Wednesday, August 12, 2026
Wednesday, August 12, 2026

ಭೂತಾನ್ ಎಂಬ ಬ್ಯೂಟಿ.. ಇದಕ್ಕಿಲ್ಲ ಸಾಟಿ!

ಪ್ರವಾಸಿಗರೇ ನೀವು ನಮ್ಮಲ್ಲಿಗೆ ಬನ್ನಿ, ನಮ್ಮಲ್ಲಿಗೆ ಬನ್ನಿ, ನಾವು ಸಮುದ್ರ ತೋರಿಸುತ್ತೇವೆ, ಕಾಡು ಮೇಡುಗಳನ್ನು ಸುತ್ತಿಸುತ್ತಾ ಮೈಕೈ ನೋವು ಮಾಡಿಸುತ್ತೇವೆ, ಗುಂಡಿ ಬಿದ್ದ ನಮ್ಮಲ್ಲಿಯ ರಸ್ತೆಯನ್ನು ತೋರಿಸುತ್ತೇವೆ, ಗಬ್ಬೆದ್ದು ಹೋಗಿರುವ ಕೆಲವು ಪ್ರವಾಸಿ ತಾಣಗಳ ದರ್ಶನವನ್ನೂ ಮಾಡಿಸುತ್ತೇವೆ ಎಂದು ನಮ್ಮ ಸರಕಾರಗಳು ಹೇಳುವಂತೆ, ಈ ಭೂತಾನಿನ ಸರ್ಕಾರ ಪ್ರವಾಸಿಗರನ್ನು ಬರಗೆಟ್ಟಂತೆ ಕರೆಯುವುದೇ ಇಲ್ಲ. ಏಕೆಂದರೆ ಹೊರಗಿನ ಪ್ರವಾಸಿಗರು ಬಂದು ತಮ್ಮ ನಾಡನ್ನು ಗಬ್ಬೆಬ್ಬಿಸುವುದು ಈ ಭೂತಾನಿಗರಿಗೆ ಬೇಕಿಲ್ಲ.

  • ರಾಜು ಅಡಕಳ್ಳಿ

ಒಂದೇ ಮಾತಿನಲ್ಲಿ ಹೇಳುವುದೆಂದರೆ ಭೂತಾನ್ ನಿರಾಭರಣ ಸುಂದರಿ. ಭೂತಾನ್ ಎಂಬ ಭೂಮಿಯ ತುಣುಕಿಗೆ ಹೊದ್ದುಕೊಂಡಿರುವ ಹಸಿರಿನ ಗಿರಿಗಳ ಸಾಲೇ ಆ ದೇಶಕ್ಕೆ ಆಭರಣ. ಅಲ್ಲಿಯ ಪ್ರಶಾಂತ ಜನ ಜೀವನವೇ ಆ ನಾಡಿಗೆ ಭೂಷಣ. ಭೂತಾನಿಗೆ ಬರುವುದೆಂದರೆ ಹೆಂಡತಿಯ ಸಂಗಡ ಮಾವನ ಮನೆಗೆ ಬಂದಂತೆ. ಏನೋ ಒಂಥರಾ ಖುಷಿ. ಮಧುಚಂದ್ರಕ್ಕೂ ಇದು ಹೇಳಿ ಮಾಡಿಸಿದಂಥ ತಾಣ.

ತವರು ಮನೆಗೆ ಮನೆಮಗಳು ಹಟ ಮಾಡಿಕೊಂಡು ಬರುವಂತೆ, ನಾನಂತೂ ಭೂತಾನಿಗೆ ಅನೇಕ ಸಲ ಹೋಗಿ ಬಂದಿದ್ದೇನೆ

ಹಿಂದೆ ಬರುವಾಗ ಬೆಂಗಳೂರಿನಿಂದ ಗುವಾಹಟಿಗೆ, ಗುವಾಹಟಿಯಿಂದ ಪಾರೋಕ್ಕೆ ವಿಮಾನದಲ್ಲಿ ಬಂದಿಳಿದಿದ್ದೆ. ಮತ್ತೊಂದು ಬಾರಿ ಬೆಂಗಳೂರಿನಿಂದ ಪಶ್ಚಿಮ ಬಂಗಾಳದ ಬಾಗಡೋಗ್ರಾಕ್ಕೆ ವಿಮಾನದಲ್ಲಿ ಬಂದು, ಅಲ್ಲಿಂದ ಮುಂದೆ ನಮ್ಮ ದೇಶದ ಗಡಿಯಲ್ಲಿರುವ ಜೈಗಾಂವ್ ದಾಟಿ ಪುನಶುಲಿಂಗ್ ( ಫುನ್ಟ್ ಶೋಲಿಂಗ್ ) ಎಂಬ ಭೂತಾನಿನ ಊರಿಗೆ ಕಾರಿನಲ್ಲಿ ಬಂದೆ. ಪಶ್ಚಿಮ ಬಂಗಾಳದ ತುತ್ತ ತುದಿಯಲ್ಲಿರುವ ಈ ದಾರಿಯ ಅಕ್ಕ ಪಕ್ಕ ಒಂದಷ್ಟು ಚಹಾ ತೋಟಗಳು ಉಡುಪಿ ಭಟ್ಟರ ಹೊಟೇಲಿನಲ್ಲಿ ಸಿಗುವ ಖಡಕ್ ಚಹಾದಂತೆಯೇ ಮನಸಿಗೆ ಖುಷಿ ಕೊಡುವಂಥವು.

ಇದನ್ನೂ ಓದಿ: ಎರಡು ವಿಸ್ಮಯ ಗಡಿಯಾರಗಳು!

ಪಶ್ಚಿಮ ಬಂಗಾಳದ ಆಗಿನ ಮಮತಾ ದೀದಿಯ ಆಡಳಿತದ ದರ್ಶನ ಮಾಡಿಕೊಳ್ಳುತ್ತಾ, ಅಲ್ಲಿಯ ಗುಂಡಿ ಬಿದ್ದ ರಸ್ತೆಗಳನ್ನು ಗಂಡಾಗುಂಡಿ ಮಾಡಿಕೊಂಡು ದಾಟಿ, ಭೂತಾನಿನ ಗಡಿಯೊಳಗೆ ಬಂದಾಗ, ರಸ್ತೆಗಳು ಹೇಮಮಾಲಿನಿಯ ನುಣುಪಾದ ಕೆನ್ನೆಯನ್ನು ನೆನಪಿಸಿತು. ನಮ್ಮಲ್ಲಿಯ ರಸ್ತೆಗಳಂತೆ ಭೂತಾನಿನಲ್ಲಿ ರಸ್ತೆಗಳನ್ನು ಹೇಮಾ- ಮಾಲಿನ್ಯ ಮಾಡಿಲ್ಲ. ಆದರೆ ರಸ್ತೆಯಲ್ಲಿ ನಮ್ಮಲ್ಲಿಯಂತೆ ಮಧ್ಯಮಧ್ಯ ದನಗಳ ಗ್ವಾಲೆ ಕಂಡು ಸಮಾಧಾನವಾಯಿತು . ನಮಗೆ ಗೈಡ್ ಆಗಿ ಬಂದಿದ್ದ ಸಂಘಯ್ ಮತ್ತು ಚಾಲಕ ಬೇಲ್ಲೂಸ್ ಎಂಬವರು ನಮ್ಮ ಪಾಲಿಗೆ ಸಾಂಗ್ಯಾ-ಬಾಳ್ಯನಂತೆ ಆಪ್ತರಾಗಿ ಭೂತಾನಿನ ಕಥೆಗಳನ್ನು ಹೇಳಿದರು. ಭೂತಾನ್ ಪ್ರವಾಸದಲ್ಲಿ ವಿದೇಶಿಗರು ಸ್ಥಳೀಯ ಗೈಡನ್ನು ಜೊತೆಗೆ ಕರೆದುಕೊಂಡು ಹೋಗಬೇಕಾಗಿರುವುದು ಕಡ್ಡಾಯ. ಹೀಗಾಗಿ ಅಲ್ಲಿಯ ಇಂಚಿಂಚು ಮಾಹಿತಿಗಳು ತಾಜಾ ಆಗಿ ಪ್ರವಾಸಿಗರಿಗೆ ಲಭ್ಯವಾಗುವುದು ಸಹಜ.

