Thursday, February 12, 2026
Thursday, February 12, 2026

ಡಾರ್ಟ್ ಫೋರ್ಡ್‌ ನಗರದಲ್ಲಿ ಮನೆಯ ಮಾಡಿ ಪ್ರವಾಸ ಮಾಡದಿದ್ದರೆಂತಯ್ಯ

ಈ ದೋಣಿ ಪ್ರಯಾಣ ಆರಂಭವಾದ ದಿನದಿಂದ ಇಲ್ಲಿವರೆಗೆ ಗಳಿಸಿದ ಆದಾಯ ದಶ ಲಕ್ಷ ಪೌಂಡ್. ಈ ಹಣವನ್ನು ಕಾಲುವೆಯ ದುರಸ್ತಿ, ಹೊಸ ದೋಣಿಯ ಖರೀದಿ ಹಾಗೂ ಮತ್ತಿತರ ಕಾರಣಗಳಿಗೆ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಈ ಸೊಸೈಟಿ ಸ್ವಯಂ ಸೇವಕರದ್ದು. ನೌಕರರು ಮಾತ್ರ ಸಂಬಳ ತೆಗೆದುಕೊಂಡು ದುಡಿಯುತ್ತಾರೆ. ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದು, ಇದು ಈ ದೋಣಿ ವಿಹಾರ ಮತ್ತು ಸೊಸೈಟಿಯ ಆಗುಹೋಗುಗಳ ವರದಿಗಳ ಪ್ರಕಟಣೆಗೆ ಮೀಸಲಾಗಿದೆ. ಪ್ರವಾಸಿಗರಿಗೆ ಅಗತ್ಯ ಇರಲಿ, ಇಲ್ಲದಿರಲಿ ಈ ಮಾಹಿತಿ ಅವರು ಕೊಟ್ಟೇ ಕೊಡುತ್ತಾರೆ.

  • ಪಿ. ಶ್ರೀಧರ್ ನಾಯಕ್

(ಲೇಖಕರು ಹಿರಿಯ ಪತ್ರಕರ್ತರು)

ಬ್ರಿಟನ್ನಿನ ಡಾರ್ಟ್ ಫೋರ್ಡ್ ನಗರದಲ್ಲಿ ನಾವು ಕಳೆದ ದಿನಗಳು ಅವಿಸ್ಮರಣೀಯವಾಗಿವೆ. ಲಂಡನ್‌ನಲ್ಲಿ ಮೂರು ಕಾಲಗಳನ್ನು ಒಟ್ಟಿಗೆ ಅನುಭವಿಸಬಹುದು ಎಂದು ನನ್ನ ಆತ್ಮೀಯ ಕಲಾವಿದ ಮಿತ್ರ ಚಂದ್ರನಾಥ ಆಚಾರ್ಯ ನಾವು ಹೋಗುವ ಮುನ್ನ ಹೇಳಿದ್ದು ನನಗೆ ನೆನಪಿಗೆ ಬಂತು. ಡಾರ್ಟ್ ಫೋರ್ಡ್ನಲ್ಲಿನ ಮಗಳ ಮನೆಯಲ್ಲಿ ಮೂರು ತಿಂಗಳ ಉಳಿದಿದ್ದ ನಾವು ಮಳೆ, ಹೊಂಬಿಸಿಲು, ಕುಳಿರ್ ಗಾಳಿ ಹೀಗೆ ಪ್ರತಿದಿನ ಮೂರು ಕಾಲಗಳನ್ನು ಅನುಭವಿಸಿದೆವು.

