ಪೆಮಾ ಛೆರಿಂಗ್ ಎಂಬ ಅದ್ಭುತ ಚೇತನ
ಆರು ವರ್ಷದ ಎಳೆಯ ಬಾಲಕನಾಗಿದ್ದಾಗಲೇ ದೈಹಿಕ ವೈಕಲ್ಯವನ್ನು ಕಾರಣವನ್ನಾಗಿ ಮಾಡಿಕೊಂಡು ಹೆತ್ತ ತಂದೆ-ತಾಯಿಯೇ ಅವರನ್ನು ತೊರೆದು ಹೋದರು. ಜೀವನದ ಅತ್ಯಂತ ಸುರಕ್ಷಿತ ಆಶ್ರಯವೇ ಕಸಿದುಕೊಂಡ ಆ ಕ್ಷಣ, ಅವರ ಬದುಕಿನ ಮೊದಲ ಮಹಾಪರೀಕ್ಷೆಯಾಗಿತ್ತು.
- ಪ್ರವೀಣ್ ಪೈಲೂರ್
ಕೆಲವು ಪ್ರವಾಸಗಳು ಕೇವಲ ಸ್ಥಳಗಳನ್ನು ಪರಿಚಯಿಸುವುದು ಮಾತ್ರವಲ್ಲ ಅದು ನಮ್ಮೊಳಗಿನ ಮನುಷ್ಯನನ್ನೇ ಹೊಸದಾಗಿ ಪರಿಚಯಿಸುತ್ತವೆ. ಕೆಲವು ವ್ಯಕ್ತಿಗಳನ್ನು ನಾವು ಕೇವಲ ಭೇಟಿಯಾಗುವುದು ಮಾತ್ರವಲ್ಲ ಅವರು ನಮ್ಮ ಮೇಲೆ ಗಾಢವಾದ ಪ್ರಭಾವವನ್ನೂ ಬೀರುತ್ತಾರೆ. ಭೂತಾನ್ ಪ್ರವಾಸವೂ ನನಗೆ ಅಂತಹದ್ದೇ ಒಂದು ಅನುಭವವಾಗಿ ಉಳಿದಿದೆ.
ಹಿಮಾಲಯದ ಮಡಿಲಲ್ಲಿ ನೆಲೆಸಿರುವ ಭೂತಾನ್ ಎಂಬ ರಾಷ್ಟ್ರವನ್ನು ನಾವು ಸಾಮಾನ್ಯವಾಗಿ ಅದರ ಪ್ರಕೃತಿ ಸೌಂದರ್ಯ, ಪ್ರಶಾಂತತೆ ಅಥವಾ ಸಂತೋಷದ ಸೂಚ್ಯಂಕಗಳಿಂದ ಗುರುತಿಸುತ್ತೇವೆ. ಆದರೆ, ದೇಶವೊಂದರ ನಿಜವಾದ ಸೌಂದರ್ಯವು ಕೇವಲ ಭೌಗೋಳಿಕ ಗಡಿಗಳಲ್ಲೋ, ಬೆಟ್ಟ-ಗುಡ್ಡಗಳಲ್ಲೋ ಇಲ್ಲ. ಅದು ಅಲ್ಲಿನ ಜನರ ಬದುಕಿನ ದೃಷ್ಟಿಕೋನದಲ್ಲೂ ಅಡಗಿರುತ್ತದೆ ಎಂದು ನನಗೆ ಕಲಿಸಿಕೊಟ್ಟದ್ದು ‘ಸಿಂಪ್ಲಿ ಭೂತಾನ್’ ಎಂಬ ಸಾಂಸ್ಕೃತಿಕ ಕೇಂದ್ರ ಮತ್ತು ಅಲ್ಲಿ ಭೇಟಿಯಾದ ‘ಪೆಮಾ ಛೆರಿಂಗ್’ ಎಂಬ ಅಪರೂಪದ ವ್ಯಕ್ತಿ.