Untitled design (78)

ರಸ್ತೆ ಮಧ್ಯೆ ಕಂಡ ಹಸುಗಳಿಂದ ಹಾಲನ್ನು ನಾವು ಕರೆಯಬಹುದಾ ಎಂದು ನಾನು ಸಾಂಗ್ಯಾ ಬಾಳ್ಯರನ್ನು ಕಿಚಾಯಿಸಿದೆ. ಓಕೆ, ಹಾಲು ಕರೆಯಬಹುದು, ಹಾಗೆಯೇ ಹಸುಗಳಿಂದ ಒದೆಯನ್ನೂ ತಿನ್ನಬಹುದು ಎಂದು ಅವರು ಪರತ್ ಪಾವತಿ ನೀಡಿದರು. ಹೀಗಾಗಿ ರಸ್ತೆ ಮಧ್ಯ ಹಾಲು ಕರೆಯಲು ಮುಂದಾಗಿ ಹಾಲಾಹಲ ಸೃಷ್ಟಿಸಬಾರದು ಎಂದುಕೊಂಡು ಸುಮ್ಮನಾಗಬೇಕಾಯಿತು.

ವಿಶೇಷವೆಂದರೆ ಭಾರತೀಯರಿಗೆ ಭೂತಾನ್ ಪ್ರವೇಶಿಸಲು ಪಾಸ್‌ಪೋರ್ಟ್ ಬೇಕಿಲ್ಲ. ವೀಸಾ ಬೇಕಿಲ್ಲ. ವೋಟಿಂಗ್ ಗುರುತಿನ ಚೀಟಿ ಇದ್ದರೂ ಸಾಕು. ಭಾರತ ಭೂತಾನ್ ಗಡಿಗಳಲ್ಲಿ ಒಳ ಪ್ರವೇಶಿಸುವಾಗ ಲಂಚ ಗಿಂಚದ ಕೊಂಚ ಕಿರಿಕಿರಿಯೂ ಇಲ್ಲ. ಬೇರೆ ದೇಶಗಳಿಗೆ ಹೋಗುವಾಗ ಅಗತ್ಯವಾದ ಹಣದ ವಿದೇಶಿ ವಿನಿಮಯ ಮಾಡಿಕೊಂಡು ಹೋಗಬೇಕೆಂಬ ತಾಪತ್ರಯವೂ ಇಲ್ಲಿಲ್ಲ. ಕಾರಣ ಭಾರತದ ಕರೆನ್ಸಿಯೂ ಭೂತಾನಿನಲ್ಲಿ ನಡೆಯುತ್ತದೆ. ಭೂತಾನ್ ಪಾಲಿಗೆ ಭಾರತ ದೊಡ್ಡಣ್ಣನಂತೆ. ಭಾರತದಿಂದ ಭೂತಾನ್ ಭಾರೀ ಪ್ರಮಾಣದಲ್ಲಿ ದಿನಬಳಕೆ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಪಾಕಿಸ್ತಾನದಂತೆ ಭೂತಾನ್ ಭಾರತದೊಂದಿಗೆ ಯಾವತ್ತೂ ಕಾಲು ಕೆರೆದು ಜಗಳ ಮಾಡುವ ನರಿ ಬುದ್ಧಿ ತೋರಿಸಿ ವರಿ ಮಾಡಿಲ್ಲ. ಅಲ್ಲಿ ಬೌದ್ಧ ಧರ್ಮೀಯರೇ ಹೆಚ್ಚಿದ್ದರೂ ಭಾರತೀಯರನ್ನು, ಹಿಂದೂ ಬಾಂಧವರನ್ನು ಕಂಡರೆ ಭೂತಾನಿಗರಿಗೆ ಎಲ್ಲಿಲ್ಲದ ಪ್ರೀತಿ.

ಮೊದಲ ಬಾರಿಗೆ ಭೂತಾನಿಗೆ ಬಂದಾಗ ವಿಚಿತ್ರ ಎನಿಸುವುದು ಸಹಜ, ಏಕೆಂದರೆ ನಮ್ಮಲ್ಲಿ ಗಂಡಸರು ಲುಂಗಿ ಉಡುತ್ತಾರೆ, ಹುಡುಗಿಯರು ಸ್ಕರ್ಟ್ ಹಾಕುತ್ತಾರೆ. ಇಲ್ಲಿ ಉಲ್ಟಾ ಪಲ್ಟಾ.. ಗಂಡಸರು ಸ್ಕರ್ಟ್ ರೀತಿಯ ಉಡುಪು, ಹೆಂಗಸರು ಲುಂಗಿಯಂಥ ಉಡುಪು ಧರಿಸುತ್ತಾರೆ.

ನಮ್ಮವರದ್ದು ತ್ರಿಕೋನಾಕೃತಿಯ ಅಥವಾ ಚತುರ್ಭುಜಾಕೃತಿಯ ಮುಖ, ಆದರೆ ಭೂತಾನಿನವರದ್ದು ಪಪ್ಪಾಯಿಯಂಥ ಮುಖ. ಚಪ್ಪಟೆ ಕೆನ್ನೆ. ಸೇಬು ಹಣ್ಣಿನ ಕೆಂಪು ಸಿಪ್ಪೆಯನ್ನು ಸುಲಿದಿಟ್ಟರೆ ಹೇಗೆ ಕಾಣುತ್ತದೆಯೋ, ಅದೇ ರೀತಿ ಇಲ್ಲಿಯವರದ್ದು ಮೈ ಬಣ್ಣ. ಇದ್ದಿಲಿನ ಬಣ್ಣದವರನ್ನು ಭೂತಾನಿನಲ್ಲಿ ಕಾಣುವುದು ತುಂಬಾ ಅಪರೂಪ. ಬೆಣ್ಣೆ ಸುಣ್ಣದ ಬಣ್ಣದವರೇ ಇಲ್ಲಿ ಹೆಚ್ಚು! ಹೆಣ್ಣು ಮಕ್ಕಳದ್ದು ಸದಾ ನಗುಮುಖ. ಗಂಡಸರಲ್ಲಿ ಅನೇಕರದ್ದು ತುಂಟ ಮುಖ.

2008ರಿಂದ ಈಚೆಗೆ ಇಲ್ಲಿ ಪ್ರಜಾಪ್ರಭುತ್ವ ಮಾದರಿಯ ಸರ್ಕಾರ ಬಂದಿದ್ದರೂ ಕೂಡ ಇಂದಿಗೂ ರಾಜಾ ಪ್ರತ್ಯಕ್ಷ ದೇವತಾ ಎಂಬಂತೆ ಇಲ್ಲಿ ರಾಜನನ್ನು ಪ್ರಜೆಗಳು ಅತ್ಯಂತ ಪೂಜ್ಯ ಭಾವದಿಂದ ಗೌರವಿಸುತ್ತಾರೆ. ನಮ್ಮಲ್ಲಿಯಂತೆ ಇಲ್ಲಿ ಮಾರುಮಾರಿಗೆ ಯಾರದ್ದೂ ಮೂರ್ತಿ ಪ್ರತಿಷ್ಠಾಪಿಸಿಲ್ಲ. ಆದರೆ ಇಲ್ಲಿಯ ರಾಜನ ಫೊಟೋವನ್ನು ಬಹುತೇಕ ಎಲ್ಲಾ ಕಡೆಯೂ ನೋಡಬಹುದು.

