Saturday, May 16, 2026
Saturday, May 16, 2026

ನಲವತ್ತಾರು ವರ್ಷಗಳ ಬಳಿಕೆ ಒಕ್ಲಹೋಮ ತಂಡ ಕಪ್‌ ಗೆದ್ದಿತ್ತು

ಪೇಕಾಮ್ ಸೆಂಟರ್‌ನ ಒಳಾಂಗಣದಲ್ಲಿ ನಡೆಯುವ ಪಂದ್ಯಕ್ಕೆ ‘ಒಕ್ಲಹೋಮ ಸಿಟಿ ಥಂಡರ್ʼನ ತಿಳಿನೀಲಿ ಬಣ್ಣದ ಜೆರ್ಸಿ ಹಾಕಿಕೊಂಡು ತಯಾರಾದ ಮಗ, ಸೊಸೆ ಜತೆಗೆ ನಾವಿಬ್ಬರೂ ಉತ್ಸಾಹದಿಂದ ಹೊರಟೆವು. ಭರ್ತಿಯಾಗಿದ್ದ ಕ್ರೀಡಾಂಗಣದಲ್ಲಿ ತಿಳಿನೀಲಿ ಬಣ್ಣದ ಪುಲ್ ಓವರ್, ಜೆರ್ಸಿ ಹಾಕಿಕೊಂಡವರೇ. ಕ್ರೀಡಾಂಗಣದ ಮುಖ್ಯ ದ್ವಾರದಲ್ಲೇ ಬಣ್ಣದ ಸ್ಕೆಚ್ ಪೆನ್ ಹಾಗೂ ಡ್ರಾಯಿಂಗ್ ಪೇಪರ್‌ಗಳನ್ನು ಇಟ್ಟಿದ್ದರು. ನಾವು ‘ಈ ಸಲ ಕಪ್ ನಮ್ದೆʼʻThis time the cup is ours’ ಎಂದು ಬರೆದು ಡಿಸ್ಪ್ಲೇ ಕಾರ್ಡ್ ತಯಾರಿಸಿದೆವು. ಕ್ರೀಡಾಂಗಣದ ಒಳಹೊಕ್ಕಾಗ ನಾನಂತೂ ಸ್ತಂಭೀಭೂತಳಾಗಿಬಿಟ್ಟೆ!

  • ಡಾ. ಸುಮಾ ರಮೇಶ್, ಬೆಂಗಳೂರು

ಕಳೆದ ವರ್ಷದ ಐಪಿಎಲ್ ಪಂದ್ಯಗಳು ನಡೆಯುತ್ತಿದ್ದ ಸಮಯದಲ್ಲಿ ನಾವು ಅಮೆರಿಕದ ಒಕ್ಲಹೋಮಾದ ಮಗನ ಮನೆಯಲ್ಲಿದ್ದೆವು. ಅಲ್ಲಿ ಊರಿನ ವಿಷಯಗಳನ್ನೆಲ್ಲಾ ಮಗ-ಸೊಸೆ ಹತ್ತಿರ ಮಾತನಾಡುತ್ತಿದ್ದೆವು. ಆ ಸಮಯದಲ್ಲಿ ತಪ್ಪದೇ ಮಾತನಾಡುತ್ತಿದ್ದದ್ದು ಆರ್‌ಸಿಬಿ ಬಗ್ಗೆ. ಒಕ್ಲಹೋಮಾದಲ್ಲಿದ್ದರೂ ಮಕ್ಕಳ ಮನಸು ಮಾತ್ರ ಬೆಂಗಳೂರಿನಲ್ಲೇ! ಆರ್‌ಸಿಬಿ ಈ ಸಲ ಕಪ್ ಗೆಲ್ಲಬೇಕು ಎಂದು ಆಶಿಸುತ್ತ ಎಲ್ಲಾ ಪಂದ್ಯಗಳನ್ನು ನೋಡುದ್ದೆವು. ಅದರ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದೆವು. ಹಲವು ಬಾರಿ ಮಗ-ಸೊಸೆ ಕೆಲಸದಿಂದ ಬಂದ ತಕ್ಷಣ ಟಿವಿ ಮುಂದೆ ಕುಳಿತು ಪಂದ್ಯಗಳನ್ನು ನೋಡುತ್ತಾ ಖುಷಿ ಪಡುಟ್ಟಿದ್ದೂ ಇದೆ. ಆಗೆಲ್ಲ ಆರ್‌ಸಿಬಿ ಈ ಬಾರಿ ಕಪ್‌ ಗೆಲ್ಲಲಿ ಎಂದು ಪ್ರಾರ್ಥಿಸುತ್ತಿದ್ದೆವು. ಆಗ ನಾವು ಅವರೊಂದಿಗೆ ನೋಡಲಾರಂಭಿಸಿದ್ದು ಬಾಸ್ಕೆಟ್ ಬಾಲ್ ಪಂದ್ಯಗಳು!

