸ್ತಿಯವರು ನನ್ನ ಪ್ರಹ್ಲಾದನ ಪಾತ್ರಕಂಡು ಅಂದು 10ರೂಪಾಯಿ ಉಡುಗೊರೆ ನೀಡಿದ್ದರು. ನಾವು ಬರವಣಿಗೆಯಲ್ಲಿ ಮಾತ್ರ ಕಾಣುತ್ತಿದ್ದ ಪ್ರತಿಭಾವಂತರನ್ನು ನೇರವಾಗಿ ಕಾಣುವ ಮತ್ತು ಅವರ ಮನೆಗಳಿಗೆ ಹೋಗಿ ಆತಿಥ್ಯ ಸ್ವೀಕರಿಸುವ ಅವಕಾಶ ಕೂಡ ಲಭಿಸುತ್ತಿತ್ತು.
ನಾಟಕಗಳ ಹಾಗೆ ಸಿನಿಮಾಗಳು ಕೂಡ ಪ್ರವಾಸದ ಅನುಭವ ಕೊಟ್ಟ ಸಂದರ್ಭಗಳಿವೆಯೇ?
ಕರ್ನಾಟಕದಲ್ಲಿ ಬೇಲೂರು, ಹಳೆಬೀಡಿನ ಶಿಲ್ಪಾಕಲಾ ವೈಭವವನ್ನು ನಾನು ಕಣ್ಣಾರೆ ಕಂಡಿದ್ದು ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲೇ. ಅದೇ ರೀತಿ ಬಳ್ಳಾರಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಅಲ್ಲಿ ಒಂದು ಶಿವನ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದರು. ಬಹುದೊಡ್ಡ ಬಸವಣ್ಣನ ವಿಗ್ರಹವಿದೆ. ಅದೇ ರೀತಿ ಉಪೇಂದ್ರ ಅವರ ಸಿನಿಮಾವೊಂದರ ಚಿತ್ರೀಕರಣ ತಮಿಳುನಾಡಲ್ಲಿ ನಡೆಯುತ್ತಿರಬೇಕಾದರೆ ಅಲ್ಲಿ ಬಹುದೊಡ್ಡ ಶಿವಲಿಂಗ ಇರುವಂಥ ದೇವಸ್ಥಾನವೊಂದಕ್ಕೆ ಕರೆದೊಯ್ದಿದ್ದರು. ನನಗೆ ಈ ದೇವಸ್ಥಾನ ಮತ್ತು ಜಾಗಗಳ ಹೆಸರು ಮರೆತಿರಬಹುದು. ಆದರೆ ಅಲ್ಲಿನ ವಿಶೇಷತೆ ಮತ್ತು ಆ ದಿವ್ಯಾನುಭವವನ್ನು ನನ್ನಿಂದ ಕಸಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಇದು ಪ್ರವಾಸಗಳು ಮನಸಿಗೆ ನೀಡಬಲ್ಲ ಸಂತೃಪ್ತಿಗೆ ಸಾಕ್ಷಿ.

ಡಾ.ರಾಜ್ ಕುಮಾರ್ ಅವರೊಂದಿಗೆ ಪ್ರವಾಸಿ ತಾಣಗಳಲ್ಲಿನ ಶೂಟಿಂಗ್ ಸಂದರ್ಭಗಳು ಹೇಗಿತ್ತು?