ಭೂತಾನಿನ ಎಲ್ಲಾ ಕಡೆಗಳಲ್ಲೂ ಗಿರಿಧಾಮಗಳೇ. ಹಸಿರಿನ ನಿತ್ಯೋತ್ಸವವೇ. ಎಲ್ಲೆಡೆಯೂ ನದಿ, ಹೊಳೆಗಳ ಜುಳು ಜುಳು. ಲಂಚ ಕೊಂಚವೂ ಇಲ್ಲ. ಥಿಂಪು ಇಲ್ಲಿಯ ರಾಜಧಾನಿ.

ಪಾರೋ, ಟೈಗರ್ಸ್ ನೆಸ್ಟ್, ಪುನಾಕಾ ಇಲ್ಲಿಯ ಮತ್ತಿತರ ಪ್ರೇಕ್ಷಣೀಯ ತಾಣಗಳು. ಎಲ್ಲ ಕಡೆಯೂ ಇಲ್ಲಿ ಬುದ್ಧನ ಮಂದಿರಗಳನ್ನು ನೋಡಬಹುದೇ ವಿನಾ ಬೇರೆ ದೇವಾಲಯಗಳ, ಮಸೀದಿಗಳ, ಚರ್ಚುಗಳ ದರ್ಶನ ಇಲ್ಲಿ ಸಿಗುವುದಿಲ್ಲ. ಕೆಲವು ಬೌದ್ಧ ಮಂದಿರಗಳಲ್ಲಿ ಗಣೇಶನಂಥ ಹಿಂದೂ ದೇವರನ್ನಿಟ್ಟು ಪೂಜಿಸುವುದನ್ನು ಕಾಣಬಹುದು ಅಷ್ಟೇ.

ನಮ್ಮಲ್ಲಿ ಬಹುತ್ವ, ಅಲ್ಪತ್ವ, ಸಾಮರಸ್ಯ, ಪಾರುಪತ್ಯ, ಮತ್ತೊಂದು ಮಗದೊಂದು ಎಂದೆಲ್ಲಾ ತುತ್ತೂರಿ ಊದುತ್ತಾ, ಊರ ಉಸಾಬರಿಗಳನ್ನೆಲ್ಲಾ ಮೈಮೇಲೆ ಎಳೆದುಕೊಳ್ಳುವಂತೆ, ಭೂತಾನಿಗರು ಮೈಮೇಲೆ ಹುಳಗಳನ್ನು ಬಿಟ್ಟುಕೊಳ್ಳದೇ ಸುರಕ್ಷಿತವಾಗಿದ್ದಾರೆ. ತಮ್ಮ ಬೌದ್ಧ ಮಂದಿರಗಳು ಮುಂದೆ ಯುದ್ಧ ಮಂದಿರಗಳಾಗದಂತೆ ತಡೆಯುವುದಕ್ಕೆ ಏನೆಲ್ಲ ಬೇಕೋ..ಅಂಥ ಎಲ್ಲ ಮುನ್ನೆಚ್ಚರಿಕೆಗಳನ್ನೂ ಭೂತಾನಿಗರು ಈಗಾಗಲೇ ತೆಗೆದುಕೊಂಡು ನಿರುಮ್ಮಳವಾಗಿದ್ದಾರೆ.

Untitled design (77)

ಬಂಡವಾಳಕ್ಕಾಗಿಯೋ, ಬಡಿವಾರಕ್ಕಾಗಿಯೋ, ಬಡಾಯಿಗಾಗಿಯೋ, ರಾಜಕೀಯಕ್ಕಾಗಿಯೋ ಹೊರಗಿನವರನ್ನು ತಮ್ಮ ದೇಶಕ್ಕೆ ಕರೆದು ಭಾನಗಡಿ ಮಾಡಿಸಿಕೊಳ್ಳಲು ಭೂತಾನಿಗರು ಸಿದ್ಧರಿಲ್ಲ. ಊರಲ್ಲಿ ಹೋಗುವ ಮಾರಿಯನ್ನು ಮನೆಗೆ ಯಾಕೆ ಕರೆದುಕೊಳ್ಳಬೇಕೆಂಬುದು ಇವರ ನಿಲುವು. ಹೀಗಾಗಿ ಹೊರಗಿನವರಿಗೆ ಇಲ್ಲಿ ಆಸ್ತಿ ಖರೀದಿಸುವುದಕ್ಕೆ ನಿರ್ಬಂಧ ಹಾಕಲಾಗಿದೆ. ಪಕ್ಕದ ಬಾಂಗ್ಲಾ ಪಶ್ಚಿಮ ಬಂಗಾಳದಿಂದ ಕೆಲಸಕ್ಕೆ ಭೂತಾನಿನ ಗಡಿಯೊಳಗೆ ಬಂದವರು ಕೆಲಸ ಮುಗಿಸಿ ತಮಷ್ಟಕ್ಕೆ ತಾವೇ ಜಾಗ ಖಾಲಿ ಮಾಡಿದರೆ ಕ್ಷೇಮ. ಇಲ್ಲದಿದ್ದರೆ ಅವರನ್ನು ಒದ್ದು ಓಡಿಸಲಾಗುತ್ತದೆ. ಭಾರತಕ್ಕೆ ಬಾಂಗ್ಲಾದೇಶಿಗರು ನುಸುಳಿ, ಇಲ್ಲಿಯೇ ಜೀವನ ಪರ್ಯಂತ ಠಿಕಾಣಿ ಹೂಡಿ, ಆಧಾರ ಕಾರ್ಡು, ರೇಷನ್ ಕಾರ್ಡು, ವೋಟರ್ ಕಾರ್ಡು ಪಡೆದುಕೊಂಡು ಪ್ರತಿಷ್ಠಾಪನೆಯಾಗುವಂತೆ ಭೂತಾನಿನಲ್ಲಿ ಆ ಎಲ್ಲಾ ಅಟಾಟೋಪ ಮಾಡಲು ಸಾಧ್ಯವಿಲ್ಲ.

ಥಿಂಪುವಿನಿಂದ ತೀರಾ ಒಳ ಪ್ರದೇಶದಲ್ಲಿ ಕೆಲವು ದೇವಸ್ಥಾನಗಳಿವೆಯೆಂದು ಭೂತಾನಿನ ಕೈಪಿಡಿಯಲ್ಲಿ ಉಲ್ಲೇಖವಿದ್ದರೂ ನಾವು ಅವುಗಳನ್ನು ನೋಡಲು ಸಾಧ್ಯವಾಗಲಿಲ್ಲ. ಭೂತಾನಿಗೆ ಬರುವಾಗ ಕೈಚೀಲದ ತುಂಬಾ ದುಡ್ಡು ತರಬೇಕೆಂದಿಲ್ಲ, ಕಿಸೆ ತುಂಬಾ ದುಡ್ಡಿದ್ದರೆ ಸಾಕು.

