ಕರಾವಳಿಯಲ್ಲಿ ಪಂಚತಾರಾ ಹೊಟೇಲ್ಸ್; ದೂರಗಾಮಿ ಪರಿಣಾಮ ಖಚಿತ!
ಈ ನಿಟ್ಟಿನಲ್ಲಿ ಪಂಚತಾರಾ ಹೊಟೇಲ್ ಗಳು ಪ್ರವಾಸೋದ್ಯಮದ ಗೇಮ್ ಚೇಂಜರ್ ಆಗಲಿವೆ. ಟೂರಿಸಂ ವಿಶ್ಲೇಷಕರ ಪ್ರಕಾರ ಫೈವ್ ಸ್ಟಾರ್ ಹೊಟೇಲ್‌ಗಳು ಕೇವಲ ಹೈ ಎಂಡ್ ಪ್ರವಾಸಿಗರನ್ನು ಆಕರ್ಷಿಸುವುದು ಮಾತ್ರವಲ್ಲದೆ, ಇಡೀ ಟೂರಿಸಂ ವಲಯದ ಅಭಿವೃದ್ಧಿಗೂ ಬುನಾದಿಯಾಗುತ್ತದೆ. ಹೆಚ್ಚು ಖರ್ಚು ಮಾಡಲು ತಯಾರಿರುವ ಪ್ರವಾಸಿಗರು ಈ ಹಿಂದೆ ಐಷಾರಾಮಿ ಹೊಟೇಲ್ ಗಳಿಗೆ ಕೊರತೆ ಇದ್ದುದರಿಂದ ಮಂಗಳೂರನ್ನು ಬೈಪಾಸ್ ಮಾಡಿ ಹೋಗುತ್ತಿದ್ದರು. ಆದ್ದರಿಂದ ಪಂಚತಾರಾ ಹೊಟೇಲ್ ಬರುವುದರಿಂದ ಅಂಥ ಪ್ರವಾಸಿಗರು ಇನ್ನು ಮುಂದೆ ಮಂಗಳೂರಿನಲ್ಲೇ ರಾತ್ರಿಗಳನ್ನು ಆರಾಮವಾಗಿ ಕಳೆಯಲಿದ್ದಾರೆ.
- ಕೇಶವಪ್ರಸಾದ್ ಬಿ.
ಹೊಟೇಲ್ ಎಂದರೆ ಕೇವಲ ಪ್ರವಾಸಿಗರು ಉಳಿದುಕೊಳ್ಳುವ ಸ್ಥಳಗಳು ಮಾತ್ರವಲ್ಲ. ಅದು ಆತಿಥ್ಯವನ್ನು ಜನರಿಗೆ ಒದಗಿಸುವುದರ ಜತೆಗೆ ಸ್ಥಳೀಯ ಆರ್ಥಿಕತೆಯನ್ನೂ ಬಲಪಡಿಸುತ್ತವೆ. ಜನರ ಪರಸ್ಪರ ಭೇಟಿ, ಉಭಯ ಕುಶಲೋಪರಿ, ಸಾಮರಸ್ಯ, ಸ್ಥಳೀಯ ಸಂಸ್ಕೃತಿಯ ಪರಿಚಯ, ವಾಣಿಜ್ಯ ವಹಿವಾಟಿಗೆ ಕಾರಣವಾಗುತ್ತವೆ. ಸವಿನೆನಪುಗಳನ್ನು ಕಟ್ಟಿಕೊಡುತ್ತವೆ. ಆಹಾರ, ಶಾಪಿಂಗ್, ಸಾರಿಗೆ, ಪ್ರವಾಸಿ ತಾಣಗಳ ವೀಕ್ಷಣೆ..ಹೀಗೆ ಹತ್ತಾರು ಚಟುವಟಿಕೆಗಳಿಗೆ ಹೊಟೇಲ್ ಗಳು ನಿರ್ಣಾಯಕ ಕೇಂದ್ರಗಳಾಗುತ್ತವೆ. ಅದರಲ್ಲೂ ಐಷಾರಾಮಿ ಪಂಚತಾರಾ ಹೊಟೇಲ್ ಗಳು ತಲೆ ಎತ್ತಿಕೊಂಡರೆ ಅದರ ಭವ್ಯತೆಯೇ ಬೇರೆ.
