ರಾಗಿಣಿ ದ್ವಿವೇದಿ ಪ್ರತಿಭಾವಂತ ನಟಿ. ತಮ್ಮ ಸೌಂದರ್ಯ ಮತ್ತು ನಟನೆಯಿಂದ ಪ್ರೇಕ್ಷಕ ವರ್ಗವನ್ನು ಸೆಳೆದವರು. ಪ್ರಸಿದ್ಧ ನಟರ ಜತೆ ಸಾಕಷ್ಟು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ನಟಿಸಿದ್ದಾರೆ. ಈಗಲೂ ಕನ್ನಡ ಸೇರಿದಂತೆ ಮಲಯಾಳಂ ಚಿತ್ರರಂಗದಲ್ಲಿಯೂ ಅವರು ಸಕ್ರಿಯರಾಗಿದ್ದಾರೆ. ಸಿನಿಮಾ ಶೂಟಿಂಗ್‌ ನಡುವೆಯೂ ಅವರು ಪ್ರವಾಸಿ ತಾಣಗಳನ್ನು ಸಂದರ್ಶಿಸಲು ಸದಾ ಸಿದ್ಧರಾಗಿರುತ್ತಾರೆ. ದೇಶ-ವಿದೇಶಗಳನ್ನು ಸುತ್ತಿರುವ ಬೆಡಗಿ ರಾಗಿಣಿ ತಮ್ಮ ಪ್ರವಾಸದ ಅನುಭವಗಳ ಬಗ್ಗೆ ಇಲ್ಲಿ ಆಪ್ತವಾಗಿ ಮಾತನಾಡಿದ್ದಾರೆ. ಇದು ಪ್ಯಾಷನ್‌ ಐಕಾನಿಕ್‌ ಕ್ವೀನ್‌ನ ಟ್ರಾವೆಲ್‌ ಜರ್ನಿ.

ಇದನ್ನೂ ಓದಿ: ಲವ್‌ ಮಾಕ್ಟೇಲ್‌ಗಾಗಿ ಊರೂರು ತಿರುಗಿದ ಡಾರ್ಲಿಂಗ್‌

ಪ್ರವಾಸಕ್ಕೂ‌ ನಿಮಗೂ ಇರುವ ಸಂಬಂಧ ಯಾವ ರೀತಿಯದ್ದು?

ನನಗೆ ಬಾಲ್ಯದಿಂದಲೂ ನನ್ನ ಹುಟ್ಟೂರಿಗೆ ಹೋಗುವುದೇ ಪ್ರವಾಸದ ಹಾಗೆ ಆಗುತ್ತಿತ್ತು. ಅಪ್ಪ ಆರ್ಮಿಯಲ್ಲಿದ್ದ ಕಾರಣ ಅವರೊಂದಿಗೆ ನಾವು ಕೂಡ ಬೇರೆ ಬೇರೆ ಊರುಗಳಿಗೆ ವರ್ಗವಾಗುತ್ತಾ ಇರುತ್ತಿದ್ದೆವು. ಹೀಗಾಗಿ ಚಿಕ್ಕ ವಯಸ್ಸಿನಲ್ಲಿ ಬೇಸಗೆ ರಜೆಯಲ್ಲಿ ಅಜ್ಜಿ ಮನೆಗೆ ಹೋಗುವುದೆಂದರೆ ಅದೇ ದೊಡ್ಡ ಪ್ರವಾಸದಂತೆ ಅನಿಸುತ್ತಿತ್ತು. ರಾಜಧಾನಿ ಎಕ್ಸ್ ಪ್ರೆಸ್ ನಲ್ಲಿನ ಪ್ರಯಾಣ ನೆನಪಿಸಿಕೊಳ್ಳುವುದೇ ಸೊಗಸು. ಹಾಗೆ ನನ್ನ ಅಜ್ಜಿ ತಾತನ ಮನೆಯಾದ ಹರಿಯಾಣ ಮತ್ತು ಹಿಮಾಚಲ ಪ್ರದೇಶಗಳೇ ನನ್ನ ಮೆಚ್ಚಿನ ಪ್ರವಾಸಿ ತಾಣಗಳಾಗಿದ್ದವು.

Untitled design (9)

ಶಾಲಾ ಪ್ರವಾಸ ಹೋದಂಥ ನೆನಪುಗಳು ಇವೆಯೇ?