ರಾಜ್ ಕುಮಾರ್ ಅವರ ಜತೆಗೆ ನಟಿಸಿದ 'ಶ್ರುತಿ ಸೇರಿದಾಗ' ಸಿನಿಮಾ ಧರ್ಮಸ್ಥಳದಲ್ಲಿ ಚಿತ್ರೀಕರಣವಾಗಿತ್ತು. ಅವರು ಬಣ್ಣ ಹಚ್ಚಿದ ಬಳಿಕ ಶೂಟಿಂಗ್ ಜಾಗವನ್ನೇ ಭಕ್ತಿಯಿಂದ ನೋಡುವಂಥವರು. ಅಂಥದ್ದರಲ್ಲಿ ದೇವಸ್ಥಾನದ ಪರಿಸರ ಎಂದಮೇಲೆ ಭಕ್ತಿಯಿಂದಲೇ ಕ್ಷೇತ್ರ ದರ್ಶನ ಮಾಡಿದ್ದಾರೆ. ನನ್ನ ಮತ್ತು ಅವರ ಜತೆಗೆ ಬಾಲಣ್ಣ, ಸದಾಶಿವ ಬ್ರಹ್ಮಾವರ ಸೇರಿದಂತೆ ಇನ್ನೂ ಒಂದಷ್ಟು ಕಲಾವಿದರಿದ್ದೆವು. ಅದೊಂದು ಅವಿಸ್ಮರಣೀಯ ಅನುಭವ. ಇನ್ನೊಂದು ಖುಷಿಯ ವಿಚಾರ ಅಂದರೆ ರಾಜ್ ಕುಮಾರ್ ಅವರು ನಟಿಸಿದ ಕೊನೆಯ ಚಿತ್ರ ಶಬ್ದವೇಧಿಗಾಗಿ ಕುಲುಮನಾಲಿ ಚಿತ್ರೀಕರಣದಲ್ಲಿ ನಾನೂ ಇದ್ದೆ. ಸಿನಿಮಾದಲ್ಲಿ ನನ್ನ ದೃಶ್ಯ ಒಂದೆರಡು ನಿಮಿಷಗಳಷ್ಟೇ ಇತ್ತು. ಆದರೂ ನಮ್ಮನ್ನು ಅಲ್ಲಿಗೆ ಕರೆದೊಯ್ಯಲು ಅವಕಾಶ ಮಾಡಿಕೊಟ್ಟಿದ್ದು ಅವರ ದೊಡ್ಡ ಮನಸು ಎನ್ನಲೇಬೇಕು. ಮೊದಲ ಬಾರಿ ಕುಲು, ಮನಾಲಿ ನೋಡಿದ ನನಗೆ ಪ್ರಕೃತಿ ವೈಭವ ಕಂಡು ಅದ್ಭುತವೆನಿಸಿತ್ತು.
ನೀವು ಮಾಡಿದ ವಿಭಿನ್ನ ಪ್ರವಾಸ ಯಾವುದು?
ಒಮ್ಮೆ ನಾಗರತ್ನಮ್ಮನವರ ಸ್ತ್ರೀ ನಾಟಕ ಸಂಘವನ್ನು ಮುಂಬೈ ಕನ್ನಡ ಸಂಘದವರು ಮುಂಬೈಗೆ ಆಹ್ವಾನಿಸಿದ್ದರು.
ಅವರು ನನ್ನನ್ನು ಕೂಡ ಮುಂಬೈಗೆ ಕರೆದುಕೊಂಡು ಹೋಗಿದ್ದರು. ನನ್ನ ಜತೆಗಿದ್ದವರೆಲ್ಲ ಸ್ತ್ರೀ ಪಾತ್ರಧಾರಿಗಳು. ನಾನು ಹಾರ್ಮೋನಿಯಂ ನುಡಿಸುತ್ತಿದ್ದೆನಾದ ಕಾರಣ ನನ್ನನ್ನೂ ಆಹ್ವಾನಿಸಿದ್ದರು! ಹಾಗೆ ಕೊಲ್ಹಾಪುರದ ಲಕ್ಷ್ಮೀದೇವಿ ದೇವಸ್ಥಾನವನ್ನು ನೋಡುವ ಸೌಭಾಗ್ಯ ನನ್ನದಾಗಿತ್ತು. ಅದೇ ರೀತಿ ಅಲ್ಲಿ ಯಾವುದೋ ದೊಡ್ಡ ಅಕ್ವೇರಿಯಂ ಸೇರಿದಂತೆ ಒಂದಷ್ಟು ಪ್ರದೇಶಗಳನ್ನು ವೀಕ್ಷಿಸಿದ್ದೆವು.
ನೀವು ಕುಟುಂಬದೊಂದಿಗೆ ಪ್ರವಾಸ ಹೋಗುವ ಕನಸು ಕಂಡಿದ್ದಿದೆಯಾ?
