Wednesday, February 11, 2026
Wednesday, February 11, 2026

ಮೈ ಚಳಿ ಬಿಡಿಸಿದ ವಿಮಾನ ಯಾನ

ನಾನು ನೋಡಿರುವ ವಿಮಾನ ನಿಲ್ದಾಣಗಳಲ್ಲಿ ಅತಿ ಚಿಕ್ಕದಾದದ್ದು ಇದಾಗಿತ್ತು. ಆಮೇಲೆ ತಿಳಿದದ್ದು, ಪೋಖ್ರದಿಂದ ಜೋಮ್ಸನ್‌ವರೆಗಿನ ಪ್ರಯಾಣವು ಅತ್ಯಂತ ಅಪಾಯಕಾರಿ ವಿಮಾನಯಾನಗಳ ಪಟ್ಟಿಯಲ್ಲಿ ಸೇರಿದೆ ಎನ್ನುವ ವಿಚಾರ. ಈ ಮಾರ್ಗದಲ್ಲಿ ಚಿಕ್ಕ ವಿಮಾನಗಳು ಮಾತ್ರವೇ ಸಂಚರಿಸುತ್ತವೆ. ಹವಾಮಾನ ಅನುಕೂಲಕರವಾಗಿದ್ದಾಗ ಬೆಳಗ್ಗೆ 6ರಿಂದ 10ವರೆಗೆ ಮಾತ್ರ ವಿಮಾನ ಸಂಚಾರಕ್ಕೆ ಅವಕಾಶವಿರುತ್ತದೆ.

  • ಮಂಜುನಾಥ ಡಿ. ಎಸ್.

ಹಿಮಾಲಯದ ಹೃದಯಭಾಗದಲ್ಲಿ ನೆಲೆಗೊಂಡಿರುವ, ನೇಪಾಳದಲ್ಲಿನ ಜೋಮ್ಸಮ್ ವಿಮಾನ ನಿಲ್ದಾಣವು ಕಿರಿದೂ, ಅನನ್ಯವೂ ಮತ್ತು ರಮಣೀಯವೂ ಆಗಿದೆ. ಹಿಂದೊಮ್ಮೆ ಕಿಂಗ್ಡಮ್ ಆಫ್ ಲೋ ಎಂದು ಕರೆಯಲ್ಪಡುತ್ತಿದ್ದ ಉತ್ತರ ಮುಸ್ತಾಂಗ್ ಪ್ರದೇಶಕ್ಕೆ ಭೇಟಿ ನೀಡುವ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಈ ವಿಮಾನ ನಿಲ್ದಾಣ ಮಹಾದ್ವಾರದಂತಿದೆ. ಸುಮಾರು 9000 ಅಡಿಗಳಷ್ಟು ಎತ್ತರದಲ್ಲಿರುವ ಇಲ್ಲಿ ವಿಮಾನಗಳನ್ನು ಇಳಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಇದು ವಿಮಾನ ಚಾಲಕರ ನೈಪುಣ್ಯತೆಯೊಡನೆ ಅವರ ಮನೋಸ್ಥೈರ್ಯವನ್ನೂ ಅಪೇಕ್ಷಿಸುತ್ತದೆ.

ಇದನ್ನೂ ಓದಿ: ಅಂಕೊರ್ ವಾಟ್ ಟೆಂಪಲ್ಸ್

ಸುಮಾರು 4600 ಅಡಿಗಳಷ್ಟು ಎತ್ತರದ ಪ್ರದೇಶದಲ್ಲಿರುವ ಮತ್ತೊಂದು ಪುಟ್ಟ ವಿಮಾನ ನಿಲ್ದಾಣ ಪೋಖ್ರ. ಇಲ್ಲಿಂದ ಜೋಮ್ಸಮ್ ವರೆಗಿನ 160 ಕಿಲೋಮೀಟರ್ ದೂರದ ಇಪ್ಪತ್ತೈದು-ಮೂವತ್ತು ನಿಮಿಷಗಳ ಪ್ರಯಾಣ ಅದ್ಭುತ ಅನುಭವ ನೀಡಿತು. ಒಂದೆಡೆ ಧವಳಗಿರಿ ಮತ್ತು ಅನ್ನಪೂರ್ಣ ಸೇರಿದಂತೆ ವಿಶ್ವದ ಅತಿ ಎತ್ತರದ ಹಲವು ಹಿಮಪರ್ವತಗಳ ದರ್ಶನ ಭಾಗ್ಯ ಲಭಿಸಿದರೆ ಇನ್ನೊಂದೆಡೆ ವಿಶ್ವದಲ್ಲೇ ಅತಿ ಆಳವಾದ ಕಾಲಿ ಗಂಡಕಿ ಕಣಿವೆಯನ್ನು ಕಣ್ತುಂಬಿಕೊಳ್ಳುವ ಅವಕಾಶವೂ ದೊರಕಿತು. ಮೈಮರೆತು ಮನದುಂಬಿಸಿಕೊಂಡ ಬಹುವರ್ಣಗಳ ವೈವಿಧ್ಯಮಯ ದೃಶ್ಯಗಳನ್ನು ಪದಗಳಲ್ಲಿ ವರ್ಣಿಸುವುದು ಕಷ್ಟಕರ.