ಶಾಲೆಯಿಂದ ಹೋದ ಪ್ರವಾಸವೆಂದರೆ ಎಂಟನೆಯ ತರಗತಿಯಲ್ಲಿದ್ದಾಗ ಸಣ್ಣ ಟ್ರಿಪ್‌ ಹೋಗಿದ್ದೆವು. ಪಿ.ಯುಗೆ ಕಾಲಿಡುತ್ತಿದ್ದಂತೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟೆ. ಹೀಗಾಗಿ ಮುಂದೆ ಶೂಟಿಂಗ್ ಲೊಕೇಶನ್ ಗಳೇ ನನ್ನ ಪ್ರವಾಸಿ ತಾಣಗಳಾದವು.

ಪ್ರವಾಸದ ಸಂದರ್ಭದಲ್ಲಿ ನೀವು ಇಷ್ಟಪಡುವ ವಿಚಾರ ಏನು?

ಪ್ರವಾಸ ಅಂದರೆ ನನಗೆ ಮೊದಲು ಮನಸಿಗೆ ಬರುವುದೇ ಕಲ್ಚರಲ್ ಎಕ್ಸ್‌ಪ್ಲೋರಿಂಗ್‌. ನಮ್ಮ ದೇಶದಲ್ಲಿ ಸಾಂಸ್ಕೃತಿಕ ವೈವಿಧ್ಯತೆಯಿದೆ. ಅದರಲ್ಲೂ ವಿದೇಶ ಪ್ರವಾಸ ಅಂದರೆ ತುಂಬ ವಿಶಿಷ್ಟವಾದ ದೃಶ್ಯಗಳನ್ನು ನೋಡುವ ಅವಕಾಶ ಸಿಗುತ್ತದೆ.

ನಿಮಗೆ ಅತ್ಯುತ್ತಮ ಪ್ರವಾಸದ ಅನುಭವಗಳು ದೊರಕಿರುವುದು ಎಲ್ಲಿ?

ನಾನು ಥೈಲ್ಯಾಂಡ್‌, ಯುರೋಪ್‌, ಲಂಡನ್‌ ಗಳಿಗೆಲ್ಲ ಹೋಗಿದ್ದೇನೆ. ಅವೆಲ್ಲವೂ ಒಳ್ಳೆಯ ನೆನಪುಗಳಾಗಿ ಉಳಿದಿವೆ‌. ಅದೇ ರೀತಿ ನಮ್ಮ ದೇಶದೊಳಗೆ ಕೂಡ ದೇವಸ್ಥಾನಗಳನ್ನು ಸಂದರ್ಶಿಸುವುದು, ಸಮುದ್ರ ತೀರಗಳಲ್ಲಿ ಸುತ್ತಾಡುವುದರಲ್ಲಿ ಖುಷಿ ಕಂಡಿದ್ದೇನೆ.

ನೀವು ಕಂಡ ದೇವಸ್ಥಾನಗಳ ವಿಶೇಷತೆಗಳೇನು?

ಮಾತಾ ವೈಷ್ಣೋದೇವಿ ನಮ್ಮ ಮನೆ ದೇವತೆ. ಹಾಗಾಗಿ ಆ ದೇವಸ್ಥಾನಕ್ಕೆ ಚಿಕ್ಕವಯಸ್ಸಿನಿಂದಲೇ ತುಂಬಾ ಸಲ ಹೋಗಿದ್ದೇನೆ. ನನ್ನ ಅನುಭವದಲ್ಲಿ ಆಕೆ ತುಂಬ ಪವರ್‌ಫುಲ್‌ ದೇವತೆ. ಅದೇ ರೀತಿ ಅಲ್ಲಿನ ಪ್ರಸಾದದ ರುಚಿ ಕೂಡ ಅದ್ಭುತ. ಈ ಸಂದರ್ಭದಲ್ಲಿ ಗುರುದ್ವಾರದ ಮತ್ತು ಕಾಮಾಕ್ಯ ದೇಗುಲದ ಬಗ್ಗೆ ಕೂಡ ನೆನಪಿಸಲೇಬೇಕು. ಇನ್ನು ದಕ್ಷಿಣದಲ್ಲಿ ತಿರುಪತಿ ಮತ್ತು ನಮ್ಮದೇ ರಾಜ್ಯದ ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇವರ ದರ್ಶನ ಮಾಡಿದ್ದು ಕೂಡ ಅಭೂತಪೂರ್ವ ಅನುಭವ.

Untitled design (8)

ಕರ್ನಾಟಕದ ಜೀವನ ನಿಮಗೆ ಎಷ್ಟು ವಿಭಿನ್ನವಾಗಿದೆ?

ಚೆನ್ನಾಗಿದೆ‌. ಹಾಗೆ ನೋಡಿದರೆ ನನ್ನ ಸಾಕಷ್ಟು ಮೆಚ್ಚಿನ ತಾಣಗಳು ಕರ್ನಾಟಕದಲ್ಲೇ ಇವೆ. ಕೊಡಗು, ಸಕಲೇಶಪುರದ ಕಾಡುಗಳು, ಕೊಲ್ಲೂರು ದೇವಾಲಯಗಳು ಮೈ ಮರೆಸುತ್ತವೆ. ಮಂಗಳೂರು ಸಮುದ್ರ ತೀರ ನನ್ನ ಫೇವರಿಟ್.

