Wednesday, March 18, 2026
Wednesday, March 18, 2026

ಜಪಾನಿ ಜನರ ಸಾಡೋ ಚಹಾ ಸಮಾರಂಭ

ಎಂಟನೆಯ ಶತಮಾನದಲ್ಲಿ ಚಹಾವನ್ನು ಚೈನಾದಿಂದ ಮೊದಲಿಗೆ ತರಲಾಗಿತ್ತು. ಆದರೆ, ಆಗ ಚಹಾ ಕೇವಲ ಬೌದ್ಧ ಧರ್ಮಗುರುಗಳು ಮತ್ತು ಮೇಲ್ವರ್ಗದವರಿಗೆ ಔಷಧಿಯ ರೂಪದಲ್ಲಿ ಲಭ್ಯವಿತ್ತು. ನಂತರದಲ್ಲಿ ಇದರ ಬಳಕೆ ಹೆಚ್ಚಾಗಿ, ಗಣ್ಯರು, ಪ್ರತಿಷ್ಠಿತ ವರ್ಗದವರನ್ನು ಚಹಾ ಕೂಟಕ್ಕೆ ಆಮಂತ್ರಿಸುವುದು, ಥರಥರದ ಚಹಾ ಸಂಬಂಧಿತ ಸಲಕರಣೆಗಳನ್ನು ಪ್ರದರ್ಶಿಸುವದು ಒಂದು ಬಗೆಯ ಹವ್ಯಾಸವಾಯಿತು.

  • ಮೇಘಾ ಹೆಗಡೆ, ಯುಎಇ

ಚಹಾ, ವಿಶ್ವದಲ್ಲಿ ಅತೀ ಹೆಚ್ಚು ಸೇವಿಸಲ್ಪಡುವ ಪಾನೀಯಗಳಲ್ಲಿ ಒಂದು. ದೇಶದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕೆಲವೆಡೆ ಇದು ಜನರನ್ನು ಬೆಸೆಯುವ ಸಾಮಾಜಿಕ ಕೊಂಡಿಯಾಗಿದ್ದರೆ ಇನ್ನೂ ಕೆಲವೆಡೆ ದೈನಂದಿನ ಬದುಕಿನ ವಿರಾಮ ಮತ್ತು ಆತಿಥ್ಯದ ಭಾಗವಾಗಿದೆ. ಚಹಾ ಆಸ್ವಾದಿಸುವ ಜಪಾನ್‌ನಲ್ಲಿ ಇದು ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ. ಇಲ್ಲಿನ ಚಹಾ ಸಮಾರಂಭ(ಟೀ ಸೆರೆಮನಿ) ಹಲವು ವಿಶೇಷತೆಗಳನ್ನು ಹೊಂದಿದೆ.

ಚಾರ್‌ ತತ್ತ್ವಗಳ ಚಾಡೋ ಸಮಾರಂಭ

ಚಹಾ ಸೇವನೆಯ ಜತೆಗೆ ಅಥಿತಿಗಳ ಒತ್ತಡದ ಜೀವನಕ್ಕೆ ವಿರಾಮ ನೀಡಿ, ಸರಳತೆ ಮತ್ತು ಸೌಹಾರ್ದದ ಮೂಲಕ ಮಾನಸಿಕ ನೆಮ್ಮದಿ ಒದಗಿಸುವುದಾಗಿದೆ. ಈ ಚಹಾ ಸಂಭ್ರಮಕ್ಕೆ ಜಪಾನ್‌ನಲ್ಲಿ 'ಚಾಡೋ' ಅಥವಾ 'ಸಾಡೊ' ಎಂದು ಹೆಸರು. ಇದು ಖಾಸಗಿ ಸಮಾರಂಭ. ಇದರಲ್ಲಿ ಜಪಾನ್‌ನ ಮಾಚಾವನ್ನ(ಗ್ರೀನ್ ಟೀ) ಉದ್ಯಾನವನದಿಂದ ಸುತ್ತುವರಿದ, ಪ್ರತ್ಯೇಕವಾದ ಚಹಾ ಮನೆಗಳಲ್ಲಿ ಕುಳಿತು ಅತಿಥಿಗಳಿಗೆ ಚಹಾ ನೀಡಲಾಗುತ್ತದೆ. ಇದಕ್ಕೆ ನಾಲ್ಕು ತತ್ತ್ವಗಳೂ ಇವೆ! 'ವಾ' (ಸಾಮರಸ್ಯ), 'ಕೈ' (ಗೌರವ), 'ಸೈ' (ಶುದ್ಧತೆ) ಮತ್ತು 'ಜಾಕು' (ಶಾಂತಿ). ಇಂಥ ವಿಶಿಷ್ಟ ಅನುಭವ ಪ್ರವಾಸಿಗರಿಗೂ ಆಗಲೆಂದು ಕೆಲವು ಸಂಸ್ಥೆಗಳು, ಹೊಟೇಲ್‌ ಮತ್ತು ಸಂಸ್ಕೃತಿ ಕೇಂದ್ರಗಳೂ ಈ ಸಮಾರಂಭಗಳನ್ನು ನಡೆಸುತ್ತಿವೆ.

