ಕೆಸಿನೋಗಳಿಗೆ ನಮ್ಮ ಪ್ರವಾಸೋದ್ಯಮ ನೀತಿಯಲ್ಲಿ ಪ್ರೋತ್ಸಾಹವಿಲ್ಲ - ಹೆಚ್ ಕೆ ಪಾಟೀಲ್
ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಚಿವರಾಗಿರುವ ಹೆಚ್ ಕೆ ಪಾಟೀಲ್ ಅವರು ಕರ್ನಾಟಕ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆದಿದ್ದಾರೆ. ಹಿಂದೆಂದೂ ಕಾಣದ ಅಭಿವೃದ್ಧಿ ಮತ್ತು ಬದಲಾವಣೆಯ ಪರ್ವ ಅವರ ಅಧಿಕಾರವಧಿಯಲ್ಲಿ ಶುರುವಾಗಿದೆ. ಪಾಟೀಲರ ಸಮರ್ಥ ಕೆಲಸ, ಕಾರ್ಯ ಮತ್ತು ದೂರದೃಷ್ಠಿಯಿಂದಾಗಿ ಕರ್ನಾಟಕ ಪ್ರವಾಸೋದ್ಯಮವು ಪುಟಿದೇಳುತ್ತಿದೆ. ಸಚಿವರಾದ ಎರಡೂವರೆ ವರ್ಷಗಳಲ್ಲಿ ಅವರು ಮಾಡಿದ ಗಮನಾರ್ಹ ಸಾಧನೆ ಮತ್ತು ಪ್ರವಾಸೋದ್ಯಮ ಕ್ಷೇತ್ರದ ವರ್ತಮಾನ ಮತ್ತು ಭವಿಷ್ಯದ ಆಗು ಹೋಗುಗಳ ಬಗ್ಗೆ ಹೆಚ್ ಕೆ ಪಾಟೀಲರು ಪ್ರವಾಸಿ ಪ್ರಪಂಚದೊಂದಿಗೆ ಗಂಭೀರವಾಗಿ ಮಾತನಾಡಿದ್ದಾರೆ.
ಪ್ರವಾಸೋದ್ಯಮ ಸಚಿವರಾಗಿ ಎರಡೂವರೆ ವರ್ಷ ಪೂರೈಸಿರುವುದಕ್ಕಾಗಿ ಅಭಿನಂದನೆಗಳು. ಈ ಅವಧಿಯಲ್ಲಿ ಪ್ರವಾಸೋದ್ಯಮದಲ್ಲಿ ಆಗಿರುವ ಪ್ರಗತಿಯ ಬಗ್ಗೆ ಹೇಳುವಿರಾ?
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರಕಾರ ಅಧಿಕಾರಕ್ಕೆ ಬಂದು, ನನಗೆ ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿ ಕೊಟ್ಟ ಈ ಸಂದರ್ಭದಲ್ಲಿ ಅತ್ಯಂತ ಸಮಾಧಾನಕರವಾಗಿರುವಂಥ ಸಾಧನೆಗಳನ್ನು ಮಾಡಿದ್ದೇವೆ, ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಹೊಸ ಹೊಸ ಆಲೋಚನೆಗಳನ್ನು ಹರಿಯಬಿಟ್ಟು ಅವುಗಳನ್ನು ಸಾಧ್ಯಗೊಳಿಸಿದ್ದೇವೆ ಅನ್ನುವ ಸಮಾಧಾನ ನಮ್ಮದು. ಎರಡೂವರೆ ವರ್ಷವೆಂದರೆ ನಾವು ಹಾಫ್ ವೇ ಮಾರ್ಕ್ ತಲುಪಿದಂತೆ. 60% ಸಮಯ ಕಳೆದಿದೆಯೆಂದೇ ಭಾವಿಸಿಕೊಳ್ಳಬೇಕು. ಈ ಅವಧಿಯಲ್ಲಿ ಕರ್ನಾಟಕ ಪ್ರವಾಸೋದ್ಯಮದ ಒಟ್ಟು ಚಿಂತನೆಯೊಳಗೆ ಬಹಳ ದೊಡ್ಡ ಬದಲಾವಣೆಯನ್ನು ಮಾಡಿದ್ದೇವೆ. ಪ್ರವಾಸೋದ್ಯಮವೆಂದರೆ ಎಲ್ಲರೂ ಐಷಾರಾಮಿ ಪ್ರವಾಸೋದ್ಯಮ ಮಾತ್ರ ಎನ್ನುವ ಚಿಂತನೆ ಹೊಂದಿದ್ದು, ಅದೀಗ ಬದಲಾಗಿದೆ. ಪ್ರವಾಸದ ಮೂಲಕ ಮಕ್ಕಳಿಗೆ ತಿಳಿವಳಿಕೆಯನ್ನು, ವೃದ್ಧರಿಗೆ ಅಂತಃಶಕ್ತಿಯನ್ನು ಸಮಾಜಕ್ಕೆ ಒಳಿತನ್ನು ನೀಡಬಹುದಾಗಿತ್ತೋ ಅಂಥ ಪ್ರವಾಸೋದ್ಯಮದ ಬಗ್ಗೆ, ಚರ್ಚೆಯಾಗಲೀ, ಚಿಂತನೆಯಾಗಲೀ, ಕಾರ್ಯಕ್ರಮ ರೂಪಿಸುವುದಾಗಲೀ, ಯಾವುದೂ ಆಗುತ್ತಿಲ್ಲವೆಂಬ ಅನಿಸಿಕೆ ಜನರಲ್ಲಿತ್ತು. ಆದರೆ ದೇಶ ಸುತ್ತು, ಕೋಶ ಓದು ಎನ್ನುವ ಚಿಂತನೆಗೆ ನಮ್ಮ ಇಲಾಖೆ ಒತ್ತು ನೀಡಿದೆ. ಸಮಾಜವನ್ನು ಅದಕ್ಕಾಗಿ ಅಣಿಗೊಳಿಸುತ್ತಿದೆ. ಅದರ ಜತೆಗೆ ಹೊಸ ಹೊಸ ಪ್ರವಾಸಿ ತಾಣಗಳನ್ನು ನಮ್ಮ ಇಲಾಖೆಯು ಗುರುತಿಸಿ ಅವುಗಳಿಗೆ ಪ್ರಚಾರ, ಮೂಲಭೂತ ಸೌಲಭ್ಯ ಒದಗಿಸುವತ್ತಲೂ ಗಮನ ಹರಿಸಿದ್ದೇವೆ.
