ಸಾಹಸ ಮತ್ತು ಭಕ್ತಿಯ ತಾಣ ನೇಪಾಳ
ನೇಪಾಳವು ಹಿಮಾಲಯದ ಸಾಲುಗಳು, ಪುರಾತನ ದೇವಾಲಯಗಳು ಮತ್ತು ಸಾಹಸ ಚಟುವಟಿಕೆಗಳಿಗೆ ಪ್ರಸಿದ್ಧವಾಗಿದೆ. ಕಠ್ಮಂಡು, ಪೋಖರ ,ಲುಂಬಿನಿ (ಬುದ್ಧನ ಜನ್ಮಸ್ಥಳ) ಚಿತ್ವಾನ್ ರಾಷ್ಟ್ರೀಯ ಉದ್ಯಾನವನ ಮತ್ತು ಎವರೆಸ್ಟ್ ಬೇಸ್ ಕ್ಯಾಂಪ್ ಪ್ರಮುಖ ಪ್ರವಾಸಿ ತಾಣಗಳಾಗಿವೆ. ಇಲ್ಲಿನ ಪಶುಪತಿನಾಥ ದೇವಾಲಯ, ಬೌದ್ಧನಾಥ ಸ್ತೂಪ, ಭಕ್ತಪುರ ದರ್ಬಾರ್ ಚೌಕ ಮತ್ತು ನಾಗರಕೋಟ್ ಗಳಿಗೆ ಪ್ರತಿ ವರ್ಷ ಸಾವಿರಾರು ಜನರು ಭೇಟಿ ನೀಡುತ್ತಾರೆ.
- ಪಾರ್ವತಿ ಶಂಭು
ನೇಪಾಳವು ಪುರಾತನ ಇತಿಹಾಸವುಳ್ಳ ಒಂದು ಅದ್ಭುತ ದೇಶ ಇಲ್ಲಿ ಪ್ರಾಚೀನ ದೇವಾಲಯಗಳು ಹಿಮದಿಂದ ಆವೃತವಾದ ಹಿಮಾಲಯದ ಶಿಖರಗಳು, ಪುರಾತನ ಸ್ಥಳೀಯ ಸಂಸ್ಕೃತಿಯು ಪ್ರವಾಸಿಗರನ್ನು ಸೆಳೆಯುತ್ತದೆ. ಇದೊಂದು ಪುಟ್ಟ ದೇಶವಾದರೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ತನ್ನದೇ ಆದ ಒಂದು ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿನ ಕಲೆ, ಸಂಗೀತ ,ನೃತ್ಯ ಜಗತ್ತಿನ ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಭಾರತ ಮತ್ತು ಚೀನಾಗಳ ಮಧ್ಯದಲ್ಲಿದ್ದು ನಮ್ಮ ದೇಶಕ್ಕೆ ಅತೀ ಸಮೀಪದಲ್ಲಿದೆ. ಕಾಳಿ ನದಿಯ ಸೇತುವೆಯನ್ನು ದಾಟಿದರೆ ನೇಪಾಳವನ್ನು ಪ್ರವೇಶಿಸಬಹುದು.
ಇಲ್ಲಿಗೆ ಭೇಟಿ ನೀಡಲು ಭಾರತೀಯರಿಗೆ ವೀಸಾದ ಅವಶ್ಯಕತೆಯೂ ಇಲ್ಲ. ಮಾನ್ಯವಾದ ಪಾಸ್ಪೋರ್ಟ್ ಅಥವಾ ಮತದಾರರ ಗುರುತಿನ ಚೀಟಿ ಇದ್ದರೆ ಸಾಕು. ನಮ್ಮ ಆಧಾರ್ ಅನ್ನು ಇಲ್ಲಿ ಸ್ವೀಕರಿಸುವುದಿಲ್ಲ. ವಸತಿಗೆ ಕಡಿಮೆ ವೆಚ್ಚದ ಗೆಸ್ಟ್ ಹೌಸ್ ಗಳು ಹಾಸ್ಟೆಲ್‌ಗಳಿಂದ ಹಿಡಿದು ಐಷಾರಾಮಿ ಹೊಟೇಲ್‌ಗಳು ಮತ್ತು ರೆಸಾರ್ಟ್‌ಗಳವರೆಗೆ ಎಲ್ಲವೂ ಲಭ್ಯವಿದೆ.