ಇದನ್ನೂ ಓದಿ: ʻಅಡಾಲಜ್‌ ನಿ ವಾವ್‌ʼ ಎಂಬ ಐತಿಹಾಸಿಕ ಬಾವಿ

ನ್ಯಾಷನಲ್‌ ಬಾಸ್ಕೆಟ್‌ಬಾಲ್‌ ಅಸೋಸಿಯೇಷನ್‌ ಇಲ್ಲಿ ಬಾಸ್ಕೆಟ್‌ಬಾಲ್‌ ಪಂದ್ಯಗಳನ್ನು ಆಯೋಜಿಸುತ್ತದೆ. ಇದು ವಿಶ್ವದ ಎರಡನೆಯ ಅತ್ಯಂತ ಶ್ರೀಮಂತ ವೃತ್ತಿಪರ ಕ್ರೀಡಾ ಲೀಗ್‌ ಆಗಿದೆ. ಈ ಅಸೋಸಿಯೇಷನ್‌ನಲ್ಲಿ ಒಟ್ಟು 30 ತಂಡಗಳಿದ್ದು, ಅವುಗಳಲ್ಲಿ ಒಂದು ʻಒಕ್ಲಹೋಮ ಥಂಡರ್‌ʼ. ಈ ತಂಡ ಮೊದಲಿಗೆ ಸಿಯಾಟಲ್‌ನ ಸಿಯಾಟಲ್‌ ಸೂಪರ್‌ಸಾನಿಕ್ಸ್‌ ತಂಡವಾಗಿತ್ತು. 2008ರಲ್ಲಿ ಒಕ್ಲಹೋಮ ರಾಜ್ಯಕ್ಕೆ ಸ್ಥಳಾಂತರಗೊಂಡು ಒಕ್ಲಹೋಮ ಥಂಡರ್‌ ಎಂದಾಯಿತು. ಅದೇ ವರ್ಷ ಭಾರತದಲ್ಲಿ ಐಪಿಎಲ್‌ ಆರಂಭವಾಯಿತು.