ಬೇರೆ ದೇಶಗಳಲ್ಲಿರುವಂತೆ ನೈಟ್ ಲೈಫ್ ರಾದ್ಧಾಂತಗಳು ಇಲ್ಲಿಲ್ಲ. ಭೂತಾನಿಗೆ ಬೆಳಿಗ್ಗೆ ಸೂರ್ಯ ಬೇಗ ಬರುತ್ತಾನೆ. ಸಂಜೆ ಆರೇಳು ಗಂಟೆ ನಂತರ ಮಾರ್ಕೆಟುಗಳು ಬಂದಾಗತೊಡಗುತ್ತವೆ. ಇಲ್ಲಿಯ ಅಂಗಡಿಗಳಲ್ಲಿ ಹೆಚ್ಚಾಗಿ ಮಹಿಳೆಯರೇ ಕೆಲಸ ಮಾಡುವುದು ವಿಶೇಷ. ಬಹುಶ: ಅವರ ಗಂಡಂದಿರು ಮನೆಯಲ್ಲಿ ಹೆಂಡತಿಯರ ಕೆಲಸಗಳನ್ನು, ಅಡುಗೆ ಕೆಲಸ, ಭಾಂಡಿ ತಿಕ್ಕಾಟ ಮಾಡುವುದಕ್ಕೆ ಮೀಸಲಾಗಿ ಅಮ್ಮಾವ್ರ ಗಂಡನಾಗಿರುತ್ತಾರೆಯೋ ಏನೋ.

ನಮ್ಮ ಸವದತ್ತಿಯಲ್ಲಿ ಉಧೋ ಉಧೋ ಯಲ್ಲಮ್ಮ ಎಂದು ಕೂಗುವಂತೆ ನಮ್ಮಲ್ಲಿ ಅಂಗಡಿಗಳ ಮುಂದೆ ಗಿರಾಕಿಗಳನ್ನು ಕೂಗಿಕೂಗಿ ಕರೆಯುವುದು ಮಾಮೂಲಿ. ಆದರೆ ಭೂತಾನಿನ ಅಂಗಡಿಗಳಲ್ಲಿ ಯಾರೂ ವ್ಯಾಪಾರಕ್ಕಾಗಿ ಹೆಚ್ಚು ತಲೆ ಕೆಡಿಸಿಕೊಂಡು ಹಾಗೆಲ್ಲ ಮೈ ಪರಚಿಕೊಂಡು ಕೂಗುವುದಿಲ್ಲ. ತಮ್ಮ ಅಂಗಡಿಗಳಿಗೆ ಖರೀದಿಗೆ ಗಿರಾಕಿಗಳು ಬಂದರೂ ಅವರು ತಮ್ಮದೇ ಆದ ಸಂಗೀತ ಕೇಳುತ್ತಲೋ ಅಥವಾ ಉಣ್ಣೆಯ ಸ್ವೆಟರ್ ಹೆಣೆಯುತ್ತಲೋ ಆರಾಮಾಗಿ, ನಿರ್ಲಿಪ್ತರಾಗಿರುವುದು ವಿಶೇಷ.

ಯುರೋಪ್, ಅಮೆರಿಕ ಮುಂತಾದ ಕಡೆಗಳಿಗೆ ಹೋದರೆ ನಾವು ಕಲಿಯಬೇಕಾದ ದೊಡ್ಡದೊಡ್ಡ ಸಂಗತಿಗಳಿರುತ್ತವೆ. ಆದರೆ ಭೂತಾನಿನಲ್ಲಿ ಹಾಗಲ್ಲ. ನಾವು ಕಲಿಯಬೇಕಾದ ಅನೇಕ ಸಣ್ಣಸಣ್ಣ ಸಂಗತಿಗಳು ಇಲ್ಲಿ ಸಿಗುವುದು ವಿಶೇಷ. ಇದು ಅಪರಾಧವೇ (ಕ್ರೈಂ) ಇಲ್ಲದ ದೇಶ. ಇಲ್ಲಿಯ ಜನಕ್ಕೆ ಕ್ರೈಂ ಮಾಡಲು ಟೈಮ್ ಇಲ್ಲ. ನಮ್ಮಲ್ಲಿ ಹಾಗಲ್ಲ, ಕ್ರೈಂ ಮಾಡಲು ಟೈಮ್ ಎಷ್ಟಿದ್ದರೂ ಸಾಕಾಗುವುದೇ ಇಲ್ಲ. ಹೀಗಾಗಿ ಇಲ್ಲಿ ಪೊಲೀಸರಿಗೆ ಕೆಲಸವೇ ಇಲ್ಲ. ಆದರೂ ಇಲ್ಲಿಯ ಪೊಲೀಸರು ನಮ್ಮಲ್ಲಿಯ ಪೊಲೀಸರಂತೆ ಡೊಳ್ಳೊಟ್ಟೆ ಬಿಟ್ಟುಕೊಂಡು ಲಾಠಿ ಬಳುಕಿಸುತ್ತಾ ಕಾಲು ಕಿಸಿದುಕೊಂಡು ಕುಳಿತುಕೊಳ್ಳುವುದಿಲ್ಲ.

ಪ್ರವಾಸಿಗರೇ ನೀವು ನಮ್ಮಲ್ಲಿಗೆ ಬನ್ನಿ, ನಮ್ಮಲ್ಲಿಗೆ ಬನ್ನಿ, ನಾವು ಸಮುದ್ರ ತೋರಿಸುತ್ತೇವೆ, ಕಾಡು ಮೇಡುಗಳನ್ನು ಸುತ್ತಿಸುತ್ತಾ ಮೈಕೈ ನೋವು ಮಾಡಿಸುತ್ತೇವೆ, ಗುಂಡಿ ಬಿದ್ದ ನಮ್ಮಲ್ಲಿಯ ರಸ್ತೆಯನ್ನು ತೋರಿಸುತ್ತೇವೆ, ಗಬ್ಬೆದ್ದು ಹೋಗಿರುವ ಕೆಲವು ಪ್ರವಾಸಿ ತಾಣಗಳ ದರ್ಶನವನ್ನೂ ಮಾಡಿಸುತ್ತೇವೆ ಎಂದು ನಮ್ಮ ಸರಕಾರಗಳು ಹೇಳುವಂತೆ, ಈ ಭೂತಾನಿನ ಸರ್ಕಾರ ಪ್ರವಾಸಿಗರನ್ನು ಬರಗೆಟ್ಟಂತೆ ಕರೆಯುವುದೇ ಇಲ್ಲ.

ಏಕೆಂದರೆ ಹೊರಗಿನ ಪ್ರವಾಸಿಗರು ಬಂದು ತಮ್ಮ ನಾಡನ್ನು ಗಬ್ಬೆಬ್ಬಿಸುವುದು ಈ ಭೂತಾನಿಗರಿಗೆ ಬೇಕಿಲ್ಲ. ಹೀಗಾಗಿ ಇಲ್ಲಿಗೆ ಬರುವ ಪ್ರವಾಸಿಗರು ದಿನಕ್ಕೆ ಸಾವಿರದ ಇನ್ನೂರು ರೂಪಾಯಿ ಪ್ರವೇಶ ದರವನ್ನು ಹೆಚ್ಚು ತೆತ್ತು ಬರಬೇಕು. ಈ ಹಣವನ್ನು ಪ್ರವಾಸಿಗರು ಮಾಡಿದ ಗಲೀಜನ್ನು ಕ್ಲೀನ್ ಮಾಡಲು ಅಲ್ಲಿ ಉಪಯೋಗಿಸಲಾಗುತ್ತದೆ. ಅಮೆರಿಕದ ಪ್ರವಾಸಿಗರಂತೂ ಡಾಲರಿನಲ್ಲಿ ನಮ್ಮವರಿಗಿಂತಲೂ ಜಾಸ್ತಿಯೇ ನೀಡುವುದು ಕಡ್ಡಾಯ.