‘ಸಿಂಪ್ಲಿ ಭೂತಾನ್’ ಎಂಬುದು ವಸ್ತುಗಳನ್ನು ಪ್ರದರ್ಶಿಸುವ ಸ್ಥಳ ಮಾತ್ರವಲ್ಲ ಅದು ಒಂದು ಜನಾಂಗ ತನ್ನ ನೆನಪುಗಳನ್ನು, ತನ್ನ ಜೀವನಕ್ರಮವನ್ನು ಮತ್ತು ತನ್ನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಒಪ್ಪಿಸುವ ಒಂದು ಚಂದದ ಪ್ರಯತ್ನ. ಹಳೆಯ ಮನೆಗಳು, ಸಂಪ್ರದಾಯದ ಉಡುಗೆಗಳು, ಜಾನಪದ ಸಂಗೀತ, ನೃತ್ಯ - ಇವೆಲ್ಲವೂ ಅಲ್ಲಿ ಇವೆ. ಆದರೆ, ಇವೆಲ್ಲವನ್ನು ಮೀರಿಯೂ ಮನಸಿನಲ್ಲಿ ಶಾಶ್ವತವಾಗಿ ಉಳಿದುಬಿಟ್ಟದ್ದು ಒಬ್ಬ ವ್ಯಕ್ತಿಯ ಜೀವನ.

‘ಫುಟ್ ಕ್ರಾಫ್ಟ್ʼ ಎಂಬ ಪುಟ್ಟ ಕಾರ್ಯಾಗಾರದಲ್ಲಿ ಅವರು ಕುಳಿತಿದ್ದರು. ಮೊದಲ ನೋಟಕ್ಕೆ ಅವರ ದೇಹದಲ್ಲಿ ಕೊರತೆ ಕಾಣುತ್ತದೆ. ಆದರೆ, ಸ್ವಲ್ಪ ಹೊತ್ತು ಅವರನ್ನು ಗಮನಿಸಿದರೆ, ಆ ಕೊರತೆಯನ್ನು ಮರೆತುಬಿಡುತ್ತೇವೆ. ಏಕೆಂದರೆ ಅಲ್ಲಿ ಕಾಣುವುದು ಒಂದು ದೇಹ ಮಾತ್ರ ಅಲ್ಲ, ಒಂದು ಅದ್ಭುತ ಸಂಕಲ್ಪ.
ಹುಟ್ಟಿನಿಂದಲೇ ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿದ್ದ ಅವರಿಗೆ ಕೈಗಳಿರಲಿಲ್ಲ. ಆದರೆ, ಅವರು ವಿಧಿಯ ಮುಂದೆ ಶರಣಾಗಿರಲಿಲ್ಲ. ಉಳಿ ಮತ್ತು ಸುತ್ತಿಗೆಯನ್ನು ಪಾದದ ಬೆರಳುಗಳ ನಡುವೆ ಹಿಡಿದು ಮರದ ಮೇಲೆ ಕೆತ್ತನೆ ಮಾಡುತ್ತಿದ್ದ ಅವರ ಏಕಾಗ್ರತೆಯನ್ನು ನೋಡಿದಾಗ, ನಮ್ಮ ಸಮಾಜ ‘ಅಂಗವಿಕಲ’ ಎಂಬ ಪದವನ್ನು ಎಷ್ಟು ಸುಲಭವಾಗಿ ಬಳಸಿಬಿಡುತ್ತದೆ ಎಂಬ ಪ್ರಶ್ನೆ ಮನಸಿನಲ್ಲಿ ಮೂಡುತ್ತದೆ.