ಇದನ್ನೂ ಓದಿ: ನಲವತ್ತಾರು ವರ್ಷಗಳ ಬಳಿಕೆ ಒಕ್ಲಹೋಮ ತಂಡ ಕಪ್ ಗೆದ್ದಿತ್ತು
ರಾಜಧಾನಿಯ ವೈಭವ
ವಿಶ್ವ ಪ್ರಸಿದ್ಧವಾದ ಎವರೆಸ್ಟ್ ಶಿಖರ ಇಲ್ಲಿದೆ. ಇಲ್ಲಿಯ ಯುವ ಜನತೆ ಉದ್ಯೋಗಕ್ಕಾಗಿ ಪ್ರಪಂಚದ ಎಲ್ಲಾ ದೇಶಗಳಲ್ಲೂ ನೆಲೆಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ನೆಲೆ ನಿಂತಿದ್ದಾರೆ. ಶ್ರಮಜೀವಿಗಳೂ, ಒಳ್ಳೆಯ ನಡತೆ ಉಳ್ಳವರು ಆಗಿದ್ದಾರೆ. ನಮ್ಮ ದೇಶದಂತೆ ಕೃಷಿಯೇ ಇಲ್ಲಿಯ ಜನರ ಬೆನ್ನೆಲುಬಾಗಿದೆ. ಇಲ್ಲಿಯ ಜನಸಂಖ್ಯೆಯ ಹೆಚ್ಚು ಭಾಗ ಜನರು ಕೃಷಿ ಚಟುವಟಿಕೆಯಲ್ಲಿದ್ದಾರೆ. ಭತ್ತ, ಮೆಕ್ಕೆಜೋಳ, ಆಲೂಗಡ್ಡೆ ಮತ್ತು ದ್ವಿದಳ ಧಾನ್ಯಗಳು ಪ್ರಮುಖ ಬೆಳೆಗಳಾಗಿವೆ. ಇದೊಂದು ಗುಡ್ಡಗಾಡು ಪ್ರದೇಶವಾದ್ದರಿಂದ ಭೂ ಭಾಗದ ಶೇಕಡ 20 ಮಾತ್ರ ಕೃಷಿಗೆ ಯೋಗ್ಯವಾಗಿದ್ದು, ಟೆರೇಸ್ ಕೃಷಿ ಸಾಮಾನ್ಯವಾಗಿದೆ. ವ್ಯವಸಾಯ ಇವರಿಗೊಂದು ಸವಾಲೇ ಆಗಿದೆ.

ಕಠ್ಮಂಡು ನೇಪಾಳದ ರಾಜಧಾನಿಯಾಗಿದ್ದು, ನೇಪಾಳದ ಹೃದಯ ಭಾಗದಲ್ಲಿದೆ ಶ್ರೀಮಂತ ಪರಂಪರೆ, ಆಧ್ಯಾತ್ಮಿಕ ಕೇಂದ್ರ ಅಲ್ಲದೇ ರೋಮಾಂಚನಗೊಳಿಸುವ ದೈನಂದಿನ ಬದುಕನ್ನು ಇಲ್ಲಿ ಕಾಣಬಹುದು. ಪ್ರಾಚೀನ ಸಂಪ್ರದಾಯ ಮತ್ತು ಆಧುನಿಕ ಬೆಳವಣಿಗೆ ಎರಡನ್ನು ತನ್ನ ಬಾಹುಗಳಲ್ಲಿ ಬಂಧಿಸಿದೆ. ಮೌಂಟ್ ಎವರೆಸ್ಟ್ ಚಾರಣಿಗರಿಗೆ ಇದು ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸುತ್ತದೆ. ಪಶುಪತಿನಾಥ ಮಂದಿರ ಬೌದ್ಧನಾಥ ಮತ್ತು ಸ್ವಯಂಭುನಾಥದಂಥ ಪವಿತ್ರ ಬೌದ್ಧ ಸ್ತೂಪಗಳಿಗೆ ಕಠ್ಮಂಡು ನೆಲೆಯಾಗಿದೆ. ಮೌಂಟ್ ಎವರೆಸ್ಟ್ ಹೆಲಿಕಾಪ್ಟರ್‌ಗಳು ಯಾತ್ರಿಗಳಿಗೆ ಗಗನದಲ್ಲಿ ಸುತ್ತು ಹಾಕಿಸುವ ಮೂಲಕ ಎವರೆಸ್ಟ್ ದರ್ಶನ ಮಾಡಿಸಿ ಮಧುರವಾದ ನೆನಪನ್ನು ಪ್ರವಾಸಿಗರ ಮನಸ್ಸಿನಲ್ಲಿ ಉಳಿಸಿಬಿಡುತ್ತವೆ. ಕಠ್ಮಂಡು ಬಳಿಯ ಕೋಶ ನದಿಯಲ್ಲಿ ರಿವರ್ ರಾಫ್ಟಿಂಗ್ ಮತ್ತು ಬಂಜಿ ಜಂಪಿಂಗ್‌ಗಳಂಥ ಸಾಹಸ ಚಟುವಟಿಕೆಗಳಲ್ಲಿ ಭಾಗಿಯಾಗಬಹುದು. ಬಂಜಿ ಜಂಪಿಂಗ್ ನಡೆಸುವ ತೂಗು ಸೇತುವೆ ಸುಮಾರು 160 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಇಲ್ಲಿಂದ ಮಹಾ ಜಲಪಾತದ ಅನುಭವವನ್ನು ಪಡೆಯಬಹುದು.
ಸಾಹಸಿಗಳಿಗೆ ಅಚ್ಚುಮೆಚ್ಚು
ಪೋಖರಾ ಮತ್ತು ಬಂಡಿಪುರ ಸಾಹಸ ಪ್ರಿಯರಿಗೆ ತಕ್ಕ ಸ್ಥಳ. ಸುಂದರವಾದ ಪೋಖರಾ ಅಥವಾ ಅನ್ನಪೂರ್ಣ ಪರ್ವತ ಶ್ರೇಣಿಯ ಮೇಲೂ ಹಾರಾಟ ನಡೆಸಬಹುದು. ಸಾರಂಗ್ ಕೋರ್ಟ್‌ಗೆ ಹೋಗಬಹುದು. ವಿಮಾನ ಅಥವಾ ಮೋಟರ್ ರಹಿತ ಗಾಳಿ ತುಂಬಿದ ಗ್ರೈಂಡರ್‌ನಲ್ಲಿ ನೀವೇ ಸ್ವತಹ ಚಲಾಯಿಸಿಕೊಂಡು ಹೋಗಬಹುದು ಇದಕ್ಕೆ ಮೊದಲು ಕೆಲವು ದಿನಗಳ ತರಬೇತಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಗೋದಾವರಿ, ಬಂಗಮತಿ, ಚಾಪ ಗೌನ್ ಮತ್ತು ಶಿವಪುರಿ ರಾಷ್ಟ್ರೀಯ ಉದ್ಯಾನಗಳಲ್ಲಿ ಬೈಕಿಂಗ್ ಒಂದು ಹೊಸ ಅನುಭವವನ್ನು ನೀಡುತ್ತದೆ. ಸಾಂಪ್ರದಾಯಿಕ ರಸ್ತೆಗಳಿಲ್ಲದ ಅನೇಕ ಸ್ಥಳಗಳಲ್ಲಿ ಬೈಕಿಂಗ್ ಹೋದರೆ ಅವು ಅತ್ಯಂತ ಸುಂದರವೂ ರೋಮಾಂಚನಕಾರಿಯಾದ ಅನುಭವವನ್ನು ನೀಡುವ ಸ್ಥಳಗಳಿಗೆ ನಿಮ್ಮನ್ನು ಕರೆದೊಯ್ಯುತ್ತವೆ.