ಇದನ್ನೂ ಓದಿ: ಮೈ ಚಳಿ ಬಿಡಿಸಿದ ವಿಮಾನ ಯಾನ

ನಾನು ಅಲ್ಲಿದ್ದ 90 ದಿನಗಳ ಕಾಲ ಮನೆಗಳ ಸುತ್ತಮುತ್ತ ಕಸಕಡ್ಡಿ ಕಂಡಿಲ್ಲ. ತಮ್ಮ ಮನೆಯ ತ್ಯಾಜ್ಯವನ್ನು ಪಕ್ಕದ ಮನೆಗಳ ಮುಂದೆ ಎಸೆಯುವ ಅತೀ ಜಾಣರು ಅಲ್ಲಿಲ್ಲ. ಹಾಗಾಗಿ ಡಾರ್ಟ್ ಫೋರ್ಡ್ ನಗರ ಹೂದೋಟದ ಮಧ್ಯೆದ ಜನವಸತಿ ಪ್ರದೇಶ ಎಂಬಂತೆ ಭಾಸವಾಗುತ್ತದೆ. ಅಲ್ಲಿ ನೂರಾರು ಮನೆಗಳಿವೆ. ಸುಂದರ ಮತ್ತು ವೈವಿಧ್ಯಮಯ ಹೂವು ಬಿಡುವ ಗಿಡಗಳೇ ಮನೆಗಳಿಗೆ ಬೇಲಿ. ಈ ಹೂಗಿಡಗಳ ಮಧ್ಯೆ ಪುಟ್ಟ, ಪುಟ್ಟ ಸೋಲಾರ್ ದೀಪಗಳನ್ನು ಮಣ್ಣಿನಲ್ಲಿ ಹೊರ ಕಾಣುವಂತೆ ಹೂಳುತ್ತಾರೆ.

ನಾವು ಅಲ್ಲಿಗೆ ಹೋಗಿದ್ದು ವಸಂತ ಋತುವಿನ ಆರಂಭದ ದಿನಗಳಲ್ಲಿ. ಗಿಡ ಮರಗಳು ಕ್ರಮೇಣ ಹೊಸ ಎಲೆ, ಹಣ್ಣು, ಕಾಯಿ, ಹೂಗಳಿಂದ ತುಂಬಿಕೊಳ್ಳುತ್ತಿದ್ದವು. ನಾವಿದ್ದ ಮನೆಯ ಸಮೀಪದಲ್ಲಿ ಕುದುರೆ ಸಾಕುತ್ತಾರೆ. ಆಗಾಗ ಅಲ್ಲಿಗೆ ನರಿಗಳೂ ಬಂದು ಹೋಗುವುದಿದೆ ಎಂದು ಮಗಳು ಹೇಳಿದಳು. ಆ ವಿಶಾಲ ಪ್ರದೇಶಕ್ಕೆ ಕಬ್ಬಿಣದ ಬೇಲಿ ಮತ್ತು ಗೇಟು. ಅದರ ಬಳಿ ನನ್ನ ಅರ್ಧಾಂಗಿ ಮತ್ತು ಮಗಳನ್ನು ನಿಲ್ಲಿಸಿ ಛಾಯಾಚಿತ್ರ ತೆಗೆಯುವಾಗ ನನ್ನ ಒಂದು ಕಾಲು ಕಾಲ್ದಾರಿಯ ಪಕ್ಕದ ಹಳದಿ ಗೆರೆಯ ಮೇಲಿತ್ತು. ನನ್ನ ಮಗಳು ಹಳದಿ ಗೆರೆಯ ಮೇಲೆ ನಿಮ್ಮ ಕಾಲಿದೆ, ಇದನ್ನು ನೋಡಿಯೇ ಆ ಕಾರಿನವನು ವೇಗ ಕಡಿಮೆ ಮಾಡಿದ್ದಾನೆ ನೋಡು ಎಂದಳು. ಇಲ್ಲಿ ನಡೆದು ಹೋಗುವವರನ್ನು, ರಸ್ತೆ ದಾಟುವವರನ್ನು ಮತ್ತು ಸೈಕಲ್ ಸವಾರರನ್ನು ಕಂಡಾಗ ಕಾರಿನವರು ವೇಗ ಕಡಿಮೆ ಮಾಡುತ್ತಾರೆ.