ದೇಹದಲ್ಲಿ ಅಂಗವೈಕಲ್ಯ ಇರಬಹುದು, ಆದರೆ ಮನಸಿನ ದೃಢ ಸಂಕಲ್ಪದ ಮುಂದೆ ಯಾವುದೇ ವೈಕಲ್ಯವು ದೊಡ್ಡದಲ್ಲ. ಒಬ್ಬ ಮನುಷ್ಯನ ಬದುಕಿನ ಮೌಲ್ಯವನ್ನು ಅವನಿಗೆ ಏನು ಇಲ್ಲ ಎಂಬುದರಿಂದ ಅಳೆಯುವುದಿಲ್ಲ, ಇದ್ದದ್ದನ್ನು ಇದ್ದದ್ದರಲ್ಲೇ ಹೇಗೆ ರೂಪಿಸಿಕೊಂಡಿದ್ದಾನೆ ಎಂಬುದರಿಂದ ಅಳೆಯಬೇಕು ಎಂಬ ಸತ್ಯ ಪೆಮಾ ಅವರ ಬದುಕಿನಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಅವರ ಬಾಲ್ಯವನ್ನು ತಿಳಿದಾಗ ಈ ಸತ್ಯ ಇನ್ನಷ್ಟು ಗಾಢವಾಗುತ್ತದೆ.
ಆರು ವರ್ಷದ ಎಳೆಯ ಬಾಲಕನಾಗಿದ್ದಾಗಲೇ ದೈಹಿಕ ವೈಕಲ್ಯವನ್ನು ಕಾರಣವನ್ನಾಗಿ ಮಾಡಿಕೊಂಡು ಹೆತ್ತ ತಂದೆ-ತಾಯಿಯೇ ಅವರನ್ನು ತೊರೆದು ಹೋದರು. ಜೀವನದ ಅತ್ಯಂತ ಸುರಕ್ಷಿತ ಆಶ್ರಯವೇ ಕಸಿದುಕೊಂಡ ಆ ಕ್ಷಣ, ಅವರ ಬದುಕಿನ ಮೊದಲ ಮಹಾ ಪರೀಕ್ಷೆಯಾಗಿತ್ತು.

ಅಜ್ಜ-ಅಜ್ಜಿಯರ ಆಶ್ರಯದಲ್ಲಿ ಬೆಳೆದ ಪೆಮಾ, ಎಂದೂ ತಮ್ಮ ವಿಧಿಯ ಬಗ್ಗೆ ಬೇಸರಿಸದೆ ಕಾಡಿನ ಏಕಾಂತವನ್ನೇ ತಪೋವನವನ್ನಾಗಿಸಿಕೊಂಡರು. ಬಿಲ್ಲು-ಬಾಣಗಳ ರೂಪಿಸುವಿಕೆಯೊಂದಿಗೆ ತಮ್ಮ ವ್ಯಕ್ತಿತ್ವವನ್ನೂ ರೂಪಿಸಿಕೊಳ್ಳುತ್ತಾ ಸಾಗಿದರು. ಆ ಸದ್ದಿಲ್ಲದ ಪರಿಶ್ರಮ ಯಾರ ಕಣ್ಣಿಗೂ ಬೀಳಲಿಲ್ಲ ನಿಜ, ಆದರೆ ಜಗತ್ತು ಬೆರಗಾಗುವ ದೊಡ್ಡ ಸಾಧನೆಗಳೆಲ್ಲವೂ ಮೊದಲು ಸದ್ದಿಲ್ಲದೇ ಮೊಳಕೆಯೊಡೆಯುತ್ತವೆ.
ಜೀವನದಲ್ಲಿ ಕೆಲವೊಮ್ಮೆ ಒಬ್ಬ ವ್ಯಕ್ತಿಯ ಆಗಮನವೇ ಹೊಸ ಅಧ್ಯಾಯವನ್ನು ಆರಂಭಿಸುತ್ತದೆ. ಪೆಮಾ ಅವರ ಬದುಕಿನಲ್ಲಿಯೂ ಅಂಥ ಮಹತ್ವದ ತಿರುವು ತಂದವರು ಭೂತಾನಿನ ರಾಣಿ.