ಗ್ಯೋಕೋ ಸರೋವರದಿಂದ ಮೌಂಟ್ ಎವರೆಸ್ಟ್ ನೋಟ ಲಭ್ಯವಿದ್ದು, 6 ಸರೋವರಗಳ ಸೆಟ್ ಇಲ್ಲಿದೆ ವಿಶ್ವದ ಅತಿ ಎತ್ತರದ ಸಿಹಿ ನೀರಿನ ಸರೋವರಗಳು ಇಲ್ಲಿವೆ. ಥೋನಕ್ ಅವುಗಳಲ್ಲಿ ಅತ್ಯಂತ ದೊಡ್ಡದಾಗಿದೆ. ಗ್ಲೋಕೋ ಸರೋವರಗಳು ಭವ್ಯವಾದ ಮೌಂಟ್ ಎವರೆಸ್ಟ್ ಗಿಂತಲೂ ಹೆಚ್ಚಿನ ಭವ್ಯತೆಯನ್ನು ಮೆರೆಯುವ ಸ್ಥಳಗಳಾಗಿವೆ. ಈ ಸರೋವರಗಳು ಈಶಾನ್ಯ ನೇಪಾಳದಖುಮ್ ಜುಂಗ್ ಗ್ರಾಮಕ್ಕೆ ಸೇರಿದ್ದು, ಹಿಂದೂ ಮತ್ತು ಬೌದ್ಧರು ಇದನ್ನು ಪವಿತ್ರವಾದ ಸ್ಥಳವೆಂದು ನಂಬಿದ್ದಾರೆ.

ಬುದ್ಧನ ನೆನಪು
ಲುಂಬಿನಿ ಭಗವಾನ್ ಬುದ್ಧನ ಜನ್ಮಸ್ಥಳವೆಂದು ಗುರುತಿಸಲ್ಪಟ್ಟಿದೆ. ಇದು ಯಾತ್ರಿಗಳನ್ನಷ್ಟೇ ಅಲ್ಲ ಶಾಂತಿ ಪ್ರಿಯರನ್ನು ಕೈಬೀಸಿ ಕರೆಯುತ್ತದೆ, ಮಾಯಾದೇವಿಯ ದೇವಾಲಯವು ಸಂನ್ಯಾಸಿಗಳ ಆವಾಸಸ್ಥಾನವಾಗಿದ್ದು, ಪ್ರಶಾಂತ ಉದ್ಯಾನವನಗಳು, ಪವಿತ್ರ ಕೊಳಗಳಿಂದ ಕೂಡಿದೆ. ಇಲ್ಲಿರುವ ವಸ್ತು ಸಂಗ್ರಹಾಲಯಗಳಲ್ಲಿ ಅತ್ಯಂತ ಪುರಾತನ ಐತಿಹಾಸಿಕ ಸಂಗ್ರಹಗಳನ್ನು ಕಾಣಬಹುದು.
ಪುರಾಣ, ಸಂಸ್ಕೃತಿ ಮತ್ತು ರೋಮಾಂಚಕ ಆಕರ್ಷಕ ಮಿಶ್ರಣದಂತಿರುವ ಮತ್ತೊಂದು ಸ್ಥಳವೇ ಜನಕಪುರ. ಸೀತಾದೇವಿಯ ಜನ್ಮಸ್ಥಳ ಹಾಗೂ ರಾಮನೊಂದಿಗೆ ಸೀತೆಯ ವಿವಾಹ ನಡೆದ ಸ್ಥಳವೆಂದು ಪೂಜಿಸಲ್ಪಡುವ ಈ ಸ್ಥಳವು ಹಿಂದು ಭಕ್ತರಿಗೆ ಅತ್ಯಂತ ಪವಿತ್ರವಾಗಿದೆ. ಜನಕಪುರದ ದೇವಾಲಯಗಳು ವಾಸ್ತುಶಿಲ್ಪಕ್ಕೆ ದಂತಕತಗಳಿಗೆ ಪ್ರಸಿದ್ಧವಾಗಿವೆ.