ನಮ್ಮಲ್ಲಿಯಂತೆ ಜಿಡಿಪಿ ಹೆಚ್ಚು ಮಾಡಬೇಕೆಂಬುದು ಭೂತಾನಿಯರ ಪ್ರಯತ್ನವಲ್ಲ, ಆದರೆ ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್ ಅಂದರೆ ಜಿ.ಎನ್. ಎಚ್.ಹೆಚ್ಚು ಮಾಡಬೇಕೆಂಬುದು ಇವರ ಕಾಳಜಿ. ಜಗತ್ತಿನ ಏಕೈಕ ಕಾರ್ಬನ್ ಫ್ರೀ ದೇಶ ಎಂಬುದು ಇಲ್ಲಿಯ ಹೆಗ್ಗಳಿಕೆ. ಅಲ್ಲಿಯ ರಾಜ ತನಗೆ ಮಕ್ಕಳಾದಾಗ ಪ್ರತಿ ಮಕ್ಕಳ ಹೆಸರಿನಲ್ಲೂ ಲಕ್ಷಾಂತರ ಗಿಡ ನೆಡುವುದಕ್ಕೆ ಕ್ರಮ ಕೈಗೊಳ್ಳುತ್ತಾನೆ. ಇಲ್ಲಿ ಅಭಿವೃದ್ಧಿಗಿಂತ ಜನರ ಸಂತೋಷ ಮತ್ತು ಶಾಂತಿಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದಾಗಿಯೇ ಇಲ್ಲಿಯ ಜನರಲ್ಲಿ ಸದಾ ಹಸನ್ಮುಖ ಹೆಚ್ಚುವುದು ಸಾಧ್ಯವಾಗಿದೆ, ಅಷ್ಟೇ ಅಲ್ಲ ಅವರು ಪ್ರಕೃತಿಗೆ ತುಂಬಾ ಹತ್ತಿರವಾಗಿದ್ದಾರೆ . ಹೀಗಾಗಿ ಭೂತಾನಿನಲ್ಲಿ ಯಾರೂ ನಗುವಿಗಾಗಿ ನಗದನ್ನು ಕೊಡಬೇಕಾಗಿಲ್ಲ. ಶೇಕಡ 60ರಷ್ಟು ಹಸಿರನ್ನು, ಅರಣ್ಯವನ್ನು ಕಾಯ್ದಿಟ್ಟುಕೊಂಡೇ ಇಲ್ಲಿ ಅಭಿವೃದ್ಧಿ ಮಾಡಬೇಕೆಂಬುದು ಬಿಗಿ ಕಾನೂನು. ಹೀಗಾಗಿ ಇಲ್ಲಿಯ ಗುಡ್ಡ ಬೆಟ್ಟಗಳನ್ನು ನುಣ್ಣಗೆ ಬೋಳು ಮಾಡಿಲ್ಲ. ಅರಣ್ಯ ಇಲಾಖೆಯವರಿಗೆ ಲಂಚಕೊಟ್ಟು ಅತಿಕ್ರಮಣ ಮಾಡುವ ನಮ್ಮಲ್ಲಿಯ ಪದ್ಧತಿ ಭೂತಾನಿನಲ್ಲಿಲ್ಲ. ಹೀಗಾಗಿ ಮೋಡದ ನಡುವೆ ದಾರಿ ಹುಡುಕಿಕೊಂಡು ಪ್ರವಾಸವನ್ನು ಅವಿಸ್ಮರಣೀಯವಾಗಿಸುವ ಅನನ್ಯ ಅನುಭವ ನಿಮ್ಮದಾಗಲು ಸಾಧ್ಯವಿದೆ.

ನಮ್ಮ ಉತ್ತರ ಕನ್ನಡದ ಸಾತೊಡ್ಡಿ, ಉಂಚಳ್ಳಿ, ಮಾಗೋಡು ಜಲಪಾತಗಳಂಥ ಅನೇಕ ಜಲಪಾತಗಳನ್ನು ಪುನ್ಸುಲಿಂಗ್‌ನಿಂದ ಪುನಾಕಾವರೆಗೆ ಸಾಗಿ ಬರುವಾಗ ದಾರಿಯುದ್ದಕ್ಕೂ ಕಾಣಬಹುದು. ಆದರೆ ನಮ್ಮಲ್ಲಿಯಂತೆ ಬಿಯರು ಬಾಟಲಿಗಳನ್ನು ಹಿಡಿದು, ಪ್ಲಾಸ್ಟಿಕ್ ಪ್ಯಾಕೆಟ್, ತಟ್ಟೆಗಳನ್ನು ಎಲ್ಲೆಂದರಲ್ಲಿ ಬಿಸಾಡುವ ದೃಶ್ಯ ಭೂತಾನಿನಲ್ಲಿ ಕಾಣಸಿಗದು.

ನಮ್ಮಲ್ಲಿ ರಸ್ತೆ ಪಕ್ಕ ಪ್ರಾಣಿ ಪಕ್ಷಿಗಳು ಮಲ, ಮೂತ್ರ ವಿಸರ್ಜಿವಂತೆ ಮನುಷ್ಯರೂ ಮಾಡಬಹುದು, ಆದರೆ ಭೂತಾನಿನಲ್ಲಿ ಯಾರಾದರೂ ರಸ್ತೆಯ ಪಕ್ಕ ಪ್ಯಾಂಟನ್ನು ಜಾರಿಸಿಕೊಂಡು ರಸ್ತೆ ಒದ್ದೆ ಮಾಡುವುದು ಪೊಲೀಸರ ಕಣ್ಣಿಗೆ ಬಿದ್ದರೆ ದಂಡ ತೆರಬೇಕಾಗುವುದು ಗ್ಯಾರಂಟಿ. ಸಾರ್ವಜನಿಕ ಸ್ಥಳಗಳಲ್ಲಿ ಧಮ್ ಎಳೆದರೆ, ಬಾಯಿಗೆ ಸಿಗರೇಟು ಚುಚ್ಚಿಕೊಂಡರೆ ಭೂತಾನಿನಲ್ಲಿ ಪೊಲೀಸರಿಂದ ಚಚ್ಚಿಸಿಕೊಳ್ಳಬೇಕಾದೀತು.

ನಮ್ಮಲ್ಲಿಯ ದೊಡ್ಡ ದೊಡ್ಡ ಕಾರ್ಖಾನೆಗಳ ಮಾಲಿನ್ಯ ವಿಸರ್ಜನೆಯನ್ನು ನದಿ ಕೊಳ್ಳಗಳ ಬಾಯಿಗೇ ನೇರವಾಗಿ ಮಾಡಿಸಿ ರಾಡಿ ಮಾಡಲಾಗುತ್ತದೆ. ಅಂಥ ಸಮಸ್ಯೆ ಇಲ್ಲಿಲ್ಲ. ಕಾರಣ ಇಲ್ಲಿ ದೊಡ್ಡ ದೊಡ್ಡ ಮಾಲಿನ್ಯಕಾರಕ ಕಾರ್ಖಾನೆಗಳ ಸ್ಥಾಪನೆಗೆ ಭೂತಾನದವರು ಅವಕಾಶವನ್ನೇ ನೀಡುವುದಿಲ್ಲ.

