ಗೋಪಿನಾಥಂನಲ್ಲಿ ಓಡಾಟ.. ಜೆಎಲ್‌ಆರ್ ಫುಲ್ ಊಟ
ಜೆಎಲ್‌ಆರ್‌ನಲ್ಲಿ ನೇಚರ್‌ವಾಕ್ ಯಾವಾಗಲೂ ಬೆಸ್ಟ್ ಎಂದು ಹೇಳಬಹುದು. ಇಲ್ಲಿ ನೇಚರ್ ವಾಕ್ ಅಂದರೆ, ಗೇಟ್ ವರೆಗೂ ಬಂದು ಇಲ್ಲಿಂದ ಸ್ಟ್ರೇಟ್ ಹೋಗಿ ಅಲ್ಲಿ ಒಂದು ಸ್ಥಳ ಬರುತ್ತೆ, ಅದನ್ನು ನೋಡಿಕೊಂಡು ವಾಪಸ್ ಬಂದ್ಬಿಡಿ ಅಂತ ಹೇಳಲ್ಲ. ಅಲ್ಲಿನ ಕಾಡುಗಳ ಬಗ್ಗೆ ತಿಳಿದುಕೊಂಡಿರುವ ಮಾರ್ಗದರ್ಶಿಗಳು ನಮ್ಮ ಜತೆಗೆ ಬಂದು, ಪ್ರಾಣಿಗಳ, ಪಕ್ಷಿಗಳ ಬಗ್ಗೆ ಹೇಳುತ್ತ, ಕಾಡಿನ ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಾ ನಿಮ್ಮ ಜತೆಗೆ ಅವರೂ ಹೆಜ್ಜೆಹಾಕುತ್ತಾರೆ.
ಗೋಪಿನಾಥಂ ಅಂದ್ರೆ ಯಾರದ್ದೋ ಹೆಸರು ಅಂತ ಅನಿಸುತ್ತೆ. ಆದರೆ, ಇದು ಯಾರದ್ದೋ ಹೆಸರಲ್ಲ, ಇದು ಒಂದು ಸ್ಥಳದ ಹೆಸರು. ಕೃಷ್ಣನ ಹೆಸರನ್ನು ಇಟ್ಟುಕೊಂಡ ಈ ಊರು, ಕೆಲವರಿಗೆ ಬರೀ ಒಂದು ಹಳ್ಳಿಯಾಗಿ ಕಂಡರೆ, ಇನ್ನು ಕೆಲವರಿಗೆ ಇದು ಸ್ವರ್ಗ. ಪ್ರವಾಸಿ ಪ್ರಪಂಚದ ರಹದಾರಿ ಪುಟದಲ್ಲಿ ಹೋದವಾರ ನೆಮೊಫಿಲಿಸ್ಟ್ ಎಂಬ ಶಬ್ದವನ್ನು ಕಲಿಸಿದ್ದೆವು. ಇದು ನೆಮೊಫಿಲಿಸ್ಟ್‌ಗಳು ಆಯ್ಕೆ ಮಾಡುವ ಮೊದಲ ಸ್ಥಳ. ಏಕೆಂದರೆ, ಈ ಕಾಡು ಪ್ರಪಂಚದಾದ್ಯಂತ ಪ್ರವಾಸಿಗರನ್ನು, ನೆಮೊಫಿಲಿಸ್ಟ್‌ಗಳನ್ನು ಕೈಬೀಸಿ ಕರೆಯುತ್ತದೆ. ಕಾವೇರಿ ತೀರದ ಮೇಲಿರುವ ಈ ಸುಂದರ ಸ್ಥಳ ಮತ್ತೊಂದು ವಿಚಾರಕ್ಕೂ ಫೇಮಸ್. ಅದು ಆನೆ ದಂತಚೋರ ವೀರಪ್ಪನ್‌ನ ಜನ್ಮ ಸ್ಥಳವೂ ಹೌದು. ಅವನು ಹೆಚ್ಚೂ ಕಡಿಮೆ ಸಾವಿರಕ್ಕೂ ಹೆಚ್ಚು ಆನೆಗಳನ್ನು