Tuesday, June 16, 2026
Tuesday, June 16, 2026

ಸಚಿವ ಈಶ್ವರ ಖಂಡ್ರೆ ಕಂಡ ಅರಣ್ಯಕಾಂಡ

ಆನೆ-ಮಾನವ ಸಂಘರ್ಷ ಇಂದು ನಿನ್ನೆಯದಲ್ಲ. ಶತ ಶತಮಾನಗಳಿಂದ ಈ ಸಮಸ್ಯೆ ಇದೆ. ರಾಜ್ಯದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದ್ದು, ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ರಾಜ್ಯದಲ್ಲಿ ಸುಮಾರು 6395 ಆನೆಗಳಿದ್ದು, ಗಜಪಡೆಯಲ್ಲಿ ಕರ್ನಾಟಕವೇ ನಂ.1 ಆಗಿದೆ. ಆದರೆ ಇದಕ್ಕೆ ಅನುಗುಣವಾಗಿ ಅರಣ್ಯ ವೃದ್ಧಿಸುವುದಿಲ್ಲ.

ಆನೆ-ಮಾನವ ಸಂಘರ್ಷ ಇಂದು ನಿನ್ನೆಯದಲ್ಲ. ರಾಜ್ಯದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದ್ದು, ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ರಾಜ್ಯದಲ್ಲಿ ಸುಮಾರು 6395 ಆನೆಗಳಿದ್ದು, ಗಜಪಡೆಯಲ್ಲಿ ಕರ್ನಾಟಕವೇ ನಂ.1 ಆಗಿದೆ. ಆದರೆ ಇದಕ್ಕೆ ಅನುಗುಣವಾಗಿ ಅರಣ್ಯ ವೃದ್ಧಿಸುವುದಿಲ್ಲ. ರಾಜ್ಯದ ಕೊಡಗು, ಚಿಕ್ಕಮಗಳೂರು, ಬೇಲೂರು ಭಾಗದಲ್ಲಿ ಸುಮಾರು 200 ಆನೆಗಳು ಕಾಡಿನ ಹೊರಗೆ ಇವೆ. ಇವುಗಳಿಂದ ಮಾನವ-ಆನೆ ಸಂಘರ್ಷ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ಆಧುನಿಕ ತಂತ್ರಜ್ಞಾನ ಬಳಸಲಾಗುತ್ತಿದೆ ಎನ್ನುತ್ತಾರೆ ಅರಣ್ಯ ಸಚಿವ ಈಶ್ವರ ಖಂಡ್ರೆ. ಅವರು ಅರಣ್ಯ ಇಲಾಖೆ ಜವಾಬ್ದಾರಿ ಹೊತ್ತುಕೊಂಡ ನಂತರ ಇಲಾಖೆಯಲ್

ಇದನ್ನೂ ಓದಿ: ಪ್ರವಾಸೋದ್ಯಮಕ್ಕೆ ಮೈಗ್ರೇನ್ ತರುತ್ತಿರುವ ಮೈಗ್ರೆಂಟ್ಸ್

ಅರಣ್ಯ ಸಚಿವರಾಗಿ ಮೂರು ವರ್ಷಗಳನ್ನು ಪೂರೈಸುತ್ತಿದ್ದೀರಿ. ಈ ಅವಧಿಯಲ್ಲಿ ಅರಣ್ಯ ಇಲಾಖೆಯಲ್ಲಿ ಆಗಿರುವ ಪ್ರಗತಿಪರ ಕೆಲಸಗಳೇನು?

ಅರಣ್ಯ ಇಲಾಖೆಯನ್ನು ಹೆಚ್ಚು ಸಕ್ರಿಯಗೊಳಿಸಲು ಮತ್ತು ಆಡಳಿತದಲ್ಲಿ ಸುಧಾರಣೆ ಮತ್ತು ಪಾರದರ್ಶಕತೆ ತರಲು ಶ್ರಮಿಸುತ್ತಿದ್ದೇನೆ. ನಭೂತೋ ನಭವಿಷ್ಯತಿ ಎಂಬಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯಲ್ಲಿ ಹಲವು ಅನನ್ಯ ಕಾರ್ಯಕ್ರಮಗಳು, ಯೋಜನೆಗಳು ಕಾರ್ಯಗತವಾಗಿವೆ. ಅಧಿಕಾರಿಗಳ ತಪ್ಪಿನಿಂದ ಎಚ್.ಎಂ.ಟಿ. ವಶದಲ್ಲಿದ್ದ ಅರಣ್ಯಭೂಮಿ ಪರಭಾರೆಯಾಗುವುದನ್ನು ತಡೆಯಲಾಗಿದೆ. ಪೀಣ್ಯ ಪ್ಲಾಂಟೇಷನ್ ನಲ್ಲಿರುವ 444 ಎಕರೆ ಅರಣ್ಯ ಭೂಮಿಯನ್ನು ಮರಳಿ ಪಡೆದು ಇಲ್ಲಿ ಅತ್ಯಗತ್ಯ ಶ್ವಾಸತಾಣ ನಿರ್ಮಿಸಲು ಕಾನೂನು ಹೋರಾಟ ಮಾಡಲಾಗುತ್ತಿದೆ.

