ಚೀನಿಯರಿಗೆ ಭಾರತದಿಂದ ಪ್ರವಾಸಿ ವೀಸಾ ವಿತರಣೆ ಆರಂಭ
ಪ್ರವಾಸಿ ವೀಸಾ ನೀಡುವುದಕ್ಕೆ ಮತ್ತೆ ಆರಂಭಿಸುವ ಭಾರತದ ನಡೆಯನ್ನು ಚೀನಾ ವಿದೇಶಾಂಗ ಸಚಿವಾಲಯ ಸ್ವಾಗತಿಸಿದೆ. ಇದು ಗಡಿಯಾಚೆಗಿನ ಪ್ರಯಾಣವನ್ನು ಸುಗಮಗೊಳಿಸಲು ಸಕಾರಾತ್ಮಕ ಕ್ರಮವಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ಗುವೊ ಜಿಯಾಕುನ್ ಪ್ರತಿಕ್ರಿಯಿಸಿದ್ದಾರೆ.
ಬೀಜಿಂಗ್: ಭಾರತದ ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ 5 ವರ್ಷಗಳ ಹಿಂದೆ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ ನಡೆದ ನಂತರ ಹದಗೆಟ್ಟಿದ್ದ ದ್ವಿಪಕ್ಷೀಯ ಸಂಬಂಧವನ್ನು ಸುಧಾರಿಸುವ ಯತ್ನಕ್ಕೆ ಕೇಂದ್ರ ಸರಕಾರ ಮು೦ದಾಗಿದೆ. ಸಂಬಂಧ ಸುಧಾರಣೆಯ ಭಾಗವಾಗಿ ಗುರುವಾರದಿಂದ ಚೀನಾ ಪ್ರಜೆಗಳಿಗೆ ಪ್ರವಾಸಿ ವೀಸಾ ನೀಡುವುದನ್ನು ಪುನರಾರಂಭಿಸುತ್ತಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಭಾರತ 2020 ರಲ್ಲಿ ಚೀನೀ ಪ್ರಜೆಗಳಿಗೆ ಪ್ರವಾಸಿ ವೀಸಾ ನೀಡುವುದನ್ನು ಸ್ಥಗಿತಗೊಳಿಸಿತ್ತು. ನಂತರ ದಲ್ಲಿ ಪೂರ್ವ ಲಡಾಖ್ ಗಡಿ ವಿವಾದ-ಸೈನಿಕರ ಸಂಘರ್ಷ ಹಿನ್ನೆಲೆ ವೀಸಾ ವಿತರಣೆ ಸ್ಥಗಿತ ಮುಂದುವರೆದಿತ್ತು. ಈಗ ಪ್ರವಾಸಿ ವೀಸಾ ನೀಡಲು ಮುಂದಾಗಿರುವ ಕೇಂದ್ರ ಸರಕಾರ, ಬೀಜಿಂಗ್ ನಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ಚೀನಾ ಪ್ರಜೆಗಳು ಪ್ರವಾಸಿ ವೀಸಾಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.
ಪ್ರವಾಸಿ ವೀಸಾಗೆ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳು, ಬೀಜಿಂಗ್, ಶಾಂಫ್ಟ್ ಮತ್ತು ಗುವಾಂನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರಗಳಲ್ಲಿ ಚೀನೀ ಪ್ರಜೆಗಳು ಸಲ್ಲಿಸಬೇಕಾದ ದಾಖಲೆಗಳ ವಿವರಗಳನ್ನು ಇತ್ತೀಚಿನ ಭಾರತೀಯ ರಾಯಭಾರ ಕಚೇರಿಯ ಅಧಿಸೂಚನೆಯಲ್ಲಿ ನೀಡಲಾಗಿದೆ. ಪ್ರವಾಸಿ ವೀಸಾ ನೀಡುವುದಕ್ಕೆ ಮತ್ತೆ ಆರಂಭಿಸುವ ಭಾರತದ ನಡೆಯನ್ನು ಚೀನಾ ವಿದೇಶಾಂಗ ಸಚಿವಾಲಯ ಸ್ವಾಗತಿಸಿದೆ. ಇದು ಗಡಿಯಾಚೆಗಿನ ಪ್ರಯಾಣವನ್ನು ಸುಗಮಗೊಳಿಸಲು ಸಕಾರಾತ್ಮಕ ಕ್ರಮವಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ಗುವೊ ಜಿಯಾಕುನ್ ಪ್ರತಿಕ್ರಿಯಿಸಿದ್ದಾರೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಇತ್ತೀಚೆಗೆ ಬೀಜಿಂಗ್ ಭೇಟಿ ವೇಳೆ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರ ಜತೆ ಚರ್ಚಿಸಿದ ಕೆಲ ದಿನಗಳ ಬಳಿಕ ಪ್ರವಾಸಿ ವೀಸಾ ಪುನರಾರಂಭವಾಗಿರುವುದು ಉಲ್ಲೇಖಾರ್ಹ.