ತಲೈವಾ ಬಾಯಲ್ಲಿ ಸಲೈವಾ ತರಿಸಿದ ಎಸ್‌ಎಲ್‌ವಿ ರೆಡ್ಡಿ ಮಿಲಿಟರಿ ಹೊಟೇಲ್
ಆಹಾರ ನಗರವಾಗಿಯೂ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಪಕ್ಕಾ ನಾಟಿ ಶೈಲಿಯ ಮಿಲಿಟರಿ ಹೊಟೇಲ್ ಗಾಗಿ ಹುಡುಕಾಡುತ್ತಿದ್ದೀರಾ? ವರ್ಷಗಳ ಹಳೆಯದಾದ ಶಿವಾಜಿ ಮಿಲಿಟರಿ ಹೊಟೇಲ್. ನವೋದಯ ಮಿಲಿಟರಿ ಹೊಟೇಲ್, ಎಸ್.ಜಿ.ರಾವ್ಸ್ ಮಿಲ್ಟ್ರಿ ಹೊಟೇಲ್ ಹೀಗೆ ಲೆಕ್ಕವಿಲ್ಲದಷ್ಟು ಮಿಲಿಟರಿ ಹೊಟೇಲ್‌ಗಳು ನಗರದ ಪ್ರಮುಖ ಜಾಗಗಳಲ್ಲಿ ಹರಡಿಕೊಂಡಿವೆಯಾದರೂ ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ ನೀಡಿ, ಉಂಡು, ವಿಶ್ರಾಂತಿ ಪಡೆಯುತ್ತಿದ್ದ ವರ್ಷಗಳ ಹಳೆಯ ಮಿಲಿಟರಿ ಹೊಟೇಲ್ ಒಂದರ ಬಗ್ಗೆ ಇಲ್ಲಿದೆ ಮಾಹಿತಿ.
ಅದು 1967ರ ಕಾಲ..ಆಗಿನ್ನೂ ರಜನಿಕಾಂತ್ ಸೂಪರ್ ಸ್ಟಾರ್ ಆಗಿರಲಿಲ್ಲ. ಒಬ್ಬ ಸಾಮಾನ್ಯ ಬಸ್ ಕಂಡಕ್ಟರ್ ಆಗಿ ಜೀವನ ನಡೆಸುತ್ತಿದ್ದ ರಜನಿ, ಮಧ್ಯಾಹ್ನ ಊಟದ ಸಮಯಕ್ಕೆ ಸರಿಯಾಗಿ ಇಲ್ಲಿ ಭೇಟಿನೀಡುತ್ತಿದ್ದರಂತೆ. ಹೊಟ್ಟೆ ತುಂಬಾ ಊಟ ಮಾಡಿ, ಕೆಲ ಹೊತ್ತು ವಿಶ್ರಾಂತಿ ಪಡೆದ ನಂತರ ಮತ್ತೆ ಕೆಲಸಕ್ಕೆ ವಾಪಸ್ಸಾಗುತ್ತಿದ್ದರಂತೆ. ಹೀಗೆ ರಜನಿ ಮೆಚ್ಚಿದ ಈ ʻಎಸ್‌ಎಲ್‌ವಿ ರೆಡ್ಡಿ ಮಿಲಿಟರಿ ಹೊಟೇಲ್ʼ ನ್ನು ಸ್ಥಾಪಿಸಿದವರು ವೆಂಕಟಸ್ವಾಮಿ ರೆಡ್ಡಿ ಎಂಬುವರು. 50 ವರ್ಷಗಳಿಗೂ ಹೆಚ್ಚು ಕಾಲದಿಂದ ಜಯನಗರದ ತಿಲಕ್ ನಗರ ಭಾಗದ ನಾನ್ ವೆಜ್ ಪ್ರಿಯರ ಅಚ್ಚುಮೆಚ್ಚಿನ ಮಿಲಿಟರಿ ಹೊಟೇಲ್ ಎಂದೇ ಗುರುತಿಸಿಕೊಂಡಿರುವ ಈ ಹೊಟೇಲ್, ಕಳೆದ 6 ವರ್ಷಗಳಿಂದಲೂ ಜೆ.ಪಿ.ನಗರ 8ನೇ ಹಂತದಲ್ಲಿರುವ ಜಂಬೂಸವಾರಿದಿಣ್ಣೆ ಮುಖ್ಯರಸ್ತೆಯಲ್ಲಿ ಕೃಷ್ಣ ರೆಡ್ಡಿಯವರ ಮಾಲೀಕತ್ವದಲ್ಲಿ ಇನ್ನೊಂದು ಶಾಖೆಯನ್ನು ಪ್ರಾರಂಭಿಸಿದೆ.
