ಪ್ರತಿ ಮುಖವಾಡಕ್ಕೂ ಒಂದೊಂದು ಹಿಂದಿನ ಕಥೆಯಿದೇ…
ಶ್ರೀಲಂಕಾದ ಬಹುತೇಕ ಎಲ್ಲ ಭಾಗಗಳಲ್ಲಿ ಇವು ಸ್ಮರಣಿಕೆಗಳ ರೂಪದಲ್ಲಿ ಮಾರಾಟಕ್ಕೆ ಲಭ್ಯವಿದೆ. 'ಲಕ್ಸಲಾ' ಎಂಬುದು ಇಲ್ಲಿನ ಪ್ರಮುಖವಾದ ಸರಕಾರಿ ಸ್ವಾಮ್ಯದ ಸ್ಮರಣಿಕೆಗಳ ಅಂಗಡಿಯಾಗಿದ್ದು, ಇವರಲ್ಲಿ ಉತ್ತಮ ಗುಣಮಟ್ಟದ, ವಿವಿಧ ಬಣ್ಣ ಹಾಗೂ ಗಾತ್ರದ ರಾಕ್ಷ ಮುಖವಾಡಗಳು ಲಭ್ಯವಿವೆ. ಆಸಕ್ತರು ಅರಿಯಪಾಲದ ಮುಖವಾಡಗಳ ಸಂಗ್ರಹಾಲಯ ಅಥವಾ ಅಂಬಲಂಗೋಡಾದ ಕಾರ್ಯಾಗಾರಕ್ಕೆ ಭೇಟಿ ನೀಡಬಹುದು.
- ಮೇಘಾ ಹೆಗಡೆ (ಯುಎಇ)
ದಕ್ಷಿಣ ಭಾರತದ ಯಕ್ಷಗಾನ, ಹುಲಿವೇಷ, ಭೂತ ಕೋಲ, ಕಥಕ್ಕಳಿ ಮುಂತಾದವುಗಲ್ಲಿ ನೃತ್ಯ ಹಾಗೂ ಸಂಗೀತವನ್ನ ಹೊರತುಪಡಿಸಿ ಕಂಡುಬರುವ ಇನ್ನೊಂದು ಸಾಮಾನ್ಯ ಅಂಶ ಎಂದರೆ ಪ್ರಖರವಾದ ಬಣ್ಣಗಳು. ಇಂಥ ಬಣ್ಣಗಳಿಂದ ಬರೆದ ಮುಖ ಚಿತ್ರಣ ಹಾಗೂ ಮುಖವಾಡಗಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವ ಹೊಂದಿದ್ದು, ಇವುಗಳ ಮೂಲಕ ದೇವರು, ದಾನವರು ಅಥವಾ ವೀರ ನಾಯಕರುಗಳನ್ನು ಪ್ರಸ್ತುತಪಡಿಸಲಾಗುತ್ತದೆ. ದಕ್ಷಿಣ ಭಾರತದಿಂದ ಹಲವು ವಿಷಯಗಳಿಂದ ಪ್ರಭಾವಿತಗೊಂಡ ಶ್ರೀಲಂಕಾದಲ್ಲಿನ ಒಂದು ವೈಶಿಷ್ಟ್ಯ ಎಂದರೆ ಅಲ್ಲಿನ 'ರಾಕ್ಷ ಮುಖವಾಡ'. ರಾಕ್ಷ ಎಂದರೆ 'ದೈತ್ಯ' ಅಥವಾ 'ದಾನವ' ಎಂಬ ಅರ್ಥವಿದ್ದು, ರಾಕ್ಷ ಮುಖವಾಡವು ಸಿಂಹಳೀಯ ಸಂಸ್ಕೃತಿಯ ಒಂದು ಪ್ರಮುಖ ಭಾಗವಾಗಿದೆ.