Untitled design

ಆಂಗ್ಲರ ನಾಡಿನಲ್ಲಿ ಸುತ್ತಾಟ

ಬಸ್‌ ಹತ್ತಿ ಡಾರ್ಟ್ ಫೋರ್ಡ್‌ನ ಶನಿವಾರ ಸಂತೆ ನೋಡಲು ಹೋದೆವು. ಮನೆಗೆ ಬೇಕಾಗಿರುವ ತರಕಾರಿ ಕೊಳ್ಳುವುದೇ ಅಂದಿನ ಆದ್ಯತೆ. ಶನಿವಾರ ಸಂತೆಗೆ ಭೇಟಿ ನೀಡಿದೆವು. ಸಂತೆಬೀದಿಯಲ್ಲಿ ಸಿದ್ಧ ಉಡುಪು, ನೆಲಹಾಸು, ತರಕಾರಿ, ಹಣ್ಣುಗಳು ಹೀಗೆ ಎಲ್ಲವೂ ಸಿಗುತ್ತವೆ. ಸಂತೆಯಲ್ಲಿ ಸಾಕಷ್ಟು ಭಾರತೀಯರು ಕುಟುಂಬ ಸಹಿತ ಓಡಾಡಿಕೊಂಡಿದ್ದರು.

ಅಲ್ಲಿನ ಗಿರಾಕಿಗಳಲ್ಲಿ ಎಪ್ಪತ್ತು ದಾಟಿದವರೇ ಅಧಿಕ. ಮದುವೆಯಾದ ತಕ್ಷಣ ಮಕ್ಕಳು ಪ್ರತ್ಯೇಕ ಮನೆಗಳಲ್ಲಿ ವಾಸ ಮಾಡುವುದು ಅಲ್ಲಿ ಸಹಜ. ಆಗ ಮನೆಯಲ್ಲಿ ಹಿರಿಯರು ಮಾತ್ರ ಉಳಿಯುತ್ತಾರೆ. ಭಾನುವಾರ ಮಗ/ಮಗಳು ಅಮ್ಮನ ಮನೆಗೆ, ಅಜ್ಜಿಯ ಮನೆಗೆ ಮೊಮ್ಮಕ್ಕಳು ಬರುವುದು ವಾಡಿಕೆ.

ಒಂದು ಚಹಾ ಪುಡಿಯಲ್ಲಿ ಚಹಾ ಮಾಡಿ ಕುಡಿದರೆ ಬಿಸ್ಕತ್ತಿನ ಜೊತೆಗೆ ಕುಡಿದ ಅನುಭವ. ಇನ್ನೊಂದು ಜಾಮ್ ಸುವಾಸನೆಯ ಚಹಾಪುಡಿಯ ಪೊಟ್ಟಣ ಇವುಗಳನ್ನು ನೋಡಿದರೆ ಮಾರಾಟಕ್ಕೆ ಎಷ್ಟೊಂದು ತಂತ್ರಗಳಿವೆ ಎಂದು ಅರ್ಥವಾಗುತ್ತದೆ. ಮದ್ಯಪ್ರಿಯರಿಗೆ ನೂರಾರು ಬ್ರಾಂಡ್‌ಗಳ ಗುಂಡುಗಳಿವೆ. ಎಲ್ಲವನ್ನೂ ನೋಡಿಕೊಂಡು ಮರಳಿ ಮನೆಗೆ ಬಂದಾಗ ಸಂಜೆಯಾಗಿತ್ತು.