ಕೊಂದ, ನೂರಕ್ಕೂ ಹೆಚ್ಚು ಜನರನ್ನು ಬಲಿ ಪಡೆದ. ಅವನು ಶ್ರೀಗಂಧದ ಮರಗಳನ್ನೂ ಸ್ಮಗಲ್ ಮಾಡ್ತಿದ್ದ. 2004ರಲ್ಲಿ ಅವನು ಸತ್ತ ಮೇಲೆ ಇಲ್ಲಿ ಹಲವಾರು ಬದಲಾವಣೆಗಳಾದವು. ಅದರಲ್ಲಿ ಮೊದಲನೆಯದ್ದು ವೀರಪ್ಪನ್ ಹುಟ್ಟಿದ ಊರು ಎಂಬ ಕೆಟ್ಟ ಹಣೆಪಟ್ಟಿಯನ್ನು ಧರಿಸಿದ್ದ ಈ ಸ್ಥಳ, ಇದರ ಸೌಂದರ್ಯದಿಂದಲೂ ಜನರಿಗೆ ಹತ್ತಿರವಾಗತೊಡಗಿತು. ವೀರಪ್ಪನ್ ಬದುಕಿದ್ದರೆ, ಈ ಸ್ಥಳಕ್ಕೆ ಹೋದಾಗ ಅವನ ಮೀಸೆಯನ್ನು ತಿರುವಿ ವಾಪಸ್ ಬರಬಹುದಾಗಿತ್ತು (ಅವನು ಬಿಟ್ಟರೆ! ಇಲ್ಲಾಂದ್ರೆ ಮರಳಿ ಬಾರದದೂರಿಗೆ).

ಕರ್ನಾಟಕ ತಮಿಳುನಾಡು ಬಾರ್ಡರ್‌ನಲ್ಲಿರುವ ಈ ಊರು, ಎರಡೂ ರಾಜ್ಯಗಳ ಭಾಷೆ, ಸಂಸ್ಕೃತಿ, ಪಾಕಪದ್ಧತಿ, ಜನ ಹೀಗೆ… ನಾವೆಲ್ಲ ಕರ್ನಾಟಕದಲ್ಲಿದ್ದೇವೋ, ತಮಿಳುನಾಡಲ್ಲಿದ್ದೇವೋ ಎಂಬ ಸಣ್ಣ ಕನ್ಫ್ಯೂಶನ್ ಶುರುವಾಗುತ್ತದೆ. ಪ್ರವಾಸಿಗರಿಗೆ ಬೇಕಾಗಿದ್ದೂ ಅದೇ ಅಲ್ಲವಾ? ಹಲವಾರು ಸಂಸ್ಕೃತಿಗಳನ್ನು ಕಲಿಯೋದು, ಹಲವಾರು ಭಾಷೆಗಳನ್ನು ಬಳಸೋದು. ಊರಲ್ಲಿ ಸ್ನೇಹಿತರ ಜತೆ ಮಾತಾಡ್ತಾ, ʼಈ ಭಾಷೆಯಲ್ಲಿ ಯಾವುದೋ ವಸ್ತುವನ್ನು ಹಿಂಗ್ ಅಂತಾರಂತೆ,ʼ ʼಅವರು ಊಟದಲ್ಲಿ ಬೇರೆ ಪದಾರ್ಥ ಬಳಸ್ತಾರೆ, ಏನ್ ಸೈಕ್ ಇರುತ್ತೆ ಗೊತ್ತಾ?ʼ ʼಅಲ್ಲಿ ಜನನೇ ಒಂಥರಾ ಗುರು.. ಸ್ವಲ್ಪ ಮಾತಾಡಿದ್ರೆ ಸಾಕು, ಅವ್ರೇ ಮಾತಾಡೋಕೆ ಶುರು ಮಾಡ್ತಾರೆ.ʼ ಅನ್ನೋ ಸಣ್ಣಪುಟ್ಟ ಡೈಲಾಗ್‌ಗಳನ್ನು ಸೇರಿಸಬಹುದು ಅಲ್ವಾ?
ಈ ಗೋಪಿನಾಥಂಗೆ ಹೋಗುವ ದಾರಿ ಭಾರಿ ಮಜ ಕೊಡುತ್ತೆ.