Untitled design - 2026-05-16T122852.551

ಟಿಕೆಟ್‌ ಸಿಕ್ತು

ʻಸಿಯಾಟಲ್ ಸೂಪರ್‌ಸಾನಿಕ್ಸ್ʼ ಆಗಿದ್ದಾಗ NBA ಚಾಂಪಿಯನ್ಶಿಪ್ ಗೆದ್ದದ್ದು 1979 ರಲ್ಲಿ. ನಂತರ ‘ಒಕ್ಲಹೋಮ ಥಂಡರ್’ ಸತತ ನಲವತ್ತಾರು ವರ್ಷಗಳವರೆಗೆ ಸೋಲುತ್ತಲೇ ಸಾಗಿತ್ತು. ಮಕ್ಕಳ ಜತೆಗೆ ಬಾಸ್ಕೆಟ್‌ಬಾಲ್ ಪಂದ್ಯಗಳನ್ನು ನೋಡುತ್ತಾ, ಅದರ ಬಗ್ಗೆ ಅತೀವ ಆಸಕ್ತಿ ಮೂಡಿತು. ನಾವೂ ‘ಒಕ್ಲಹೋಮ ಥಂಡರ್ʼ ತಂಡದ ಅಭಿಮಾನಿಗಳಾದೆವು. ಕೊಹ್ಲಿಯನ್ನು ಇಷ್ಟಪಟ್ಟಷ್ಟೇ ಗಿಲ್ಜಿಯಸ್ -ಅಲೆಕ್ಸಾಂಡರ್, ಜಾಲೆನ್ ವಿಲಿಯಮ್ಸ್ ಇಷ್ಟವಾದರು. ನಮ್ಮ ಉತ್ಸಾಹವನ್ನು ನೋಡಿದ ಮಗ ಒಕ್ಲಾಹೋಮ ನಗರದಲ್ಲೇ ನಡೆಯಲಿದ್ದ ‘ಒಕ್ಲಹೋಮ ಥಂಡರ್ʼ ಹಾಗೂ ‘ ಡೆಟ್ರಾಯಿಟ್ ಪಿಸ್ಟನ್ಸ್ʼ ಪಂದ್ಯಕ್ಕೆ ಟಿಕೆಟ್ ಕಾಯ್ದಿರಿಸಿದ. ನಾವೂ ಬಹಳ ಕಾತುರದಿಂದ NBA ಬಾಸ್ಕೆಟ್ ಬಾಲ್ ನೋಡಲು ಕಾಯುತ್ತಿದ್ದೆವು. NBA ತಂಡಗಳು ತಮ್ಮ ತಂಡದ ಹೆಸರನ್ನು ತಮ್ಮ ರಾಜ್ಯದ ಹೆಸರಿನ ಮುಂದೆ ಲಗತ್ತಿಸಿಕೊಂಡಿರುತ್ತವೆ. ಒಕ್ಲಹೋಮ ಟೊರ್ನಾಡೊ ಅಂದರೆ ಪ್ರಬಲವಾದ ಸುಂಟರಗಾಳಿಯ ರಾಜ್ಯ. ಹಾಗಾಗಿ ‘ಒಕ್ಲಹೋಮ ಸಿಟಿ ಥಂಡರ್ʼ ಎಂಬ ಹೆಸರು ಅನ್ವರ್ಥವಾಗಿದೆ.