ಬೆಂಗಳೂರು ಹೆಸರುಘಟ್ಟ ಪ್ರದೇಶದಲ್ಲಿ 5678 ಎಕರೆ ಕೆರೆ ಮತ್ತು ಹುಲ್ಲುಗಾವಲನ್ನು ಗ್ರೇಟರ್ ಹೆಸರುಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿ ಸಂರಕ್ಷಿಸಲಾಗಿದೆ. ಬೆಂಗಳೂರು ನಗರದಲ್ಲಿ 10 ಸಾವಿರ ಕೋಟಿ ರು.ಗೂ ಹೆಚ್ಚು ಬೆಲೆ ಬಾಳುವ 250 ಎಕರೆ ಅರಣ್ಯಭೂಮಿ ಒತ್ತುವರಿ ತೆರವು ಮಾಡಿಸಲಾಗಿದೆ. ರಾಜ್ಯದಾದ್ಯಂತ 7500 ಎಕರೆ ಅರಣ್ಯಭೂಮಿ ಒತ್ತುವರಿ ತೆರವಾಗಿದೆ. ಅಪ್ಸರಕೊಂಡ - ಮುಗಳಿಯಲ್ಲಿ ರಾಜ್ಯದ ಮೊಟ್ಟ ಮೊದಲ ಸಾಗರ ವನ್ಯಜೀವಿಧಾಮ ಮಾಡಲಾಗಿದೆ. 3 ವರ್ಷದಲ್ಲಿ ಮಾಡಿರುವ ಕಾರ್ಯ ತೃಪ್ತಿ ತಂದಿದೆ.

Untitled design (88)

ಅರಣ್ಯ ಸಚಿವರಾಗಿ 2023ರಲ್ಲಿ ಅಧಿಕಾರ ಸ್ವೀಕರಿಸಿದಾಗ ಕೈಗೊಂಡ ಯೋಜನೆಗಳು ಸಾಕಾರಗೊಂಡಿವೆಯಾ ?

ಬಹುತೇಕ ಯೋಜನೆಗಳು ಸಾಕಾರವಾಗಿವೆ. ನಾವಿಂದು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಕಾಲಘಟ್ಟದಲ್ಲಿ ಸಾಗಿದ್ದೇವೆ. ಪ್ರಕೃತಿ, ಪರಿಸರ ಉಳಿಸುವುದು, ವೃಕ್ಷ ಸಂವರ್ಧನೆ ಮತ್ತು ವೃಕ್ಷ ಸಂರಕ್ಷಣೆ ಮಾಡುವುದು ಅತ್ಯಗತ್ಯ ಮತ್ತು ಅನಿವಾರ್ಯವಾಗಿದ್ದು, ನಾನು ಅರಣ್ಯ, ಪರಿಸರ ಸಚಿವನಾದ ದಿನದಿಂದಲೇ ವೃಕ್ಷ ಸಂರಕ್ಷಣೆಗೆ ಮುಂದಾಗಿದ್ದು, ಈ ಮೂರು ವರ್ಷದಲ್ಲಿ 11 ಕೋಟಿ ಸಸಿಗಳನ್ನು ನೆಟ್ಟು ಪೋಷಿಸಲಾಗಿದೆ. ಈ ಪೈಕಿ ಎಷ್ಟು ಸಸಿ ಬದುಕುಳಿದಿವೆ ಎಂಬ ವಲಯವಾರು ಮಾಹಿತಿಯನ್ನು ಇಲಾಖೆಯ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿದೆ.ರಾಜ್ಯದ ಹಸಿರು ಹೊದಿಕೆ ಹೆಚ್ಚಿಸಲು ಸುಮಾರು 10 ಸಾವಿರಕ್ಕೂ ಹೆಚ್ಚು ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಗಿದ್ದು, ನೂರಾರು ನೆಡುತೋಪುಗಳ ನಿರ್ಮಾಣ ಮಾಡಲಾಗುತ್ತಿದೆ. 15 ಸಾವಿರ ಎಕರೆಗೂ ಹೆಚ್ಚು ಪ್ರದೇಶವನ್ನು ಹೊಸದಾಗಿ ಅರಣ್ಯ ಎಂದು ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ ಹಸಿರು ಹೊದಿಕೆಯೆಂಬ ಯೋಜನೆಯನ್ನು ಪ್ರಾರಂಭಗೊಳಿಸಬೇಕೆಂದು ಅನಿಸಿರುವುದೇಕೆ ?