ನಿಮಗೆ ಗೊತ್ತಾ? ಮದ್ದೂರು ದಾಟಿ ಕೊಳ್ಳೆಗಾಲದ ಮೇಲೆ ಮುಂದೆ ಹೊರಟರೆ ಬರೀ ಕಾಡು. ಕಾಡಲ್ಲೇ ಡ್ರೈವ್ ಅಥವಾ ರೈಡ್ ಮಾಡ್ಬೇಕು. ಅಂಥ ಡ್ರೈವ್‌ನ್ನು ಯಾರು ತಾನೇ ಇಷ್ಟ ಪಡಲ್ಲ ಹೇಳಿ? ದಾರಿಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ದೇವರಿಗೆ ಕೈ ಮುಗಿದು ಮುಂದೆ ಹೊರಟರೆ, ಕಾವೇರಿ ನದಿ ತಟದಲ್ಲೇ ಹೋಗೋದು. ಕಾವೇರಿಯನ್ನು ದಾಟಿದರೆ ತಮಿಳುನಾಡು. ಬೆಂಗಳೂರಿನಿಂದ ಹೆಚ್ಚೂಕಡಿಮೆ 230 ಕಿಮೀ ದೂರವಿರುವ ಈ ಸ್ಥಳಕ್ಕೆ ಹೆಚ್ಚೂಕಡಿಮೆ 5.30 ಗಂಟೆಗಳಲ್ಲಿ ರೀಚ್ ಆಗಬಹುದು. ಅಲ್ಲಲ್ಲಿ ಘಾಟ್ ಸೆಕ್ಷನ್ ಬರುವುದರಿಂದ ಗಾಡಿಯನ್ನು ತುಂಬಾ ಹುಷಾರಾಗಿ ಓಡಿಸಬೇಕಾಗುತ್ತೆ.
ಸರಿ ಈಗ ಗೋಪಿನಾಥಂಗೆ ಬಂದ್ವಿ, ಉಳಿಯೋದು ಎಲ್ಲಿ? ಊಟ ಏನು? ನಿದ್ದೆ ಮಾಡುವಾಗ ಹುಲಿ ಅಟ್ಯಾಕ್ ಮಾಡುತ್ತಾ? ಸ್ನಾನ ಗೀನ ಮಾಡೋಕೆ, ಅಲ್ಲಿ ಏನಾದ್ರೂ ಇದ್ಯಾ? ಮನುಷ್ಯರು ಬದೋಕೋದು ಹೇಗೆ ಕಣ್ರೀ? ಎಲ್ಲ ಕಡೆ ಏನು ಅತ್ತೆ ಮನೆ ಇರುತ್ತಾ? ಅಲ್ಲಿ ಜೆಎಲ್‌ಆರ್ ಇಲ್ಲ ಅಂತ ಮಾತ್ರ ಹೇಳ್ಬೇಡಿ .
ಅಲ್ಲಿ ಜೆಎಲ್‌ಆರ್ ಇರಲಿಲ್ಲವಾಗಿದ್ದರೆ, ಇದನ್ನು ಬರೆಯುವ ಸಂಭವವೇ ಬರುತ್ತಿರಲಿಲ್ಲ. ರಾಜ್ಯದ ಎಲ್ಲ ಖ್ಯಾತ ಪ್ರವಾಸಿ ಸ್ಥಳಗಳಲ್ಲಿ ಇರುವ ಜೆಎಲ್‌ಆರ್ ಬಗ್ಗೆ ಇನ್ನೆಷ್ಟು ಹೇಳಬೇಕು? ಸರಿಯಾದ ಸಮಯಕ್ಕೆ ಊಟ, ಒಳ್ಳೆಯ ಉಪಚಾರ ನೀಡುವ ಸಿಬ್ಬಂದಿಗಳು, ಉಳಿದುಕೊಳ್ಳೋಕೆ ಒಳ್ಳೆ ಕಾಟೇಜ್ ಟೆಂಟ್‌ಗಳು, ಸಫಾರಿಗೆ ಜೀಪ್‌ಗಳು, ಅಲ್ಲಿನ ಕಾಡಿನ ಬಗ್ಗೆ ತಿಳಿದುಕೊಂಡಿರುವ ಮಾರ್ಗದರ್ಶಿಗಳು, ಸಮಯಕ್ಕೆ ಸರಿಯಾಗಿ ಬರುವ ಊಟ-ಉಪಚಾರ, ಟೀ-ಕಾಫೀಗಳು ಉಫ್ ಇಲ್ಲಿ ಏನಿದೆ ಏನಿಲ್ಲ...!