ಬೆಳಗ್ಗೆ 8.30 ರಿಂದ ರಾತ್ರಿ 11 ಗಂಟೆಯವರೆಗೂ ಗ್ರಾಹಕರಿಗಾಗಿ ನಾಟಿ ರುಚಿಯ ವಿಭಿನ್ನ ಆಹಾರ ಪದಾರ್ಥಗಳು ಇಲ್ಲಿ ಲಭ್ಯವಿದ್ದು, ಇಲ್ಲೇ ಬಂದು ಆಹಾರದ ರುಚಿ ಸವಿಯಲು ಆಗದಿದ್ದರೆ ಸ್ವಿಗ್ಗಿ, ಝೊಮೆಟೋ ದಂಥ ಸೇವೆಗಳ ಬಳಕೆಯ ಮೂಲಕವೂ ಈ ರುಚಿಕರ ಖಾದ್ಯಗಳನ್ನು ಮನೆ ಬಾಗಿಲಿಗೆ ತರಿಸಿಕೊಂಡು ಟೇಸ್ಟ್ ಮಾಡಬಹುದು.

ಎಸ್‌ಎಲ್‌ವಿ ಸ್ಪೆಷಲ್ ಮೆನು
ರಾಗಿ ಮುದ್ದೆ, ನಾಟಿ ಚಿಕನ್ ಫ್ರೈ, ಬೋಟಿ ಮಸಾಲ, ಮಟನ್ ಲಿವರ್ ಫ್ರೈ, ಪರೋಟ, ಮಟನ್ ಬಿರಿಯಾನಿ, ಚಿಕನ್ ಶೋಲೆ ಕಬಾಬ್, ಚಿಕನ್ ಬಿರಿಯಾನಿ, ದೋಸೆ ಕೈಮಾ ಗೊಜ್ಜು, ಮಟನ್ ಚಾಪ್ಸ್, ಮಟನ್ ಪೆಪ್ಪರ್ ಡ್ರೈ ಹೀಗೆ ಹೇಳುತ್ತಾ ಹೋದರೆ ಲೆಕ್ಕವಿಲ್ಲದಷ್ಟು ಬಗೆಯ ಸ್ಪೆಷಲ್ ಐಟಂಗಳು ಎಸ್‌ಎಲ್‌ವಿ ರೆಡ್ಡಿ ಮಿಲಿಟರಿ ಹೊಟೇಲ್ ಮೆನುವಿನಲ್ಲಿದೆ. ಒಂದಕ್ಕಿಂತ ಒಂದು ವಿಭಿನ್ನ ರುಚಿ, ಗರಂ ಫ್ಲೇವರ್‌ಗಳಿಗೆ ಮಾರುಹೋಗದ ನಾನ್ ವೆಜ್ ಪ್ರೇಮಿಗಳೇ ಇಲ್ಲ.