ಬೆಂಗಳೂರು ನಗರ ಒಂದು ಕಾಲದಲ್ಲಿ ನಿವೃತ್ತರ ಸ್ವರ್ಗ, ಉದ್ಯಾನ ನಗರಿ, ಹವಾನಿಯಂತ್ರಿತ ನಗರ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಆದರೆ ಇಂದು ಬೆಂಗಳೂರು ನಗರದಲ್ಲೂ ಬಿಸಿಲ ಬೇಗೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ವಾಹನ, ಕ್ಷೀಣಿಸುತ್ತಿರುವ ಹಸಿರುಹೊದಿಕೆ ಹಾಗೂ ಅಧಿಕವಾಗುತ್ತಿರುವ ಕಾಂಕ್ರೀಟ್ ಕಟ್ಟಡಗಳು. ಹೀಗಾಗಿ ಬೆಂಗಳೂರಿನ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಭೂಮಿಯಲ್ಲಿ ವಿಶ್ವಗುರು ಬಸವಣ್ಣ ಬೃಹತ್ ಜೈವಿಕ ಉದ್ಯಾನ ನಿರ್ಮಾಣ ಮಾಡಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಈ ತಿಂಗಳಲ್ಲೇ ಮುಖ್ಯಮಂತ್ರಿಗಳಿಂದ ಉದ್ಯಾನವನಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಕಬ್ಬನ್, ಪಾರ್ಕ್, ಲಾಲ್ ಬಾಗ್ ನಂತರ ಅತಿ ಬೃಹತ್ ಉದ್ಯಾನವಾಗಲಿರುವ ಈ ಉದ್ಯಾನ ಶತಮಾನದ ಸಾಧನೆಯಾಗಿದೆ. 150 ವರ್ಷಗಳ ನಂತರ ಬೆಂಗಳೂರಿನಲ್ಲಿ ಇಷ್ಟು ದೊಡ್ಡ ಉದ್ಯಾನ ಅಭಿವೃದ್ಧಿ ಆಗುತ್ತಿದೆ.

ಕಾಡ್ಗಿಚ್ಚು ನಿಯಂತ್ರಣಕ್ಕೆ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದ್ದೀರಿ ?

ಬೇಸಗೆಯ ಸಂದರ್ಭದಲ್ಲಿ ವನ ಪ್ರದೇಶದಲ್ಲಿ ಸಾಮಾನ್ಯವಾಗಿ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತದೆ. ಇದಕ್ಕೆ ನಾನಾ ಕಾರಣಗಳಿವೆ. ಈಗ ಕಾಡಿನೊಳಗೆ ವಾಹನ ಸಂಚಾರವೂ ಇರುವ ಕಾರಣ ಮತ್ತು ಅರಣ್ಯದ ಅಂಚಿನವರೆಗೂ ವಸತಿ ಪ್ರದೇಶಗಳು ಬಂದಿದ್ದು, ಅಜಾಗರೂಕತೆಯಿಂದಲೂ ಕಾಡ್ಗಿಚ್ಚು ಸಂಭವಿಸುತ್ತದೆ. ಕೆಲವೊಮ್ಮೆ ಕಿಡಿಗೇಡಿಗಳೂ ಇಂಥ ಕೃತ್ಯವೆಸಗುತ್ತಾರೆ. ಹೀಗಾಗಿ ಬೇಸಗೆಗೆ ಮೊದಲೇ ಫೈರ್ ಲೈನ್ ಅಂದರೆ ಬೆಂಕಿರೇಖೆ ಮಾಡಲಾಗುತ್ತದೆ. ಇದು ವನಸಂಪತ್ತು, ವನ್ಯಜೀವಿ ನಾಶ ತಗ್ಗಿಸುತ್ತದೆ. ಇದರ ಜತೆಗೆ ಅರಣ್ಯ ಇಲಾಖೆ ಕಾಡ್ಗಿಚ್ಚು ಪತ್ತೆಹಚ್ಚಲು ಮತ್ತು ತಡೆಯಲು ಇಸ್ರೋ (ISRO) ಮತ್ತು ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ (KSRSAC) ದತ್ತಾಂಶಗಳನ್ನು ಬಳಸಿಕೊಂಡು ಬೆಂಕಿಯ ಎಚ್ಚರಿಕೆಗಳನ್ನು (Fire Alerts) ಸಕಾಲದಲ್ಲಿ ಸಂಬಂಧಿತ ವಲಯಕ್ಕೆ ರವಾನಿಸಲಾಗುತ್ತಿದ್ದು, ಇದರಿಂದ ಅನಾಹುತಗಳ ತೀವ್ರತೆ ತಗ್ಗಿಸಲಾಗುತ್ತಿದೆ. ಕೂಡಲೇ ಬೆಂಕಿ ನಂದಿಸಲಾಗುತ್ತಿದೆ.