ಇದನ್ನೂ ಓದಿ: 2026 ಬಜೆಟ್: ಪ್ರವಾಸೋದ್ಯಮಕ್ಕೆ ಈ ಸಲ ಸಿಗಲಿದೆಯೇ ʻಉದ್ಯಮʼದ ಮಾನ್ಯತೆ?
ಕರ್ನಾಟಕದ ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಯ ನಿಟ್ಟಿನಲ್ಲಿ ದಕ್ಷಿಣ ಕನ್ನಡದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಹೊಸ 4 ಪಂಚತಾರಾ ಹೊಟೇಲ್ ಗಳ ನಿರ್ಮಾಣಕ್ಕೆ 500 ಕೋಟಿ ರುಪಾಯಿಗಳ ಹೂಡಿಕೆಯಾಗಲಿದೆ. ನಾಲ್ಕರಲ್ಲಿ ಮೂರು ಹೊಟೇಲ್‌ಗಳ ನಿರ್ಮಾಣಕ್ಕೆ ಸ್ಥಳೀಯರೇ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಐಷಾರಾಮಿ ಹೊಟೇಲ್ ಗಳಿಗೆ ಇದ್ದ ಬರ ನೀಗಲಿದೆ. ಇಲ್ಲಿನ ಪ್ರವಾಸಕ್ಕಾಗಿ ಬರುವವರಿಗೆ ಮತ್ತು ವ್ಯಾಪಾರ, ವಾಣಿಜ್ಯೋದ್ದೇಶಗಳಿಗೆ ಭೇಟಿ ನೀಡುವವರನ್ನು ಆಕರ್ಷಿಸಲು ಇದು ಸಹಕಾರಿಯಾಗಲಿದೆ. ಅವರ ಪ್ರಯಾಣದ ಅನುಭವವನ್ನು ಸಂಪನ್ನಗೊಳಿಸಲಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಪ್ರವಾಸಿಗರಿಗೆ ಅನುಕೂಲಕರವಾಗಲಿದೆ.

ಕರಾವಳಿ ತೀರದಲ್ಲಿ ಹೊಸ ಲಕ್ಸುರಿ ಹೊಟೇಲ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಗುರುಪುರದಲ್ಲಿ ಒಂದು ಫೈವ್ ಸ್ಟಾರ್ ಹೊಟೇಲ್ ನಿರ್ಮಾಣದ ಹಂತದಲ್ಲಿದೆ. ಕೊಲ್ಲೂರು ವ್ಯಾಪ್ತಿಯಲ್ಲಿ ಇನ್ನೊಂದು ನಿರ್ಮಾಣವಾಗಲಿದೆ. ಮುಂದಿನ ಎರಡು ವರ್ಷಗಳಲ್ಲಿ ಎರಡೂ ಹೊಟೇಲ್ ಗಳು ಗ್ರಾಹಕರಿಗೆ ಸೇವೆ ನೀಡುವ ನಿರೀಕ್ಷೆ ಇದೆ. ಮಂಗಳೂರು ಭೌಗೋಳಿಕವಾಗಿ ಆಯಕಟ್ಟಿನ ಪ್ರದೇಶವಾಗಿದ್ದರೂ, ಲಕ್ಸುರಿ ಹೊಟೇಲ್ ಗಳ ಕೊರತೆಯಿಂದಾಗಿ ದಕ್ಷಿಣ ಕನ್ನಡದ ಪ್ರವಾಸೋದ್ಯಮದ ಸಂಪೂರ್ಣ ಸಾಧ್ಯತೆಗಳನ್ನು ಕಂಡುಕೊಳ್ಳಲು, ಸಾಂಸ್ಕೃತಿಕ ಆಕರ್ಷಣೆಗಳನ್ನು ಪ್ರವಾಸಿಗರಿಗೆ ತೆರೆದಿಡಲು ಕಷ್ಟಕರವಾಗಿತ್ತು. ಪ್ರವಾಸಿಗರು ಬೇರೆ ಜಿಲ್ಲೆಗೆ ಅಥವಾ ನೆರೆ ರಾಜ್ಯ ಕೇರಳಕ್ಕೂ ಹೋಗುತ್ತಿದ್ದರು. ದಕ್ಷಿಣಕನ್ನಡ ಮಹತ್ವದ ಬ್ಯುಸಿನೆಸ್ ಹಬ್ ಆಗಿಯೂ ಬೆಳೆಯುತ್ತಿದ್ದು, ಲಕ್ಸುರಿ ಹೊಟೇಲ್ ಗಳಿಗೆ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕರ್ನಾಟಕ ಪ್ರವಾಸೋದ್ಯಮ ವಲಯದ ತಜ್ಞರೂ ಇದನ್ನೇ ಹೇಳುತ್ತಾರೆ.
