• ಬನವಾಸಿ ಕೃಷ್ಣಮೂರ್ತಿ

ಎರಡು ತಿಂಗಳ ಹಿಂದೆ ನೇಸರ ಟ್ರಾವಲ್ಸ್ ಆಯೋಜಿಸಿದ್ದ ದುಬೈ-ಅಬುದಾಬಿ ಪ್ರವಾಸಕ್ಕೆ ನಾನು ಕುಟುಂಬ ಸಮೇತ ಹೋಗಿ ಬಂದೆ. ಪ್ರವಾಸದ ಐಟಿನರಿ ಕೈಗೆ ಸಿಕ್ಕ ಕೂಡಲೇ ನಾನು ಮೊದಲು ಕಣ್ಣು ಹಾಯಿಸುವುದು ಈ ಬಾರಿಯ ವಿಶೇಷ ಏನು ಎಂದು. ಅದರಂತೆ ಈ ಪ್ರವಾಸದಲ್ಲಿ ಡೆಸರ್ಟ್ ಸಫಾರಿಯ ಬಗ್ಗೆ ನನಗೆ ಸಾಕಷ್ಟು ಕುತೂಹಲವಿತ್ತು.

ಇದನ್ನೂ ಓದಿ: ಇದು ಜಗತ್ತಿನ ಅತಿದೊಡ್ಡ ಹೂಗಳ ಹಬ್ಬ

ನಾವು ಉಳಿದುಕೊಂಡಿದ್ದ ಹೊಟೇಲ್‌ನಿಂದ ಸುಮಾರು 40 ಕಿಮೀ ದೂರದಲ್ಲಿ ಡೆಸರ್ಟ್ ಸಫಾರಿ ಇತ್ತು. ಅಲ್ಲಿಗೆ ಪ್ರತ್ಯೇಕ ವಾಹನಗಳಲ್ಲಿ ತೆರಳಿದೆವು. ದುಬೈ ಮಹಾನಗರ ದೂರವಾಗಿ ಮರಳುಗಾಡು ಹತ್ತಿರವಾಗುತ್ತಿದ್ದಂತೆ ನಾವು ಎತ್ತ ಸಾಗುತ್ತಿದ್ದೇವೆ ಎಂಬುದರ ಕಲ್ಪನೆಯೂ ನಮಗಿರಲಿಲ್ಲ. ಎಲ್ಲಿ ನೋಡಿದರೂ ಮರಳೋ ಮರಳು. ಅದುವರೆಗೆ ಕೇವಲ ಟಿವಿಯಲ್ಲಿ, ಚಲನಚಿತ್ರಗಳಲ್ಲಿ ನೋಡುತ್ತಿದ್ದ ಅರೇಬಿಯನ್ ಮರಳುಗಾಡನ್ನು ಪ್ರತ್ಯಕ್ಷವಾಗಿ ಕಾಣುವಂತಾಯಿತು.

Untitled design - 2026-05-08T143503.676

ಆ ಮರಳುಗಾಡಿನಲ್ಲಿ ಶಬ್ದಮಾಡತ್ತಾ ಚಲಿಸುತ್ತಿದ್ದ ಬೈಕ್‌ಗಳು, ಹುಚ್ಚು ಸ್ಪೀಡ್‌ನಲ್ಲಿ ಸಾಗುತ್ತಿದ್ದ ದೊಡ್ಡ ದೊಡ್ಡ ಜೀಪ್‌ಗಳು, ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ ಒಂಟೆಗಳು, ಇವನ್ನೆಲ್ಲಾ ನೋಡುತ್ತಾ ಸಾಗುತ್ತಿದ್ದಾಗ ನಮ್ಮ ಜೀಪ್ ಒಂದು ವಿಶಾಲವಾದ ಟೆಂಟ್ ಇರುವ ಸ್ಥಳದತ್ತ ಸಾಗಿತು. ಅಲ್ಲಿ ಜೀಪ್‌ನಿಂದ ಇಳಿದು ನೋಡಿದಾಗ ಗೊತ್ತಾಯಿತು, ಬೈಕ್ ರೈಡ್ ಮತ್ತು ಒಂಟೆ ರೈಡ್ ಮಾಡುವವರು ಇಲ್ಲಿ ಹಣ ತೆತ್ತು ಒಂದು ಗಂಟೆ ಅವಧಿಯ ರೈಡನ್ನು ಮಾಡಬಹುದು ಎಂದು.