ಬೀಚ್ ಎಂದೊಡನೆ ನಿಮಗೆ ನೆನಪಾಗುವ ಘಟನೆಗಳೇನಾದರೂ ಇವೆಯೇ?

ನಾನು ಮಂಗಳೂರು ಮಾತ್ರವಲ್ಲ, ಬಹುಶಃ ದೇಶದ ಎಲ್ಲ ಸಮುದ್ರ ತೀರಗಳಿಗೂ ಹೋಗಿದ್ದೇನೆ. ಕರ್ನಾಟಕದಷ್ಟೇ ಗೋವಾದ ಬೀಚ್‌ಗಳು ಕೂಡ ಚೆನ್ನಾಗಿವೆ. ಕೇರಳದಲ್ಲಿ ಬೀಚ್ ಮಾತ್ರವಲ್ಲ ವಯನಾಡಿನ ಪ್ರಕೃತಿ ರಮಣೀಯತೆ ಮೈಮರೆಸುವಂತಿದೆ. ಚೆನ್ನೈನಲ್ಲಿ ಮರೀನಾ ಬೀಚ್ ಮಾತ್ರವಲ್ಲ, ಪೂರ್ತಿ ಈಸ್ಟ್ ಕೋಸ್ಟ್ ರೋಡ್ ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗ. ಅದೇ ರೀತಿ ಹೈದರಾಬಾದ್‌ನಲ್ಲಿ ಚಾರ್ಮಿನಾರ್‌ ನಿಜಕ್ಕೂ ವಂಡರ್ ಫುಲ್.

ವಿದೇಶ ಪ್ರವಾಸದ ಸಂದರ್ಭದಲ್ಲಿ ಮರೆಯಲಾಗದ ಘಟನೆಗಳು ನಡೆದಿವೆಯೇ?

ಯುರೋಪ್‌ ದೇಶಗಳು ನನಗೆ ತುಂಬಾ ಇಷ್ಟ. ಬ್ರೆಜಿಲ್‌, ಅಮ್ಸ್ಟೆರ್ಡಾಮ್‌ ಎಲ್ಲ ತುಂಬ ಚೆನ್ನಾಗಿದೆ. ಅಲ್ಲೆಲ್ಲ ಬಲವಾದ ಸಂಸ್ಕೃತಿ ಇದೆ‌ . ಜಿಯೋಗ್ರಾಫಿಕಲ್‌ ಆಗಿಯೂ ತುಂಬಾ ಚೆನ್ನಾಗಿದೆ. ಅದೇ ರೀತಿ ಯುಎಇ, ದುಬೈ, ಅಬುದಾಬಿಗೂ ಹೋಗಿದ್ದೇನೆ. ದುಬೈ ಶಾಪಿಂಗ್‌ಗೆ ತುಂಬಾ ಚೆನ್ನಾಗಿದೆ. ಆದರೆ ನನಗೆ ಶಾಪಿಂಗ್ ಕ್ರೇಜ್ ಇಲ್ಲ! ಮಾಲ್ಡೀವ್ಸ್‌ ಗೆ ಹೋಗಿದ್ದಾಗ ನಾನು ಡೀಪ್‌ ಡೈವಿಂಗ್‌ ಮಾಡಿದ್ದೀನಿ. ಅಂಡರ್‌ ವಾಟರ್ ಟ್ರೈನಿಂಗ್‌ ತಗೊಂಡು ಒಳಗಿಳಿದು ಹೋದಂಥ ಅನುಭವ ನಿಜಕ್ಕೂ ಮರೆಯಲಾಗದು.

ಇನ್ನು ಹೋಗಲೇಬೇಕು ಅಂತ ಅಂದುಕೊಂಡಿರುವ ಜಾಗ?

ಲೈಫ್‌ ಎಲ್ಲಿಗೆ ಕರೆದುಕೊಂಡು ಹೋಗುತ್ತೋ ಅಲ್ಲಿಗೆ ಹೋಗುತ್ತೇನೆ. ಅದೇ ನನ್ನ ಗುರಿ.

ನೀವು ಪ್ರಸಿದ್ಧ ನಟಿ. ಪ್ರವಾಸದ ವೇಳೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ?