ಉದಾಹರಣೆಗೆ ಕನ್ನಡದ ಪ್ರಥಮ ವಿಶ್ವವಿದ್ಯಾಲಯ ನಾಗಾವಿಯಲ್ಲಿದ್ದರೂ ಯಾರಿಗೂ ಪರಿಚಿತವಿಲ್ಲವೆಂಬಂತಿತ್ತು. ಅದರ ಬಗ್ಗೆ ಸಮಾಜಕ್ಕೆ ಮಾಹಿತಿ ನೀಡಿರುವ ಮಹತ್ತರದ ಕೆಲಸ ಪ್ರವಾಸೋದ್ಯಮ ಇಲಾಖೆಯಿಂದ ಸಾಧ್ಯವಾಗಿದೆ. ಇನ್ನು ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಲಕ್ಕುಂಡಿಯಂಥ ಶ್ರೇಷ್ಠ ತಾಣವನ್ನು ಇಂದು ವರ್ಲ್ಡ್ ಹೆರಿಟೇಜ್ ಸೈಟ್ ಆಗಿಸುವ ತಯಾರಿಯಲ್ಲಿದ್ದೇವೆ. ಸವದತ್ತಿ ಯಲ್ಲಮ್ಮನ ಗುಡ್ಡದಂಥ ಶ್ರದ್ಧಾ ಕೇಂದ್ರವನ್ನು ಸುಮಾರು ಮೂರು ಕೋಟಿ ರುಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಬೀದರ್ ನ ಕರೇಜ್, ಅಂಡರ್ ಗ್ರೌಂಡ್ ವಾಟರ್ ಸಪ್ಲೈಯನ್ನು ಉಳಿಸಿ ಪುನಶ್ಚೇತನಗೊಳಿಸಿರುವುದು, ಡೆಕ್ಕನ್ ಸುಲ್ತಾನೇಟ್ ಮಾನ್ಯುಮೆಂಟ್‌ಗಳನ್ನು ಸಂರಕ್ಷಿತ ಸ್ಮಾರಕಗಳನ್ನಾಗಿ ಮಾಡುತ್ತಿರುವುದು, ಕರಾವಳಿ ಪ್ರದೇಶದಲ್ಲಿ ಸುಮಾರು 320 ಕಿಮೀ ವರೆಗೆ ಹರಡಿಕೊಂಡಿರುವ ಕಡಲ ತೀರದ ಅಭಿವೃದ್ಧಿಗೆ 40 ನೋಡ್ಸ್ ಈಗಾಗಲೇ ಗುರುತಿಸಿ ಅವುಗಳ ಅಭಿವೃದ್ಧಿಗಾಗಿ ಯೋಜನೆ ಸಿದ್ಧವಾಗುತ್ತಿರುವುದೂ ಸೇರಿ ಅನೇಕ ಸಾಧನೆಗಳು ನಮ್ಮ ಇಲಾಖೆಯ ಹಿರಿಮೆ.
ಇದನ್ನೂ ಓದಿ: ಡೊಮೆಸ್ಟಿಕ್ ಟೂರಿಸಂ ನಮ್ಮ ಬೆನ್ನೆಲುಬು- ಪ್ರಶಾಂತ್ ಕುಮಾರ್ ಮಿಶ್ರಾ
ಪ್ರವಾಸೋದ್ಯಮ ನೀತಿ ಈಗಾಗಲೇ ಜಾರಿಯಲ್ಲಿದೆ. ಇದು ಎಷ್ಟರ ಮಟ್ಟಿಗೆ ವರ್ಕ್ ಆಗುತ್ತಿದೆ? ಪಾಲಿಸಿಯಿಂದ ಏನೇನು ಪಾಸಿಟಿವ್ಸ್ ಆಗಿದೆ?
ಪ್ರವಾಸೋದ್ಯಮ ನೀತಿಯನ್ನು ನಾನು ಮಾದರಿಯ ನೀತಿಯೆಂದು ಕರೆಯಲು ಬಯಸುತ್ತೇನೆ. ಈ ನೀತಿಯ ಮುಖಾಂತರ ನಾವು ಪ್ರವಾಸಿಗನ ರಕ್ಷಣೆ, ಸುರಕ್ಷತೆ ಹಾಗೂ ಅನುಕೂಲತೆ ಇವುಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ ಹಾಗೂ ಅವರಿಗೆ ಯೋಗ್ಯವಾದ ಮಾಹಿತಿ ಸೂಕ್ತ ಸಮಯದಲ್ಲಿ ತಲುಪಿಸಲು ಬೇಕಾದ ಪ್ರಯತ್ನಗಳು ಆಗುತ್ತಲಿದೆ. ಆ ಕಾರಣಕ್ಕಾಗಿಯೇ ಇಂದು ಪ್ರವಾಸಿ ಪ್ರಪಂಚದಂಥ ಪತ್ರಿಕೆ ಈ ನಮ್ಮ ಕೆಲಸದಲ್ಲಿ ಕೈಜೋಡಿಸಿದೆ.