ಎಲೆಕ್ಟ್ರಿಫೈಯಿಂಗ್ ವಾತಾವರಣದಲ್ಲಿ

ಪೇಕಾಮ್ ಸೆಂಟರ್‌ನ ಒಳಾಂಗಣದಲ್ಲಿ ನಡೆಯುವ ಪಂದ್ಯಕ್ಕೆ ‘ಒಕ್ಲಹೋಮ ಸಿಟಿ ಥಂಡರ್ʼನ ತಿಳಿನೀಲಿ ಬಣ್ಣದ ಜೆರ್ಸಿ ಹಾಕಿಕೊಂಡು ತಯಾರಾದ ಮಗ, ಸೊಸೆ ಜತೆಗೆ ನಾವಿಬ್ಬರೂ ಉತ್ಸಾಹದಿಂದ ಹೊರಟೆವು. ಭರ್ತಿಯಾಗಿದ್ದ ಕ್ರೀಡಾಂಗಣದಲ್ಲಿ ತಿಳಿನೀಲಿ ಬಣ್ಣದ ಪುಲ್ ಓವರ್, ಜೆರ್ಸಿ ಹಾಕಿಕೊಂಡವರೇ. ಕ್ರೀಡಾಂಗಣದ ಮುಖ್ಯ ದ್ವಾರದಲ್ಲೇ ಬಣ್ಣದ ಸ್ಕೆಚ್ ಪೆನ್ ಹಾಗೂ ಡ್ರಾಯಿಂಗ್ ಪೇಪರ್‌ಗಳನ್ನು ಇಟ್ಟಿದ್ದರು. ನಾವು ‘ಈ ಸಲ ಕಪ್ ನಮ್ದೆʼʻThis time the cup is ours’ ಎಂದು ಬರೆದು ಡಿಸ್ಪ್ಲೇ ಕಾರ್ಡ್ ತಯಾರಿಸಿದೆವು. ಕ್ರೀಡಾಂಗಣದ ಒಳಹೊಕ್ಕಾಗ ನಾನಂತೂ ಸ್ತಂಭೀಭೂತಳಾಗಿಬಿಟ್ಟೆ! ಅತ್ಯಂತ ವಿಶಾಲವಾದ ಕ್ರೀಡಾಂಗಣ ಕಿಕ್ಕಿರಿದು ತುಂಬಿತ್ತು. ಮಧ್ಯದಲ್ಲಿ ಪಂದ್ಯ ನಡೆಯುವ ಕೋರ್ಟ್ ಮೇಲೆ ನಾಲ್ಕೂ ಕಡೆಗಳಿಗೆ ಕಾಣುವಂಥ ದೈತ್ಯ ಎಲೆಕ್ಟ್ರಾನಿಕ್ ಟಿವಿ ಪರದೆಗಳು, ‘ಒಕ್ಲಹೋಮ ಸಿಟಿ ಥಂಡರ್’ನ ಮಾಸ್ಕಾಟ್ ಗೂಳಿಯಂತೆ ವೇಷ ಧರಿಸಿ, ಚುರುಕಾದ ಮಾತುಗಳ ನಿರೂಪಕನ ಜತೆ ಪ್ರೇಕ್ಷಕರನ್ನು ಮನರಂಜಿಸುತ್ತಿದ್ದರು. ಪಂದ್ಯಕ್ಕೆ ಮುಂಚೆ ಗುಂಪಿನಲ್ಲಿ ಅನೇಕ ನೃತ್ಯ ಪ್ರದರ್ಶನಗಳಿದ್ದವು. ಬಾಲಿವುಡ್ ಹಾಡಿಗೆ ಭಾರತೀಯ ಸಂಘದ ಹುಡುಗಿಯರ ನೃತ್ಯವೂ ಇತ್ತು. ತಮ್ಮ ತಂಡವನ್ನು ಹುರಿದುಂಬಿಸುವ ಸಲುವಾಗಿ ವಿವಿಧ ಸ್ಲೋಗನ್‌ಗಳನ್ನು ಪ್ರೇಕ್ಷಕರು ಒಟ್ಟಾಗಿ ಕೂಗುತ್ತಿದ್ದರು. ಪ್ರಖರ ಬೆಳಕು ಹಾಗೂ ಗದ್ದಲದ ಆ ವಾತಾವರಣ ನಿಜಕ್ಕೂ ಎಲೆಕ್ಟ್ರಿಫೈಯಿಂಗ್ ಆಗಿತ್ತು. ಪ್ರೇಕ್ಷಕರ ಉತ್ಸಾಹದಲ್ಲಿ ನಾವೂ ಒಂದಾಗಿ ‘ಥಂಡರ್, ಥಂಡರ್ ‘ ಎಂದು ಕೂಗಿ ಒಕ್ಲಾಹೋಮ ತಂಡಕ್ಕೆ ನಮ್ಮ ಬೆಂಬಲ ಸೂಚಿಸಿದೆವು. ಗಿಲ್ಜಿಯಸ್ ಅಲೆಕ್ಸಾಂಡರ್‌ಗೆ ‘MVP’ ಎಂಬ ಬಿರುದಿತ್ತು. ಅಂಥ ಅದ್ಭುತ ಆಟಗಾರ ಅವನು. ಇಡೀ ಪಂದ್ಯವನ್ನು ಬಹಳ ಉತ್ಸಾಹದಿಂದ ಆನಂದಿಸಿದೆವು. ಸಂತೋಷವೆಂದರೆ ಅತ್ಯಂತ ಆ ಪಂದ್ಯದಲ್ಲಿ ‘ಒಕ್ಲಹೋಮ ಸಿಟಿ ಥಂಡರ್ʼಅಂದು ಗೆಲುವು ಸಾಧಿಸಿತು! ಮಕ್ಕಳಂತೂ ಈ ಗೆಲುವು ಈ ಸಲದ ಚಾಂಪಿಯನ್‌ಶಿಪ್ ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸಿದೆ ಎಂದು ಬಹಳ ಸಂಭ್ರಮಪಟ್ಟರು.