ಶಕ್ತಿ ಸ್ವರೂಪದ ಪ್ರಾಮುಖ್ಯತೆ
ಉಬ್ಬಿದ ಕಪ್ಪು ಕಣ್ಣುಗುಡ್ಡೆ, ಹೊರಚಾಚಿದ ನಾಲಗೆಯಂಥ ಭಯಾನಕ ಲಕ್ಷಣಗಳ ಈ ಮುಖವಾಡಗಳು ದುಷ್ಟ ಶಕ್ತಿಯನ್ನು ದೂರವಿಡುತ್ತವೆ ಎಂಬ ನಂಬಿಕೆಯಿದೆ. 'ಕೋಲಂ ವಿಧಿ' ಎಂಬುದು ದುಷ್ಟ ಶಕ್ತಿಯನ್ನ ನಿವಾರಿಸುವ ಒಂದು ಬಗೆಯ ಜಾನಪದ, ಸಾಂಸ್ಕೃತಿಕ ನೃತ್ಯ ಕಲೆಯಾಗಿದ್ದು, ಇದರ ಅಂತಿಮ ಭಾಗದಲ್ಲಿ ರಾಕ್ಷ ಮುಖವಾಡವು ಅತೀ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಕಲಾವಿದರು ಬಣ್ಣ ಬಣ್ಣದ ಉಡುಪು ಧರಿಸಿ ದೇವ, ದಾನವರನ್ನು, ಪೌರಾಣಿಕ ಘಟನಾವಳಿಗಳನ್ನು ಕಲೆಯ ಮೂಲಕ ಸಾದರಸುತ್ತಾರೆ. ಅಂತಿಮ ಹಂತದಲ್ಲಿ ಬರುವ ರಾಕ್ಷ ಮುಖವಾಡಧಾರಿಗಳು ದುಷ್ಟ ಶಕ್ತಿಯ ಮೇಲಿನ ಶಿಷ್ಟ ಶಕ್ತಿಯ ವಿಜಯವನ್ನು ಪ್ರತಿನಿಧಿಸುತ್ತಾರೆ.

ರಾಕ್ಷ ಮುಖವಾಡದ ವಿಧಗಳು
ಪುರಾಣಗಳ ಪ್ರಕಾರ ಶ್ರೀಲಂಕಾವನ್ನು ದಾನವರು ಆಳುತ್ತಿದ್ದು, ಅವರು ಒಟ್ಟೂ 24 ರೂಪಗಳನ್ನು ಪಡೆಯಬಲ್ಲರಾಗಿದ್ದರು. ಇವುಗಳಲ್ಲಿ ಕೆಲವೇ ರೂಪಗಳನ್ನು ರಾಕ್ಷ ಮುಖವಾಡದ ಮೂಲಕ ಇಂದಿಗೂ ಜೀವಂತಗೊಳಿಸಲಾಗುತ್ತಿದೆ. ಈ ಮುಖವಾಡಗಳು ವಿವಿಧ ಸ್ವರೂಪಗಳನ್ನು ಮಾತ್ರ ಅಲ್ಲದೇ ತಮ್ಮದೇ ಆದ ಅರ್ಥ ಹಾಗೂ ಉದ್ದೇಶಗಳನ್ನು ಹೊಂದಿವೆ. ಉದಾಹರಣೆಗೆ ಕೆಂಪು ಬಣ್ಣದ ನಾಗ ರಾಕ್ಷ ಶತ್ರುಗಳನ್ನು ಬಂಧಿಸುವ ಸಂಕೇತವಾಗಿದ್ದರೆ, ಗುರುಲು (ಗರುಡ) ರಾಕ್ಷ ದುಷ್ಟ ಶಕ್ತಿಯ ವಿರುದ್ಧ ಹೋರಾಡಿ ರಕ್ಷಿಸುವ, ಗಿನಿ (ಅಗ್ನಿ) ರಾಕ್ಷ ಕೋಪ ವ್ಯಕ್ತಪಡಿಸುವ, ನೀಲಿ ಮಯೂರ ರಾಕ್ಷ ಶಾಂತಿಯನ್ನು ಸಾರುವ ಸಂಕೇತಗಳಾಗಿವೆ. ಹಲವು ಹಳ್ಳಿಗಳಲ್ಲಿ ಇಂದಿಗೂ ಈ ಮುಖವಾಡಗಳನ್ನು ಪರಂಪರೆಯಂತೆ ಬಳಸಿಕೊಳ್ಳಲಾಗುತ್ತಿದೆ. ಆದರೂ ಆಧುನಿಕತೆಗೆ ಸಿಕ್ಕಿ ಜನರ ನಂಬಿಕೆ ಹಾಗೂ ಜೀವನಶೈಲಿಗಳು ಬದಲಾಗಿರುವುದರಿಂದ ಈ ಮುಖವಾಡಗಳ ಪಾರಂಪರಿಕ ಬಳಕೆ ಕುಗ್ಗಿದೆ. ಬದಲಾಗಿ, ರಾಕ್ಷ ಮುಖವಾಡಗಳು ಸಂಗ್ರಹಾಲಯ, ಕಾರ್ಯಾಗಾರ, ಕಲಾ ಪ್ರದರ್ಶನಗಳ ಮೂಲಕ ಪ್ರವಾಸಿಗರನ್ನು ಸೆಳೆಯುವ ಪ್ರವಾಸೋದ್ಯಮದ ಪ್ರಮುಖ ಭಾಗವಾಗಿ ಮಾರ್ಪಟ್ಟಿವೆ. ಇದರಿಂದಾಗಿ ಕಲೆಯ ಸ್ವರೂಪ, ಉದ್ದೇಶ ಬದಲಾದರೂ, ಕಲಾವಿದರಿಗೆ ಹೊಸ ಅವಕಾಶ ಒದಗಿದಂತಾಗಿದೆ. ಕೆಲ ಕಲಾವಿದರು ಗೃಹಾಲಂಕಾರ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಾಗಿ ಈ ವೃತ್ತಿಯಲ್ಲಿ ತೊಡಗಿದ್ದರೆ, ಇನ್ನುಳಿದವರು ಧಾರ್ಮಿಕ ಆಚರಣೆ ಹಾಗೂ ಪರಂಪರೆಯ ಮುಂದುವರಿಕೆಗೆ ಪ್ರಯತ್ನಿಸುತ್ತಿದ್ದಾರೆ.