ನೀವು ಕೇವಲ ಪ್ರವಾಸೋದ್ಯಮ ಸಚಿವರಲ್ಲ. ಬೇರೆ ಖಾತೆಗಳ ಜವಾಬ್ದಾರಿಯ ನಡುವೆ ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿ ಹೇಗೆ ನಿಭಾಯಿಸುತ್ತೀರಿ ?
ಉಳಿದ ಇಲಾಖೆಗಳು ಮಹತ್ವದ್ದೇ ಆದರೂ, ಪ್ರವಾಸೋದ್ಯಮ ಇಲಾಖೆ ಅತ್ಯಂತ ಮಹತ್ವದ್ದು. ಈ ನಿಟ್ಟಿನಲ್ಲಿ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ಒಂದು ರೀತಿ ನಮಗೂ ಜ್ಞಾನಾರ್ಜನೆ ಮಾಡುವಂಥ ಅವಕಾಶ ಹಾಗೂ ನನ್ನ ಅನುಭವದ ಹಿನ್ನೆಲೆಯಲ್ಲಿ ಹೊಸತನವನ್ನು ತರುವ ಪ್ರಯತ್ನ ಮಾಡುತ್ತಲೇ ಇದ್ದೇನೆ. ನಮ್ಮ ಅಧಿಕಾರಿ ವರ್ಗದವರು, ನನಗೆ ಬರುವ ಪ್ರತಿಕ್ರಿಯೆಗಳು, ಇವೆಲ್ಲವನ್ನೂ ಸಂಗ್ರಹಿಸಿ, ಹೊಸತನವನ್ನೂ ರೂಪಿಸುತ್ತಿದ್ದೇವೆ. ಕರ್ನಾಟಕದಲ್ಲಿ 11-12 ಕಡೆಗಳಲ್ಲಿ ನಾವು ರೋಪ್ ವೇ ಮಾಡುತ್ತಿದ್ದೇವೆ. ಫಿನಿಕ್ಯುಲರ್ ವ್ಯವಸ್ಥೆಯನ್ನು ರೂಪಿಸುತ್ತಿದ್ದೇವೆ. ಇದೆಲ್ಲವೂ ಅನುಭವದ, ಮಾರ್ಗದರ್ಶನದ ಹಿನ್ನೆಲೆಯಿರಲೇಬೇಕೆಂಬುದು ನನ್ನ ಅನಿಸಿಕೆ.
ರಾಜ್ಯ ಪ್ರವಾಸೋದ್ಯಮದ ಸ್ಥಿತಿಗತಿಯನ್ನು ಗಮನಿಸಿದರೆ, ಪಕ್ಕದ ಟೂರಿಸಂ ಹಬ್ ಸ್ಟೇಟ್ ಗಳಿಗಿಂತಲೂ ನಿಧಾನಗತಿಯಲ್ಲಿದೆ ಅನಿಸಿಲ್ಲವೇ ?
ಪ್ರವಾಸಿಗರಿಗೆ ಆಕರ್ಷಣೆಯಾಗಬೇಕಿದ್ದ ಅನೇಕ ತಾಣಗಳು ಅಳಿವು ಇಲ್ಲವೇ ನಶಿಸಿಹೋಗುವ ಸ್ಥಿತಿಯಲ್ಲಿತ್ತು. ಆದರೆ ಅದನ್ನು ನಾವು ಅಧಿಕಾರಕ್ಕೆ ಬಂದ ನಂತರ ಪುನಶ್ಚೇತನಗೊಳಿಸುತ್ತಿದ್ದೇವೆ. ಉದಾಹರಣೆಗೆ ನಮ್ಮ ರಾಜ್ಯದಲ್ಲಿ ವಿಧಾನ ಸೌಧಕ್ಕಿಂತ ಪ್ರಮುಖ ಪ್ರವಾಸಿತಾಣವಿರಲಿಲ್ಲ. ಆದರೆ ಅದು ಕಳೆದ 70ವರ್ಷಗಳಿಂದಲೂ ಪ್ರವಾಸಿಗರಿಗೆ ಮುಕ್ತವಾಗಿರಲಿಲ್ಲ. ವಿಧಾನಸೌಧ ಗೈಡೆಡ್ ಟೂರಿಸಂ ಯೋಜನೆಗೆ ಚಾಲನೆ ಕೊಟ್ಟು ಸದ್ಯ ವಿಧಾನ ಸೌಧ ದೇಶ-ವಿದೇಶದ ಪ್ರವಾಸಿಗರಿಗೂ ಮುಕ್ತವೆಂಬಂತೆ ಮಾಡಲಾಗಿದೆ. ಇದಕ್ಕಿಂತ ಹೊಸತನದ ಪ್ರಯತ್ನ ನಿರೀಕ್ಷಿಸಲು ಸಾಧ್ಯವೇ ಇಲ್ಲ.
ಬ್ರಾಂಡ್ ಕರ್ನಾಟಕ ಟೂರಿಸಂ ಅನ್ನು ಜಾಗತಿಕ ಮಟ್ಟದಲ್ಲಿ ಬಲಪಡಿಸುವುದಕ್ಕೆ ಯಾವೆಲ್ಲ ತಂತ್ರಗಳನ್ನು ಸಿದ್ಧಪಡಿಸಿಕೊಂಡಿದ್ದೀರಿ?