ಗೋಪಿನಾಥಂಗೆ ಬಂದಾಗ ಸಫಾರಿ ಮಾಡದೇ ವಾಪಸ್ ಹೋಗಲು ಆಗುವುದೇ ಇಲ್ಲ. ಇಲ್ಲಿಗೆ ಬರುವಾಗಲೇ ಕಾಡಿನ ಮಧ್ಯದಿಂದ ಬಂದಿರುತ್ತೀರಿ. ಆದರೆ, ಕಾಡಿನ ಒಳಗೆ ಹೋಗಿ ಅಲ್ಲಿರುವ ಪ್ರಾಣಿ-ಪಕ್ಷಿಗಳಿಗೆಲ್ಲ ಹಾಯ್ ಬಾಯ್ ಮಾಡಿ, ಮರಗಿಡಗಳ ಬಗ್ಗೆ ತಿಳಿದು, ಈ ಪ್ರಾಣಿಗಳ ಬದುಕು ಹೀಗೆಲ್ಲಾ ಇರುತ್ತಾ? ಕಾಡು ಹಿಂಗೆಲ್ಲ ಇರುತ್ತಾ? ಎಂಬ ಪ್ರಶ್ನೆಗಳನ್ನು ಹಾಕಿಕೊಂಡು ಆರಾಮವಾಗಿ ಬರಬಹುದು. ಕಾಡಲ್ಲಿ ಆರಾಮವಾಗಿ ಓಡಾಡುತ್ತ, ಕಾಡಿಗಾಗಿ ಪ್ರಾಣ ಬಿಟ್ಟ ಫಾರೆಸ್ಟ್ ಆಫೀಸರ್‌ರ ಸ್ಮಾರಕಕ್ಕೆ ಭೇಟಿ ನೀಡಿ, ಸ್ವಲ್ಪ ಟ್ರೆಕ್ ಮಾಡಿ, ತುದಿಯಲ್ಲಿ ಒಳ್ಳೊಳ್ಳೆ ಲ್ಯಾಂಡ್‌ಸ್ಕೇಪ್‌ಗಳನ್ನು ಕಣ್ಣಿಗೆ ತುಂಬಿಕೊಂಡು. ಭಾರತದ ನಯಾಗರ ಹೊಗೇನಕಲ್ ಫಾಲ್ಸ್‌ನ್ನು ನೋಡಿ, ಕಾವೇರಿಯಲ್ಲಿ ತೆಪ್ಪದ ಮೇಲೆ ಸವಾರಿ ಮಾಡಬಹುದು.
ಪಿ ಶ್ರೀನಿವಾಸ್ ಸ್ಮಾರಕ

ವೀರಪ್ಪನ್ ನ್ನು ಸೆರೆಹಿಡಿಯಲು ಹೋದ ಟೀಂನಲ್ಲಿದ್ದ ಇವರು ಆ ಕಾರ್ಯಾಚರಣೆಯಲ್ಲೇ ಅಸುನೀಗಿದರು. ಈ ಭಾಗದ ಜನರಿಗೆ ಅವರು ಹಲವಾರು ಕೆಲಸಗಳನ್ನು ಮಾಡಿಕೊಟ್ಟರು. ವೀರಪ್ಪನ್‌ನನ್ನು ಸರೆಂಡರ್ ಮಾಡಿಸುವುದಕ್ಕೆ ಇವರು ಹರಸಾಹಸ ಪಟ್ಟರು. ಒಮ್ಮೆ ವೀರಪ್ಪನ್ ಜತೆ ಸಂಪರ್ಕ ಸಾಧಿಸಿ, ಅವನು ಶರಣಾಗತಿಯಾಗಲು ಸಿದ್ಧನಾದ ಮೇಲೆ, ಅವನನ್ನುಭೇಟಿ ಮಾಡಲು ಗೋಪಿನಾಥಂ ಕಾಡಿಗೆ ಹೋಗಿದ್ದರು. ಕಾಡಿನಲ್ಲಿ ಮುಖ ತೊಳೆಯಬೇಕಾದರೆ, ವೀರಪ್ಪನ್ ಹಿಂದಿನಿಂದ ಅವರ ತಲೆಗೆ ಗುಂಡಿಕ್ಕಿ ಕೊಂದ. ಅದಾದ ಮೇಲೆ ಅವರ ರುಂಡವನ್ನು ಕತ್ತರಿಸಿದ್ದ. ಅವರ ರುಂಡ ಹಲವಾರು ತಿಂಗಳು ಇದೇ ಕಾಡಲ್ಲಿ ಇತ್ತು. 