ಇಂಥದೊಂದು ಅನುಭವ ನನಗೆ ತುಂಬ ಸಲ ಆಗಿದೆ. ವಿದೇಶಗಳಲ್ಲೂ ಅಭಿಮಾನಿಗಳು ಭೇಟಿಯಾಗಿ ನನ್ನೊಂದಿಗೆ ಪರಿಚಯಿಸಿಕೊಂಡಿದ್ದು, ಫೊಟೋ ತೆಗೆಸಿಕೊಂಡಿದ್ದು ಎಲ್ಲವೂ ಖುಷಿ ಕೊಟ್ಟಿದೆ. ನನಗೆ ಸೋಲೋ ಟ್ರಿಪ್‌ ಹೋಗುವುದು ಇಷ್ಟ. ಸೇಫ್ಟಿಯಾಗಿ ಆರಾಮವಾಗಿ ಪ್ಲ್ಯಾನ್‌ ಮಾಡಿಕೊಂಡರೆ ಸೇಫಾಗಿ ಹಿಂದಿರುಗಬಹುದು. ಹೀಗೆ ಹೋದಾಗಲೇ ಎಲ್ಲಾ ಕಡೆ ನಮ್ಮ ಕನ್ನಡದವರು ಇರುವುದು ಅರಿವಾಯಿತು. ವಿದೇಶದಲ್ಲಿ ಶಾಪಿಂಗ್‌ ಮಾಡಬೇಕಾದರೆ, ರೆಸ್ಟೋರೆಂಟ್‌ನಲ್ಲಿರಬೇಕಾದರೆ, ಫ್ಯಾನ್ಸ್‌ ಎಲ್ಲ ಬಂದು ಮಾತನಾಡುತ್ತಾರೆ. ಇದು ತುಂಬ ಖುಷಿಯ ವಿಷಯ.

Untitled design (7)

ಪ್ರವಾಸದ ವೇಳೆ ನಿಮ್ಮ ಮೆಚ್ಚಿನ ಆಹಾರ ಯಾವುದು?

ಪ್ರವಾಸದ ವೇಳೆ ನಾನು ಹೆಚ್ಚು ಎಂಜಾಯ್ ಮಾಡುವುದೇ ಆಯಾ ಪ್ರದೇಶದ ಆಹಾರಗಳನ್ನು. ಶಾಪಿಂಗ್ ಪ್ಲೇಸ್ ಗಿಂತ ಒಳ್ಳೆಯ ರೆಸ್ಟೋರೆಂಟ್ ಹುಡುಕುವುದೇ ಹೆಚ್ಚು. ನಾನು ತಿನ್ನೋ ವಿಷಯಕ್ಕೆ ತುಂಬ ಗಮನ ಕೊಡ್ತೀನಿ. ಚೆನ್ನಾಗಿ ತಿನ್ನುತ್ತೇನೆ. ವರ್ಕೌಟ್ ಮಾಡುತ್ತೇನೆ. ನನ್ನ ಫೇವರಿಟ್ ಆಹಾರ ಎಂದರೆ ಮಂಗಳೂರಿನ ಆಹಾರ. ಕ್ರ್ಯಾಬ್‌ ತುಂಬ ಇಷ್ಟ ನನಗೆ. ಏಡಿ ತುಂಬಾ ಆರೋಗ್ಯಕರವೂ ಹೌದು.

ನೀವು ಪ್ರಯಾಣಕ್ಕೆ ಹೊರಟಾಗಲೆಲ್ಲ ಫ್ಯಾಷನ್ ಐಕಾನ್ ರೀತಿ ಕಾಣಿಸುತ್ತೀರಲ್ಲ?

ಬಹಳಷ್ಟು ಬಾರಿ ಅವೆಲ್ಲವೂ ಬ್ರ್ಯಾಂಡ್ ಕೊಲಬರೇಷನ್‌ ಆಗಿರುತ್ತದೆ. ಬಟ್ಟೆ, ಬ್ಯಾಗ್, ಕನ್ನಡಕ ಎಲ್ಲವೂ ಅಂಥವೇ. ಹಾಗಾಗಿಯೇ ವೈಯಕ್ತಿಕವಾಗಿ ನಾನು ತುಂಬ ಸಿಂಪಲ್‌ ಅಂದರೆ ಯಾರೂ ನಂಬುವುದಿಲ್ಲ. ನನಗೆ ಬ್ರ್ಯಾಂಡ್‌ ಬಟ್ಟೆಗಳು ಬೇಕಾಗಿಲ್ಲ. ಪ್ರವಾಸದ ಸಂದರ್ಭದಲ್ಲಿ ಕೂಡ ತೀರ ಸರಳವಾದ ಬಟ್ಟೆಗಳಲ್ಲಿ ಕಾಣಿಸಿಕೊಳ್ಳಲು ಬಯಸುತ್ತೇನೆ.