ಎಲ್ಲೆಲ್ಲಿ ಕಾಣಬಹುದು?
ಶ್ರೀಲಂಕಾದ ಬಹುತೇಕ ಎಲ್ಲ ಭಾಗಗಳಲ್ಲಿ ಇವು ಸ್ಮರಣಿಕೆಗಳ ರೂಪದಲ್ಲಿ ಮಾರಾಟಕ್ಕೆ ಲಭ್ಯವಿದೆ. 'ಲಕ್ಸಲಾ' ಎಂಬುದು ಇಲ್ಲಿನ ಪ್ರಮುಖವಾದ ಸರಕಾರಿ ಸ್ವಾಮ್ಯದ ಸ್ಮರಣಿಕೆಗಳ ಅಂಗಡಿಯಾಗಿದ್ದು, ಇವರಲ್ಲಿ ಉತ್ತಮ ಗುಣಮಟ್ಟದ, ವಿವಿಧ ಬಣ್ಣ ಹಾಗೂ ಗಾತ್ರದ ರಾಕ್ಷ ಮುಖವಾಡಗಳು ಲಭ್ಯವಿವೆ. ಆಸಕ್ತರು ಅರಿಯಪಾಲದ ಮುಖವಾಡಗಳ ಸಂಗ್ರಹಾಲಯ ಅಥವಾ ಅಂಬಲಂಗೋಡಾದ ಕಾರ್ಯಾಗಾರಕ್ಕೆ ಭೇಟಿ ನೀಡಬಹುದು. ಈ ಕಾರ್ಯಾಗಾರದಲ್ಲಿ ಮುಖವಾಡ ತಯಾರಿಕೆಯನ್ನು ನೇರವಾಗಿ ನೋಡಿ ಕಲಿಯಬಹುದು. ಹತ್ತಿರದಲ್ಲೇ ಚಿಕ್ಕ ಅಥಿತಿ ಗೃಹಗಳಿದ್ದು ಸಾಂಸ್ಕೃತಿಕ ಪ್ರವಾಸದ ವ್ಯವಸ್ಥಾಪಕರು ಗೈಡೆಡ್ ಟೂರ್‌ಗಳನ್ನ ಏರ್ಪಡಿಸುತ್ತಾರೆ .
ಅಲೌಕಿಕ ಶಕ್ತಿಗಳಿಗೆ ಮುಖ ನೀಡುವ ಈ ಮುಖವಾಡಗಳು ಕಲೆ ಹಾಗೂ ಆಧ್ಯಾತ್ಮಿಕತೆಯನ್ನ ಒಟ್ಟುಗೂಡಿಸುವುದರೊಂದಿಗೆ ಸಿಂಹಳೀಯರ ಸಾಂಸ್ಕೃತಿಕ ಕಲೆ ಮತ್ತು ಧಾರ್ಮಿಕ ಆಚರಣೆಗಳನ್ನು ಜಗತ್ತಿಗೆ ಅನಾವರಣಗೊಳಿಸುತ್ತವೆ. ಪ್ರವಾಸೋದ್ಯಮ ಇಲಾಖೆಯ ಪ್ರಯತ್ನದಿಂದ ಇಂಥ ಕಲಾ ಪರಂಪರೆ ಉಳಿದು ಮುಂದಿನ ತಲೆಮಾರುಗಳಿಗೂ ಹಸ್ತಾಂತರವಾದರೆ ಕಲಾವಿದರ ನಿಷ್ಠೆ ಮತ್ತು ಶ್ರಮ ಸಾರ್ಥಕವಾದಂತೆ.