ದಕ್ಷಿಣ ಕನ್ನಡ ಅರಬ್ಬಿ ಸಮುದ್ರದ ತೀರದಲ್ಲಿ ಕರ್ನಾಟಕದ ಕರಾವಳಿ ಟೂರಿಸಂಗೆ ಹೆಬ್ಬಾಗಿಲಿನಂತಿದೆ. ದಕ್ಷಿಣ ಕನ್ನಡದ 320 ಕಿಲೋಮೀಟರ್ ಉದ್ದದ ಕರಾವಳಿಯು ಟೂರಿಸಂ ದೃಷ್ಟಿಯಿಂದ ವ್ಯಾಪಕವಾಗಿ ಬೆಳೆಯುವ ಸಾಧ್ಯತೆಗಳು ವಿಫುಲವಾಗಿವೆ. ವಿಶಿಷ್ಟವಾದ ಬೀಚುಗಳು ಇಲ್ಲಿವೆ. ಸಣ್ಣ ಪುಟ್ಟ ದ್ವೀಪಗಳೂ ಇವೆ. ಸಾಂಸ್ಕೃತಿಕ ಮಹತ್ವದ ತಾಣಗಳೂ ಇವೆ. ಸರಕಾರ ಕೂಡ ಪ್ರತ್ಯೇಕ ಪ್ರವಾಸೋದ್ಯಮ ನೀತಿಗೆ ಕಾರ್ಯಪ್ರವೃತ್ತವಾಗಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ಅಡಿಯಲ್ಲಿ ಬೀಚ್ ಟೂರಿಸಂ, ಇಕೊ-ಟೂರಿಸಂ, ಹೆರಿಟೇಜ್ ಸರ್ಕ್ಯೂಟ್ ವಲಯಕ್ಕೆ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಉಪಕ್ರಮಗಳು ಇವೆ. ಸಮಗ್ರ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಯ ಅಂಶಗಳನ್ನು ಇದು ಒಳಗೊಂಡಿದೆ. ಜತೆಗೆ ಮಾರ್ಕೆಟಿಂಗ್, ಡಿಜಿಟಲ್ ಉಪಕ್ರಮಗಳು, ಸಮುದಾಯದ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗಿದೆ.
ಪ್ರವಾಸೋದ್ಯಮ ವಲಯದಲ್ಲಿ ಖಾಸಗಿ ಕ್ಷೇತ್ರವೂ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸರಕಾರ ಹಾದಿ ಸುಗಮಗೊಳಿಸಿದೆ. ಇದಕ್ಕಾಗಿ ಹಲವಾರು ಉಪಕ್ರಮಗಳಿಗೆ ಅನುಮತಿಯನ್ನು ನೀಡಲಾಗಿದೆ. ದಕ್ಷಿನ ಕನ್ನಡದ ಕರಾವಳಿ ಟೂರಿಸಂನ ಸಂಪೂರ್ಣ ಸಾಧ್ಯತೆಗಳನ್ನು ಕಂಡುಕೊಳ್ಳಲು ಇದರಿಂದ ಸಹಾಯಕವಾಗಲಿದೆ. ಖಾಸಗಿ ಕಂಪನಿಗಳ ಜತೆಗೆ ಸಹಯೋಗ ಮಾಡಿಕೊಳ್ಳುವುದರ ಮೂಲಕ ಹಲವಾರು ಯೋಜನೆಗಳನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಇದರಿಂದ ಉದ್ಯೋಗಗಳೂ ಸೃಷ್ಟಿಯಾಗಲಿದೆ. ಪ್ರವಾಸಿಗರ ಅನುಭವ ಸಮೃದ್ಧವಾಗಲಿದೆ. ಪ್ರಯಾಣ ಕೂಡ ಆರಾಮದಾಯಕವಾಗಲಿದೆ.