1991ರಲ್ಲಿ ಆದ ಈ ಘಟನೆ, ಅಲ್ಲಿಗೆ ಹೋಗುವ ಎಲ್ಲರಿಗೂ ರೋಮಾಂಚನ ಮೂಡಿಸುತ್ತೆ. ಇವರ ಧೈರ್ಯವನ್ನು ತೋರಿಸುತ್ತೆ. ವೀರಪ್ಪನ್ ನಂಥ ನರ ರೂಪದ ರಾಕ್ಷಸನ ಕ್ರೂರತ್ವವನ್ನು ತೋರಿಸುತ್ತೆ. ಕಾಡಿನ ಮಧ್ಯಭಾಗದಲ್ಲಿರುವ ಈ ಸ್ಮಾರಕ, ಅವರ ಸತ್ತ ಸ್ಥಳದಲ್ಲೇ ಕಟ್ಟಿದ್ದಾರೆ. ನಾಗಮಲೆಯ ದೊಡ್ಡದೊಡ್ಡ ಬೆಟ್ಟಗಳ ನಡುವೆ ಈ ಸ್ಮಾರಕವಿದೆ.
ತೊಟ್ಟಿ ಸವಾರಿ

ಈ ಕ್ಯಾಂಪ್‌ನ ಪಕ್ಕದಲ್ಲೇ ಒಂದು ಅತ್ಯುತ್ತಮ ಕೆರೆಯಿದೆ. ಅದರಲ್ಲಿ ಒಂದೊಳ್ಳೆ ತೊಟ್ಟಿ ಸವಾರಿ ಮಾಡಬಹುದು. ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ಅಂತ ಹಾಡಬಹುದು. ಅಲ್ಲಿ ನಿಮ್ಮ ಪ್ರೀತಿ ಪಾತ್ರರು ಅಥವಾ ಪ್ರೇಮಿ ಜತೆ ಹೋಗಿದ್ದರೆ, ಯೇ ಚಾಂದ್ ಸಾ ರೋಶನ್ ಚೆಹ್ರಾ ಅಂತ ಅವರಿಗೆ ಲೈನ್ ಹೋಡೀಬಹುದು. ಯಾರ ಜತೆಯೂ ಮಾತಾಡೋಕೆ ಇಷ್ಟವಿಲ್ಲದಿದ್ದರೆ, ಇಲ್ಲಿ ತುಂಬಾ ಚೆನ್ನಾಗಿರೋ ವ್ಯೂಗಳಿವೆ ಸ್ವಾಮಿ. ಒಂದೊಂದು ಕಡೆ ಒಂದೊಂದು ರೀತಿಯ ನೋಟಗಳು, ಬೋಟ್‌ನಲ್ಲೇ ಕಳೆದುಹೋಗಬೇಕು ಎನ್ನುವಷ್ಟು ಚೆನ್ನಾಗಿರುವ ನೋಟಗಳು ನಿಮ್ಮ ಕಣ್ಣು ಮುಂದೆ ಇರುತ್ತವೆ. ಇಲ್ಲಿಗೆ ವಲಸೆ ಬಂದಿರುವ ಹಕ್ಕಿಗಳ ಸಮೀಪಕ್ಕೆ ಹೋಗಿ, ಅದರ ಒಳ್ಳೊಳ್ಳೆ ಫೊಟೋಗಳನ್ನು ತೆಗೆದುಕೊಳ್ಳಬಹುದು. ಸಂಜೆ ಈ ಕೆರೆಯಲ್ಲಿ ಒಳ್ಳೆ ಸೂರ್ಯಾಸ್ತ ನೋಡಬಹುದು. ಕಾಡು, ಬೆಟ್ಟ, ಕೆರೆಯ ನಡುವ ಪಡುವಣ ಸೂರ್ಯ, ಕೆಂಪಾಗಿ ಬಾನಿಂದಾಚೆಗೆ ಹೋಗುವ ದೃಶ್ಯ ಎಂಥವನಿಗೂ ಹಿಡಿಸುತ್ತದೆ. ಇದರ ಸಮೀಪವೇ ಮುನೇಶ್ವರ ದೇವಸ್ಥಾನವಿದೆ.

