ಮೈಸೂರಿನ ಮನೆಯೂಟಕ್ಕೆ ಶತಮಾನದ ಇತಿಹಾಸ!
ಮೈಸೂರು ಸುತ್ತಾಡಿಬರಬೇಕೆಂದುಕೊಂಡಿದ್ದೀರಾ? ಮಂಗಳೂರು, ಹಾಸನ, ಚಾಮರಾಜನಗರ, ಕೊಡಗು, ಕೇರಳದ ವಯನಾಡು ಹೀಗೆ ಇನ್ಯಾವುದೋ ಊರುಗಳಿಂದ ಬರುವ ವೇಳೆ ಮೈಸೂರಿನ ದಾರಿಯಲ್ಲಿ ಬರಬೇಕೆಂದುಕೊಂಡಿದ್ದೀರಾ? ಈ ವೇಳೆ ಮಧ್ಯಾಹ್ನದ ಊಟಕ್ಕೆ ಬೆಸ್ಟ್ ಸಸ್ಯಾಹಾರಿ ಹೊಟೇಲ್ ಯಾವುದಿದೆ ಎಂದು ನೀವು ಹುಡುಕುತ್ತಿದ್ದರೆ ಸಂಧ್ಯಾಸ್ ಹೌಸ್ ಗೆ ಒಮ್ಮೆ ಭೇಟಿ ನೀಡಿ.
ಸಾಂಸ್ಕೃತಿಕ ನಗರಿ ಮೈಸೂರು ಅರಮನೆಯ ವೈಭವ, ಇತಿಹಾಸ ಪ್ರಸಿದ್ಧ ದೇವಾಲಯಗಳು ಮಾತ್ರವಲ್ಲ, ಶುಚಿ ರುಚಿಗೆ ಹೆಸರಾಗಿರುವ ಆಹಾರ ತಾಣಗಳಿಗೂ ಹೆಸರು ಮಾಡಿದೆ. ಅಂಥ ಹೊಟೇಲುಗಳ ಪೈಕಿ ಗ್ರಾಹಕರಿಗೆ ಸಾತ್ವಿಕ ಆಹಾರವನ್ನು ಉಣಬಡಿಸುವ ಸಂಧ್ಯಾಸ್ ಹೌಸ್ ಬಗ್ಗೆ ತಿಳಿಯಲೇಬೇಕು. ಹೊಟೇಲ್ ಮುಂದೆ ಬಂದು ನಿಂತು ಅರೆರೆ..ಇದೆಂಥಾ ಹೊಟೇಲ್, ವರ್ಷಗಳ ಹಳೆಯದಾದ ಮನೆಯ ಥರ ಇದೆ ಅಲ್ವಾ ಅಂತ ಯೋಚಿಸುವ ಮಂದಿ ಹಲವರಾದರೂ, ಹೊಟೇಲ್ ಒಳಹೊಕ್ಕು ಅಲ್ಲಿನ ರುಚಿಕಟ್ಟಾದ ಆಹಾರವನ್ನು ಸವಿದ ಮೇಲೆ ಮತ್ತೊಮ್ಮೆ ಮೈಸೂರು ಪಯಣ ಯಾವಾಗ ಎಂದು ಯೋಚಿಸುವಂತೆ ಮಾಡುತ್ತದೆ ʻಸಂಧ್ಯಾಸ್ ಹೌಸ್ʼ.
ಸಂಧ್ಯಾರ ಕನಸಿನ ಕೂಸಿದು
130 ವರ್ಷಗಳ ಹಿಂದಿನ ಈ ಮನೆಯನ್ನು 1998ರಲ್ಲಿ ವಿ. ಸಂಧ್ಯಾ ಎಂಬವರು ಪುಟ್ಟದಾಗಿ ಹೊಟೇಲ್ ಆಗಿ ಪರಿವರ್ತಿಸಿಕೊಂಡಿದ್ದರು. ಅಲ್ಲದೆ ಮೊದಮೊದಲು ಅಷ್ಟಾಂಗ ಯೋಗ ಕಲಿಯಲು ಬರುವ ವಿದೇಶಿಗರಿಗಾಗಿ ಕೇಟರಿಂಗ್ ಸರ್ವಿಸ್ ನೀಡುವ ಸಲುವಾಗಿ ಈ ಹೊಟೇಲ್ ಪ್ರಾರಂಭಿಸಿದ್ದು, ನಂತರ ದಿನಗಳಲ್ಲಿ ಸಂಧ್ಯಾಸ್ ಹೌಸ್ ಎಂಬುದಾಗಿಯೇ ಇದು ಹೆಸರು ಪಡೆದುಕೊಂಡಿತ್ತು. ಯೋಗಪಟುಗಳಿಗೆ ಅಗತ್ಯವಾದ ಸಾತ್ವಿಕ ಆಹಾರವನ್ನು ಒದಗಿಸುವ ಮೂಲಕ ಚಿಕ್ಕದಾಗಿ ಹೊಟೇಲ್ ಉದ್ಯಮದತ್ತ ಸಂಧ್ಯಾ ಮುಖ ಮಾಡಿದ್ದರು.