Untitled design (92)

ವಾಯುಪಡೆಗೆ ನೀಡಲಾಗಿದ್ದ 452 ಎಕರೆ ಅರಣ್ಯಭೂಮಿ ವಾಪಸ್ ಪಡೆದಿರುವ ಬಗ್ಗೆ ?

ಈ ಹಿಂದೆ ರಾಜ್ಯ ಸರಕಾರ ವಾಯುಪಡೆಗೆ ಬೆಂಗಳೂರು ಉತ್ತರ ತಾಲೂಕು ಜಾರಕಬಂಡೆ ಬಳಿ 452 ಎಕರೆ ಭೂಮಿಯನ್ನು ಗುತ್ತಿಗೆ ನೀಡಿತ್ತು. ಅರಣ್ಯ ಸಂರಕ್ಷಣಾ ಕಾಯಿದೆ 1980ರ ಜಾರಿಯ ಬಳಿಕ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡಲು ಬರುವುದಿಲ್ಲ. ಹಾಗೆ ಗುತ್ತಿಗೆ ನೀಡಬೇಕಾದರೆ ಪರಿವೇಶ್ ಪೋರ್ಟಲ್ ನಲ್ಲಿ ಅರ್ಜಿ ಹಾಕಿ, ಪರಿಹಾರಾತ್ಮಕ ಅರಣ್ಯಕ್ಕೆ ಜಮೀನು ನೀಡಿ, ಎನ್.ಪಿ.ವಿ.ಶುಲ್ಕ ಪಾವತಿಸಬೇಕು ಕೇಂದ್ರದ ಅನುಮತಿ ಪಡೆಯಬೇಕು. ಆದರೆ ಈ ಪ್ರಕ್ರಿಯೆ ಇಲ್ಲದೆ ವಾಯುಪಡೆಗೆ ಭೂಮಿ ನೀಡಲಾಗಿತ್ತು. ಇದನ್ನು 2017ರಲ್ಲಿ ರದ್ದು ಮಾಡಿ, ಅರಣ್ಯ ಇಲಾಖೆಗೆ ಇಂಡೀಕರಣ ಮಾಡಿ, ಆರ್.ಟಿ.ಸಿ. ನೀಡಲಾಗಿತ್ತು. ಈಗ ಇದನ್ನು ತೆರವು ಮಾಡಿಸಿ, ಇಲ್ಲಿ ಶ್ವಾಸತಾಣ ಉಳಿಸಲು ಪ್ರಯತ್ನಿಸಲಾಗುತ್ತಿದೆ. ನಿಯಮಾನುಸಾರ ವಾಯುಪಡೆ ಪರಿಹಾರಾತ್ಮಕ ಭೂಮಿ ನೀಡಲು ಮುಂದೆ ಬಂದರೆ ಪರಿಗಣಿಸಲಾಗುವುದು.

ಆನೆ ಮಾನವ ಸಂಘರ್ಷವನ್ನು ತಡೆಗಟ್ಟಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ?