ಇದನ್ನೂ ಓದಿ: ಪ್ಯಾರಾಚೂಟ್‌ ಏರಿ ಅಟ್ಲಾಂಟಿಕಾ ಸಾಗರದ ಮೇಲೆ ಹಾರಿ

ಚಹಾಕ್ಕಿದೆ ಶತಮಾನಗಳ ಇತಿಹಾಸ

ಎಂಟನೆಯ ಶತಮಾನದಲ್ಲಿ ಚಹಾವನ್ನು ಚೈನಾದಿಂದ ಮೊದಲಿಗೆ ತರಲಾಗಿತ್ತು. ಆದರೆ, ಆಗ ಚಹಾ ಕೇವಲ ಬೌದ್ಧ ಧರ್ಮಗುರುಗಳು ಮತ್ತು ಮೇಲ್ವರ್ಗದವರಿಗೆ ಔಷಧಿಯ ರೂಪದಲ್ಲಿ ಲಭ್ಯವಿತ್ತು. ನಂತರದಲ್ಲಿ ಇದರ ಬಳಕೆ ಹೆಚ್ಚಾಗಿ, ಗಣ್ಯರು, ಪ್ರತಿಷ್ಠಿತ ವರ್ಗದವರನ್ನು ಚಹಾ ಕೂಟಕ್ಕೆ ಆಮಂತ್ರಿಸುವುದು, ಥರಥರದ ಚಹಾ ಸಂಬಂಧಿತ ಸಲಕರಣೆಗಳನ್ನು ಪ್ರದರ್ಶಿಸುವದು ಒಂದು ಬಗೆಯ ಹವ್ಯಾಸವಾಯಿತು. ಅದೇ ವೇಳೆ ಸರಳತೆ ಮೂಲಕ ಆಧ್ಯಾತ್ಮಿಕತೆಯನ್ನು ಬೆಂಬಲಿಸುವ ಝೆನ್ ಬೌದ್ಧಧರ್ಮ ಪ್ರವರ್ಧಮಾನಕ್ಕೆ ಬಂದಿತು. ‘ಸಮಕಾಲೀನ ಚಹಾ ಮಾರ್ಗದ ಪಿತಾಮಹ’ ಎನಿಸಿದ ಸೆನ್ ನೋ ರಿಕ್ಯು, ಸರಳ-ಗ್ರಾಮೀಣ ಶೈಲಿಯ ಚಹಾ ಕೂಟಗಳನ್ನು ಪ್ರಸಿದ್ಧಿಗೊಳಿಸಿದನು.

Untitled design (68)