Untitled design (37)

ಪ್ರಕೃತಿಯ ಈ ಅಗಾಧತೆಯ ಮುಂದೆ ಮನುಜ ಕುಬ್ಜನಾಗಿಬಿಡುತ್ತಾನೆ. ಆಳವಾದ ಕಣಿವೆಯ ಮೇಲೆ ಸಾಗುವಾಗ ವಿಮಾನ ಸ್ವಲ್ಪ ಹೊಯ್ದಾಡಿದರೂ ಭೀತಿ ಮನವನ್ನಾವರಿಸುತ್ತದೆ; ಇದೇ ಅಂತಿಮ ಪಯಣವಿರಬಹುದೆನಿಸುತ್ತದೆ; ಆಪ್ತೇಷ್ಟರರಿಗೆ ಅಂತಿಮ ದರ್ಶನವೂ ಸಿಗಲಾರದೆಂಬ ಕಲ್ಪನೆಯಿಂದ ಚಳಿಯಲ್ಲೂ ಮೈ ಬೆವರುತ್ತದೆ; ವೈರಾಗ್ಯ ಮೂಡುತ್ತದೆ; ನಮಗರಿವಿಲ್ಲದೆಯೇ ಮನಸ್ಸು ಭಗವಂತನಲ್ಲಿ ಮೊರೆಯಿಡುತ್ತದೆ, ಅಪಾಯದಿಂದ ಪಾರು ಮಾಡುವಂತೆ ಪ್ರಾರ್ಥಿಸುತ್ತದೆ.

ಹೀಗೆ ಗಂಡಾಂತರದಿಂದ ಪಾರಾದ ನೆಮ್ಮದಿಯಲ್ಲಿ, ಸನಿಹವಾಗುತ್ತಿದ್ದ ಹಿಮಾವೃತ ಪರ್ವತ ಶಿಖರಗಳನ್ನು ನೋಡಿ ಆನಂದಿಸುತ್ತಿರುವಾಗಲೇ ಗಮ್ಯಸ್ಥಾನ ಸಮೀಪಿಸುತ್ತಿದ್ದ ಸೂಚನೆ ಕಂಡಿತು. ಕ್ಷಣಮಾತ್ರದಲ್ಲಿ ವಿಮಾನವು ಎಡಕ್ಕೆ ತಿರುಗಿ ನೆಲದೆಡೆಗೆ ಧಾವಿಸಿದಾಗ ಹೃದಯ ಬಾಯಿಗೆ ಬಂದ ಅನುಭವವಾಯಿತು. ಈ ಅನಿರೀಕ್ಷಿತ ಘಟನೆಯಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು. ವಿಮಾನ ಸುರಕ್ಷಿತವಾಗಿ ಇಳಿಯಿತು. ನಂತರ ಹಿನ್ನೋಟ ಹರಿಸಿದಾಗ ಈ ಸಾಹಸಮಯ ಪಯಣ ಅಭೂತಪೂರ್ವ ಎನಿಸಿತು.

ನಾನು ನೋಡಿರುವ ವಿಮಾನ ನಿಲ್ದಾಣಗಳಲ್ಲಿ ಅತಿ ಚಿಕ್ಕದಾದದ್ದು ಇದಾಗಿತ್ತು. ವಿಮಾನ ನಿಲ್ದಾಣದಿಂದ ಹೊರಬರುವ ಮುನ್ನ ಪುಸ್ತಕವೊಂದರಲ್ಲಿ ಎಲ್ಲ ಪ್ರಯಾಣಿಕರ ವಿವರಗಳನ್ನು ಬರೆಸಿಕೊಂಡಿದ್ದು ವಿಶೇಷವೆನಿಸಿತು. ಈ ವ್ಯವಸ್ಥೆಯನ್ನು ನಾನು ಬೇರೆಲ್ಲೂ ನೋಡಿರಲಿಲ್ಲ. ತುಸು ದೂರದಲ್ಲಿದ್ದ ದ್ವಾರದಿಂದ ನಿರ್ಗಮಿಸುತ್ತಿದ್ದಂತೆ ಬೌದ್ಧ ವಾಸ್ತುಶಿಲ್ಪದ ಕಮಾನು ಸ್ವಾಗತಿಸಿತು. ಅದು ಜೋಮ್ಸಮ್ ಗ್ರಾಮದ ಮುಖ್ಯ ಬೀದಿಗೆ ತೆರೆದುಕೊಂಡಿತು.

Untitled design (36)

ಪೋಖ್ರದಿಂದ ಜೋಮ್ಸನ್‌ವರೆಗಿನ ಪ್ರಯಾಣವು ಅತ್ಯಂತ ಅಪಾಯಕಾರಿ ವಿಮಾನಯಾನಗಳ ಪಟ್ಟಿಯಲ್ಲಿ ಸೇರಿದೆಯಂತೆ. ಈ ಮಾರ್ಗದಲ್ಲಿ ಚಿಕ್ಕ ವಿಮಾನಗಳು ಮಾತ್ರವೇ ಸಂಚರಿಸುತ್ತವೆ. ಹವಾಮಾನ ಅನುಕೂಲಕರವಾಗಿದ್ದಾಗ ಬೆಳಗ್ಗೆ 6ರಿಂದ 10ವರೆಗೆ ಮಾತ್ರ ವಿಮಾನ ಸಂಚಾರಕ್ಕೆ ಅವಕಾಶವಿರುತ್ತದೆ. ಈ ಪ್ರಯಾಣಕ್ಕೆ ವಿಶೇಷ ಅನುಮತಿ ಅಗತ್ಯ.

ಒಟ್ಟಾರೆ ಹೇಳಬೇಕೆಂದರೆ, ನನ್ನ ಪಾಲಿಗೆ ಇದು ಕೇವಲ ಪಯಣವಾಗಿರಲಿಲ್ಲ; ಅಲ್ಪಾವಧಿಯಲ್ಲಿ ಹಿಮಾಲಯದ ವೈವಿಧ್ಯಮಯ ಭೂದೃಶ್ಯಗಳ ಅಂದ ಆಸ್ವಾದಿಸಿದ ರೋಮಾಂಚಕ ಹಾಗು ಅವಿಸ್ಮರಣೀಯ ಯಾನವಾಗಿತ್ತು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...