ಡೆಸರ್ಟ್‌ನಲ್ಲಿ ಪಾಕಿಸ್ತಾನಿ ಡ್ರೈವರ್‌ ಜತೆಗೆ

ಅಲ್ಲೇ ಹತ್ತಿರದಲ್ಲಿ ಹಲವು ವಿಶೇಷತೆಗಳನ್ನು ಕಾಣಲು ಅವಕಾಶ ದೊರಕಿತು. ಅಲ್ಲಿ ಅರಬ್ ವ್ಯಕ್ತಿಯೊಬ್ಬ ತನ್ನ ಕೈಯಲ್ಲಿ ಫಾಲ್ಕನ್ ಹಕ್ಕಿಯನ್ನು ಹಿಡಿದುಕೊಂಡು ಗಿರಾಕಿಗಳ ತಲೆಯ ಮೇಲೆ ಕೂರಿಸಿ, ಫೊಟೋ ತೆಗೆಸಿ ಅವರಿಂದ ಹಣ ಪಡೆಯುತ್ತಿದ್ದ. ಜನರೂ ಅದನ್ನು ಆನಂದಿಸುತ್ತಿದ್ದರು. ಆ ಜಾಗದಲ್ಲಿ ನಮ್ಮ ವಾಹನದ ಚಾಲಕ ಜೀಪ್‌ನ ಟೈರ್‌ಗಳ ಗಾಳಿಯನ್ನು ಕೊಂಚ ತೆಗೆಯುತ್ತಿದ್ದ. ಮರಳುಗಾಡಿನಲ್ಲಿ ವಾಹನ ಚಲಿಸುವಾಗ ಹೀಗೆ ಟೈರ್‌ಗಳಲ್ಲಿ ಗಾಳಿ ಕಡಿಮೆ ಮಾಡುವುದು ಸಹಜ. ಇದರಿಂದ ಟೈಲರ್‌ಗಳಿಗೆ ಮರಳಿನಲ್ಲಿ ಚಲಿಸಲು ಗ್ರಿಪ್‌ ಸಿಗುತ್ತದೆಯಂತೆ. ಇನ್ನುಮುಂದೆ ನಮ್ಮ ಜೀಪ್ ರೈಡ್ ಭಯಂಕರವಾಗಿರುತ್ತದೆ. ಗಟ್ಟಿಯಾಗಿ ಕುಳಿತುಕೊಳ್ಳಬೇಕು ಎಂದು ನಮ್ಮ ಜೀಪ್‌ನ್ನು ಓಡಿಸುತ್ತಿದ್ದ ಪಾಕಿಸ್ತಾನಿ ಚಾಲಕ ನಮಗೆ ತಿಳಿಸಿದ. ಇದು ನಮ್ಮಲ್ಲಿ ಕುತೂಹಲ ಮತ್ತು ಭಯ ಎರಡನ್ನೂ ಹುಟ್ಟಿಸಿತ್ತು.

ಜೀಪ್‌ ಪಲ್ಟಿ

ಸೂರ್ಯಾಸ್ತ ಆಗುವ ಮುನ್ನ ನಿರ್ದಿಷ್ಟ ಜಾಗವನ್ನು ಸೇರಲೇಬೇಕೆಂದು ನಮ್ಮ ಜೀಪ್ ಚಾಲಕ ಮೈಮೇಲೆ ದೆವ್ವ ಬಂದವರ ಹಾಗೇ ಗಾಡಿಯನ್ನು ಚಲಾಯಿಸುತ್ತಿದ್ದ. ಮರಳು ದಿಬ್ಬಗಳ ಮೇಲೆ ಅಡ್ಡಾದಿಡ್ಡಿ ವಾಹನ ಚಲಾಯಿಸುತ್ತಾ ಮುನ್ನಡೆದ. ಆ ಭಯಂಕರ ವೇಗಕ್ಕೆ ನಮಗೆ ಜೀವ ಬಾಯಿಗೆ ಬಂದಂತಾಗುತ್ತಿತ್ತು. ಆದರೂ ಸಫಾರಿ ತಾನೇ? ಇದೂ ಒಂದು ಅನುಭವ. ಸುಮಾರು 20 ಕಿಮೀ ಮರಳು ಗುಡ್ಡೆಯಲ್ಲಿ ಸಾಗಿದ್ದಾಯಿತು. ನಂತರ ಚಾಲಕನ ನಿಯಂತ್ರಣ ತಪ್ಪಿ ನಮ್ಮ ವಾಹನದ ಎರಡು ಗಾಲಿಗಳು ಮರಳಿನಲ್ಲಿ ಹೂತು ಹೋಗಿ ಪಲ್ಟಿಯಾಗುವ ರೀತಿಯಲ್ಲಿ ನಿಂತಿತು. ಹೂತು ಹೋದ ಚಕ್ರವನ್ನು ಸರಿಪಡಿಸಲು ಆ ಚಾಲಕನಿಗೆ ಸಾಧ್ಯವಾಗಲಿಲ್ಲ. ಅದಕ್ಕೆ ಅವರ ಗುಂಪಿನ ನಾಯಕನೇ ಬರಬೇಕಾಯಿತು. ನಮ್ಮನ್ನೆಲ್ಲಾ ಜೀಪ್‌ನಿಂದ ಕೆಳಗೆ ಇಳಿಸಿದರು. ಮತ್ತೊಂದು ಜೀಪ್‌ ಮತ್ತು ಹೂತು ಹೋಗಿದ್ದ ನಮ್ಮ ಜೀಪ್‌ಗೆ ರಬ್ಬರ್ ಹಗ್ಗ ಕಟ್ಟಿ ವೇಗವಾಗಿ ಜೀಪನ್ನು ಜಗ್ಗಿದ. ನಂತರ ಹೂತು ಹೋಗಿದ್ದ ಗಾಲಿಗಳು ಮತ್ತೆ ಮೇಲೆ ಬಂದವು. ಆದರೆ ಅಷ್ಟರಲ್ಲಿ ಸೂರ್ಯಾಸ್ತ ಸಮಯವಾಗಿತ್ತು. ಹಾಗಾಗಿ ಮರಳಿನ ರಾಶಿಯಲ್ಲಿ ಬರಿಗಾಲಲ್ಲಿ ಕೊಂಚ ನಡೆಯಬೇಕಾದ ಪ್ರಸಂಗ ನಮಗೆ ಒದಗಿ ಬಂದಿತ್ತು. ಅಂತೂ ಸೂರ್ಯಾಸ್ತದ ಕ್ಷಣಗಳನ್ನು ನೋಡಿ ಆನಂದಿಸಿದ ತೃಪ್ತಿ ನಮ್ಮದಾಯಿತು.