ಪ್ರಚಾರದ ಮೂಲಕ, ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಬ್ರಾಂಡ್ ಕರ್ನಾಟಕವನ್ನು ಜಾಗತಿಕ ಮಟ್ಟಕ್ಕೇರಿಸಲು ಸಾಧ್ಯವಿಲ್ಲ. ಮೆರಿಟ್ ವೈಸ್ ನಮ್ಮ ತಾಣಗಳು ಅಭಿವೃದ್ದಿಯಾಗಬೇಕು. ನಮ್ಮ ರಾಜ್ಯದಲ್ಲಿ 12ಕ್ಕೂ ಹೆಚ್ಚು ವಿಶ್ವ ಪಾರಂಪರಿಕ ತಾಣಗಳಾದವೆಂದರೆ ಅದಕ್ಕಿಂತ ಹೆಚ್ಚಿನ ಪ್ರವಾಸೋದ್ಯಮದ ಏಳಿಗೆ ಬೇರೊಂದಿಲ್ಲ. ಈವರೆಗೆ ಹಂಪಿಯೆಂದರೆ ವಿಶ್ವ ಪಾರಂಪರಿಕ ತಾಣವೆಂಬಂತಿತ್ತು. ಈಗ ಲಕ್ಕುಂಡಿ, ಹಿರೇಬೆಣಕಲ್, ಡೆಕ್ಕನ್ ಸುಲ್ತಾನೇಟನ್ನು ವಿಶ್ವ ಪಾರಂಪರಿಕ ತಾಣವನ್ನಾಗಿಸಲು ಹೊರಟಿದ್ದೇವೆ. ಇನ್ನು 5 ಸಾವಿರ ವರ್ಷಗಳ ಹಿಂದಿನ ಸಂಸ್ಕೃತಿಯಿರುವ ಹಿರೇಬೆಣಕಲ್ ಸ್ಥಳದ ಪುರಾತನ ಚಿತ್ರ ನಾವು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ಗೆ ತಂದು ಪ್ರದರ್ಶನಕ್ಕಿಟ್ಟಿದ್ದೇವೆ. ಇಂಥ ಪ್ರಯತ್ನಗಳು ಇಲಾಖೆಯ ಕಡೆಯಿಂದ ನಿರಂತರವಾಗಿ ನಡೆಯುತ್ತಿದೆ.
ಇನ್ನು ಎರಡೂವರೆ ವರ್ಷದ ಅವಧಿಯಲ್ಲಿ ಪ್ರವಾಸೋದ್ಯಮದಲ್ಲಿ ಏನೇನು ಬದಲಾವಣೆ ನೋಡಬಹುದು?
ಪ್ರವಾಸೋದ್ಯಮದಲ್ಲಿ ಸರಕಾರದಿಂದ ಮಾತ್ರವೇ ಅಭಿವೃದ್ಧಿ ಚಟುವಟಿಕೆಗಳ ನಡೆಯಬೇಕೆಂದಿಲ್ಲ. ಸಾರ್ವಜನಿಕರ ಸಹಭಾಗಿತ್ವವೂ ಬೇಕು. ಆ ಕಾರಣಕ್ಕಾಗಿಯೇ ನಮ್ಮ ಕರ್ನಾಟಕದಲ್ಲಿ ಸ್ಮಾರಕಗಳ ದತ್ತು ತೆಗೆದುಕೊಳ್ಳುವ ಯೋಜನೆ ಮಾಡಿದ್ದೇವೆ. ಇಂಥ ಕೆಲಸಗಳಲ್ಲಿ ಸಾರ್ವಜನಿಕರೂ ತೊಡಗಿಸಿಕೊಂಡರೆ ಉಳಿದಂತೆ ಇಲಾಖೆಯ ಶ್ರಮ ಪಾರದರ್ಶಕವೆಂಬಂತೆ ಕಾಣಿಸುತ್ತಿರುತ್ತದೆ.
ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿಗೆ ಸರಕಾರ ಏನೇನು ಯೋಜನೆ ಹಾಕಿಕೊಂಡಿದೆ ?
ಸುಮಾರು 47 ಸಾವಿರಕ್ಕೂ ಹೆಚ್ಚು ಸಣ್ಣ ಹಾಗೂ ದೊಡ್ಡ ಪ್ರಮಾಣದ ಉದ್ಯೋಗಗಳನ್ನು ಪ್ರವಾಸೋದ್ಯಮ ನೀತಿಯೊಳಗೆ ಸೃಷ್ಟಿ ಮಾಡಬೇಕೆಂಬುದು ನಮ್ಮ ಯೋಜನೆ. ಈ ನಿಟ್ಟಿನಲ್ಲಿ ಜಿಲ್ಲೆಗೊಂದರಂತೆ ಪ್ರವಾಸಿ ತಾಣ ಮಾಡಬೇಕೆಂದುಕೊಂಡಿದ್ದೇವೆ. ಆಗ ಮಾತ್ರವೇ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಸಾಧ್ಯ. ಬರಿಯ ಫೈವ್ ಸ್ಟಾರ್ ಹೊಟೇಲ್, ಕೆಸಿನೋ ಬಂದರಷ್ಟೇ ಉದ್ಯೋಗ ಸೃಷ್ಟಿಯಾಗುತ್ತದೆ ಎನ್ನುವ ಚಿಂತನೆಯಲ್ಲಿ ಜನರಿದ್ದಾರೆ. ಅದಕ್ಕೆ ನಮ್ಮ ಪ್ರವಾಸೋದ್ಯಮ ನೀತಿ ಸದ್ಯ ಪ್ರೋತ್ಸಾಹಿಸುತ್ತಿಲ್ಲ.
ಖಾಸಗಿ ಹೂಡಿಕೆಯನ್ನು ಪ್ರವಾಸೋದ್ಯಮದಲ್ಲಿ ಹೆಚ್ಚಿಸುವುದಕ್ಕೆ ಸರಕಾರ ಯಾವ ಸೌಲಭ್ಯಗಳನ್ನು ನೀಡುತ್ತಿದೆ?