ಆನೆ-ಮಾನವ ಸಂಘರ್ಷ ಇಂದು ನಿನ್ನೆಯದಲ್ಲ. ಶತ ಶತಮಾನಗಳಿಂದ ಈ ಸಮಸ್ಯೆ ಇದೆ. ರಾಜ್ಯದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದ್ದು, ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ರಾಜ್ಯದಲ್ಲಿ ಸುಮಾರು 6395 ಆನೆಗಳಿದ್ದು, ಗಜಪಡೆಯಲ್ಲಿ ಕರ್ನಾಟಕವೇ ನಂ.1 ಆಗಿದೆ. ಆದರೆ ಇದಕ್ಕೆ ಅನುಗುಣವಾಗಿ ಅರಣ್ಯ ವೃದ್ಧಿಸುವುದಿಲ್ಲ. ಜತೆಗೆ ಕಾಡಿನಂಚಿನವರೆಗೆ ವಸತಿ ಪ್ರದೇಶಗಳು, ಹೊಲ, ಗದ್ದೆ ತೋಟ ಬೆಳೆದಿದೆ. ರಾಜ್ಯದ ಕೊಡಗು, ಚಿಕ್ಕಮಗಳೂರು, ಬೇಲೂರು ಭಾಗದಲ್ಲಿ ಸುಮಾರು 200 ಆನೆಗಳು ಕಾಡಿನ ಹೊರಗೆ ಇವೆ. ತೋಟದ ಆನೆಗಳಾಗಿವೆ. ಇವುಗಳಿಂದ ಮಾನವ- ಆನೆ ಸಂಘರ್ಷ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ಆಧುನಿಕ ತಂತ್ರಜ್ಞಾನ ಬಳಸಲಾಗುತ್ತಿದೆ. ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದ್ದು, ಥರ್ಮಲ್ ಡ್ರೋನ್ ಬಳಸಿ ಆನೆಗಳ ಚಲನವಲನದ ಮೇಲೆ ನಿಗಾ ಇಟ್ಟು, ಸ್ಥಳೀಯರಿಗೆ ಮುನ್ನೆಚ್ಚರಿಕೆ ನೀಡಲಾಗುತಿದೆ. ಜತೆಗೆ ಆನೆ ದಿನದಂದು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನವನ್ನೂ ನಡೆಸಲಾಗಿತ್ತು. ನೆರೆಯ ರಾಜ್ಯಗಳ ಅರಣ್ಯ ಸಚಿವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಆನೆ ಮಾನವ ಸಂಘರ್ಷ ಹೆಚ್ಚಿರುವ ಪ್ರದೇಶಗಳಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ 115.07 ಕಿಮೀ. ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇನ್ನೂ 31.65 ಕಿಮೀ ಕಾಮಗಾರಿ ಪ್ರಗತಿಯಲ್ಲಿದೆ. ಇದರ ಜತೆಗೆ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ 77 ಕಿಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಸೌರ ತಂತಿಬೇಲಿ ಮತ್ತು ಟೆಂಟಕಲ್ ಫೆನ್ಸಿಂಗ್ ಹಾಕಲಾಗುತ್ತಿದೆ. ಆನೆ ಕಂದಕ ತೋಡಲಾಗುತ್ತಿದೆ. ಹೊಸದಾಗಿ ಆನೆ ಕಾರ್ಯಪಡೆ ರಚಿಸಲಾಗಿದೆ.

ನೀವು ಕೇವಲ ಅರಣ್ಯ ಸಚಿವರಲ್ಲ. ಬೇರೆ ಖಾತೆಗಳ ಜವಾಬ್ದಾರಿಯ ನಡುವೆ ಈ ಇಲಾಖೆಯ ಜವಾಬ್ದಾರಿ ಹೇಗೆ ನಿಭಾಯಿಸುತ್ತೀರಿ ?

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಈ ಮೂರು ಇಲಾಖೆಗಳೂ ಒಂದಕ್ಕೊಂದು ಸಂಪರ್ಕಿತವಾದ ಇಲಾಖೆಗಳೇ ಆಗಿವೆ. ಹೀಗಾಗಿ ಇಲಾಖೆಯನ್ನು ಜವಾಬ್ದಾರಿಯುತವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಸಹಕಾರಿಯಾಗಿದೆ.

Untitled design (91)

ಈ ಅವಧಿಯಲ್ಲಿ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯಲ್ಲಿ ಆಗಬಹುದಾದ ಮಹತ್ತರದ ಬದಲಾವಣೆಗಳ ಬಗೆಗೆ ತಿಳಿಸುವಿರಾ?

ಅರಣ್ಯ ಸಂವರ್ಧನೆ, ಸಂರಕ್ಷಣೆಗೆ ಒತ್ತು ನೀಡಲಾಗುವುದು. ಹಸಿರು ಹೊದಿಕೆ ಕಡಿಮೆ ಇರುವ ಪ್ರದೇಶದಲ್ಲಿ ಹೆಚ್ಚಿನ ಸಸಿಗಳನ್ನು ನೆಡಲು ಕ್ರಮವಹಿಸಲಾಗುವುದು.

ಅರಣ್ಯ ಇಲಾಖೆಯಲ್ಲಿ ಉದ್ಯೋಗ ಸೃಷ್ಟಿಯ ಬಗ್ಗೆ ಏನೇನು ಯೋಜನೆಗಳಿವೆ?

ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು. ಅರಣ್ಯ ಸಂರಕ್ಷಣೆಗೆ ಮುಂಚೂಣಿ ಸಿಬ್ಬಂದಿ ಅಗತ್ಯ. ಅವರ ಶ್ರಮ ಮಹತ್ವದ್ದು. ಎಲ್ಲ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ. ನಾನು ಸಚಿವನಾದ ತರುವಾಯ 540 ಅರಣ್ಯ ಗಸ್ತುಪಾಲಕರು ಮತ್ತು 267 ಅರಣ್ಯ ವೀಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ.

ಇಕೋ ಟೂರಿಸಂ ಮತ್ತು ಸಸ್ಟೇನೆಬಲ್ ಟೂರಿಸಂ ಕುರಿತು ಸರಕಾರದ ನಿಲುವು ಏನು?

ಇಂದು ನಮಗೆ ಸುಸ್ಥಿರ ಅಭಿವೃದ್ಧಿ ಬೇಕು. ಪರಿಸರ ಪ್ರಕೃತಿಯೂ ಉಳಿಯಬೇಕು, ಜೀವನವೂ ಇರಬೇಕು, ಜೀವನೋಪಾಯವೂ ನಡೆಯಬೇಕು. ರಾಜ್ಯದ ಅಭಿವೃದ್ಧಿಯೂ ಆಗಬೇಕು. ಈ ನಿಟ್ಟಿನಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಸುವ ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ. ರಾಜ್ಯದಲ್ಲಿ ಸಫಾರಿಗಳಿಗೆ ಹೆಚ್ಚಿನ ಆಕರ್ಷಣೆ ಇದ್ದು, ಇದನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ. ಜತೆಗೆ ಸಫಾರಿಯಿಂದ ಬರುವ ಆದಾಯದಲ್ಲಿ ಶೇ.33ರಷ್ಟನ್ನು ಅರಣ್ಯದಂಚಿನ ಗ್ರಾಮಗಳ ಜನರ ಕ್ಷೇಮಾಭಿವೃದ್ಧಿಗೆ, ಮೂಲಸೌಕರ್ಯಕ್ಕೆ ಬಳಸಲಾಗುತ್ತಿದೆ. ಇತ್ತೀಚೆಗೆ ದುಬಾರೆಯಲ್ಲಿ ಹಲವು ಕಾಡಿನಂಚಿನ ಮತ್ತು ಕಾಡಿನೊಳಗಿನ ವಸತಿ ಪ್ರದೇಶಗಳ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಜೇನುಪೆಟ್ಟಿಗೆಯನ್ನು ನಾನೇ ವಿತರಿಸಿದ್ದೇನೆ..

ಪ್ರವಾಸಿಗರಿಂದ ಬರುವ ದೂರುಗಳಿಗೆ ತ್ವರಿತ ಪರಿಹಾರಕ್ಕೆ ಏನೇನು ವ್ಯವಸ್ಥೆ ಇದೆ?

ಪ್ರವಾಸಿಗರಿಂದ ಬರುವ ದೂರುಗಳಿಗೆ ಇಲಾಖೆ ತತ್ ಕ್ಷಣವೇ ಸ್ಪಂದಿಸುತ್ತಿದೆ. 1926 ಉಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ತಕ್ಷಣ ಪರಿಹಾರ ಲಭಿಸುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.

ಮಲೆ ಮಹದೇಶ್ವರ ಬೆಟ್ಟದ ದುರಂತದ ಬಳಿಕ ವನ್ಯಜೀವಿ ಸಂಚಾರ ಇರುವ ಎಲ್ಲ ಚಾರಣಪಥಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೀರಿ. ಇದು ಪ್ರವಾಸೋದ್ಯಮಕ್ಕೆ ಆಗುವ ನಷ್ಟ ಅನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ.

ಚಾರಣಪಥಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಓ.ಪಿ.) ರೂಪಿಸಲಾಗಿದೆ. ಈ ಕಾರ್ಯಾಚರಣೆ ವಿಧಾನ ಅನುಷ್ಠಾನಕ್ಕೆ ಪೂರ್ವಸಿದ್ಧತೆ ಮಾಡಿಕೊಂಡು ಚಾರಣ ಆರಂಭಿಸಲು ಸೂಚಿಸಲಾಗಿದೆ. ಮಾದಪ್ಪನ ಬೆಟ್ಟದಲ್ಲಿ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಕಾಲ್ನಡಿಗೆಗೆ ಕೆಲವು ನಿರ್ಬಂಧ ಹಾಕಲಾಗಿದೆ.

ಅರಣ್ಯ ಸಚಿವನಾಗದಿದ್ದರೆ ಬೇರೆ ಯಾವ ಖಾತೆಯನ್ನು ನಿಭಾಯಿಸುತ್ತಿದ್ದಿರಿ ?