ಟೂರಿಸ್ಟ್‌ಗಳಿಗೆ ಚಹಾ ಪಾರ್ಟಿ ಚಲ್ತಾ ಹೈ

ಸರಳತೆಯ ತತ್ವದ ಈ ಚಹಾ ಕೂಟವನ್ನು ಇಂದಿಗೂ ತತಾಮಿ ಕೊಠಡಿಗಳಲ್ಲಿ ನಡೆಸಲಾಗುತ್ತದೆ. ಕೊಠಡಿಯ ಪ್ರವೇಶದ್ವಾರ ಕಿರಿದಾಗಿದ್ದು, ಅತಿಥಿಗಳು ತಲೆ ಬಾಗಿಸಿ ಒಳಹೋಗಬೇಕಾಗುತ್ತದೆ. ಇದು ವಿನಯತೆಯ ಸಂಕೇತವೂ ಹೌದು. ಇಲ್ಲಿ ಯಾವುದೇ ಬಗೆಯ ಆಡಂಬರದ ಅಲಂಕಾರವಿಲ್ಲ. ಋತುಮಾನಕ್ಕೆ ತಕ್ಕಂತೆ ಬೋನ್ಸಾಯ್ ಅಥವಾ ಹೂವಿನ ಗಿಡಗಳನ್ನು ಟೊಕಾನೊಮ ಎಂಬ ಸ್ಥಳದಲ್ಲಿ ಇಡುತ್ತಾರೆ. ತತಾಮಿ ಎಂದರೆ ಹುಲ್ಲಿನಿಂದ ಮಾಡಿದ ಅಚ್ಚುಕಟ್ಟಾದ ಒಂದು ಬಗೆಯ ಮೃದುವಾದ ಚಾಪೆ ಎಂದು ಅರ್ಥ. ಅಥಿತಿಗಳನ್ನು ಇದರ ಮೇಲೆ ಕೂರಿಸಿ, ಅವರ ಎದುರೇ ಚಹಾ ತಯಾರಿಸುತ್ತಾರೆ. ತಯಾರಿಕೆಗೆ ಅವರದೇ ಆದ ವಿಶೇಷ ಸಲಕರಣೆಗಳನ್ನು ಬಳಸುತ್ತಾರೆ. ಚಹಾ ತಯಾರಕರೂ ಜಪಾನ್‌ನ ಸಾಂಪ್ರದಾಯಿಕ ಉಡುಪು ಕಿಮೋನೋವನ್ನು ಧರಿಸಿರುತ್ತಾರೆ. ಮೊದಲು ಸಿಹಿ ತಿಂಡಿ (ವಗಾಷಿ) ನೀಡಿ, ನಂತರ ಚಹಾವನ್ನು ತತಾಮಿ ಮೇಲೆ ಇಡಲಾಗುತ್ತದೆ. ಕುಡಿಯುವ ಮೊದಲು ಚಹಾದ ಬಟ್ಟಲಿನ ಮುಂಭಾಗವನ್ನ 90 ಡಿಗ್ರಿ ತಿರುಗಿಸಿ ಕುಡಿಯುವುದು ಅತಿಥಿಗಳಿಗೆ ಸಲ್ಲಿಸುವ ಗೌರವವಾಗಿದೆ. ಚಹಾ ನೀಡುವ ಪಿಂಗಾಣಿ ಲೋಟಗಳು ವಿಶಿಷ್ಠ ಕಲಾಕುಸುರಿಯಿಂದ ಕೂಡಿರುತ್ತವೆ. ಸಾಂಪ್ರದಾಯಿಕ ಚಹಾ ಸಮಾರಂಭಗಳು ಇನ್ನೂ ಹಲವಾರು ಶಿಷ್ಠಾಚಾರಗಳನ್ನು ಹೊಂದಿವೆ. ಇವು ಹಲವು ಗಂಟೆಗಳವರೆಗೂ ನಡೆಯಬಹುದು. ಆದರೆ, ಪ್ರವಾಸಿಗರಿಗೋಸ್ಕರ ನಡೆಸುವ ಚಹಾ ಕೂಟಗಳು, ಸಂಕ್ಷಿಪ್ತವಾಗಿದ್ದು, ಪ್ರವಾಸಿಗರಿಂದ ಹೆಚ್ಚಿನ ನಿಯಮ ಹಾಗೂ ಶಿಷ್ಠಾಚಾರಗಳ ಅಪೇಕ್ಷೆ ಇರುವುದಿಲ್ಲ. ಆದರೂ ಪ್ರವಾಸಿಗರು ಕೆಲವು ಅಂಶಗಳನ್ನು ನೆನಪಿಡಬೇಕು.

ಒಟ್ಟಾರೆ, ಚಹಾ ಸಮಾರಂಭ ಜಪಾನಿನ ಸಂಸ್ಕೃತಿಯ ಅತಿ ಅಮೂಲ್ಯ ಭಾಗವಾಗಿದ್ದು, ಸರಳತೆ ಮತ್ತು ಶಾಂತಿ ತತ್ವದ ಮೇಲೆ ನಿಂತಿದೆ. ಕಾಫಿ ಕಪ್‌ ಅನ್ನು ಕೈಯಲ್ಲಿ ಹಿಡಿದೇ ಮೆಟ್ರೋ, ಬಸ್ ಹಿಂದೆ ಓಡುವ ಜನರಿಗೆ ಸಂಯಮ ಮತ್ತು ಸರಳತೆ ಮತ್ತು ಅದರಲ್ಲಿನ ಸೌಂದರ್ಯವನ್ನು ಅರಿಯಲು ಸಹಕಾರಿಯಾಗಿದೆ.

ನೆನಪಿರಲಿ

ಮೈಮುಚ್ಚುವ ಉಡುಗೆಗಳನ್ನು ತೊಡಬೇಕು. ಗಾಢವಾದ ಸುಗಂಧ ದ್ರವ್ಯಗಳನ್ನು ಬಳಸುವಂತಿಲ್ಲ. ಉಂಗುರಗಳಂಥ ಆಭರಣಗಳನ್ನೂ ಧರಿಸಬಾರದು. ಕಿಯೋಟೊ ನಗರವು ಇಂಥ ಚಹಾ ಕೂಟಗಳ ಅನುಭವ ಪಡೆಯಲು ಸೂಕ್ತ ಜಾಗವಾಗಿದೆ. 'ಕ್ಯಾಮೆಲಿಯಾ ಟೀ ಸೆರೆಮನಿ', 'ಟೀ ಸೆರೆಮನಿ ಕ್ಯೂಗೆತ್ಸು' ಮುಂತಾದ ವೆಬ್‌ಸೈಟ್‌ಗಳ ಮೂಲಕ ಅವರು ನಡೆಸುವ ಟೀ ಸೆರೆಮನಿಯ ಅನುಭವ ಪಡೆಯಬಹುದು. ಇದಕ್ಕೆ ತಗುಲುವ ಖರ್ಚು, ಬುಕಿಂಗ್ ವಿಧಾನ ಮುಂತಾದ ವಿವರಗಳನ್ನೂ ಅವರ ವೆಬ್‌ಸೈಟ್‌ ಮೂಲಕವೇ ಪಡೆಯಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...