ಖಾಸಗಿ ಹೂಡಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈಗಾಗಲೇ ರೋಪ್ ವೇ ಪ್ರಾಜೆಕ್ಟ್ ನಲ್ಲಿ ಪಿಪಿಪಿ ಮಾಡೆಲ್‌ಗೆ ಅವಕಾಶ ನೀಡಲಾಗಿದೆ. ಈಗಾಗಲೇ ಡಿಪಿಆರ್ ಗಳು ಸಿದ್ಧವಾಗಿವೆ. ಕೆಲವೇ ದಿನಗಳಲ್ಲಿ ಟೆಂಡರ್ ಕರೆಯಲಾಗುತ್ತದೆ. ಇದಕ್ಕೆ ಹೊರತಾಗಿ ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳುವಿಕೆ, ಪೈಪ್ ಲೈನ್ ಪ್ರಾಜೆಕ್ಟ್, ಅನೇಕ ಪ್ರವಾಸಿ ತಾಣಗಳಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಮಾಡುವುದಕ್ಕೂ ಪಿಪಿಪಿ ಮಾಡೆಲ್‌ಗೆ ಅನುಸರಿಸಬೇಕೆಂದುಕೊಂಡಿದ್ದೇವೆ.

ಹೋಮ್ ಸ್ಟೇ, ರೆಸಾರ್ಟ್ ಮತ್ತು ಬಜೆಟ್ ಹೊಟೇಲ್‌ಗಳ ಜತೆಗೆ ಸರಕಾರ ಯಾವ ರೀತಿ ಸಮನ್ವಯವನ್ನು ಇಟ್ಟುಕೊಂಡಿದೆ ?
ಪ್ರತಿ ವರ್ಷವೂ ಹೊಸ ಹೊಸ ರೆಸ್ಟೋರೆಂಟ್ಸ್, ಹೊಟೇಲ್ ಗಳಾಗುವುದಕ್ಕೆ ಸರಕಾರದ ಕಡೆಯಿಂದ ಸಾವಿರಾರು ಕೋಟಿ ರುಪಾಯಿಯ ಸಬ್ಸಿಡಿಗಳನ್ನು ನೀಡುತ್ತಿದ್ದೇವೆ. ಈ ಮೂಲಕ ಹೊಟೇಲ್ ಉದ್ಯಮವನ್ನು ಬೆಳೆಸುವುದಕ್ಕೆ, ಪ್ರೋತ್ಸಾಹಿಸುವುದಕ್ಕೆ ಸರಕಾರ ಯೋಜನೆ ಹಾಕಿಕೊಂಡಿದೆ.
ಉತ್ತರ ಕರ್ನಾಟಕದ ಪ್ರವಾಸಿ ತಾಣಗಳಿಗೆ ವಿಶೇಷ ಪ್ಯಾಕೇಜ್ ಅಥವಾ ಅಭಿವೃದ್ಧಿ ಯೋಜನೆ ಏನಾದರೂ ಇದೆಯೇ?
ಉತ್ತರ ಕರ್ನಾಟಕದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅನೇಕ ಪಾರಂಪರಿಕ ತಾಣಗಳನ್ನು ಗುರುತಿಸಿ, ಅವುಗಳನ್ನು ಸೂಕ್ತವಾದ ಪ್ರವಾಸಿ ತಾಣವನ್ನಾಗಿಸುವ ಪ್ರಯತ್ನ ಮಾಡುತ್ತಲೇ ಬಂದಿದ್ದೇವೆ. ಗುಲ್ಬರ್ಗಾದಲ್ಲಿ ಮಳಖೇಡ ಕೋಟೆ, ಯಾದಗಿರಿಯಲ್ಲಿ ಶಿರ್ವಾಳದಲ್ಲಿ 50ಕ್ಕೂ ಪುರಾತನ ದೇವಾಲಯಗಳು, ಇಟಗಿ, ಶಿರೂರ್, ಲಕ್ಕುಂಡಿ, ಯಲ್ಲಮ್ಮನಗುಡ್ಡ, ಹಾವೇರಿಯ ದೇವರಗುಡ್ಡ ಇವೆಲ್ಲವುಗಳ ಅಭಿವೃದ್ಧಿ ಕೆಲಸಗಳಾಗಿವೆ. ರಾಣೆಬೆನ್ನೂರಿನ ಗುಡ್ಡಗಾಡು ಅರಣ್ಯದಲ್ಲಿ ಪ್ರವಾಸಿತಾಣ ಸೃಷ್ಟಿಯಾಗಬಹುದೆಂದು ಯಾರೂ ಕಲ್ಪಿಸಿರಲಿಲ್ಲ. ಆದರೆ ಇಂದು ನಾವು ಹಲವಾರು ಜೀಪ್‌ಸೇವೆಗಳನ್ನು ಅಲ್ಲಿಗೆ ಒದಗಿಸುವ ಮೂಲಕ ಅದನ್ನು ಹೊಸ ಪ್ರವಾಸಿ ತಾಣವಾಗಿಸಿದ್ದೇವೆ. ಇವೆಲ್ಲವೂ ಮೊದಲೇ ಇದ್ದ ತಾಣಗಳು, ಅವುಗಳಿಗೆ ಹೊಸ ರೂಪ ನೀಡಿ, ಪ್ರವಾಸಿಗರನ್ನು ಸೆಳೆಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ನಿಮ್ಮ ಪ್ರಕಾರ ಪರಂಪರೆ ಮತ್ತು ಅಭಿವೃದ್ಧಿ – ಈ ಎರಡರ ನಡುವೆ ಸಮತೋಲನ ಸಾಧಿಸುವುದು ಹೇಗೆ?