ಹೊಗೇನಕಲ್ ಫಾಲ್ಸ್
ಗೋಪಿನಾಥಂನಿಂದ 14 ಕಿಮೀ ದೂರದಲ್ಲಿರುವ ಈ ಫಾಲ್ಸ್, ಸ್ವಲ್ಪ ಫೇಮಸ್ ಅಲ್ವಾ? ಮಳೆಗಾಲದ ಸಮಯದಲ್ಲಿ ಹೋದರಂತೂ ಮತ್ತಷ್ಟು ಸುಂದರವಾಗಿರುತ್ತದೆ. ಕರ್ನಾಟಕದ ಬಳಿಯಿರುವ ಫಾಲ್ಸ್ ಕಡೆ ಇದನ್ನು ವೀಕ್ಷಿಸಲು ತುಂಬಾ ಜನ ಬರಲ್ವಂತೆ, ಇದು ಮತ್ತೊಂದು ಪ್ಲಸ್ ಪಾಯಿಂಟ್.
ನೇಚರ್ ವಾಕ್
ಜೆಎಲ್‌ಆರ್‌ನಲ್ಲಿ ನೇಚರ್‌ವಾಕ್ ಯಾವಾಗಲೂ ಬೆಸ್ಟ್ ಎಂದು ಹೇಳಬಹುದು. ಇಲ್ಲಿ ನೇಚರ್ ವಾಕ್ ಅಂದರೆ, ಗೇಟ್ ವರೆಗೂ ಬಂದು ಇಲ್ಲಿಂದ ಸ್ಟ್ರೇಟ್ ಹೋಗಿ ಅಲ್ಲಿ ಒಂದು ಸ್ಥಳ ಬರುತ್ತೆ, ಅದನ್ನು ನೋಡಿಕೊಂಡು ವಾಪಸ್ ಬಂದ್ಬಿಡಿ ಅಂತ ಹೇಳಲ್ಲ. ಅಲ್ಲಿನ ಕಾಡುಗಳ ಬಗ್ಗೆ ತಿಳಿದುಕೊಂಡಿರುವ ಮಾರ್ಗದರ್ಶಿಗಳು ನಮ್ಮ ಜತೆಗೆ ಬಂದು, ಪ್ರಾಣಿಗಳ, ಪಕ್ಷಿಗಳ ಬಗ್ಗೆ ಹೇಳುತ್ತ, ಕಾಡಿನ ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಾ ನಿಮ್ಮ ಜತೆಗೆ ಅವರೂ ಹೆಜ್ಜೆಹಾಕುತ್ತಾರೆ.

ವೀರಪ್ಪನ್ ಶಿಷ್ಯರ ಕಾಟ ಇದ್ಯಾ?
ಹೇಳಬೇಕೆಂದರೆ, ವೀರಪ್ಪನ್ ಕುಟುಂಬ ಈ ಊರಲ್ಲಿ ವಾಸಿಸುತ್ತಿಲ್ಲ. ಆದರೆ, ಅವರ ಸಂಬಂಧಿಕರು ಇದ್ದಾರೆ. ಶ್ರೀನಿವಾಸ್ ಅವರ ಸ್ಮಾರಕವೊಂದನ್ನು ಬಿಟ್ಟರೆ, ವೀರಪ್ಪನ್ ನೆನಪಿಸುವ ಯಾವುದೇ ವಿಚಾರವಿಲ್ಲ. ನೀವು ಇಲ್ಲಿಗೆ ಹೋದಾಗ ಯಾರೂ ನಿಮ್ಮನ್ನು ಕಿಡ್ನ್ಯಾಪ್ ಮಾಡಲ್ಲ. ಆರಾಮವಾಗಿ ಹೋಗಿಬನ್ನಿ!