ಇಟ್ಟಿಗೆ ಮನೆಗಳ ಸೌಂದರ್ಯ

ಅಲ್ಲಿನ ಮನೆಗಳಿಗೆ ಸಿಮೆಂಟ್ ಪ್ಲಾಸ್ಟರಿಂಗ್ ಮಾಡುವುದಿಲ್ಲ. ಹೊರಗಿನಿಂದ ಬಣ್ಣ ಬಳಿಯುವುದಿಲ್ಲ. ಮನೆಗಳ ಮಾಡಿಗೆ ಹೆಂಚು ಬಳಸುತ್ತಾರೆ. ಮನೆಗಳೆಲ್ಲವು ಹೊಸ ಮತ್ತು ಒಂದು ಮಹಡಿಯವೇ ಅನಿಸುತ್ತವೆ. ಪ್ರತಿಯೊಂದು ಮನೆಗೂ ಒಂದು ಕಾರು ಇದ್ದೇ ಇರುತ್ತದೆ. ಅಗತ್ಯ ಇದ್ದರೆ ಮಾತ್ರ ಜನರು ಬೀದಿಯಲ್ಲಿ ಓಡಾಡುತ್ತಾರೆ. ಇದನ್ನು ಕಂಡಾಗಲಂತೂ ನನಗೆ ಕೊರೊನಾ ದಿನಗಳಲ್ಲಿ ನಮ್ಮೂರಿನ ಬೀದಿಗಳು ನೆನಪಾದವು. ಇಲ್ಲಿನ ಜನರು ತಮ್ಮ ಮಕ್ಕಳು ಆಕ್ಸ್ಫರ್ಡ್ ಅಥವಾ ಕೇಂಬ್ರಿಜ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯಬೇಕೆಂದು ಬಯಸುತ್ತಾರೆ.

ಫಾರ್ನ್‌ಹ್ಯಾಮ್ ಸಿಟಿ ಸುತ್ತಾಟ

ಓಡಿಹಮ್ ಕಾಲುವೆಯಲ್ಲಿ ದೋಣಿ ವಿಹಾರ ಮಾಡಲು ನಮಗಿಬ್ಬರಿಗೆ ಅಳಿಯ ಟಿಕೆಟ್ ಖರೀದಿಸಿದ್ದರು. ಅಲ್ಲಿಗೆ ತಲುಪುವ ಮುನ್ನ ಲಂಡನ್‌ನಿಂದ 58 ಕಿಮೀ ದೂರದಲ್ಲಿ ಇರುವ ಫಾರ್ನ್‌ಹ್ಯಾಮ್ ಸಿಟಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಬಸ್ಸನ್ನು ನಿಲ್ಲಿಸಿಸದ್ದರು. ಈ ಪ್ರವಾಸದಲ್ಲಿ ನಾನು ಮತ್ತು ನನ್ನ ಪತ್ನಿ ಮಾತ್ರ ವಿದೇಶಿಯರು. ಉಳಿದವರೆಲ್ಲ ಇದೇ ದೇಶದವರು. ಇನ್ನೊಂದು ವಿಶೇಷ ಎಂದರೆ ಸಹ ಪ್ರಯಾಣಿಕರೆಲ್ಲ ಎಪ್ಪತ್ತು ವರ್ಷ ಮೀರಿದವರು. ʻಬಸ್ಸಿನಲ್ಲಿ ಇತರರಿಗೆ ಹೋಲಿಸಿದರೆ ನಾವೇ ಯಂಗ್ʼ ಎಂದು ನಕ್ಕು ನನ್ನ ಹೆಂಡತಿಗೆ ಹೇಳಿದೆ.