ಇಲ್ಲಿ ನಾಟಿ ಶೈಲಿಯ ಆಹಾರವಷ್ಟೇ ಅಲ್ಲ, ಆಂಬಿಯನ್ಸ್ ಕೂಡ ಪಕ್ಕಾ ಗ್ರಾಮೀಣ ಭಾಗವನ್ನು ರಿಕ್ರಿಯೇಟ್ ಮಾಡಿದಂತಿದೆ. ಗೋಡೆಗಳಲ್ಲಿರುವ ಚಿತ್ತಾರಗಳು, ಕಲಾಕೃತಿಗಳಿಂದ ತೊಡಗಿ, ಸೀಟಿಂಗ್ ವ್ಯವಸ್ಥೆ ಸಹ ಹಳ್ಳಿಯ ಚಿತ್ರಣವನ್ನೇ ಕಟ್ಟಿಕೊಡುವಂತಿದ್ದು, ಉತ್ತಮ ಸೇವೆಗೆ ಶಹಬ್ಬಾಸ್ ಅನ್ನಲೇಬೇಕು. ಆರ್ಡರ್ ಕೊಟ್ಟನಂತರ ಗ್ರಾಹಕರನ್ನು ಹೆಚ್ಚು ಕಾಯಿಸದೆ, ಬಲು ಬೇಗನೆ ಟೇಬಲ್ ಮೇಲೆ ತಂದಿರಿಸುವ ಸಿಬ್ಬಂದಿಯ ಚುರುಕುತನವನ್ನು ಮೆಚ್ಚದ ಗ್ರಾಹಕರೇ ಇಲ್ಲ.

ಜಯನಗರ ಸಂಜಯಗಾಂಧಿ ಆಸ್ಪತ್ರೆಯ ಬಳಿಯಲ್ಲಿ 1967ರಲ್ಲಿ ನನ್ನ ತಂದೆಯವರ ತಮ್ಮ ವೆಂಕಟಸ್ವಾಮಿ ರೆಡ್ಡಿಯವರು `ಎಸ್‌ಎಲ್‌ವಿ ರೆಡ್ಡಿ ಮಿಲಿಟರಿ ಹೊಟೇಲ್’ನ್ನು ಪ್ರಾರಂಭಿಸಿ ಅನೇಕ ವರ್ಷಗಳ ಕಾಲ ನಡೆಸಿಕೊಂಡು ಹೋದರು. ಇಂದಿಗೂ ಆ ಹೋಟೆಲ್ ಹಾಗೆಯೇ ನಡೆದುಕೊಂಡು ಬರುತ್ತಿದೆ. ಅದರ ನಡುವೆ ಅರಕೆರೆಯಲ್ಲಿ ಹೊಟೇಲ್‌ನ ಒಂದು ಶಾಖೆಯನ್ನು ತೆರೆದೆವು. ಆದರೆ ಅಲ್ಲಿ ಹೆಚ್ಚು ಕಾಲ ಅದನ್ನು ನಡೆಸುವುದಕ್ಕಾಗಿರಲಿಲ್ಲ. ಅದಾದನಂತರ ಈಗ ಜಂಬೂಸವಾರಿದಿಣ್ಣೆಯಲ್ಲಿ ಕಳೆದ 6 ವರ್ಷಗಳಿಂದಲೂ ಎಸ್‌ಎಲ್‌ವಿ ರೆಡ್ಡಿ ಮಿಲಿಟರಿ ಹೊಟೇಲ್ ಅದ್ದೂರಿಯಾಗಿ ನಡೆಯುತ್ತಿದೆ. ನಮ್ಮ ನಾಟಿ ರುಚಿಗೆ ಮನಸೋತು ಬೆಂಗಳೂರಿನ ಮೂಲೆ ಮೂಲೆಯಿಂದಲೂ ಆಹಾರಪ್ರಿಯರು ಬರುತ್ತಾರೆಂಬುದೇ ನಮಗೆ ಖುಷಿಯೆನಿಸುವ ವಿಚಾರ.
- ಕೃಷ್ಣ ರೆಡ್ಡಿ, ಹೊಟೇಲ್ ಮಾಲಿಕರು
ವಿಳಾಸ:
13, ಗೊಟ್ಟಿಗೆರೆ ವಾರ್ಡ್, ಪವಮಾನ ನಗರ, ಸುರಭಿ ನಗರ, ರಾಯಲ್ ಲೇಕ್ ಫ್ರಂಟ್ ಫೇಸ್ 1 ಮತ್ತು 2, ಗೊಟ್ಟಿಗೆರೆ, ಜಂಬು ಸವಾರಿ ದಿನ್ನೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು - 560076