ಭೂತಾನಿನ ರಾಣಿ ಛೆರಿಂಗ್ ಪೆಮ್ ವಾಂಗ್ಚುಕ್ ಅವರ ದೃಷ್ಟಿಗೆ ಪೆಮಾ ಅವರ ಪ್ರತಿಭೆ ಕಂಡಿತು. ಅವರನ್ನು ಥಿಂಪುವಿನ ಝೋರಿಕ್ ಚುಸುಮ್ ಸಂಸ್ಥೆಗೆ ಸೇರಿಸಲಾಯಿತು. ಪ್ರತಿಭೆಗೆ ಅವಕಾಶ ದೊರೆತಾಗ ಅದು ಎಷ್ಟೊಂದು ದೂರ ಸಾಗಬಲ್ಲದು ಎಂಬುದಕ್ಕೆ ಪೆಮಾ ಅವರ ಬದುಕೇ ಸಾಕ್ಷಿ. ಮರದ ಕೆತ್ತನೆಯ ಕಲಾವಿದರಾಗಿ ಅವರು ಹೆಸರು ಗಳಿಸಿದರು. ಬಿಲ್ಲುಗಾರಿಕೆಯಲ್ಲಿಯೂ ದೇಶವನ್ನು ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದರು. ಪ್ರಶಸ್ತಿಗಳನ್ನೂ ಗಳಿಸಿದರು.
ಇದನ್ನೂ ಓದಿ : ಎ ರಿಯಲ್ ಪೇನ್
ಆದರೆ, ಈ ಎಲ್ಲ ಸಾಧನೆಗಳಿಗಿಂತ ನನ್ನ ಮನಸನ್ನು ಹೆಚ್ಚು ಸ್ಪರ್ಶಿಸಿದ್ದು ಅವರ ಕ್ಷಮಾ ಗುಣ.
ತಮ್ಮನ್ನು ತೊರೆದ ತಂದೆ-ತಾಯಿಗಾಗಿ ತಾವು ಸಂಪಾದಿಸಿದ ಹಣದಿಂದ ಮನೆಯನ್ನು ಕಟ್ಟಿಸಿಕೊಟ್ಟಿದ್ದಾರೆ ಎಂದು ತಿಳಿದಾಗ, ಸಾಧನೆಗಿಂತ ದೊಡ್ಡದು ಯಾವುದು ಎಂಬ ಪ್ರಶ್ನೆ ನನ್ನನ್ನು ಕಾಡಿತು. ಗೆಲುವು ಎಂದರೆ ಶತ್ರುವನ್ನು ಸೋಲಿಸುವುದಲ್ಲ. ದ್ವೇಷವನ್ನು ತನ್ನೊಳಗಿಂದಲೇ ಸೋಲಿಸುವುದು. ಮನುಷ್ಯನ ದೊಡ್ಡತನ ಅವನ ಪ್ರತಿಭೆಯಲ್ಲಿ ಇರುವುದಿಲ್ಲ, ಅವನ ಹೃದಯ ವಿಸ್ತಾರದಲ್ಲಿರುತ್ತದೆ.
ಇಂದು ನಾವು ಯಶಸ್ಸನ್ನು ಹಣದಿಂದ, ಹುದ್ದೆಯಿಂದ, ಪ್ರಸಿದ್ಧಿಯಿಂದ ಅಳೆಯುವ ಕಾಲದಲ್ಲಿದ್ದೇವೆ. ಆದರೆ, ಪೆಮಾ ಛೆರಿಂಗ್ ಅವರ ಬದುಕಿನ ಯಶಸ್ಸಿನ ಇನ್ನೊಂದು ಮಗ್ಗುಲನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಅದು ಆತ್ಮಗೌರವ, ಪರಿಶ್ರಮ ಮತ್ತು ಕ್ಷಮೆ.