ಫಾರ್ನ್‌ಹ್ಯಾಮ್ ಸಿಟಿಯಲ್ಲಿ ಸುಂದರ ಪಾರಂಪರಿಕ ಕಟ್ಟಡಗಳು ಹೇರಳವಾಗಿವೆ ಮತ್ತು ಬಳಕೆಯಲ್ಲಿವೆ. ಹಳೆಯ ಕಟ್ಟಡಗಳನ್ನು ದುರಸ್ತಿ ಮಾಡಿ ಅವುಗಳ ಶೈಲಿ ಮುಂದಿನ ಪೀಳಿಗೆಯವರ ಅರಿವಿಗೆ ಬರುವಂತೆ ಉಳಿಸುವ ಕೆಲಸವನ್ನು ಈ ದೇಶದವರು ಮಾಡುತ್ತಿದ್ದಾರೆ. ಇಲ್ಲಿನ ಮುಖ್ಯ ಬೀದಿಯಲ್ಲಿನ ಆಕರ್ಷಕ ಹಳೆಯ ಕಟ್ಟಡಗಳಲ್ಲಿ ಕಲಾ ಗ್ಯಾಲರಿ, ಲೇಖನ ಸಾಮಗ್ರಿ, ಬಟ್ಟೆ, ಪುಸ್ತಕಗಳ ಅಂಗಡಿ, ಪಬ್, ರೆಸ್ಟೋರೆಂಟ್‌ಗಳಿದ್ದು, ಊಟಕ್ಕೆ ಇಳಿದ ಪ್ರವಾಸಿಗರು ತಮಗಿಷ್ಟ ಅನಿಸಿದ್ದನ್ನು ಖರೀದಿಸಿ ಮುಂದಕ್ಕೆ ಪ್ರಯಾಣ ಬೆಳೆಸುತ್ತಾರೆ.

ಇಲ್ಲಿನ ಬ್ಯೂಟಿಪಾರ್ಲರ್‌ವೊಂದರ ಹೆಸರು ʻರೂಬಿ ಮನೆʼ. ಇದನ್ನು ನಾನು ಅನುವಾದಿಸಿದ್ದಲ್ಲ. ಅದರ ಹೆಸರೇ ಹಾಗೆ. ರಸ್ತೆಗೆ ಮುಖ ಮಾಡಿದ ಇದರ ಗೋಡೆ ಗಾಜಿನದ್ದು ಗೋಡೆಯ ಉದ್ದಕ್ಕೂ ಸುಂದರ ಹೂಗಳ ಕುಂಡ. ಒಳಗೆ ಅಪ್ಪಟ ಚೆಲುವೆಯರು. ಆ ಕಟ್ಟಡದ ಮುಂದಿನ ಕಟ್ಟಡ ಕಲಾ ಗ್ಯಾಲರಿಯಂಥ ರೆಸ್ಟೋರೆಂಟ್ ಮತ್ತು ಬಾರ್ ಆಗಿತ್ತು.

ಈಗ ಬೆಸಿಂಗ್‌ಸ್ಟೋಕ್ ಕಾಲುವೆ ಪ್ರಯಾಣ

ಫಾರ್ನ್‌ಹ್ಯಾಮ್‌ನಿಂದ ಬಸ್ಸಿನಲ್ಲಿ ಹ್ಯಾಂಪ್‌ಶೈರ್‌ನ ಬೆಸಿಂಗ್ ಸ್ಟೊಕ್ ಕಾಲುವೆಯ ಬಳಿ ಬಂದಾಗ ದೋಣಿಯೊಂದು ಒಂದು ಯಾನ ಮುಗಿಸಿ ನಮಗಾಗಿ ಕಾಯುತ್ತಿತ್ತು. ಅಲ್ಲಿ ದೋಣಿ ಪ್ರವೇಶಿಸಿದ ನಮಗೆ ಸಂಕ್ಷಿಪ್ತವಾಗಿ ದೋಣಿ ಪ್ರಯಾಣದ ಇತಿಹಾಸ ಮತ್ತು ದಾರಿಯಲ್ಲಿ ನೋಡಬೇಕಾದುದನ್ನು ವಿವರಿಸಿದರು.