ದಿನಚರಿ
ದಿನ 1
ಮಧ್ಯಾಹ್ನ 1:00: ಚೆಕ್-ಇನ್
ಮಧ್ಯಾಹ್ನ 1:30 - ಮಧ್ಯಾಹ್ನ 2:30: ಊಟ
ಮಧ್ಯಾಹ್ನ 3:00 - 3:15: ಚಹಾ/ಕಾಫಿ
ಮಧ್ಯಾಹ್ನ 3:30 - 6:00: ತೆಪ್ಪದ ಸವಾರಿ
ಚಹಾ ಮತ್ತು ತಿಂಡಿಗಳು
ರಾತ್ರಿ 8:00 - 8:30: ವನ್ಯಜೀವಿ ಸಾಕ್ಷ್ಯಚಿತ್ರ ಪ್ರದರ್ಶನ
ರಾತ್ರಿ 9:00 - 9:30: ಭೋಜನ
ದಿನ 2
ಬೆಳಗ್ಗೆ 6:00 - 6:15: ವೇಕ್ ಅಪ್ ಕಾಲ್ ಮತ್ತು ಚಹಾ/ಕಾಫಿ
ಬೆಳಗ್ಗೆ 6:30 - 9:00: ನೇಚರ್‌ವಾಕ್
ಬೆಳಗ್ಗೆ 9:00 - 10:00: ಉಪಾಹಾರ
ಬೆಳಗ್ಗೆ 10:30: ಚೆಕ್ಔಟ್
ಪ್ಯಾಕೇಜ್
ಟೆಂಟೆಡ್ ಕಾಟೇಜ್ ಬೆಲೆ
ಪ್ಯಾಕೇಜ್‌ನಲ್ಲಿ: ಆಯ್ಕೆಮಾಡಿದ ವಸತಿ ಸ್ಥಳ, ವಾಸ್ತವ್ಯ, ಊಟ, ಭೋಜನ ಮತ್ತು ಉಪಹಾರ, ಚಾರಣ, ಸೈಕ್ಲಿಂಗ್, ಕಯಾಕಿಂಗ್, ಪೆಡಲ್ ದೋಣಿ ಮಕ್ಕಳ ಆಟದ ಪ್ರದೇಶ, ಸೂರ್ಯಾಸ್ತದ ಸ್ಥಳ, ಸೂರ್ಯೋದಯ ನೋಡಲು ಹೋಗುವುದು. ಇಂಡೋರ್ ಕೇರಂ ಆಟ, ಶಟಲ್ ಕಾಕ್ ಆಟ. ಅರಣ್ಯ ಪ್ರವೇಶ
ದಾರಿ ಹೇಗೆ?
ರಸ್ತೆಯ ಮೂಲಕ
ಈ ಶಿಬಿರವು ಬೆಂಗಳೂರಿನಿಂದ ಸುಮಾರು 245 ಕಿಮೀ ಮತ್ತು ಮೈಸೂರಿನಿಂದ 166 ಕಿಮೀ ದೂರದಲ್ಲಿದೆ, ಇದು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಂದ ಉತ್ತಮ ಸಂಪರ್ಕ ಹೊಂದಿದೆ.
ರೈಲು ಮೂಲಕ
ರೆಸಾರ್ಟ್ ಮೈಸೂರು ಜಂಕ್ಷನ್ ರೈಲು ನಿಲ್ದಾಣದಿಂದ ಸುಮಾರು 165 ಕಿಮೀ ದೂರದಲ್ಲಿದೆ, ಪ್ರಮುಖ ನಗರಗಳಿಗೆ ರೈಲುಗಳು ಲಭ್ಯವಿದೆ.
ವಿಮಾನದ ಮೂಲಕ
ಹತ್ತಿರದ ವಿಮಾನ ನಿಲ್ದಾಣವೆಂದರೆ ಮೈಸೂರು ವಿಮಾನ ನಿಲ್ದಾಣ, ಇದು ಬೆಂಗಳೂರು ಮತ್ತು ಮಂಗಳೂರನ್ನು ಸಂಪರ್ಕಿಸುವ ವಿಮಾನಗಳನ್ನು ಹೊಂದಿದೆ. ಬೆಂಗಳೂರಿನಿಂದ 280 ಕಿಮೀ.
ಸಂಪರ್ಕ:
ಗೋಪಿನಾಥಂ ಗ್ರಾಮ ಮತ್ತು ಅಂಚೆ ಹನ್ನೂರು ತಾಲ್ಲೂಕು ಚಾಮರಾಜನಗರ ಜಿಲ್ಲೆ -571490 ಕರ್ನಾಟಕ, ಭಾರತ
ವ್ಯವಸ್ಥಾಪಕರು: ಶ್ರೀ ಸ್ವಾಮಿ
ಸಂಪರ್ಕ ಸಂಖ್ಯೆ: 9480885300
ಇಮೇಲ್ ಐಡಿ: info@junglelodges.com