ನಾನು ಮತ್ತು ನನ್ನ ಪತ್ನಿ ಬಾಲ್ಯ ಸ್ನೇಹಿತರು. ಇಬ್ಬರೂ ನಾಟಕ ಕಂಪನಿಯಲ್ಲೇ ಜತೆಯಾಗಿ ಬೆಳೆದವರು. ಮದುವೆಯಾದ ಬಳಿಕವೂ ನಾಟಕ ಕ್ಯಾಂಪ್ ನಲ್ಲೇ ವೃತ್ತಿ ಮುಂದುವರಿಸಿದೆವು. ಹೀಗಾಗಿ ಈಗಿನವರಂತೆ ನನ್ನ ಪತ್ನಿಯೊಂದಿಗೆ ಮಧುಚಂದ್ರ ಪ್ರವಾಸವನ್ನು ಕೂಡ ಮಾಡಿಲ್ಲ.

ಅದವಾನಿ ಕ್ಯಾಂಪ್ ನಲ್ಲಿದ್ದಾಗ ಒಮ್ಮೆ ಪತ್ನಿ ಮಕ್ಕಳನ್ನು ಮಂತ್ರಾಲಯಕ್ಕೆ ಕರೆದುಕೊಂಡು ಹೋಗಿದ್ದೆ. ಬಹುಶಃ ನನ್ನ ನೇತೃತ್ವದಲ್ಲಿ ಕೌಟುಂಬಿಕ ಪ್ರವಾಸ ಹೋಗಿದ್ದು ಅದೊಂದೇ ಬಾರಿ ಎಂದು ನೆನಪು. ಆ ದಿನಗಳಲ್ಲಿ ಇನ್ನಷ್ಟು ಸುತ್ತಾಟ ಮಾಡಿಲ್ಲ ಎನ್ನುವ ಬಗ್ಗೆ ಖಂಡಿತವಾಗಿ ನನಗೆ ಪಶ್ಚಾತ್ತಾಪ ಇದೆ. ಆದರೆ ನನ್ನ ಮನೆಯವರು ಕೂಡ ಯಾವತ್ತೂ ಸುತ್ತಾಡುವ ಆಸೆ ವ್ಯಕ್ತಪಡಿಸಿದವರಲ್ಲ. ನಾವು ಕಾಯಕದಲ್ಲೇ ಕೈಲಾಸ ಕಂಡವರು.
ವೈಯಕ್ತಿಕವಾಗಿ ನಿಮ್ಮ ಕನಸಿನ ಪ್ರವಾಸ ಎನ್ನುವುದು ಪುಣ್ಯ ಕ್ಷೇತ್ರಗಳ ದರ್ಶನವೇ?
ಪುಣ್ಯ ಕ್ಷೇತ್ರ ಮತ್ತು ಪ್ರಕೃತಿ ಸೊಬಗಿನ ಆಸ್ವಾದನೆ ಎರಡನ್ನೂ ನಾನು ಸಮಾನವಾಗಿಯೇ ಕಾಣುತ್ತೇನೆ. ನಮ್ಮ ದೇವಸ್ಥಾನಗಳಲ್ಲಿರುವ ಶಿಲ್ಪಕಲೆ ಕೂಡ ಪ್ರಕೃತಿ ಸೌಂದರ್ಯವೇ ಅಲ್ಲವೇ? ಮಂಗಳೂರಲ್ಲಿ ಮಂಗಳಾದೇವಿ, ಕಟೀಲು ದುರ್ಗಾ ಪರಮೇಶ್ವರಿ, ಉಡುಪಿಯಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಸ್ಥಳ ಪುರಾಣ ಕೇಳಿ ನೋಡಿ. ಪ್ರತಿಯೊಂದು ಕೂಡ ಪ್ರಕೃತಿಯೊಂದಿಗೆ ಹೊಂದಿಕೊಂಡೇ ಇದೆ. ನಾವು ಪ್ರಕೃತಿಯಲ್ಲೇ ದೇವರನ್ನು ಕಂಡವರು. ಉದ್ಯಾನ ನಗರಿ ಬೆಂಗಳೂರಲ್ಲಿ ಇಂದು ಗುಬ್ಬಚ್ಚಿಗಳ ಧ್ವನಿಯೇ ಅಪರೂಪವಾಗಿದೆ. ಒಂದು ಕಡೆ ಅಭಿವೃದ್ಧಿ ಹೆಸರಲ್ಲಿ ಕಾಡು ನಾಶವಾಗುತ್ತಿದ್ದರೆ ಮತ್ತೊಂದೆಡೆ ನಾವು ಸಹಜ ಪ್ರಕೃತಿಯನ್ನು ಹುಡುಕಾಡುತ್ತಲೇ ಇರುತ್ತೇವೆ.