ಈ ಹಿಂದೆ 2015ರಲ್ಲಿ ನಾನು ಸಚಿವನಾಗಿದ್ದಾಗ ಪೌರಾಡಳಿತ ಖಾತೆ ನಿರ್ವಹಿಸಿದ್ದೆ. ನಾನು ಇಂಥ ಖಾತೆಯೇ ಬೇಕು ಎಂದು ಕೇಳಿದವನಲ್ಲ. ಯಾವುದೇ ಖಾತೆ ಕೊಟ್ಟರೂ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ನಿಭಾಯಿಸುತ್ತೇನೆ. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯಲ್ಲಿ ಹಸಿರು ಉಳಿಸುವ, ವೃಕ್ಷ ಸಂರಕ್ಷಿಸುವ, ವನ ವನ್ಯಜೀವಿ ರಕ್ಷಿಸುವ ಕಾರ್ಯ ಮಾಡುತ್ತಿರುವುದು ತೃಪ್ತಿ ತಂದಿದೆ. ಜನರೂ ನನ್ನ ಕಾರ್ಯ ಗುರುತಿಸಿದ್ದಾರೆ.

ಕರ್ನಾಟಕದ ಮೃಗಾಲಯಗಳ ಅಭಿವೃದ್ಧಿಗೆ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ?

ಕರ್ನಾಟಕ ಮೃಗಾಲಯಗಳ ತವರು. ನಮ್ಮಲ್ಲಿ ಅತ್ಯುತ್ತಮ ವ್ಯವಸ್ಥೆ ಇದೆ. ಮೈಸೂರಿನ ಚಾಮರಾಜೇಂದ್ರ ಮೃಗಾಲಯ, ಬನ್ನೇರುಘಟ್ಟದ ಮೃಗಾಲಯಗಳ ಜತೆಗೆ ಬೆಳಗಾವಿ, ಚಿತ್ರದುರ್ಗ, ಗದಗ, ಶಿವಮೊಗ್ಗ, ದಾವಣಗೆರೆ, ಮೊದಲಾದ ಕಡೆ ಕಿರು ಮೃಗಾಲಯಗಳಿವೆ. ಈಗ ಕಲ್ಬುರ್ಗಿಯಲ್ಲೂ ಒಂದು ಮೃಗಾಲಯ ನಿರ್ಮಿಸಲಾಗಿದ್ದು, ಈ ತಿಂಗಳೇ ಉದ್ಘಾಟಿಸಲಾಗುವುದು.

ಜಿಲ್ಲಾವಾರು ಅರಣ್ಯ ಭೂಮಿಯನ್ನು ಅಭಿವೃದ್ಧಿಪಡಿಸಲು ಯಾವ ರೀತಿಯ ಯೋಜನೆಗಳು ಸಿದ್ಧವಾಗಿದೆ ?

ಭೂಮಿ ಇದ್ದರೆ ಅರಣ್ಯ ಬೆಳೆಸಬಹುದು. ಹೀಗಾಗಿ ಜಿಲ್ಲಾವಾರು ಅರಣ್ಯ ಭೂಮಿ ಒತ್ತುವರಿ ತೆರೆವಿಗೆ ಆದ್ಯತೆ ನೀಡಲಾಗಿದೆ. ಈ ರೀತಿ ತೆರವು ಮಾಡಿದ ಎಲ್ಲ ಅರಣ್ಯ ಭೂಮಿಯಲ್ಲಿ ಸಾವಿರಾರು ಸಸಿ ನೆಟ್ಟು ನೆಡುತೋಪು ನಿರ್ಮಿಸಲಾಗುತ್ತಿದೆ. ಹಾಳಾಗಿರುವ ಅಂದರೆ ಡೀಗ್ರೇಡ್ ಆಗಿರುವ ಅರಣ್ಯಗಳ ಸಂರಕ್ಷಣೆಗೂ ಒತ್ತು ನೀಡಲಾಗಿದೆ. ಅರಣ್ಯ ಪ್ರದೇಶ ಕಡಿಮೆ ಇರುವ ಪ್ರದೇಶಗಳಲ್ಲಿ ಸಾಮಾಜಿಕ ಅರಣ್ಯ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಪಾತ್ರ ಎಷ್ಟಿದೆ?