ಸಿಂಪ್ಲಿ ಭೂತಾನ್‌ನಿಂದ ಹೊರಡುವಾಗ ನನ್ನ ಮನಸಿನಲ್ಲಿ ಉಳಿದಿದ್ದು ಒಂದೇ ಒಂದು ಪ್ರಶ್ನೆ! ಮನುಷ್ಯನನ್ನು ನಿಜವಾಗಿ ರೂಪಿಸುವುದು ಅವನ ಪರಿಸ್ಥಿತಿಯೋ, ಅಥವಾ ಅವನ ನಿರ್ಧಾರವೋ? ಬಹುಶಃ ಈ ಪ್ರಶ್ನೆಗೆ ಪೆಮಾ ಛೆರಿಂಗ್ ಅವರ ಬದುಕೇ ಉತ್ತರ. ಭೂತಾನ್ ನನಗೆ ಹಿಮಾಲಯದ ಸೌಂದರ್ಯವನ್ನು ತೋರಿಸಿತು. ಆದರೆ, ಪೆಮಾ ಛೆರಿಂಗ್ ಅವರು ಬದುಕಿನ ಸೌಂದರ್ಯವನ್ನು ತೋರಿಸಿದರು.
ಇದನ್ನೂ ಓದಿ : ಮಿಲಿಯನ್ ಬಾಟಲಿಗಳ ಬೌದ್ಧ ದೇವಾಲಯ
ಪ್ರಕೃತಿಯು ತಾನೇ ಸೃಷ್ಟಿಸಿದ ನಿಯಮಗಳಿಗೂ ತಾನೇ ಒಮ್ಮೊಮ್ಮೆ ಭಂಗ ತರುತ್ತದೆಯೋ ಏನೋ! ದೈವದತ್ತವಾದ ಅಂಗಸೌಷ್ಟವವನ್ನೇ ಕಸಿದುಕೊಂಡಾಗ, ಮನುಷ್ಯ ಕುಗ್ಗಿ ಹೋಗುವುದು ಸಹಜ. ಆದರೆ, ‘ಸೆರೆಬ್ರಲ್ ಪಾಲ್ಸಿ’ಯ ಕರಾಳ ಹಸ್ತದಲ್ಲಿ ನಲುಗಿದ ಪೆಮಾ ಛೆರಿಂಗ್ ಎಂಬ ಆ ಶಿಶು, ವಿಧಿಯ ಲಿಪಿಯನ್ನು ತನ್ನ ಪಾದಗಳ ಬೆರಳುಗಳಿಂದಲೇ ಮರುಬರೆದ ಚರಿತ್ರೆ ವರ್ಣನಾತೀತ! ಜೀವನವೆಂಬುದು ಕೇವಲ ದೈಹಿಕ ಸಾಮರ್ಥ್ಯದ ಅಳತೆಗೋಲಲ್ಲ. ಅದು ಮನಸಿನ ದೃಢತೆ ಮತ್ತು ಹೃದಯದ ವಿಶಾಲತೆಯ ಸಮ್ಮಿಲನ.
ಪೆಮಾ ಛೆರಿಂಗ್ ಅವರು ಕೇವಲ ಭೂತಾನಿನ ಕಲಾವಿದರಲ್ಲ; ಅವರು ಮಾನವ ಇಚ್ಛಾಶಕ್ತಿಯ ಅಪ್ರತಿಮ ಸಂಕೇತ. ದೇಹದ ನ್ಯೂನತೆಗಳನ್ನು ಅತಿಕ್ರಮಿಸಿ, ಪ್ರೇಮ ಮತ್ತು ಪ್ರೀತಿಯಿಂದ ಜಗತ್ತನ್ನು ಗೆಲ್ಲುವ ಕಲೆ ಪೆಮಾ ಅವರಿಂದ ನಮಗೆ ಲಭ್ಯವಾಗುವ ದಿವ್ಯ ಸಂದೇಶ. ದ್ವೇಷದ ಜಾಗದಲ್ಲಿ ಪ್ರೀತಿಯನ್ನೇ ಬೆಳೆಸಿದ ಈ ಮಹಾಚೇತನ, ತನ್ನ ಅಂಗವೈಕಲ್ಯವನ್ನು ವೈಫಲ್ಯವನ್ನಾಗಿಸಿಕೊಳ್ಳದೆ, ಅದನ್ನೇ ವಿಜಯದ ಮೆಟ್ಟಿಲನ್ನಾಗಿಸಿಕೊಂಡ ಬಗೆ ಅನನ್ಯ.