ಹೀಗೆ ಪ್ರಾರಂಭವಾದ ಸಂಧ್ಯಾಸ್ ಹೌಸ್ ಸ್ಥಳೀಯರಿಗೆ ತೆರೆದುಕೊಂಡಿದ್ದು ಸಂಧ್ಯಾರವರ ಪುತ್ರ ಕಿರಣ್ ರವರು ಈ ಉದ್ಯಮವನ್ನು ಮುಂದುವರಿಸಲು ಮನಸ್ಸು ಮಾಡಿದ ನಂತರ. ವಿದೇಶೀ ನೆಲದಲ್ಲಿ ಆಹಾರೋದ್ಯಮದಲ್ಲೇ ಕೆಲಸ ಮಾಡಿ ಅನುಭವವಿದ್ದ ಕಿರಣ್, ಕೊರೋನಾ ಕಾಲದ ನಂತರ ಉದ್ಯೋಗವನ್ನು ತೊರೆದು ತಾಯಿಯ ಜತೆಯಾದರು. ಬರೀ ಯೋಗಪಟುಗಳಿಗೆ ಸೀಮಿತವಾಗಿದ್ದ ಆಹಾರವನ್ನು ಸ್ಥಳೀಯರಿಗೂ ವಿಸ್ತರಿಸುವ ಮೂಲಕ ಇಂದು ಎಲ್ಲರ ಮನೆಮಾತಾಗಿದ್ದಾರೆ.
ದಕ್ಷಿಣ ಭಾರತೀಯ ಶೈಲಿಯ ಆಹಾರವನ್ನು ಬಾಳೆಎಲೆಯಲ್ಲಿಯೇ ಸವಿಯಬೇಕೆಂದುಕೊಳ್ಳುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ವರ್ಷಗಳ ಹಳೆಯ ಮನೆಯಲ್ಲಿ ಕುಳಿತು, ಮನೆಯೂಟವನ್ನು ಸವಿಯುವ ಅವಕಾಶವನ್ನು ಬೇರೆಲ್ಲೂ ಸಿಗಲಾರದು. ಈರುಳ್ಳಿ, ಬೆಳ್ಳುಳ್ಳಿಯ ಬಳಕೆ ಮಾಡದೆಯೇ ತಯಾರಿಸಲಾದ 18ಕ್ಕೂ ಹೆಚ್ಚು ಬಗೆಯ ಖಾದ್ಯಗಳನ್ನು ಸವಿಯುವ ಖುಷಿ ಬೇರೆಲ್ಲೂ ಸಿಗಲಾರದು. ಆದರೆ ಶನಿವಾರ, ಇಲ್ಲವೇ ರಜಾದಿನಗಳಂದು ಇಲ್ಲಿನ ಆಹಾರವನ್ನು ಅರಸಿ ಬಂದರೆ ಕಾಲಿರಿಸುವುದಕ್ಕೂ ಜಾಗವಿಲ್ಲದೆ ಗಂಟೆಗಟ್ಟಲೆ ಕಾಯಬೇಕಾಗಿ ಬರುವುದಂತೂ ಖಚಿತ.