ಅಭಿವೃದ್ಧಿಯೆಂಬುದು ಪಾರಂಪರಿಕ ಸ್ಥಳಗಳಿಗೆ ಹೋಗಿ ತಲುಪಬೇಕು. ಎಲ್ಲಾ ಐತಿಹಾಸಿಕ ಪಾರಂಪರಿಕ ಸ್ಥಳಗಳಿಗೆ ನಾವು ಉತ್ತಮವಾದ ರಸ್ತೆಗಳನ್ನು ಒದಗಿಸಬೇಕು, ಹೊಟೇಲ್‌ಗಳು, ಮೂಲಸೌಕರ್ಯಗಳನ್ನು ಒದಗಿಸಬೇಕು. ಇಂದಿಗೂ ನಮಗೆ ಹಂಪಿಗೆ ಈ ಎಲ್ಲ ಸೌಲಭ್ಯಗಳನ್ನು ಒದಗಿಸುವುದು ಸಾಧ್ಯವಾಗಿಲ್ಲ. ಅಲ್ಲಿ ಸಮೀಪದಲ್ಲಿ ವಿಮಾನವನ್ನು ಹಾರಾಡಿಸುವುದೂ ಸಾಧ್ಯವಾಗಿಲ್ಲ. ಇವೆಲ್ಲವೂ ನಮ್ಮ ಕೊರತೆಗಳು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಮ್ಮ ಐತಿಹಾಸಿಕ, ಪಾರಂಪರಿಕ ಸ್ಥಳಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದೇವೆ.
ಇಕೋ ಟೂರಿಸಂ ಮತ್ತು ಸಸ್ಟೇನೆಬಲ್ ಟೂರಿಸಂ ಕುರಿತು ಸರಕಾರದ ನಿಲುವು ಏನು?
ಇಕೋ ಟೂರಿಸಂಗೆ ನಾವು ಬಹಳ ಮಹತ್ವ ನೀಡುತ್ತೇವೆ. ಇಕೋ ಟೂರಿಸಂ ಹಾಗೂ ಸಸ್ಟೇನೆಬಲ್ ಟೂರಿಸಂ ಜತೆ ಜತೆಗೇ ಸಾಗುತ್ತದೆ. ಇದರಲ್ಲಿ ನಾವು ನೂತನವಾಗಿ ಕಪ್ಪತ್ತಗುಡ್ಡ ಪ್ರಾಜೆಕ್ಟ್ ಮಾಡಿದ್ದೇವೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಭಾಗದಲ್ಲೂ ಇಕೋ ಟೂರಿಸಂಗೆ ಒತ್ತುಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ.
ಕರಾವಳಿ ಮತ್ತು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಪರಿಸರ ಹಾಗೂ ಅಭಿವೃದ್ಧಿಯ ನಡುವೆ ತಿಕ್ಕಾಟಗಳು ನಡೆಯುತ್ತಿದೆ. ಇದರಿಂದ ಪರಿಸರ ಹಾನಿಯಾಗುತ್ತಿವೆಯೆಂಬ ಆರೋಪಗಳೂ ಕೇಳಿಬರುತ್ತಿವೆಯಲ್ಲ?
ಹೋರಾಟಗಾರರ ನಿಲುವಿನಲ್ಲಿ ಸ್ವಲ್ಪಮಟ್ಟಿಗೆ ಸತ್ಯವಿದೆ. ಆದರೆ ಆ ಟ್ರೆಶರನ್ನು ನೀವು ಮುಚ್ಚಿಟ್ಟುಕೊಂಡು ಏನು ಮಾಡುತ್ತೀರಿ? ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಪ್ರವಾಸೋದ್ಯಮ ಅಭಿವೃದ್ಧಿಗಾಗಿಯೇ ಅಧ್ಯಯನ ಮಾಡಿ ವರದಿ ಸಲ್ಲಿಸುವುಕ್ಕೆ ಪ್ರೊ.ವೀರಣ್ಣ ಮೊಗಟ ಎನ್ನುವವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಲಾಗಿತ್ತು. ಅವರು ಅನಧಿಕೃತವಾಗಿ ವರದಿ ನೀಡಿದ್ದಾರಾದರೂ ಆ ವರದಿಯಲ್ಲಿ ಅದ್ಭುತವಾದ ಪ್ರವಾಸಿ ತಾಣಗಳಾಗಬಹುದಾದ ಸ್ಥಳಗಳ ಪರಿಚಯ ನೀಡಿದ್ದಾರೆ. ಅಂಥವುಗಳನ್ನು ಈಗ ನಾವು ಗುರುತಿಸಬೇಕಾಗಿದೆ. ಆದಷ್ಟು ಅತ್ಯಂತ ಕಡಿಮೆ ಪ್ರಮಾಣದೊಳಗೆ ನೈಸರ್ಗಿಕ ಸಂಪತ್ತು ಯಾವ ಕಾರಣಕ್ಕೂ ನಾಶವಾಗದಂತೆ ಪ್ರಯತ್ನ ಮಾಡಿ ಪ್ರವಾಸಿ ತಾಣ ಮಾಡುತ್ತೇವೆ.
ಪ್ರವಾಸಿಗಳು ಹೆಚ್ಚಾಗಿ ಬರೋ ಸಮಯದಲ್ಲೇ ಸಫಾರಿ ಬಂದ್ ಮಾಡಿದ್ದೀರಿ. ಇದು ಟ್ರಾವೆಲ್ ಏಜೆನ್ಸಿ, ಹೊಟೇಲ್ ರೆಸಾರ್ಟ್ ಗಳ ಅಸಮಾಧಾನಕ್ಕೆ ಕಾರಣ ಆಗಿದೆ. ಪ್ರವಾಸಿಗರ ಸೇಫ್ಟಿ ಮುಖ್ಯ ನಿಜ. ಆದರೆ ಬಂದ್ ಮಾಡೋದೇ ಏಕೈಕ ಪರಿಹಾರವೇ? ಯಾವಾಗ ಸಫಾರಿ ಮತ್ತೆ ರಿ ಓಪನ್ ಆಗಬಹುದು?