Untitled design - 2026-05-16T122901.199

ಗೆಲುವಿನ ಹಾದಿ

ಅನೇಕ ಕ್ವಾಲಿಫೈಯಿಂಗ್ ಪಂದ್ಯಗಳನ್ನು ಗೆಲ್ಲುತ್ತಾ ಸಾಗಿತ್ತು ‘ಒಕ್ಲಹೋಮ ಸಿಟಿ ಥಂಡರ್.’ ನಾವೂ ಹಲವಾರು ಪಂದ್ಯಗಳನ್ನು ಟಿವಿಯಲ್ಲಿ ನೋಡಿ ಆನಂದಿಸಿದೆವು. ಆದರೆ ಪೇಕಾಮ್ ಸೆಂಟರ್‌ನಲ್ಲಿ ನೋಡಿದ ಪದ್ಯದ ರೋಚಕತೆ ತಂದ ರೋಮಾಂಚನ ಎಂದಿಗೂ ಮರೆಯಲು ಸಾಧ್ಯವಿಲ್ಲ!

ಫೈನಲ್ ಪಂದ್ಯದ ಹೊತ್ತಿಗೆ ನಾವು ಬೆಂಗಳೂರಿಗೆ ಮರಳಿದ್ದರೂ ಪಂದ್ಯದ ಪ್ರತಿ ನಡೆಯನ್ನು ಇಲ್ಲಿಂದಲೇ ಅನುಸರಿಸುತ್ತಿದ್ದೆವು. ʻಒಕ್ಲಹೋಮ ಸಿಟಿ ಥಂಡರ್ʼನಾಲ್ಕು ಪಂದ್ಯಗಳನ್ನು ಗೆಲ್ಲುವುದರ ಮೂಲಕ 2025ರ ಚಾಂಪಿಯನ್ ಶಿಪ್ ಗೆದ್ದು ಕಪ್ ತಮ್ಮದಾಗಿಸಿಕೊಂಡರು. ಮಗ, ಸೊಸೆ ಜತೆಗೆ ನಮಗೂ ಸಂಭ್ರಮ! ಈಗ ಹೇಳಿ, ನನ್ನ ಪ್ರಾರ್ಥನೆಯಿಂದಲೇ ಕಳೆದ ವರ್ಷ ಎರಡು ಕಪ್ ಗೆದ್ದಿದು ಅನ್ನೋದು ನಿಜ ತಾನೇ?

  • ಎನ್‌ಬಿಎ ವಿಶ್ವದ ಎರಡನೆಯ ಅತ್ಯಂತ ಶ್ರೀಮಂತ ವೃತ್ತಿಪರ ಕ್ರೀಡಾ ಲೀಗ್‌
  • ಈ ಲೀಗ್‌ನಲ್ಲಿ ಒಟ್ಟು 30 ಬಾಸ್ಕೆಟ್‌ಬಾಲ್‌ ಆಟಗಾರ ತಂಡಗಳಿವೆ. ಅವುಗಳಲ್ಲಿ ಒಕ್ಲಹೋಮ ಥಂಡರ್‌ ಒಂದು
  • 2008ಕ್ಕೂ ಮೊದಲು ಒಕ್ಲಹೋಮ ಥಂಡರ್‌ ತಂಡದ ಹೆಸರು ಸಿಯಾಟಲ್‌ ಸೂಪರ್‌ ಸಾನಿಕ್ಸ್‌ ಎಂದಾಗಿತ್ತು
  • 46 ವರ್ಷಗಳ ಬಳಿಕ ಒಕ್ಲಹೋಮ ಥಂಡರ್‌ ಚೊಚ್ಚಲ ಕಪ್‌ ಸಾಧಿಸಿದೆ
Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...