ಊಟದಲ್ಲಿದೆ 18 ಬಗೆಯ ವಿಭವಗಳು
ಬಾಳೆ ಎಲೆಯಲ್ಲಿ ಅನ್ ಲಿಮಿಟೆಡ್ ಊಟವನ್ನು ಸವಿಯುವ ಅವಕಾಶವಿರುವುದರಿಂದ ಹೋಗುವ ಮುನ್ನ ಮೆನುವನ್ನೊಮ್ಮೆ ತಿರುವಿ ಹಾಕುವುದು ಒಳ್ಳೆಯದು. ಕೋಸಂಬರಿ, ಪಲ್ಯ, ಅನಾನಸ್ ಗೊಜ್ಜು, ಬಾಳೆಹಣ್ಣಿನ ರಸಾಯನ, ಮಾವಿನಕಾಯಿ ಚಿತ್ರಾನ್ನ, ಚಪಾತಿ-ಸಾಗು, ಅನ್ನ ಸಾಂಬಾರ್, ಸಾರು, ಕೊಬ್ಬರಿ ಮಿಠಾಯಿ ಮತ್ತು ಸೂಪರ್ ರಿಫ್ರೆಶಿಂಗ್ ಮಜ್ಜಿಗೆ ಹೀಗೆ ಮೆನು ಸಿಂಪಲ್ ಎನಿಸಿದರೂ 250 ರುಪಾಯಿಗೆ ಊಟವಂತೂ ಅದ್ಧೂರಿಯಾಗಿಯೇ ಇರುತ್ತದೆ. ಆದರೆ ಈ ಊಟದ ರುಚಿನೋಡುವುದಕ್ಕೆ ಮಧ್ಯಾಹ್ನ 12:30 ರಿಂದ ಸಂಜೆ 4 ರವರೆಗೆ ಮಾತ್ರ ಅವಕಾಶವಿರುತ್ತದೆ. ಭಾನುವಾರದಂದು ರಜಾದಿನವಾಗಿದ್ದು ಗೂಗಲ್ ಚೆಕ್ ಮಾಡಿಕೊಂಡು, ಇಲ್ಲವೇ ನಂಬರ್ ಗೆ ಕರೆ ಮಾಡಿಕೊಂಡೇ ಫುಡ್ ಹಂಟ್ ಮಾಡುವುದು ಒಳ್ಳೆಯದು.

ನಮ್ಮಲ್ಲಿ ಪುಳಿಯೊಗರೆ, ರೈಸ್ ಬಾತ್, ಸಾಂಬಾರ್, ರಸಂ, ಚಟ್ನಿ ಪುಡಿಯನ್ನು ಟೇಸ್ಟ್ ಮಾಡಿದ ಮಂದಿ ನಮಗೂ ಮನೆಯಲ್ಲೇ ಇಂಥ ಅಡುಗೆ ತಯಾರಿಸುವುದಕ್ಕೆ ಸೀಕ್ರೆಟ್ ರೆಸೆಪಿ ಪುಡಿಗಳನ್ನು ತಯಾರಿಸಿಕೊಡಿ ಎಂಬ ಬೇಡಿಕೆಯನ್ನೇ ಇಟ್ಟಿದ್ದರು. ಅವರ ಬೇಡಿಕೆಗೆ ತಕ್ಕಂತೆ ನನ್ನ ಅಜ್ಜಿ ಸರೋಜಾ ಅವರ ಕೈರುಚಿಯನ್ನು ಹೋಲುವ ಅಮ್ಮನ ತಯಾರಿದ ಮಸಾಲೆಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದೇನೆ. ಜನರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ನಮ್ಮ ಸಂಸ್ಖತಿಯನ್ನು ಪ್ರತಿಬಿಂಬಿಸುವ, ಮತ್ತದೇ ಬೇರುಗಳನ್ನು ಇಂದಿನ ಜನರಿಗೆ ಪರಿಚಯಿಸುವ ಆಹಾರವನ್ನು ಸ್ಥಳೀಯರಿಗೆ ಉಣಬಡಿಸುತ್ತಿರುವುದು ನಮ್ಮತನದ ಪ್ರತೀಕವೂ ಹೌದು. ಅದಕ್ಕಾಗಿಯೇ ಅಮ್ಮನ ಪುಟ್ಟ ಹೊಟೇಲ್‌ಗೆ ಹೊಸ ರೂಪ ನೀಡಿ ಆಹಾರಪ್ರಿಯರ ಮುಂದಿರಿಸಿದ್ದೇನೆ. ಅಂದಿನಿಂದ ಇಂದಿನವರೆಗೂ ಬೇಡಿಕೆಗೇನೂ ಕಮ್ಮಿಯಾಗಿಲ್ಲ. ಇನ್ಫೋಸಿಸ್ ನಾರಾಯಣ ಮೂರ್ತಿ, ಸಂಸದ ತೇಜಸ್ವಿ ಸೂರ್ಯ, ಮಂಡ್ಯ ರಮೇಶ್, ಚಿತ್ರರಂಗದ ಅನೇಕ ಗಣ್ಯರು ಸಂಧ್ಯಾಸ್ ಹೌಸ್‌ನ ಅಡುಗೆ ರುಚಿಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಖುಷಿ ತಂದಿದೆ.
- ಕಿರಣ್ ಸಾಲುಂಕೆ, ಮಾಲೀಕರು , ಸಂಧ್ಯಾಸ್ ಹೌಸ್
ವಿಳಾಸ ಮರೆಯದಿರಿ:
ಸಂಧ್ಯಾಸ್ ಹೌಸ್, ಕೃಷ್ಣಮೂರ್ತಿ ಪುರಂ 1ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆ, ಕೃಷ್ಣಮೂರ್ತಿ ಪುರಂ, ಮೈಸೂರು, ಕರ್ನಾಟಕ 570004