Untitled design (1)

ಈ ಕಾಲುವೆಯ ಉದ್ದ 32 ಮೈಲಿ. 200 ವರ್ಷಗಳ ಹಿಂದೆ ರೈತರು ಕಾಳುಕಡಿಯನ್ನು ಲಂಡನ್‌ಗೆ ಸಾಗಿಸಲು ಇದನ್ನು ನಿರ್ಮಿಸಲಾಗಿತ್ತು. ಆದರೆ, ಈ ಉದ್ದೇಶ ಮಾತ್ರ ಈಡೇರಲಿಲ್ಲ. ವಿಹಾರಕ್ಕೆ ಬಳಸಿದರೆ ಹೇಗೆ ಎಂಬ ಆಲೋಚನೆ ಬಂದು ಇದನ್ನು ದೋಣಿ ವಿಹಾರಕ್ಕೆ ಬಳಸಲಾಯಿತು. 36 ವರ್ಷಗಳ ಕಾಲ ಒಂದೇ ದೋಣಿಯನ್ನು ಪ್ರವಾಸಿಗರ ಪ್ರಯಾಣಕ್ಕೆ ಬಳಸಿ 2012ರಿಂದ ಹೊಸ ದೋಣಿಯನ್ನು ಪ್ರಯಾಣಕ್ಕೆ ಬಳಸಲು ಆರಂಭಿಸಿದರು. 50 ಜನರು ಕುಳಿತು ಪ್ರಯಾಣಿಸಬಹುದಾದ ಈ ದೋಣಿ ಪ್ರಯಾಣದ ಉಸ್ತುವಾರಿ ಬೆಸಿಂಗ್‌ಸ್ಟೋಕ್ ಕೆನಾಲ್ ಸೊಸೈಟಿಗೆ ಸೇರಿದೆ. ಮದುವೆಯ ಬೀಗರೂಟ, ಹುಟ್ಟುಹಬ್ಬದ ಪಾರ್ಟಿ, ಮತ್ತಿತರ ಸಣ್ಣಪುಟ್ಟ ಪಾರ್ಟಿಗಳಿಗೆ ಬಳಸಬಹುದು ಎಂದು ತಿಳಿಸಿದರು. ದೋಣಿಯಲ್ಲಿ ಶೌಚಾಲಯ ವ್ಯವಸ್ಥೆಯೂ ಇದೆ. ಈ ದೋಣಿ ಪ್ರಯಾಣ ಆರಂಭವಾದ ದಿನದಿಂದ ಇಲ್ಲಿವರೆಗೆ ಗಳಿಸಿದ ಆದಾಯ ದಶ ಲಕ್ಷ ಪೌಂಡ್. ಈ ಹಣವನ್ನು ಕಾಲುವೆಯ ದುರಸ್ತಿ, ಹೊಸ ದೋಣಿಯ ಖರೀದಿ ಹಾಗೂ ಮತ್ತಿತರ ಕಾರಣಗಳಿಗೆ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಈ ಸೊಸೈಟಿ ಸ್ವಯಂ ಸೇವಕರದ್ದು. ನೌಕರರು ಮಾತ್ರ ಸಂಬಳ ತೆಗೆದುಕೊಂಡು ದುಡಿಯುತ್ತಾರೆ. ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದು, ಇದು ಈ ದೋಣಿ ವಿಹಾರ ಮತ್ತು ಸೊಸೈಟಿಯ ಆಗುಹೋಗುಗಳ ವರದಿಗಳ ಪ್ರಕಟಣೆಗೆ ಮೀಸಲಾಗಿದೆ. ಪ್ರವಾಸಿಗರಿಗೆ ಅಗತ್ಯ ಇರಲಿ, ಇಲ್ಲದಿರಲಿ ಈ ಮಾಹಿತಿ ಅವರು ಕೊಟ್ಟೇ ಕೊಡುತ್ತಾರೆ.

ಇದನ್ನೂ ಓದಿ: ಚಾರ್ಜ್ ವಿಧಿಸಲು ಕೋರಿ ಬೃಹತ್ ಬೆಂಗಳೂರು ಹೊಟೇಲ್ ಸಂಘಕ್ಕೆ ಪತ್ರ!