ಸಫಾರಿ ಬಂದ್ ಮಾಡಿರುವುದರಿಂದ ಪ್ರವಾಸೋದ್ಯಮದ ಮೇಲೆ ಹೊಡೆತ ಬಿದ್ದಿದೆ ಎಂಬುದು ನಿಜ. ಆದರೆ ದೊಡ್ಡ ಪ್ರಮಾಣದಲ್ಲಿ ಹುಲಿ ಮರಣವಾದ ಮೇಲೆ, ಮಾನವ ಪ್ರಾಣಿ ಸಂಘರ್ಷ ನಡೆದಿರುವ ಈ ಸಂದರ್ಭದಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಹಾಗಾಗಿ ಸಫಾರಿ ವ್ಯವಸ್ಥೆ ಸ್ವಲ್ಪ ನಿಲುಗಡೆಯಾಗಿಬಹುದು. ನಾನು ಮತ್ತು ಅರಣ್ಯ ಸಚಿವರು ಸದ್ಯದಲ್ಲೇ ಸಭೆ ಮಾಡುತ್ತಿದ್ದೇವೆ. ಸೂಕ್ತವಾದ ನಿರ್ಣಯಕ್ಕೆ ಬಂದು ಮತ್ತೆ ಮೊದಲಿನಂತೆ ಸಫಾರಿ ನಡೆಯುವುದಕ್ಕೆ ಪ್ರಯತ್ನ ಮಾಡುತ್ತೇವೆ.
ಹಲವಾರು ಪ್ರವಾಸಿ ತಾಣಗಳಿಗೆ ರಸ್ತೆ, ರೈಲು ಮತ್ತು ವಿಮಾನ ಸಂಪರ್ಕ ಇನ್ನೂ ಸುಧಾರಣೆ ಆಗಬೇಕಿದೆ. ಈ ಬಗ್ಗೆ ಯೋಜನೆ ಇದ್ಯಾ?
ದೇಶದಲ್ಲಿ ಹಾಗೂ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಇನ್ನೂ ಹೆಚ್ಚಿನ ಒತ್ತು ಸಿಗಬೇಕಿದೆ. ಮೂಲಭೂತ ಸೌಲಭ್ಯ ಸೃಷ್ಟಿ ಮಾಡುತ್ತೇವೆ. ಆದರೆ ಇದರ ಹತ್ತುಪಟ್ಟು ಸರಕಾರದ ಯೋಜನೆಗಳು ಹೆಚ್ಚಾಗಲೇಬೇಕು. ಅದಕ್ಕೆ ಬೇಕಾಗಿರುವ ಹಣಕಾಸಿನ ಬೆಂಬಲ ಸಿಗಬೇಕು. ಕೇಂದ್ರ ಸರಕಾರ ಕೊಡಬೇಕು. ಇತ್ತೀಚೆಗೆ ಕೇಂದ್ರ ಸರಕಾರ ಸ್ವಲ್ಪ ಲಿಬರಲ್ ಆಗಿದೆ. ನಮ್ಮ ಸರಕಾರ ಬಂದ ಕೆಲವು ಅವಧಿಯೂ ಸೇರಿ 6 ವರ್ಷದ ವರೆಗೆ 250 ಕೋಟಿ ಯೋಜನೆಗಳನ್ನು ಮಂಜೂರು ಮಾಡಿದರೆ 19 ಕೋಟಿ ರುಪಾಯಿ ಮಾತ್ರ ಬಿಡುಗಡೆ ಮಾಡಿತ್ತು. ಆಮೆಗತಿಯಲ್ಲಿ ನಮಗೆ ಕೇಂದ್ರ ಪ್ರೋತ್ಸಾಹವಿತ್ತು. ಆದರೆ ಇಂದು ಕೆಂದ್ರ ಲಿಬರಲ್ ಆಗಿದೆ. ನಮ್ಮ ಸರಕಾರದಲ್ಲೀ ಪಿಪಿಪಿ ಮಾಡೆಲ್ ಮಾಡುತ್ತಿದ್ದೇವೆ.
ಪ್ರವಾಸಿ ತಾಣಗಳಲ್ಲಿ ಮೂಲ ಸೌಲಭ್ಯಗಳ ಬಗ್ಗೆ ಇವತ್ತಿಗೂ ಕಂಪ್ಲೇಂಟ್ಸ್ ಇವೆ. ಈ ಕೊರತೆ ನಿವಾರಣೆಗೆ ಏನು ಮಾಡಲಾಗುತ್ತಿದೆ?
ನಿಜ, ಪ್ರವಾಸಿತಾಣಗಳಲ್ಲಿ ಮೂಲಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ಪ್ರವಾಸಿ ತಾಣಗಳಲ್ಲಿ ಫೈವ್ ಸ್ಟಾರ್ ಹೊಟೇಲ್‌ಗಳಷ್ಟೇ ಡಾರ್ಮೆಟ್ರಿಗಳ ಅಗತ್ಯವಿದೆ. ಇಂಥ ಪ್ರಶ್ನೆಗಳನ್ನು ಖುದ್ದು ಇಲಾಖೆಯೇ ಮಾಡಿಕೊಂಡು ಇದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿದೆ. ಯಲ್ಲಮ್ಮನ ಗುಡ್ಡ ಅಭಿವೃದ್ಧಿ, ನಾಗಾವಿಯ ಅಭಿವೃದ್ಧಿ ಸರಕಾರವೇ ಮಾಡಿದ್ದು.
ವಿದೇಶಿ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಲು ಯಾವ ಹೊಸ ಪ್ರಯತ್ನಗಳು ನಡೆಯುತ್ತಿವೆ?