ನಮ್ಮ ರಾಜಧಾನಿ ಬೆಂಗಳೂರಿನಲ್ಲಿಯಂತೆ ಇಲ್ಲಿ ಟ್ರಾಫಿಕ್ ಜಾಮ್ ಗದ್ದಲವಿಲ್ಲ. ಒಳಸುಳಿ, ಹೊರಸುಳಿ, ವಕ್ರಸುಳಿಗಳಲ್ಲಿ ನುಗ್ಗುವಂತೆ ಆಟೋರಿಕ್ಷಾ, ಟೂ ವೀಲರುಗಳ ಕಾಟವಿಲ್ಲ. ಕರ್ಕಶ ಹಾರ್ನ್‌ಗಳ ಕಿರಿಕಿರಿಯೂ ಭೂತಾನಿನಲ್ಲಿಲ್ಲ. ದೊಡ್ಡ ದೊಡ್ಡ ಸೈಜಿನ ಬಸ್ಸುಗಳ, ಟ್ರಕ್ಕುಗಳ ಭರಾಟೆಯೂ ಇಲ್ಲ. ಹೀಗಾಗಿ ರಸ್ತೆಯ ಮೇಲೆ ಜಗಳ ರಗಳೆಗಳಿಲ್ಲದೇ ತಿರುಗಾಡುವುದು ನಮಗೆ ಸ್ವಲ್ಪ ಸಪ್ಪೆ ಎನಿಸಬಹುದು.

ಭೂತಾನಿನ ಪಕ್ಕವೇ ನೇಪಾಳ, ಟಿಬೆಟ್, ಚೈನಾ, ಬಾಂಗ್ಲಾ, ಭಾರತ ಮುಂತಾದ ದೇಶಗಳಿದ್ದರೂ ಭೂತಾನಿಗರಿಗೆ ಭಾರತೀಯರೇ ಹೆಚ್ಚು ಪ್ರಿಯರು. ನಮ್ಮಲ್ಲಿಯ ಮುಕೇಶ್, ಲತಾ ಮಂಗೇಶ್ಕರ್, ಸುಮನ್ ಕಲ್ಯಾಣಪುರ್, ಎಸ್. ಪಿ. ಬಾಲಸುಬ್ರಮಣ್ಯಂ ಮುಂತಾದವರ ಹಿಂದಿ ಹಾಡುಗಳೇ ಭೂತಾನಿಗರಿಗೆ ತುಂಬಾ ಅಚ್ಚುಮೆಚ್ಚು. ಭೂತಾನಿನ ಅನೇಕ ಅಂಗಡಿಗಳಿಗೆ ಭಾರತೀಯ ಹೆಸರುಗಳಿವೆ.

ನಮ್ಮ ಕುಮಟಾದಿಂದ ಕುಂದಾಪುರಕ್ಕೆ ಸಾಗುವಾಗ ರಸ್ತೆಯ ಅಕ್ಕಪಕ್ಕದಲ್ಲಿರುವ ಭತ್ತದ ಗದ್ದೆಗಳಂತೆ, ಇಲ್ಲಿಯೂ ರಸ್ತೆಯ ಅಕ್ಕಪಕ್ಕ ಭತ್ತದ ಗದ್ದೆಗಳ ಹಸಿರು ಸಾಗರ. ಇಲ್ಲಿಯ ಜನರು ಶಾಂತಿ ಪ್ರಿಯರು. ಕೈಯಲ್ಲಿ ಜಪಮಾಲೆ ಹಿಡಿದು ಧ್ಯಾನ ಮಾಡುವ ಅನೇಕರನ್ನು ಬೌದ್ಧ ಮಂದಿರಗಳ ಸುತ್ತ ಅಥವಾ ಸ್ತೂಪಗಳ ಸುತ್ತ ಪ್ರದಕ್ಷಿಣೆ ಹಾಕುವುದನ್ನು ಕಾಣಬಹುದು.

ನಮ್ಮಲ್ಲಿಯಂತೆ ಭೂತಾನಿಗರಿಗೆ ಶಾಪಿಂಗ್ ಮಾಲ್ ಕ್ರೇಜಿಲ್ಲ. ರಜೆ ಬಂದರೆ ಸಾಕು, ಚಾಪೆ, ಜಮಖಾನ ಸುತ್ತಿಕೊಂಡು ಊರಿನ ಹೊರಗಿನ ಕಾಡಿನಲ್ಲೋ, ನದಿಯ ಪಕ್ಕದಲ್ಲೋ ಅಥವಾ ಮರದ ನೆರಳಿನಲ್ಲೋ ಕುಳಿತು ಮನೆಯಿಂದ ಮಾಡಿಕೊಂಡು ಬಂದ ಮೊಮೋ, ಪರೋಟ, ಎಮ್ಮಾದಾಚಿ, ಖೇಮಾದಾಚಿಯೊಂದಿಗೆ (ಭೂತಾನಿ ಮೆಣಸಿನಕಾಯಿಯ/ ಅಣಬೆಯ ಪೊಳದ್ಯಾ) ಕೆಂಪು ಅಕ್ಕಿಯ ಅನ್ನದ ಊಟ ಸವಿಯುವುದನ್ನು ನೋಡಬಹುದು. ಇಂಥ ಸಂದರ್ಭದಲ್ಲಿ ಅವರೇ ಸಾಕಿದ ನಾಯಿಮರಿಯೂ ಅವರನ್ನು ಸುತ್ತುತ್ತಾ ಅಲ್ಲೇ ಆಟವಾಡುವುದನ್ನು ನೋಡುವುದೇ ಚೆಂದ.

ಬುದ್ಧನ ಅಧ್ಯಾತ್ಮ ಈ ಭೂತಾನಿನ ಮಣ್ಣಿನ ಕಣಕಣದಲ್ಲೂ ಹಾಸು ಹೊಕ್ಕಾಗಿದೆ. ಹೀಗಾಗಿ ಇಲ್ಲಿಗೆ ಮಧುಚಂದ್ರಕ್ಕೆಂದು ಬರುವಂಥವರೂ ಕೂಡ ಇಲ್ಲಿ ಧ್ಯಾನಸ್ಥ ಸ್ಥಿತಿಗೆ ತಲುಪಿದರೂ ಆಶ್ಚರ್ಯವಿಲ್ಲ. ಇಲ್ಲಿಯ ಮೊಚೊ ನದಿಯನ್ನು ಹುಣ್ಣಿಮೆಯ ಬೆಳದಿಂಗಳಲ್ಲಿ ನೋಡಬೇಕು. ಈ ನದಿ ನೀರಿನಲ್ಲಿ ಚಂದ್ರ ಬಿಂಬವೂ ಹರಿದು ಹೋಗುವುದನ್ನು ಆಸ್ವಾದಿಸುವ ಸಂತಸವೇ ಅಪೂರ್ವ ಅನುಭವ.

ಬಹುಶ: ಚಂದ್ರ ಚಕೋರಿ ಅಥವಾ ಚಾಂದ್ ಚಕೋರಿ ಎಂಬ ಶಬ್ದಗಳ ಹುಟ್ಟು ಇಲ್ಲಿಂದಲೇ ಆಗಿರಬಹುದು. ಮಜ್ಜಿಗೆ ಕಡೆದಾಗ ಬೆಣ್ಣೆ ಬರುವಂತೆ, ಈ ನದಿಯನ್ನು ಕಡೆದರೆ, ಹಾಲು ಬೆಳದಿಂಗಳ ಮುದ್ದೆಯೇ ಹುಣ್ಣಿಮೆಯಲ್ಲಿ ಕೈಗೆ ಬಂದೀತು. ಮೈಮನಗಳಿಗೆ ಮದ-ಮಜ-ಮುದ ನೀಡುವ ಇಲ್ಲಿಯ ದಿಗಂತದ ದಿಗ್ದರ್ಶನದಲ್ಲಿ ವಿಹರಿಸುವಾಗ ಎಲ್ಲ ಕಾಲವೂ ರಮ್ಯ ಚೈತ್ರ ಕಾಲದಂತೆಯೇ. ಸಂತರೂ ವಸಂತರೇ.