ಈ ನಿಟ್ಟಿನಲ್ಲಿ ಪಂಚತಾರಾ ಹೊಟೇಲ್ ಗಳು ಪ್ರವಾಸೋದ್ಯಮದ ಗೇಮ್ ಚೇಂಜರ್ ಆಗಲಿವೆ. ಟೂರಿಸಂ ವಿಶ್ಲೇಷಕರ ಪ್ರಕಾರ ಫೈವ್ ಸ್ಟಾರ್ ಹೊಟೇಲ್‌ಗಳು ಕೇವಲ ಹೈ ಎಂಡ್ ಪ್ರವಾಸಿಗರನ್ನು ಆಕರ್ಷಿಸುವುದು ಮಾತ್ರವಲ್ಲದೆ, ಇಡೀ ಟೂರಿಸಂ ವಲಯದ ಅಭಿವೃದ್ಧಿಗೂ ಬುನಾದಿಯಾಗುತ್ತದೆ. ಹೆಚ್ಚು ಖರ್ಚು ಮಾಡಲು ತಯಾರಿರುವ ಪ್ರವಾಸಿಗರು ಈ ಹಿಂದೆ ಐಷಾರಾಮಿ ಹೊಟೇಲ್ ಗಳಿಗೆ ಕೊರತೆ ಇದ್ದುದರಿಂದ ಮಂಗಳೂರನ್ನು ಬೈಪಾಸ್ ಮಾಡಿ ಹೋಗುತ್ತಿದ್ದರು. ಆದ್ದರಿಂದ ಪಂಚತಾರಾ ಹೊಟೇಲ್ ಬರುವುದರಿಂದ ಅಂಥ ಪ್ರವಾಸಿಗರು ಇನ್ನು ಮುಂದೆ ಮಂಗಳೂರಿನಲ್ಲೇ ರಾತ್ರಿಗಳನ್ನು ಆರಾಮವಾಗಿ ಕಳೆಯಲಿದ್ದಾರೆ. ಇಲ್ಲಿನ ಬೀಚುಗಳು, ದೇವಾಲಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆಗೆ ಬೇಡಿಕೆ ಹೆಚ್ಚಲಿದೆ.