ವಿದೇಶಿ ಪ್ರವಾಸಿಗರು ನಿಮ್ಮ ಸೌಕರ್ಯಗಳನ್ನು ಆಧರಿಸಿ ಬರುವವರಲ್ಲ. ಹಂಪಿಯಲ್ಲಿ ಅನಾನುಕೂಲವಿದ್ದರೂ ಗೋವಾದಿಂದ ನೇರ ಅಲ್ಲಿಗೆ ಬರುತ್ತಿದ್ದರು. ಈಗ ಅನುಕೂಲಗಳಿವೆ. ಈ ರೀತಿ ನಮ್ಮ ತಾಣಗಳನ್ನು ಅಭಿವೃದ್ಧಿಪಡಿಸಿ ತೋರಿಸಿದರೆ ಅವರೇ ನಮ್ಮ ತಾಣಗಳತ್ತ ಮುಖ ಮಾಡುತ್ತಾರೆ.

ಪ್ರವಾಸಿಗರಿಂದ ಬರುವ ದೂರುಗಳಿಗೆ ತ್ವರಿತ ಪರಿಹಾರಕ್ಕೆ ಏನೇನು ವ್ಯವಸ್ಥೆ ಇದೆ?
ಇದು ಬಹಳ ಗಂಭೀರ ಪ್ರಶ್ನೆ. ಸಲಹೆಗಳು ದೂರುಗಳು ಬಂದರೆ ಸರಕಾರ ಮಟ್ಟದಲ್ಲಿ ಶೀಘ್ರವಾಗಿ ಸ್ಪಂದಿಸುತ್ತೇವೆ ಎಂದು ಹೇಳುವುದಕ್ಕಾಗುವುದಿಲ್ಲ. ವಿಳಂಬ ದ್ರೋಹ ನಮ್ಮ ರಾಜ್ಯ ಹಿತಾಸಕ್ತಿಗೆ ಅಡ್ಡಿಯಾಗಿದೆ. ಈ ಬಗ್ಗೆ ನಾನು ಯೋಚಿಸುತ್ತೇನೆ. ಯಾವ ರೀತಿಯ ಕಾರ್ಯಕ್ರಮ ಮಾಡಬಹುದೆಂಬುದರ ಬಗ್ಗೆ ಯೋಚಿಸುತ್ತೇನೆ. ಈ ಸಲಹೆಯನ್ನು ಪ್ರವಾಸಿ ಪ್ರಪಂಚಕ್ಕೆ ಕೊಡುವುದಕ್ಕೆ ಬಯಸುತ್ತೇನೆ. ನೀವು ತಿಂಗಳಿಗೆ 25 ಪ್ರಶ್ನೆಗಳನ್ನು ತಯಾರಿಸಿ ಕೊಡಿ, ಮುಂದಿನ ವಾರ ನಾವು ಆ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ. ಅದು ನಮ್ಮಲ್ಲೂ ಸಾಮಾಜಿಕ ಹೊಣೆಗಾರಿಕೆ ಮೂಡಿಸುತ್ತದೆ. ಹಾಗೂ ಜನರ ಬೇಕು ಬೇಡಗಳಿಗೆ ನಾವು ನಿಮ್ಮ ಜತೆ ಕೈಜೋಡಿಸಿ ಕೆಲಸಮಾಡಿದಂತಾಗುತ್ತದೆ. ನಿಮ್ಮ ಪತ್ರಿಕೆಯ ಮೂಲಕ ಉತ್ತರಿಸುವ ಪ್ರಯತ್ನ ಮಾಡುತ್ತೇವೆ
ಕರ್ನಾಟಕ ಪ್ರವಾಸೋದ್ಯಮದ ಪ್ರಚಾರದಲ್ಲಿ ಮಾಧ್ಯಮಗಳ ಪಾತ್ರವನ್ನು ನೀವು ಹೇಗೆ ನೋಡುತ್ತೀರಿ?
ಪ್ರವಾಸೋದ್ಯಮದಲ್ಲಿ ಮಾಧ್ಯಮದ ಪಾತ್ರ ಮಹತ್ತರವಾದುದು. ಆದರೆ ಇಲ್ಲಿಯವರೆಗೆ ಪ್ರವಾಸೋದ್ಯಮದ ಬಗ್ಗೆ ಮಾಧ್ಯಮ ಮಾತನಾಡುತ್ತಿರಲಿಲ್ಲ. ಈಗ ಪತ್ರಿಕೆ ಕಾರ್ಯಪ್ರವೃತ್ತವಾಗಿದೆ. ಪ್ರವಾಸಿ ಪ್ರಪಂಚ 24 ಪುಟಗಳ ಮಾಹಿತಿ ನೀಡುತ್ತಿದೆ. ಇದು ಹೆಮ್ಮೆಯ ವಿಚಾರ. ನೀವು ಪ್ರತಿ ಓದುಗನಿಗೆ ಹೊಸತೆನಿಸುವ ಮಾಹಿತಿ ನೀಡುತ್ತಿದ್ದೀರಿ. ಇದು ಸರಕಾರದ ಕಣ್ಣು ತೆರೆಸುತ್ತದೆ.
ಬೇರೆ ರಾಜ್ಯಗಳಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ನಿಗಮಗಳು ಸೋಷಿಯಲ್ ಮೀಡಿಯಾವನ್ನು ಸಮರ್ಥವಾಗಿ ಬಳಸಿಕೊಂಡು ಪ್ರಚಾರ ಮಾಡ್ತಾ ಇವೆ. ಕರ್ನಾಟಕ ಯಾಕೆ ಈ ಕಡೆ ಜಾಸ್ತಿ ಆಸಕ್ತಿ ತೋರಿಸ್ತಾ ಇಲ್ಲ?
ನಾನು ಅಲ್ಲಗಳೆಯುವುದಿಲ್ಲ. ಅದನ್ನು ಹೆಚ್ಚು ಆಕ್ಟೀವ್ ಆಗುವಂತೆ, ಇಫೆಕ್ಟಿವ್ ಆಗುವಂಥ ಪ್ರಯತ್ನ ಮಾಡುತ್ತೇವೆ.