ಪ್ರವಾಸಿ ದೋಣಿಯಲ್ಲಿ ಪ್ರವಾಸಿಗರಿಗೆ ಕಾಫಿ, ಟೀ, ಕೇಕ್ ಮತ್ತು ಬಿಸ್ಕತ್ತು ಖರೀದಿಗೆ ಅವಕಾಶವಿದೆ. ಮೊದಲೇ ತಿಳಿಸಿದರೆ ಇತರ ತಿಂಡಿಗಳನ್ನು ತಯಾರಿಸಿ ಕೊಡುತ್ತಾರೆ. ಇಲ್ಲಿ ಬಾರ್ ಕೂಡ ಇದೆ.

ಈ ದೋಣಿಯಲ್ಲಿ ಎರಡು ಗಂಟೆ ಐವತ್ತು ನಿಮಿಷದ ಪ್ರಯಾಣ, ಕಾಲುವೆಯಲ್ಲಿ ನೀರಿನ ಮಟ್ಟ ಕಡಿಮೆ ಇದ್ದರೆ ವಿಸ್ತರಿಸುತ್ತಾರೆ. ಮನರಂಜನೆಗೆ ಕಾರ್ಯಕ್ರಮ ಕೂಡ ಏರ್ಪಡಿಸುತ್ತಾರೆ. ದೋಣಿ ಪ್ರಯಾಣ ಮತ್ತು ಪಾರ್ಟಿಗಳಿಗೆ ಮುಂದಾಗಿಯೇ ಹಣ ಪಾವತಿ ಮಾಡಿ ಕಾದಿರಿಸಬೇಕು. ಪಾರ್ಟಿಗಳಿಗೆ ಹೊರಗಿನಿಂದ ತಿನಿಸುಗಳನ್ನು ತರಬಹುದು. ದೋಣಿಯನ್ನು ತಮ್ಮ ಇಷ್ಟದಂತೆ ಅಲಂಕರಿಸಬಹುದು. ಮೇಜು, ಕುರ್ಚಿಗಳನ್ನು ತಮ್ಮ ಇಷ್ಟದಂತೆ ಇರಿಸಬಹುದು.

ದೋಣಿ ಸಾಗಿದಂತೆ ಕಾಲುವೆಯ ಇಕ್ಕೆಲದಲ್ಲಿ ಕಿಂಗ್‌ಫಿಶರ್, ಬಾತುಕೋಳಿ, ಹೆರಾನ್ ಹಕ್ಕಿಗಳು ಕಾಣಿಸಿಕೊಂಡವು. ವಿಶ್ವದಲ್ಲಿ ಮೂರು ಸಾವಿರ ಡ್ರಾಗನ್ ಪ್ಲೆಮಿಂಗೊಗಳ ತಳಿಗಳಿವೆ. ಅವುಗಳಲ್ಲಿ ಬ್ರಿಟನ್‌ವೊಂದರಲ್ಲಿಯೇ 45 ತಳಿಗಳಿವೆ. ಅದರಲ್ಲೂ ಈ ಕಾಲುವೆಯ ಉದ್ದಕ್ಕೂ 25 ತಳಿಗಳಿವೆ ಎನ್ನುತ್ತದೆ ಕಾಲುವೆಯ ಪ್ರಚಾರ ಸಾಮಗ್ರಿ. ಕಾಲುವೆ ಎಡಬದಿಯಲ್ಲಿ ಸಾಲು ಮನೆಗಳಿವೆ. ಇದರ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸೊಸೈಟಿಗೆ 2018ರಲ್ಲಿ ರಾಣಿಯವರ ಸ್ವಯಂ ಸೇವಾ ಪ್ರಶಸ್ತಿಯನ್ನು ಕೆಂಟ್‌ನ ಡ್ಯೂಕ್ ಅವರು ನೀಡಿ ಗೌರವಿಸಿದ್ದಾರೆ. ಎಲ್ಲವನ್ನು ನೋಡಿ ಅನುಭವಿಸಿ ನಾವಂತೂ ಬಂದಾಯಿತು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...