ಧರಣ್ ಇದೊಂದು ಆಧ್ಯಾತ್ಮಿಕತೆ, ಮತ್ತು ನೈಸರ್ಗಿಕ ಸಂಪತ್ತಿನಿಂದ ಕೂಡಿದ ನಗರವಾಗಿದ್ದು ಬಾಳೆ ಮರಗಳಿಂದ ಕೂಡಿದ ಭೂ ದೃಶ್ಯ ಮತ್ತು ಗಾಲ್ ಕೋರ್ಸ್ ಹೊಂದಿರುವ ಬಂಗಲೆಗಳು ಇಲ್ಲಿದ್ದು ಅತ್ಯಂತ ವೈವಿಧ್ಯಮಯ ತಾಣವಾಗಿದೆ. ಬೀದಿ ಬದಿಯ ವ್ಯಾಪಾರಕ್ಕೆ ಪ್ರಸಿದ್ಧವಾಗಿದ್ದು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.
ವಿಹಂಗಮ ನೋಟ
ಹಿಮಾಲಯದ ತಪ್ಪಲಿನಲ್ಲಿ ಅಡಗಿರುವ ಚಂದ್ರಗಿರಿಯು ನೇಪಾಳದ ಅತ್ಯಂತ ಸುಂದರವಾದ ಸ್ಥಳವಾಗಿದ್ದು ಬೆಟ್ಟದ ತುದಿಯು ಹಿಮಾಲಯದ ಭವ್ಯವಾದ ಹಿಮದಿಂದ ಆವೃತ್ತವಾದ ಶಿಖರಗಳಿಂದ ಕೂಡಿದ ಕಠ್ಮಂಡುವಿನ ವಿಹಂಗಮ ನೋಟ ಸವಿಯಲು ಕೇಬಲ್ ಕಾರ್ಗಳ ವ್ಯವಸ್ಥೆ ಇದ್ದು, ಇಲ್ಲಿಯ ಕೋಟೆ ಪವಿತ್ರ ಭವೇಶ್ವರ ಮಹದೇವ ದೇವಾಲಯಕ್ಕೆ ಭೇಟಿ ನೀಡಬಹುದು. ಸಾರಂಗ್ ಕೋಟ್ ಪೋಕ್ರಾದ ಹೊರಗೆ ನೆಲೆ ನಿಂತಿರುವ ಸಾರಂ ಕೋರ್ಟ್ ಒಂದು ಆಕರ್ಷಕ ಹಳ್ಳಿಯಾಗಿದ್ದು 1600 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇದು ಭವ್ಯವಾದ ಅನ್ನಪೂರ್ಣ ಶ್ರೇಣಿ ಮತ್ತು ಸುತ್ತಲಿನ ಸುಂದರ ದೃಶ್ಯಗಳನ್ನು ಸವಿಯಲು ಹೆಸರುವಾಸಿಯಾಗಿದೆ. ಇಲ್ಲಿನ ಸೂರ್ಯೋದಯ ಮತ್ತು ಸೂರ್ಯಾಸ್ತ ದ ನಂತರ ಪರ್ವತಗಳು ಗುಲಾಬಿ ಮತ್ತು ಕಿತ್ತಲೆ ಬಣ್ಣಗಳಿಂದ ಹೊಳೆಯುವ ದೃಶ್ಯ ಕಣ್ಣು ತುಂಬಿಕೊಳ್ಳಲು ಪ್ರವಾಸಿಗರು ಕಾತರರಾಗಿರುತ್ತಾರೆ. ಸಾರಂಗ್ ಕೋಟ್ ಬಿಂದ್ಯಾಬಾಸಿನಿ ದೇವಾಲಯ ಮತ್ತು ವಿಶ್ವಶಾಂತಿ ಪಗೋಡಾದಂತಹ ಸಾಂಸ್ಕೃತಿಕ ತಾಣಗಳಿಗೂ ಹೆಸರಾಗಿದೆ.