ಇಲ್ಲಿಯ ಹಿಮಾಲಯದ ತಪ್ಪಲಿನಲ್ಲಿ ಕಾಣಸಿಗುವ ಉದ್ದುದ್ದದ ಫೈನ್ ಮರಗಳು, ಗಿಡ್ದುಗಿಡ್ಡದ ಸೇಬು ಗಿಡಗಳು ರೇಷ್ಮೆ ಸೀರೆಗೆ ಜರಿ ಅಂಚಿನಂತೆ ಭೂತಾನಿನ ಬ್ಯೂಟಿಯನ್ನು ಮತ್ತಷ್ಟು ಹೆಚ್ಚಿಸಿವೆ. ಹಾಹಾ ಮತ್ತು ನಗು ಎಂಬ ಎರಡು ಅಪರೂಪದ ಊರುಗಳೂ ಇಲ್ಲಿರುವುದು ವಿಶೇಷ. ಈ ಊರುಗಳನ್ನು ನೋಡುತ್ತಿದ್ದರೆ ನಮಗೆ ಖುಷಿಯಿಂದ ಓಹೋ ಎನ್ನುವಂತಾಗುತ್ತದೆ. ಈ ಎರಡೂ ಊರುಗಳಲ್ಲಿ ನಮ್ಮಲ್ಲಿಯಲ್ಲಿರುವಂತೆ ಇರುವ ತಿಲಗಿ ಚಂಡೆಯ ಗಿಡ, ಬೆಟ್ಟದ ನೆಲ್ಲಿಕಾಯಿ ಮರ, ಅಶ್ವತ್ಥ ಕಟ್ಟೆಗಳು ಮಲೆನಾಡಿನ ನೆನಪನ್ನು ಬಡಿದೆಬ್ಬಿಸುತ್ತವೆ.

ಭೂತಾನನ್ನು ಎಲ್ಲೆಡೆಯೂ ಆವರಿಸಿಕೊಂಡಿರುವ ದೊಡ್ಡ ದೊಡ್ಡ ಗಿರಿ ಶಿಖರಗಳ ನಡುನಡುವೆ ಅಲ್ಲಲ್ಲಿ ಮಂದ ಬೆಳಕು ಸೂಸುವ ಸಾಲುಮನೆಗಳನ್ನು ದೂರದಿಂದ ನೋಡುವಾಗ ನಮ್ಮಲ್ಲಿ ದೀಪಾವಳಿಯ ಆಕಾಶಬುಟ್ಟಿಗಳ ಸಾಲನ್ನು ನೋಡಿದಂಥ ದಿವ್ಯ ಅನುಭೂತಿ. ಭೂತಾನಿನಲ್ಲಿ ಕಳ್ಳಕಾಕರ ಭಯವಿಲ್ಲ. ನಮ್ಮಲ್ಲಿಯಂತೆ ಹುಡುಗಿಯರನ್ನು ಚುಡಾಯಿಸುವ ಎಡವಟ್ಟುಗಳಿಲ್ಲ. ಇಲ್ಲಿಯ ಸರಕಾರ ಎಲ್ಲೆಂದರಲ್ಲಿ ಅಲ್ಲಿ ಕಾಡು ಕಡಿದು ರೈಲ್ವೆ ಮಾರ್ಗ ನಿರ್ಮಿಸುವ ಉಪಾದ್ವ್ಯಾಪಿತನ ಮೆರೆದಿಲ್ಲ. ರಿಯಲ್ ಎಸ್ಟೇಟ್ ದಂಧೆಕೋರರಿಗೆ ಇಲ್ಲಿ ಉಳಿಗಾಲವಿಲ್ಲ. ನಮ್ಮಲ್ಲಿಯಂತೆ ಅವರ ಮೇಲೆ ಇವರು, ಇವರ ಮೇಲೆ ಅವರು ಭ್ರಷ್ಟಾಚಾರದ ಆರೋಪ ಮಾಡುವಂತೆ ಭೂತಾನಿನಲ್ಲಿ ಆರೋಪ ಮಾಡುವ ಸುದ್ದಿಗಳು ಪ್ರತಿನಿತ್ಯ ಪತ್ರಿಕೆಗಳಲ್ಲಿ ರಾರಾಜಿಸುವುದಿಲ್ಲ.

Untitled design (76)

ವಿಚಿತ್ರವೆಂದರೆ ಇಲ್ಲಿಯ ಸಾಲುಸಾಲು ಅಂಗಡಿಗಳಲ್ಲಿ ಶಿಶ್ನಗಳ ಪ್ರತಿಕೃತಿಗಳು ಪ್ಲಾಸ್ಟಿಕ್ ಅಥವಾ ಮರದ ಮಾಟಗಳಲ್ಲಿ, ವಿವಿಧ ಸೈಜುಗಳಲ್ಲಿ ಮಾರಾಟಕ್ಕೆ ಸಿಗುತ್ತವೆ. ಭೂತಾನಿನಲ್ಲಿ ನಡೆಯುವ ಶಿಶ್ನ ಪೂಜೆಯೇ ಇದಕ್ಕೆ ಕಾರಣವಂತೆ. ಅಂಗಡಿ ಮಾಲೀಕರು ಅಥವಾ ಅಂಗಡಿ ನಡೆಸುವವರು ಮಹಿಳೆಯರೇ ಆಗಿದ್ದರೂ ಸಹ ಶಿಶ್ನಗಳ ಬೊಂಬೆ /ಪ್ರತಿಕೃತಿಗಳನ್ನು ಯಾವುದೇ ಸಂಕೋಚ, ಮುಜುಗರವಿಲ್ಲದೇ ಇಲ್ಲಿ ಮಾರಾಟ ಮಾಡುವುದು ವಿಶೇಷ. ನಮ್ಮಲ್ಲಿ ಗೋಡೆಗೆ ಕ್ಯಾಲೆಂಡರುಗಳನ್ನು ನೇತು ಹಾಕುವಂತೆಯೇ,ಭೂತಾನಿನ ಕೆಲವು ಹಳ್ಳಿಗಳ ಮನೆಗಳಲ್ಲಿ ಶಿಶ್ನದ ಆಕಾರದ ಗೊಂಬೆಗಳನ್ನು ನೇತು ಹಾಕಿರುವುದು ವಿಚಿತ್ರ.

ಉಡುಗೊರೆಯ ವಸ್ತು, ಸ್ಮರಣಿಕೆ, ಕೀ ಚೈನ್, ಸರದ ಲಾಕೆಟ್ಟು, ಪೆನ್ನು, ಆಟಿಕೆ,ಬಾಗಿಲಿನ ಚಿಲಕ ಮುಂತಾದವುಗಳನ್ನು ಕೂಡ ಶಿಶ್ನದ ಆಕಾರದಲ್ಲಿಯೇ ರೂಪಿಸಿ ಬಳಸಿರುವುದು ಅಲ್ಲಿಯ ವೈಶಿಷ್ಟ್ಯ. ಶಿಶ್ನವನ್ನು ಅಲ್ಲಿ ಸಮೃದ್ಧಿ, ಫಲವತ್ತತೆಯ ಮತ್ತು ಅದೃಷ್ಟದ ಸಂಕೇತವೆಂದು ನಂಬುತ್ತಾರಂತೆ. ಭೂತಾನಿನಿಂದ ಬರುವಾಗ ಅಲ್ಲಿ ಸಿಗುವ ಬೆಚ್ಚಗಿನ ಶಾಲುಗಳನ್ನು ತರುವುದಕ್ಕೆ ಮರೆಯಬೇಡಿ. ಕಾರಣ ಅಲ್ಲಿ ತುಂಬಾ ಒಳ್ಳೆಯ ವರ್ಣ ರಂಜಿತ ಶಾಲುಗಳು ಸಿಗುತ್ತವೆ. ಸ್ಥಳೀಯರ ಕರಕುಶಲ ವಸ್ತುಗಳಿಂದ ಭೂತಾನ್ ಮಾರುಕಟ್ಟೆಗೆ ವಿಶೇಷ ಆಕರ್ಷಣೆ ಸಿಗುವಂತಾಗಿದೆ.