Untitled design - 2026-05-08T143456.414

ಇಷ್ಟಾದ ಮೇಲೆ ನಮ್ಮ ಸಫಾರಿ ಜೀಪ್‌ ನಮ್ಮನ್ನು ಕರೆದೊಯ್ಯಲು ಮತ್ತೆ ಸಿದ್ಧವಾಗಿತ್ತು. ಆದರೆ ಹತ್ತು ನಿಮಿಷಗಳ ಪ್ರಯಾಣದ ನಂತರ ಮತ್ತೆ ಅದೇ ರೀತಿ ಜೀಪಿನ ಚಕ್ರಗಳು ಮರಳಿನಲ್ಲಿ ಹೂತು ಹೋದವು. ನಮ್ಮ ಸಹ ಪ್ರಯಾಣಿಕರ ಜೀಪ್‌ಗಳು ಮುಂದೆ ಸಾಗುತ್ತಿದ್ದವು. ಕತ್ತಲೆ ಆಗುತ್ತಿತ್ತು. ಮತ್ತೆ ಅದೇ ಜೀಪ್‌ಗಳ ನಾಯಕ ಬಂದು ನಮ್ಮನ್ನು ಬೇರೆ ಜೀಪ್‌ಗೆ ಶಿಫ್ಟ್‌ ಮಾಡಿಸಿ ಅಂದಿನ ರಾತ್ರಿಯ ಕ್ಯಾಂಪ್ ಫೈರ್ ಸ್ಥಳಕ್ಕೆ ಕರೆದೊಯ್ದ.

ಅಲ್ಲೊಂದು ಚಿಕ್ಕ ಸ್ಟೇಜ್ ಇತ್ತು. ಆ ಸ್ಟೇಜ್‌ನಲ್ಲಿ ಯುವತಿಯೊಬ್ಬಳು ಬೆಲ್ಲಿ ಡಾನ್ಸ್ ಮಾಡುತ್ತಿದ್ದಳು. ಅದುವರೆಗೂ ಬೆಲ್ಲಿ ಡಾನ್ಸ್ ಬಗ್ಗೆ ಕೇಳಿದ್ದೆನೇ ಹೊರತು ಪ್ರತ್ಯಕ್ಷವಾಗಿ ನೋಡಿರಲಿಲ್ಲ. ಅದನ್ನೂ ನೋಡಿದ್ದಾಯಿತು. ಕಾಟಾಚಾರದ ಭಫೆ ಊಟವನ್ನೂ ಮಾಡಿದೆವು. ಆದಷ್ಟು ಬೇಗ ಅಲ್ಲಿಂದ ನಮ್ಮ ಹೊಟೇಲ್‌ಗೆ ಹೋಗಿ ಮುಟ್ಟಿದರೆ ಸಾಕಪ್ಪಾ ಎನಿಸಿತ್ತು. ಅಲ್ಲಿಂದ ಹಿಂದಿರುಗುವಾಗ ಆ ಜೀಪ್ ಚಾಲಕ ನಾವು ತಂಗಿದ್ದ ಹೊಟೇಲ್‌ಗೆ ನಮ್ಮನ್ನು ತಲುಪಿಸಿದ. ಈ ಡೆಸೆರ್ಟ್ ಸಫಾರಿ ನಮ್ಮ ಗುಂಡಿಗೆಯನ್ನು ನಡುಗಿಸಿದ್ದಂತೂ ಸುಳ್ಳಲ್ಲ. ಆದರೆ ಒಂದು ಅನುಭವವಾಗಿ ಉಳಿದಿದೆ.