ಬಾರ್ಡಿಯ ರಾಷ್ಟ್ರೀಯ ಉದ್ಯಾನವನ ಟೆರೈ ಪ್ರದೇಶದಲ್ಲಿ ನೆಲೆಗೊಂಡಿದ್ದು ಪ್ರಕೃತಿ ಪ್ರಿಯರು ಮತ್ತು ವನ್ಯಜೀವಿಗಳ ಪ್ರಿಯರಿಗೆ ಸ್ವರ್ಗವಾಗಿದೆ. ಹಚ್ಚ ಹಸುರಿನ ಕಾಡುಗಳು ,ಹುಲ್ಲುಗಾವಲುಗಳು ಮತ್ತು ಜೌಗು ಪ್ರದೇಶಗಳ ಈ ವಿಶಾಲವಾದ ಪ್ರದೇಶವು ಹುಲಿಗಳು ಖಡ್ಗಮೃಗಗಳು ,ಆನೆಗಳು ಹಾಗೂ 250ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಸೇರಿದಂತೆ ವಿಲಕ್ಷಣ ವನ್ಯಜೀವಿಗಳ ಅದ್ಭುತ ಶ್ರೇಣಿಗಳಿಗೆ ನೆಲೆಯಾಗಿದೆ. ನೇಪಾಳದ ಅತ್ಯಂತ ದೊಡ್ಡ ಪ್ರದೇಶ ಇದಾಗಿದೆ. ಲ್ಯಾಕ್ವಾಂಗ್ ನೇಪಾಳದ ಉತ್ತರ ಮಧ್ಯ ಭಾಗದಲ್ಲಿರುವ ಪ್ರಶಾಂತ ಮತ್ತು ಆಕರ್ಷಕ ಪ್ರದೇಶವಾದ ಶಿಖರಗಳು ಹಸಿರು ಕಾಡುಗಳು ಮತ್ತು ಸಾಂಪ್ರದಾಯಕ ಹಳ್ಳಿಗಳಿಂದ ಕೂಡಿದೆ. ಈ ಕಣಿವೆಯ ಟ್ರೆಕ್ ನೇಪಾಳದ ಅತ್ಯಂತ ಜನಪ್ರಿಯ ಟ್ರೆಕ್ಗಳಲ್ಲಿ ಒಂದಾಗಿದೆ. ಹಿಮಾಲಯದ ಹೃದಯ ಭಾಗದಲ್ಲಿ ನೆಲೆ ನಿಂತಿರುವಹೆಳಂಬು ಗ್ರಾಮೀಣ ನೇಪಾಳವನ್ನು ಪರಿಚಯಿಸುವ ಸ್ಥಳವಾಗಿದೆ. ಪ್ರಶಾಂತ ಭೂ ದೃಶ್ಯಗಳು ಮತ್ತು ಸಾಂಸ್ಕೃತಿಕ ವಸ್ತ್ರಗಳಿಗೆ ಹೆಸರುವಾಸಿಯಾದ ಹೆಲಂಬು ಹೋಲ್ಮೋ ಜನರ ನೆಲೆಯಾಗಿದೆ. ಈ ಬುಡಕಟ್ಟಿನ ಜನರ ಸಂಪ್ರದಾಯಗಳು ಆಥಿತ್ಯ ಮನದಾಳದಲ್ಲಿ ನೆಲೆ ನಿಂತು ಬಿಡುತ್ತದೆ.
ಸುತ್ತಲ ಪ್ರದೇಶ ಕ್ಯಾಸ್ಕೇಡಿಂಗ್ ಜಲಪಾತಗಳು ಮತ್ತು ಹಳ್ಳಿಗಳಿಂದಕೂಡಿದೆ. ಈ ಪ್ರದೇಶದಗಳಲ್ಲಿ ಹೇರಳವಾಗಿ ಸೇಬಿನ ಮರಗಳಿದ್ದು ಒಳ್ಳೆಯ ಜಾತಿಯ ಸೇಬುಗಳು ಬೆಳೆಯುತ್ತವೆ. ನೇಪಾಳದ ಪ್ರವಾಸವು ಬಹು ದಿನಗಳವರೆಗೆ ಕಾಡುವ ಒಂದು ಪ್ರವಾಸವಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿಗುವ ಒಂದು ವಿದೇಶಿ ಪ್ರವಾಸ ಇದಾಗಿದ್ದು, ನೇಪಾಳಿ ಜನಗಳು ಮತ್ತು ನೇಪಾಳ ದೇಶದ ಬಗ್ಗೆ ಹೆಮ್ಮೆ ಮೂಡುವಂತೆ ಮಾಡುತ್ತದೆ.
ಲೇಖಕರು: ಹವ್ಯಾಸಿ ಬರಹಗಾರರು