ಭೂತಾನಿನ ರಮ್ಯ ನಿಸರ್ಗ ಸಿರಿಯ ತೊಟ್ಟಿಲಿನಲ್ಲಿ ಜೀಕುತ್ತಾ, ಹತ್ತು ದಿನವಿದ್ದು ವಾಪಸ್ಸಾಗುವಾಗ ಮತ್ತದೇ ಸಂಜೆ. ಅದೇ ಬೇಸರ. ಈ ಭೂತಾನ್ ನಮ್ಮ ಭಾರತದ ಒಂದು ರಾಜ್ಯವಾಗಿರಬಾರದಿತ್ತೇ ಎಂದನಿಸುವುದು ಸಹಜ. ಯಾಕೆಂದರೆ ಮನಸ್ಸನ್ನು ಹಗುರ ಮಾಡಿಕೊಳ್ಳಲು ಭೂತಾನಿನಷ್ಟು ಪ್ರಶಸ್ತ ತಾಣ ಬೇರಲ್ಲೂ ಸಿಗಲಿಕ್ಕಿಲ್ಲ. ನಮ್ಮ ಹಿಮಾಲಯದಂತೆಯೇ ಭೂತಾನ್ ಕೂಡ ಯಾವುದೋ ರೀತಿಯ, ಅವ್ಯಕ್ತ ದಿವ್ಯಾನುಭೂತಿ ಸೃಜಿಸುವ ನಾಡು. ಶಾಂತಿ, ಸಮಾಧಾನ ಇಲ್ಲಿ ಎಲ್ಲೆಡೆಯೂ ಉಚಿತ. ಧಾವಂತದ ಬದುಕಿಗೆ ಕೊಂಚ ಕಡಿವಾಣ ಹಾಕಿದರೆ ಮನುಷ್ಯ ಎಷ್ಟೊಂದು ಖುಷಿಯಾಗಿ, ಸುಖವಾಗಿರಬಹುದು ಎಂಬುದನ್ನು ಭೂತಾನಿಗರಿಂದ ನೋಡಿ ಕಲಿತುಕೊಳ್ಳಬಹುದು. ವಿಶೇಷ ಸಂದರ್ಭಗಳಲ್ಲಿ ಹಬ್ಬಗಳಲ್ಲಿ ಗಿಡಗಳನ್ನು ನೆಟ್ಟು ಪರಿಸರ ಪ್ರೀತಿ ತೋರುವುದು ಇಲ್ಲಿಯ ವೈಶಿಷ್ಟ್ಯ. ನಮ್ಮಲ್ಲಿಯಂತೆ ನೀರು ಕಂಡಲ್ಲೆಲ್ಲ ಅಣೆಕಟ್ಟು ಕಟ್ಟಿ ಅರಣ್ಯಗಳನ್ನು ಮುಳುಗಿಸಿಲ್ಲ. ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಿ ನಂಬರ್ ಒನ್ ಎಂದು ಎನಿಸಿಕೊಳ್ಳುವುದಕ್ಕೆ ಭೂತಾನ್ ತಲೆ ಕೆಡಿಸಿಕೊಂಡಿಲ್ಲ, ಬದಲಿಗೆ ಇಲ್ಲಿರುವವರಿಗೆ ಶುದ್ಧ ನೀರು, ಶುದ್ಧ ಗಾಳಿ, ಫಲವತ್ತಾದ ಮಣ್ಣು ನೀಡುವುದಕ್ಕೆ ಇಲ್ಲಿಯ ಸರ್ಕಾರದ್ದು ಮೊದಲ ಆದ್ಯತೆ. ಕೆಲವರು ದೂರದ ಅಮೆರಿಕ, ಆಫ್ರಿಕ, ಯುರೋಪ್ ಖಂಡಗಳನ್ನು ಸುತ್ತುತ್ತಾರೆ, ಆದರೆ ಪಕ್ಕದಲ್ಲಿಯೇ ಇರುವ ಭೂತಾನನ್ನು ನೋಡಿಯೇ ಇರುವುದಿಲ್ಲ ಎಂಬುದು ವಿಪರ್ಯಾಸ. ಏಕೆಂದರೆ ಆ ಭೂತಾಯಿಗೆ ಭೂತಾನಿನ ಮೇಲೆ ಎಷ್ಟೊಂದು ಕರುಣೆಯೋ ಗೊತ್ತಿಲ್ಲ, ಮುದ್ದಾದ ಭೂತಾನ್ ಎಂಬ ಮಗಳನ್ನು ಹೆತ್ತಿದ್ದಾಳೆ.

ಭೂತಾನ್ ಬಗ್ಗೆ ನನ್ನದೊಂದು ಚುಟುಕ:

ನೋಡಲೇಬೇಕು ಜೀವನದಲ್ಲಿ

ಒಮ್ಮೆಯಾದರೂ ಭೂತಾನು

ಇಲ್ಲದಿದ್ದರೆ ಮಿಸ್ ಮಾಡಿಕೊಂಡಂತೆ

ಊಟವಾದ ಮೇಲೆ ಸ್ವೀಟ್ ಪಾನು!

ಭೂತಾನಿನಲ್ಲಿ ಹಿಲ್ ಸ್ಟೇಷನ್ನುಗಳನ್ನು ಹುಡುಕಿಕೊಂಡು ಹೋಗಬೇಕಾಗಿಯೇ ಇಲ್ಲ, ಕಾರಣ ಇಲ್ಲಿಯ ಇಡೀ ದೇಶವೇ ಅದ್ಭುತ ಹಿಲ್ ಸ್ಟೇಷನ್ನು. ಚಾರಣ, ಅವರೋಹಣಕ್ಕೆ ಇದು ಹೇಳಿ ಮಾಡಿಸಿದ ಸ್ಥಳ. ಅವಹೇಳನಕ್ಕೆ ಇಲ್ಲಿಲ್ಲ ಅವಕಾಶ. ಹೀಗಾಗಿ ನಿಜಕ್ಕೂ ಭೂತಾನ್ ಭೂ ತಾಣ! ಭೂತಾನ್ ಎಂಬ ಬ್ಯೂಟಿಗೆ ಬೇರಿಲ್ಲ ಸಾಟಿ! ಗಿಜಿಗಿಜಿ ಸಂತೆಯೊಳಗೆ ಸಿಗುವ ಸಂತನಂತೆ ಈ ಭೂತಾನ್ ಭೂಪಟದಲ್ಲಿ ಸಿಗುವ ಅಪರೂಪದ ನಾಡು. ಮನುಷ್ಯನಲ್ಲಿ ಪ್ರೀತಿ, ಒಲುಮೆಗಳ ಬೆಸೆಯುವ ಹಾಡು. ತಂಪು ಇಂಪಿನ ಭೂತಾನಿನ ಥಿಂಪುವಿನಿಂದ ಬೆಂಗಳೂರಿನ ಗಿಜಿಗಿಜಿಗೆ ವಾಪಸಾದ ನಂತರವೂ ಅಲ್ಲಿಯ ನೆನಪುಗಳ ಮೆರವಣಿಗೆ ಮನಸಿನಲ್ಲಿ ಸಾಗುತ್ತಲೇ ಇರುತ್ತದೆ. ಭೂತಾನಿನ ಕಂಪು ನಮ್ಮ ಸ್ಮೃತಿ ಪಟಲದಲ್ಲಿ ಜೋಗುಳ ಹಾಡುತ್ತಲೇ ಇರುತ್ತದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...