ಮಂಗಳೂರು ತನ್ನ ಶ್ರೀಮಂತ ಸಾಂಸ್ಕೃತಿಕ, ಧಾರ್ಮಿಕ ಇತಿಹಾಸ, ವೈವಿಧ್ಯಮಯ ಆಹಾರ ಸಂಸ್ಕೃತಿ, ಶಿಕ್ಷಣ ಸಂಸ್ಥೆಗಳಿಗೆ, ಪ್ರಸಿದ್ಧ ಆಸ್ಪತ್ರೆಗಳಿಗೆ ಹೆಸರುವಾಸಿಯಾಗಿದೆ. ಮುಖ್ಯಮಂತ್ರಿಯವರೂ ಉದ್ಯಮಿಗಳಿಗೆ ಕರಾವಳಿಯ ಟೂರಿಸಂ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದ್ದಾರೆ. 500 ಕೋಟಿ ರುಪಾಯಿಗಳ ಹೂಡಿಕೆಯಿಂದಾಗಿ ಆತಿಥ್ಯೋದ್ಯಮ ವಲಯದಲ್ಲಿ ಹೇರಳ ಉದ್ಯೋಗಗಳು ಸೃಷ್ಟಿಯಾಗಲಿದೆ. ರಿಟೇಲ್, ಸಾರಿಗೆ ಮತ್ತು ಸಂಬಂಧಿತ ಸೆಕ್ಟರ್ ಗಳಲ್ಲೂ ಉದ್ಯೋಗಗಳು ಸಿಗಲಿವೆ. ಮಂಗಳೂರಿನಲ್ಲಿ ಐಟಿ ಇಂಡಸ್ಟ್ರಿ ಕೂಡ ಬೆಳೆಯುತ್ತಿದೆ. ಕಂಬಳ ಇಲ್ಲಿನ ಸಾಂಸ್ಕೃತಿಕ ಉತ್ಸವ, ಕ್ರೀಡೆಯಾಗಿದೆ. ಇಲ್ಲಿ ದೇವಾಲಯಗಳು ಭಕ್ತಾದಿಗಳನ್ನು ಆಕರ್ಷಿಸುತ್ತವೆ. ಕೋಸ್ಟಲ್ ಮತ್ತು ಬೀಚ್ ಟೂರಿಸಂ, ಹೆಲಿ ಟೂರಿಸಂ, ಲಕ್ಸುರಿ ಹಾಸ್ಪಿಟಾಲಿಟಿ, ಕ್ರೂಸ್ ಟೂರಿಸಂ, ಕಲ್ಚರಲ್ ಟೂರಿಸಂಗೆ ಇಲ್ಲಿ ವಿಫುಲ ಅವಕಾಶಗಳು ಇವೆ. ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಬಳಿಕ ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ.
ಮಂಗಳೂರಿನಲ್ಲಿ ಇತ್ತೀಚೆಗೆ ಕರಾವಳಿ ಪ್ರವಾಸೋದ್ಯಮ ಕುರಿತ ಸಮಾವೇಶ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಿದ್ದರು. ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಬಳಿಕ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬೆಂಗಳೂರು ಬಳಿಕ ಮಂಗಳೂರು ಹೆಚ್ಚು ಕೊಡುಗೆ ಸಲ್ಲಿಸುತ್ತಿದೆ. ಟೂರಿಸಂ ಅನ್ನೂ ಅಭಿವೃದ್ಧಿಪಡಿಸಿದರೆ ಮತ್ತಷ್ಟು ಆದಾಯ ಸಿಗಲಿದ್ದು, ಜಿಎಸ್‌ಟಿಯಲ್ಲಿ ಮಹಾರಾಷ್ಟ್ರವನ್ನೂ ಹಿಂದಿಕ್ಕಬಹುದು ಎಂದು ಮುಖ್ಯಮಂತ್ರಿಯವರು ಹೇಳಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಒಂದು ಪಂಚ ತಾರಾ ಹೊಟೇಲ್ ಅಸ್ತಿತ್ವಕ್ಕೆ ಬಂದರೆ ಸಾಮಾನ್ಯವಾಗಿ 150-200 ಮಂದಿಗೆ ನೇರ ಉದ್ಯೋಗ ಸೃಷ್ಟಿಯಾಗುತ್ತದೆ. ಪ್ರವಾಸಿಗರಿಗೆ ಅತ್ಯುತ್ತಮ ಗುಣಮಟ್ಟದ, ಐಷಾರಾಮಿ ಸೇವೆಗಳು ಸಿಗುತ್ತವೆ. ಆದ್ದರಿಂದ ದಕ್ಷಿಣ ಕನ್ನಡದಲ್ಲಿ ಪಂಚತಾರಾ ಹೊಟೇಲ್‌ಗಳಿಗೆ ಐನೂರು ಕೋಟಿ ರುಪಾಯಿಗಳ ಹೂಡಿಕೆಯಾಗುತ್ತಿರುವುದು ದೂರಗಾಮಿ ಪರಿಣಾಮವನ್ನು ಬೀರಲಿದೆ.