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಅರಣ್ಯ ಇಲಾಖೆಯಲ್ಲೇ ಇದೆ. ನಾನು ಸಚಿವನಾದ ಬಳಿಕ ಪ್ರವಾಸಿಗರ ಸೌಲಭ್ಯಕ್ಕಾಗಿ ಹಲವು ಬಗ್ಗಿಗಳ ಸೇವೆ ಒದಗಿಸಲಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ಚಿರತೆ ಸಫಾರಿ ಆರಂಭಿಸಲಾಗಿದೆ. ಮೃಗಾಲಯಕ್ಕೂ ಹೆಚ್ಚಿನ ಪ್ರಾಣಿಗಳನ್ನು ತರಲಾಗುತ್ತಿದೆ. ಇತ್ತೀಚೆಗೆ ವನ್ಯಜೀವಿ ವಿನಿಮಯ ಕಾರ್ಯಕ್ರಮದಡಿ 4 ಚೀತಾಗಳನ್ನು ತರಿಸಲಾಗಿದ್ದು, ನಾನೇ ಮಧ್ಯರಾತ್ರಿಯಲ್ಲಿ ವಿಮಾನ ನಿಲ್ದಾಣಕ್ಕೆ ಹೋಗಿ ಅವುಗಳನ್ನು ಬರಮಾಡಿಕೊಂಡಿದ್ದೇನೆ. ಈಗ ಅಲ್ಲಿ ಬೃಹತ್ ಮತ್ಸ್ಯಾಗಾರ ಮತ್ತು ಇಂಟರ್ ಪ್ರಿಟೇಷನ್ ಕೇಂದ್ರ ಮಾಡಲು ಯೋಜನೆ ರೂಪಿಸಲಾಗಿದೆ. ಪರಿಸರ ಸ್ನೇಹಿ ವ್ಯವಸ್ಥೆಯನ್ನೂ ಜಾರಿಗೆ ತರಲಾಗುತ್ತಿದೆ.

Untitled design (89)

ಪ್ರಾಜೆಕ್ಟ್ ಚೀತಾ ಯೋಜನೆಯ ಭಾಗವಾಗಿ ಆಗಮಿಸಿದ ನಾಲ್ಕು ಚೀತಾಗಳ ಪೋಷಣೆಗೆ ಬನ್ನೇರುಘಟ್ಟವೇ ಸೂಕ್ತ ಎಂದು ನಿರ್ಧರಿಸಿದ್ದು ಏಕೆ?

ಇದು ಪ್ರಾಜೆಕ್ಟ್ ಚೀತಾ ಅಲ್ಲ. ವನ್ಯಜೀವಿ ವಿನಿಮಯ.

ವನ್ಯಜೀವಿ ಮತ್ತು ಮಾನವ ಸಂಘರ್ಷಕ್ಕೆ ಸಂಬಂಧಿಸಿದಂತೆ, ಪ್ರಾಣಿಗಳ ದಾಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ತಂತ್ರಜ್ಞಾನದ ಮೊರೆ ಹೋಗಿದೆ. ಯೋಜನೆಗಳ ಅನುಷ್ಠಾನ ಕುರಿತು ಮಾಹಿತಿ ಸಿಗಬಹುದೆ?

ಹೌದು ಇಂದು ಆಧುನಿಕ ಯುಗ. ಇಂದಿನ ಯುಗಮಾನದ ಅವಶ್ಯಕತೆಗಳಿಗೆ ನಾವು ಒಗ್ಗಿಕೊಳ್ಳಬೇಕು. ಇಂದು ಅರಣ್ಯ ಕ್ಷೀಣಿಸುತ್ತಿದೆ. ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆ ಡ್ರೋನ್ ಗಳನ್ನು ಬಳಸುತ್ತಿದೆ. ಥರ್ಮಲ್ ಡ್ರೋನ್ ಕ್ಯಾಮರಾ ಬಳಸುತ್ತಿದೆ. ಎ.ಐ. ಕ್ಯಾಮರಾ ಬಳಕೆ ಮಾಡುತ್ತಿದೆ. ಈ ಎಲ್ಲವನ್ನೂ ಬಳಸಿಕೊಂಡು ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಶ್ರಮಿಸುತ್ತಿದೆ.

ಕುದುರೆಮುಖ ಅರಣ್ಯದಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಅಧಿಕಾರಿಗಳ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ ಕಾರಣ ಎಂದು ಸಾರ್ವಜನಿಕರು ದೂಷಿಸಿದ್ದಾರೆ. ಇದಕ್ಕೆ ಇಲಾಖೆಯ ಸ್ಪಷ್ಟನೆ ಏನು?

ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ವರದಿ ಬಂದ ಬಳಿಕ ಅಧಿಕಾರಿಗಳ ತಪ್ಪಿದ್ದರೆ ಕ್ರಮ ಆಗುತ್ತದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್